Dailyhunt Logo
  • Light mode
    Follow system
    Dark mode
    • Play Story
    • App Story
ಎಕಾನಮಿ 360|ಕೈಯಲ್ಲಿ ಪದವಿ, ಕೆಲಸಕ್ಕೆ ಕೌಶಲವಿಲ್ಲ: ಯುವಜನತೆ ಹೊರೆಯಾಗುವ ಮುನ್ನ..

ಎಕಾನಮಿ 360|ಕೈಯಲ್ಲಿ ಪದವಿ, ಕೆಲಸಕ್ಕೆ ಕೌಶಲವಿಲ್ಲ: ಯುವಜನತೆ ಹೊರೆಯಾಗುವ ಮುನ್ನ..

ಶಿಕ್ಷಣ ಎನ್ನುವುದು 'ಹುಲಿಯ ಹಾಲು ಇದ್ದಂತೆ. ಅದನ್ನು ಕುಡಿದವರಾರೂ ಘರ್ಜಿಸದೆ ಇರುವುದಿಲ್ಲ' ಎಂದಿದ್ದರು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್. ಸಾಮಾಜಿಕ ಬದಲಾವಣೆ ಮತ್ತು ವಿಮೋಚನೆಗೆ ಶಿಕ್ಷಣವೇ ಸರಿಯಾದ ಮದ್ದು ಎಂದು ಅವರು ನಂಬಿದ್ದರು. ಬದಲಾದ ಕಾಲಘಟ್ಟದಲ್ಲಿ ಶಿಕ್ಷಣ ಎನ್ನುವುದು ದೇಶವೊಂದರ ಆರ್ಥಿಕ ಬದಲಾವಣೆಯ ಕೀಲಿಕೈಯೂ ಹೌದು.

ಆದರೆ, ಭಾರತದಲ್ಲಿ ಇದರಷ್ಟು ನಿರ್ಲಕ್ಷ್ಯಕ್ಕೆ ಒಳಗಾದ ಮತ್ತೊಂದು ಕ್ಷೇತ್ರವನ್ನು ಹುಡುಕುವುದು ಕಷ್ಟ.

ಇದೀಗ ಕೊನೆಗೂ ದಶಕಗಳಿಂದ ಕಡೆಗಣಿಸಲ್ಪಟ್ಟಿದ್ದ ಶಿಕ್ಷಣ ಕ್ಷೇತ್ರದತ್ತ ಜನರ ಗಮನ ಹರಿದಿದೆ. ವಿವಾದಗಳ ಕಾರಣಕ್ಕಾಗಿಯಾದರೂ ಭಾರತದ ಶೈಕ್ಷಣಿಕ ಸಮಸ್ಯೆಗಳು ಚರ್ಚೆಯ ಅಂಗಳಕ್ಕೆ ಬಂದಿವೆ. ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಆರಂಭವಾದ ಈ ಬೆಳವಣಿಗೆ, ಜೆನ್‌ ಝೀ ಯುವಜನರ ಹೋರಾಟ, ಸಿಜೆಪಿತ ಅಭಿಜೀತ್‌ ದೀಪ್ಕೆ ಅವರ 'ಸ್ಕೂಲ್‌ ಠೀಕ್‌ ಕರೋ' ಅಭಿಯಾನದ ಮೂಲಕ ಮುಂದುವರಿದಿದೆ. ಶಾಲೆಗಳ ಮೂಲಸೌಕರ್ಯ, ಶಿಕ್ಷಕರ ಕೊರತೆ, ಶೈಕ್ಷಣಿಕ ಗುಣಮಟ್ಟ ಹಾಗೂ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ಬಗ್ಗೆ ಜನರು ತಡವಾಗಿಯಾದರೂ ತಲೆಕೆಡಿಸಿಕೊಂಡಿದ್ದಾರೆ.

ಈ ಹೊತ್ತಲ್ಲಿ ಸರ್ಕಾರ ಕೇವಲ ತಾತ್ಕಾಲಿಕ ಕ್ರಮಗಳಿಂದ ಈ ಚರ್ಚೆಯನ್ನು ಮುಗಿಸುವ ಪ್ರಯತ್ನ ಮಾಡಬಾರದು. ಒಂದಿಷ್ಟು ಅನುದಾನ ಕೊಟ್ಟೋ, ಸುಧಾರಣೆಯ ಕತೆ ಕಟ್ಟಿಯೋ ಈ ವಿಚಾರವನ್ನು ಇಲ್ಲಿಗೆ ಮುಗಿಸಲೂಬಾರದು. ಹಾಗೆ ಮಾಡಿದರೆ ಅದು ದೊಡ್ಡ ತಪ್ಪಿಗೆ ದಾರಿ ಮಾಡಿಕೊಡಲಿದೆ. ಕಾರಣ, ಇದು ಭಾರತದ ಭವಿಷ್ಯದ ಪ್ರಶ್ನೆಯೂ ಹೌದು.

ದೇಶವೊಂದರ ಆರ್ಥಿಕ ಬೆಳವಣಿಗೆಗೆ ರಸ್ತೆ, ವಿಮಾನ ನಿಲ್ದಾಣ ಮತ್ತು ಕೈಗಾರಿಕೆಗಳು ಹೇಗೆ ಊರುಗೋಲೋ, ಶಿಕ್ಷಣವೂ ಅಷ್ಟೇ ಮಹತ್ವದ ಮೂಲಸೌಕರ್ಯ. ವ್ಯತ್ಯಾಸವೆಂದರೆ, ಉಳಿದವು ಸರಕುಗಳನ್ನು ಸಾಗಿಸಿದರೆ, ಶಿಕ್ಷಣ ಆರ್ಥಿಕತೆಯನ್ನು ಮುನ್ನಡೆಸಲು ಬೇಕಾದ ಮಾನವ ಸಂಪನ್ಮೂಲವನ್ನು ಒದಗಿಸುತ್ತದೆ.

ಗುಣಮಟ್ಟದ ಕಡೆಗಿರಲಿ ಹೂಡಿಕೆ..

ವಿಪರ್ಯಾಸವೆಂದರೆ, ಮುಂದುವರಿದ ರಾಷ್ಟ್ರಗಳಿಗೆ ಹೋಲಿಸಿದರೆ ಶಿಕ್ಷಣದ ಮೇಲಿನ ನಮ್ಮ ಹೂಡಿಕೆ ತಳಮಟ್ಟದಲ್ಲಿದೆ. ಕಾಣಿಸುವ ವೆಚ್ಚಗಳಲ್ಲೂ ಒಂದಿಷ್ಟು ಪಾಲು ಕಲ್ಯಾಣ ಯೋಜನೆಗಳಿಗೆ ಸೀಮಿತವಾಗಿವೆ. ಹಾಗಂಥ ಸೈಕಲ್‌, ಊಟ, ಲ್ಯಾಪ್‌ಟಾಪ್‌ ಕೊಡಬಾರದು ಎಂದಲ್ಲ. ಆದರೆ, ಅದನ್ನು ಹೊರಗಿಟ್ಟು ಅಸಲಿ ವೆಚ್ಚವನ್ನು ಲೆಕ್ಕ ಹಾಕಬೇಕಿದೆ.

ಅಷ್ಟೇ ಅಲ್ಲ. ಶಿಕ್ಷಣದ ಮೇಲಿನ ವೆಚ್ಚವನ್ನು ಬಜೆಟ್‌ ಭಾರವಾಗಿ ನೋಡುವ ಬದಲು, ದೇಶದ ಅತ್ಯಂತ ದೊಡ್ಡ ಬಂಡವಾಳವಾದ ಮಾನವ ಸಂಪನ್ಮೂಲದ ಮೇಲಿನ ಹೂಡಿಕೆಯಾಗಿ ನೋಡುವ ದೃಷ್ಟಿಕೋನ ಬೆಳೆಸಿಕೊಳ್ಳಬೇಕಿದೆ. ಶಾಲೆ-ಕಾಲೇಜುಗಳ ಮೇಲೆ ಉದಾರವಾಗಿ ಹೂಡಿಕೆ ಮಾಡಬೇಕಿದೆ.

ಪದವಿಗೂ, ಉದ್ಯೋಗಕ್ಕೂ ಬೇಕಿದೆ ಸೇತುವೆ

ಹೂಡಿಕೆಯ ಕಥೆ ಒಂದು ಕಡೆಯಾದರೆ. ಪದವಿ - ಉದ್ಯೋಗದ ನಡುವೆ ತಾಳಮೇಳ ಇಲ್ಲದೇ ಇರುವುದನ್ನೂ ಈ ಹೊತ್ತಲ್ಲಿ ಗಮನಿಸಬೇಕಿದೆ. ಇದು ಮತ್ತೊಂದು ಕ್ಲಿಷ್ಟ ಸಮಸ್ಯೆಯಾಗಿದೆ. ಜಗತ್ತು ಇಂದು ಎಂದಿಗಿಂತ ವೇಗವಾಗಿ ಬದಲಾಗುತ್ತಿದೆ. ಆದರೆ ಶಿಕ್ಷಣ ವ್ಯವಸ್ಥೆ ಆ ವೇಗಕ್ಕೆ ಹೊಂದಿಕೊಳ್ಳಲು ಒದ್ದಾಡುತ್ತಿದೆ.

ಇತ್ತೀಚೆಗೆ ಬಿಡುಗಡೆಯಾದ ನೀತಿ ಆಯೋಗದ 'ರಿಇಮ್ಯಾಜಿನಿಂಗ್‌ ಸ್ಕಿಲ್ಲಿಂಗ್‌ ಫಾರ್‌ ವಿಕಸಿತ್‌ ಭಾರತ್‌ 2047' ವರದಿ ಈ ನಿಟ್ಟಿನಲ್ಲಿ ಮಹತ್ವದ ಬೆಳಕು ಚೆಲ್ಲಿದೆ. ಪದವಿ ಪಡೆದವರಲ್ಲಿ ಕೇವಲ ಶೇ. 8.25ರಷ್ಟು ಯುವಜನರಿಗೆ ಮಾತ್ರ ಅವರ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಸಿಗುತ್ತಿದೆ ಎಂಬ ಆಘಾತಕಾರಿ ಅಂಶವನ್ನು ಈ ವರದಿ ತೆರೆದಿಟ್ಟಿದೆ.

ಅಂದರೆ, ಶೇ. 91ಕ್ಕೂ ಹೆಚ್ಚು ಪದವೀಧರರಿಗೆ ಅವರು ಓದಿದ ವಿಷಯಕ್ಕೆ ಹೊಂದುವ ಉದ್ಯೋಗ ಸಿಗುತ್ತಿಲ್ಲ. ಇವರಲ್ಲಿ ಕೆಲವರು ನಿರುದ್ಯೋಗಿಗಳಾಗಿದ್ದರೆ, ಇನ್ನೂ ಹಲವರು ತಮ್ಮ ವಿದ್ಯಾರ್ಹತೆಗೆ ಸಂಬಂಧವಿಲ್ಲದ ಅಥವಾ ಕಡಿಮೆ ಕೌಶಲದ ಉದ್ಯೋಗಗಳಲ್ಲಿ ದುಡಿಯುತ್ತಿದ್ದಾರೆ. ಇದು ಶಿಕ್ಷಣ ವ್ಯವಸ್ಥೆಯ ವೈಫಲ್ಯವಲ್ಲ; ಭಾರತದ ಆರ್ಥಿಕತೆಯ ಪಾಲಿಗೆ ಎಚ್ಚರಿಕೆಯ ಗಂಟೆ. ಹಾಗಾಗಿ ಈ ಬಾರಿಯ ಚರ್ಚೆ ಶಾಲೆಗಳ ಮೂಲಸೌಕರ್ಯ, ಶಿಕ್ಷಕರ ಅಭಾವದ ಜೊತೆಗೆ ಗುಣಮಟ್ಟದ ಕಡೆಗೂ ಮುಂದುವರಿಯಬೇಕಾದ ಅಗತ್ಯ ಇದೆ.

ದೇಶದಲ್ಲಿ ಪ್ರಸ್ತುತ 3.4 ಕೋಟಿ ವಿದ್ಯಾರ್ಥಿಗಳು ಪದವಿ ಓದುತ್ತಿದ್ದಾರೆ. ಈ ಪೈಕಿ ಕೇವಲ ಬಿಎ, ಬಿಕಾಂ ಮತ್ತು ಬಿಎಸ್ಸಿ ಓದುತ್ತಿರುವವರ ಸಂಖ್ಯೆ 2 ಕೋಟಿಗೂ ಮೀರಿದೆ. ಈ ಸಾಮಾನ್ಯ ಪದವಿಗಳು ಪ್ರಮಾಣಪತ್ರಗಳನ್ನು ನೀಡುತ್ತಿವೆ; ಆದರೆ ಉದ್ಯಮ ವಲಯಕ್ಕೆ ಬೇಕಾದ ಕೌಶಲಗಳನ್ನು ರೂಪಿಸುವಲ್ಲಿ ಹಿಂದೆ ಬೀಳುತ್ತಿವೆ. ಇದನ್ನೇ ಒಂದೊಮ್ಮೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. "ನಾವು ಕಲಿಯುತ್ತಿರುವ ಕೋರ್ಸ್‌ಗಳು ನಮ್ಮನ್ನು ಉದ್ಯೋಗಕ್ಕೂ ಸಿದ್ಧಪಡಿಸುತ್ತಿಲ್ಲ, ಉದ್ಯಮಶೀಲರನ್ನಾಗಿಯೂ ಮಾಡುತ್ತಿಲ್ಲ," ಎಂಬ ಅವರ ಅಭಿಪ್ರಾಯ ನೂರಕ್ಕೆ ನೂರು ನಿಜ.

ಈ ದಿಸೆಯಲ್ಲಿ 2021ರ ರಾಷ್ಟ್ರೀಯ ಮಾದರಿ ಸಮೀಕ್ಷೆ (ಎನ್‌ಎಸ್‌ಎಸ್‌) ಆತಂಕಕಾರಿ ಮಾಹಿತಿಯೊಂದನ್ನು ಹೊರಹಾಕಿದೆ. ಇದು ಸ್ವಲ್ಪ ಹಳೆಯ ಅಂಕಿ - ಅಂಶವಾದರೂ, 15ರಿಂದ 29 ವರ್ಷ ವಯಸ್ಸಿನ 8.7 ಕೋಟಿಗೂ ಹೆಚ್ಚು ಯುವಜನರು 'NEET' (Not in Education, Employment, or Training) ವರ್ಗಕ್ಕೆ ಸೇರಿದ್ದಾರೆ ಎಂಬ ಗಂಭೀರ ವಿಚಾರವನ್ನು ಇದು ಹೊರಹಾಕಿದೆ. ಅಂದರೆ, ಇವರು ಶಿಕ್ಷಣದಲ್ಲೂ ಇಲ್ಲ, ಉದ್ಯೋಗದಲ್ಲೂ ಇಲ್ಲ, ಕೌಶಲ ತರಬೇತಿಯಲ್ಲೂ ಇಲ್ಲ. ಹೀಗೊಂದು ತ್ರಿಶಂಕು ಸ್ಥಿತಿಯಲ್ಲಿ ಈ ಬೃಹತ್ ಯುವ ಸಮೂಹವಿದೆ.

ಹಲವು ಬಾರಿ ಭಾರತದ ಆರ್ಥಿಕತೆಯ ವಿಚಾರ ಬಂದಾಗ ಇಲ್ಲಿನ ಯುವ ಜನಸಂಖ್ಯೆಯನ್ನು ಉಲ್ಲೇಖಿಸಲಾಗುತ್ತದೆ. ದೇಶವೂ ಇದನ್ನು ಹೆಮ್ಮೆಯಿಂದ ಎದೆತಟ್ಟಿ ಹೇಳಿಕೊಳ್ಳುತ್ತದೆ. ಆದರೆ, ಕೌಶಲ್ಯವಿಲ್ಲದ ಈ ಯುವ ಜನಸಂಖ್ಯೆ ಆರ್ಥಿಕ ಅವಕಾಶವಾಗುವ ಬದಲು ಆರ್ಥಿಕ ಹೊರೆಯಾಗಬಹುದು.

ಇದಕ್ಕೆ ಪರಿಹಾರ ಏನು?

ಮೊದಲೇ ಹೇಳಿದ ಹಾಗೆ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಜ್ಞಾನದ ಕೊರತೆ ಇಲ್ಲ; ಉದ್ಯೋಗಕ್ಕೆ ಬೇಕಾದ ಕೌಶಲ್ಯದ ಅಭಾವ ಇದೆ. ವಿದ್ಯಾರ್ಥಿಗಳಲ್ಲಿ ಕೈಗಾರಿಕೆಗಳಿಗೆ ಬೇಕಾದ ಉದ್ಯೋಗಾರ್ಹತೆಯ ಸಾಮರ್ಥ್ಯ ಕಾಣುತ್ತಿಲ್ಲ.

ಇದಕ್ಕೆ ನೀತಿ ಆಯೋಗವೇ ಒಂದಿಷ್ಟು ಮಹತ್ವದ ಬದಲಾವಣೆಗಳನ್ನು ಸಹ ಸೂಚಿಸಿದೆ. ಕೌಶಲ್ಯ ತರಬೇತಿಯನ್ನು ಪದವಿಯ ನಂತರದ ಆಯ್ಕೆಯಾಗಿ ನೋಡುವ ಬದಲು, ಶಾಲಾ ಹಂತದಲ್ಲೇ ಜಾರಿಗೆ ತರಬೇಕು. ಉನ್ನತ ಶಿಕ್ಷಣವು ಕೇವಲ ಸಾಮಾನ್ಯ ಪದವಿಗಳಾಗಿರದೆ, ಕೈಗಾರಿಕೆಗಳ ಬೇಡಿಕೆಗೆ ತಕ್ಕಂತೆ ಇರಬೇಕು. ಡಿಜಿಟಲ್ ಕೌಶಲ್ಯ, ಅಪ್ರೆಂಟಿಸ್‌ಶಿಪ್ (ಕಲಿಯುತ್ತಲೇ ದುಡಿಯುವ ಅವಕಾಶ) ಯೋಜನೆಗಳಿಗೆ ಒತ್ತು ನೀಡಬೇಕಿದೆ.

ಭಾರತ ಇಂದು ಐದು ಟ್ರಿಲಿಯನ್‌, ಹತ್ತು ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯ ಮಂತ್ರ ಪಠಿಸುತ್ತಿದೆ. ಆದರೆ ಯಾವುದೇ ದೇಶದ ಆರ್ಥಿಕತೆಗೆ ಕೇವಲ ಹೆದ್ದಾರಿಗಳು, ಬಂದರುಗಳು ಅಥವಾ ಕಾರ್ಖಾನೆಗಳಿಂದ ಮಾತ್ರ ಶಕ್ತಿ ಬರುವುದಿಲ್ಲ.‌ ಉತ್ಪಾದಕ ಮಾನವ ಸಂಪನ್ಮೂಲವೇ ದೇಶವೊಂದರ ನಿಜವಾದ ಬಂಡವಾಳ. ಆ ಬಂಡವಾಳವನ್ನು ರೂಪಿಸುವ ಮೊದಲ ಕಾರ್ಖಾನೆಯೇ ಶಾಲೆ.

ಒಂದಂತೂ ನಿಜ. ಭಾರತದ ಮುಂದಿನ ಆರ್ಥಿಕ ಕ್ರಾಂತಿ ಕಾರ್ಖಾನೆಗಳಲ್ಲಿ ಆರಂಭವಾಗುವುದಿಲ್ಲ; ಅದು ಶಾಲೆ-ಕಾಲೇಜುಗಳ ತರಗತಿ ಕೊಠಡಿಯಲ್ಲಿ ಆರಂಭವಾಗುತ್ತದೆ. ಉತ್ತಮ ಶಿಕ್ಷಣ ವ್ಯವಸ್ಥೆಯಿಲ್ಲದೆ ಉತ್ತಮ ಉದ್ಯೋಗಿಗಳು ಸಿಗಲಾರರು. ಉತ್ತಮ ಉದ್ಯೋಗಿಗಳಿಲ್ಲದೆ ಉತ್ಪಾದಕತೆ ಹೆಚ್ಚುವುದಿಲ್ಲ. ಉತ್ಪಾದಕತೆ ಇಲ್ಲದೆ ಐದು ಟ್ರಿಲಿಯನ್‌ ಇರಲಿ, ಹತ್ತು ಟ್ರಿಲಿಯನ್‌ ಇರಲಿ - ಯಾವ ಆರ್ಥಿಕ ಗುರಿಯೂ ಸಾಕಾರವಾಗುವುದಿಲ್ಲ.

ಎಕಾನಮಿ 360: ಅಲ್ಲಿ ಎನ್‌ವಿಡಿಯಾ ಕ್ರಾಂತಿ, ನಮ್ಮಲ್ಲಿ ಐಸ್‌ಕ್ರೀಂ ಭ್ರಾಂತಿ! ಎಕಾನಮಿ 360 | ₹ 22,000 ಕೋಟಿ 'ಹೇರ್‌ಕಟ್‌ʼ! ಇದೆಂಥಾ (ಅ)ವ್ಯವಸ್ಥೆ?
Dailyhunt
Disclaimer: This content has not been generated, created or edited by Dailyhunt. Publisher: Prajavani