Dailyhunt Logo
  • Light mode
    Follow system
    Dark mode
    • Play Story
    • App Story
ಹೊರ್ಮುಜ್ ಜಲಸಂಧಿಗೆ ಯುದ್ಧನೌಕೆಗಳನ್ನು ರವಾನಿಸಲು ಟ್ರಂಪ್ ಕರೆ

ಹೊರ್ಮುಜ್ ಜಲಸಂಧಿಗೆ ಯುದ್ಧನೌಕೆಗಳನ್ನು ರವಾನಿಸಲು ಟ್ರಂಪ್ ಕರೆ

ವಾಷಿಂಗ್ಟನ್‌: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರಿದಂತೆ ಹೊರ್ಮುಜ್‌ ಜಲಸಂಧಿಯಲ್ಲಿ ಹಡಗುಗಳ ಸಾರಿಗೆ ಸುರಕ್ಷಿತಗೊಳಿಸಲು ಯುದ್ಧನೌಕೆಗಳನ್ನು ರವಾನಿಸುವಂತೆ ಮಿತ್ರರಾಷ್ಟ್ರಗಳಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದಾರೆ.

ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಣ ಸಂಘರ್ಷ ಮೂರನೇ ವಾರಕ್ಕೆ ಕಾಲಿಟ್ಟಿದೆ.

ಈ ಮೊದಲು ಹೊರ್ಮುಜ್ ಜಲಸಂಧಿ ಮೂಲಕ ತೈಲ ನೌಕೆಗಳು ಸಾಗಲು ಅಡ್ಡಿಪಡಿಸಿದರೆ ಇರಾನ್‌ನ ಖಾರ್ಗ್ ದ್ವೀಪದಲ್ಲಿರುವ ತೈಲ ಘಟಕಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಾಗಿ ಟ್ರಂಪ್ ಬೆದರಿಕೆ ಒಡ್ಡಿದ್ದರು.

ಇದಕ್ಕೆ ಪ್ರತಿದಾಳಿ ನಡೆಸುವುದಾಗಿ ಇರಾನ್ ಎಚ್ಚರಿಸಿದೆ. ಅಲ್ಲದೆ ಯುಎಇನಲ್ಲಿರುವ ಮೂರು ಪ್ರಮುಖ ಬಂದರುಗಳಲ್ಲಿ ನಾಗರಿಕರನ್ನು ಸ್ಥಳಾಂತರಿಸುವಂತೆ ಬೆದರಿಕೆ ಒಡ್ಡಿದೆ.

ಯುಎಇ ನೆಲೆಯನ್ನು ಬಳಸಿಕೊಂಡು ಅಮೆರಿಕ ತನ್ನ ವಿರುದ್ಧ ದಾಳಿ ನಡೆಸುತ್ತಿದ್ದು, ತಕ್ಕ ಪರಿಣಾಮ ಎದುರಿಸಬೇಕಾದಿತು ಎಂದು ತಿರುಗೇಟು ನೀಡಿದೆ.

ದುಬೈ ಸಮೀಪದಿಂದ ಅಮೆರಿಕ ದಾಳಿ ನಡೆಸಿರುವುದಾಗಿ ಇರಾನ್ ಆರೋಪಿಸಿದೆ. ಇದು ತುಂಬಾ ಅಪಾಯಕಾರಿ ನಿಲುವಾಗಿದೆ ಎಂದು ಹೇಳಿದೆ. ಅಲ್ಲದೆ ಅಮೆರಿಕದ ಮೂಲಸೌಕರ್ಯಗಳ ಮೇಲೆ ಪ್ರತಿದಾಳಿ ನಡೆಸುವುದಾಗಿ ಇರಾನ್ ಮಿಲಿಟರಿ ಎಚ್ಚರಿಸಿದೆ.

ಏತನ್ಮಧ್ಯೆ ತೈಲೆ ಬೆಲೆ, ಪೂರೈಕೆಗಳ ಬಗ್ಗೆ ಜಾಗತಿಕ ಆತಂಕ ಹೆಚ್ಚುತ್ತಿರುವ ಮಧ್ಯೆ ಹೊರ್ಮುಜ್ ಜಲಸಂಧಿಯನ್ನು ಮುಕ್ತ ಹಾಗೂ ಸುರಕ್ಷಿತವಾಗಿರಿಸಿಕೊಳ್ಳಲು ಯುದ್ಧನೌಕೆಗಳನ್ನು ರವಾನಿಸುವಂತೆ ಚೀನಾ, ಫ್ರಾನ್ಸ್, ಜಪಾನ್, ದಕ್ಷಿಣ ಕೊರಿಯಾ, ಬ್ರಿಟನ್ ಹಾಗೂ ಇತರೆ ದೇಶಗಳಿಗೆ ಟ್ರಂಪ್ ಮನವಿ ಮಾಡಿದ್ದಾರೆ.

ಈ ನಡುವೆ ವಿವಿಧ ಆಯ್ಕೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಬ್ರಿಟನ್ ಪ್ರತಿಕ್ರಿಯಿಸಿದೆ.

ಇರಾನ್‌ನ ಖರ್ಗ್‌ ದ್ವೀಪದ ಮೇಲೆ ಭಾರಿ ಬಾಂಬ್ ದಾಳಿ ನಡೆಸಿದ್ದೇವೆ ಎಂದ ಟ್ರಂಪ್'ಇರಾನ್ ನಾಯಕ ಬದುಕಿರಬಹುದು': ಮೊಜ್ತಬಾ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಟ್ರಂಪ್
Dailyhunt
Disclaimer: This content has not been generated, created or edited by Dailyhunt. Publisher: Prajavani