'ರಾಸಾಯನಿಕ ಪದ್ಧತಿಗೆ ಹೋಲಿಸಿದರೆ, ಸಾವಯವದಲ್ಲಿ ದೇಸಿ ಭತ್ತದ ತಳಿಗಳ ಕೃಷಿ ಸುಲಭ. ಆರಂಭದಲ್ಲಿ ಮಾತ್ರ ಸ್ವಲ್ಪ ಶ್ರಮ ಹಾಕಬೇಕು. ನಂತರದ ವರ್ಷಗಳಲ್ಲಿ ಕೆಲಸ, ವೆಚ್ಚ, ನಿರ್ವಹಣೆಯ ಒತ್ತಡ ಕ್ರಮೇಣ ಕಡಿಮೆಯಾಗುತ್ತದೆ. ಇಳುವರಿ ಸಾಧಾರಣವಾದರೂ ಈ ತಳಿಗಳ ಅಕ್ಕಿಗೆ ಬಹಳ ಬೇಡಿಕೆ, ಬೆಲೆಯೂ ಇದೆ, ಹಾಗಾಗಿ ಕಡಿಮೆ ಇಳುವರಿಯಲ್ಲೂ, ಲಾಭ ಗ್ಯಾರಂಟಿ..!
ಅನ್ನದ ಬಟ್ಟಲು: ಅಜೋಲಾ, ಭತ್ತದ ಗದ್ದೆಗಳ ಕವಚಅನ್ನದ ಬಟ್ಟಲು: ಮಳೆ ಕೊರತೆಯ ಹುಲಿಕೆರೆಯಲ್ಲಿ 'ಹಣ್ಣಿನ ತೋಟ' ಅರಳಿದ್ದು ಹೇಗೆ?ಹದಿನಾರು ವರ್ಷಗಳಿಂದ ಹದಿನೇಳು ಎಕರೆಯಲ್ಲಿ ವೈವಿಧ್ಯಮಯ ದೇಸಿ ಭತ್ತ ತಳಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿರುವ ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕಕ್ಕೇರಾ ಗ್ರಾಮದ ದೇವೇಂದ್ರಪ್ಪ ಭೋಯಿ ಅವರ ಅನುಭವದ ನುಡಿಗಳಿವು.
ಸಾವಯವ ಪದ್ಧತಿಯಲ್ಲಿ ಭತ್ತದ ಕೃಷಿ ಕಷ್ಟ, ದೇಸಿ ತಳಿಗಳು ಇಳುವರಿ ಕಡಿಮೆ, ಮಾರುಕಟ್ಟೆಯೂ ಕಷ್ಟ' ಎನ್ನುತ್ತಿದ್ದ ಕಾಲಘಟ್ಟದಿಂದಲೇ ದೇಸಿ ಭತ್ತದ ತಳಿಗಳ ಕೃಷಿ ಆರಂಭಿಸಿದ್ದಾರೆ ದೇವೇಂದ್ರಪ್ಪ. ನಾಲ್ಕೈದು ತಳಿಗಳಿಂದ ಆರಂಭಿಸಿ ಸುಮಾರು 27 ತಳಿಗಳನ್ನು ನಿರಂತರವಾಗಿ ಬೆಳೆಯುವಹಂತಕ್ಕೆ ತಲುಪಿ ದ್ದಾರೆ. ಇವರ ಕೃಷಿ ಕೇವಲ ಭತ್ತ, ಅಕ್ಕಿ ಉತ್ಪಾದನೆ ಮಾರಾಟಕ್ಕೆ ಸೀಮಿತವಾಗದೇ, ದೇಸಿ ಭತ್ತದ ತಳಿಗಳ ಸಂರಕ್ಷಣೆಯ ಆಂದೋಲನದಂತಾಗಿದೆ.

ದೇಸಿ ಭತ್ತದ ಲೋಕದಲ್ಲಿ ಮಹಿಳೆಯರು
ಸವಳು ನೆಲದಿಂದ ಆರಂಭ..
ಎಂ.ಎ. ಪದವೀಧರ ದೇವೇಂದ್ರಪ್ಪ 2005ರಲ್ಲಿ ಊರಿನ ಸಮೀಪದಲ್ಲೇ ಐದು ಎಕರೆ ಜಮೀನನ್ನು ಖರೀದಿಸಿದರು.ಆದರೆ ಆ ಜಮೀನಿನ ಮಣ್ಣು ಭತ್ತಕ್ಕೆಂದು ನೀರು, ರಸಗೊಬ್ಬರ ಬಳಸಿ ಬಳಸಿ ಸವಳಾಗಿತ್ತು. ಆ ನೆಲ ಯಾವುದಕ್ಕೂ ಉಪಯೋಗವಿಲ್ಲ ಎಂದು ತೀರ್ಮಾನ ವಾಗಿತ್ತು. ಅದೇ ಗದ್ದೆಯ ಸುತ್ತಾ ಬಸಿಗಾಲುವೆ ತೆಗೆದು, ಸವಳು ಬಸಿಯಲುದಾರಿ ಮಾಡಿದರು. ಆರಂಭದಲ್ಲಿ ರಾಸಾಯನಿಕ ಪದ್ಧತಿಯಲ್ಲಿ ಸೋನಾ ಮಸೂರಿ ಭತ್ತ ಬೆಳೆದರು. ಖರ್ಚು-ವೆಚ್ಚ ಹೆಚ್ಚಾಯಿತು, ಭತ್ತ ಮಾರಾಟದಲ್ಲಿ ಲಾಭ ಬರಲಿಲ್ಲ. ಚಿಂತೆಗೀಡುಮಾಡಿತು.
ಇದೇ ಸಮಯದಲ್ಲಿ 'ಪ್ರಜಾವಾಣಿ'ಯ ಕೃಷಿ ಪುರವಣಿ ಯಲ್ಲಿ ದಾವಣಗೆರೆ ಜಿಲ್ಲೆ ಕುಂಬಳೂರಿನ ಯುವ ಕೃಷಿಕ ಆಂಜನೇಯ ಹತ್ತಾರು ಬಗೆಯ ನಾಟಿ ಭತ್ತ ಬೆಳೆದಿರುವ ಲೇಖನ ಪ್ರಕಟವಾಗಿತ್ತು. ಕಡಿಮೆ ಖರ್ಚಿನಲ್ಲಿ ನಾಟಿ ತಳಿಗಳನ್ನು ಬೆಳೆಯಬಹುದೆಂಬ ಮಾಹಿತಿ ದೇವೇಂದ್ರಪ್ಪ ಅವರನ್ನು ಆಕರ್ಷಿಸಿತು. ಮನದಲ್ಲಿ ಉತ್ಸಾಹವಿರುವಾಗಲೇ ಆಂಜನೇಯ ಅವರಲ್ಲಿಗೆ ಹೋಗಿ ಅವರ ಬಳಿಯಲ್ಲಿದ್ದ ಒಂದಷ್ಟು ತಳಿಗಳನ್ನು ಬೀಜಕ್ಕಾಗುವಷ್ಟು ತಂದರು.
2009ರ ಸುಮಾರಿಗೆ ಜಮೀನಿನಲ್ಲಿ ಅರ್ಧ ಎಕರೆಯಲ್ಲಿ ಚಿನ್ನಪೊನ್ನಿ, ಗೌರಿಸಣ್ಣ, ದೆಹಲಿ ಬಾಸುಮತಿ, ಅಂಬೆ ಮೋಹರೆ ಮತ್ತು ಗಂಧಸಾಲೆ ಎಂಬ ಐದು ದೇಸಿ ತಳಿ ಭತ್ತಗಳನ್ನು ಪ್ರಾಯೋಗಿಕವಾಗಿ ಬೆಳೆದರು. ಪೈರು ನಾಟಿಗೆ ಮುನ್ನ ಕೊಟ್ಟಿಗೆ ಗೊಬ್ಬರ ಹಾಗೂ ಬೆಳವಣಿಗೆ ಹಂತದಲ್ಲಿ ಸುಭಾಷ ಪಾಳೇಕರ ಅವರು ರೂಪಿಸಿದ್ದ ಜೀವಾಮೃತ ನೀಡಿದರು. ಕೀಟ ನಿಯಂತ್ರಣಕ್ಕೆ ಟ್ರೈಕೊಗ್ರಾಮ್ (ಪರತಂತ್ರ ಜೀವಿ), ಶಿಲೀಂದ್ರನಾಶಕವಾಗಿ ಸೂಡೋಮಾನಸ್, ಅಜೋಸ್ಪಿರಲಂನಂತಹ ಸಾವಯವ ಒಳಸುರಿಗಳನ್ನು ಬಳಸಿದರು. ಈ ಐದೂ ತಳಿಗಳ ಗುಣ ಭಿನ್ನ. ಪೂರಕ ವಾತಾವರಣವಿದ್ದರೆ ಪ್ರತಿ ತಳಿಯೂ ಎಕರೆಗೆ 18 ರಿಂದ 25 ಕ್ವಿಂಟಲ್ ಇಳುವರಿ ಕೊಡುತ್ತದೆ. ಎಲ್ಲವೂ ಸಣ್ಣ ಗಾತ್ರದ ಅಕ್ಕಿಗಳು, ಗಂಧಸಾಲೆ, ದೆಹಲಿ ಬಾಸುಮತಿ, ಅಂಬೆಮೊಹರೆ ಇವು ಪರಿಮಳದ ಭತ್ತ.
ಒಟ್ಟಾರೆ, ಹೆಚ್ಚು ಖರ್ಚಿಲ್ಲದೇ ಎಲ್ಲ ತಳಿಗಳೂ ಸೊಂಪಾಗಿ ಬೆಳೆದು ನಿಂತವು. ದೇಸಿ ಭತ್ತದ ತಳಿಗಳ ಕೃಷಿ ಸವಳು ನೆಲದಿಂದ ಆರಂಭವಾಯಿತು.

ಹುಮ್ಮಸ್ಸು ವಿಸ್ತರಿಸಿದ ತಳಿ ಸಂಖ್ಯೆ..
ಐದು ತಳಿಯ ಯಶಸ್ಸುಇನ್ನಷ್ಟು ದೇಸಿ ತಳಿಬೆಳೆಸಲು ದೇವೇಂದ್ರಪ್ಪಅವರನ್ನು ಪ್ರೇರೇಪಿಸಿತು. ನಂತರ ಅವರು 2010ರಲ್ಲಿ ಅರ್ಧ ಎಕರೆಯಿಂದ ಎರಡು ಎಕರೆಗೆ ವಿಸ್ತರಿಸಿದರು. ಆರಂಭದ ಐದು ತಳಿಗಳ ಜೊತೆಗೆ, ಬರ್ಮಾ ಬ್ಲಾಕ್, ನವರ, ರತ್ನಚೂಡಿ, ಕಾಗೆಸಾಳಿ, ಮದ್ರಾಸ್ಸಣ್ಣ, ಗಂಧಸಾಲೆ, ಮೈಸೂರು ಸಣ್ಣ, ಕರಿಕಳವೆ, ಮರಭತ್ತದಂತಹ 44 ವಿವಿಧ ಭತ್ತದ ತಳಿಗಳನ್ನು ಬೆಳೆದರು,
ದೇವೇಂದ್ರಪ್ಪ ದೇಸಿ ಭತ್ತದ ತಳಿ ಬೀಜಕ್ಕಾಗಿ ಸಾಕಷ್ಟು ಸುತ್ತಾಡಿದ್ದಾರೆ. ಇವರ ಉತ್ಸಾಹಕ್ಕೆ ಬೆಂಗಳೂರಿನ ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ ನೀರೆರೆಯಿತು. 'ಬಳಗದ ನಿರ್ದೇಶಕ ಜಿ.ಕೃಷ್ಣಪ್ರಸಾದ ಅವರ ಸಲಹೆ ಮೇರೆಗೆ ಕುಂಬಳೂರಿನ ಅಂಜನೇಯ, ಬಳಗಾನೂರಿನ ರೇವಣಸಿದ್ದಪ್ಪ, ಕೆ.ಆರ್.ಪೇಟೆ ಶ್ರೀನಿವಾಸಮೂರ್ತಿ ಮತ್ತಿರರನ್ನು ಸಂಪರ್ಕಿಸಿ, ಅವರಲ್ಲಿರುವ ವಿಶಿಷ್ಟ ತಳಿ ಭತ್ತ ತೆಗೆದು ಕೊಂಡು ಬಂದೆ. ಸುರಪುರ ತಾಲ್ಲೂಕಿನ ಹೊರಟ್ಟಿಯ ಹನುಮಂತ ಏಳೂರು ಎಂಬುವವರು ಸಂರಕ್ಷಿಸಿಕೊಂಡು ಬಂದಿದ್ದ ಮರಭತ್ತವನ್ನೂ ತಂದು ಹಾಕಿದೆ. ತಳಿಗಳು ಚೆನ್ನಾಗಿ ಬಂದವು. 2011ರಲ್ಲಿ ಕ್ಷೇತ್ರೋತ್ಸವ ಕೂಡ ಮಾಡಿದೆ' ಎನ್ನುತ್ತಾ ದೇವೇಂದ್ರಪ್ಪ ಆರಂಭದ ಹೆಜ್ಜೆಗಳನ್ನು ನೆನಪಿಸಿಕೊಂಡರು.
ದೇಸಿ ಭತ್ತದ ತಳಿ ಬೆಳೆಯುವ ಹೊತ್ತಿಗೆ ದೇವೇದ್ರಪ್ಪ ಅವರು, ನೈಸರ್ಗಿಕ ಕೃಷಿ ತಜ್ಞ ಸುಭಾಷ್ ಪಾಳೇಕರ್ ಅವರ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಗಾರಕ್ಕೆ ಹೋಗಿ ಬಂದಿದ್ದರು. ಅಲ್ಲಿ ಕಲಿತ 'ರಾಸಾಯನಿಕ ಮುಕ್ತ ಭತ್ತದ ಕೃಷಿಯ ಪಾಠದಿಂದ ದೇಸಿ ತಳಿಗಳನ್ನು ರಾಸಾಯನಿಕ ಮುಕ್ತವಾಗಿ ಬೆಳೆಯಲುಸಾಧ್ಯವಾಯಿತು. 'ತರಬೇತಿ ಪಡೆದಾಗಿನಿಂದಲೇ ರಾಸಾಯನಿಕ ಕೃಷಿಯ ಕಡೆಗೆ ವಿದಾಯ ಹೇಳಿದೆ' ಎಂದರು ದೇವೇಂದ್ರಪ್ಪ.
'ಸವಳು' ನುಂಗಿ ಬೆಳೆದ 'ನವರ'!
ದೇವೇಂದ್ರಪ್ಪ, ಸವಳು ಜಮೀನಿನ ಒಂದು ಭಾಗದಲ್ಲಿ ಬೇಸಿಗೆ ಬೆಳೆಯಾಗಿ 'ನವರ' ಭತ್ತ ಬಿತ್ತಿದ್ದರು. ಎಲ್ಲ ತಳಿಗಳಂತೆ, ನವರ ಭತ್ತಕ್ಕೂ ನೀರು,ಹಸಿರೆಲೆ ಗೊಬ್ಬರ, ಶಿಲೀಂದ್ರನಾಶಕ, ಅಜೋಲಾದಂತಹ ಸಾವಯವ ವಿಧಾನದ ಆರೈಕೆಯನ್ನೇ ಅನುಸರಿಸಿದರು. ಆದರೆ, ಫಲಿತಾಂಶದಲ್ಲಿ ಎಲ್ಲ ತಳಿಗಳಿಗಿಂತ ನವರ ಚೆನ್ನಾಗಿ ಇಳುವರಿ ಬಂತು !
ನವರ ಔಷಧೀಯ ಗುಣಗಳಿರುವ ಅಕ್ಕಿ ಎಂದು ತಜ್ಞರು ಹೇಳುತ್ತಾರೆ. ಕೇರಳ ಮತ್ತಿತರ ರಾಜ್ಯಗಳಲ್ಲಿ ಆಯುರ್ವೇದದ ಆಸ್ಪತ್ರೆಯವರು ಬಳಸುತ್ತಿದ್ದಾರೆ. ಇದಕ್ಕೆ ಬೆಲೆಯೂ ಹೆಚ್ಚು, ಬೇಡಿಕೆಯೂ ಹೆಚ್ಚು.ಇಂಥ ಔಷಧಯುಕ್ತ ತಳಿ 'ಸವಳು' ಮಣ್ಣಿನಲ್ಲೂ ಚೆನ್ನಾಗಿ ಬೆಳೆಯುತ್ತದೆ ಎಂಬುದನ್ನು ಗಮನಿಸಿದ ದೇವೇಂದ್ರಪ್ಪ, ಇದನ್ನು 20 ಎಕರೆವರೆಗೆ ವಿಸ್ತರಿಸಿದರು.
ನವರ ಭತ್ತ ಫಲವತ್ತಾದ ಭೂಮಿಯಲ್ಲಿ ಎತ್ತರಕ್ಕೆ ಬೆಳೆದು ನೆಲಕ್ಕೆ ಬಿದ್ದರೂ, ಕಾಳು ಕಟ್ಟುತ್ತದೆ. ಕಡಿಮೆ ಫಲವತ್ತತೆಯಲ್ಲಿ ಹಾಗೂ ಸವಳು ಜಮೀನಿನಲ್ಲಿ ಪೈರುಗಳು ಎರಡು ಅಡಿಎತ್ತರ ಬೆಳೆದಿದ್ದವು. ಪ್ರತಿ ಪೈರಿನಲ್ಲಿ 50 ರಿಂದ 60 ತೆoಡೆಗಳಿದ್ದವು. ಎಕರೆಗೆ ಕನಿಷ್ಠ 8 ಕ್ವಿಂಟಲ್‌ನಿಂದ ಗರಿಷ್ಠ 19 ಕ್ವಿಂಟಲ್‌ವರೆಗೂ ಇಳುವರಿ ಬಂತು. ಆಗ ಸಗಟಾಗಿ ಕೆ.ಜಿಗೆ ₹60 ಮತ್ತು ಬಿಡಿಯಾಗಿ ₹80 ಕ್ಕೆ ಮಾರಾಟ ಮಾಡಿದೆ' ಎನ್ನುತ್ತಾ ನವರದ ಯಶೋಗಾಥೆಯನ್ನು ವಿವರಿಸಿದರು ದೇವೇಂದ್ರಪ್ಪ.
'ಮೊದಲು ಸಾವಯವದಲ್ಲಿ ಭತ್ತ ಬೆಳೆಯುವವರು, ಫಲವತ್ತತೆ ಕಡಿಮೆ ಇರುವ ಮಣ್ಣಲ್ಲೂ ಬೆಳೆಯುವ ನವರ ಭತ್ತವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ತುಂಬಾ ಇಳುವರಿ ಕುಂಠಿತವಾಗುವುದಿಲ್ಲ, ನಷ್ಟವೂ ಆಗುವುದಿಲ್ಲ. ಮುಂದೆ ದೇಸಿ ಭತ್ತ ಬೆಳೆಯಲು ಉತ್ಸಾ ಹವೂ ಇರುತ್ತದೆ' ಎಂದು ಅವರು ಕಿವಿಮಾತು ಹೇಳುತ್ತಾರೆ.
ಅದೇ ವರ್ಷ (2010) ಮುಂಗಾರಿನಲ್ಲಿ ಅಂಬೆಮೊಹರ್, ಗಂಧಸಾಲೆ, ಗೌರಿ ಸಣ್ಣ ತಳಿಗಳನ್ನು 20 ಎಕರೆಯಲ್ಲಿ ಅಕ್ಕಿಗಾಗಿ ಬೆಳೆದಿದ್ದರು. ಅವುಗಳೂ ಉತ್ತಮ ಇಳುವರಿ ನೀಡಿದವು. ಅಕ್ಕಿಯ ಜೊತೆಗೆ ಬೀಜಕ್ಕಾಗಿ ಭತ್ತವೂ ಮಾರಾಟವಾಯಿತು ಎಂದು ವಿವರಿಸಿದರು ದೇವದ್ರಪ್ಪ.
ದೇಸಿ ತಳಿ 'ಜೈತ್ರ ಯಾತ್ರೆ'
ದೇಸಿ ತಳಿ ಭತ್ತದ ಕೃಷಿಯ ಯಶಸ್ಸು ದೇವೇಂದ್ರಪ್ಪ ಅವರನ್ನು ಪ್ರತಿ ವರ್ಷ ಹೆಚ್ಚು ಹೆಚ್ಚು ಪ್ರಯೋಗಕ್ಕೆ ಒಡ್ಡಿಕೊಳ್ಳುವಂತೆ ಮಾಡಿತು. ಯಾವ ದೇಸಿ ತಳಿಗಳು ಯಾದಗಿರಿ ಭಾಗಕ್ಕೆ ಒಗ್ಗುತ್ತವೆ, ಯಾವ ತಳಿಯ ಅಕ್ಕಿಗೆ ಬೇಡಿಕೆ, ಬೆಲೆ ಇದೆ, ಯಾವ ತಳಿಯ ಬೀಜಕ್ಕೆ ಬೇಡಿಕೆ ಇದೆ ಎಂಬುದನ್ನು ಅನುಭವದ ಆಧಾರದ ಮೇಲೆ ಕಲಿತರು. ಪ್ರತಿ ವರ್ಷವೂ ಆ ಪ್ರಯೋಗವನ್ನು ಮುಂದುವರಿಸಿದರು. ಬೇಡಿಕೆ ಆಧರಿಸಿ, ಇಂತಿಷ್ಟು ಅಕ್ಕಿಗೆ, ಇಂತಿಷ್ಟು ಬೀಜಕ್ಕೆ ಮತ್ತು ಇಷ್ಟು ಅಕ್ಕಿ ಮತ್ತು ಬೀಜಕ್ಕಾಗಿ ಎಂದು ತಳಿಗಳನ್ನು ವಿಂಗಡಿಸಿ ಬೆಳೆಯಲಾರಂಭಿಸಿದರು.
2011 ರಿಂದ 2024ರ ವರೆಗೆ 20 ಎಕರೆಯಲ್ಲಿ ದೇಸಿ ಭತ್ತದ ತಳಿಗಳನ್ನು ಬೆಳೆಯುತ್ತಿದ್ದ ದೇವೇಂದ್ರಪ್ಪ, ಹೊಲದ ಗುತ್ತಿಗೆ ಖರ್ಚು ಹೆಚ್ಚಾದ ಕಾರಣ, 2025 ರಿಂದ 17 ಎಕರೆಗೆ ಮಿತಗೊಳಿಸಿದರು.
ಈ ವರ್ಷ ಬೇಸಿಗೆಯಲ್ಲಿ 27 ಬಗೆಯ ದೇಸಿ ತಳಿಗಳನ್ನು ಬೆಳೆದಿದ್ದಾರೆ. ಇದರಲ್ಲಿ ನವರ, ಗೌರಿಸಣ್ಣ ಮತ್ತು ದೆಹಲಿ ಬಾಸುಮತಿ ತಳಿಗಳನ್ನು ಕುಂಬಳೂರಿನ ಆಂಜನೇಯವರಿಂದ, ರಕ್ತ ಸಾಲಿ ಮತ್ತು ಕಾಗೆ ಸಾಳಿ ತಳಿಗಳನ್ನು ಮಹಾರಾಷ್ಟ್ರದ ಕನ್ನೇರಿ ಮಠದಿಂದ ಮತ್ತು ಭೀಮಸಾಲಿ, ತನುಭತ್ತ, ಕಬ್ಬಿಗ, ಕಪ್ಪು ಭತ್ತದ ತಳಿಗಳನ್ನು ಮಂಡ್ಯ ವಿ.ಸಿ.ಫಾರ್ಮ್ನಿಂದ ತಂದಿದ್ದಾರೆ. ಉಳಿದಿದ್ದೆಲ್ಲ ಮೈಸೂರಿನ ಸಹಜ ಸೀಡ್ಸ್‌ನಿಂದ ಖರೀದಿಸಿ ತಂದಿದ್ದಾರೆ.
ಈ ಬಾರಿ 7 ಎಕರೆಯಲ್ಲಿ ನವರ ಭತ್ತ ಬೆಳೆದಿದ್ದಾರೆ. ಉಳಿದಂತೆ ಅಂಬೆಮೋಹರ್, ಕರಿಗಿಜಿವಿಲಿ, ಬರ್ಮಾ ಬ್ಲ್ಯಾಕ್, ರಕ್ತಸಾಲಿ ಭತ್ತಗಳನ್ನು ತಲಾ ಒಂದು ಎಕರೆಯಲ್ಲಿ ಬೆಳೆದಿದ್ದಾರೆ. ಎರಡು ಎಕರೆಯಲ್ಲಿ ಗಂಧಸಾಲೆ, ಮೂರು ಎಕರೆಯಲ್ಲಿ ಎಚ್‌ಎಂಟಿ ತಳಿ ನಾಟಿ ಮಾಡಿದ್ದಾರೆ. ಕರಿಗಿಜಿವಿಲಿ ಹೊರತುಪಡಿಸಿ ಉಳಿದೆಲ್ಲವನ್ನೂ ಅಕ್ಕಿ ಮತ್ತು ಬೀಜಕ್ಕಾಗಿ ಬೆಳೆದಿದ್ದಾರೆ. ಮಾರ್ಚ್ ತಿಂಗಳಲ್ಲಿ ಕೊಯ್ಲು ಮಾಡಲಾಗಿದೆ. ಪ್ರತಿ ಎಕರೆಗೆ ನವರ 15 ಕ್ವಿಂಟಲ್, ಗಂಧಸಾಲೆ 15 ಕ್ವಿಂಟಲ್, ಅಂಬೆ ಮೊಹರ್ 14, ಕರಿಗಜವಿಲಿ 18, ರಕ್ತಶಾಲಿ 12 , ಬರ್ಮಾ ಬ್ಲಾಕ್ 19, ಭೀಮಶಾಲಿ 20 , ಗೌರಿ ಸಣ್ಣ 25 ಕ್ವಿಂಟಾಲ್ ಎಚ್‌ಎಂಟಿ 15 ಕ್ವಿಂಟಲ್ ಇಳುವರಿ ಬಂದಿದೆ ಎಂದು ಮಾಹಿತಿ ಹಂಚಿಕೊಂಡರು ದೇವೇಂದ್ರಪ್ಪ.
ಈ ಏಳು ತಳಿಗಳನ್ನು ಬಿಟ್ಟು, ಭೀಮಸಾಲಿ, ಕಪ್ಪು ಭತ್ತ, ಕಾಳಿಂಗ ತನು ಭತ್ತ, ಕೆಂಪು ಸಣ್ಣ, ದೆಹಲಿ ಬಾಸುಮತಿ, ಪಾಕಿಸ್ತಾನ್ ಬಾಸುಮತಿ, ಚಿಂಗಾರಿ, ಗೌರಿ ಸಣ್ಣ, ಕರಿ ಕಳವೆಯಂತಹ ಇಂಥ 20 ತಳಿಗಳನ್ನು ಬಿತ್ತನೆ ಬೀಜಕ್ಕಾಗಿ ಬೆಳೆಸಿದ್ದಾರೆ. 'ಇವನ್ನೆಲ್ಲ ದೇಸಿ ತಳಿಗಳ ಸಂರಕ್ಷಣೆಗಾಗಿ ಒಂದೊಂದು ಎಕರೆಯಲ್ಲಿ ಬೆಳೆಯುತ್ತಿದ್ದೇನೆ. ಪ್ರತಿ ವರ್ಷ ಬಿತ್ತನೆಗೆ ಬೀಜ ತಗೆದಿಟ್ಟುಕೊಂಡು ಉಳಿದಿದ್ದನ್ನು ಮಾರಾಟ ಮಾಡುತ್ತೇನೆ' ಎಂದು ತಳಿ ಸಂರಕ್ಷಣಾ ಕಾರ್ಯವನ್ನೂ ದೇವೇಂದ್ರಪ್ಪ ವಿವರಿಸಿದರು.
ಮೊದಲು ಬೀಜಕ್ಕಾಗಿ ಸ್ವಲ್ಪ ಪ್ರಮಾಣದ ಭತ್ತ ಮಾರಾಟವಾಗುತ್ತದೆ. ನಂತರ ಉಳಿದದ್ದು ಅಕ್ಕಿಯಾಗಿ ಮಾರಾಟ ಮಾಡುತ್ತಾರೆ. ಇದು ಅವರ 'ಸೂತ್ರ'. ಸರಾಸರಿ ವಾರ್ಷಿಕವಾಗಿ 30 ಟನ್ ಅಕ್ಕಿ ಮಾರಾಟವಾಗುತ್ತದೆ. ನನ್ನಲ್ಲಿ ಅತಿ ಹೆಚ್ಚು ಮಾರಾಟವಾಗುವ ಅಕ್ಕಿ ಬಾಸುಮತಿ ಹಾಗೂ ಕೆಂಪಕ್ಕಿ' ಎನ್ನುತ್ತಾ ಮಾರಾಟದ ಪ್ರಕ್ರಿಯೆಯನ್ನೂ ವಿವರಿಸುತ್ತಾರೆ ಅವರು.
ದೇಸಿ ತಳಿಗಳಿಗೆ 'ಸಾವಯವ'ವೇ ಸೂಕ್ತ
ದೇವೇಂದ್ರಪ್ಪ ಅವರಿಗೆ ರಾಸಾಯನಿಕ ಪದ್ಧತಿಯಲ್ಲಿ ಹೈಬ್ರಿಡ್ ತಳಿ ಬೀಜಗಳನ್ನು ಬಳಸಿ ಕೃಷಿ ಮಾಡಿ ಸೋತಿರುವ ಅನುಭವವೂ ಇದೆ. ಸಾವಯವ ವಿಧಾನದಲ್ಲಿ ದೇಸಿ ಭತ್ತದ ತಳಿಗಳನ್ನು ಕಷ್ಟಪಟ್ಟು ಬೆಳೆದು ಉತ್ತಮಮಾರುಕಟ್ಟೆ ಕಂಡುಕೊಂಡ ಅನುಭವವೂಇದೆ.
'ರಾಸಾಯನಿಕ ಪದ್ಧತಿಯಲ್ಲಿ ಟನ್‌ಗಟ್ಟಲೆ ಭತ್ತ ಬೆಳೆಯುಬಹುದು. ಆದರೆ, ಖರ್ಚು ಹೆಚ್ಚು. ಮಾರುಕಟ್ಟೆಯಲ್ಲಿ ನಿಗದಿಯಾಗುವ ದರಕ್ಕೇ ಮಾರಾಟ ಮಾಡಬೇಕು. ಹಾಗೇ ಹೆಚ್ಚು ಹೈಬ್ರಿಡ್ ತಳಿ ಬಳಕೆಯಾಗುತ್ತದೆ. ಆ ತಳಿಗಳಿಗೆ ಹೆಚ್ಚು ರಸಗೊಬ್ಬರ, ಆರೈಕೆಬೇಕಾಗುತ್ತದೆ(ಆ ಹಂತಕ್ಕೆ ಭೂಮಿಯನ್ನು ತಂದಿಟ್ಟಿದ್ದೇವೆ). ಇದು ನನ್ನ ಅನುಭವವೂ ಹೌದು. ಮತ್ತೆ ರಸಗೊಬ್ಬರ, ಕೀಟಶಾಕ, ಕಳೆನಾಶಕ, ಶಿಲೀಂದ್ರ ನಾಶಕ ಬಳಸುವುದರಿಂದ ವಾತಾವರಣ ಹಾಳು, ಆಹಾರದಲ್ಲೂ ಪೌಷ್ಟಿಕಾಂಶವಿರುವುದಿಲ್ಲ. ಆದರೆ ಸಾವಯವದಲ್ಲಿ ದೇಸಿ ಭತ್ತ ತಳಿಗಳನ್ನು ಬೆಳೆಯುವುದರಿಂದ ಸ್ಬಲ್ಪ ಇಳುವರಿ ಕಡಿಮೆಯಾಗಬಹುದು. ಆದರೆ, ಸಿಗುವ ಬೆಳೆಗೆ ತಕ್ಕಂತೆ ಉತ್ತಮ ಬೆಲೆಯೂ ಸಿಗುತ್ತದೆ. ಈಗೀಗ ದೇಸಿ ತಳಿಗಳ ಅಕ್ಕಿ ಮತ್ತು ಬೀಜಕ್ಕೆ ಬೇಡಿಕೆಯೂಹೆಚ್ಚಿದೆ ಈ ಬೆಲೆಯನ್ನೂ ನಾವೇ (ರೈತರೇ) ನಿರ್ಧರಿಸುತ್ತೇವೆ. ದೇಸಿ ತಳಿಗಳು ಸಾವಯವಕ್ಕೆ ಒಗ್ಗಿ ಬೆಳೆಯುವ ಗುಣ ಹೊಂದಿವೆ. ಸಾವಯವ ವಿಧಾನದಿಂದ ಭೂಮಿ, ಬೆಳೆಯೂ ಆರೋಗ್ಯವಾಗಿರುತ್ತದೆ. ಗ್ರಾಹಕರಿಗೆ ವಿಷಮುಕ್ತ ಆಹಾರ ಕೊಡುತ್ತೇವೆಂಬ ಸಮಾಧಾನವಿರುತ್ತದೆ' ಎನ್ನುತ್ತಾ ಸಾವಯವ ಕೃಷಿಯ ಪರಿಣಾಮವನ್ನು ವಿವರಿಸುತ್ತಾರೆ ಅವರು.
ಇದಕ್ಕೆ ತನ್ನದೇ ಉದಾಹರಣೆ ಕೊಡುತ್ತಾರೆ; 'ನಾನು ರಾಸಾಯನಿಕ ಪದ್ಧತಿಯಲ್ಲಿ ಸೋನಾಮಸೂರಿ ಅಕ್ಕಿ ಬೆಳೆದಾಗ ಅದರ ಗರಿಷ್ಠ ಬೆಲೆ ಕೆ.ಜಿಗೆ ₹ 65 ಇತ್ತು.ಅದೇ ದೇಸಿ ತಳಿಯ ಬಾಸುಮತಿ ಅಕ್ಕಿ ದರ ₹ 120 ಇತ್ತು.ಹಾಗಾಗಿ ರಾಸಾಯನಿಕದಲ್ಲಿ 40 ಕ್ವಿಂಟಲ್ ಬೆಳೆಯುವುದು, ಸಾವಯವದಲ್ಲಿ 10 ಕ್ವಿಂಟಲ್ ದೇಸಿ ಭತ್ತ ಬೆಳೆಯುವುದಕ್ಕೆ ಸಮ' ಎಂದು ಅವರು ಹೇಳುತ್ತಾರೆ
'ನಮಗೆ ಒಂದು ಎಕರೆಗೆ 10 ಕ್ವಿಂಟಲ್ ಅಕ್ಕಿ ಸಿಕ್ಕರೆ, ₹70,000 ಲಾಭಾಂಶ ಸಿಗುತ್ತದೆ. ಆದರೆ ರಾಸಾಯನಿಕದಲ್ಲಿ ಬೆಳೆದರೆ, ಖರ್ಚು ವೆಚ್ಚಗಳು ಬಿಟ್ಟು, ಲಾಭಾಂಶ ಲೆಕ್ಕಹಾಕಿದರೆ, ಒಂದು ಎಕರೆಗೆ ₹20 ಸಾವಿರ ಲಾಭ ಸಿಗುತ್ತದೆ. ಇದೇ ನಾನು ದೇಸಿ ತಳಿಗಳನ್ನು ಮುಂದುವರಿಸಲು ಹಾಗೂ ಗಟ್ಟಿಯಾಗಿ ನಿಲ್ಲಲು ಪ್ರೇರಣೆಯಾಯಿತು' ಎನ್ನುವುದು ದೇವೆಂದ್ರರ ಪ್ರತಿಪಾದನೆ.
ದೇಸಿ ಭತ್ತಕ್ಕೆ ಉತ್ತಮ ಮಾರುಕಟ್ಟೆ
ಪ್ರಸ್ತುತ ದೇಸಿ ತಳಿಗಳ ಬೀಜಗಳಿಗೆ ಬಹಳ ಬೇಡಿಕೆ ಇದೆ. ಅದಕ್ಕಾಗಿಯೇ ದೇಸಿ ತಳಿಗಳ ಬೀಜಗಳನ್ನು ಬೆಳೆಸಿ ಪೂರೈಕೆ ಮಾಡುತ್ತಿದ್ದಾರೆ. ಮಾತ್ರವಲ್ಲ, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆ ತಳಿಗಳ ಅಕ್ಕಿ ಬೆಳೆದು ಸ್ವಂತ ಮಾರುಕಟ್ಟೆ ನಿರ್ಮಾಣ ಮಾಡಿಕೊಂಡಿದ್ದಾರೆ. 'ದೇಸಿ ತಳಿಯ ಬೀಜಕ್ಕಷ್ಟೇ ಅಲ್ಲದೇ ಅಕ್ಕಿಗೂ ಸಾಕಷ್ಟು ಬೇಡಿಕೆ ಇದೆ. ಬೇಡಿಕೆ ಎಷ್ಟಿದೆ ಎಂದರೆ, ಅದನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ' ಎನ್ನುತ್ತಾರೆ ದೇವೇಂದ್ರಪ್ಪ.
ಈ ಮಾತು ಅಚ್ಚರಿ ಎನ್ನಿಸಿದರೂ, ಅವರು ಕೊಡುವ ಉದಾಹರಣೆಗಳು ದೇಸಿ ತಳಿಗಳಿಗಿರುವ ಮಾರುಕಟ್ಟೆಯನ್ನು ಸಾಕ್ಷೀಕರಿಸುತ್ತವೆ. 'ನನಗೆ ವಾರ್ಷಿಕ 10 ಟನ್ ಕರಿಗಜವಿಲಿ ತಳಿ ಭತ್ತಕ್ಕೆ ಬೇಡಿಕೆ ಇದೆ. ನಾನು ಬೆಳೆಯುತ್ತಿರುವುದು 2 ಟನ್.10 ಟನ್ ನವರ ಭತ್ತಕ್ಕೆ ಬೇಡಿಕೆ ಇದೆ, ನಮ್ಮಲ್ಲಿ ಸಿಗುವುದು 8 ಟನ್. 3 ಟನ್ ಬರ್ಮಾ ಬ್ಲ್ಯಾಕ್ ಬೇಕು ಎನ್ನುತ್ತಾರೆ. ನಾನು ಬೆಳೆಯುವುದು 1 ಟನ್ ಮಾತ್ರ' ಎನ್ನುತ್ತಾ ಬೇಡಿಕೆಯಿರುವ ತಳಿಗಳ ಪಟ್ಟಿಯನ್ನೇ ತೆರೆದಿಡುತ್ತಾರೆ ದೇವೇಂದ್ರಪ್ಪ.
ಇದರ ಜತೆಗೆ, ದೇವೇಂದ್ರಪ್ಪ ಬೆಳೆಯುತ್ತಿರುವ ಗಂಧಸಾಲೆ, ಅಂಬೆಮೋಹರ್ ನಂತಹ ಪರಿಮಳ ಸಣ್ಣ ಅಕ್ಕಿಗೆ ದುಬೈ ರಾಷ್ಟ್ರಗಲ್ಲಿ ಬಲುಬೇಡಿಕೆ ಇದೆಯಂತೆ. ಮೊನ್ನೆ ದಲ್ಲಾಳಿಯೊಬ್ಬರು ದೇವೇಂದ್ರಪ್ಪ ಅವರಲ್ಲಿ 200 ಟನ್ ಪರಿಮಳವಿರುವ ಸಣ್ಣಕ್ಕಿ ಬೇಕು, ಸಿಗುತ್ತದೆಯೇ ಎಂದು ಕೇಳಿದ್ದರಂತೆ.
ಕಳೆದ ಬಾರಿ ಗುಜರಾತ್‌ನ ಕಟಾರಿಯಾ ಎಂಬುವವರಿಗೆ 2ಟನ್ ಬರ್ಮಾ ಬ್ಲ್ಯಾಕ್ ಭತ್ತ ಮಾರಾಟ ಮಾಡಿದ್ದಾರೆ. ಕ್ವಿಂಟಲ್‌ಗೆ ₹15 ಸಾವಿರದಂತೆ ಮಾರಾಟವಾಗಿದೆ. 'ಈ ಭತ್ತದ ತಳಿಯ ಅಕ್ಕಿಗೂ ಬೇಡಿಕೆ ಇದೆ. ಈ ಅಕ್ಕಿ ನನ್ನಲ್ಲಿ ಕೆಜಿಗೆ ₹220ಇದೆ. ಮಾರುಕಟ್ಟೆಯಲ್ಲಿ ₹330ಬೆಲೆ. ಎಕರೆಗೆ 19ಕ್ವಿಂಟಲ್ ಇಳುವರಿ ಬರುತ್ತದೆ. ಕನಿಷ್ಠವೆಂದರೂ ₹1ಲಕ್ಷ ನಿವ್ವಳ ಲಾಭ ಪಡೆಯಬಹುದು' ಎಂದು ಲೆಕ್ಕಾಚಾರ ತೆರೆದಿಡುತ್ತಾರೆ ದೇವೇಂದ್ರಪ್ಪ.
'ಒಮ್ಮೆ ಈ ತಳಿಗಳನ್ನು ಖರೀದಿಸಿದವರು, ಮುಂದಿನ ಸಾರಿ ಹೆಚ್ಚಿನ ಪ್ರಮಾಣಕ್ಕೆ ಬೇಡಿಕೆ ಇಡುತ್ತಾರೆ. ಈ ಕಾರಣಕ್ಕೆ ದೇಸಿ ತಳಿ ಭತ್ತ ಬೆಳೆಯುವವರಿಗೆ ಉತ್ತಮ ಮಾರುಕಟ್ಟೆ ಇದೆ ಎಂದು ಹೇಳಿದ್ದು' ಎಂದು ತನಗಿರುವ ಅಕ್ಕಿಯ ಬೇಡಿಕೆ -ಪೂರೈಕೆಯ ವ್ಯತ್ಯಾಸವನ್ನು ತೆರೆದಿಡುತ್ತಾರೆ ದೇವೇಂದ್ರಪ್ಪ.
ಔಷಧಗುಣ, ರುಚಿಯೇ 'ಬೇಡಿಕೆ'ಗೆ ಕಾರಣ
ನವರ ಮತ್ತು ಇತರ ದೇಸಿ ಭತ್ತದ ತಳಿಗಳಿಗೆ ಉತ್ತಮ ಮಾರುಕಟ್ಟೆಯಿದೆ. ನವರ ತಳಿಯನ್ನು ಆಯುರ್ವೇದ ವೈದ್ಯರು ಚಿಕಿತ್ಸೆಗಾಗಿ ಬಳಸುತ್ತಾರೆ. ಕೆಲವರಿಗೆ ಈ ಕೆಲವು ದೇಸಿ ತಳಿ ಅಕ್ಕಿ ಬಳಸಿದ ಮೇಲೆ ಆರೋಗ್ಯ ಸುಧಾರಣೆಯಾಗಿದ್ದು, ಅಂಥವರು ಪ್ರತಿ ತಿಂಗಳೂ ಖರೀದಿಸುವವರಿದ್ದಾರಂತೆ.
ದೇವೇಂದ್ರಪ್ಪ ಅವರ ಬಳಿ ಇಂಥ 3000 ಗ್ರಾಹಕರ ಡೇಟಾಬೇಸ್ ಇದೆ. ಮಾತ್ರವಲ್ಲ ಅಕ್ಕಿ ಬಳಸುತ್ತಾ, ಆರೋಗ್ಯ ಸುಧಾರಿಸಿಕೊಂಡಿರುವ ವ್ಯಕ್ತಿಗಳ ಪ್ರತಿಕ್ರಿಯೆಯನ್ನೂ ದಾಖಲಿಸಿದ್ದಾರೆ. ಅವರೆಲ್ಲ ನಿರಂತರವಾಗಿ ಇವರಿಂದ ಅಕ್ಕಿಯನ್ನು ಅಂಚೆ, ಕೊರಿಯರ್ ಪಾರ್ಸೆಲ್ ಮೂಲಕ ತರಿಸಿಕೊಳ್ಳುತ್ತಾರೆ. ಆನ್‌ಲೈನ್ ಮೂಲಕ ಹಣ ಕಳಿಸುತ್ತಾರೆ.
'ಮಣಿಪಾಲದ ಡಾ. ಶಿವಕುಮಾರ್ ಅವರು 2010 ರಿಂದ ಪಂಚಕರ್ಮ ಚಿಕಿತ್ಸೆಗಾಗಿ ನವರ ಅಕ್ಕಿ ತರಿಸಿಕೊಳ್ಳುತ್ತಿದ್ದಾರೆ. ಮೈಸೂರಿನ ಅಮೃತ ಆಯುರ್ವೇದಾಲಯದ ಸಹಾಯಕ ಶ್ರೀನಿವಾಸ್ ಎಂಬುವರು ಇದನ್ನೇ ಖರೀದಿಸುತ್ತಿದ್ದಾರೆ. ಶಿವಮೊಗ್ಗ, ದಾವಣಗೆರೆಯ ಕೆಲವು ಗ್ರಾಹಕರು ನವರ ಅಕ್ಕಿ ಬಳಸಿ, ಕೀಲು ನೋವು ನಿವಾರಿಸಿಕೊಂಡವರಿದ್ದಾರೆ.
ರಾಜ್ಯವಲ್ಲದೇ ಗುಜರಾತ್, ಮಹರಾಷ್ಟ್ರ, ಗೋವಾ, ಉತ್ತರಖಂಡ ಸೇರಿದಂತೆ ಬೇರೆ ರಾಜ್ಯಗ ಳಲ್ಲೂ ಗ್ರಾಹಕರಿದ್ದಾರೆ. ವಾಟ್ಸ್‌ಆಯಪ್, ಫೇಸ್ಬುಕ್‌ನಂತಹ ಸಾಮಾಜಿಕ ಜಾಲತಾಣಗಳು, 'ಪ್ರಜಾವಾಣಿ' ಪತ್ರಿಕೆ ಯಂತಹ ಮಾಧ್ಯಮಗಳು ಗ್ರಾಹಕರನ್ನು ಸಂಗ್ರಹಿಸಿಕೊಟ್ಟಿವೆ' ಎಂದು ಸ್ಮರಿಸುತ್ತಾರೆ ದೇವೇಂದ್ರಪ್ಪ.
ಸಾಲು ಸಾಲು ಸವಾಲು..
ಇಷ್ಟೆಲ್ಲ ದೊಡ್ಡ ಪ್ರಮಾಣದಲ್ಲಿ ದೇಸಿ ಭತ್ತದ ತಳಿಗಳನ್ನು ಬೆಳೆಯುತ್ತಿರುವ ದೇವೇಂದ್ರಪ್ಪ ಅವರಿಗೆ ನೀರಾವರಿ ವ್ಯವಸ್ಥೆಗೆ ಬಸವ ಸಾಗರ ಜಲಾಶಯವಿದೆ. ಎರಡೂ ಬೆಳೆ (ಬೇಸಿಗೆ-ಮುಂಗಾರು) ಬೆಳೆಗೆ ನೀರು ಸಿಗುತ್ತದೆ. ಹಸಿರೆಲೆ ಗೊಬ್ಬರ ದಂಡಿಯಾಗಿದೆ. ಸಾವಯವ ಒಳಸುರಿಗಳನ್ನು ಖರೀದಿಸಲು ಚಿಂತೆಯಿಲ್ಲ. ಅಜೋಲಾ ಬಳಸಿ, ಗದ್ದೆಯಲ್ಲಿ ಒಂದು ಇಂಚು ನೀರು ನಿಲ್ಲಿಸಿ ಕಳೆ ನಿಯಂತ್ರಿಸುತ್ತಾರೆ. ಆದರೆ, ಕೂಲಿ ಕಾರ್ಮಿಕರದ್ದೇ ದೊಡ್ಡ ಸವಾಲು. '
ಕಾರ್ಮಿಕರ ಕೊರತೆಯಾದಾಗ, ಒಮ್ಮೆ ಡ್ರಮ್ ಸೀಡರ್‌ನಲ್ಲಿ ನೇರ ಬೀಜ ಬಿತ್ತನೆಗೆ ಪ್ರಯತ್ನಿಸಿದ್ದಾರೆ. ಕಳೆ ತೆಗೆಯಲು ಕೊನೊವೀಡರ್ ಬಳಸಿದ್ದಾರೆ. ಯಂತ್ರದಿಂದ ಸಸಿ ನಾಟಿ ಮಾಡಿಸುವ ಪ್ರಯತ್ನ ಮಾಡಿದ್ದಾರೆ. ಆರು ಎಕರೆಯಲ್ಲಿ ಯಂತ್ರದಿಂದ ಸಸಿ ನಾಟಿ ಮಾಡಲು ಹೋಗಿ ತಾಂತ್ರಿಕ ಅನುಭವದ ಕೊರತೆಯಿಂದಾಗಿ ನಷ್ಟ ಅನುಭವಿಸಿದ್ದಾರೆ.
'ರಾಸಾಯನಿಕ ಪದ್ಧತಿಯಲ್ಲಿ ರಸಗೊಬ್ಬರ, ಕಳೆ ನಾಶಕ ಹಾಕುತ್ತಾರೆ. ಸಾವಯವದಲ್ಲಿ ಹಾಗಾಗುವುದಿಲ್ಲ. ಸದ್ಯಕ್ಕೆ ಹೆಣ್ಮಕ್ಕಳು ಕೂಲಿ ಕೆಲಸಕ್ಕೆ ಬರುತ್ತಿರುವುದರಿಂದ, ನಮ್ಮ ಭತ್ತದ ಕೃಷಿ ನಡೆಯುತ್ತಿದೆ. ಅವರು ಕೆಲಸ ಮಾಡುವುದನ್ನು ನಿಲ್ಲಿಸಿದರೆ, ಭತ್ತ ಬೆಳೆಯುವುದನ್ನೇ ನಿಲ್ಲಿಸಬೇಕಾಗುತ್ತದೆ' ಎನ್ನುತ್ತಾ ಆತಂಕ ವ್ಯಕ್ತಪಡಿಸುತ್ತಾರೆ ದೇವೇಂದ್ರಪ್ಪ.
ಸಾವಯವ ದೃಢೀಕರಣಕ್ಕೆ ಒತ್ತು
ಎಂಥದ್ದೇ ಸವಾಲು, ಸಂಕಷ್ಟಗಳು ಎದುರಾದರೂ, ಸಾವಯವ ಪದ್ಧತಿಯಲ್ಲಿ ದೇಸಿ ಭತ್ತದ ತಳಿಗಳನ್ನು ಬೆಳೆಯುವಲ್ಲಿ ಕೊಂಚವೂ ವ್ಯತ್ಯಾಸವಾಗದಂತೆ ನೋಡಿಕೊಳ್ಳುತ್ತಾರೆ ದೇವೇಂದ್ರಪ್ಪ. ಇವರ ಭತ್ತದ ತಾಕಿಗೆ ಆಗಾಗ ಭೇಟಿ ನೀಡುವ ಆ ಭಾಗದ ವಿಜ್ಞಾನಿಗಳು ಈ ಮಾತನ್ನು ಅನುಮೋದಿಸುತ್ತಾರೆ.
'ಇದು ಸಾವಯವದಲ್ಲೇ ಬೆಳೆದಿರುವ ದೇಸಿ ತಳಿ' ಎಂದು ದೃಢಪಡಿಸಲು ದೇವೇಂದ್ರಪ್ಪ ತನ್ನ ಸ್ವಂತ ಜಮೀನಿಗೆ ಐಎಂಒ ಸಾವಯವ ದೃಡೀಕರಣ ಸಂಸ್ಥೆಯಿಂದ 'ದೃಢೀಕರಣ ಪ್ರಮಾಣ ಪತ್ರ' ಮಾಡಿಸಿದ್ದಾರೆ. 'ಗುತ್ತಿಗೆ ಪಡೆದಿರುವ ಇತರೆ 13 ಎಕರೆ ಜಮೀನಿಗೂ ಮಾಡಿಸಬೇಕು. ಆದರೆ ಜಮೀನಿನ ಮಾಲೀಕರು ಒಪ್ಪುತ್ತಿಲ್ಲ. ಆದರೂ, ಸಾವಯವ ಬಿಟ್ಟು ಬೇರೆ ವಿಧಾನದಲ್ಲಿ ನಾನು ಬೆಳೆಯೋದಿಲ್ಲ' ಎಂದು ಅವರು ಸ್ಪಷ್ಟಪಡಿಸುತ್ತಾರೆ.
ಭತ್ತ ಬೆಳೆಯುವುದರಿಂದ ಹಿಡಿದು ಗಿರಣಿಗೆ ಹಾಕಿಸುವವರೆಗೂ ಎಲ್ಲೂ 'ರಾಸಾಯನಿಕ'ದ ಸೋಂಕು ತಗಲದಂತೆ ದೇವೇಂದ್ರಪ್ಪ ಎಚ್ಚರವಹಿಸುತ್ತಾರೆ. ಇದಕ್ಕಾಗಿ ಪರಿಚಯಸ್ಥರ ಗಿರಿಣಿಯಲ್ಲೇ ಭತ್ತವನ್ನು ಮಿಲ್ ಮಾಡಿಸುತ್ತಾರೆ. ಗಿರಣಿಯವರು ಗ್ರೇಡಿಂಗ್ ಪದ್ಧತಿಯಲ್ಲಿ ಮಿಲ್ಲಿಂಗ್ ಮಾಡಿಕೊಡುತ್ತಾರಂತೆ.
'ನಮ್ಮ ದೇಸಿ ತಳಿ ಭತ್ತ ಹಾಕುವ ಮೊದಲು ಗಿರಿಣಿಯನ್ನು ಸ್ಬಚ್ಚ ಮಾಡಿಸುತ್ತೇವೆ. ಆನಂತರ ಮಿಲ್‌ಗೆ ಭತ್ತ ಹಾಕುವುದು. ಅದರಲ್ಲಿ ಮೊದಲಿಗೆ ಬರುವ 100 ಕೆಜಿ ಅಕ್ಕಿಯನ್ನು ಪ್ರತ್ಯೇಕವಾಗಿ ತೆಗೆದು ಕೊಳ್ಳುತ್ತೇವೆ. ಉಳಿದ ಅಕ್ಕಿಯನ್ನು ನಮಗೆ ಬೇಕಾದ ರೀತಿಯಲ್ಲಿ ಕಡಿಮೆ ಪಾಲೀಶ್, ಪೂರ್ಣ ಪಾಲಿಶ್, ಪಾಲಿಶ್ ರಹಿತ ಅಕ್ಕಿ ..ಹೀಗೆ ಮೂರು ತರಹದ ಅಕ್ಕಿಗಳನ್ನು ಗ್ರಾಹಕರ ಬೇಡಿಕೆಗೆ ಅನುಸಾರ ಪ್ರತ್ಯೇಕಿಸುತ್ತೇವೆ' ಎಂದು ದೇವೇಂದ್ರಪ್ಪ ತಾವು ಕೈಗೊಳ್ಳುವ ಶುದ್ಧತೆಯ ಕಾಳಜಿ ಬಗ್ಗೆ ಗಮನ ಸೆಳೆಯುತ್ತಾರೆ.
ಸರ್ಕಾರದ ಪ್ರೋತ್ಸಾಹ ಸಂರಕ್ಷಣೆಗೆ ಬಲ
16 ವರ್ಷಗಳಿಂದ ನಿರಂತರವಾಗಿ ದೇಸಿ ಭತ್ತದ ತಳಿಸಂರಕ್ಷಣೆಯಲ್ಲಿ ತೊಡಗಿರುವ ದೇವೇಂದ್ರಪ್ಪ, ಪ್ರತಿ ವರ್ಷ ಭತ್ತ ಬೆಳೆದು ತೆನೆ ಕೊಯ್ಲಾದನಂತರ, ಬೀಜಕ್ಕಾಗಿ ಸ್ವಲ್ಪ ಪ್ರಮಾಣದಷ್ಟು ಎತ್ತಿಟ್ಟುಕೊಳ್ಳುತ್ತಾರೆ. ಇದಕ್ಕಾಗಿ ಸಣ್ಣದಾದ ಬೀಜ ಬ್ಯಾಂಕ್ ಮಾಡಿಕೊಂಡಿದ್ದಾರೆ.
'ಒಂದು ವರ್ಷ ಬೀಜ ಸಂಗ್ರಹ ನಿಲ್ಲಿಸಿದರೆ, ಆ ತಳಿ ನಮ್ಮಿಂದ ದೂರವಾಗಿಬಿಡುತ್ತದೆ. ಕಾರಣ ಒಂದು ವರ್ಷದ ನಂತರ ಅದು ಮೊಳಯುವ ಪ್ರಮಾಣ ಕುಂಠಿತವಾಗಿ ಬೆಳೆಯೇ ಬರುವುದಿಲ್ಲ. ಆಗ ನಾವು ಆ ಬೀಜವನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಅನಿವಾರ್ಯತೆಯಿಂದ ಬೀಜ ಸಂರಕ್ಷಣೆ ಮಾಡುವ ಜವಾಬ್ದಾರಿ ಬಹಳ ಮಹತ್ವದಾಗಿದೆ' ಎನ್ನುತ್ತಾರೆ ದೇವೇಂದ್ರಪ್ಪ.
ಇತ್ತೀಚೆಗೆ ರಾಜ್ಯ ಸರ್ಕಾರ ದೇಸಿ ತಳಿಗಳ ಸಂರಕ್ಷಣೆ ಮಾಡುವವರಿಗೆ ಎಕರೆಗೆ ₹10 ಸಾವಿರ ಪ್ರೋತ್ಸಾಹ ಧನ ನೀಡುತ್ತಿದೆ. ಬೀಜ ಸಂರಕ್ಷಕರನ್ನು ಗುರುತಿಸುತ್ತಿದೆ. ಇದೂ ಕೂಡ ದೇಸಿ ತಳಿಗಳ ರಕ್ಷಣೆಗೆ ಕಾರಣವಾಗುತ್ತಿದೆ ಎನ್ನುತ್ತಾರೆ ಅವರು.
ದೇಸಿ ಭತ್ತ ತಳಿಯ ಕೃಷಿ ಕುರಿತ ಮಾಹಿತಿಗಾಗಿ ಸಂಪರ್ಕಿಸಿ: 99008 33350

