Dailyhunt Logo
  • Light mode
    Follow system
    Dark mode
    • Play Story
    • App Story
ಎಕಾನಮಿ 360: ಅಲ್ಲಿ ಎನ್‌ವಿಡಿಯಾ ಕ್ರಾಂತಿ, ನಮ್ಮಲ್ಲಿ  ಐಸ್‌ಕ್ರೀಂ ಭ್ರಾಂತಿ!

ಎಕಾನಮಿ 360: ಅಲ್ಲಿ ಎನ್‌ವಿಡಿಯಾ ಕ್ರಾಂತಿ, ನಮ್ಮಲ್ಲಿ ಐಸ್‌ಕ್ರೀಂ ಭ್ರಾಂತಿ!

ಇತ್ತೀಚೆಗೆ ಅಮೆರಿಕದ 'ಎನ್‌ವಿಡಿಯಾ' ಕಂಪನಿ ತನ್ನ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿತ್ತು. ಜಗತ್ತಿನ ಕೃತಕ ಬುದ್ಧಿಮತ್ತೆ (ಎಐ) ಓಟಕ್ಕೆ ಇಂಧನ ತುಂಬುತ್ತಿರುವ ಈ ಚಿಪ್‌ ತಯಾರಿಕಾ ಕಂಪನಿಯ ಆದಾಯ, ಕಳೆದ ವರ್ಷಕ್ಕೆ ಹೋಲಿಸಿದರೆ ದ್ವಿಗುಣಗೊಂಡು ದಾಖಲೆ ಬರೆದಿದೆ.

ನೋಡ ನೋಡುತ್ತಿದ್ದಂತೆ ಕಂಪನಿಯ ಮಾರುಕಟ್ಟೆ ಮೌಲ್ಯ 5.5 ಟ್ರಿಲಿಯನ್‌ ಡಾಲರ್‌ ಗಡಿಯನ್ನು ದಾಟಿ, ಜಗತ್ತಿನ ಅತ್ಯಮೂಲ್ಯ ಕಂಪನಿಗಳ ಪಟ್ಟಿಯಲ್ಲಿ ವಿರಾಜಮಾನವಾಗಿದೆ. ಜಗತ್ತಿನ ಅನೇಕ ದೇಶಗಳ ವಾರ್ಷಿಕ ಜಿಡಿಪಿಯನ್ನೂ ಹಿಂದಿಕ್ಕಿದೆ!.

ಎಕಾನಮಿ 360 | ₹ 22,000 ಕೋಟಿ 'ಹೇರ್‌ಕಟ್‌ʼ! ಇದೆಂಥಾ (ಅ)ವ್ಯವಸ್ಥೆ?

ಎರಡು ದಶಕಗಳ ಹಿಂದೆ ಉದ್ಯಮ ವಲಯದಲ್ಲಿ ಮೈಕ್ರೋಸಾಫ್ಟ್, ಗೂಗಲ್, ಆಯಪಲ್‌ನಂತಹ ದೈತ್ಯರ ಮುಂದೆ ಎನ್‌ವಿಡಿಯಾ ಏನೇನೂ ಆಗಿರಲಿಲ್ಲ. ಬಹುತೇಕರಿಗೆ ಕಂಪನಿಯ ಹೆಸರಿನ ಪರಿಚಯವೂ ಇರಲಿಲ್ಲ. ಆದರೆ ಅದರ ಸಂಸ್ಥಾಪಕ ಜೆನ್ಸೆನ್‌ ಹುವಾಂಗ್‌ ಅವರಿಗೆ, ತಾವು ತಯಾರಿಸುತ್ತಿದ್ದ ಚಿಪ್‌ಗಳ ಮೇಲೆ ಹಾಗೂ ಭವಿಷ್ಯದ ತಂತ್ರಜ್ಞಾನದ ಮೇಲೆ ಅಚಲವಾದ ನಂಬಿಕೆಯಿತ್ತು. ಹಲವು ವರ್ಷಗಳು ಅವರು ಲಾಭಕ್ಕಿಂತ ಸಂಶೋಧನೆಗೇ ಹೆಚ್ಚಿನ ಆದ್ಯತೆ ನೀಡಿದ್ದರು. 'ಕುಡಾ' ಎಂಬ ಸಾಫ್ಟ್‌ವೇರ್‌ ರಚಿಸಿ, ಅದಕ್ಕೆ ತಕ್ಕ ಚಿಪ್‌ಗಳನ್ನು ವಿನ್ಯಾಸ ಮಾಡಿ ದಶಕಗಳು ಒಂದೇ ಗುರಿಯತ್ತ ಧ್ಯಾನಸ್ಥರಾಗಿ ಕುಳಿತರು. ಒಂದು ದಿನ ತಮ್ಮ ಉತ್ಪನ್ನಕ್ಕೆ ಜಾಗತಿಕ ಬೇಡಿಕೆ ಬಂದೇ ಬರುತ್ತದೆ ಎನ್ನುವ ದೃಢ ನಂಬಿಕೆ ಅವರಲ್ಲಿತ್ತು. ಅನೇಕ ಬಾರಿ ಟೀಕೆಗಳನ್ನು ಎದುರಿಸಬೇಕಾಯಿತು. ಯಾವಾಗ ಜಗತ್ತಿನೆಲ್ಲೆಡೆ ಚಾಟ್‌ಜಿಪಿಟಿಯಂತಹ ಎಐ ಸುನಾಮಿ ಅಪ್ಪಳಿಸಿತೋ, ಆಗ ಎನ್‌ವಿಡಿಯಾದ ಸುವರ್ಣಯುಗ ಆರಂಭವಾಯಿತು. ಜಗತ್ತಿನ ಪ್ರತಿಯೊಂದು ದೊಡ್ಡ ತಂತ್ರಜ್ಞಾನ ಕಂಪನಿಯೂ ಹುವಾಂಗ್ ಕಂಪನಿಯ ಬಾಗಿಲು ತಟ್ಟಲು ಆರಂಭಿಸಿದವು. ಇಂದು ಅಮೆಜಾನ್, ಮೆಟಾ, ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ಜಗತ್ತಿನ ಯಾವುದೇ ದೈತ್ಯ ಕಂಪನಿಯಿರಲಿ, ಎಐ ಓಟದಲ್ಲಿ ಗೆಲ್ಲಬೇಕಾದರೆ ಅವು ಎನ್‌ವಿಡಿಯಾ ಚಿಪ್‌ಗಳ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಎನ್‌ವಿಡಿಯಾ ಮಾತ್ರವಲ್ಲ; ಜಗತ್ತಿನಲ್ಲಿ ಇಂದು ಮುಂಚೂಣಿಯಲ್ಲಿರುವ ಆಯಪಲ್, ಮೈಕ್ರೋಸಾಫ್ಟ್‌, ಮೆಟಾ, ಸ್ಪೇಸ್‌ಎಕ್ಸ್‌, ಬಿವೈಡಿಯಂತಹ ಯಾವುದೇ ಜಾಗತಿಕ ಕಂಪನಿಯನ್ನು ತೆಗೆದುಕೊಳ್ಳಿ. ಅವು ಒಂದು ನಿರ್ದಿಷ್ಟ ಉತ್ಪನ್ನದ ಮೇಲೆ, ಒಂದು ನಿರ್ದಿಷ್ಟ ಕ್ಷೇತ್ರದ ಮೇಲೆ ತಮ್ಮ ಸಂಪೂರ್ಣ ಶಕ್ತಿಯನ್ನು ವಿನಿಯೋಗಿಸಿ ಪ್ರಾಬಲ್ಯ ಸಾಧಿಸಿವೆ. ಹೊಸ ಮಾರುಕಟ್ಟೆಯನ್ನೇ ಸೃಷ್ಟಿಸಿವೆ. ವಿನೂತನ ಆವಿಷ್ಕಾರಗಳ ಮೂಲಕ ಮನುಕುಲವನ್ನು ತಂತ್ರಜ್ಞಾನದ ಹೊಸ ಮೈಲಿಗಲ್ಲಿಗೆ ಕೊಂಡೊಯ್ದಿವೆ. ಜಾಗತಿಕ ಕಾರ್ಪೊರೇಟ್ ಜಗತ್ತಿನ ಯಶಸ್ಸಿನ ಸೂತ್ರವೇ ಅದು; ದೊಡ್ಡ ಕನಸು, ದೊಡ್ಡ ಬೇಟೆ!

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ಎಕಾನಮಿ 360: ಅಲ್ಲಿ ಎನ್‌ವಿಡಿಯಾ ಕ್ರಾಂತಿ, ನಮ್ಮಲ್ಲಿ ಐಸ್‌ಕ್ರೀಂ ಭ್ರಾಂತಿ!

ಒಂದು ಸಾಲಿನಲ್ಲಿಭಾರತೀಯ ಕಂಪನಿಗಳು ಸಣ್ಣ ಮಾರುಕಟ್ಟೆಗಳ ಬದಲಿಗೆ ಎನ್‌ವಿಡಿಯಾದಂತಹ ಜಾಗತಿಕ ತಾಂತ್ರಿಕ ನಾವೀನ್ಯತೆ ಮತ್ತು ದೈತ್ಯ ತಂತ್ರಜ್ಞಾನ ಕಂಪನಿಗಳನ್ನು ನಿರ್ಮಿಸುವತ್ತ ಗಮನಹರಿಸಬೇಕಿದೆ.

ಏನು? ಏಕೆ? ಹೇಗೆ?


ಎನ್‌ವಿಡಿಯಾ ಕಂಪನಿಯ ಅಭೂತಪೂರ್ವ ಯಶಸ್ಸಿಗೆ ಕಾರಣವೇನು?

ಎನ್‌ವಿಡಿಯಾ ದಶಕಗಳ ಕಾಲ ಸಂಶೋಧನೆ ಮತ್ತು ನಿರ್ದಿಷ್ಟ ತಂತ್ರಜ್ಞಾನದ ಮೇಲೆ ಅಚಲ ನಂಬಿಕೆ ಇಟ್ಟು ಕೆಲಸ ಮಾಡಿತು; ಇಂದು ಎಐ ಕ್ರಾಂತಿಯ ಕಾರಣದಿಂದ ಅದು ವಿಶ್ವದ ಅತ್ಯಮೂಲ್ಯ ಕಂಪನಿಗಳಲ್ಲಿ ಒಂದಾಗಿದೆ.


ರಿಲಯನ್ಸ್ ಕಂಪನಿಯ ಹೊಸ ಐಸ್‌ಕ್ರೀಂ ಮಾರುಕಟ್ಟೆ ಪ್ರವೇಶದ ಉದ್ದೇಶವೇನು?

ರಿಲಯನ್ಸ್ ತನ್ನ ವಿತರಣಾ ಜಾಲ ಮತ್ತು ಬಂಡವಾಳ ಬಳಸಿ ಅಗ್ಗದ ದರದಲ್ಲಿ ಐಸ್‌ಕ್ರೀಂ ಮಾರಾಟ ಮಾಡುವ ಮೂಲಕ ಎಫ್‌ಎಂಸಿಜಿ ವಲಯದಲ್ಲಿ ತನ್ನ ಬೇರುಗಳನ್ನು ಇನ್ನಷ್ಟು ಗಟ್ಟಿಗೊಳಿಸಲು ಯೋಜಿಸಿದೆ.


ಭಾರತದ ದೊಡ್ಡ ಕಾರ್ಪೊರೇಟ್ ಕಂಪನಿಗಳು ಯಾಕೆ ಟೀಕೆಗೆ ಗುರಿಯಾಗುತ್ತಿವೆ?

ದೊಡ್ಡ ಉದ್ಯಮ ಸಮೂಹಗಳು ಹೊಸ ಆವಿಷ್ಕಾರಗಳ ಬದಲಿಗೆ ಈಗಾಗಲೇ ಅಸ್ತಿತ್ವದಲ್ಲಿರುವ ಗ್ರಾಹಕ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಸ್ಪರ್ಧಿಸುತ್ತಿರುವುದು ಭಾರತದ ಆರ್ಥಿಕ ಭವಿಷ್ಯಕ್ಕೆ ಅಡ್ಡಿಯಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.


2047ರ ವಿಕಸಿತ ಭಾರತದ ಕನಸಿಗೆ ಯಾವ ರೀತಿಯ ಉದ್ಯಮಗಳ ಅಗತ್ಯವಿದೆ?

ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕಾದರೆ ಕೇವಲ ಎಫ್‌ಎಂಸಿಜಿ ಬ್ರಾಂಡ್‌ಗಳ ಬದಲಿಗೆ ಸೆಮಿಕಂಡಕ್ಟರ್, ರೋಬೋಟಿಕ್ಸ್ ಮತ್ತು ಡೀಪ್‌ಟೆಕ್‌ನಂತಹ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದ ಕಂಪನಿಗಳು ಸೃಷ್ಟಿಯಾಗಬೇಕು.


ಭಾರತದ ಉದ್ಯಮಿಗಳ ಮುಂದಿರುವ ಪ್ರಮುಖ ಆಯ್ಕೆ ಯಾವುದು?

ಉದ್ಯಮಿಗಳು ತಮ್ಮ ಬಂಡವಾಳ ಮತ್ತು ಸಾಮರ್ಥ್ಯವನ್ನು ಕೇವಲ ಲಾಭದಾಯಕ ಚಿಲ್ಲರೆ ಮಾರುಕಟ್ಟೆಗೆ ಸೀಮಿತಗೊಳಿಸದೆ, ಜಾಗತಿಕ ಆರ್ಥಿಕ ನಕಾಶೆಯನ್ನು ಬದಲಿಸಬಲ್ಲ ನಾವೀನ್ಯತೆಯತ್ತ ಬಳಸಬೇಕಿದೆ.

ಪ್ರಮುಖ ಅಂಕಿಅಂಶಗಳು

5.5 ಟ್ರಿಲಿಯನ್ ಡಾಲರ್ಎನ್‌ವಿಡಿಯಾ ಮಾರುಕಟ್ಟೆ ಮೌಲ್ಯ10 ರೂಪಾಯಿಐಸ್‌ಕ್ರೀಂನ ಆರಂಭಿಕ ಬೆಲೆ2047ಭಾರತದ ಅಭಿವೃದ್ಧಿ ಗುರಿಯ ವರ್ಷ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಈಗ ನಮ್ಮ ದೇಶದ ಕಾರ್ಪೊರೇಟ್ ಕಂಪನಿಗಳ ಕಥೆಗೆ ಬರೋಣ. ಕೆಲವು ದಿನಗಳ ಹಿಂದೆ ಭಾರತದ ಅಗ್ರಗಣ್ಯ ಉದ್ಯಮ ಸಾಮ್ರಾಜ್ಯಗಳಲ್ಲಿ ಒಂದಾದ ರಿಲಯನ್ಸ್‌, 'ಬಾಂಬೆ ಕ್ರೀಮರಿ' ಎಂಬ ಬ್ರ್ಯಾಂಡ್‌ನಡಿ ಐಸ್‌ಕ್ರೀಂ ಮಾರುಕಟ್ಟೆಗೆ ಕಾಲಿಡುವುದಾಗಿ ಘೋಷಿಸಿದೆ. ತನ್ನ 'ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್' ಮೂಲಕ ಮಾರುಕಟ್ಟೆಗೆ ಇಳಿಯುತ್ತಿರುವ ಸಂಸ್ಥೆ, ಕೇವಲ 10 ರೂಪಾಯಿಗೆ ಶುದ್ಧ ಹಾಲಿನ ಕೆನೆಯಿಂದ ಮಾಡಿದ ಐಸ್‌ಕ್ರೀಂ ನೀಡುವುದಾಗಿ ಹೇಳಿದೆ. ಕೋನ್, ಕಪ್, ಟಬ್ ಮತ್ತು ಕ್ಯಾಂಡಿ ರೂಪದಲ್ಲಿ ಸದ್ಯಕ್ಕೆ ಪಶ್ಚಿಮ ಭಾರತದಲ್ಲಿ ಉತ್ಪನ್ನಗಳನ್ನು ಬಿಡುಗಡೆ ಮಾಡಿ, ನಂತರ ಇಡೀ ದೇಶವನ್ನು ಆವರಿಸಿಕೊಳ್ಳುವ ಯೋಜನೆ ಹಾಕಿಕೊಂಡಿದೆ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನವನ್ನು ಕೈಗೆಟುಕುವ ಬೆಲೆಯಲ್ಲಿ ನೀಡುವುದು ಕಂಪನಿಯ ಘೋಷಿತ ಉದ್ದೇಶ. ಹತ್ತೇ ರೂಪಾಯಿಗೆ ಐಸ್‌ಕ್ರೀಂ ನೀಡುವ ಮೂಲಕ ಇತರೆ ಬ್ರ್ಯಾಂಡ್‌ಗಳನ್ನು ಪಕ್ಕಕ್ಕೆ ತಳ್ಳಿ ಎಫ್‌ಎಂಸಿಜಿ ವಲಯದಲ್ಲಿ ತನ್ನ ಬೇರುಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ಲೆಕ್ಕಾಚಾರ ರಿಲಯನ್ಸ್‌ಗೆ ಇದ್ದಂತಿದೆ.

ಎಕಾನಮಿ 360 | ಅಕ್ಷರದ ಜತೆ ಆರ್ಥಿಕ ಜ್ಞಾನ: ಶಾಲೆಯಲ್ಲೇ ಬೇಕು ಷೇರು, ಹೂಡಿಕೆಯ ಪಾಠ

ಕಂಪನಿಯ ಆಡಳಿತ ಮಂಡಳಿಯ ದೃಷ್ಟಿಯಿಂದ ಇದು ಖಂಡಿತವಾಗಿಯೂ ಚಾಣಾಕ್ಷ ಹಾಗೂ ಸಮಂಜಸವಾದ ವ್ಯವಹಾರ ನಿರ್ಧಾರ. ಭಾರತದಲ್ಲಿ ಬಿಸಿಲಿನ ಬೇಗೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದೂ ಸೇರಿದಂತೆ ಹಲವು ಕಾರಣಗಳಿಂದ ಐಸ್‌ಕ್ರೀಂ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ರಿಲಯನ್ಸ್‌ನ ವಿತರಣಾ ಜಾಲ ಮತ್ತು ಬಂಡವಾಳದ ತಾಕತ್ತನ್ನು ನೋಡಿದರೆ, ಮಾರುಕಟ್ಟೆಯಲ್ಲಿರುವ ಪ್ರತಿಸ್ಪರ್ಧಿಗಳೆಲ್ಲರನ್ನೂ ಹಿಂದಿಕ್ಕಿ ಈ ಕ್ಷೇತ್ರದಲ್ಲಿ ಅದು ಹಿಡಿತ ಸಾಧಿಸುವ ಸಾಧ್ಯತೆ ಹೆಚ್ಚಿದೆ. ಇದರಿಂದ ಕಂಪನಿಗೆ ಮತ್ತು ಅದರ ಷೇರುದಾರರಿಗೆ ಭರ್ಜರಿ ಲಾಭವಾಗಬಹುದು.

ಆದರೆ, ಇಲ್ಲಿ ಕಾಡುತ್ತಿರುವ ಪ್ರಶ್ನೆಯೇ ಬೇರೆ.

ಭಾರತದ ಆರ್ಥಿಕತೆಯ ವಿಶಾಲ ದೃಷ್ಟಿಕೋನದಲ್ಲಿ ನಿಂತು ನೋಡಿದಾಗ, ಶತಕೋಟಿ ಡಾಲರ್ ಸಾಮರ್ಥ್ಯದ ರಿಲಯನ್ಸ್‌ನಂತಹ ಬೃಹತ್ ಉದ್ಯಮ ಸಮೂಹ, ತನ್ನ ಅಪಾರ ಬಂಡವಾಳ, ಪ್ರತಿಭೆ ಮತ್ತು ಸಂಶೋಧನಾ ಸಾಮರ್ಥ್ಯವನ್ನು ಕೇವಲ ಮತ್ತೊಂದು ಐಸ್‌ಕ್ರೀಂ ಬ್ರಾಂಡ್ ನಿರ್ಮಿಸಲು ಬಳಸಬೇಕೇ? ಅಥವಾ ಭಾರತದಲ್ಲಿ ಮುಂದಿನ ಎನ್‌ವಿಡಿಯಾ, ಸ್ಪೇಸ್‌ ಎಕ್ಸ್‌ನಂತಹ ಜಾಗತಿಕ ತಂತ್ರಜ್ಞಾನ ದೈತ್ಯ ಕಂಪನಿಯನ್ನು ಕಟ್ಟಲು ಬಳಸಬೇಕೇ?

ಈ ಪ್ರಶ್ನೆ ಕೇವಲ ರಿಲಯನ್ಸ್‌ಗೆ ಮಾತ್ರ ಸೀಮಿತವಲ್ಲ; ಭಾರತದ ಬಹುತೇಕ ದೊಡ್ಡ ಉದ್ಯಮ ಸಮೂಹಗಳಿಗೂ ಅನ್ವಯಿಸುತ್ತದೆ.

ಕಳೆದ ಕೆಲವು ವರ್ಷಗಳಿಂದ ನಮ್ಮ ದೊಡ್ಡ ಉದ್ಯಮಿಗಳು ಸೌಂದರ್ಯ ಉತ್ಪನ್ನಗಳು, ಜ್ಯುವೆಲ್ಲರಿ, ದಿನಸಿ, ಪ್ಯಾಕೇಜ್ಡ್ ಆಹಾರ-ಹೀಗೆ ಈಗಾಗಲೇ ಅಸ್ತಿತ್ವದಲ್ಲಿರುವ ಮಾರುಕಟ್ಟೆಗಳಲ್ಲಿ ಪರಸ್ಪರ ಸ್ಪರ್ಧಿಸುವುದರಲ್ಲೇ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಒಂದು ಕಂಪನಿ ಪ್ರವೇಶಿಸಿದ ಕ್ಷೇತ್ರಕ್ಕೆ ಮತ್ತೊಂದು ಕಂಪನಿ ಕಾಲಿಡುತ್ತಿದೆ. ಸ್ಪರ್ಧೆ ಹೆಚ್ಚುತ್ತಿದೆ. ಇದರಿಂದ ಗ್ರಾಹಕರಿಗೆ ಕೆಲವೊಮ್ಮೆ ಬೆಲೆ ಇಳಿಕೆಯ ಲಾಭವೂ ಸಿಗುತ್ತಿದೆ. ಆದರೆ ಈ ಪೈಪೋಟಿ ಭಾರತದ ಭವಿಷ್ಯವನ್ನು ಬದಲಿಸಬಲ್ಲುದೇ?

ಭಾರತ 2047ರ ಹೊತ್ತಿಗೆ 'ವಿಕಸಿತʼವಾಗುವ ಕನಸು ಕಾಣುತ್ತಿದೆ. ನಮ್ಮದು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕೆಂದರೆ ಕೇವಲ ಹೆಚ್ಚು ಎಫ್‌ಎಂಸಿಜಿ ಬ್ರಾಂಡ್‌ಗಳನ್ನು ಹುಟ್ಟುಹಾಕಿದರೆ ಸಾಲದು. ಜಗತ್ತು ಭಾರತವನ್ನು ಹುಡುಕಿಕೊಂಡು ಬರುವಂತಹ ತಂತ್ರಜ್ಞಾನಗಳು ನಮ್ಮಲ್ಲಿ ಸೃಷ್ಟಿಯಾಗಬೇಕು. ವಿಶ್ವದ ಪ್ರತಿಯೊಂದು ದೇಶವೂ ಅನಿವಾರ್ಯವಾಗಿ ಖರೀದಿಸಬೇಕಾದ ಉತ್ಪನ್ನಗಳನ್ನು ನಾವು ತಯಾರಿಸಬೇಕು. ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್‌, ರೋಬೋಟಿಕ್ಸ್‌, ಕ್ವಾಂಟಮ್ ಕಂಪ್ಯೂಟಿಂಗ್‌, ಜೈವಿಕ ತಂತ್ರಜ್ಞಾನ, ಹೊಸ ಇಂಧನ ತಂತ್ರಜ್ಞಾನ, ವೈದ್ಯಕೀಯ ಸಾಧನಗಳು, ಏರೋಸ್ಪೇಸ್‌ನಂತಹ 'ಡೀಪ್‌ಟೆಕ್‌' ಕ್ಷೇತ್ರಗಳಲ್ಲಿ ಭಾರತ ಜಾಗತಿಕ ನಾಯಕತ್ವ ಸಾಧಿಸಬೇಕು.

₹22,006 ಕೋಟಿ ಸಾಲ, ₹6.5 ಕೋಟಿಗೆ ಇತ್ಯರ್ಥ: ಸುಭಾಷ್ ಚಂದ್ರ ಪ್ರಕರಣದ ಅಸಲಿ ಲೆಕ್ಕ

ಮುಂದಿನ ದಶಕಗಳಲ್ಲಿ ಜಾಗತಿಕ ಆರ್ಥಿಕತೆಯನ್ನು ಮುನ್ನಡೆಸಲಿರುವ ಕ್ಷೇತ್ರಗಳಲ್ಲಿ ಭಾರತ ಇಂದು ಹೂಡಿಕೆ ಮಾಡದಿದ್ದರೆ, ನಾಳೆ ಮತ್ತೆ ತಂತ್ರಜ್ಞಾನವನ್ನು ಆಮದು ಮಾಡಿಕೊಳ್ಳುವ ದೇಶವಾಗಿಯೇ ಉಳಿಯಬೇಕಾಗುತ್ತದೆ. ಅದಕ್ಕೆ ಸರ್ಕಾರದ ಬೆಂಬಲ ಮಾತ್ರ ಸಾಲದು, ನಮ್ಮ ದೈತ್ಯ ಉದ್ಯಮಿಗಳ ದಾರ್ಶನಿಕತೆಯೂ ಬೇಕು.

'ಜಿಯೋ' ಮೂಲಕ ಭಾರತದ ಡಿಜಿಟಲ್ ಕ್ಷೇತ್ರದಲ್ಲಿ ರಿಲಯನ್ಸ್ ತಂದ ಬದಲಾವಣೆ ಸಣ್ಣ ಸಾಧನೆಯೇನಲ್ಲ. ಡೇಟಾ ಬಳಕೆ, ಇಂಟರ್ನೆಟ್ ಪ್ರವೇಶ ಮತ್ತು ಡಿಜಿಟಲ್ ಆರ್ಥಿಕತೆಯಲ್ಲಿ ಅದು ಒಂದು ಯುಗಪ್ರವರ್ತಕ ಹೆಜ್ಜೆಯಾಗಿತ್ತು. ಆದರೆ ಆ ಭರವಸೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಬದಲು, ದಿನಸಿ, ತಂಪು ಪಾನೀಯಗಳು, ಪ್ಯಾಕೇಜ್ಡ್ ಆಹಾರ, ಚಾಕಲೇಟ್ ಮತ್ತು ಇದೀಗ 10 ರೂಪಾಯಿಯ ಐಸ್‌ಕ್ರೀಂ... ಹೀಗೆ ಈಗಾಗಲೇ ಸ್ಥಾಪಿತವಾಗಿರುವ ಗ್ರಾಹಕ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಮತ್ತೊಂದು ಬ್ರ್ಯಾಂಡ್ ಕಟ್ಟುವುದಕ್ಕೇ ಹೆಚ್ಚು ಆದ್ಯತೆ ನೀಡುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಜಿಯೋ ಮೂಲಕ ಭಾರತದ ಡಿಜಿಟಲ್ ಭವಿಷ್ಯವನ್ನು ಬದಲಿಸಿದ ಕಂಪನಿಯಿಂದ ದೇಶ ಇನ್ನಷ್ಟು ದೊಡ್ಡ ಕನಸುಗಳನ್ನು ನಿರೀಕ್ಷಿಸುತ್ತದೆ. ಆದರೆ ಅದೇ ಕಂಪನಿ ಈಗ ಮತ್ತೊಂದು ಐಸ್‌ಕ್ರೀಂ ಬ್ರ್ಯಾಂಡ್ ನಿರ್ಮಿಸುವತ್ತ ಹೆಚ್ಚು ಗಮನ ಹರಿಸುತ್ತಿರುವುದು, ಅದರ ಸಂಶೋಧನಾ ಸಾಮರ್ಥ್ಯ ಮತ್ತು ಬಂಡವಾಳ ಇನ್ನಷ್ಟು ಮಹತ್ವಾಕಾಂಕ್ಷೆಯ ಕ್ಷೇತ್ರಗಳತ್ತ ಹರಿಯಬೇಕಿತ್ತೇ ಎಂಬ ಪ್ರಶ್ನೆಯನ್ನು ಎತ್ತುತ್ತದೆ.

ಒಳನೋಟ | ಮಾದಪ್ಪನ ಕಾಡಿನಲ್ಲಿ ಸಂಘರ್ಷ: ವೀರಪ್ಪನ್ ಹತನಾದರೂ ನಿಲ್ಲದ ಕಳ್ಳಬೇಟೆ

ಉದ್ಯಮ ಸಂಸ್ಥೆಯೊಂದರ ಮೂಲ ಉದ್ದೇಶ ಲಾಭ ಗಳಿಸುವುದು, ಅದರಲ್ಲಿ ಏನೂ ತಪ್ಪಿಲ್ಲ. ಷೇರುದಾರರ ಸಂಪತ್ತನ್ನು ಹೆಚ್ಚಿಸುವುದೂ ಅದರ ಜವಾಬ್ದಾರಿಯೇ. ಆದರೆ ಕೆಲವು ಕಂಪನಿಗಳ ಪಾತ್ರ ಕೇವಲ ಲಾಭ ಗಳಿಸುವುದಕ್ಕಿಂತ ಹೆಚ್ಚಿನದಾಗಿರುತ್ತದೆ. ಅವು ಒಂದು ದೇಶದ ತಾಂತ್ರಿಕ ಸಾಮರ್ಥ್ಯ, ಜಾಗತಿಕ ಪ್ರಭಾವ ಮತ್ತು ಆರ್ಥಿಕ ದಿಕ್ಕನ್ನೇ ನಿರ್ಧರಿಸುವ ಶಕ್ತಿ ಹೊಂದಿರುತ್ತವೆ.

ಭಾರತದ ದೈತ್ಯ ಉದ್ಯಮ ಸಮೂಹಗಳು ಇಂದು ಅಂತಹ ನಿರ್ಣಾಯಕ ಹಂತದಲ್ಲಿವೆ. ಇವರಿಗೆ ಮತ್ತೊಂದು ಐಸ್‌ಕ್ರೀಂ ಬ್ರಾಂಡ್ ಕಟ್ಟುವ ಸಾಮರ್ಥ್ಯವೂ ಇದೆ; ಮನಸ್ಸು ಮಾಡಿದರೆ ಮುಂದಿನ ವಿಶ್ವ ನಾಯಕನಾಗುವ ಕಂಪನಿಯನ್ನು ಕಟ್ಟುವ ಶಕ್ತಿಯೂ ಇದೆ. ಆದರೆ ಅವರ ಆಯ್ಕೆ ಯಾವುದು ಎಂಬುದೇ ಈಗಿರುವ ದೊಡ್ಡ ಪ್ರಶ್ನೆ.

ಭಾರತ ಇಂದು ಎದುರು ನೋಡುತ್ತಿರುವುದು ಚಿಲ್ಲರೆ ಬೇಟೆಗಾರರನ್ನಲ್ಲ; ದೊಡ್ಡ ಕನಸು ಕಾಣುವ, ಹೊಸ ಜಾಗತಿಕ ಮಾರುಕಟ್ಟೆಗಳನ್ನು ಸೃಷ್ಟಿಸುವ, ಜಗತ್ತಿನ ಆರ್ಥಿಕ ನಕಾಶೆಯನ್ನು ಬದಲಿಸಿ ಅಲ್ಲಿ ದೇಶದ ಸ್ಥಾನವನ್ನು ಮೇಲಕ್ಕೇರಿಸುವ ಅಪ್ಪಟ ಉದ್ಯಮಿಗಳನ್ನು.

2047ರಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಬೇಕು ಎಂಬುದು ಕೇವಲ ಸರ್ಕಾರದ ಗುರಿಯಲ್ಲ. ಅದು ಭಾರತದ ಉದ್ಯಮಿಗಳ ಮಹತ್ವಾಕಾಂಕ್ಷೆಯೂ ಆಗಬೇಕು. ಜಗತ್ತು ಭಾರತೀಯ ಕಂಪನಿಗಳಿಂದ ಮತ್ತೊಂದು ಕೋಲಾ ಅಥವಾ ಐಸ್‌ಕ್ರೀಂ ಬ್ರ್ಯಾಂಡ್‌ಗಾಗಿ ಕಾಯುತ್ತಿಲ್ಲ; ಮುಂದಿನ ಎನ್‌ವಿಡಿಯಾ, ಮುಂದಿನ ಸ್ಪೇಸ್‌ಎಕ್ಸ್ ಅಥವಾ ಮುಂದಿನ ಬಿವೈಡಿಗಾಗಿ ಕಾಯುತ್ತಿದೆ. ಆ ಕಂಪನಿ ಭಾರತದಿಂದಲೇ ಬರಬೇಕು ಎಂದು ಕನಸು ಕಾಣುವ ಸಮಯ ಇದು.

ಈರುಳ್ಳಿ ಬೆಲೆ ಏರಿಕೆಯ ಒಳನೋಟ: ಉತ್ಪಾದನೆ, ಪೂರೈಕೆ ಮತ್ತು ಮಾರುಕಟ್ಟೆಯ ಲೆಕ್ಕ
Dailyhunt
Disclaimer: This content has not been generated, created or edited by Dailyhunt. Publisher: Prajavani