Dailyhunt Logo
  • Light mode
    Follow system
    Dark mode
    • Play Story
    • App Story
ಫಿಫಾ ವಿಶ್ವಕಪ್: ಅರ್ಜೆಂಟೀನಾ ಬ್ಯಾನರ್ ವಿವಾದದ ಹಿನ್ನೆಲೆ ಏನು?

ಫಿಫಾ ವಿಶ್ವಕಪ್: ಅರ್ಜೆಂಟೀನಾ ಬ್ಯಾನರ್ ವಿವಾದದ ಹಿನ್ನೆಲೆ ಏನು?

2026ರ ಫಿಫಾ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 2-1 ಗೋಲುಗಳ ರೋಚಕ ಜಯ ಸಾಧಿಸಿದ ಅರ್ಜೆಂಟೀನಾ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇದರ ಬೆನ್ನಲ್ನೇ ಮೈದಾನದಲ್ಲಿ ಉಭಯ ಆಟಗಾರರ ವರ್ತನೆಯ ಸಂಬಂಧ ರಾಜಕೀಯ ವಿವಾದ ಹುಟ್ಟಿಕೊಂಡಿದೆ.

ಪಂದ್ಯ ಮುಗಿದ ನಂತರ ಅರ್ಜೆಂಟೀನಾದ ಆಟಗಾರರು ಮೈದಾನದಲ್ಲಿ ಪ್ರದರ್ಶಿಸಿದ ಬ್ಯಾನರ್ ಜಾಗತಿಕ ಫುಟ್‌ಬಾಲ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಇಂಗ್ಲೆಂಡ್ ವಿರುದ್ಧದ ಗೆಲುವಿನ ಸಂಭ್ರಮಾಚರಣೆಯ ವೇಳೆ, ಅರ್ಜೆಂಟೀನಾದ ಮಿಡ್‌ಫೀಲ್ಡರ್ ಜೊವಾನಿ ಲೊ ಸೆಲ್ಸೊ ಮತ್ತು ಡಿಫೆಂಡರ್ ನಿಕೋಲಸ್ ಒಟಾಮೆಂಡಿ ಸೇರಿದಂತೆ ಹಲವು ಆಟಗಾರರು 'ಲಾಸ್ ಮಾಲ್ವಿನಾಸ್ ಸನ್ ಅರ್ಜೆಂಟೀನಾಸ್' (Las Malvinas Son Argentinas) ಎಂಬ ಬ್ಯಾನರ್ ಹಿಡಿದು ಸಂಭ್ರಮಿಸಿದರು. ಇದರ ಅರ್ಥ 'ಮಾಲ್ವಿನಾಸ್ ದ್ವೀಪಗಳು ಅರ್ಜೆಂಟೀನಾಕ್ಕೆ ಸೇರಿದವು' ಎಂದಾಗಿದೆ.

ಬ್ರಿಟನ್ ಮತ್ತು ಅರ್ಜೆಂಟೀನಾ ನಡುವೆ ದಶಕಗಳಿಂದಲೂ ವಿವಾದದಲ್ಲಿರುವ ಫಾಕ್‌ಲ್ಯಾಂಡ್ (Falkland) ದ್ವೀಪಗಳನ್ನು ಅರ್ಜೆಂಟೀನಾದಲ್ಲಿ 'ಮಾಲ್ವಿನಾಸ್' ಎಂದು ಕರೆಯಲಾಗುತ್ತದೆ. ಇಂಗ್ಲೆಂಡ್ ವಿರುದ್ಧದ ಪಂದ್ಯ ಮುಗಿದ ತಕ್ಷಣವೇ ಈ ಬ್ಯಾನರ್ ಪ್ರದರ್ಶಿಸಿರುವುದು ರಾಜಕೀಯ ಪ್ರಚೋದನೆಗೆ ಕಾರಣವಾಗಿದೆ.

ಫಾಕ್‌ಲ್ಯಾಂಡ್ (ಮಾಲ್ವಿನಾಸ್) ದ್ವೀಪಗಳ ವಿವಾದವೇನು?

ಅರ್ಜೆಂಟೀನಾ ಮತ್ತು ಇಂಗ್ಲೆಂಡ್ ನಡುವಿನ ಹೋರಾಟ ಕೇವಲ ಫುಟ್‌ಬಾಲ್ ಮೈದಾನಕ್ಕೆ ಸೀಮಿತವಲ್ಲ. ಇದರ ಬೇರುಗಳು ಆಳವಾದ ವಸಾಹತುಶಾಹಿ ಇತಿಹಾಸ ಮತ್ತು 1982ರ ಭೀಕರ 'ಫಾಕ್‌ಲ್ಯಾಂಡ್ ಯುದ್ಧ'ದಲ್ಲೂ ಅಡಗಿವೆ.

ಭೌಗೋಳಿಕ ಹಿನ್ನೆಲೆ:

ಫಾಕ್‌ಲ್ಯಾಂಡ್ ದ್ವೀಪಗಳು ದಕ್ಷಿಣ ಅಟ್ಲಾಂಟಿಕ್ ಮಹಾಸಾಗರದಲ್ಲಿ ಅರ್ಜೆಂಟೀನಾದ ಪೂರ್ವ ಕರಾವಳಿಯಿಂದ ಸುಮಾರು 480 ಕಿ.ಮೀ. ದೂರದಲ್ಲಿವೆ. ಪ್ರಸ್ತುತ ಇದು ಬ್ರಿಟನ್‌ನ ಸಾರ್ವಭೌಮತ್ವಕ್ಕೆ ಒಳಪಟ್ಟಿದೆ.

ದ್ವೀಪಕ್ಕಾಗಿ ನಡೆದ ಸಂಘರ್ಷ:

ದಕ್ಷಿಣ ಅಟ್ಲಾಂಟಿಕ್ ಮಹಾಸಾಗರದಲ್ಲಿರುವ ಫಾಕ್‌ಲ್ಯಾಂಡ್ ದ್ವೀಪಗಳ ನಿಯಂತ್ರಣಕ್ಕಾಗಿ ಅರ್ಜೆಂಟೀನಾ ಮತ್ತು ಬ್ರಿಟನ್ ನಡುವೆ 1982ರಲ್ಲಿ ಭೀಕರ ಯುದ್ಧ ನಡೆದಿತ್ತು. 74 ದಿನಗಳ ಕಾಲ ನಡೆದ ಯುದ್ಧದಲ್ಲಿ ಅರ್ಜೆಂಟೀನಾ ಪರಾಭವಗೊಂಡಿತ್ತು.

ಈ ಯುದ್ಧದಲ್ಲಿ ನೂರಾರು ಸೈನಿಕರನ್ನು ಕಳೆದುಕೊಂಡ ಅರ್ಜೆಂಟೀನಾಕ್ಕೆ ಬ್ರಿಟನ್ ಮೇಲಿನ ಸಿಟ್ಟು ಆಳವಾಗಿ ಬೇರೂರಿತ್ತು. ಬ್ರಿಟಿಷರ ವಸಾಹತುಶಾಹಿ ಮೇಲುಗೈಗೆ ಕ್ರೀಡಾ ಮೈದಾನದಲ್ಲೇ ಪ್ರತ್ಯುತ್ತರ ನೀಡಲು ಅರ್ಜೆಂಟೀನಾ ಸದಾ ಹಂಬಲಿಸುತ್ತಿತ್ತು.

ಅರ್ಜೆಂಟೀನಾ ತಂಡದ ವಿರುದ್ಧ ಶಿಸ್ತು ಕ್ರಮವಾಗಲಿದೆಯೇ?

ಫಿಫಾ ನಿಯಮಗಳ ಪ್ರಕಾರ ಫುಟ್‌ಬಾಲ್ ಪಂದ್ಯಗಳ ವೇಳೆ ಯಾವುದೇ ರೀತಿಯ ರಾಜಕೀಯ, ಧಾರ್ಮಿಕ ಅಥವಾ ವೈಯಕ್ತಿಕ ಸಂದೇಶಗಳನ್ನು ಪ್ರದರ್ಶಿಸುವುದನ್ನು ಫಿಫಾ ಕಟ್ಟುನಿಟ್ಟಾಗಿ ನಿಷೇಧಿಸಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಆಟಗಾರ ಅಥವಾ ಇಡೀ ತಂಡಕ್ಕೆ ಶಿಸ್ತು ಕ್ರಮ ಹಾಗೂ ದಂಡ ವಿಧಿಸುವ ಅಧಿಕಾರ ಫಿಫಾಗೆ ಇರುತ್ತದೆ.

ಇದೇ ರೀತಿಯ ಘಟನೆ 2014ರಲ್ಲಿಯೂ ನಡೆದಿತ್ತು. ಸ್ಲೊವೇನಿಯಾ ವಿರುದ್ಧದ ಸೌಹಾರ್ದ ಪಂದ್ಯದ ವೇಳೆ ಅರ್ಜೆಂಟೀನಾ ಆಟಗಾರರು ಇದೇ ಬ್ಯಾನರ್ ಪ್ರದರ್ಶಿಸಿದ್ದರು. ಆಗ ಫಿಫಾ ನಿಯಮ ಉಲ್ಲಂಘನೆಗಾಗಿ ಅರ್ಜೆಂಟೀನಾ ಫುಟ್‌ಬಾಲ್ ಸಂಸ್ಥೆಗೆ ದಂಡ ವಿಧಿಸಿತ್ತು. ಪ್ರಸ್ತುತ ವಿಶ್ವಕಪ್‌ನ ಸೆಮಿಫೈನಲ್‌ನಂತಹ ದೊಡ್ಡ ವೇದಿಕೆಯಲ್ಲಿ, ಅದೂ ಇಂಗ್ಲೆಂಡ್ ವಿರುದ್ಧವೇ ಈ ಕೃತ್ಯ ಎಸಗಿರುವುದರಿಂದ ಈ ಬಾರಿ ಕಠಿಣ ಕ್ರಮ ಎದುರಿಸಬೇಕಾಗಬಹುದು ಎಂದು ಕ್ರೀಡಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಅರ್ಜೆಂಟೀನಾ ಆಟಗಾರನ ಮೇಲೆ ಹಲ್ಲೆ:

ಸೆಮಿಫೈನಲ್ ಪಂದ್ಯ ಮುಕ್ತಾಯದ ಬೆನ್ನಲ್ಲೇ ಮೈದಾನದಲ್ಲಿ ಮತ್ತೊಂದು ಹೈಡ್ರಾಮಾ ನಡೆದಿತ್ತು. ಅರ್ಜೆಂಟೀನಾ ಆಟಗಾರ ವ್ಯಾಲೆಂಟಿನ್ ಬಾರ್ಕೊ ಅವರ ತಲೆಗೆ ಇಂಗ್ಲೆಂಡ್‌ನ ತಾರೆ ಜೂಡ್ ಬೆಲ್ಲಿಂಗ್‌ಹ್ಯಾಮ್ ಹೊಡೆದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಘಟನೆಯ ಹಿಂದಿನ ಕಾರಣ ತಿಳಿದು ಬಂದಿಲ್ಲ.

ಈ ಪಂದ್ಯದುದ್ದಕ್ಕೂ ಅರ್ಜೆಂಟೀನಾ ಹಾಗೂ ಇಂಗ್ಲೆಂಡ್ ಆಟಗಾರರ ನಡುವೆ ವಾಕ್ಸಮರ, ತಲ್ಲಾಟದ ದೃಶ್ಯಗಳು ಕಂಡುಬಂದಿದ್ದವು.

Dailyhunt
Disclaimer: This content has not been generated, created or edited by Dailyhunt. Publisher: Prajavani