Dailyhunt Logo
  • Light mode
    Follow system
    Dark mode
    • Play Story
    • App Story
ಫಿಫಾ ವಿಶ್ವಕಪ್ 2026: ಉದ್ಘಾಟನಾ ಪಂದ್ಯದಲ್ಲೇ ಮೂರು ರೆಡ್ ಕಾರ್ಡ್!

ಫಿಫಾ ವಿಶ್ವಕಪ್ 2026: ಉದ್ಘಾಟನಾ ಪಂದ್ಯದಲ್ಲೇ ಮೂರು ರೆಡ್ ಕಾರ್ಡ್!

ಮೆಕ್ಸಿಕೊ ಸಿಟಿ: ಫಿಫಾ ವಿಶ್ವಕಪ್ 2026ರ ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2-0 ಗೋಲುಗಳ ಭರ್ಜರಿ ಜಯ ಸಾಧಿಸುವ ಮೂಲಕ ಮೆಕ್ಸಿಕೊ ಶುಭಾರಂಭ ಮಾಡಿತು.

80 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ತುಂಬಿದ್ದ ಅಝಟೆಕಾ ಕ್ರೀಡಾಂಗಣದಲ್ಲಿ ಮೆಕ್ಸಿಕೊ ತಂಡ ಗೆದ್ದು ಬೀಗಿದರೂ 90 ನಿಮಿಷಗಳ ಆಟದ ಅವಧಿಯಲ್ಲಿ ರೆಫರಿ ತೀರ್ಪು ಹೆಚ್ಚು ಚರ್ಚೆಗೆ ಗ್ರಾಸವಾಯಿತು.

ಪಂದ್ಯದ ದ್ವಿತೀಯಾರ್ಧದಲ್ಲಿ ಮೈದಾನದಲ್ಲಿ ಹೈಡ್ರಾಮಾ ನಡೆಯಿತು. ಪಂದ್ಯದ ರೆಫರಿ ವಿಲ್ಟನ್ ಸಂಪಾಯೊ ಅವರು ಮೂರು 'ರೆಡ್ ಕಾರ್ಡ್'ಗಳನ್ನು ಪ್ರದರ್ಶಿಸಿದರು. ರೆಫರಿಯ ಈ ನಿರ್ಧಾರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.

ಫಿಫಾದ ನೂತನ ನಿಯಮಾವಳಿಗಳ ಪ್ರಕಾರ ಆಟಗಾರರು ಮತ್ತು ವ್ಯವಸ್ಥಾಪಕರು ಮೈದಾನದಲ್ಲಿ ನಿಯಮ ಉಲ್ಲಂಘನೆ ತಡೆಗೆ ಕಠಿಣ ನಿಯಮಗಳನ್ನು ರೂಪಿಸಲಾಗಿದೆ. ಹೊಸ ನಿಯಮದಂತೆ, ಆಟಗಾರರಿಗೆ ತಪ್ಪು ಕಾರ್ಡ್ ನೀಡಿದ್ದಲ್ಲಿ ವಿಡಿಯೊ ಅಸಿಸ್ಟೆಂಟ್ ರೆಫರಿ (VAR) ಹಸ್ತಕ್ಷೇಪ ಮಾಡಬಹುದಾಗಿದೆ. ಆದರೆ, ಈ ಪಂದ್ಯದಲ್ಲಿ ನೀಡಲಾದ ಮೂರೂ ರೆಡ್ ಕಾರ್ಡ್‌ಗಳನ್ನು ವಿಎಆರ್ ಕೂಡ ವಾಪಸ್ ಪಡೆಯಲಿಲ್ಲ. ಇದರಿಂದ ಫಿಫಾ ನಿಯಮಗಳು ಈ ಬಾರಿ ಹೆಚ್ಚು ಕಠಿಣವಾಗಿವೆ ಎಂಬ ಮಾತುಗಳ ಬಗ್ಗೆಯೂ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.

ಮೊದಲ ರೆಡ್ ಕಾರ್ಡ್: ಪಂದ್ಯದ 50ನೇ ನಿಮಿಷದಲ್ಲಿ ಮೆಕ್ಸಿಕೊದ ಮಿಡ್‌ಫೀಲ್ಡರ್ ಬ್ರಿಯಾನ್‌ನನ್ನು ತಡೆಯುವ ಯತ್ನದಲ್ಲಿ ದಕ್ಷಿಣ ಆಫ್ರಿಕಾದ ಮಿಡ್‌ಫೀಲ್ಡರ್ ಸಿಥೋಲ್, ಬ್ರಿಯಾನ್‌ನನ್ನು ಕೆಳಗೆ ತಳ್ಳಿದರು. ಗೋಲು ಗಳಿಸುವ ಅವಕಾಶವನ್ನು ತಪ್ಪಿಸಿದ್ದಕ್ಕಾಗಿ ರೆಫರಿ ತಕ್ಷಣವೇ ಸಿಥೋಲ್‌ಗೆ ರೆಡ್ ಕಾರ್ಡ್ ತೋರಿಸಿ ಮೈದಾನದಿಂದ ಹೊರಗಟ್ಟಿದರು.

ಎರಡನೇ ರೆಡ್ ಕಾರ್ಡ್: ಪಂದ್ಯದ 84ನೇ ನಿಮಿಷದಲ್ಲಿ ನಡೆದ ಘಟನೆ ತೀವ್ರ ವಿವಾದಕ್ಕೆ ಕಾರಣವಾಯಿತು. ದಕ್ಷಿಣ ಆಫ್ರಿಕಾದ ಥೆಂಬಾ ಝ್ವಾನೆ ಅವರ ಕೈ ಮೆಕ್ಸಿಕೊದ ರಾಬರ್ಟೊ ಅಲ್ವಾರಾಡೊ ಮುಖಕ್ಕೆ ತಗುಲಿತ್ತು. ವಿಡಿಯೊ ಪರಿಶೀಲನೆಯಲ್ಲಿ ಕೈ ಮುಷ್ಟಿಯಾಗಿರದೆ ತೆರೆದಿರುವುದು ಕಂಡುಬಂದಿತು. ಆದಾಗ್ಯೂ, ಇದು ಹಿಂಸಾತ್ಮಕ ನಡವಳಿಕೆ ಎಂದು ಪರಿಗಣಿಸಿದ ರೆಫರಿ, ಝ್ವಾನೆಗೆ ರೆಡ್ ಕಾರ್ಡ್ ನೀಡಿದರು.

ಮೂರನೇ ರೆಡ್ ಕಾರ್ಡ್: ಪಂದ್ಯದ ಹೆಚ್ಚುವರಿ ಸಮಯದಲ್ಲಿ ಮೆಕ್ಸಿಕೊ ತಂಡಕ್ಕೂ ರೆಡ್ ಕಾರ್ಡ್ ಬಿಸಿ ತಟ್ಟಿತು. ಚೆಂಡಿನ ನಿಯಂತ್ರಣದಲ್ಲಿದ್ದ ಖುಲಿಸೊ ಮುಡಾವ್ ಅವರ ಓಟಕ್ಕೆ ಅಡ್ಡಿಪಡಿಸಿದ ಮೆಕ್ಸಿಕೊದ ಡಿಫೆಂಡರ್ ಸೀಸರ್ ಮಾಂಟೆಸ್ ಹೊರ ನಡೆಯಬೇಕಾಯಿತು. ಇದು ಫೆನಾಲ್ಟಿ ಬಾಕ್ಸ್‌ನ ಹೊರಗೆ ನಡೆದಿದ್ದರಿಂದ ದಕ್ಷಿಣ ಆಫ್ರಿಕಾಕ್ಕೆ ಫೆನಾಲ್ಟಿ ಅವಕಾಶ ಸಿಗಲಿಲ್ಲ.

ಒಂದೇ ಪಂದ್ಯದಲ್ಲಿ ಮೂರು ರೆಡ್ ಕಾರ್ಡ್‌ಗಳು ಬಳಕೆಯಾಗಿರುವುದು ಈ ಬಾರಿಯ ವಿಶ್ವಕಪ್‌ನಲ್ಲಿ ದಾಖಲೆಯಾಯಿತು. 2006ರ ವಿಶ್ವಕಪ್‌ನಲ್ಲಿ 64 ಪಂದ್ಯಗಳಲ್ಲಿ 28 ರೆಡ್ ಕಾರ್ಡ್‌ಗಳನ್ನು ನೀಡಲಾಗಿತ್ತು. ಆದರೆ ಈ ಬಾರಿ ಹೆಚ್ಚುವರಿ 40 ಪಂದ್ಯಗಳು ಇರುವುದರಿಂದ ಹಾಗೂ ಕಠಿಣ ನಿಯಮಗಳಿಂದ ರೆಡ್ ಕಾರ್ಡ್‌ಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಫಿಫಾ ವಿಶ್ವಕಪ್‌ಗೆ ಟ್ರಂಪ್ 'ರೆಡ್ ಕಾರ್ಡ್': ಅಮೆರಿಕ ವಲಸೆ ನೀತಿಯೇ ದೊಡ್ಡ ಸಮಸ್ಯೆಫಿಫಾ ವಿಶ್ವಕಪ್ ಆಡಿದ್ದ ಕ್ರಿಕೆಟ್ ದಂತಕಥೆ: ಕಾಲ್ಚಂಡಿನ ಆಟದ ಕೌತುಕತದ ಸಂಗತಿಗಳಿವು
Dailyhunt
Disclaimer: This content has not been generated, created or edited by Dailyhunt. Publisher: Prajavani