ಟೆಹರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೇಜವಾಬ್ದಾರಿ ಬೆದರಿಕೆಗಳಿಗೆ ಅಂಜುವ ಪ್ರಶ್ನೆಯೇ ಇಲ್ಲ. ಇಂತಹ ಆಧಾರರಹಿತ ಬೆದರಿಕೆಗಳಿಂದ ಅಮೆರಿಕ-ಇಸ್ರೇಲ್ ಪಡೆಗಳ ವಿರುದ್ಧ ನಡೆಯುತ್ತಿರುವ ನಿರಂತರ ದಾಳಿಗಳ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಇರಾನ್ ತಿರುಗೇಟು ನೀಡಿದೆ.
'ಇರಾನ್ ಅನ್ನು ಒಂದೇ ರಾತ್ರಿಯಲ್ಲಿ ಸಂಪೂರ್ಣವಾಗಿ ನಾಶ ಮಾಡಬಹುದು' ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಪ್ರತಿಯಾಗಿ ಇರಾನ್ ಪ್ರತಿಕ್ರಿಯಿಸಿದೆ.
'ಪದೇ ಪದೇ ಮಿಲಿಟರಿ ವೈಫಲ್ಯ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷರು ಬೇಜವಾಬ್ದಾರಿಯುತ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಇವು ಅಮೆರಿಕ ಮತ್ತು ಇಸ್ರೇಲ್ ಪಡೆಗಳ ವಿರುದ್ಧ ಇಸ್ಲಾಮಿಕ್ ಹೋರಾಟಗಾರರು ನಡೆಸುತ್ತಿರುವ ನಿರಂತರ ಆಕ್ರಮಣಕಾರಿ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುವುದಿಲ್ಲ. ಅಲ್ಲದೆ, ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಅನುಭವಿಸಿರುವ ಅವಮಾನವನ್ನು ಇದರಿಂದ ಅಳಿಸಿಹಾಕಲು ಸಾಧ್ಯವಿಲ್ಲ' ಎಂದು ಇರಾನ್‌ನ 'ಖಾತಮ್ ಅಲ್ ಅಂಬಿಯಾ' ಜಂಟಿ ಮಿಲಿಟರಿ ಕಮಾಂಡ್ ತಿಳಿಸಿದ್ದಾರೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್‌ನ (ಐಆರ್‌ಜಿಸಿ) ನೌಕಾಪಡೆಯು ಇಸ್ರೇಲ್‌ನ ಕಂಟೈನರ್ ಹಡಗು 'SDN 7'ರ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ವಕ್ತಾರರು ಹೇಳಿದ್ದಾರೆ. ಅಮೆರಿಕದ 'LHA-7' ಹಡಗು ಕೂಡ ಭಾರಿ ಗುಂಡಿನ ದಾಳಿಗೆ ತುತ್ತಾಗಿ ಹಿಂದೂ ಮಹಾಸಾಗರದಲ್ಲಿ ಪತನಗೊಂಡಿದೆ ಎಂದೂ ಅವರು ಪ್ರತಿಪಾದಿಸಿದ್ದಾರೆ.
ಉತ್ತರ ಮತ್ತು ದಕ್ಷಿಣ ಟೆಲ್ ಅವಿವ್‌ನ ಪ್ರಮುಖ ತಾಣಗಳು, ಹೈಫಾದ ಆಯಕಟ್ಟಿನ ಕೇಂದ್ರಗಳು, ಬೀರ್ ಶೆವಾದ ರಾಸಾಯನಿಕ ಸ್ಥಾವರಗಳು ಮತ್ತು ಪೆಟಾ ಟಿಕ್ವಾದಲ್ಲಿರುವ ಇಸ್ರೇಲ್ ಸೈನಿಕರ ನೆಲೆಗಳ ಮೇಲೆ ನಿಖರವಾದ ಖಂಡಾಂತರ ಕ್ಷಿಪಣಿ ದಾಳಿ ನಡೆಸಿದ್ದೇವೆ ಎಂದು ಐಆರ್‌ಜಿಸಿ ವಕ್ತಾರರು ತಿಳಿಸಿದ್ದಾರೆ.
ಕುವೈತ್‌ನಲ್ಲಿರುವ ಅಮೆರಿಕದ ಅಲ್-ಅದೈರಿ ನೆಲೆಯ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಲಾಗಿದ್ದು, ಹೆಲಿಕಾಪ್ಟರ್ ಮತ್ತು ಅಮೆರಿಕದ ಸೈನಿಕರ ವಸತಿ ನಿಲಯಗಳನ್ನು ನಾಶಪಡಿಸಲಾಗಿದೆ. ಬಾಗ್ದಾದ್‌ನಲ್ಲಿರುವ ಅಮೆರಿಕದ ವಿಕ್ಟೋರಿಯಾ ಬೇಸ್ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳನ್ನು ಧ್ವಂಸಗೊಳಿಸಿದ್ದೇವೆ ಎಂದೂ ಅವರು ಹೇಳಿದ್ದಾರೆ.
45 ದಿನಗಳ ಕದನ ವಿರಾಮ ಪ್ರಸ್ತಾವ ಇರಾನ್‌ನಿಂದ ತಿರಸ್ಕಾರ ಇರಾನ್‌ನಿಂದ ಕದನ ವಿರಾಮ ಪ್ರಸ್ತಾವ ತಿರಸ್ಕಾರ: 4 ಗಂಟೆಯಲ್ಲಿ ಸರ್ವನಾಶ ಎಂದ ಟ್ರಂಪ್
