ನ್ಯೂಜೆರ್ಸಿ: ಫುಟ್‌ಬಾಲ್ ತಾರೆ ಕಿಲಿಯನ್ ಎಂಬಾಪೆ ಅವರ ಆಕರ್ಷಕ ಎರಡು ಗೋಲುಗಳ ನೆರವಿನಿಂದ ಅಬ್ಬರಿಸಿದ ಫ್ರಾನ್ಸ್ ತಂಡ, ಇಲ್ಲಿ ನಡೆದ ಫಿಫಾ ವಿಶ್ವಕಪ್‌ನ 'ಐ' ಗುಂಪಿನ ಪಂದ್ಯದಲ್ಲಿ ಸೆನೆಗಲ್ ವಿರುದ್ಧ 3-1 ಗೋಲುಗಳ ಭರ್ಜರಿ ಜಯ ದಾಖಲಿಸಿದೆ.
ಈ ಪಂದ್ಯದಲ್ಲಿ ಎರಡು ಗೋಲುಗಳನ್ನು ಹೊಡೆಯುವ ಮೂಲಕ ಎಂಬಾಪೆ ಫ್ರಾನ್ಸ್ ಪರ ಅತಿ ಹೆಚ್ಚು ಗೋಲು ಗಳಿಸಿದ ಸಾರ್ವಕಾಲಿಕ ದಾಖಲೆ ಬರೆದರು.
ಪಂದ್ಯದ ಮೊದಲಾರ್ಧದಲ್ಲಿ ಸೆನೆಗಲ್ ಬಲಿಷ್ಠವಾಗಿ ಕಂಡುಬಂದಿತಾದರೂ, ದ್ವಿತೀಯಾರ್ಧದಲ್ಲಿ ಪಾರಮ್ಯ ಮೆರೆದ ಮಾಜಿ ಚಾಂಪಿಯನ್ ಫ್ರಾನ್ಸ್ ಸಂಘಟಿತ ಆಟದ ಮೂಲಕ ಪಂದ್ಯವನ್ನು ತನ್ನದಾಗಿಸಿಕೊಂಡಿತು.
ಫ್ರಾನ್ಸ್ 66ನೇ, 82ನೇ ನಿಮಿಷ ಮತ್ತು ಪಂದ್ಯದ ಕೊನೆಯ ಕ್ಷಣದಲ್ಲಿ ಮೂರು ಗೋಲುಗಳನ್ನು ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ಫ್ರಾನ್ಸ್ ಪರವಾಗಿ ಎಂಬಾಪೆ 2 ಹಾಗೂ ಬ್ರಾಡ್ಲಿ ಬಾರ್ಕೋಲಾ 1 ಗೋಲು ಗಳಿಸಿದರು. ಸೆನಗಲ್‌ಗೆ ಯಾವುದೇ ಗೋಲು ಹೊಡೆಯಲು ಸಾಧ್ಯವಾಗಲಿಲ್ಲ.
ಈ 2 ಗೋಲುಗಳೊಂದಿಗೆ ಎಂಬಾಪೆ ತಮ್ಮ ಅಂತರರಾಷ್ಟ್ರೀಯ ಫುಟ್ಬಾಲ್ ಜೀವನದಲ್ಲಿ 58 ಗೋಲುಗಳ ಸಾಧನೆ ಮಾಡಿದರು. ಲಿವಿಯರ್ ಜಿರೂಡ್ ಅವರ ದಾಖಲೆಯನ್ನು ಮುರಿದು, ಫ್ರಾನ್ಸ್ ಪರ ಅತಿ ಹೆಚ್ಚು ಗೋಲುಗಳಿಸಿದ ಆಟಗಾರ ಎನಿಸಿಕೊಂಡರು. ಅಷ್ಟೇ ಅಲ್ಲದೆ, ವಿಶ್ವಕಪ್‌ನಲ್ಲಿ ತಮ್ಮ ಒಟ್ಟು ಗೋಲುಗಳ ಸಂಖ್ಯೆಯನ್ನು 14ಕ್ಕೆ ಹೆಚ್ಚಿಸಿಕೊಂಡರು.
ಹಾಲೆಂಡ್ ಮಿಂಚು; ನಾರ್ವೆಗೆ ಗೆಲುವು...
'ಐ' ಗುಂಪಿನ ಮತ್ತೊಂದು ಪಂದ್ಯದಲ್ಲಿ ಇರಾಕ್ ವಿರುದ್ಧ ನಾರ್ವೆ 4-1 ಗೋಲುಗಳ ಭರ್ಜರಿ ಜಯ ಸಾಧಿಸಿತು. ನಾರ್ವೆ ಪರ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ಎರ್ಲಿಂಗ್ ಹಾಲೆಂಡ್ ಎರಡು ಗೋಲು ಗಳಿಸುವ ಮೂಲಕ ಮಿಂಚಿದರು.
29ನೇ ನಿಮಿಷದಲ್ಲಿ ಹಾಲೆಂಡ್ ಮೊದಲ ಗೋಲು ಗಳಿಸಿದರೆ, 37ನೇ ನಿಮಿಷದಲ್ಲಿ ಇರಾಕ್ ಪರ ಹುಸೇನ್ ಸಹ ಗೋಲು ಗಳಿಸುವ ಮೂಲಕ ಸಮಬಲ ತಂದರು. ಆದರೆ ದ್ವಿತೀಯಾರ್ಧದಲ್ಲಿ ಇರಾಕ್ ಗೋಲ್‌ಕೀಪರ್ ಜಲಾಲ್ ಹಸನ್ ಮಾಡಿದ ತಪ್ಪಿನಿಂದಾಗಿ ಹಾಲೆಂಡ್ ಸುಲಭವಾಗಿ ಎರಡನೇ ಗೋಲು ಪಡೆಯಿತು. ಪಂದ್ಯದ ಕೊನೆಯಲ್ಲಿ ಮತ್ತೆ ಎರಡು ಗೋಲುಗಳನ್ನು ಹೊಡೆಯುವ ಮೂಲಕ ನಾರ್ವೆ ಸುಲಭ ಜಯ ದಾಖಲಿಸಿತು.
ಫಿಫಾ ವಿಶ್ವಕಪ್ 2026: ಉದ್ಘಾಟನಾ ಪಂದ್ಯದಲ್ಲೇ ಮೂರು ರೆಡ್ ಕಾರ್ಡ್!ಫಿಫಾ ವಿಶ್ವಕಪ್ 2026: ಅಮೆರಿಕ, ಮೆಕ್ಸಿಕೊ, ಕೆನಡಾ ಮೈದಾನಗಳ ವೈಶಿಷ್ಟ್ಯವೇನು?
