Dailyhunt Logo
  • Light mode
    Follow system
    Dark mode
    • Play Story
    • App Story
ಅರ್ಜೆಂಟೀನಾ vs ಇಂಗ್ಲೆಂಡ್: ಮೈದಾನದಾಚೆಗೂ ಹೋರಾಟದ ಕಿಚ್ಚು, ರೋಚಕ ಇತಿಹಾಸ

ಅರ್ಜೆಂಟೀನಾ vs ಇಂಗ್ಲೆಂಡ್: ಮೈದಾನದಾಚೆಗೂ ಹೋರಾಟದ ಕಿಚ್ಚು, ರೋಚಕ ಇತಿಹಾಸ

ಕಾಲ್ಚೆಂಡಿನ ಮೈದಾನದಲ್ಲಿ ಅರ್ಜೆಂಟೀನಾ ಮತ್ತು ಇಂಗ್ಲೆಂಡ್ ಪರಸ್ಪರ ಮುಖಾಮುಖಿಯಾಗುತ್ತಿವೆ ಎಂದರೆ ಅಲ್ಲಿ ಬರೀ ಕ್ರೀಡಾ ಮನೋಭಾವನೆಯಷ್ಟೇ ಇರುವುದಿಲ್ಲ. ಮೈದಾನದ ಒಳಗೆ ಆಟಗಾರರ ನಡುವೆ ರಣನೀತಿಗಳ ಹೋರಾಟ ನಡೆದರೆ, ಮೈದಾನದಾಚೆಗೂ ಉಭಯ ದೇಶಗಳ ಯುದ್ಧ, ರಾಜಕೀಯ ಇತಿಹಾಸವು ಪ್ರತಿಷ್ಠೆಯ ಕಣವಾಗಿ ಬದಲಾಗುತ್ತದೆ.

2026ರ ಫಿಫಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಉಭಯ ತಂಡಗಳು ಮತ್ತೆ ಮುಖಾಮುಖಿಯಾಗಲು ವೇದಿಕೆ ಸಿದ್ಧಗೊಂಡಿದೆ.

ಯುದ್ಧದ ನೆರಳು...

ಈಗಾಗಲೇ ಹೇಳಿದಂತೆ ಅರ್ಜೆಂಟೀನಾ ಮತ್ತು ಇಂಗ್ಲೆಂಡ್ ನಡುವಿನ ಹೋರಾಟ ಕೇವಲ ಫುಟ್‌ಬಾಲ್ ಮೈದಾನಕ್ಕೆ ಸೀಮಿತವಲ್ಲ. ಇದರ ಬೇರುಗಳು ಆಳವಾದ ವಸಾಹತುಶಾಹಿ ಇತಿಹಾಸ ಮತ್ತು 1982ರ ಭೀಕರ 'ಫಾಕ್‌ಲ್ಯಾಂಡ್ ಯುದ್ಧ'ದಲ್ಲೂ ಅಡಗಿವೆ.

ಫುಟ್‌ಬಾಲ್‌ನಲ್ಲಿ ಹಳದಿ-ರೆಡ್ ಕಾರ್ಡ್:ಟ್ರಾಫಿಕ್ ಸಿಗ್ನಲ್‌ನಿಂದ ಹುಟ್ಟಿದ ಕಲ್ಪನೆ!ಮೆಸ್ಸಿ ಮ್ಯಾಜಿಕ್: ಕಳೆದ ವಿಶ್ವಕಪ್ ಫೈನಲ್ ಬಳಿಕ ಮತ್ತೆ ಕಣ್ಣೀರಿಟ್ಟ ದಿಗ್ಗಜ

ದ್ವೀಪಕ್ಕಾಗಿ ನಡೆದ ಸಂಘರ್ಷ:

ದಕ್ಷಿಣ ಅಟ್ಲಾಂಟಿಕ್ ಮಹಾಸಾಗರದಲ್ಲಿರುವ ಫಾಕ್‌ಲ್ಯಾಂಡ್ ದ್ವೀಪಗಳ ನಿಯಂತ್ರಣಕ್ಕಾಗಿ ಅರ್ಜೆಂಟೀನಾ ಮತ್ತು ಬ್ರಿಟನ್ ನಡುವೆ 1982ರಲ್ಲಿ ಭೀಕರ ಯುದ್ಧ ನಡೆದಿತ್ತು. ಇದರಲ್ಲಿ ಅರ್ಜೆಂಟೀನಾ ಪರಾಭವಗೊಂಡಿತ್ತು.

ಈ ಯುದ್ಧದಲ್ಲಿ ನೂರಾರು ಸೈನಿಕರನ್ನು ಕಳೆದುಕೊಂಡ ಅರ್ಜೆಂಟೀನಾಕ್ಕೆ ಬ್ರಿಟನ್ ಮೇಲಿನ ಸಿಟ್ಟು ಆಳವಾಗಿ ಬೇರೂರಿತ್ತು. ಬ್ರಿಟಿಷರ ವಸಾಹತುಶಾಹಿ ಮೇಲುಗೈಗೆ ಕ್ರೀಡಾ ಮೈದಾನದಲ್ಲೇ ಪ್ರತ್ಯುತ್ತರ ನೀಡಲು ಅರ್ಜೆಂಟೀನಾ ಸದಾ ಹಂಬಲಿಸುತ್ತಿತ್ತು.

ಇತಿಹಾಸದ ಪುಟಗಳಲ್ಲಿ ದಾಖಲಾದ ಪ್ರಮುಖ ಕ್ಷಣಗಳು

1966ರ ವಿಶ್ವಕಪ್: ರಟ್ಟಿನ್ 'ರೆಡ್ ಕಾರ್ಡ್' ವಿವಾದ

ಲಂಡನ್‌ನ ವೆಂಬ್ಲಿ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾದ ನಾಯಕ ಆಂಟೋನಿಯೊ ರಟ್ಟಿನ್ ಅವರಿಗೆ ರೆಫರಿ ರೆಡ್ ಕಾರ್ಡ್ ತೋರಿಸಿ ಹೊರಗೆ ಕಳುಹಿಸಿದ್ದರು. ರೆಫರಿ ತೀರ್ಪನ್ನು ಒಪ್ಪದ ರಟ್ಟಿನ್ ಮೈದಾನದಿಂದ ಹೊರಹೋಗಲು ನಿರಾಕರಿಸಿ ಹಠ ಹಿಡಿದಿದ್ದರು. ಈ ಘಟನೆ ದೊಡ್ಡ ವಿವಾದ ಸೃಷ್ಟಿಸಿತ್ತು.

1986ರ ವಿಶ್ವಕಪ್: ಮರಡೋನಾ ಅವರ 'ಹ್ಯಾಂಡ್ ಆಫ್ ಗಾಡ್' ಮತ್ತು 'ಶತಮಾನದ ಗೋಲು'

ಮೆಕ್ಸಿಕೊದಲ್ಲಿ ನಡೆದ ಈ ಕ್ವಾರ್ಟರ್ ಫೈನಲ್ ಪಂದ್ಯವು ವಿಶ್ವ ಫುಟ್‌ಬಾಲ್ ಇತಿಹಾಸದಲ್ಲೇ ಅತ್ಯಂತ ಪ್ರಸಿದ್ಧವಾದುದು. ಫಾಲ್ಕ್‌ಲ್ಯಾಂಡ್ ಯುದ್ಧದ ನಾಲ್ಕೇ ವರ್ಷಗಳ ನಂತರ ನಡೆದ ಈ ಪಂದ್ಯದಲ್ಲಿ ಡೀಗೊ ಮರಡೋನಾ ಎರಡು ಐತಿಹಾಸಿಕ ಗೋಲುಗಳನ್ನು ಬಾರಿಸಿದ್ದರು.

ಹ್ಯಾಂಡ್ ಆಫ್ ಗಾಡ್: ತಲೆಯಿಂದ ಹೊಡೆಯುವ ನೆಪದಲ್ಲಿ ಚೆಂಡನ್ನು ನೆಟ್‌ಗೆ ತಳ್ಳಲು ಮರಡೋನಾ ತಮ್ಮ ಕೈಯನ್ನು ಬಳಸಿದ್ದರು. ಇದು ಫುಟ್‌ಬಾಲ್ ಇತಿಹಾಸದ ಕಹಿ ಘಟನೆಯಾಗಿತ್ತು.

ಶತಮಾನದ ಗೋಲು: ಇಂಗ್ಲೆಂಡ್‌ನ ಐದು ಮಂದಿ ಆಟಗಾರರನ್ನು ಹಿಮ್ಮೆಟ್ಟಿಸಿ ಗೋಲ್‌ಕೀಪರ್‌ನನ್ನೂ ದಾಟಿ ಮರಡೋನಾ ಬಾರಿಸಿದ ಎರಡನೇ ಗೋಲು ಇಂದಿಗೂ ಇತಿಹಾಸದ ಶ್ರೇಷ್ಠ ಗೋಲು ಎನಿಸಿಕೊಂಡಿದೆ. ಇದು ಅರ್ಜೆಂಟೀನಾ ಪಾಲಿಗೆ ಯುದ್ಧದ ಸೋಲಿಗೆ ಮೈದಾನದಲ್ಲಿ ತೀರಿಸಿದ ಪ್ರತೀಕಾರವಾಗಿತ್ತು.

2002ರ ವಿಶ್ವಕಪ್: ಡೇವಿಡ್ ಬೆಕಮ್ ಸೇಡು

1998ರ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ವಿರುದ್ಧ ರೆಡ್ ಕಾರ್ಡ್ ಪಡೆದು ಇಂಗ್ಲೆಂಡ್ ಸೋಲಿಗೆ ಕಾರಣರಾಗಿದ್ದ ಡೇವಿಡ್ ಬೆಕಮ್, ಇಡೀ ದೇಶದ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ 2002ರ ವಿಶ್ವಕಪ್‌ನ ಲೀಗ್ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಪೆನಾಲ್ಟಿ ಮೂಲಕ ಗೋಲು ಗಳಿಸಿದ ಬೆಕಮ್, ತಮ್ಮ ದೇಶಕ್ಕೆ ಜಯ ತಂದುಕೊಟ್ಟು ತಮ್ಮ ಮೇಲಿದ್ದ ಕಳಂಕವನ್ನು ನೀಗಿಸಿದ್ದರು.

2026ರ ವಿಶ್ವಕಪ್‌ನಲ್ಲೂ ರೋಚಕತೆ

ಪ್ರಸ್ತುತ ಸಾಗುತ್ತಿರುವ 2026ರ ಫಿಫಾ ವಿಶ್ವಕಪ್‌ನಲ್ಲಿ ಈ ಉಭಯ ದೇಶಗಳ ಮುಖಾಮುಖಿಯು ರೋಚಕತೆ ಮನೆ ಮಾಡಿದೆ. ಬದ್ಧ ಎದುರಾಳಿಗಳು ಮುಖಾಮುಖಿಯಾಗುತ್ತಿರುವುದು ಅಭಿಮಾನಿಗಳಲ್ಲಿ ಕಾವು ಹೆಚ್ಚಿಸಿದೆ. ಅರ್ಜೆಂಟೀನಾ ತಂಡವು ಲಯೊನೆಲ್ ಮೆಸ್ಸಿ ಹಾಗೂ ಇಂಗ್ಲೆಂಡ್ ತಂಡವು ಹ್ಯಾರಿ ಕೇನ್ ಅವರಂತಹ ತಾರಾ ಬಳಗವನ್ನು ಹೊಂದಿದೆ.

ಫಿಫಾ ವಿಶ್ವಕಪ್ 2026: ಏನಿದು 'ಸಡನ್ ಡೆತ್' ನಿಯಮ?ಕ್ರೀಡೆಗೆ ಕಪ್ಪು ಚುಕ್ಕೆಯಾದ ಫುಟ್‌ಬಾಲ್ ಜಗತ್ತಿನ ಐದು ಪ್ರಮುಖ ವಿವಾದಗಳು
Dailyhunt
Disclaimer: This content has not been generated, created or edited by Dailyhunt. Publisher: Prajavani