ಕಠ್ಮಂಡು: 'ನನ್ನ ಪತಿಗೆ ವಯಸ್ಸಾಗಿದೆ, ಅವರಿಗೆ ನಡೆಯಲು ಸಾಧ್ಯವಿಲ್ಲ. ಹಾಗಿರುವಾಗ ನಾನು ಅವರನ್ನು ಒಂಟಿಯಾಗಿ ಬಿಟ್ಟು ಹೇಗೆ ಹೋಗಲಿ?. ಅವರಿಗೆ ಏನಾಗುತ್ತದೋ ಎಂಬ ಭಯ ನನ್ನನ್ನು ಕಾಡುತ್ತಿದೆ. ಪ್ರವಾಹವೇ ಬರಲಿ, ಇನ್ನೇನೋ ಆಗಲಿ... ನಾನು ಇಲ್ಲಿಯೇ, ನನ್ನ ಪತಿಯ ಜೊತೆಯೇ ಇರುತ್ತೇನೆ..'
ಇದು ಭೀಕರ ಪ್ರವಾಹದಲ್ಲಿ ಪವಾಡಸದೃಶವಾಗಿ ಬದುಕಿದ ಮಹಿಳೆಯೊಬ್ಬರ ನೋವಿನ ನುಡಿ.
ಅದು 2026ರ ಆಗಸ್ಟ್ 26. ಪ್ರಕೃತಿ ತನ್ನ ರೌದ್ರನರ್ತನ ಆರಂಭಿಸಿತ್ತು. 72 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭೋರ್ಗರೆದು ಹರಿದುಬಂದ ಭೀಕರ ಪ್ರವಾಹ ಮತ್ತು ಕೆಸರು ಮಿಶ್ರಿತ ನೀರು ನುವಾಕೋಟ್ ಮತ್ತು ರಸುವಾ ಜಿಲ್ಲೆಗಳ ಹತ್ತಾರು ಸುಂದರ ಹಳ್ಳಿಗಳನ್ನು ಕ್ಷಣಾರ್ಧದಲ್ಲಿ ನುಂಗಿಹಾಕಿತ್ತು. ಒಮ್ಮೆ ಸದಾ ಸಡಗರದಿಂದ ಗಿಜಿಗುಡುತ್ತಿದ್ದ 'ತ್ರಿಶೂಲಿ ಬಜಾರ್' ಎಂಬ ಸುಂದರ ಪಟ್ಟಣ, ಕಣ್ಣು ಮಿಟುಕಿಸುವುದರಲ್ಲಿ ಕೆಸರು ಮಣ್ಣು ಮತ್ತು ಕಟ್ಟಡಗಳ ಅವಶೇಷಗಳ ರಾಶಿಯಾಗಿ ಮಾರ್ಪಟ್ಟಿದೆ.
ಪ್ರಕೃತಿಯ ವಿಕೋಪಕ್ಕೆ ಮನೆ, ಅಂಗಡಿ-ಮುಂಗಟ್ಟುಗಳು ಕೊಚ್ಚಿಕೊಂಡು ಹೋಗಿದ್ದನ್ನು ತಮಾಂಗ್ ಎಂಬ ಮಹಿಳೆ ತಮ್ಮ ಮನೆಯ ಕಿಟಕಿಯಿಂದ ನೋಡಿದ್ದರು. ಆ ಭೀಕರ ದುರಂತದಿಂದ ಅವರು ಮತ್ತು ಅವರ ಪತಿ ಪವಾಡಸದೃಶವಾಗಿ ಬದುಕುಳಿದಿದ್ದರು.
ಆದರೆ, ಇವರ ಸಂಕಷ್ಟ ಇಲ್ಲಿಗೆ ಮುಗಿದಿಲ್ಲ. ಈ ಪ್ರದೇಶದಲ್ಲಿ ಮತ್ತೊಮ್ಮೆ ಪ್ರವಾಹ ಸಂಭವಿಸುವ ಮುನ್ನೆಚ್ಚರಿಕೆ ನೀಡಲಾಗಿದೆ. ಹೀಗಾಗಿ ಇಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಗುತ್ತಿದೆ.
ಪ್ರದೇಶಕ್ಕೆ ಭೇಟಿ ನೀಡಿದ 'ಎನ್‌ಡಿಟಿವಿ' ವರದಿಗಾರ್ತಿ ಸಿಕ್ತಾ ದೇವ್ ಅವರು, 'ಎಲ್ಲರೂ ಸುರಕ್ಷಿತ ಸ್ಥಳಕ್ಕೆ ಓಡುತ್ತಿದ್ದಾರೆ, ನೀವೇಕೆ ಇನ್ನು ಇಲ್ಲೇ ಇದ್ದೀರಿ?' ಎಂದು ಕೇಳಿದಾಗ, ಆ ವೃದ್ಧೆಯ ಕಣ್ಣಾಲಿಗಳು ಒದ್ದೆಯಾಗಿದ್ದವು.
ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿರುವ ಪತಿಯನ್ನು ಒಂಟಿಯಾಗಿ ಬಿಟ್ಟು ಹೋಗಲು ಸಾಧ್ಯವಿಲ್ಲ. ಏನೇ ಆದರೂ ನಾನು ಅವರ ಜೊತೆಯೇ ಇಲ್ಲೇಯೇ ಇರುತ್ತೇನೆ ಎಂದು ಅವರು ಕಣ್ಣೀರಿಟ್ಟಿದ್ದಾರೆ.
ನೇಪಾಳ ಪ್ರವಾಹ | ಮೃತದೇಹ ಹೂಳಲು ನಿರ್ಧಾರ: ಗುರುತು ಪತ್ತೆ ಹಚ್ಚುವುದು ಹೇಗೆ?ಒಂದೆಡೆ ಪ್ರವಾಹ, ಇನ್ನೊಂದು ಕಡೆ ನಡೆಯಲಾಗದ ಪತಿಯನ್ನು ಬಿಟ್ಟು ಜೀವ ಉಳಿಸಿಕೊಳ್ಳಲು ಒಪ್ಪದ ಪತ್ನಿ. ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ವೃದ್ಧರು, ಅಶಕ್ತರು ಮತ್ತು ವಿಶೇಷ ಚೇತನರು ಎದುರಿಸುವ ಸಂಕಷ್ಟಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಇಂತಹ ಸಂಕಷ್ಟದ ಸಮಯದಲ್ಲಿ ರಕ್ಷಣಾ ಪಡೆಗಳು ತಕ್ಷಣವೇ ಧಾವಿಸಿ, ಆ ವೃದ್ಧ ದಂಪತಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಸಿಕ್ತಾ ದೇವ್ ಮನವಿ ಮಾಡಿದ್ದಾರೆ.

