Dailyhunt Logo
  • Light mode
    Follow system
    Dark mode
    • Play Story
    • App Story
ಎಂಬಾಪೆ ಮಿಂಚು: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಫ್ರಾನ್ಸ್, ಮೊರಾಕ್ಕೊ ನಿರ್ಗಮನ

ಎಂಬಾಪೆ ಮಿಂಚು: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಫ್ರಾನ್ಸ್, ಮೊರಾಕ್ಕೊ ನಿರ್ಗಮನ

ಬಾಸ್ಟನ್: 2026 ಫಿಫಾ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊರಾಕ್ಕೊ ವಿರುದ್ಧ 2-0 ಗೋಲುಗಳ ಅಂತರದ ಜಯ ಸಾಧಿಸಿರುವ ಫ್ರಾನ್ಸ್, ಸೆಮಿಫೈನಲ್‌ಗೆ ಪ್ರವೇಶಿಸಿದೆ.

ಇದರೊಂದಿಗೆ ಆಫ್ರಿಕಾದ ಬಲಿಷ್ಠ ತಂಡ ಮೊರಾಕ್ಕೊದ ಕನಸು ಭಗ್ನಗೊಂಡಿದೆ.

ಇಲ್ಲಿನ ಪ್ರಖ್ಯಾತ ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ರೋಚಕ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮೊರಾಕ್ಕೊ ತಂಡವನ್ನು ಮಣಿಸಿದ ಫ್ರಾನ್ಸ್ ಸತತ ಮೂರನೇ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿತು.

ಎಂಬಾಪೆ, ಡೆಂಬೆಲೆ ಮಿಂಚು...

ಪಂದ್ಯದ ದ್ವಿತೀಯಾರ್ಧದಲ್ಲಿ ಮಿಂಚಿದ ನಾಯಕ ಕೈಲಿಯನ್ ಎಂಬಾಪೆ ಮತ್ತು ಒಸ್ಮಾನ್‌ ಡೆಂಬೆಲೆ ತಲಾ ಒಂದು ಗೋಲು ಗಳಿಸಿ ಫ್ರಾನ್ಸ್ ಗೆಲುವಿನ ರೂವಾರಿಯೆನಿಸಿದರು.

ಪಂದ್ಯದ ಆರಂಭದಿಂದಲೂ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಫ್ರಾನ್ಸ್ ನಿರಂತರ ಆಕ್ರಮಣ ನಡೆಸಿದರೂ ಮೊರಾಕ್ಕೊ ರಕ್ಷಣಾ ಕೋಟೆಯನ್ನು ಬೇಧಿಸಲು ಸಾಧ್ಯವಾಗಲಿಲ್ಲ. ಈ ನಡುವೆ ಎಂಬಾಪೆ ಪೆನಾಲ್ಟಿ ಅವಕಾಶವನ್ನು ಮಿಸ್ ಮಾಡಿಕೊಂಡರು.

ಆದರೆ ದ್ವಿತೀಯಾರ್ಧದಲ್ಲಿ ಪಂದ್ಯದ ಚಿತ್ರಣವೇ ಬದಲಾಯಿತು. 60ನೇ ನಿಮಿಷದಲ್ಲಿ ಅದ್ಭುತ ಗೋಲು ಗಳಿಸಿದ ಎಂಬಾಪೆ, ಗೋಲ್ಡನ್ ಬೂಟ್ ರೇಸ್‌ನಲ್ಲಿ ಲಯೊನೆಲ್ ಮೆಸ್ಸಿ ದಾಖಲೆಯನ್ನು ಸರಿಗಟ್ಟಿದ್ದಾರೆ.

ಈ ಆಘಾತದಿಂದ ಮೊರಾಕ್ಕೊ ಚೇತರಿಸಿಕೊಳ್ಳುವ ಮುನ್ನವೇ, 66ನೇ ನಿಮಿಷದಲ್ಲಿ ಎಂಬಾಪೆ ನೀಡಿದ ಅಸಿಸ್ಟ್ ಅನ್ನು ಒಸ್ಮಾನ್‌ ಡೆಂಬೆಲೆ ಸುಂದರ ಗೋಲಾಗಿ ಪರಿವರ್ತಿಸಿದ್ದರಿಂದ ಫ್ರಾನ್ಸ್ ತನ್ನ ಮುನ್ನಡೆಯನ್ನು 2-0ಗೆ ಹೆಚ್ಚಿಸಿಕೊಂಡಿತು. ಈ ಬಾರಿಯ ವಿಶ್ವಕಪ್‌ನಲ್ಲಿ ಡೆಂಬೆಲೆಗೆ ಇದು ಐದನೇ ಗೋಲು.

ಪಂದ್ಯದ ಕೊನೆಯ ನಿಮಿಷದವರೆಗೂ ಮೊರಾಕ್ಕೊ ಆಟಗಾರರು ಹೋರಾಟ ನಡೆಸಿದರೂ, ಫ್ರಾನ್ಸ್‌ನ ಅನುಭವಿ ಆಟಗಾರರ ಮುಂದೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ.

2022ರ ವಿಶ್ವಕಪ್ ಸೆಮಿಫೈನಲ್‌ನಲ್ಲೂ ಉಭಯ ತಂಡಗಳು ಮುಖಾಮುಖಿಯಾಗಿದ್ದಲೂ ಗೆಲುವು ಫ್ರಾನ್ಸ್ ಪಾಲಾಗಿತ್ತು. ಹಾಗಿದ್ದರೂ ಸತತ ಎರಡನೇ ಸಲ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಆಫ್ರಿಕಾದ ತಂಡ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ.

ಸೆಮಿಫೈನಲ್‌ನಲ್ಲಿ ಫ್ರಾನ್ಸ್ ತಂಡವು ಸ್ಪೇನ್ ಹಾಗೂ ಬೆಲ್ಜಿಯಂ ನಡುವಣ ವಿಜೇತ ತಂಡವನ್ನು ಎದುರಿಸಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani