6.8 ತೀವ್ರತೆಯ ಭೂಕಂಪ ಒಂದು ನಗರವನ್ನೇ ನೆಲಸಮಗೊಳಿಸುವಷ್ಟು ಶಕ್ತಿಶಾಲಿಯಾಗಿರುತ್ತದೆ. ಸಾವಿರಾರು ಜನರನ್ನು ಬಲಿ ಪಡೆಯುವ ಸಾಧ್ಯತೆಯೂ ಇರುತ್ತದೆ. ಆದರೆ ಕಳೆದ ವಾರ ಜಪಾನ್‌ನ ನೈರುತ್ಯ ಭಾಗದ ಕ್ಯುಷು ದ್ವೀಪವನ್ನು ನಡುಗಿಸಿದ 6.8 ತೀವ್ರತೆಯ ಭೂಕಂಪದ ಬಳಿಕ ಕಂಡ ಚಿತ್ರಣ ಮಾತ್ರ ಭಿನ್ನವಾಗಿತ್ತು.
ಕೆಲವೇ ಕೆಲವು ಕಟ್ಟಡಗಳು ಹಾನಿಗೊಳಗಾದವು. ಅಧಿಕೃತ ಲೆಕ್ಕಾಚಾರದ ಪ್ರಕಾರ ಮೃತಪಟ್ಟವರ ಸಂಖ್ಯೆ ಕೇವಲ 38.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಅನುಭವವೇ ಪಾಠ: ಭೂಕಂಪಗಳಿಂದ ಬದುಕುವ ಹಾದಿ ಕಂಡುಕೊಂಡ ಜಪಾನ್
ಒಂದು ಸಾಲಿನಲ್ಲಿಜಪಾನ್ ತನ್ನ ದೃಢವಾದ ಮೂಲಸೌಕರ್ಯ, ಆಧುನಿಕ ತಂತ್ರಜ್ಞಾನ ಮತ್ತು ಸಮುದಾಯದ ಸಹಕಾರದಿಂದ ಭೂಕಂಪದಂತಹ ನೈಸರ್ಗಿಕ ವಿಕೋಪಗಳಲ್ಲೂ ಕಡಿಮೆ ಹಾನಿಯನ್ನು ಅನುಭವಿಸುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದೆ.
ಪ್ರಮುಖ ಪ್ರಶ್ನೋತ್ತರ
ಜಪಾನ್‌ನಲ್ಲಿ ಭೂಕಂಪದಿಂದ ಸಾವುನೋವುಗಳು ಕಡಿಮೆಯಾಗಲು ಪ್ರಮುಖ ಕಾರಣಗಳೇನು?
2016ರ ದುರಂತದ ನಂತರ ಸರ್ಕಾರವು ಭೂಕಂಪ ನಿರೋಧಕ ಮೂಲಸೌಕರ್ಯ ಮತ್ತು ಕಟ್ಟಡಗಳ ಬಲವರ್ಧನೆಗಾಗಿ ಹತ್ತಾರು ಬಿಲಿಯನ್ ಡಾಲರ್‌ಗಳನ್ನು ಹೂಡಿಕೆ ಮಾಡಿದ್ದು, ಇದು ದೊಡ್ಡ ಮಟ್ಟದ ಪ್ರಾಣಹಾನಿಯನ್ನು ತಡೆಯಲು ಸಹಕಾರಿಯಾಗಿದೆ.
ಸೀಸ್ಮಿಕ್ ಐಸೋಲೇಷನ್ ತಂತ್ರಜ್ಞಾನವು ಕಟ್ಟಡಗಳನ್ನು ಹೇಗೆ ರಕ್ಷಿಸುತ್ತದೆ?
ಕಟ್ಟಡದ ಅಡಿಭಾಗದಲ್ಲಿ ಅಳವಡಿಸುವ ರಬ್ಬರ್ ಮತ್ತು ಉಕ್ಕಿನ ವಿಶೇಷ ರಚನೆಯು ಭೂಕಂಪದ ತೀವ್ರ ಕಂಪನಗಳನ್ನು ತಡೆದುಕೊಂಡು, ಮೇಲಿನ ಕಟ್ಟಡ ಸ್ಥಿರವಾಗಿರುವಂತೆ ನೋಡಿಕೊಳ್ಳುತ್ತದೆ.
ಸ್ಥಳೀಯ ಸಮುದಾಯಗಳು ವಿಪತ್ತು ನಿರ್ವಹಣೆಯಲ್ಲಿ ಹೇಗೆ ಪಾತ್ರ ವಹಿಸುತ್ತವೆ?
ಸರ್ಕಾರದ ನೆರವಿಗಾಗಿ ಕಾಯುವ ಬದಲು, ಸ್ಥಳೀಯರು ವಿಪತ್ತು ನಿರ್ವಹಣಾ ತರಬೇತಿ ಮತ್ತು ಅಭ್ಯಾಸಗಳ ಮೂಲಕ ಸ್ವಯಂಸೇವಾ ರಕ್ಷಣಾ ಕಾರ್ಯಗಳಲ್ಲಿ ತಕ್ಷಣ ತೊಡಗಿಸಿಕೊಳ್ಳುತ್ತಾರೆ.
ಹಳೆಯ ಮರದ ಮನೆಗಳನ್ನು ಭೂಕಂಪದಿಂದ ರಕ್ಷಿಸಲು ಕೈಗೊಂಡ ಕ್ರಮಗಳೇನು?
ಸರ್ಕಾರವು ಹಳೆಯ ಮನೆಗಳ ಕಂಬಗಳನ್ನು ಬಲಪಡಿಸಲು ಮತ್ತು ಭಾರವಾದ ಹೆಂಚುಗಳ ಬದಲಿಗೆ ಹಗುರವಾದ ಮೇಲ್ಛಾವಣಿ ಅಳವಡಿಸಲು ಸಹಾಯಧನ ಒದಗಿಸುವ ಮೂಲಕ ಅವುಗಳನ್ನು ಭೂಕಂಪ ನಿರೋಧಕವಾಗಿಸಿದೆ.
ನಿಶಿಹಾರಾ ಗ್ರಾಮವನ್ನು 'ಮಿರಾಕಲ್ ವಿಲೇಜ್' ಎಂದು ಏಕೆ ಕರೆಯುತ್ತಾರೆ?
ವರ್ಷಗಳ ಸಿದ್ಧತೆ ಮತ್ತು ರಕ್ಷಣಾ ತರಬೇತಿಯ ಪರಿಣಾಮವಾಗಿ, 2016ರ ಭೂಕಂಪದ ವೇಳೆ ಅವಶೇಷಗಳಡಿ ಸಿಲುಕಿದ್ದ ಒಂಬತ್ತು ಮಂದಿಯನ್ನು ಗ್ರಾಮಸ್ಥರೇ ಸ್ವತಃ ರಕ್ಷಿಸಿದ್ದರಿಂದ ಈ ಹೆಸರು ಬಂದಿದೆ.
ಪ್ರಮುಖ ಅಂಕಿಅಂಶಗಳು
8,0002016ರ ಭೂಕಂಪದಲ್ಲಿ ನೆಲಸಮವಾದ ಕಟ್ಟಡಗಳ ಸಂಖ್ಯೆಶೇ 90ಕುಮಮೋಟೊದಲ್ಲಿ ಭೂಕಂಪ ನಿರೋಧಕ ಮಾನದಂಡ ಪೂರೈಸಿದ ಕಟ್ಟಡಗಳ ಪಾಲು38ಇತ್ತೀಚಿನ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ2023ನಗರಸಭೆ ಕಟ್ಟಡದ ಆಧುನಿಕ ವಿನ್ಯಾಸದ ವರ್ಷ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ವಿಶ್ಲೇಷಣೆ |ಯುಕೆ ಜೊತೆ ವ್ಯಾಪಾರ ಒಪ್ಪಂದ: ಭಾರತದ ರಫ್ತು ಆರ್ಥಿಕತೆಗೆ ಹೊಸ ದಿಕ್ಕುಜೂನ್ನಲ್ಲಿ ಇದೇ ರೀತಿಯ ಭೂಕಂಪ ವೆನೆಜುವೆಲಾದಲ್ಲಿ ಸಂಭವಿಸಿದಾಗ ಕರಾವಳಿ ಪ್ರದೇಶಗಳು ಸಂಪೂರ್ಣ ನಾಶವಾಗಿ 6 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಎರಡೂ ಭೂಕಂಪಗಳ ತೀವ್ರತೆ, ಆಳ ಹೆಚ್ಚು ಕಡಿಮೆ ಒಂದೇ ಇತ್ತು. ಎರಡೂ ಜನನಿಬಿಡ ಪ್ರದೇಶಗಳ ಸಮೀಪವೇ ಸಂಭವಿಸಿತ್ತು. ಆದರೆ ಸಾವಿನ ಸಂಖ್ಯೆಯಲ್ಲಿ ಕಂಡುಬಂದ ಭಾರಿ ವ್ಯತ್ಯಾಸ ವಿಶ್ವದ ಗಮನ ಸೆಳೆದಿದೆ.
ಹಾಗಾದರೆ ಜಪಾನ್‌ನಲ್ಲಿ ಹಾನಿ ಕಡಿಮೆಯಾಗಲು ಕಾರಣವೇನು?
2016ರ ದುರಂತ ಕಲಿಸಿದ ಪಾಠ
ಮೊನ್ನೆ ಸಂಭವಿಸಿದ ಭೂಕಂಪದ ಕೇಂದ್ರಬಿಂದುವಿನ ಸಮೀಪ ಇರುವ ಕುಮಮೋಟೊ ಪ್ರಾಂತ್ಯಕ್ಕೆ ಇಂತಹ ಕಂಪನ ಮೊದಲ ಅನುಭವವಲ್ಲ. 2016ರಲ್ಲಿ ಇದೇ ಪ್ರದೇಶದಲ್ಲಿ ಸಂಭವಿಸಿದ ಸರಣಿ ಭೂಕಂಪದಿಂದಾಗಿ ಇಲ್ಲಿ 8 ಸಾವಿರಕ್ಕೂ ಹೆಚ್ಚು ಕಟ್ಟಡಗಳು ನೆಲಸಮಗೊಂಡಿದ್ದವು. 270ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಆ ದುರಂತದ ಬಳಿಕ ಜಪಾನ್ ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ಭೂಕಂಪ ನಿರೋಧಕ ಮೂಲಸೌಕರ್ಯ ಹಾಗೂ ಕಟ್ಟಡಗಳ ಬಲವರ್ಧನೆಗಾಗಿ ಹತ್ತಾರು ಬಿಲಿಯನ್ ಡಾಲರ್‌ಗಳನ್ನು ಹೂಡಿಕೆ ಮಾಡಿದ್ದವು.
'ಆ ಹೂಡಿಕೆಯ ಪರಿಣಾಮ ಇತ್ತೀಚಿನ ಭೂಕಂಪದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಎರಡೂ ಭೂಕಂಪಗಳಲ್ಲಿನ ಸಾವಿನ ಸಂಖ್ಯೆಯನ್ನು ಹೋಲಿಸಿದರೆ ಅಗಾಧ ವ್ಯತ್ಯಾಸ ಕಾಣುತ್ತದೆ' ಎಂದು ಕ್ಯಾನಡಾದ ವೆಸ್ಟರ್ನ್ ವಿಶ್ವವಿದ್ಯಾಲಯದ ಭೂಕಂಪ ಎಂಜಿನಿಯರಿಂಗ್ ಪ್ರಾಧ್ಯಾಪಕ ಕತ್ಸುಇಚಿರೊ ಗೊಡಾ ಹೇಳಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಕುಮಮೋಟೊದಲ್ಲಿ ನಡೆದ ಪುನರ್‌ನಿರ್ಮಾಣ ಮತ್ತು ಭೂಕಂಪ ನಿರೋಧಕ ಕ್ರಮಗಳೇ ಈ ವ್ಯತ್ಯಾಸಕ್ಕೆ ಪ್ರಮುಖ ಕಾರಣವಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹಾನಿಯಾಯಿತು... ಆದರೆ ವ್ಯವಸ್ಥೆ ಕುಸಿಯಲಿಲ್ಲ
ಭೂಕಂಪದ ಬಳಿಕ ಕುಮಮೋಟೊದ ಹಲವು ಪ್ರದೇಶಗಳಲ್ಲಿ ಹಾನಿಯ ಗುರುತುಗಳು ಸ್ಪಷ್ಟವಾಗಿ ಕಾಣುತ್ತಿದ್ದವು. ಮರದ ಮನೆಗಳು ಕುಸಿದಿದ್ದವು. ರಸ್ತೆಗಳು ಬಿರುಕು ಬಿಟ್ಟಿದ್ದವು. ಭೂಕಂಪದ ನಂತರ ಸಂಭವಿಸಿದ ಅನಿಲ ಸ್ಫೋಟಕ್ಕೆ ಶಾಪಿಂಗ್ ಸೆಂಟರ್‌ವೊಂದು ಸಂಪೂರ್ಣ ಆಹುತಿಯಾಗಿತ್ತು. ಆದರೆ ಇವೆಲ್ಲದರ ನಡುವೆಯೂ ಭೂಕಂಪ ನಿರೋಧಕ ಕಟ್ಟಡಗಳು ದೃಢವಾಗಿ ನಿಂತಿದ್ದವು. ಪ್ರಮುಖ ಸೇತುವೆಗಳು ಹಾಗೇ ಇದ್ದವು. ತುರ್ತು ಸೇವೆಗಳು ಕಾರ್ಯಪ್ರವೃತ್ತವಾಗಿದ್ದವು. ತರಬೇತಿ ಪಡೆದ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.
ಜೀವ ಉಳಿಸಿದ 'ಸೀಸ್ಮಿಕ್ ಐಸೋಲೇಷನ್' ತಂತ್ರಜ್ಞಾನ
ಭೂಕಂಪ ನಿರೋಧಕ ಮೂಲಸೌಕರ್ಯದ ಅತ್ಯುತ್ತಮ ಉದಾಹರಣೆ ಕುಮಮೋಟೊ ಪ್ರಾಂತ್ಯದ ಉಟೊ ನಗರ. ಸುಮಾರು 35 ಸಾವಿರ ಜನಸಂಖ್ಯೆಯ ಈ ನಗರ 2016ರ ಭೂಕಂಪದಲ್ಲಿ ದೊಡ್ಡ ಹೊಡೆತ ಅನುಭವಿಸಿತ್ತು. ಐದು ಮಹಡಿಯ ನಗರಸಭೆ ಕಟ್ಟಡವೇ ಭಾಗಶಃ ಕುಸಿದಿದ್ದರಿಂದ ಆರಂಭದ ತುರ್ತು ರಕ್ಷಣಾ ಕಾರ್ಯಾಚರಣೆಗಳು ಅಸ್ತವ್ಯಸ್ತಗೊಂಡಿದ್ದವು.
ಅದೇ ತಪ್ಪು ಮತ್ತೆ ಮರುಕಳಿಸಬಾರದು ಎಂಬ ಉದ್ದೇಶದಿಂದ ಹೊಸ ನಗರಸಭೆ ಕಟ್ಟಡವನ್ನು ನಿರ್ಮಿಸಲಾಯಿತು. 2023ರಲ್ಲಿ ಕಾರ್ಯಾರಂಭ ಮಾಡಿದ ಈ ಕಟ್ಟಡ, ಕಳೆದ ವಾರದ ಭೂಕಂಪದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತು. ಭೂಕಂಪದ ಕೇಂದ್ರಬಿಂದುವಿನಿಂದ ಐದು ಮೈಲಿಗೂ ಕಡಿಮೆ ದೂರದಲ್ಲಿದ್ದರೂ ಕಟ್ಟಡಕ್ಕೆ ಯಾವುದೇ ಹಾನಿಯಾಗಲಿಲ್ಲ. ಅದರ ಹಿಂದಿನ ಪ್ರಮುಖ ಕಾರಣ 'ಸೀಸ್ಮಿಕ್ ಐಸೋಲೇಷನ್' ತಂತ್ರಜ್ಞಾನ.
ಕಟ್ಟಡದ ಅಡಿಭಾಗದಲ್ಲಿ ಅಳವಡಿಸಿರುವ ರಬ್ಬರ್ ಮತ್ತು ಉಕ್ಕಿನ ವಿಶೇಷ ರಚನೆ ಭೂಕಂಪದ ಕಂಪನವನ್ನು ತಡೆದುಕೊಂಡು ಅದರ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ನೆಲ ತೀವ್ರವಾಗಿ ನಡುಗಿದರೂ ಮೇಲಿನ ಕಟ್ಟಡ ಬಹುತೇಕ ಸ್ಥಿರವಾಗಿರುತ್ತದೆ.
₹ 2,000ಕ್ಕಿಂತ ಹೆಚ್ಚಿನ ಯುಪಿಐ ಪಾವತಿಗೆ ಶುಲ್ಕ? ಎಂಡಿಆರ್ ಬಗ್ಗೆ ಪೂರ್ಣ ಮಾಹಿತಿತಕ್ಷಣ ನೆರವಿಗೆ ಬರುವ ಜನರು
ಭೂಕಂಪ ಸಂಭವಿಸಿದ ಸ್ಥಳಕ್ಕೆ ಸರ್ಕಾರಿ ರಕ್ಷಣಾ ಪಡೆ ತಕ್ಷಣ ತಲುಪುವುದು ಸಾಧ್ಯವಿಲ್ಲ ಎಂಬುದು 2016ರ ದುರಂತ ಕುಮಮೋಟೊ ಜನರಿಗೆ ಪಾಠ ಕಲಿಸಿತ್ತು. ಅದಾದ ಬಳಿಕ ಗ್ರಾಮಗಳು ಮತ್ತು ಪಟ್ಟಣಗಳಲ್ಲಿ ಸಮುದಾಯ ಆಧಾರಿತ ವಿಪತ್ತು ನಿರ್ವಹಣೆಗೆ ವಿಶೇಷ ಆದ್ಯತೆ ನೀಡಲಾಯಿತು. ತುರ್ತು ಪರಿಸ್ಥಿತಿಯಲ್ಲಿ ಸರ್ಕಾರಿ ನೆರವಿಗಾಗಿ ಕಾಯುವ ಬದಲು, ಸ್ಥಳೀಯರೇ ಮೊದಲೇ ಸಹಾಯ ನೀಡುವಂತೆ ನಿಯಮಿತ ತರಬೇತಿ ಮತ್ತು ಅಭ್ಯಾಸಗಳನ್ನು ಆರಂಭಿಸಲಾಯಿತು.
ಕಳೆದ ವಾರ ಹೆಚ್ಚು ಹಾನಿಗೊಳಗಾದ ಯತ್ಸುಶಿರೊ ನಗರದಲ್ಲೂ ಅದರ ಪರಿಣಾಮ ಸ್ಪಷ್ಟವಾಗಿ ಕಂಡುಬಂತು. 'ಪ್ರತಿವರ್ಷ ತುರ್ತು ಪರಿಸ್ಥಿತಿಗಾಗಿ ಪ್ರತಿಯೊಬ್ಬರಿಗೂ ನಿರ್ದಿಷ್ಟ ಜವಾಬ್ದಾರಿಗಳನ್ನು ಹಂಚಲಾಗುತ್ತದೆ. ಹತ್ತು ವರ್ಷಗಳ ಹಿಂದೆ ನಡೆದ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು, ಈ ಯೋಜನೆಗಳನ್ನು ನಾವೆಲ್ಲರೂ ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದೆವು' ಎಂದು ಆಶ್ರಯ ಕೇಂದ್ರದ ನಿರ್ವಹಣೆಯಲ್ಲಿದ್ದ ಶಿಕ್ಷಕಿ ಆಯುಮಿ ಮಿಯಾಜಾಕಿ ಹೇಳಿದ್ದಾರೆ.
ನಗರಾಡಳಿತದಿಂದ ಅಧಿಕೃತ ಕರೆ ಬರುವ ಮುನ್ನವೇ ಜವಾಬ್ದಾರಿ ಹೊತ್ತ ಸಿಬ್ಬಂದಿ ಶಾಲೆಗೆ ಆಗಮಿಸಿ ಆಶ್ರಯ ಕೇಂದ್ರದ ಕಾರ್ಯಾಚರಣೆಯನ್ನು ಆರಂಭಿಸಿದ್ದರು.
'ಅದ್ಭುತ ಗ್ರಾಮ'ದ ಕಥೆ
ಕುಮಮೋಟೊದ ನಿಶಿಹಾರಾ ಗ್ರಾಮವನ್ನು ಜಪಾನ್‌ನಲ್ಲಿ 'ಮಿರಾಕಲ್ ವಿಲೇಜ್' ಎಂದು ಕರೆಯಲಾಗುತ್ತದೆ. ಆ ಹೆಸರು ಅದೃಷ್ಟದಿಂದ ಬಂದದ್ದಲ್ಲ; ವರ್ಷಗಳ ಸಿದ್ಧತೆ ಮತ್ತು ಸಮಯೋಚಿತ ಕಾರ್ಯಾಚರಣೆಯಿಂದ ಗಳಿಸಿಕೊಂಡದ್ದು. ಭೂಕಂಪದ ಬಿರುಕುಗಳ ಮೇಲೆಯೇ ಇರುವ ಈ ಗ್ರಾಮದ ಜನರಿಗೆ, ಒಂದು ದಿನ ದೊಡ್ಡ ಭೂಕಂಪ ಸಂಭವಿಸಲಿದೆ ಎನ್ನುವ ಅರಿವು ಬಾಲ್ಯದಿಂದಲೇ ಇತ್ತು.
ಆದ್ದರಿಂದಲೇ 2015ರಲ್ಲಿ ಗ್ರಾಮದಲ್ಲಿ ವಿಭಿನ್ನ ರೀತಿಯ ವಿಪತ್ತು ನಿರ್ವಹಣಾ ತರಬೇತಿ ಆಯೋಜಿಸಲಾಗಿತ್ತು. ಮನೆಗಳ ಮೇಲ್ಛಾವಣಿ ಕತ್ತರಿಸಿ ಒಳಗೆ ಸಿಲುಕಿದವರನ್ನು ಹೇಗೆ ರಕ್ಷಿಸಬೇಕು ಎಂಬುದರ ಪ್ರಾಯೋಗಿಕ ಅಭ್ಯಾಸ ನಡೆಸಲಾಗಿತ್ತು. 2016ರ ಭೂಕಂಪದಲ್ಲಿ ನಿಶಿಹಾರಾದ ಒಗಿರಿಹಾತಾ ಪ್ರದೇಶ ಬಹುತೇಕ ಸಂಪೂರ್ಣ ನೆಲಸಮವಾಗಿತ್ತು. ಮನೆಗಳು ಒಂದರ ಮೇಲೊಂದು ಕುಸಿದುಬಿದ್ದಿದ್ದವು. ಒಂಬತ್ತು ಮಂದಿ ಅವಶೇಷಗಳಡಿ ಸಿಲುಕಿದ್ದರು.
'ಅದು ಬಾಂಬ್ ದಾಳಿ ನಡೆದಂತೆ ಕಾಣುತ್ತಿತ್ತು; ಎಲ್ಲವೂ ನೆಲಸಮವಾಗಿತ್ತು' ಎನ್ನುತ್ತಾರೆ ಸ್ಥಳೀಯರು.
ಆದರೆ ಗ್ರಾಮಸ್ಥರು ರಕ್ಷಣಾ ಪಡೆಯನ್ನು ಕಾಯದೇ, ಮನೆಮನೆಗೆ ಓಡಿದರು. ಸೆರಾಮಿಕ್ ಹೆಂಚುಗಳನ್ನು ತೆಗೆದು, ಮೇಲ್ಛಾವಣಿಗಳನ್ನು ಕತ್ತರಿಸಿ, ರಕ್ಷಣಾ ಸಿಬ್ಬಂದಿ ಒಳಗೆ ಪ್ರವೇಶಿಸಲು ದಾರಿ ಮಾಡಿಕೊಟ್ಟರು. ಅವಶೇಷಗಳಡಿ ಸಿಲುಕಿದ್ದ ಎಲ್ಲ ಒಂಬತ್ತು ಮಂದಿಯನ್ನೂ ಜೀವಂತವಾಗಿ ಹೊರತೆಗೆದರು. ಆ ದಿನದ ಬಳಿಕವೇ ನಿಶಿಹಾರಾ 'ಮಿರಾಕಲ್ ವಿಲೇಜ್' ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿತು.
'ಭೂಕಂಪ ಸಂಭವಿಸಿದಾಗ ರಸ್ತೆಗಳು ಮುಚ್ಚಿಹೋಗುವುದು ಸಾಮಾನ್ಯ. ಹೊರಗಿನ ನೆರವು ತಕ್ಷಣ ತಲುಪುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಮೊದಲು ಕಾರ್ಯಪ್ರವೃತ್ತರಾಗಬೇಕಾಗಿರುವುದು ಸ್ಥಳೀಯರೇ. ನಮ್ಮಿಂದ ಸಾಧ್ಯವಾದುದನ್ನೆಲ್ಲ ನಾವೇ ಮಾಡಬೇಕಾಗಿತ್ತು. ಆ ಸಮಗ್ರ ತರಬೇತಿಗಳನ್ನು ನಡೆಸಿರಲಿಲ್ಲವಾದರೆ, ಹಲವು ಜೀವಗಳನ್ನು ಕಳೆದುಕೊಳ್ಳಬೇಕಾಗುತ್ತಿತ್ತು' ಎಂದರು ಮತ್ತೊಬ್ಬ ಸ್ಥಳೀಯರು.
ಹೊಸ ಮನೆಗಳು ಉಳಿದಿದ್ದು ಹೇಗೆ?
ಕುಮಮೋಟೊದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಕುಸಿದಿರುವುದು ಬಹುಪಾಲು ಹಳೆಯ ಮರದ ಮನೆಗಳು. ಹೊಸದಾಗಿ ನಿರ್ಮಿಸಿದ ಮನೆಗಳು ಮತ್ತು ಆಧುನಿಕ ಕಟ್ಟಡಗಳು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಿಂದ ಪಾರಾಗಿವೆ. ಇದಕ್ಕೆ ಪ್ರಮುಖ ಕಾರಣ ಜಪಾನ್‌ನ ಕಟ್ಟುನಿಟ್ಟಿನ ಭೂಕಂಪ ನಿರೋಧಕ ಕಟ್ಟಡ ನಿಯಮಗಳು. ಉಕ್ಕಿನ ಆಂಕರ್‌ಗಳಿಂದ ಬಲಪಡಿಸಿದ ಕಾಂಕ್ರೀಟ್ ಅಡಿಪಾಯ, ಕಟ್ಟಡದ ವಿವಿಧ ಭಾಗಗಳನ್ನು ದೃಢವಾಗಿ ಜೋಡಿಸುವ ಲೋಹದ ಕನೆಕ್ಟರ್‌ಗಳು ಮತ್ತು ಕಡ್ಡಾಯ ಭೂಕಂಪ ನಿರೋಧಕ ವಿನ್ಯಾಸಗಳಿಂದ ಈ ಮನೆಗಳನ್ನು ನಿರ್ಮಿಸಲಾಗಿದೆ.
2016ರ ಭೂಕಂಪದ ಬಳಿಕ ಹಳೆಯ ಮನೆಗಳನ್ನೂ ಬಲಪಡಿಸುವ ಕಾರ್ಯಕ್ಕೆ ಸರ್ಕಾರ ಆದ್ಯತೆ ನೀಡಿತು. ದುರ್ಬಲ ಮರದ ಕಂಬಗಳನ್ನು ಬದಲಿಸುವುದು, ಭಾರವಾದ ಸೆರಾಮಿಕ್ ಹೆಂಚುಗಳ ಬದಲಿಗೆ ಹಗುರವಾದ ಮೇಲ್ಛಾವಣಿ ಅಳವಡಿಸುವುದು ಸೇರಿದಂತೆ ಹಲವು ಕಾಮಗಾರಿಗಳಿಗೆ ಸಹಾಯಧನ ಒದಗಿಸಿತು. ಇದರ ಪರಿಣಾಮವಾಗಿ, 2024ರ ವೇಳೆಗೆ ಕುಮಮೋಟೊ ಪ್ರಾಂತ್ಯದ ಸುಮಾರು ಶೇ 90 ಕಟ್ಟಡಗಳು ರಾಷ್ಟ್ರೀಯ ಭೂಕಂಪ ನಿರೋಧಕ ಮಾನದಂಡಗಳನ್ನು ಪೂರೈಸಿದ್ದವು.
ಇನ್ನೂ ಉಳಿದಿರುವ ಸವಾಲುಗಳು
ಭೂಕಂಪದಲ್ಲಿ ದೊಡ್ಡ ಪ್ರಮಾಣದ ಪ್ರಾಣಹಾನಿ ತಪ್ಪಿದರೂ ಎಲ್ಲ ಸಮಸ್ಯೆಗಳು ಪರಿಹಾರವಾಗಿವೆ ಎಂದಲ್ಲ. 2016ರಲ್ಲಿ ಮೃತಪಟ್ಟವರಲ್ಲಿ ಅನೇಕರು ದೀರ್ಘಕಾಲ ಆಶ್ರಯ ಕೇಂದ್ರಗಳಲ್ಲಿ ವಾಸ, ಮಾನಸಿಕ ಒತ್ತಡ ಮತ್ತು ಆರೋಗ್ಯ ಸಮಸ್ಯೆಗಳಿಂದ ಸಾವಿಗೀಡಾಗಿದ್ದಾರೆ. ಈ ಬಾರಿಯೂ ಕೆಲವು ಆಶ್ರಯ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಹವಾನಿಯಂತ್ರಣ ವ್ಯವಸ್ಥೆ ಇರಲಿಲ್ಲ. ಸಾಕಷ್ಟು ಹಾಸಿಗೆಗಳೂ ಲಭ್ಯ ಇರಲಿಲ್ಲ. ಪರಿಣಾಮ, ಹಲವರು ನೆಲದಲ್ಲೇ ರಾತ್ರಿ ಕಳೆಯಬೇಕಾಯಿತು.
ಪರಸ್ಪರ ಸಹಕಾರವೇ ದೊಡ್ಡ ಶಕ್ತಿ
ಭೂಕಂಪ ನಿರೋಧಕ ಕಟ್ಟಡಗಳು ಮತ್ತು ಉತ್ತಮ ವಿಪತ್ತು ನಿರ್ವಹಣೆಯಷ್ಟೇ ಅಲ್ಲ, ಸಮುದಾಯದ ಸಹಕಾರವೂ ಕಡಿಮೆ ಪ್ರಾಣಹಾನಿಗೆ ಕಾರಣವಾಗಿದೆ. ಭೂಕಂಪದ ಬಳಿಕ ಯತ್ಸುಶಿರೊದ ಆಶ್ರಯ ಕೇಂದ್ರಗಳಲ್ಲಿ ಶಾಲಾ ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ನೋಂದಣಿ ಕಾರ್ಯದಲ್ಲಿ ತೊಡಗಿದ್ದರೆ, ಸ್ವಯಂಸೇವಾ ಸಂಘಗಳು ಆಹಾರದ ಪೊಟ್ಟಣಗಳನ್ನು ವಿತರಿಸುತ್ತಿದ್ದವು.
ಜನರಲ್ಲಿ ಪರಸ್ಪರ ಸಹಾಯ ಮಾಡುವ ಮನೋಭಾವವೇ ಸಾವು ನೋವಿನ ಸಂಖ್ಯೆಯನ್ನು ಕಡಿಮೆ ಮಾಡಿದೆ. ವಿಪತ್ತನ್ನು ಎದುರಿಸಲು ಇಂತಹ ಪರಸ್ಪರ ಸಹಕಾರವೂ ದೊಡ್ಡ ಪಾತ್ರ ವಹಿಸಿದೆ.
ಭೂಕಂಪ ತಡೆಯಲು ಅಸಾಧ್ಯ. ಇಂತಹ ಪ್ರಯತ್ನಗಳಿಂದ ಜೀವಹಾನಿಯನ್ನು ತಡೆಯಬಹುದು. 2016ರ ದುರಂತದ ಬಳಿಕ ಕುಮಮೋಟೊ ಮತ್ತೆ ಎದ್ದು ನಿಂತಿತು. ಭೂಕಂಪ ನಿರೋಧಕ ಕಟ್ಟಡಗಳು, ಸದೃಢ ಮೂಲಸೌಕರ್ಯ, ತರಬೇತಿ ಪಡೆದ ಜನರು ಮತ್ತು ಪರಸ್ಪರ ಸಹಕಾರ-ಈ ನಾಲ್ಕೂ ಸೇರಿ ಕಳೆದ ವಾರ ಸಂಭವಿಸಿದ ಭೂಕಂಪವನ್ನು ಮತ್ತೊಂದು ದುರಂತವಾಗದಂತೆ ತಡೆದವು. ಪ್ರಕೃತಿಯ ಎದುರು ಮನುಷ್ಯ ಅಸಹಾಯಕನಲ್ಲ; ಮುನ್ನೆಚ್ಚರಿಕೆಯೇ ಅವನ ಅತ್ಯಂತ ದೊಡ್ಡ ಶಕ್ತಿ ಎಂಬುದನ್ನು ಕುಮಮೋಟೊ ಮತ್ತೊಮ್ಮೆ ಜಗತ್ತಿಗೆ ತೋರಿಸಿದೆ.
ಆಧಾರ: ದಿ ನ್ಯೂಯಾರ್ಕ್ ಟೈಮ್ಸ್

