ಚಿತ್ರರಂಗದಲ್ಲಿ ಕಲಾವಿದರು ಮತ್ತು ನಿರ್ಮಾಣ ಸಂಸ್ಥೆಗಳ ನಡುವೆ ಸಂಭಾವನೆ ವಿಚಾರವಾಗಿ ನಡೆಯುವ ವಿವಾದಗಳು ಹೊಸದೇನಲ್ಲ. ಆದರೆ, ಹಣದ ಕಿರಿಕಿರಿಗಾಗಿ ನಟ-ನಟಿಯರು ತಾವು ನಟಿಸಿದ ಪಾತ್ರಕ್ಕೆ ತಾವೇ ಡಬ್ಬಿಂಗ್ ಮಾಡುವ ಹಕ್ಕನ್ನು ಕಸಿದುಕೊಳ್ಳುವ ಚಿತ್ರರಂಗದ ಇತ್ತೀಚಿನ ಧೋರಣೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಆರಂಭವಾಗಿದೆ.
ಇತ್ತೀಚೆಗೆ ನಟ ಪ್ರಜ್ವಲ್ ದೇವರಾಜ್ ನಟನೆಯ ಕರಾವಳಿ ಸಿನಿಮಾದ ಡಬ್ಬಿಂಗ್ ವಿವಾದ ಮುನ್ನೆಲೆಗೆ ಬಂದ ಬೆನ್ನಲ್ಲೇ, ಚಿತ್ರರಂಗದಲ್ಲಿ ಲಿಂಗ ತಾರತಮ್ಯವಿಲ್ಲದೆ ಎಲ್ಲ ಕಲಾವಿದರಿಗೂ ನ್ಯಾಯ ಸಿಗಬೇಕು ಎಂಬ ಆಗ್ರಹ ಕೇಳಿಬಂದಿದೆ. ಈ ಕುರಿತು ನಟಿ ರಕ್ಷಿತಾ ಪ್ರೇಮ್ ಅವರು ಸಾಮಾಜಿಕ ಮಾಧ್ಯಮದ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಇಡಿಯಟ್ ಚಿತ್ರದ ಫಸ್ಟ್‌ಲುಕ್ ಮೂಲಕ ರಕ್ಷಿತಾ ಹುಟ್ಟುಹಬ್ಬಕ್ಕೆ ಶುಭಕೋರಿದ ಪ್ರೇಮ್ ಪುತ್ರನ ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟಿ ರಕ್ಷಿತಾ ಪ್ರೇಮ್: ಚಿತ್ರಗಳು ಇಲ್ಲಿವೆ
ನಟಿ ರಕ್ಷಿತಾ ಪ್ರೇಮ್ ಹಂಚಿಕೊಂಡ ಪೋಸ್ಟ್‌ನಲ್ಲಿ ಏನಿದೆ?
'ಕಳೆದ ಹಲವು ವರ್ಷಗಳಿಂದ, ಕೇವಲ ಸಂಭಾವನೆ ವಿವಾದದ ಕಾರಣಕ್ಕಾಗಿ ಚಿತ್ರದ ನಾಯಕಿಯರು ಮತ್ತು ಪೋಷಕ ನಟರ ಧ್ವನಿಗಳನ್ನು ಬೇರೆ ಡಬ್ಬಿಂಗ್ ಕಲಾವಿದರಿಂದ ಬದಲಾಯಿಸಿದ ಅಸಂಖ್ಯಾತ ಉದಾಹರಣೆಗಳನ್ನು ನಾನು ಕಂಡಿದ್ದೇನೆ. ಆದರೆ ಆಗೆಲ್ಲಾ ಚಿತ್ರರಂಗದಲ್ಲಾಗಲಿ ಅಥವಾ ಸಾರ್ವಜನಿಕ ವಲಯದಲ್ಲಾಗಲಿ ಯಾವುದೇ ಆಕ್ರೋಶ ವ್ಯಕ್ತವಾಗಿರಲಿಲ್ಲ. ಆದರೆ, ಈ ಬಾರಿ ಈ ವಿವಾದ ದೊಡ್ಡ ಮಟ್ಟದ ಸುದ್ದಿಯಾಗುತ್ತಿರುವುದಕ್ಕೆ ಕಾರಣ, ಇದರಲ್ಲಿ ಒಬ್ಬ ಸ್ಟಾರ್ ನಟ ಭಾಗಿಯಾಗಿದ್ದಾರೆ ಎಂಬುದಕ್ಕೆ ಮಾತ್ರ' ಎಂದಿದ್ದಾರೆ.
ಲಿಂಗ ಅಥವಾ ತಾರಾ ವರ್ಚಸ್ಸನ್ನು ಬದಿಗಿಟ್ಟು ನೋಡಿದರೆ, ಒಬ್ಬ ನಟ ಅಥವಾ ನಟಿಯನ್ನು ಪರದೆಯ ಮೇಲೆ ಗುರುತಿಸುವುದು ಕೇವಲ ಅವರ ರೂಪ ಅಥವಾ ನಟನೆಯಿಂದ ಮಾತ್ರವಲ್ಲ, ಅವರ ಧ್ವನಿಯಿಂದಲೂ ಹೌದು. ತಾವು ಕಷ್ಟಪಟ್ಟು ಜೀವ ತುಂಬಿದ ಪಾತ್ರಕ್ಕೆ ತಾವೇ ಡಬ್ಬಿಂಗ್ ಮಾಡಲು ಕಲಾವಿದರಿಗೆ ಅವಕಾಶ ನಿರಾಕರಿಸುವುದು ಅನ್ಯಾಯದ ಪರಮಾವಧಿ. ದುಡ್ಡಿನ ವಿಚಾರದಲ್ಲಿ ಏನಾದರೂ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಮಾತುಕತೆಯ ಮೂಲಕ ನ್ಯಾಯಯುತವಾಗಿ ಬಗೆಹರಿಸಿಕೊಳ್ಳಬೇಕೇ ಹೊರತು, ಒಬ್ಬ ನಟ ತನ್ನ ನಟನೆಯನ್ನು ಸಂಪೂರ್ಣಗೊಳಿಸುವ ಹಕ್ಕನ್ನು ಕಸಿದುಕೊಳ್ಳುವ ಮೂಲಕ ಅಲ್ಲ. ಈ ರೀತಿಯ ಮುಕ್ತ ಮತ್ತು ನ್ಯಾಯಸಮ್ಮತ ಚರ್ಚೆಗಳು ಕೇವಲ ಸ್ಟಾರ್ ನಟರಿಗೆ ಮಾತ್ರ ಸೀಮಿತವಾಗಬಾರದು. ಚಿತ್ರರಂಗದ ಪ್ರತಿಯೊಬ್ಬ ಸಣ್ಣ ಮತ್ತು ದೊಡ್ಡ ಕಲಾವಿದರಿಗೂ ಇದು ಸಮಾನವಾಗಿ ಅನ್ವಯಿಸಬೇಕು' ಎಂದು ಬರೆದಿರುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

