ಪ್ರಸಕ್ತ ಸಾಗುತ್ತಿರುವ 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕದ ಆಟಗಾರ ಫೋಲರಿನ್ ಬಾಲೋಗನ್ ಅವರ ರೆಡ್ ಕಾರ್ಡ್ ಅಮಾನತು ಅನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯ ಬಳಿಕ ಫಿಫಾ ಹಿಂಪಡೆದ ನಿರ್ಧಾರವು ಜಾಗತಿಕವಾಗಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಫುಟ್‌ಬಾಲ್ ಮತ್ತು ಫಿಫಾ ವಿಶ್ವಕಪ್ ಇತಿಹಾಸವನ್ನು ತೆಗೆದು ನೋಡಿದಾಗ ಇಂತಹ ಅನೇಕ ವಿವಾದಗಳು ಸಿಗುತ್ತವೆ. ಇದು ಫುಟ್‌ಬಾಲ್ ಕ್ರೀಡೆಯ ಘನತೆಯನ್ನೇ ಪ್ರಶ್ನಿಸುವಂತಿದೆ. ಅಂತಹ ಪ್ರಮುಖ ಐದು ವಿವಾದಗಳು ಇಲ್ಲಿವೆ.
ಮೆಸ್ಸಿ ಮ್ಯಾಜಿಕ್: ಕಳೆದ ವಿಶ್ವಕಪ್ ಫೈನಲ್ ಬಳಿಕ ಮತ್ತೆ ಕಣ್ಣೀರಿಟ್ಟ ದಿಗ್ಗಜಫಿಫಾ ವಿಶ್ವಕಪ್: ಕ್ವಾರ್ಟರ್ ಫೈನಲ್ ಪಂದ್ಯಗಳ ಸಂಪೂರ್ಣ ಚಿತ್ರಣ ಇಲ್ಲಿದೆ1. ಡೀಗೊ ಮರಡೋನಾ ಅವರ 'ಹ್ಯಾಂಡ್ ಆಫ್ ಗಾಡ್' (1986)
ಫುಟ್‌ಬಾಲ್ ಇತಿಹಾಸದ ಅತ್ಯಂತ ಪ್ರಸಿದ್ಧ ಮತ್ತು ಅಷ್ಟೇ ವಿವಾದಾತ್ಮಕ ಗೋಲು ಇದು. 1986ರ ವಿಶ್ವಕಪ್ ಕ್ವಾರ್ಟರ್‌ಫೈನಲ್‌ನಲ್ಲಿ ಅರ್ಜೆಂಟೀನಾ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಿದ್ದವು.
ಏನಿದು ಘಟನೆ?
ಪಂದ್ಯದ ದ್ವಿತೀಯಾರ್ಧದಲ್ಲಿ ಅರ್ಜೆಂಟೀನಾದ ದಿಗ್ಗಜ ಡೀಗೊ ಮರಡೋನಾ ಅವರು ಇಂಗ್ಲೆಂಡ್‌ನ ಗೋಲ್‌ಕೀಪರ್ ಪೀಟರ್ ಶಿಲ್ಟನ್ ಅವರ ತಲೆಯ ಮೇಲಿಂದ ಚೆಂಡನ್ನು ನೆಟ್‌ಗೆ ತಳ್ಳಲು ತಮ್ಮ ಕೈಯನ್ನು (ಹ್ಯಾಂಡ್ ಬಾಲ್) ಬಳಸಿದ್ದರು. ರೆಫರಿ ಇದನ್ನು ಗಮನಿಸದೆ ಗೋಲು ಎಂದು ಘೋಷಿಸಿದರು. ಪಂದ್ಯದ ನಂತರ ಮಾತನಾಡಿದ ಮರಡೋನಾ, 'ಅದು ಸ್ವಲ್ಪ ಮರಡೋನಾ ತಲೆಯಿಂದ ಮತ್ತು ಸ್ವಲ್ಪ ದೇವರ ಕೈಯಿಂದ ಮೂಡಿಬಂದ ಗೋಲು' ಎಂದು ಹೇಳಿದ್ದರು. ಈ ಘಟನೆ ಇಂದಿಗೂ ಇಂಗ್ಲೆಂಡ್ ಫುಟ್‌ಬಾಲ್ ಇತಿಹಾಸದ ಅತ್ಯಂತ ಕಹಿ ಘಟನೆಯಾಗಿದೆ.
2. ಆಂಡ್ರೆಸ್ ಎಸ್ಕೋಬಾರ್ ಹತ್ಯೆ (1994)
ಕ್ರೀಡಾಂಗಣದ ಒಳಗಿನ ತಪ್ಪು ಮೈದಾನದ ಹೊರಗೆ ಆಟಗಾರನೊಬ್ಬನ ಪ್ರಾಣಕ್ಕೇ ಕುತ್ತು ತಂದ ಅತ್ಯಂತ ದುರಂತಮಯ ಘಟನೆ ಇದು.
ಏನಿದು ಘಟನೆ?
1994ರ ವಿಶ್ವಕಪ್‌ನ ಲೀಗ್ ಹಂತದಲ್ಲಿ ಅಮೆರಿಕ ವಿರುದ್ಧದ ಪಂದ್ಯದಲ್ಲಿ ಕೊಲಂಬಿಯಾದ ರಕ್ಷಣಾತ್ಮಕ ಆಟಗಾರ ಆಂಡ್ರೆಸ್ ಎಸ್ಕೋಬಾರ್ ತಪ್ಪು ನಿರ್ಧಾರದಿಂದಾಗಿ ತಮ್ಮದೇ ಗೋಲು ಪೆಟ್ಟಿಗೆಗೆ (ಸೆಲ್ಫ್ ಗೋಲು) ಚೆಂಡನ್ನು ತಳ್ಳಿದರು. ಇದರಿಂದ ಕೊಲಂಬಿಯಾ ಪಂದ್ಯ ಸೋತು, ಟೂರ್ನಿಯಿಂದ ಹೊರಬಿದ್ದಿತು.
ಈ ಸೋಲಿನಿಂದ ಕೊಲಂಬಿಯಾದ ಜೂಜುಕೋರರು ಭಾರಿ ಹಣ ಕಳೆದುಕೊಂಡಿದ್ದರು ಎನ್ನಲಾಗಿದೆ. ಟೂರ್ನಿ ಮುಗಿಸಿ ಸ್ವದೇಶಕ್ಕೆ ಮರಳಿದ 10 ದಿನಗಳಲ್ಲೇ, ಮೆಡೆಲಿನ್ ನಗರದ ನೈಟ್‌ಕ್ಲಬ್ ಹೊರಗಡೆ ಎಸ್ಕೋಬಾರ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಯಿತು. ಈ ಘಟನೆ ಕ್ರೀಡಾ ಜಗತ್ತನ್ನೇ ಕಣ್ಣೀರಲ್ಲಿ ಮುಳುಗಿಸಿತ್ತು.
3. ಎದುರಾಳಿ ಆಟಗಾರ ಎದೆಗೆ ತಲೆಯಿಂದ ಗುದ್ದಿದ ಜಿನೆದಿನ್ ಜಿದಾನೆ (2006)
ಜರ್ಮನಿಯ ಬರ್ಲಿನ್‌ನಲ್ಲಿ 2006ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಆ ಘಟನೆಯು ಫುಟ್‌ಬಾಲ್ ಜಗತ್ತನ್ನು ಬೆಚ್ಚಿ ಬೀಳಿಸಿತ್ತು. ವಿಶ್ವಕಪ್ ಫೈನಲ್‌ನಲ್ಲಿ ಎದುರಾಳಿ ತಂಡದ ಆಟಗಾರನ ಎದೆಗೆ ಫ್ರಾನ್ಸ್‌ನ ಜಿನೆದಿನ್ ಜಿದಾನ್ ಡಿಚ್ಚಿ ಹೊಡೆದ ಆ ಪ್ರಸಂಗ ವಿಶ್ವ ವಿಖ್ಯಾತ ಆಟಗಾರನ ವಿರುದ್ಧ ಜಗತ್ತೇ ಕೆಟ್ಟ ನುಡಿಗಳನ್ನಾಡುವಂತೆ ಮಾಡಿತ್ತು. ಈ ಟೂರ್ನಿಯೊಂದಿಗೆ ನಿವೃತ್ತರಾಗಲು ಸಜ್ಜಾಗಿದ್ದ ಅವರಿಗೆ ಫುಟ್‌ಬಾಲ್ ಪ್ರಿಯರು 'ಕಹಿ ನುಡಿಯ' ವಿದಾಯ ಹೇಳಿದ್ದರು.
ಏನಿದು ವಿವಾದ?
ಇಟಲಿ ವಿರುದ್ಧದ ಫೈನಲ್ ಪಂದ್ಯದ ಹೆಚ್ಚುವರಿ ಸಮಯದಲ್ಲಿ (110ನೇ ನಿಮಿಷ), ಇಟಲಿಯ ಡಿಫೆಂಡರ್ ಮಾರ್ಕೊ ಮ್ಯಾಟೆರಾಜಿ ಅವರ ಎದೆಗೆ ಜಿದಾನೆ ತಮ್ಮ ತಲೆಯಿಂದ ಬಲವಾಗಿ ಗುದ್ದಿದರು. ಮೈದಾನದಲ್ಲೇ ಜಿದಾನೆಗೆ ರೆಡ್ ಕಾರ್ಡ್ ನೀಡಿ ಹೊರಹಾಕಲಾಯಿತು. ಮ್ಯಾಟೆರಾಜಿ ಅವರು ಜಿದಾನೆ ಅವರ ಸಹೋದರಿ ಮತ್ತು ಕುಟುಂಬದ ಬಗ್ಗೆ ಅತ್ಯಂತ ನಿಂದನಾತ್ಮಕವಾಗಿ ಮಾತನಾಡಿದ್ದೇ ಜಿದಾನೆ ಅವರ ಈ ಆಕ್ರೋಶಕ್ಕೆ ಕಾರಣ ಎಂದು ನಂತರ ತಿಳಿದುಬಂದಿತು. ಈ ಕೆಂಪು ಕಾರ್ಡ್‌ನಿಂದಾಗಿ ಫ್ರಾನ್ಸ್ ಪಂದ್ಯದಲ್ಲಿ ಸೋಲನುಭವಿಸಬೇಕಾಯಿತು.
4. 'ಡಿಸ್‌ಗ್ರೇಸ್ ಆಫ್ ಗಿಜಾನ್' (1982)
ಫುಟ್‌ಬಾಲ್ ಇತಿಹಾಸದಲ್ಲಿ ಕ್ರೀಡಾ ಸ್ಫೂರ್ತಿಯನ್ನೇ ಗಾಳಿಗೆ ತೂರಿದ ಅತ್ಯಂತ ನಾಚಿಕೆಗೇಡಿನ ಪಂದ್ಯ ಎಂದು ಇದನ್ನು ಕರೆಯಲಾಗುತ್ತದೆ.
ಏನಿದು ವಿವಾದ?
1982ರ ವಿಶ್ವಕಪ್‌ನಲ್ಲಿ ಪಶ್ಚಿಮ ಜರ್ಮನಿ ಮತ್ತು ಆಸ್ಟ್ರಿಯಾ ತಂಡಗಳು ತಮ್ಮ ಕೊನೆಯ ಲೀಗ್ ಪಂದ್ಯವನ್ನು ಆಡಬೇಕಿತ್ತು. ಪಶ್ಚಿಮ ಜರ್ಮನಿ 1-0 ಅಂತರದಲ್ಲಿ ಗೆದ್ದರೆ ಆಲ್ಜೀರಿಯಾ ಟೂರ್ನಿಯಿಂದ ಹೊರಬಿದ್ದು, ಜರ್ಮನಿ ಮತ್ತು ಆಸ್ಟ್ರಿಯಾ ಎರಡೂ ಮುಂದಿನ ಹಂತಕ್ಕೆ ಅರ್ಹತೆ ಪಡೆಯುತ್ತಿದ್ದವು.
ಪಂದ್ಯದ 10ನೇ ನಿಮಿಷದಲ್ಲಿ ಜರ್ಮನಿ ಗೋಲು ಗಳಿಸಿತು. ಆ ನಂತರದ 80 ನಿಮಿಷಗಳ ಕಾಲ ಎರಡೂ ತಂಡಗಳ ಆಟಗಾರರು ಕೇವಲ ಮೈದಾನದಲ್ಲಿ ಚೆಂಡನ್ನು ಒಬ್ಬರಿಗೊಬ್ಬರು ಪಾಸ್ ಮಾಡಿಕೊಳ್ಳುತ್ತಾ ಸಮಯ ಕಳೆದರೇ ಹೊರತು, ಗೋಲು ಗಳಿಸುವ ಯಾವುದೇ ಪ್ರಯತ್ನ ಮಾಡಲಿಲ್ಲ. ಆಲ್ಜೀರಿಯಾವನ್ನು ಟೂರ್ನಿಯಿಂದ ಹೊರದಬ್ಬಲು ಎರಡೂ ದೇಶಗಳು ಮಾಡಿಕೊಂಡ ರಹಸ್ಯ ಒಪ್ಪಂದ ಇದಾಗಿತ್ತು ಎಂಬ ತೀವ್ರ ಆಕ್ರೋಶ ವ್ಯಕ್ತವಾಯಿತು. ಇದರ ನಂತರವೇ ಫಿಫಾ, ಲೀಗ್ ಹಂತದ ಕೊನೆಯ ಪಂದ್ಯಗಳು ಏಕಕಾಲಕ್ಕೆ ನಡೆಯಬೇಕು ಎಂಬ ನಿಯಮ ತಂದಿತು.
ಫಿಫಾ ವಿಶ್ವಕಪ್: ಗುಂಪು ಹಂತದ ಅಂತಿಮ ಪಂದ್ಯಗಳು ಏಕಕಾಲಕ್ಕೆ ನಡೆಯುತ್ತವೆ ಏಕೆ?ಫಿಫಾ ವಿಶ್ವಕಪ್ 2026: ಏನಿದು 'ಸಡನ್ ಡೆತ್' ನಿಯಮ?5. ಲೂಯಿಸ್ ಸೂರೆಜ್ ವಿವಾದ (2014)
ಉರುಗ್ವೆ ತಂಡದ ಸ್ಟ್ರೈಕರ್ ಲೂಯಿಸ್ ಸೌರೆಜ್ ತಮ್ಮ ಅದ್ಭುತ ಆಟಕ್ಕಿಂತ ಹೆಚ್ಚಾಗಿ ಮೈದಾನದಲ್ಲಿ ಎದುರಾಳಿ ಆಟಗಾರರನ್ನು ಕಚ್ಚುವ ವಿಚಿತ್ರ ವರ್ತನೆಯಿಂದಲೇ ವಿವಾದಕ್ಕೊಳಗಾದವರು.
ಏನಿದು ವಿವಾದ?
2014ರ ವಿಶ್ವಕಪ್‌ನ ಲೀಗ್ ಪಂದ್ಯದಲ್ಲಿ ಇಟಲಿ ವಿರುದ್ಧ ಆಡುವಾಗ ಸೂರೆಜ್ ಅವರು ಇಟಲಿಯ ಡಿಫೆಂಡರ್ ಜಾರ್ಜಿಯೊ ಚಿಲ್ಲಿನಿ ಅವರ ಹೆಗಲಿಗೆ ಬಲವಾಗಿ ಕಚ್ಚಿದರು. ಮೈದಾನದಲ್ಲಿ ರೆಫರಿ ಇದನ್ನು ಗಮನಿಸದಿದ್ದರೂ, ಟಿ.ವಿ ರಿಪ್ಲೇಗಳಲ್ಲಿ ಇದು ಸ್ಪಷ್ಟವಾಗಿ ಬಹಿರಂಗವಾಯಿತು. ಈ ಅಶಿಸ್ತಿನ ವರ್ತನೆಗಾಗಿ ಫಿಫಾ ಸೂರೆಜ್ ಅವರಿಗೆ 4 ತಿಂಗಳ ಕಾಲ ಯಾವುದೇ ಫುಟ್‌ಬಾಲ್ ಚಟುವಟಿಕೆಯಲ್ಲಿ ಭಾಗವಹಿಸದಂತೆ ನಿಷೇಧವನ್ನು ಹೇರಿತ್ತು. ವಿಶೇಷವೆಂದರೆ ಸೌರೆಜ್ ತಮ್ಮ ವೃತ್ತಿಜೀವನದಲ್ಲಿ ಎದುರಾಳಿಗಳನ್ನು ಕಚ್ಚಿ ನಿಷೇಧಕ್ಕೊಳಗಾಗಿದ್ದು ಇದು ಮೂರನೇ ಬಾರಿಯಾಗಿತ್ತು!
(ಆಧಾರ: ಬ್ರಿಟಾನಿಕಾ ಎನ್‌ಸೈಕ್ಲೋಪೀಡಿಯಾ, ದಿ ಜಂಟಲ್‌ಮ್ಯಾನ್ಸ್ ಜರ್ನಲ್, ಫಾಕ್ಸ್ ಸ್ಪೋರ್ಟ್ಸ್, ಫಿಫಾ ಡಿಸಿಪ್ಲಿನರಿ ಕಮಿಟಿ ವರದಿ, ಲಾ ಟೈಮ್ಸ್ ಹಾಗೂ ಅಂತರರಾಷ್ಟ್ರೀಯ ಮಾಧ್ಯಮ ವರದಿಗಳು)

