Dailyhunt Logo
  • Light mode
    Follow system
    Dark mode
    • Play Story
    • App Story
Explainer | ಇರಾನ್ ಯುದ್ಧಕ್ಕೆ ಹೂಥಿ ಪ್ರವೇಶ: ಎಲ್ಲರ ಚಿತ್ತ ಮಂಡೇಬ್ ಜಲಸಂಧಿಯತ್ತ

Explainer | ಇರಾನ್ ಯುದ್ಧಕ್ಕೆ ಹೂಥಿ ಪ್ರವೇಶ: ಎಲ್ಲರ ಚಿತ್ತ ಮಂಡೇಬ್ ಜಲಸಂಧಿಯತ್ತ

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

Explainer | ಇರಾನ್ ಯುದ್ಧಕ್ಕೆ ಹೂಥಿ ಪ್ರವೇಶ: ಎಲ್ಲರ ಚಿತ್ತ ಮಂಡೇಬ್ ಜಲಸಂಧಿಯತ್ತ

ಒಂದು ಸಾಲಿನಲ್ಲಿಹೂಥಿ ಬಂಡುಕೋರರು ಬಬ್‌-ಎಲ್‌-ಮಂಡೇಬ್‌ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದು ಜಾಗತಿಕ ಇಂಧನ ಪೂರೈಕೆ ಮತ್ತು ಭಾರತದ ರಫ್ತು ವಹಿವಾಟಿಗೆ ತೀವ್ರ ಭೀತಿ ಹುಟ್ಟುಹಾಕಿದೆ.

ಪ್ರಮುಖ ಅಂಶಗಳು• ಬಬ್‌-ಎಲ್‌-ಮಂಡೇಬ್‌ ಜಲಸಂಧಿಯ ಮಹತ್ವಈ ಜಲಸಂಧಿಯು ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದು, ವಿಶ್ವದ ಶೇಕಡ 12ರಷ್ಟು ವ್ಯಾಪಾರ ಇದರ ಮೂಲಕವೇ ನಡೆಯುತ್ತದೆ.ಪ್ರಮುಖ ಅಂಕಿಅಂಶಗಳುಶೇಕಡ 12ಜಾಗತಿಕ ವ್ಯಾಪಾರ ಪಾಲುಶೇಕಡ 2ವಿಮಾ ವೆಚ್ಚದ ಏರಿಕೆ4.1 ಮಿಲಿಯನ್ ಬ್ಯಾರೆಲ್ಪ್ರತಿದಿನ ಸಾಗುವ ಪೆಟ್ರೋಲಿಯಂಶೇಕಡ 80ಭಾರತ-ಯುರೋಪ್ ವ್ಯಾಪಾರದ ಪಾಲುಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಹೊರ್ಮುಜ್‌ ಜಲಸಂಧಿಯನ್ನು ಇರಾನ್‌ನ ನಿರ್ಬಂಧದಿಂದ ಮುಕ್ತಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಣಗಾಡುತ್ತಿರುವ ಬೆನ್ನಲ್ಲೇ, ಮತ್ತೊಂದು ಪ್ರಮುಖ ಜಲಮಾರ್ಗವಾದ 'ಬಬ್‌-ಎಲ್‌-ಮಂಡೇಬ್‌' ಈಗ ಯುದ್ಧದ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ.

ಫೆಬ್ರುವರಿ 28ರಂದು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯು ಡ್ರೋನ್ ಮತ್ತು ಕ್ಷಿಪಣಿ ಸಂಘರ್ಷಕ್ಕೆ ನಾಂದಿ ಹಾಡಿತು. ಅಮೆರಿಕ-ಇಸ್ರೇಲ್ ದಾಳಿಗೆ ಪ್ರತೀಕಾರವಾಗಿ ಇರಾನ್, ವಿಶ್ವದ ತೈಲ ಮತ್ತು ಅನಿಲದ ಐದನೇ ಒಂದು ಭಾಗದಷ್ಟು ಪೂರೈಕೆಯಾಗುವ ಹೊರ್ಮುಜ್‌ ಜಲಸಂಧಿಯನ್ನು ಬಹುತೇಕ ಸ್ಥಗಿತಗೊಳಿಸಿದೆ. ಅನುಮತಿ ಇಲ್ಲದ ಯಾವುದೇ ಹಡಗು ಈ ಮಾರ್ಗದಲ್ಲಿ ಸಂಚರಿಸಲು ಪ್ರಯತ್ನಿಸಿದರೆ ದಾಳಿ ನಡೆಸುವುದಾಗಿಯೂ ಇರಾನ್ ಎಚ್ಚರಿಸಿದೆ.

ಇರಾನ್ ಪ್ರಾಬಲ್ಯವೇಕೆ?

ಭೌಗೋಳಿಕ ಕಾರಣಗಳಿಂದಾಗಿ ಇರಾನ್‌ ಹೊರ್ಮುಜ್‌ ಜಲಸಂಧಿ ಮೇಲೆ ನಿಯಂತ್ರಣ ಸಾಧಿಸಿದೆ. ಒಂದು ಬದಿಯಲ್ಲಿ ಬಹ್ರೇನ್, ಕತಾರ್, ಯುಎಇ ಮತ್ತು ಒಮನ್‌ನಂತಹ ಸಣ್ಣ ತೈಲ ಸಮೃದ್ಧ ರಾಷ್ಟ್ರಗಳಿದ್ದರೆ, ಮತ್ತೊಂದು ಬದಿಯಲ್ಲಿ ಇರಾನ್ ಇದೆ. ಇರಾನ್ 32 ಕಿ.ಮೀ. ಅಗಲದ ಜಲಸಂಧಿಯ ಸಂಪೂರ್ಣ ಉತ್ತರ ಕರಾವಳಿಯನ್ನು ನಿಯಂತ್ರಿಸುತ್ತದೆ. ಇದರಿಂದಾಗಿ ಕ್ಷಿಪಣಿ ಮತ್ತು ಡ್ರೋನ್‌ಗಳ ಮೂಲಕ ಹಡಗುಗಳನ್ನು ಸುಲಭವಾಗಿ ಗುರಿಯಾಗಿಸಲು ಅದಕ್ಕೆ ಸಾಧ್ಯವಾಗುತ್ತಿದೆ.

ರಣಾಂಗಣ ಪ್ರವೇಶಿಸಿ ಹೊಸ ಭೀತಿ ಸೃಷ್ಟಿಸಿದ 'ಹೂಥಿ'

ಹೊರ್ಮುಜ್‌ ಜಲಸಂಧಿಯಲ್ಲಿ ಉದ್ವಿಗ್ನತೆ ಮುಂದುವರಿಯುತ್ತಿರುವಂತೆಯೇ, ಜಾಗತಿಕ ಹಡಗು ಸಂಚಾರದ ಮತ್ತೊಂದು ಪ್ರಮುಖ ಮಾರ್ಗವಾದ 'ಬಬ್‌-ಎಲ್‌-ಮಂಡೇಬ್‌' ಜಲಸಂಧಿಯತ್ತ ಇರಾನ್ ಚಿತ್ತ ಹರಿಸಿದ್ದು, ಇದು ಜಾಗತಿಕ ಇಂಧನ ಮತ್ತು ಪೂರೈಕೆ ಸರಪಳಿ ಮೇಲೆ ದುಷ್ಪರಿಣಾಮ ಬೀರುವ ಆತಂಕ ಹೆಚ್ಚಿಸಿದೆ.

ಹೊರ್ಮುಜ್‌ ಜಲಸಂಧಿಯನ್ನು ಸಂಚಾರಕ್ಕೆ ಮುಕ್ತಗೊಳಿಸುವಂತೆ ಒತ್ತಾಯಿಸಿ ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದಾರೆ. ಇದರ ಬೆನ್ನಲ್ಲೇ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗೇರ್ ಗಾಲಿಬಾಫ್ ಮಾತನಾಡಿ, ಹೊರ್ಮುಜ್‌ ರೀತಿಯಲ್ಲೇ ಬಬ್‌-ಎಲ್‌-ಮಂಡೇಬ್‌ ಜಲಸಂಧಿ ಸ್ಥಗಿತಗೊಳಿಸುವ ಇರಾದೆ ಹೊಂದಿರುವುದಾಗಿ ಹೇಳಿಕೆ ನೀಡಿದ್ದಾರೆ.

ವಿಶ್ವದ ಅತ್ಯಂತ ಪ್ರಮುಖ ತೈಲ ಕಾರಿಡಾರ್‌ಗಳಲ್ಲಿ ಒಂದಾದ ಹೊರ್ಮುಜ್‌ ಜಲಸಂಧಿಯ ಮೇಲೆ ಇರಾನ್ ನಿಯಂತ್ರಣ ಮುಂದುವರಿಸುತ್ತಿದ್ದು, ಇದು ಅಂತರರಾಷ್ಟ್ರೀಯ ಹಡಗು ಸಂಚಾರದ ಮೇಲೆ ಒತ್ತಡ ಹೆಚ್ಚಿಸಿದೆ ಮತ್ತು ವೆಚ್ಚ ಹೆಚ್ಚಾಗುವಂತೆ ಮಾಡಿದೆ.

ಇರಾನ್ ಬೆಂಬಲಿತ ಯೆಮನ್‌ನ 'ಹೂಥಿ' ಬಂಡುಕೋರರು 'ಬಬ್‌-ಎಲ್‌-ಮಂಡೇಬ್‌' ಜಲಸಂಧಿಯ ಮೂಲಕ ನಡೆಯುವ ಹಡಗು ಸಂಚಾರಕ್ಕೆ ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಜಾಗತಿಕ ವ್ಯಾಪಾರದ ಶೇಕಡ 12ರಷ್ಟು ಭಾಗ ಈ ಮಾರ್ಗದ ಮೂಲಕವೇ ನಡೆಯುತ್ತದೆ.

ಬಬ್‌-ಎಲ್‌-ಮಂಡೇಬ್‌ ಜಲಸಂಧಿಯ ಸುತ್ತ...

ಬಬ್‌-ಎಲ್‌-ಮಂಡೇಬ್‌ ಜಲಸಂಧಿಯು 32 ಕಿ.ಮೀ. ಅಗಲ ಇದ್ದು, ಕೆಂಪು ಸಮುದ್ರ ಮತ್ತು ಏಡನ್‌ ಕೊಲ್ಲಿ ಹಾಗೂ ಹಿಂದೂ ಮಹಾಸಾಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ಜಲಮಾರ್ಗದ ಒಂದು ಬದಿಯಲ್ಲಿ ಯೆಮನ್ ದೇಶವಿದೆ.

ಇರಾನ್ ಬೆಂಬಲಿತ 'ಆಕ್ಸಿಸ್ ಆಫ್ ರೆಸಿಸ್ಟೆನ್ಸ್'ನ ಭಾಗವಾಗಿರುವ ಯೆಮನ್‌ನ 'ಹೂಥಿ' ಬಂಡುಕೋರರು, ಇತ್ತೀಚೆಗೆ ಬಬ್‌-ಎಲ್‌-ಮಂಡೇಬ್‌ ಜಲಸಂಧಿ ಮೂಲಕ ಹಡಗು ಸಂಚಾರಕ್ಕೆ ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ.

2023ರ ಅಕ್ಟೋಬರ್‌ನಿಂದ ಗಾಜಾದ ಮೇಲೆ ಇಸ್ರೇಲ್ ಯುದ್ಧ ಪ್ರಾರಂಭವಾದಾಗಿನಿಂದ, 'ಹುಥಿ' ಬಂಡುಕೋರರು ಕೆಂಪು ಸಮುದ್ರ ಮತ್ತು ಏಡನ್‌ ಕೊಲ್ಲಿಯಲ್ಲಿ ಕ್ಷಿಪಣಿ, ಡ್ರೋನ್‌ ಮತ್ತು ಸ್ಫೋಟಕಗಳನ್ನು ಬಳಸಿ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡಿದ್ದರು. ಈ ದಾಳಿಗಳು ಇಸ್ರೇಲ್‌ನೊಂದಿಗೆ ಸಂಪರ್ಕ ಹೊಂದಿದ ಹಡಗುಗಳ ಮೇಲೆ ಮಾತ್ರ ಎಂದು ಒತ್ತಿ ಹೇಳಿದ್ದರು.

ಬಬ್‌-ಎಲ್‌-ಮಂಡೇಬ್‌ ಜಲಸಂಧಿ ಮುಚ್ಚಿದರೆ ಭಾರತದ ಮೇಲಾಗುವ ಪರಿಣಾಮವೇನು?

ಜಲಸಂಧಿ ಸಂಪೂರ್ಣವಾಗಿ ಮುಚ್ಚಲು ಸಾಧ್ಯವೇ?

ಹೊರ್ಮುಜ್‌ ಜಲಸಂಧಿಗಿಂತ ಭಿನ್ನವಾಗಿ ಬಬ್‌-ಎಲ್‌-ಮಂಡೇಬ್‌ ಮಾರ್ಗವನ್ನು ಸಂಪೂರ್ಣವಾಗಿ ಮುಚ್ಚುವುದು ಕಷ್ಟ. ಆದರೆ, ಹಡಗುಗಳ ಮೇಲಿನ ದಾಳಿಯ ಭೀತಿಯೇ ದೊಡ್ಡ ಸಮಸ್ಯೆಯಾಗಿದೆ.

2024ರಲ್ಲಿ ಹಡಗು ಸರಕುಗಳ ಮೌಲ್ಯದ ಶೇಕಡ 0.6ರಷ್ಟಿದ್ದ ವಿಮಾ ವೆಚ್ಚವು, ಬಿಕ್ಕಟ್ಟಿನ ನಂತರ ಶೇಕಡ 2ರಷ್ಟು ಏರಿಕೆಯಾಗಿದೆ.

ಹೊರ್ಮುಜ್‌ ಈಗಾಗಲೇ ಮುಚ್ಚಲ್ಪಟ್ಟಿರುವುದರಿಂದ ಬಬ್‌-ಎಲ್‌-ಮಂಡೇಬ್‌ ಮಾರ್ಗದಲ್ಲೂ ಅಡೆತಡೆ ಉಂಟಾದರೆ ಜಾಗತಿಕ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಕೊರತೆ ಉಂಟಾಗಲಿದೆ.

ಹೊರ್ಮುಜ್‌ ಮಾದರಿಯಲ್ಲೇ ಬಬ್‌-ಎಲ್‌-ಮಂಡೇಬ್‌ ಜಲಸಂಧಿಯಲ್ಲೂ ಕಾರ್ಯಾಚರಣೆ ನಡೆಸಲು ಹುಥಿ ಬಂಡುಕೋರರಿಗೆ ಇರಾನ್ ಉತ್ತೇಜನ ನೀಡುತ್ತದೆ. ಬಬ್‌-ಎಲ್‌-ಮಂಡೇಬ್‌ ಜಲಸಂಧಿಯು ಕಿರಿದಾದ ಸ್ಥಳದಲ್ಲಿ ಕೇವಲ 30 ಕಿಲೋಮೀಟರ್ ಅಗಲವಿದೆ. ಇದು ಮೆಡಿಟರೇನಿಯನ್ ಸಮುದ್ರ ಮತ್ತು ಹಿಂದೂ ಮಹಾಸಾಗರವನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ. ಸೌದಿ ಅರೇಬಿಯಾದಿಂದ ನೆದರ್ಲ್ಯಾಂಡ್‌ಗೆ ಹೋಗುವ ತೈಲ ಟ್ಯಾಂಕರ್ ಕೆಂಪು ಸಮುದ್ರದ ಮೂಲಕ ಹೋದರೆ 12,000 ಕಿ.ಮೀ ಪ್ರಯಾಣಿಸಬೇಕು. ಆದರೆ, ಈ ಮಾರ್ಗ ಮುಚ್ಚಲ್ಪಟ್ಟರೆ, ಆಫ್ರಿಕಾ ಖಂಡವನ್ನು ಸುತ್ತಿಕೊಂಡು ನೌಕೆಗಳು 20,000 ಕಿ.ಮೀಗೂ ಹೆಚ್ಚು ದೂರ ಕ್ರಮಿಸಬೇಕಾಗುತ್ತದೆ.ಆರ್ಥಿಕತೆ ಮೇಲೆ ಪರಿಣಾಮ

ಮಂಡೇಬ್‌ ಜಲಸಂಧಿ ಏಕೆ ಮುಖ್ಯ?

ಬಬ್‌-ಎಲ್‌-ಮಂಡೇಬ್‌ ಜಲಸಂಧಿಯನ್ನು ಮುಚ್ಚುವುದರಿಂದ ಜಾಗತಿಕ ವ್ಯಾಪಾರಕ್ಕೆ ಮತ್ತಷ್ಟು ಅಡ್ಡಿಯಾಗಬಹುದು. ಪೆಟ್ರೋಲಿಯಂ ರಫ್ತು ಮಾಡುವ ರಾಷ್ಟ್ರಗಳು ಈ ಪ್ರದೇಶದಿಂದ ತೈಲ ಮತ್ತು ನೈಸರ್ಗಿಕ ಅನಿಲವನ್ನು ಸಾಗಿಸಲು ಬಳಸುವ ಮತ್ತೊಂದು ಪ್ರಮುಖ ಮಾರ್ಗವನ್ನು ಇದು ನಿರ್ಬಂಧಿಸುತ್ತದೆ. ಅಮೆರಿಕದ ಇಂಧನ ಮಾಹಿತಿ ಸಂಸ್ಥೆಯ ಪ್ರಕಾರ, 2024ರಲ್ಲಿ ಪ್ರತಿದಿನ ಅಂದಾಜು 4.1 ಮಿಲಿಯನ್ ಬ್ಯಾರೆಲ್ ಪೆಟ್ರೋಲಿಯಂ ಉತ್ಪನ್ನಗಳು ಈ ಜಲಸಂಧಿಯ ಮೂಲಕ ಸಂಚರಿಸಿವೆ. ಇದಕ್ಕೆ ಹೋಲಿಸಿದರೆ, ಅಂತರರಾಷ್ಟ್ರೀಯ ಇಂಧನ ಸಂಸ್ಥೆಯ ಪ್ರಕಾರ 2025ರಲ್ಲಿ ಸುಮಾರು 20 ಮಿಲಿಯನ್ ಬ್ಯಾರೆಲ್ ಉತ್ಪನ್ನಗಳು ಹೊರ್ಮುಜ್‌ ಜಲಸಂಧಿ ಮೂಲಕ ಸಂಚರಿಸಿವೆ.

ಬಬ್‌-ಎಲ್‌-ಮಂಡೇಬ್‌ ಜಲಸಂಧಿಯು ಪೆಟ್ರೋಲಿಯಂ ರಫ್ತುದಾರರು ಏಷ್ಯಾಕ್ಕೆ ತೈಲವನ್ನು ಸಾಗಿಸಲು ಇರುವ ಪರ್ಯಾಯ ಮಾರ್ಗಗಳಲ್ಲಿ ಒಂದಾಗಿದೆ. ಮ್ಯಾರಿಟೈಮ್ ಇಂಟೆಲಿಜೆನ್ಸ್ ಸಂಸ್ಥೆಯಾದ 'ಕ್ಲೆಪ್ಟರ್' ಅಂಕಿಅಂಶ ಉಲ್ಲೇಖಿಸಿ ಎಬಿಸಿ ನ್ಯೂಸ್ ವರದಿ ಮಾಡಿರುವಂತೆ, ಪ್ರಸ್ತುತ 7 ಮಿಲಿಯನ್ ಬ್ಯಾರೆಲ್ ತೈಲವನ್ನು ಪೈಪ್‌ಲೈನ್ ಮೂಲಕ ಕೆಂಪು ಸಮುದ್ರದ ಬಂದರು ನಗರವಾದ ಸೌದಿ ಅರೇಬಿಯಾದ ಯಾನ್ಬುಗೆ ಸಾಗಿಸಲಾಗುತ್ತದೆ. ಹೀಗೆ ಯಾನ್ಬು ತಲುಪುವ ತೈಲವು ನಂತರ ಕೆಂಪು ಸಮುದ್ರ ಮತ್ತು ಬಬ್‌-ಎಲ್‌-ಮಂಡೇಬ್‌ ಜಲಸಂಧಿಯ ಮೂಲಕ ಬೇರೆಡೆ ಹಾದುಹೋಗುತ್ತದೆ.

ಹೊರ್ಮುಜ್‌ ಬೆನ್ನಲ್ಲೇ ಮತ್ತೊಂದು ಜಲಸಂಧಿ ಬಂದ್‌ ಮಾಡಲು ಮುಂದಾದ ಇರಾನ್‌?

ಭಾರತ & ಪ್ರಪಂಚದ ಮೇಲೆ ಆಗುವ ಪರಿಣಾಮವೇನು?

• ಇರಾನ್ ಬೆಂಬಲಿಸಿ 'ಹೂಥಿ' ಬಂಡುಕೋರರು ಯುದ್ಧದಲ್ಲಿ ಮುಂದುವರಿದರೆ, ಬಬ್‌-ಎಲ್‌-ಮಂಡೇಬ್‌ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಸ್ಥಗಿತಗೊಳ್ಳಬಹುದು. ಇದು ಈಗಾಗಲೇ ಏರಿಕೆಯಾಗಿರುವ ತೈಲ ಬೆಲೆಯನ್ನು ಮತ್ತಷ್ಟು ಹೆಚ್ಚಿಸಲಿದೆ.

• ಹೊರ್ಮುಜ್ ಜಲಸಂಧಿಯು ಭಾರತದ ಇಂಧನ ಆಮದಿಗೆ ಮುಖ್ಯವಾಗಿದ್ದರೆ, ಕೆಂಪು ಸಮುದ್ರದ ಮಾರ್ಗವು ಭಾರತದ ರಫ್ತಿಗೆ (ಮುಖ್ಯವಾಗಿ ಯುರೋಪ್‌ಗೆ) ಅತ್ಯಂತ ಅವಶ್ಯಕವಾಗಿದೆ.

• ಯುರೋಪ್‌ನೊಂದಿಗೆ ಭಾರತ ನಡೆಸುವ ಶೇಕಡ 80ರಷ್ಟು ವ್ಯಾಪಾರ ವಹಿವಾಟು ಈ ಕಾರಿಡಾರ್ ಮೂಲಕವೇ ನಡೆಯುತ್ತದೆ.

• ಹಡಗುಗಳು ಆಫ್ರಿಕಾವನ್ನು ಸುತ್ತಿ ಬರಬೇಕಾದಲ್ಲಿ ಪ್ರಯಾಣವು 14ರಿಂದ 20ದಿನಗಳಷ್ಟು ತಡವಾಗುತ್ತದೆ ಮತ್ತು 4,000ದಿಂದ 6,000 ನ್ಯಾಟಿಕಲ್‌ ಮೈಲು ದೂರವಾಗುತ್ತದೆ.

• ಬಬ್‌-ಎಲ್‌-ಮಂಡೇಬ್‌ ಜಲಸಂಧಿಯನ್ನು ಬಂದ್ ಮಾಡಿದ್ದಲ್ಲಿ ಸರಕು ಸಾಗಣೆ ವೆಚ್ಚ ಹೆಚ್ಚಳವಾಗುತ್ತದೆ. ಭಾರತದ ಕೃಷಿ ಉತ್ಪನ್ನಗಳು ಮತ್ತು ಜವಳಿ ರಫ್ತಿನ ಮೇಲೆ ಇದು ತೀವ್ರ ಪರಿಣಾಮ ಬೀರಲಿದೆ.

ಒಟ್ಟಾರೆಯಾಗಿ, ಜಾಗತಿಕ ಪೂರೈಕೆ ಸರಪಳಿಯು ಈಗಾಗಲೇ ಸಂಕಷ್ಟದಲ್ಲಿರುವಾಗ ಹೂಥಿಗಳ ಈ ನಡೆ ಆರ್ಥಿಕತೆಗೆ ಮತ್ತಷ್ಟು ಪೆಟ್ಟು ನೀಡುವ ಸಾಧ್ಯತೆಯಿದೆ.

ಯಾರು ಈ ಹೂಥಿಗಳು?

ಹೂಥಿಗಳು ಯೆಮನ್‌ನ ಶಿಯಾ ಮುಸ್ಲಿಂ ಅಲ್ಪಸಂಖ್ಯಾತರಾದ 'ಝೈದಿ'ಗಳನ್ನು ಪ್ರತಿನಿಧಿಸುವ ಒಂದು ಧಾರ್ಮಿಕ ಗುಂಪು. ಇವರು ಪಶ್ಚಿಮ ಏಷ್ಯಾದಲ್ಲಿ ಇರಾನ್‌ನ ಮಿತ್ರಕೂಟ 'ಆಕ್ಸಿಸ್ ಆಫ್ ರೆಸಿಸ್ಟೆನ್ಸ್'ನ ಭಾಗವಾಗಿದ್ದಾರೆ. ಗಾಜಾದ ಹಮಾಸ್ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ಬಂಡುಕೋರರು ಕೂಡ ಇದೇ ಮೈತ್ರಿಕೂಟದಲ್ಲಿದ್ದಾರೆ. ಇಸ್ರೇಲ್ ಈಗಾಗಲೇ ಹಮಾಸ್ ಮತ್ತು ಹಿಜ್ಬುಲ್ಲಾದ ಶಕ್ತಿಯನ್ನು ಗಣನೀಯವಾಗಿ ಕುಗ್ಗಿಸಿರುವುದರಿಂದ, ಸದ್ಯಕ್ಕೆ ಹೂಥಿಗಳೇ ಇರಾನ್‌ನ ಪ್ರಬಲ ಮಿತ್ರರಾಗಿ ಉಳಿದಿದ್ದಾರೆ.

1990ರ ದಶಕದಲ್ಲಿ ಹುಸೇನ್ ಬದ್ರೆದ್ದೀನ್ ಅಲ್-ಹೂಥಿಯಿಂದ ಸ್ಥಾಪಿಸಲ್ಪಟ್ಟ ಈ ಚಳವಳಿಯು ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಹೋರಾಡುವ ಗುರಿ ಹೊಂದಿದೆ. 'ದೇವರು ದೊಡ್ಡವನು...ಅಮೆರಿಕಕ್ಕೆ ಸಾವು, ಇಸ್ರೇಲ್‌ಗೆ ಸಾವು, ಯಹೂದಿಗಳಿಗೆ ಶಾಪ, ಇಸ್ಲಾಂಗೆ ಜಯ' ಎಂಬುದು ಹೂಥಿ ಘೋಷವಾಕ್ಯ.

Dailyhunt
Disclaimer: This content has not been generated, created or edited by Dailyhunt. Publisher: Prajavani