ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ 2026ರ ಪರೀಕ್ಷೆಯಿಂದಲೇ ಅನ್ವಯವಾಗುವಂತೆ ಮೂರನೇ ಭಾಷಾ ವಿಷಯಗಳಿಗೆ ಅಂಕ ನೀಡುವ ಪದ್ಧತಿ ಕೈಬಿಟ್ಟು, ಗ್ರೇಡ್ ನಮೂದಿಸಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ನಟಿ ಪೂಜಾಗಾಂಧಿ ಅವರು ಬೆಂಬಲ ಸೂಚಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡ ನಟಿ ಪೂಜಾಗಾಂಧಿ, 'ಇವತ್ತು ನಿಜವಾಗಿಯೂ ತುಂಬಾ ಸಂತೋಷ ಆಗುತ್ತಿದೆ. ಕರ್ನಾಟಕ ಸರ್ಕಾರಕ್ಕೆ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಹಿಂದಿ ಒಂದು ಭಾಷೆಯಾಗಿ ಕಲಿಯುವುದು ಮುಖ್ಯ. ಆದರೆ, ಕನ್ನಡದ ಮಕ್ಕಳ ಮೇಲೆ ಅದು ಹೇರಿಕೆ ಆಗಬಾರದು. ಕನ್ನಡ ಪರ ಹೋರಾಟಗಾರರಿಗೆ ಜಯ ಸಿಕ್ಕಿದೆ. ಕನ್ನಡಕ್ಕಾಗಿ ಶ್ರಮಿಸಿದವರೆಲ್ಲಾರಿಗೂ ಅಭಿನಂದನೆಗಳು. ಜೈ ಹಿಂದ್, ಜೈ ಕರ್ನಾಟಕ ಮಾತೆ' ಎಂದು ಹೇಳಿಕೊಂಡಿದ್ದಾರೆ. ಪೂಜಾಗಾಂಧಿ ಈ ವಿಡಿಯೊಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತೃತೀಯ ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿರ್ಧಾರವೇನು.?
ಕೆಲದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ಈ ನಿಯಮ ಅನ್ವಯವಾಗಲಿದೆ. ಹಿಂದಿನ ವರ್ಷಗಳಂತೆ 100 ಅಂಕಗಳಿಗೆ ಪ್ರಶ್ನೆ ಪತ್ರಿಕೆ ಇರುತ್ತದೆ. ಆದರೆ, ಮೌಲ್ಯಮಾಪನದ ನಂತರ ಅಂಕಪಟ್ಟಿಯಲ್ಲಿ ಅಂಕಗಳನ್ನು ನಮೂದಿಸದೆ ಗ್ರೇಡ್ ಎ, ಬಿ, ಸಿ, ಡಿ ಎಂದು ನಮೂದಿಸಲಾಗುತ್ತದೆ ಎಂದಿದ್ದರು.

