Dailyhunt Logo
  • Light mode
    Follow system
    Dark mode
    • Play Story
    • App Story
EXPLAINER: ಅಮೆರಿಕ-ಇರಾನ್ ಒಪ್ಪಂದದಿಂದ ಭಾರತಕ್ಕೇನು ಲಾಭ? ಇಳಿಯುವುದೇ ತೈಲ ದರ?

EXPLAINER: ಅಮೆರಿಕ-ಇರಾನ್ ಒಪ್ಪಂದದಿಂದ ಭಾರತಕ್ಕೇನು ಲಾಭ? ಇಳಿಯುವುದೇ ತೈಲ ದರ?

ವಾಷಿಂಗ್ಟನ್/ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವೆ ಶಾಶ್ವತ ಶಾಂತಿ ಒಪ್ಪಂದ ಏರ್ಪಟ್ಟಿದ್ದು, ಮುಂಬರುವ ಶುಕ್ರವಾರ (ಜೂನ್ 19) ಅಧಿಕೃತವಾಗಿ ಸಹಿ ಬೀಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಈ ಮಹತ್ವದ ನಿರ್ಧಾರದಿಂದಾಗಿ ಯುದ್ಧದ ಭೀತಿಯಲ್ಲಿದ್ದ ಜಗತ್ತು ನಿಟ್ಟುಸಿರು ಬಿಡುವಂತಾಗಿದ್ದು, ತೈಲ ಹಾಗೂ ಆರ್ಥಿಕ ಹೊಡೆತಕ್ಕೆ ಸಿಲುಕಿದ್ದ ಭಾರತಕ್ಕೆ ಈ ಬೆಳವಣಿಗೆ ದೊಡ್ಡ ನಿರಾಳ ಎನಿಸಿದೆ.

ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ಸಂಘರ್ಷದಿಂದ ಜಾಗತಿಕವಾಗಿ ಆರ್ಥಿಕತೆ ಹಳಿ ತಪ್ಪಿತ್ತು. ಅಮೆರಿಕ, ಇಸ್ರೇಲ್‌ ಮತ್ತು ಇರಾನ್‌ ದೇಶಗಳ ಮಧ್ಯೆ ನಡೆದ ಯುದ್ಧ ಜಾಗತಿಕ ಬಿಕ್ಕಟ್ಟಿಗೆ ಕಾರಣವಾಗಿತ್ತು. ಇರಾನ್ ಪ್ರತಿತಂತ್ರವಾಗಿ ಜಾಗತಿಕ ಇಂಧನ ಸಾಗಣೆಯ ಪ್ರಮುಖ ಮಾರ್ಗವಾದ 'ಹೊರ್ಮುಜ್ ಜಲಸಂಧಿ'ಯನ್ನು ಬಂದ್ ಮಾಡಿತ್ತು. ಜೊತೆಗೆ ಈ ಮಾರ್ಗದಲ್ಲಿ ಸಾಗುವ ಹಡಗುಗಳ ಮೇಲೆ ಭಾರಿ ಪ್ರಮಾಣದ ಶುಲ್ಕ ವಿಧಿಸಿತ್ತು.

ಆದರೆ ಈಗ ಒಪ್ಪಂದದ ಭಾಗವಾಗಿ ಇರಾನ್ ಈ ದಿಗ್ಬಂಧನ ತೆರವುಗೊಳಿಸಲು ಮತ್ತು ಶುಲ್ಕವನ್ನು ರದ್ದುಗೊಳಿಸಲು ಒಪ್ಪಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಬಂದರುಗಳ ಮೇಲಿನ ದಿಗ್ಬಂಧನವನ್ನು ಹಿಂಪಡೆಯಲು ಅಮೆರಿಕ ಕೂಡ ಸಮ್ಮತಿಸಿದೆ ಎಂದು ವರದಿಗಳು ಖಚಿತಪಡಿಸಿವೆ.

ಏನಿದು ಹೊರ್ಮುಜ್ ಜಲಸಂಧಿ ವಿವಾದ?

ಪರ್ಷಿಯನ್ ಮತ್ತು ಒಮಾನ್ ಗಲ್ಫ್ ಸಂಪರ್ಕಿಸುವ ಹೊರ್ಮುಜ್ ಜಲಸಂಧಿಯು ಇರಾನ್ ಪರದಿಯಲ್ಲಿದೆ. ಹೀಗಾಗಿ ಇದರ ಮೇಲಿನ ಸಂಪೂರ್ಣ ನಿಯಂತ್ರಣ ತನಗೆ ಸೇರಿದ್ದು ಎಂದು ಇರಾನ್ ಪ್ರತಿಪಾದಿಸುತ್ತಾ ಬಂದಿದೆ. ಈ ಭಾಗದಲ್ಲಿರುವ ಕನಿಷ್ಠ ಐದು ದ್ವೀಪಗಳು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (IRGC) ನಿಯಂತ್ರಣದಲ್ಲಿವೆ. ಅಲ್ಲದೆ ಅಮೆರಿಕದ ದಾಳಿಯನ್ನು ಎದುರಿಸಲು ಇರಾನ್ ಈ ಜಲಸಂಧಿಯಲ್ಲಿ ನೂರಾರು ಅತ್ಯಾಧುನಿಕ ಸಬ್‌ಮರೀನ್‌, ಯುದ್ಧ ವಿಮಾನಗಳು, ಕ್ಷಿಪಣಿಗಳು, ಲಘು ಡ್ರೋನ್‌ಗಳನ್ನು ನಿಯೋಜಿಸಿತ್ತು.

ಯುದ್ಧ ತಾರಕಕ್ಕೇರಿದಾಗ ಇರಾನ್ ತನ್ನ ಮಿತ್ರ ರಾಷ್ಟ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ದೇಶಗಳ ಹಡಗುಗಳಿಗೆ ತಲಾ 20 ಲಕ್ಷ ಡಾಲರ್ (ಸುಮಾರು ₹16.6 ಕೋಟಿ) ಸಾರಿಗೆ ಶುಲ್ಕ ವಿಧಿಸಿತ್ತು. ಸಣ್ಣ ಹಡಗುಗಳಿಗೆ ಪ್ರತಿ ಬ್ಯಾರೆಲ್ ಕಚ್ಚಾ ತೈಲಕ್ಕೆ 1 ಡಾಲರ್ ಟೋಲ್ ಘೋಷಿಸಿತ್ತು. ಇದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿತ್ತು.

ಭಾರತದ ಮೇಲಾಗುವ ಪರಿಣಾಮಗಳೇನು?

ಭಾರತ ಶೇ 85ರಷ್ಟು ಇಂಧನವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಭಾರತಕ್ಕೆ ಬರುವ ಒಟ್ಟು ಇಂಧನದ ಶೇ 55ರಷ್ಟು ಇದೇ ಮಾರ್ಗವಾಗಿ ಹಾದು ಬರುತ್ತದೆ. ಆದ್ದರಿಂದ ಭಾರತಕ್ಕೆ ಈ ಜಲಸಂಧಿಯೇ ಜೀವಾಳವಾಗಿದೆ. ಇದು ಮುಕ್ತವಾಗುವುದರಿಂದ ಭಾರತದಲ್ಲಿ ತೈಲ ಬಿಕ್ಕಟ್ಟು ನಿವಾರಣೆಯಾಗಿ, ಪೆಟ್ರೋಲ್-ಡೀಸೆಲ್ ದರಗಳು ಗಣನೀಯವಾಗಿ ಇಳಿಕೆಯಾಗಲಿವೆ.

ಹೊರ್ಮುಜ್ ಜಲಸಂಧಿ ಮೂಲಕ ಭಾರತದ ಇಂಧನ ಆಮದಿನ ಚಿತ್ರಣ...

ಕಚ್ಚಾ ತೈಲ: ಭಾರತವು ಪ್ರತಿದಿನ 55 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಮೂಲಕ ವಿಶ್ವದಲ್ಲೇ 3ನೇ ದೊಡ್ಡ ತೈಲ ಗ್ರಾಹಕ ದೇಶವಾಗಿದೆ. ಇದರಲ್ಲಿ 22.7 ಲಕ್ಷ ಬ್ಯಾರೆಲ್ ತೈಲ ಹೊರ್ಮುಜ್ ಜಲಸಂಧಿಯ ಮೂಲಕವೇ ಬರುತ್ತದೆ. ಅಂದರೆ ಒಟ್ಟು ತೈಲ ಆಮದಿನ ಶೇ 40 ರಿಂದ 50ರಷ್ಟು ಭಾಗ ಈ ಮಾರ್ಗವನ್ನು ಅವಲಂಬಿಸಿದೆ.

ನೈಸರ್ಗಿಕ ಅನಿಲ (ಎಲ್‌ಎನ್‌ಜಿ): ಭಾರತ ಸಾಕಷ್ಟು ಪ್ರಮಾಣದಲ್ಲಿ ಎಲ್‌ಎನ್‌ಜಿಯನ್ನು ಆಮದು ಮಾಡಿಕೊಳ್ಳುತ್ತಿದ್ದು ಶೇ 60ರಷ್ಟು ಎಲ್‌ಎನ್‌ಜಿ ಈ ಜಲಸಂಧಿಯ ಮೂಲಕವೇ ಹಾದು ಬರುತ್ತದೆ. ಕತಾರ್, ಒಮಾನ್ ಮತ್ತು ಯುಎಇ ದೇಶಗಳಿಂದ ಈ ಅನಿಲ ಸರಬರಾಜಾಗುತ್ತದೆ.

ಅಡುಗೆ ಅನಿಲ (ಎಲ್‌ಪಿಜಿ): 2025-26ರ ಆರ್ಥಿಕ ವರ್ಷದಲ್ಲಿ ಭಾರತದ ಎಲ್‌ಪಿಜಿ ಬಳಕೆ 31.32 ಮಿಲಿಯನ್ (ದಶಲಕ್ಷ) ಟನ್‌ಗಳಿಗೆ ಏರಿಕೆಯಾಗಿದೆ. ಭಾರತ ಆಮದು ಮಾಡಿಕೊಳ್ಳುವ ಎಲ್‌ಪಿಜಿಯಲ್ಲಿ ಶೇ 85ರಷ್ಟು ಸೌದಿ ಅರೇಬಿಯಾ ಮತ್ತು ಕತಾರ್‌ ದೇಶಗಳಿಂದ ಹೊರ್ಮುಜ್ ಮಾರ್ಗವಾಗಿಯೇ ಬರುತ್ತದೆ.

ಆರ್ಥಿಕತೆಗೆ ಪುನಶ್ಚೇತನ...

ಯುದ್ಧದ ಕಾರಣದಿಂದ ಭಾರತಕ್ಕೆ ಬರಬೇಕಾಗಿದ್ದ ಅರ್ಧದಷ್ಟು ತೈಲ ಈ ಜಲಸಂಧಿಯಲ್ಲೇ ಸಿಲುಕಿಕೊಂಡಿತ್ತು. ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಎಲ್‌ಎನ್‌ಜಿ ಮತ್ತು ಎಲ್‌ಪಿಜಿ ತೀವ್ರ ಕೊರತೆ ಎದುರಾಗಿತ್ತು. ಸೌದಿ ಅರೇಬಿಯಾ, ಯುಎಇ, ಕತಾರ್ ಮತ್ತು ಇರಾಕ್‌ನಿಂದ ಬರುವ ಇಂಧನ ಹಡಗುಗಳು ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶದ ಬಂದರುಗಳನ್ನು ತಲುಪುತ್ತವೆ. ಈಗ ಜಲಸಂಧಿ ಮುಕ್ತವಾಗುತ್ತಿರುವುದರಿಂದ ಭಾರತದ ಆರ್ಥಿಕತೆಗೆ ಆನೆಬಲ ಬಂದಂತಾಗಿದ್ದು, ಹಣದುಬ್ಬರ ನಿಯಂತ್ರಣಕ್ಕೆ ಬರಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕ-ಇರಾನ್ ಶಾಂತಿ ಒಪ್ಪಂದ: ತೈಲ ಬೆಲೆ ಕುಸಿತ, ಜಿಗಿದ ಷೇರುಪೇಟೆ ಇರಾನ್-ಅಮೆರಿಕ ಶಾಂತಿ ಒಪ್ಪಂದ ವಿಳಂಬಕ್ಕೆ ಈ ಆರು ಅಂಶಗಳೇ ಕಾರಣ
Dailyhunt
Disclaimer: This content has not been generated, created or edited by Dailyhunt. Publisher: Prajavani