ಮಯಾಮಿ ಗಾರ್ಡನ್ಸ್: ಇಂಗ್ಲೆಂಡ್ ಫುಟ್‌ಬಾಲ್ ತಂಡವು ಆರು ದಶಕಗಳ ನಂತರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಪದಕ ಗೆಲುವಿನ ಸಂಭ್ರಮ ಆಚರಿಸಿಕೊಂಡಿತು. ಮೂರನೇ ಸ್ಥಾನ ಗಳಿಸಿ ಕಂಚಿನ ಪದಕ ತನ್ನದಾಗಿಸಿಕೊಂಡಿತು.
ಶನಿವಾರ ತಡರಾತ್ರಿ ನಡೆದ ಪ್ಲೇ ಆಫ್ ಪಂದ್ಯದಲ್ಲಿ ಬುಕಾಯೊ ಸಕಾ 'ಹ್ಯಾಟ್ರಿಕ್' ಗೋಲುಗಳ ನೆರವಿನಿಂದ ಇಂಗ್ಲೆಂಡ್ ತಂಡವು 6-4ರಿಂದ ಫ್ರಾನ್ಸ್ ಎದುರು ಜಯಭೇರಿ ಬಾರಿಸಿತು.
ಎರಡು ಗೋಲು ಗಳಿಸಿದ ಫ್ರಾನ್ಸ್ ತಾರೆ ಕೈಲಿಯನ್ ಎಂಬಾಪೆ ವಿಶ್ವಕಪ್ ಫುಟ್‌ಬಾಲ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರನಾದರು. ಒಟ್ಟು 22 ಗೋಲು ಹೊಡೆದಿರುವ ಅವರು ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ (21) ಅವರನ್ನು ಹಿಂದಿಕ್ಕಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ ಅವರು 10 ಗೋಲುಗಳೊಂದಿಗೆ 'ಚಿನ್ನದ ಬೂಟು' ಪಡೆಯುವವರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ.
ಇಂಗ್ಲೆಂಡ್ ತಂಡವು 1966ರಲ್ಲಿ ಚಾಂಪಿಯನ್ ಆಗಿತ್ತು. ಅದರ ನಂತರ ಇದೇ ಮೊದಲ ಬಾರಿಗೆ ಪದಕ ಸಾಧನೆ ಮಾಡಿತು. ಸೆಮಿಫೈನಲ್‌ನಲ್ಲಿ ತಂಡವು ಅರ್ಜೆಂಟೀನಾ ಎದುರು ಸೋತಿತ್ತು.
ಪಂದ್ಯದ ಮೊದಲಾರ್ಧದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ಇಂಗ್ಲೆಂಡ್, 4-0 ಗೋಲುಗಳ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಫ್ರಾನ್ಸ್ ಯೋಜನೆಗಳನ್ನು ವಿಫಲಗೊಳಿಸಿತು. ಬುಕಾಯೊ ಸಕಾ (37ನೇ ನಿಮಿಷ ಮತ್ತು 45+1ನಿ) ಅವರು ಸತತ ಎರಡು ಗೋಲು ಹೊಡೆದರು. ಡಿಕ್ಲಾನ್ ರೈಸ್ (3ನೇ ನಿ) ಮತ್ತು ಎಜ್ರಿ ಕನ್ಸಾ (18ನೇ ನಿ) ಕೂಡ ತಲಾ ಒಂದು ಗೋಲಿನ ಕಾಣಿಕೆ ನೀಡಿದರು.
ದ್ವಿತೀಯಾರ್ಧದಲ್ಲಿ ಮತ್ತೊಮ್ಮೆ ಮಿಂಚಿದ ಸಕಾ( 87ನೇ ನಿ) ಪೆನಾಲ್ಟಿಯನ್ನು ಗೋಲಿನಲ್ಲಿ ಪರಿವರ್ತಿಸಿದರು. ಅದರೊಂದಿಗೆ ಹ್ಯಾಟ್ರಿಕ್ ಸಂಭ್ರಮ ಆಚರಿಸಿಕೊಂಡರು. ಇದೇ ಅವಧಿಯಲ್ಲಿ ಫ್ರಾನ್ಸ್ ಆಟಗಾರರು ಮಿಂಚಿದರು. ಎಂಬಾಪೆ (48 ಮತ್ತು 66ನೇ ನಿಮಿಷ) ಎರಡು ಗೋಲು ಗಳಿಸಿದರು. ಬ್ರಾಡ್ಲಿ ಬಾರ್ಕೋಲಾ ಮತ್ತು ಒಸ್ಮಾನೆ ಡೆಂಬೆಲೆ ತಲಾ ಒಂದು ಗೋಲು ಗಳಿಸಿ ಇಂಗ್ಲೆಂಡ್ ಪಾಳೆಯಕ್ಕೆ ನಿಕಟ ಪೈಫೋಟಿಯೊಡ್ಡಿದರು. ಈ ಹಂತದಲ್ಲಿ ಸ್ಕೋರ್ 5-4ಕ್ಕೆ ಬಂದು ತಲುಪಿತ್ತು.
ಆದರೆ ಪಂದ್ಯದ ಸ್ಟಾಪೇಜ್ ಸಮಯದಲ್ಲಿ (90+8ನೇ ನಿ) ಜೂಡ್ ಬೆಲ್ಲಿಂಗಮ್ ಹೊಡೆದ ಮನಮೋಹಕ ಗೋಲು ಇಂಗ್ಲೆಂಡ್ ತಂಡದ ಗೆಲುವನ್ನು ಖಚಿತಪಡಿಸಿತು.
1982ರ ವಿಶ್ವಕಪ್ ಟೂರ್ನಿಯಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದಿದ್ದ ಪಂದ್ಯದಲ್ಲಿ ಹಂಗರಿ ತಂಡವು 10-1ರಿಂದ ಎಲ್ ಸಾಲ್ವೆಡಾರ್ ವಿರುದ್ಧ ಜಯಿಸಿತ್ತು. ಅದರ ನಂತರ ಈ ಹಂತದ ಪಂದ್ಯಗಳಲ್ಲಿ ಹೆಚ್ಚು ಗೋಲುಗಳು ದಾಖಲಾಗಿದ್ದು ಈ ಬಾರಿಯದ್ದು.
'ನಮ್ಮ ಆಟಗಾರರು ಈ ಸಾಧನೆಯ ಬಗ್ಗೆ ಸಂತಸಪಡುತ್ತಾರೆ. ಆದರೆ ಮೂರನೇ ಸ್ಥಾನ ಪಡೆದಿರುವುದಕ್ಕಾಗಿ ನಾವು ಹೆಮ್ಮೆಪಡಬೇಕಿಲ್ಲ. 18 ತಿಂಗಳುಗಳ ಹಿಂದೆ ನಾವು ಅತ್ಯುನ್ನತ ಪ್ರಶಸ್ತಿ ಜಯದ ಗುರಿಯನ್ನು ಹೊಂದಿದ್ದೆವು' ಎಂದು ಇಂಗ್ಲೆಂಡ್ ಕೋಚ್ ಥಾಮಸ್ ಟಚೆಲ್ ಹೇಳಿದರು.
2018ರ ಚಾಂಪಿಯನ್ ಮತ್ತು ಹೋದ ಸಲದ ರನ್ನರ್ಸ್ ಅಪ್ ತಂಡವಾಗಿದ್ದ ಫ್ರಾನ್ಸ್ ಈ ಬಾರಿ ನಾಲ್ಕನೇ ಸ್ಥಾನ ಪಡೆಯಿತು.
'ಚಿನ್ನದ ಬೂಟು' ಗಳಿಸುವ ಪೈಪೋಟಿಯ ಕುರಿತು ಪ್ರತಿಕ್ರಿಯಿಸಿದ ಕೈಲಿಯನ್ ಎಂಬಾಪೆ, 'ಲಿಯೊ (ಮೆಸ್ಸಿ) ಎಲ್ಲ ಸಲವೂ ಗೋಲು ಹೊಡೆಯುತ್ತಾರೆ. ನಾಳೆ ಅವರು ಖಂಡಿತವಾಗಿಯೂ ಇನ್ನಷ್ಟು ಗೋಲುಗಳನ್ನು ಗಳಿಸುತ್ತಾರೆ. ನನ್ನ ತಂಡಕ್ಕಾಗಿ ಗೋಲು ಗಳಿಸಿದ ತೃಪ್ತಿ ನನಗೆ ದೊಡ್ಡದು' ಎಂದರು.

