'ಈ ವರ್ಷ ಸ್ನೇಹಿತರ, ಕುಟುಂಬಸ್ಥರ ಮದುವೆಗೆಂದೇ ಸುಮಾರು ₹ 70 ರಿಂದ ₹ 80 ಸಾವಿರ ಖರ್ಚಾಗಿದೆ, ಇದು 6 ತಿಂಗಳ ಬಾಬ್ತು' ಎನ್ನುತ್ತಾ ಲೆಕ್ಕ ಬಿಚ್ಚಿಟ್ಟರು ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿರುವ ಬಾಷ್ ಕಂಪನಿಯಲ್ಲಿ ಕೆಲಸ ಮಾಡುವ ಅಲ್ಫಾನ್. 3 ವರ್ಷದಿಂದ ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಶಶಾಂಕ್, ಇದೇ ಕಾರಣಕ್ಕಾಗಿ ಖರ್ಚು ಮಾಡಿದ್ದು, ಸುಮಾರು ₹ 1.5 ಲಕ್ಷ.
ಹೆಂಡತಿ, ಮಗು ಇದ್ದಿದರಿಂದ ಅವರ ವೆಚ್ಚ ಲಕ್ಷ ಮೀರಿತ್ತು.
'ನವೆಂಬರ್ ಮತ್ತು ಫೆಬ್ರುವರಿ ನಡುವೆ ನಾನು ಏಳು ಮದುವೆಗಳಿಗೆ ಹಾಜರಾಗಿದ್ದೆ. ಪ್ರತಿ ಕಾರ್ಯಕ್ರಮಕ್ಕೂ ಹೊಸ ಉಡುಪು ಖರೀದಿ, ಪ್ರಯಾಣದ ಖರ್ಚು, ಉಡುಗೊರೆಯ ಹಣ, ಹೋಟೆಲ್ ವಾಸ್ತವ್ಯ - ಇವೆಲ್ಲವನ್ನೂ ಲೆಕ್ಕ ಹಾಕಿದರೆ ಮಾರ್ಚ್ ವೇಳೆಗೆ ನನಗೆ ಸುಮಾರು ₹1.2 ಲಕ್ಷ ಖರ್ಚಾಗಿತ್ತು. ಇದು ನನ್ನ ಎರಡು ತಿಂಗಳ ಸಂಬಳಕ್ಕೆ ಸಮ. ಆ ಬಟ್ಟೆಗಳು ಮತ್ತೊಮ್ಮೆ ಧರಿಸುವ ಸನ್ನಿವೇಶವೂ ಬರಲಿಲ್ಲ' ಇದು ಕೋರಮಂಗಲದ 'ರೇಜರ್ ಪೇ' ಕಂಪನಿಯಲ್ಲಿ ಕೆಲಸ ಮಾಡುವ ಪ್ರಿಯಾ ಅವರ ಅಳಲು.
ಇದು ಕೇವಲ ಇವರ ಕಥೆ ಮಾತ್ರವಲ್ಲ, ಒಂದು ಇಡೀ ತಲೆಮಾರಿನ ವಾಸ್ತವ. ಸಂಭ್ರಮಾಚರಣೆ ಹಣದುಬ್ಬರ (Celebration Inflation) ಜೆನ್-ಝೀ ತಲೆಮಾರಿನವರಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ.
ಹೆಚ್ಚುತ್ತಿರುವ ಮದುವೆ ವೆಚ್ಚಗಳು ಮತ್ತು ಸಾಮಾಜಿಕ ಒತ್ತಡಗಳು ವೃತ್ತಿಜೀವನದ ಆರಂಭಿಕ ಹಂತದಲ್ಲಿರುವ ಭಾರತದ ಯುವಜನರ ಮೇಲೆ ತೀವ್ರ ಆರ್ಥಿಕ ಒತ್ತಡ ಉಂಟುಮಾಡುತ್ತಿದೆ. ಜೊತೆಗೆ ಹಣದುಬ್ಬರವೂ ಕಂಗಾಲಾಗುವಂತೆ ಮಾಡಿದೆ. ಬದಲಾಗುತ್ತಿರುವ ಮದುವೆಯ ಪರಿಕಲ್ಪನೆ, ಅವುಗಳಲ್ಲಿ ಭಾಗಿಯಾಗಲೇಬೇಕಾದ ಪರೋಕ್ಷ ಒತ್ತಡ ಜೆನ್-ಝೀಗಳ ಜೇಬಿಗೆ ಭಾರಿ ಹೊಡೆತ ನೀಡುತ್ತಿದೆ.
ಅಮೆರಿಕ ಬಳಿಕ ವಿಶ್ವದ ಅತಿದೊಡ್ಡ ಮದುವೆ ಮಾರುಕಟ್ಟೆ ಭಾರತ. 'ವೆಡ್‌ಮೀಗುಡ್'ನ 2025ರ ವರದಿ ಪ್ರಕಾರ, ಭಾರತದಲ್ಲಿ ವಾರ್ಷಿಕವಾಗಿ 1 ಕೋಟಿಗೂ ಹೆಚ್ಚು ಮದುವೆಗಳು ನಡೆಯುತ್ತವೆ. ನವೆಂಬರ್ ಮತ್ತು ಡಿಸೆಂಬರ್ ನ 45 ದಿನಗಳ ಮದುವೆ ಋತುವಿನಲ್ಲಿ, ಈ ಉದ್ಯಮದಿಂದಾಗಿ ದೇಶದ ಆರ್ಥಿಕತೆಗೆ ₹6- ₹6.5 ಲಕ್ಷ ಕೋಟಿಗಳಷ್ಟು ಹಣ ಹರಿದಿದೆ. ಅಂದರೆ, ಕೇವಲ ಒಂದೂವರೆ ತಿಂಗಳಲ್ಲಿ ಭಾರತದ ಒಟ್ಟು ಜಿಡಿಪಿಯ ಸುಮಾರು ಶೇ 1.91 ರಷ್ಟು ವಹಿವಾಟು ಈ ಉದ್ಯಮದಿಂದಲೇ ನಡೆದಿದೆ.
ಮದುವೆಯ ಈ ಅಬ್ಬರದ ಹಿಂದೆ, ಹೂವು ಮಾರುವವರು, ಫೋಟೋಗ್ರಾಫರ್‌ಗಳು, ದಿನಸಿ ಅಥವಾ ಚಿನ್ನದ ವ್ಯಾಪಾರಿಗಳು ಲಾಭ ಪಡೆಯುತ್ತಿರುವುದು ಒಂದು ಕಡೆಯಲ್ಲಾದರೆ, ಇನ್ನೊಂದೆಡೆ ತನ್ನ ಆರ್ಥಿಕ ಶಕ್ತಿಯನ್ನು ಮೀರಿ ಖರ್ಚು ಮಾಡುತ್ತಿರುವ ದೇಶದ ಯುವಕರಿದ್ದಾರೆ.
ಭಾರತದಲ್ಲಿ ಮದುವೆಯ ಸರಾಸರಿ ಖರ್ಚು 2024ರಲ್ಲಿ ₹ 36.5 ಲಕ್ಷಕ್ಕೆ ಏರಿಕೆಯಾಗಿದೆ. ಬೆಂಗಳೂರು, ಹೈದರಾಬಾದ್‌ನಲ್ಲಿ ಈ ಮೊತ್ತ ₹ 37 ಲಕ್ಷ ಇದ್ದರೆ, ಜೈಪುರದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್‌ಗಳ ಖರ್ಚು ₹ 73 ಲಕ್ಷದಷ್ಟಿದೆ. 'ಜೆಫರಿಸ್' ಸಂಸ್ಥೆಯ ವಿಶ್ಲೇಷಣೆಯ ಪ್ರಕಾರ, ಭಾರತೀಯ ಕುಟುಂಬಗಳು ತಮ್ಮ ಮಗುವಿನ 18 ವರ್ಷಗಳ ಶಿಕ್ಷಣಕ್ಕೆ ಮಾಡುವ ವೆಚ್ಚಕ್ಕಿಂತ ಎರಡು ಪಟ್ಟು ಹೆಚ್ಚು ಹಣವನ್ನು ಒಂದು ಮದುವೆಗೆ ಖರ್ಚು ಮಾಡುತ್ತವೆ.
ಭಾರತದಲ್ಲಿ ಕೆಲಸ ಮಾಡುತ್ತಿರುವ ಜೆನ್-ಝೀ ವೃತ್ತಿಪರರ ಸರಾಸರಿ ಮಾಸಿಕ ವೇತನ ಸುಮಾರು ₹ 33,000 ಆಗಿದ್ದು, ಅವರ ಜೀವನ ವೆಚ್ಚವೇ ₹ 20,000 ಆಗುತ್ತದೆ. ಉಳಿಯುವ ಅಲ್ಪ ಮೊತ್ತವು ಮದುವೆಯ ಋತುವಿನಲ್ಲಿ ನೀರಂತೆ ಖರ್ಚಾಗುತ್ತದೆ.
ಡೆಸ್ಟಿನೇಶನ್ ವೆಡ್ಡಿಂಗ್ ಆದರೆ ಖರ್ಚು ಇನ್ನಷ್ಟು ಹೆಚ್ಚಾಗುತ್ತದೆ. ವಿಮಾನ ಪ್ರಯಾಣ, ರೆಸಾರ್ಟ್ ವಾಸ್ತವ್ಯ ಮತ್ತು 'ಡ್ರೆಸ್ ಕೋಡ್' ನಿಯಮಗಳು ಒಂದು ಮದುವೆಯ ವೆಚ್ಚವನ್ನು ₹ 50,000 ಕ್ಕಿಂತಲೂ ಹೆಚ್ಚು ಮಾಡಬಹುದು. ಈಗಾಗಲೇ ಮನೆ ಬಾಡಿಗೆ, ಶಿಕ್ಷಣ ಸಾಲ ಮತ್ತು ನಗರ ಜೀವನದ ವೆಚ್ಚಗಳನ್ನು ನಿಭಾಯಿಸುತ್ತಿರುವ ಜೆನ್-ಝೀ ಯುವಕರಿಗೆ, ನವೆಂಬರ್‌ನಿಂದ ಫೆಬ್ರುವರಿವರೆಗಿನ ಮದುವೆಯ ಋತುವಿನಲ್ಲಿ ಈ ವೆಚ್ಚಗಳು ದೊಡ್ಡ ಹೊರೆಯಾಗುತ್ತವೆ. ಒಂದು ಋತುವಿನಲ್ಲಿ ಐದಾರು ಮದುವೆಗಳಿಗೆ ಹಾಜರಾಗುವುದು ಎಂದರೆ, ಒಬ್ಬ ಯುವ ವೃತ್ತಿಪರ ತನ್ನ ಇಡೀ ಉಳಿತಾಯವನ್ನು ಕಳೆದುಕೊಳ್ಳುವುದು ಎಂದೇ ಅರ್ಥ.
ಅಮೆರಿಕದ ತೈಲ ಸಂಸ್ಕರಣಾ ಘಟಕಕ್ಕೆ ರಿಲಯನ್ಸ್ ಹೂಡಿಕೆ: ಡೊನಾಲ್ಡ್ ಟ್ರಂಪ್ ಘೋಷಣೆಸಾಲದ ಸುಳಿಯಲ್ಲಿ ಮದುವೆ ಸಂಭ್ರಮ
ಕೇವಲ ಅತಿಥಿಗಳಷ್ಟೇ ಅಲ್ಲ, ಮದುವೆ ಮಾಡಿಕೊಳ್ಳುವ ಯುವ ಜೋಡಿಗಳ ಪರಿಸ್ಥಿತಿಯೂ ಗಂಭೀರವಾಗಿದೆ. 'ಇಂಡಿಯಾಲೆಂಡ್ಸ್' ವರದಿಯ ಪ್ರಕಾರ, ಮದುವೆ ತಯಾರಿ ಮಾಡುತ್ತಿರುವ ಶೇ 26 ಜೋಡಿಗಳು ಸಾಲ ಪಡೆಯುತ್ತಿದ್ದಾರೆ. ಇದರಲ್ಲಿ ಶೇ 68ರಷ್ಟು ಮಂದಿ ₹1 ಲಕ್ಷದಿಂದ ₹5 ಲಕ್ಷದವರೆಗೆ ಸಾಲ ಪಡೆಯುತ್ತಾರೆ. ಬಜಾಜ್ ಫೈನಾನ್ಸ್ ಮತ್ತು ಟಾಟಾ ಕ್ಯಾಪಿಟಲ್‌ನಂತಹ ಸಂಸ್ಥೆಗಳು ಈಗ ಮದುವೆಗಾಗಿಯೇ ವಿಶೇಷ ವೈಯಕ್ತಿಕ ಸಾಲಗಳನ್ನು ನೀಡುತ್ತಿವೆ.
ಇನ್ನೊಂದು ಆತಂಕಕಾರಿ ವಿಷಯವೆಂದರೆ, ಅನೇಕ ಜೋಡಿಗಳು ಫೋಟೋಗ್ರಫಿ, ಆಭರಣ ಮತ್ತು ಅಲಂಕಾರಕ್ಕಾಗಿ 'ಬೈ ನೌ ಪೇ ಲೇಟರ್' ಆಯಪ್‌ಗಳ ಮೂಲಕ ಸಾಲ ಪಡೆಯುತ್ತಿದ್ದಾರೆ. ಮದುವೆಯ ನಂತರ ತಮ್ಮ ಜೀವನವನ್ನು ಶೂನ್ಯ ಉಳಿತಾಯ ಹಾಗೂ ಸಾಲದ ಹೊರೆಯಿಂದಲೇ ಆರಂಭಿಸುವ ಇವರು, ಸಾಲು ಸಾಲು ಇಎಂಐಗಳನ್ನು ಕಟ್ಟಲು ಪರದಾಡುತ್ತಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ದತ್ತಾಂಶದ ಪ್ರಕಾರ, ಭಾರತದ ಕುಟುಂಬಗಳ ನಿವ್ವಳ ಉಳಿತಾಯವು ಜಿಡಿಪಿಯ ಶೇ 5.3 ಕ್ಕೆ ಕುಸಿದಿದೆ. ಇದು ಕಳೆದ 50 ವರ್ಷಗಳಲ್ಲೇ ಅತ್ಯಂತ ಕನಿಷ್ಠ.
ಗ್ಯಾರಂಟಿ ನಿರಾತಂಕ, ಅಭಿವೃದ್ಧಿಗೂ ಅಂಕ: ಇದು ಸಿದ್ದರಾಮಯ್ಯ ಅರ್ಥಲೋಕಸಾಮಾಜಿಕ ಜಾಲತಾಣ ಮತ್ತು ತೋರಿಕೆಯ ಸಂಸ್ಕೃತಿ
ಜೆನ್-ಝೀ ತಲೆಮಾರಿನ ಮೇಲೆ ಇಷ್ಟೊಂದು ಒತ್ತಡ ಬೀಳಲು ಮುಖ್ಯ ಕಾರಣ 'ಇನ್‌ಸ್ಟಾಗ್ರಾಮ್'. ಹಿಂದೆ ನೆರೆಹೊರೆಯವರ ಸಮ್ಮುಖದಲ್ಲಿ ನಡೆಯುತ್ತಿದ್ದ ಮದುವೆಗಳು, ಇಂದು ಸಾವಿರಾರು ಜನರ ಮುಂದೆ ಪ್ರದರ್ಶನಗೊಳ್ಳುವ 'ರೀಲ್ಸ್'ಗಳಾಗಿ ಬದಲಾಗಿವೆ. ಡ್ರೋನ್ ಫೋಟೋಗ್ರಫಿ, ಸಿನೆಮ್ಯಾಟಿಕ್ ಪ್ರಿ-ವೆಡ್ಡಿಂಗ್ ಶೂಟ್‌ಗಳು ಈಗ ಮಧ್ಯಮ ವರ್ಗದ ಮದುವೆಗಳಲ್ಲೂ ಕಡ್ಡಾಯ ಎಂಬಂತಾಗಿದೆ. ಈ ತೋರ್ಪಡಿಕೆ ಸಂಸ್ಕೃತಿಯು ಮದುವೆಗೆ ಬರುವ ಅತಿಥಿಗಳ ಮೇಲೆಯೂ ಪರಿಣಾಮ ಬೀರಿದ್ದು, 'ಇನ್‌ಸ್ಟಾಗ್ರಾಮ್‌ಗೆ ಯೋಗ್ಯವಾದ' ಬಟ್ಟೆಗಳನ್ನು ಧರಿಸಲೇಬೇಕಾದ ಒತ್ತಡಕ್ಕೆ ಅವರು ಸಿಲುಕಿದ್ದಾರೆ. ಇದು ಅತಿಥಿಗಳು ತಮ್ಮ ಆರ್ಥಿಕ ಶಕ್ತಿಯನ್ನು ಮೀರಿ ಖರ್ಚು ಮಾಡುವಂತೆ ಪರೋಕ್ಷ ಒತ್ತಡವನ್ನು ಸೃಷ್ಟಿಸುತ್ತಿದೆ. ಯುವ ಅತಿಥಿಗಳ ಮೇಲಿನ ಹೆಚ್ಚುತ್ತಿರುವ ಆರ್ಥಿಕ ಒತ್ತಡವು ಸಾಮಾಜಿಕ ಹೊಣೆಗಾರಿಕೆಗಳು ಮತ್ತು ವೈಯಕ್ತಿಕ ಆರ್ಥಿಕ ಯೋಜನೆಗಳ ನಡುವಿನ ಸಂಘರ್ಷವನ್ನು ಎತ್ತಿ ತೋರಿಸುತ್ತಿದೆ.
ಸಾಮಾಜಿಕ ನಿರಾಕರಣೆಯ ಭಯ
ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ ಮದುವೆಗೆ ಹೋಗದಿರುವುದು ಸಂಬಂಧಗಳನ್ನು ಮುರಿಯುವಷ್ಟು ದೊಡ್ಡ ಅಪರಾಧವಾಗಿ ಬಿಂಬಿತವಾಗುತ್ತದೆ. ಕೈಯಲ್ಲಿ ಹಣವಿಲ್ಲದಿದ್ದರೂ ಮದುವೆಗೆ ಹಾಜರಾಗಲೇಬೇಕು ಎನ್ನುವ ಕೌಟುಂಬಿಕ ಹಾಗೂ ಸಾಮಾಜಿಕ ಒತ್ತಡವು ನವ ತಲೆಮಾರಿನವರನ್ನು ಸಾಲದ ಬಲೆಗೆ ಬೀಳುವಂತೆ ಮಾಡುತ್ತಿದೆ.
ಬದಲಾಗುತ್ತಿರುವ ಟ್ರೆಂಡ್
ಇಷ್ಟೆಲ್ಲಾ ಸವಾಲುಗಳ ನಡುವೆಯೂ ಜೆನ್-ಝೀ ತಲೆಮಾರಿನಲ್ಲಿ ನಿಧಾನವಾಗಿ ಬದಲಾವಣೆ ಕಾಣಿಸಿಕೊಳ್ಳುತ್ತಿದೆ. 2025ರ ವರದಿಯ ಪ್ರಕಾರ, ಪ್ರೀತಿಸಿ ಮದುವೆಯಾಗುವವರ ಸಂಖ್ಯೆ ಶೇ 62 ರಷ್ಟಿದೆ. ಈ ಪೈಕಿ ಅನೇಕ ಜೋಡಿಗಳು 'ಮೈಕ್ರೋ-ವೆಡ್ಡಿಂಗ್' (ಕಡಿಮೆ ಅತಿಥಿಗಳಿರುವ ಮದುವೆ) ಆಯ್ಕೆ ಮಾಡಿ, ಸಾಲದ ಹೊರೆ ತಗ್ಗಿಸಿಕೊಳ್ಳುತ್ತಿದ್ದಾರೆ. ಕೆಲವು ಜೆನ್-ಝೀ ವೃತ್ತಿಪರರು ವೆಚ್ಚ ನಿರ್ವಹಣೆಗಾಗಿ ಡಿಜಿಟಲ್ ಹಣ ವರ್ಗಾವಣೆ ಅಥವಾ ಕೇವಲ ಆಪ್ತ ಸ್ನೇಹಿತರು ಮತ್ತು ಕುಟುಂಬದ ಮದುವೆಗಳಿಗೆ ಮಾತ್ರ ಹಾಜರಾಗುತ್ತಿದ್ದಾರೆ.
ಮದುವೆ ಅರ್ಥಪೂರ್ಣ ಮತ್ತು ಖುಷಿಯ ಕ್ಷಣಗಳಾಗಿರಬೇಕು ಎನ್ನುವುದು ಸತ್ಯವಾದರೂ, ಸಂಭ್ರಮವು ಆರ್ಥಿಕ ನಷ್ಟಕ್ಕೆ ತಳ್ಳುವ ಪ್ರದರ್ಶನವಾಗಬಾರದು. ಹಣಕಾಸು ಯೋಜನೆ ಅಥವಾ ಆಯ್ದ ಮದುವೆಗಳಿಗೆ ಮಾತ್ರ ಹಾಜರಾಗುವ ಮೂಲಕ, ಆರ್ಥಿಕ ಆದ್ಯತೆಗಳ ಬಗ್ಗೆಯೂ ಗಮನ ಹರಿಸಬೇಕು.
ನಿರೀಕ್ಷಿತ ಪ್ರಮಾಣದಲ್ಲಿ ಆಗದ ಅಭಿವೃದ್ಧಿ: ಸಾವು-ನೋವಿಗೂ ಸಾಕ್ಷಿಯಾದ ಗದಗ ಜಿಲ್ಲೆ
