Dailyhunt Logo
  • Light mode
    Follow system
    Dark mode
    • Play Story
    • App Story
ಹಿಮಾಲಯದಲ್ಲಿ ತಾಪಮಾನ ಏರಿಕೆ, ನೀರ್ಗಲ್ಲು ಕುಸಿತ: ನೇಪಾಳ ಪ್ರವಾಹದ ಎಚ್ಚರಿಕೆ ಏನು?

ಹಿಮಾಲಯದಲ್ಲಿ ತಾಪಮಾನ ಏರಿಕೆ, ನೀರ್ಗಲ್ಲು ಕುಸಿತ: ನೇಪಾಳ ಪ್ರವಾಹದ ಎಚ್ಚರಿಕೆ ಏನು?

ಹಿಮನದಿ ಹಿಡಿದಿಟ್ಟಿರುವ ನೈಸರ್ಗಿಕ ತಡೆಗೋಡೆ ಏಕಾಏಕಿ ಒಡೆದು ಹೋಗುವುದರಿಂದ 'ಗ್ಲೇಶಿಯಲ್ ಲೇಕ್ ಔಟ್‌ಬರ್ಸ್ಟ್ ಫ್ಲಡ್' (ಜಿಎಪ್‌ಒಎಫ್) ಸಂಭವಿಸುತ್ತದೆ. ನೀರಿನ ಒತ್ತಡ ಮತ್ತು ಹಿಮನದಿಯಲ್ಲಿನ ಬಿರುಕುಗಳು ನೀರು ಹೊರಹೋಗಲು ಮಾರ್ಗವನ್ನು ಸೃಷ್ಟಿಸುತ್ತವೆ. ನೇಪಾಳ-ಟಿಬೆಟ್ ಗಡಿ ಸಮೀಪ, ಛೋಚೆನ್ ಖೋಲಾ ಮತ್ತು ಪುರೆಪು ತ್ಸಾಂಗ್ಪೊ ನದಿಗಳ ಸಂಗಮದ ಬಳಿ ನೈಸರ್ಗಿಕ ತಡೆಗೋಡೆಯಿಂದ ಸುಮಾರು 2 ಮಿಲಿಯನ್ ಘನ ಮೀಟರ್ ನೀರನ್ನು ಹಿಡಿದಿಟ್ಟಿದ್ದ ಸರೋವರವೊಂದು ರೂಪುಗೊಂಡಿತ್ತು.

ಆಗಸ್ಟ್ 26ರ ಬೆಳಗ್ಗೆ ಅದು ಒಡೆದುಹೋಗಿ, ಸರೋವರದಲ್ಲಿ ಸಂಗ್ರಹವಾಗಿದ್ದ ಅಪಾರ ಪ್ರಮಾಣದ ಹಿಮ, ನೀರು ಮತ್ತು ಅವಶೇಷಗಳು ಭಾರಿ ವೇಗದಲ್ಲಿ ಕೆಳಕ್ಕೆ ಹರಿದು, ನೇಪಾಳದಲ್ಲಿ ಹಠಾತ್ ಮತ್ತು ವಿನಾಶಕಾರಿ ಪ್ರವಾಹಕ್ಕೆ ಕಾರಣವಾಯಿತು.

ಚೀನಾದ ಮೆಗಾ ಅಣೆಕಟ್ಟೆ: ಭಾರತಕ್ಕೆ ಭವಿಷ್ಯದ ಅಪಾಯ ನೆನಪಿಸಿದ ನೇಪಾಳ ದುರಂತ

ಛೋಚೆನ್ ಖೋಲಾ ಮತ್ತು ಪುರೆಪು ತ್ಸಾಂಗ್ಪೊ ನದಿಗಳು ಟಿಬೆಟ್‌ನಲ್ಲಿ ಹುಟ್ಟಿ, ನೇಪಾಳ ಸೇರುವುದಕ್ಕೂ ಮುನ್ನ ಸಂಗಮಗೊಳ್ಳುತ್ತವೆ. ತ್ರಿಶೂಲಿ ನದಿಗೆ ಸೇರುವ ಇವುಗಳನ್ನು ಜಂಟಿಯಾಗಿ ಭೋಟೆ ಕೋಶಿ ಎನ್ನಲಾಗುತ್ತದೆ. ತಡೆ ಸರೋವರದಿಂದ ಬಿಡುಗಡೆಯಾದ ನೀರು ಕೆಳಮುಖವಾಗಿ ಹರಿದು, ನೇಪಾಳದ ವಸತಿ ಪ್ರದೇಶಗಳನ್ನು ನುಂಗಿ ಭಾರತದ ಗಡಿವರೆಗೂ ಹರಿಯಿತು. ಆಗಸ್ಟ್ 26ರಂದು ದುರಂತದ ನಂತರ ತೆಗೆದ ಲ್ಯಾಂಡ್‌ಸ್ಯಾಟ್ 9 ಉಪಗ್ರಹ ಚಿತ್ರದಲ್ಲಿ, ಹಿಮ ಬಂಡೆ ಒಡೆದು ಕುಸಿದಿರುವ ದೊಡ್ಡ ಪ್ರದೇಶವೊಂದು ಸ್ಪಷ್ಟವಾಗಿ ಕಾಣಿಸಿದೆ. ಈ ಚಿತ್ರದಲ್ಲಿ, ಹಿಮದ ದೊಡ್ಡ ಭಾಗವೊಂದು ಒಡೆದು ನದಿಯ ಕಡೆಗೆ ಕೆಳಕ್ಕೆ ಕುಸಿದು ಬಂದಿರುವ ವಿಶಾಲವಾದ ಹಾದಿಯೂ ಕಾಣಿಸಿದೆ. ಕುಸಿದು ಬಂದ ಹಿಮವು ದಾರಿಯಲ್ಲಿದ್ದ ಬಂಡೆಗಳು, ಮರಗಳು, ಹಿಮ ಮತ್ತು ಮಣ್ಣನ್ನು ತನ್ನೊಂದಿಗೆ ಎಳೆದುಕೊಂಡು ಹೋಗಿ ಕೋಶಿ-ತ್ರಿಶೂಲಿ ನದಿಗೆ ತಂದು ಸುರಿದಿದೆ.

ಸುಮಾರು 200 ಚದರ ಮೀಟರ್‌ನಷ್ಟು ಹಿಮವು ಸುಮಾರು 5200 ಮೀಟರ್ ಎತ್ತರದಲ್ಲಿ ಒಡೆದು, ಲಂಬವಾಗಿ ಸುಮಾರು 1.2 ಕಿಲೋಮೀಟರ್ ಕೆಳಕ್ಕೆ ಬಿದ್ದಿದೆ ಎಂದು ಕ್ಯಾಲ್ಗರಿ ವಿಶ್ವವಿದ್ಯಾಲಯದ ಭೂರೂಪಶಾಸ್ತ್ರಜ್ಞ ಡೇನಿಯಲ್ ಶುಗರ, ಪ್ಲಾನೆಟ್ ಲ್ಯಾಬ್ಸ್‌ನ ಉಪಗ್ರಹ ಚಿತ್ರಗಳನ್ನು ಪರಿಶೀಲಿಸಿ ಹೇಳಿದ್ದಾರೆ. ಬೀಳುತ್ತಿದ್ದ ನೀರ್ಗಲ್ಲಿನ ದೊಡ್ಡ ಅವಶೇಷ ಪ್ರವಾಹವಾಗಿ ಪರಿವರ್ತನೆಯಾಗಿ, ದಾರಿಯಲ್ಲಿ ಸಿಕ್ಕ ಬಂಡೆಗಳು, ಕೆಸರು, ಮರಗಳು ಮತ್ತು ಎಲ್ಲವನ್ನೂ ಎಳೆದುಕೊಂಡು ಬಂದಿದೆ. 20,000 ಘನ ಮೀಟರ್ ಹಿಮವು 1.2 ಕಿಲೋಮೀಟರ್ ಎತ್ತರದಿಂದ ಕೆಳಗೆ ಬಿದ್ದಾಗ, ಅಪಾರ ಪ್ರಮಾಣದ ಗುರುತ್ವ ಶಕ್ತಿ ಬಿಡುಗಡೆಯಾಗಿದೆ. ಇದರ ಪ್ರಮಾಣವನ್ನು 2.4 × 10⁸ ಜೂಲ್ ಎಂದು ಲೆಕ್ಕಿಸಲಾಗಿದೆ. ಒಡೆದು ಕುಸಿದ ಹಿಮ ಬಂಡೆಯ ಸರಾಸರಿ ಅಗಲ 100 ಮೀಟರ್ ಎಂದು ಅಂದಾಜಿಸಲಾಗಿದೆ.

ಬಿಸಿಯಾಗುತ್ತಿರುವ ಹಿಮಾಲಯವೇ ನೇಪಾಳದ ಪರ್ವತಗಳಲ್ಲಿ ಸ್ಫೋಟಗೊಂಡ ಪ್ರವಾಹಕ್ಕೆ ಕಾರಣ?

ಅಷ್ಟು ವೇಗದಲ್ಲಿ ಹರಿದು ಬರುವ ಅವಶೇಷಗಳು ಹಾಗೂ ನೀರರು ಮಾನವ ಜೀವನ ಹಾಗೂ ಮೂಲಸೌಕರ್ಯಗಳ ಮೇಲೆ ವಿನಾಶಕಾರಿ ಪರಿಣಾಮ ಉಂಟು ಮಾಡುತ್ತದೆ. ಪ್ರದೇಶದಲ್ಲಿ ಪ್ರವಾಹ ಉಂಟು ಮಾಡಿ, ಕಟ್ಟಡ, ವಾಹನ, ದೊಡ್ಡ ಬಂಡೆಗಳು ಹಾಗು ಜನ-ಜಾನುವಾರುಗಳನ್ನು ಕೊಚ್ಚಿಕೊಂಡು ಹೋಗುತ್ತದೆ. ಸೇತುವೆಗಳು ಆಟಿಕೆಯಂತೆ ಗುಡಿಸಿ ಹೋಗುವ ವಿಡಿಯೊಗಳು ಕೂಡ ಲಭ್ಯವಿದೆ. ನೇಪಾಳದ ಚಿತ್ವಾನ್ ರಾಷ್ಟ್ರೀಯ ಉದ್ಯಾನದಿಂದ ಕೊಚ್ಚಿ ಹೋಗಿದ್ದ ಐದು ಆನೆಗಳನ್ನು ಭಾರತದ ಉತ್ತರ ಪ್ರದೇಶದ ದುಧ್ವಾ ಹುಲಿ ಸಂರಕ್ಷಿತ ಪ್ರದೇಶದ ಸಮೀಪದ ಘಾಘರಾ ಬ್ಯಾರೇಜ್‌ನಲ್ಲಿ ರಕ್ಷಿಸಲಾಗಿದೆ. 400ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಕೈಲಾಸ-ಮಾನಸ ಸರೋವರ ಯಾತ್ರೆಗೆಂದು ಹೋದವರು ಸೇರಿ ಸಾವಿರಾರು ಮಂದಿ ನಾಪತ್ತೆಯಾಗಿದ್ದಾರೆ. ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ, ಜಲಾಶಯದ ಹಿನ್ನೀರಿನಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿ ಕೆಲವು ಮಾನವ ಮೃತದೇಹಗಳು ಪತ್ತೆಯಾಗಿವೆ.

ಕೇವಲ 30 ನಿಮಿಷದಲ್ಲಿ ತ್ರಿಶೂಲಿ ಹಾಗೂ ಗಲ್ಛಿಯಲ್ಲಿ 30 ಅಡಿ, ಮಾಲೇಖು ನದಿಯಲ್ಲಿ 22 ಅಡಿ ನೀರು ಹೆಚ್ಚಳವಾಗಿದ್ದರಿಂದ, ಪಾರಾಗಲು ಜನರಿಗೆ ಹೆಚ್ಚಿನ ಸಮಯ ಸಿಗಲಿಲ್ಲ. ನೇಪಾಳದ ಮೇಲ್ದಂಡೆಯ ನದಿ ಪ್ರದೇಶದಲ್ಲಿದ್ದ ಮುನ್ನೆಚ್ಚರಿಕೆ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ. ಪ್ರವಾಹ ಕೆಳಕ್ಕೆ ಹರಿಯುತ್ತಿದ್ದಂತೆ ಹಲವು ಮೇಲ್ವಿಚಾರಣಾ ಕೇಂದ್ರಗಳು ಹಾನಿಗೊಳಗಾದವು ಅಥವಾ ಕೊಚ್ಚಿಕೊಂಡು ಹೋದವು. ಮೇಲ್ದಂಡೆಯ ಭೋಟೆ ಕೋಶಿಯಲ್ಲಿದ್ದ ಸ್ವಯಂಚಾಲಿತ ಕೇಂದ್ರಗಳಿಂದ ಪ್ರವಾಹದ ಮುನ್ಸೂಚನೆಗೆ ಸಂಬಂಧಿಸಿದ ಮಾಹಿತಿ ರವಾನೆಯಾಗುವುದೂ ನಿಂತುಹೋಯಿತು. ಆದರೂ, ನೇಪಾಳದ ರಸುವಾ, ನುವಾಕೋಟ್, ಧಾದಿಂಗ್ ಮತ್ತು ಚಿತ್ವನ್ ಪ್ರದೇಶಗಳ ಜನರಿಗೆ ಸುಮಾರು 10 ಲಕ್ಷ ಎಸ್‌ಎಂಎಸ್ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಲಾಯಿತು.

'ಬೃಹತ್ ಗಾತ್ರದ ಮರಗಳು ಧರಾಶಾಹಿಯಾದವು, ನೆಲಕ್ಕುರುಳಿದ ಕಟ್ಟಡಗಳನ್ನು ಭೀಕರ ಅಲೆಗಳು ಕೊಚ್ಚಿಕೊಂಡು ಹೋದವು. ಜನರು ಮುಳುಗುತ್ತಿದ್ದರು. ಸೇತುವೆಗಳು ತೇಲಿಕೊಂಡು ಹೋಗುತ್ತಿದ್ದವು. ಅಸಹಾಯಕರಾಗಿ ನೋಡುವುದು ಬಿಟ್ಟು ನಮಗೇನೂ ಮಾಡಲಾಗಲಿಲ್ಲ' ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಪ್ರಮಾಣದ ಹಿಮ ಕುಸಿತದ ಬಗ್ಗೆ ಮುನ್ನೆಚ್ಚರಿಕೆ ನೀಡಲು ತಾನು ವಿಫವಾಗಿದೆ ಎನ್ನುವ ಆರೋಪವನ್ನು ಚೀನಾ ತಳ್ಳಿ ಹಾಕಿದೆ. ಮತ್ತೊಂದೆಡೆ, ದುರಂತ ಇನ್ನೂ ಮುಗಿದಿಲ್ಲ ಎಂದು ಚೀನಾದ ಮಾಧ್ಯಮಗಳು ಎಚ್ಚರಿಸಿವೆ. ನೇಪಾಳದ ಛೋಚೆನ್ ಖೋಲಾ ಮತ್ತು ಪುರೆಪು ತ್ಸಾಂಗ್ಪೊ ನದಿಗಳ ಸಂಗಮದ ಸಮೀಪ ಮತ್ತೊಂದು ತಡೆ ಸರೋವರ ರೂಪುಗೊಂಡಿದ್ದು, ಮುಂದಿನ ಮೂರು ದಿನಗಳಲ್ಲಿ ಅದು ಒಡೆದುಹೋಗುವ ಅಪಾಯ ಹೆಚ್ಚಿದೆ ಎಂದು ತಿಳಿಸಿವೆ. ದುರಂತ ಘಟಿಸಿದ ದಿನ ಭೂಕಂಪ ಅಥವಾ ಭೂಕಂಪದಂತ ಕಂಪನದಿಂದಾಗಿ ಭೂಕುಸಿತ ಸಂಭವಿಸಿದೆ ಎಂದು ಕಠ್ಮಂಡುವಿನಲ್ಲಿರುವ ಚೀನಾ ರಾಯಭಾರ ಕಚೇರಿ ತಿಳಿಸಿದೆ. ಇದಕ್ಕೂ ಮೊದಲು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ 4.4 ತೀವ್ರತೆಯ ಭೂಕಂಪದಿಂದ ಹಿಮಕುಸಿತ ಉಂಟಾಯಿತು ಎಂದು ಹೇಳಿತ್ತು.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ಹಿಮಾಲಯದಲ್ಲಿ ತಾಪಮಾನ ಏರಿಕೆ, ನೀರ್ಗಲ್ಲು ಕುಸಿತ: ನೇಪಾಳ ಪ್ರವಾಹದ ಎಚ್ಚರಿಕೆ ಏನು?

ಒಂದು ಸಾಲಿನಲ್ಲಿಹಿಮಾಲಯದಲ್ಲಿ ಹೆಚ್ಚುತ್ತಿರುವ ತಾಪಮಾನ ಮತ್ತು ನೀರ್ಗಲ್ಲು ಕುಸಿತದಿಂದಾಗಿ ನೇಪಾಳದಲ್ಲಿ ಸಂಭವಿಸಿದ ಪ್ರವಾಹವು ಗಂಭೀರ ಹವಾಮಾನ ವೈಪರೀತ್ಯದ ಅಪಾಯವನ್ನು ಸೂಚಿಸುತ್ತಿದೆ.

ಪ್ರಮುಖ ಪ್ರಶ್ನೋತ್ತರ


ನೇಪಾಳದ ಪ್ರವಾಹಕ್ಕೆ ಮುಖ್ಯ ಕಾರಣವೇನು?

ಹಿಮಾಲಯದಲ್ಲಿನ ನೈಸರ್ಗಿಕ ತಡೆಗೋಡೆ ಒಡೆದು ಸರೋವರದ ನೀರು ಏಕಾಏಕಿ ಹರಿದು ಬಂದಿದ್ದರಿಂದ 'ಜಿಎಪ್‌ಒಎಫ್' (ಗ್ಲೇಶಿಯಲ್ ಲೇಕ್ ಔಟ್‌ಬರ್ಸ್ಟ್ ಫ್ಲಡ್) ಎಂಬ ವಿನಾಶಕಾರಿ ಪ್ರವಾಹ ಸಂಭವಿಸಿದೆ.


ಈ ಪ್ರವಾಹದಿಂದ ಆದ ಹಾನಿ ಎಷ್ಟು?

ಪ್ರವಾಹದಲ್ಲಿ 400ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಮತ್ತು ಸಾವಿರಾರು ಮಂದಿ ನಾಪತ್ತೆಯಾಗಿದ್ದಾರೆ; ಕಟ್ಟಡಗಳು, ವಾಹನಗಳು ಹಾಗೂ ಮೂಲಸೌಕರ್ಯಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿವೆ.


ತಾಪಮಾನ ಏರಿಕೆ ಹಿಮನದಿಗಳ ಮೇಲೆ ಹೇಗೆ ಪ್ರಭಾವ ಬೀರುತ್ತಿದೆ?

ಜಾಗತಿಕ ತಾಪಮಾನ ಏರಿಕೆಯಿಂದ ಹಿಮಾಲಯದ ಪ್ರದೇಶಗಳು ವೇಗವಾಗಿ ಬಿಸಿಯಾಗುತ್ತಿದ್ದು, ಇದರಿಂದ ಹಿಮನದಿಗಳು ಕರಗಿ ಕುಗ್ಗುತ್ತಿರುವುದು ಇಂತಹ ನೈಸರ್ಗಿಕ ವಿಕೋಪಗಳಿಗೆ ಕಾರಣವಾಗಿದೆ.


ಭವಿಷ್ಯದ ಅಪಾಯಗಳನ್ನು ತಡೆಯಲು ಏನು ಮಾಡಬೇಕು?

ಪಳೆಯುಳಿಕೆ ಇಂಧನ ಬಳಕೆಯನ್ನು ತಗ್ಗಿಸುವುದು, ವೈಜ್ಞಾನಿಕವಾಗಿ ಹಿಮನದಿಗಳನ್ನು ನಿರಂತರವಾಗಿ ಗಮನಿಸುವುದು ಮತ್ತು ಗಡಿ ದೇಶಗಳ ನಡುವೆ ಸಮನ್ವಯ ಹಾಗೂ ಮಾಹಿತಿ ಹಂಚಿಕೆ ಅನಿವಾರ್ಯವಾಗಿದೆ.


ಪ್ರವಾಹದ ಬಗ್ಗೆ ಚೀನಾ ಮತ್ತು ನೇಪಾಳದ ವಾದವೇನು?

ಚೀನಾವು ಈ ದುರಂತಕ್ಕೆ ಭೂಕಂಪ ಕಾರಣವೆಂದು ಹೇಳಿದೆ ಮತ್ತು ಮತ್ತೊಂದು ಸರೋವರ ಒಡೆಯುವ ಅಪಾಯವಿದ್ದು ಎಚ್ಚರಿಕೆಯಿಂದಿರಲು ಸೂಚಿಸಿದೆ; ನೇಪಾಳ ಮುನ್ನೆಚ್ಚರಿಕೆ ವ್ಯವಸ್ಥೆಯ ವೈಫಲ್ಯದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಪ್ರಮುಖ ಅಂಕಿಅಂಶಗಳು

400ಪ್ರವಾಹದಲ್ಲಿ ಸಾವಿಗೀಡಾದವರ ಅಂದಾಜು ಸಂಖ್ಯೆಶೇ 23.6ಹಿಮಪಾತದಲ್ಲಿನ ಇಳಿಕೆ (ದೀರ್ಘಾವಧಿಯ ಸರಾಸರಿಗೆ ಹೋಲಿಸಿದರೆ)2.4 × 10⁸ ಜೂಲ್ಹಿಮ ಕುಸಿತದಿಂದ ಬಿಡುಗಡೆಯಾದ ಶಕ್ತಿ10 ಲಕ್ಷಪ್ರವಾಹದ ನಂತರ ಎಸ್‌ಎಂಎಸ್ ಮೂಲಕ ಕಳುಹಿಸಲಾದ ಎಚ್ಚರಿಕೆ ಸಂದೇಶಗಳು

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಹಿಮಾಲಯದ ಕೊರಳಿಗೆ ನಾವೇ ಪೋಣಿಸಿರುವ ಸಾವಿನ ಸರಮಾಲೆ

ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್, ಮೀಥೇನ್ ಮತ್ತು ಇತರ ಹಸಿರುಮನೆ ಅನಿಲಗಳ ಹೆಚ್ಚಿದ ಸಾಂದ್ರತೆಯಿಂದ ಉತ್ಪತ್ತಿಯಾಗುವ ಶಾಖವು ಭೂಮಿಯ ಸರಾಸರಿ ಮೇಲ್ಮೈ ತಾಪಮಾನವನ್ನು ಹೆಚ್ಚಿಸಿ, ತೀವ್ರ ಶಾಖದ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಮತ್ತು ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತ (ಎನ್‌ಒಎಎ) ತಮ್ಮ ಇತ್ತೀಚಿನ ಹವಾಮಾನ ಟಿಪ್ಪಣಿಯಲ್ಲಿ ಹೇಳಿದೆ. ಆದರೆ ಜಾಗತಿಕ ತಾಪಮಾನ ಏರಿಕೆಯ ಪರಿಣಾಮ ಎಲ್ಲ ಪ್ರದೇಶಗಳಲ್ಲೂ ಒಂದೇ ರೀತಿಯಾಗಿರುವುದಿಲ್ಲ.

ಸಾಗರಗಳು ಭೂಮಿಗಿಂತ ನಿಧಾನವಾಗಿ ಬಿಸಿಯಾಗುತ್ತವೆ. ಅಧಿಕ ಅಕ್ಷಾಂಶದ ಪ್ರದೇಶಗಳು ಉಷ್ಣವಲಯದ ಪ್ರದೇಶಗಳಿಗಿಂತ ವಿಭಿನ್ನವಾಗಿ ಬಿಸಿಯಾಗುತ್ತವೆ. ಹಿಮ ಮತ್ತು ಹಿಮನದಿಗಳಲ್ಲಿನ ಬದಲಾವಣೆ, ವಾಯುಮಾಲಿನ್ಯ ಹಾಗೂ ಗಾಳಿಯ ಚಲನೆಯಲ್ಲಿನ ಪ್ರಾದೇಶಿಕ ಬದಲಾವಣೆಗಳು ಕೆಲವು ಪ್ರದೇಶಗಳಲ್ಲಿ ತಾಪಮಾನ ಏರಿಕೆಯನ್ನು ಇನ್ನಷ್ಟು ವೇಗಗೊಳಿಸುತ್ತವೆ. ವಿಶ್ವದ ಸರಾಸರಿ ತಾಪಮಾನ ಏರಿಕೆಯು ಪ್ರತಿ ದಶಕಕ್ಕೆ 0.20 ಡಿಗ್ರಿ ಸೆಲ್ಸಿಯಸ್ ಎಂದು ದಾಖಲಾಗಿದೆ. ಆದರೆ ಯುರೋಪ್‌ನಲ್ಲಿ ಪ್ರತಿ ದಶಕಕ್ಕೆ 0.50 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಯಾಗುತ್ತದೆ. ಆರ್ಕ್ಟಿಕ್‌ಗೆ ಸಮೀಪದಲ್ಲಿರುವ ಉತ್ತರ ಯುರೋಪ್ ಜಾಗತಿಕ ಸರಾಸರಿಗಿಂತ ಹಲವು ಪಟ್ಟು ವೇಗವಾಗಿ ಬಿಸಿಯಾಗುತ್ತಿದೆ. ಆರ್ಕ್ಟಿಕ್‌ನಲ್ಲಿ ವೇಗವಾಗಿ ನಡೆಯುವ ತಾಪಮಾನ ಏರಿಕೆಯನ್ನು 'ಆರ್ಕ್ಟಿಕ್ ಆಂಪ್ಲಿಫಿಕೇಶನ್' ಎನ್ನಲಾಗುತ್ತದೆ. ಹಿಮಾಲಯದಲ್ಲೂ ಆರ್ಕ್ಟಿಕ್‌ನಂತೆಯೇ ವೇಗವಾಗಿ ಬಿಸಿ ಏರುತ್ತಿದೆ. ಇದರಿಂದ ಹಿಮ ಮತ್ತು ಹಿಮನದಿಗಳು ವೇಗವಾಗಿ ಕರಗುತ್ತವೆ. ಹಿಮನದಿಗಳು ಕೂಡ ತ್ವರಿತವಾಗಿ ಕುಗ್ಗುತ್ತವೆ. ಹಿಮಚ್ಛಾದಿತ ಪ್ರದೇಶಗಳಲ್ಲಿ ಸೂರ್ಯನ ಕಿರಣಗಳನ್ನು ಬಹುಪಾಲು ಪ್ರತಿಫಲಿಸುತ್ತದೆ. ಹೀಗಾಗಿ ಅದು ಸೂರ್ಯನ ಶಕ್ತಿಯ ಸುಮಾರು ಶೇ 20 ಮಾತ್ರ ಹೀರಿಕೊಳ್ಳುತ್ತದೆ. ಆದರೆ ಹಿಮ ಇರದ ಭೂಮಿ ಸೂರ್ಯನ ಶಕ್ತಿಯ ಸುಮಾರು ಶೇ 80 ಅನ್ನು ಹೀರಿಕೊಳ್ಳುತ್ತದೆ.

ನೇಪಾಳದಲ್ಲಿ ಭೀಕರ ಪ್ರವಾಹ: 5 ತಿಂಗಳು ಮುನ್ನವೇ ಸಿಕ್ಕಿತ್ತು ಸೂಚನೆ

ಹಿಮ ಕಡಿಮೆಯಾಗುತ್ತಿರುವ ಪ್ರದೇಶಗಳು ಸೂರ್ಯನ ಶಕ್ತಿಯನ್ನು ಹೆಚ್ಚು ಹೀರಿಕೊಳ್ಳುತ್ತವೆ. ಹೀಗಾಗಿ ಆ ಪ್ರದೇಶಗಳು ಬೇಗ ಬಿಸಿಯಾಗುತ್ತವೆ. 2024ರ ನವೆಂಬರ್‌ನಿಂದ 2025ರ ಮಾರ್ಚ್‌ವರೆಗೆ ಹಿಮಾಲಯದಲ್ಲಿ ಸುರಿದ ಹಿಮಪಾತವು 2003ರಿಂದಲೂ ಇರುವ ದೀರ್ಘಾವಧಿಯ ಸರಾಸರಿಗೆ ಹೋಲಿಸಿದರೆ ಶೇ 23.6 ರಷ್ಟು ಕಡಿಮೆಯಾಗಿದೆ ಎಂದು ಅಂತಾರಾಷ್ಟ್ರೀಯ ಸಮಗ್ರ ಪರ್ವತ ಅಭಿವೃದ್ಧಿ ಕೇಂದ್ರದನ (ಐಸಿಐಎಮ್‌ಒಡಿ) ಹೇಳಿದೆ. ಗಂಗಾ, ಸಿಂಧೂ ಮತ್ತು ಬ್ರಹ್ಮಪುತ್ರ ನದಿಗಳ ಜಲಾನಯನ ಪ್ರದೇಶಗಳಲ್ಲಿ ಸುಮಾರು 42,000 ಚದರ ಕಿಲೋಮೀಟರ್‌ ಪ್ರದೇಶ ಹಿಮನದಿಗಳಿಂದ ಮತ್ತು ಸುಮಾರು 16 ಲಕ್ಷ ಚದರ ಕಿಲೋಮೀಟರ್‌ ಋತುಮಾನಿಕ ಹಿಮದಿಂದ ಆವೃತವಾಗಿದೆ. ಈ ಪ್ರದೇಶಗಳ ಮೇಲೆ ಒತ್ತಡ ಹೆಚ್ಚುತ್ತಿರುವುದರಿಂದ, ಉಪನದಿಗಳು ಮತ್ತು ನದಿಗಳಲ್ಲಿ ಹರಿಯುವ ನೀರಿನ ಪ್ರಮಾಣದ ಮೇಲೂ ಪರಿಣಾಮ ಬೀರುತ್ತಿದೆ. ಕಳೆದ ಐದು ಚಳಿಗಾಲಗಳ ಪೈಕಿ ನಾಲ್ಕರಲ್ಲಿ ವಾಡಿಕೆಗಿಂತ ಕಡಿಮೆ ಹಿಮಪಾತವಾಗಿದೆ. ಹಿಮದ ಪ್ರಮಾಣ ಕಡಿಮೆಯಾದಂತೆ ಬರ, ಕಾಡ್ಗಿಚ್ಚು ಮತ್ತು ಹಿಮನದಿ ಸರೋವರ ಸ್ಫೋಟ ಪ್ರವಾಹಗಳ ಅಪಾಯ ಹೆಚ್ಚುತ್ತದೆ.

ಟಿಬೆಟ್ ವಲಯ ಮತ್ತು ಚೀನಾದ ಅದರ ಅಂಚಿನ ಪ್ರದೇಶಗಳು ಭೂಕಂಪನ ಸಾಧ್ಯತೆಗಳು ಹೆಚ್ಚು. ಇದು ಭಾರತ ಮತ್ತು ಯುರೇಷಿಯಾ ಭೂಫಲಕಗಳು ಪರಸ್ಪರ ಡಿಕ್ಕಿ ಹೊಡೆಯುವ ಪ್ರದೇಶ. ಭೂಭಾಗವನ್ನು ಮೇಲಕ್ಕೆತ್ತಿ ಹಿಮಾಲಯದ ಶಿಖರಗಳ ಎತ್ತರವನ್ನು ಹೆಚ್ಚಿಸುವಷ್ಟು ಈ ಡಿಕ್ಕಿ ಪ್ರಬಲವಾಗಿರುತ್ತದೆ. ಕಳೆದ ವರ್ಷ ಜನವರಿಯಲ್ಲಿ ಟಿಬೆಟ್‌ನಲ್ಲಿ 7.1 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರ ಕೇಂದ್ರಬಿಂದು ಮೌಂಟ್ ಎವರೆಸ್ಟ್‌ನಿಂದ 75 ಕಿಲೋಮೀಟರ್ ಉತ್ತರದಲ್ಲಿರುವ ಟಿಂಗ್ರಿಯಲ್ಲಿ ಇತ್ತು. 126 ಜನರು ಮೃತಪಟ್ಟಿದ್ದು, 188 ಜನರು ಗಾಯಗೊಂಡಿದ್ದರು ಮತ್ತು ಮೈನಸ್ 6 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ನಡೆದಿದ್ದವು. ಭೂಕಂಪನದ ಅಪಾಯವಿದ್ದರೂ, ಯರ್ಲುಂಗ್ ಸಾಂಗ್ಪೊದ ಮೇಲ್ದಂಡೆಯಲ್ಲಿ ದಾಗು ಅಣೆಕಟ್ಟು (640 ಮೆಗಾವಾಟ್), ಝಾಂಗ್ಮು ಅಣೆಕಟ್ಟು (510 ಮೆಗಾವಾಟ್), ಜಿಯಾಚಾ ಅಣೆಕಟ್ಟು (320 ಮೆಗಾವಾಟ್) ಮತ್ತು ಜಿಯೆಕ್ಸು ಅಣೆಕಟ್ಟು (300 ಮೆಗಾವಾಟ್) ಜಲವಿದ್ಯುತ್ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.. ಇವುಗಳಲ್ಲಿ ಝಾಂಗ್ಮು ಮಾತ್ರ ಪೂರ್ಣಗೊಂಡಿದ್ದು, ಉಳಿದ ಮೂರು ಕಡಿದಾದ ಪರ್ವತಗಳು ಮತ್ತು ಆಳವಾದ ಕಣಿವೆಗಳಿಂದ ಉಂಟಾಗಿದ್ದ ಸಾರಿಗೆ ಮತ್ತು ತಾಂತ್ರಿಕ ಸವಾಲುಗಳಿಂದ ತೊಂದರೆಗೀಡಾಗಿವೆ.

ಭೂಮಿಯ ಶಾಖ ಹೆಚ್ಚುತ್ತಿದ್ದಂತೆ ಹಿಮನದಿಗಳು ಕರಗಿ ಕುಗ್ಗುತ್ತವೆ. ಭೂಮಿಯ ಹೊರಪದರ ಮತ್ತು ಅದರ ಕೆಳಗಿನ ಭಾಗದ ಮೇಲಿದ್ದ ಒತ್ತಡವನ್ನು ಕಡಿಮೆ ಮಾಡುತ್ತವೆ ಎಂದು ಇತ್ತೀಚೆಗೆ ಪ್ರಾಗ್‌ನಲ್ಲಿ ನಡೆದ 'ಗೋಲ್ಡ್‌ಶ್ಮಿಡ್' ಸಮ್ಮೇಳನದಲ್ಲಿ ಮಂಡಿಸಲಾದ ಒಂದು ಅಧ್ಯಯನಯದಲ್ಲಿ ಹೇಳಲಾಗಿದೆ. ಇದರಿಂದ ಭೂಗರ್ಭದಲ್ಲಿರುವ ಅನಿಲಗಳು ಮತ್ತು ಶಿಲಾಪಾಕದ ವಿಸ್ತರಣೆಗೊಂಡು, ಜ್ವಾಲಾಮುಖಿ ಸ್ಫೋಟಗಳಿಗೆ ಕಾರಣವಾಗುವ ಒತ್ತಡದ ಸಂಗ್ರಹವಾಗುತ್ತದೆ. ಹವಾಮಾನ ಬದಲಾವಣೆಯಿಂದ ಹಿಮನದಿಗಳು ಕುಗ್ಗಿದರೆ, ಜ್ವಾಲಾಮುಖಿ ಸ್ಫೋಟಗಳು ನಿಯಮಿತವಾಗಿ ಆಗಲಿದೆ.

₹22,006 ಕೋಟಿ ಸಾಲ, ₹6.5 ಕೋಟಿಗೆ ಇತ್ಯರ್ಥ: ಸುಭಾಷ್ ಚಂದ್ರ ಪ್ರಕರಣದ ಅಸಲಿ ಲೆಕ್ಕ

ಜಾಗತಿಕ ತಾಪಮಾನ ಏರಿಕೆಯ ಸರಾಸರಿಯನ್ನು ನಿಯಂತ್ರಿಸಬೇಕಾದರೆ ಪಳೆಯುಳಿಕೆ ಇಂಧನ ಬಳಕೆಯಿಂದ ದೂರ ಸರಿಯುವುದು ಅಗತ್ಯ. ಹಸಿರುಮನೆ ಅನಿಲಗಳ ಹೊರಸೂಸುವಿಕೆ ಕಡಿಮೆ ಮಾಡಲು ಜಗತ್ತಿನಾದ್ಯಂತ ಅಗತ್ಯವಾದ ಕ್ರಮಗಳು ಇನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ. ಆದರೆ ಈ ನಿಟ್ಟಿನಲ್ಲಿ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳನ್ನು ನಿಲ್ಲಿಸಬಾರದು. ವೈಜ್ಞಾನಿಕವಾಗಿ ಹಿಮ ಮತ್ತು ಹಿಮನದಿಗಳ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸಲು ಅಗತ್ಯ ಹಣಕಾಸು ಒದಗಿಸಬೇಕು. ಗಡಿಗಳಾಚೆ ದೇಶಗಳ ನಡುವೆ ಸಮನ್ವಯ ಮತ್ತು ಮಾಹಿತಿಯ ಹಂಚಿಕೆ ಇರಬೇಕು. ಇದರಿಂದ ಭವಿಷ್ಯದ ಅಪಾಯಗಳನ್ನು ಎದುರಿಸಲು ಸೂಕ್ತ ಯೋಜನೆ ರೂಪಿಸಬಹುದು. ಭೂಕಂಪದ ಅಪಾಯವಿರುವ ಪ್ರದೇಶಗಳಲ್ಲಿ ಜಲವಿದ್ಯುತ್ ಯೋಜನೆಗಳನ್ನು ದೇಶಗಳು ತಾತ್ಕಾಲಿಕವಾಗಿ ನಿಲ್ಲಿಸಬೇಕು.

ಪ್ರವಾಹ | ರಕ್ಷಣಾ ಕಾರ್ಯಾಚರಣೆಗೆ ವಿದೇಶಿ ನೆರವು ಬೇಡ ಎಂದ ನೇಪಾಳ; ಚೀನಾದ ಭಯವೇ?
Dailyhunt
Disclaimer: This content has not been generated, created or edited by Dailyhunt. Publisher: Prajavani