ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ದಳಪತಿ ವಿಜಯ್ ಅವರ ಶಿಸ್ತು, ಕಠಿಣ ಪರಿಶ್ರಮ ಹಾಗೂ ಜನಸೇವೆಯ ಬದ್ಧತೆಯ ಬಗ್ಗೆ ನಟ ಯಶ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇದರ ಜೊತೆಗೆ ವಿಜಯ್ ರೀತಿಯಲ್ಲೇ ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ನಟ ಯಶ್ ಮಾತನಾಡಿದ್ದಾರೆ.
ಆಗಸ್ಟ್ 24ರಂದು ಚೆನ್ನೈನ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 'ಟಾಕ್ಸಿಕ್' ಸಿನಿಮಾದ ಪ್ರೀ ರಿಲೀಸ್ ಸಮಾರಂಭದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿತ್ತು. ಇದೇ ವೇಳೆ ವೇದಿಕೆಗೆ ಆಗಮಿಸಿದ ಯಶ್, ವಿಜಯ್ ಅವರು ಜನರಿಂದ ಪಡೆದ ಪ್ರೀತಿ ಮತ್ತು ಗೌರವಕ್ಕೆ ತಕ್ಕಂತೆ ಮರಳಿ ರಾಜ್ಯಕ್ಕೆ ಸೇವೆಯನ್ನು ನೀಡುತ್ತಿದ್ದಾರೆ' ಎಂದಿದ್ದಾರೆ.
ತೆರೆ ಮೇಲಷ್ಟೇ ಅಲ್ಲ, ನಿಜ ಜೀವನದಲ್ಲೂ ಯಶ್ ಅದ್ಭುತ ವ್ಯಕ್ತಿ: ನಟ ಅನುಪಮ್ ಖೇರ್'ಟಾಕ್ಸಿಕ್' ಕಾರ್ಯಕ್ರಮದಲ್ಲಿ ಅವಘಡ; ಇಬ್ಬರಿಗೆ ಗಾಯ, ತಕ್ಷಣ ಮಾತು ನಿಲ್ಲಿಸಿದ ಯಶ್ವಿಜಯ್ ಸರ್ ಅವರಿಂದ ನಾವು ಕಲಿತಿದ್ದು ಅಪಾರ...
'ನಾವೆಲ್ಲರೂ ವಿಜಯ್ ಸರ್ ಅವರಿಂದ ಅನೇಕ ವಿಷಯಗಳನ್ನು ಕಲಿತಿದ್ದೇವೆ. ಅವರ ಕೆಲಸದ ಬದ್ಧತೆ ಹಾಗೂ ಪ್ರೇಕ್ಷಕರಿಂದ ಅವರು ಪಡೆದ ಪ್ರೀತಿಯನ್ನು ನಾವೆಲ್ಲರೂ ಸದಾ ಗೌರವಿಸುತ್ತೇವೆ. ಇಂದು ಜನರು ಅವರಿಗೆ ಅಷ್ಟು ದೊಡ್ಡ ಜವಾಬ್ದಾರಿ ಮತ್ತು ಸ್ಥಾನಮಾನ ನೀಡಿದ್ದಾರೆ. ಇದು ಚಿತ್ರರಂಗಕ್ಕಷ್ಟೇ ಅಲ್ಲದೆ ಸಮಾಜಕ್ಕೂ ಹೊಸ ಹಾದಿ ತೋರಿದೆ. ಅವರಲ್ಲಿರುವ ಶಿಸ್ತು ಮತ್ತು ಶ್ರದ್ಧೆಯನ್ನು ನಾನು ಹತ್ತಿರದಿಂದ ಕಂಡಿದ್ದೇನೆ' ಎಂದರು.
ವಿಜಯ್ ಅವರು ಬೆಳಿಗ್ಗೆಯಿಂದ ರಾತ್ರಿಯವರೆಗೂ ತಮಿಳುನಾಡಿನ ಜನರ ಒಳಿತಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ದೇಶದಾದ್ಯಂತ ಇಂತಹ ಸಕಾರಾತ್ಮಕ ರಾಜಕೀಯ ವಾತಾವರಣ ನಿರ್ಮಾಣವಾಗಲಿ ಎಂದು ನಾನು ಆಶಿಸುತ್ತೇನೆ. ತಮಿಳುನಾಡಿನ ಜನರು ತಮ್ಮ ಭವಿಷ್ಯದ ಹೊಣೆಯನ್ನು ವಿಜಯ್ ಅವರಿಗೆ ವಹಿಸಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಅವರಿಗಿದೆ' ಎಂದರು.
ವಿಜಯ್ ರೀತಿಯಲ್ಲೇ ರಾಜಕೀಯ ಪ್ರವೇಶಿಸುತ್ತಾರಾ ರಾಕಿಂಗ್ ಸ್ಟಾರ್...
ಕಾರ್ಯಕ್ರಮದಲ್ಲಿ ನಿರೂಪಕರು ನಟ ಯಶ್ ಅವರಿಗೆ ರಾಜಕೀಯ ಪ್ರವೇಶದ ಬಗ್ಗೆ ಪ್ರಶ್ನೆ ಕೇಳಿದ್ದಾರೆ. 'ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಜನನಾಯಗನ್ ಸಿನಿಮಾ ನಂತರ ದಳಪತಿ ವಿಜಯ್ ತಮಿಳುನಾಡು ಸಿಎಂ ಆದರು. ಈಗ ನೀವು ಕೆವಿಎನ್ ನಿರ್ಮಾಣದ ಟಾಕ್ಸಿಕ್‌ನಲ್ಲಿ ನಟಿಸಿದ್ದೀರಿ. ಮುಂದೆ ಏನು' ಎಂದು ಪ್ರಶ್ನಿಸಿದರು.
ಆಗ ಉತ್ತರಿಸಿದ ಯಶ್, 'ಈಗಷ್ಟೇ ಪಯಣ ಆರಂಭಿಸಿದ್ದೇನೆ. ಜನರನ್ನು ಮನರಂಜಿಸುವುದು ಇನ್ನೂ ಸಾಕಷ್ಟಿದೆ. ಏನೂ ಅಲ್ಲದ ನಮ್ಮನ್ನು ಜನರು ಸ್ಟಾರ್ ಮಾಡಿದ್ದಾರೆ. ನಾವು ಮುಂದೆ ಏನು ಆಗಬೇಕು ಅನ್ನೋದನ್ನು ಅವರೇ ನಿರ್ಧರಿಸಲಿ' ಎಂದು ಹೇಳಿದರು.
ನಾಳೆ (ಆ. 26) ಯಶ್ ನಟನೆಯ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ತೆರೆಕಾಣಲಿದೆ. ಈ ಚಿತ್ರದಲ್ಲಿ ಯಶ್, 'ರಾಯ' ಹಾಗೂ 'ಟಿಕೆಟ್' ಎಂಬ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರೊಂದಿಗೆ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಹಾಗೂ ಹುಮಾ ಖುರೇಷಿ ಸೇರಿ ದೊಡ್ಡ ತಾರಾಗಣವೇ ಅಭಿನಯಿಸಿದೆ.

