Dailyhunt Logo
  • Light mode
    Follow system
    Dark mode
    • Play Story
    • App Story
ಹೊರ್ಮುಜ್‌ ವಿಚಾರವಾಗಿ ಜಪಾನ್, ಯುರೋಪ್‌ ರಾಷ್ಟ್ರಗಳಿಂದ ಜಂಟಿ ಹೇಳಿಕೆ

ಹೊರ್ಮುಜ್‌ ವಿಚಾರವಾಗಿ ಜಪಾನ್, ಯುರೋಪ್‌ ರಾಷ್ಟ್ರಗಳಿಂದ ಜಂಟಿ ಹೇಳಿಕೆ

ಲಂಡನ್‌: ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೊರ್ಮುಜ್‌ ಜಲಸಂಧಿಯಲ್ಲಿ ಸುರಕ್ಷಿತ ಹಾಗೂ ಮುಕ್ತ ಸಂಚಾರವನ್ನು ಖಾತ್ರಿಪಡಿಸುವುದಕ್ಕಾಗಿ ಕೈಗೊಳ್ಳುವ ಸೂಕ್ತ ಪ್ರಯತ್ನಗಳಿಗೆ ಕೈಜೋಡಿಸುವುದಾಗಿ ಯುರೋಪ್‌ ರಾಷ್ಟ್ರಗಳು ಮತ್ತು ಜಪಾನ್‌ ಗುರುವಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.

ಬ್ರಿಟನ್‌, ಫ್ರಾನ್ಸ್‌, ಜರ್ಮನಿ, ಇಟಲಿ, ನೆದರ್ಲೆಂಡ್ಸ್ ಹಾಗೂ ಜಪಾನ್‌ ಒಟ್ಟಾಗಿ ಹೇಳಿಕೆ ಬಿಡುಗಡೆ ಮಾಡಿವೆ. ಅದರಲ್ಲಿ, ʼಇರಾನ್ ಪಡೆಗಳು ಕೊಲ್ಲಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ಇತ್ತೀಚೆಗೆ ನಡೆಸಿದ ದಾಳಿ, ತೈಲ ಘಟಕಗಳು, ಅನಿಲ ಸ್ಥಾವರಗಳು, ನಾಗರಿಕ ಮೂಲಸೌಕರ್ಯಗಳ ಮೇಲೆ ನಡೆಸಿದ ದಾಳಿಗಳು ಮತ್ತು ಹೊರ್ಮುಜ್‌ ಜಲಸಂಧಿಯಲ್ಲಿ ಸಂಚಾರ ನಿರ್ಬಂಧಿಸಿರುವುದನ್ನು ಖಂಡಿಸುತ್ತೇವೆʼ ಎಂದು ತಿಳಿಸಿವೆ.

ತೀವ್ರಗೊಳ್ಳುತ್ತಿರುವ ಸಂಘರ್ಷದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ʼಬೆದರಿಕೆಗಳು, ದಾಳಿಗಳನ್ನು ಕೂಡಲೇ ನಿಲ್ಲಿಸಬೇಕು ಮತ್ತು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಗಳನ್ನು ಪಾಲಿಸಬೇಕುʼ ಎಂದು ಒತ್ತಾಯಿಸಿವೆ.

ನೌಕಾಯಾನ ಸ್ವಾತಂತ್ರ್ಯವು ಅಂತರರಾಷ್ಟ್ರೀಯ ಕಾನೂನಿನ ಮೂಲತತ್ವವಾಗಿದೆ ಎಂದು ಪ್ರಕಟಣೆಯಲ್ಲಿ ಒತ್ತಿ ಹೇಳಿದ್ದು, ಇರಾನ್‌ ದಾಳಿಯ ಪರಿಣಾಮಗಳನ್ನು ಜಗತ್ತಿನ ಎಲ್ಲ ಪ್ರದೇಶಗಳ ಜನರೂ ಅನುಭವಿಸುವಂತಾಗಿದೆ ಎಂದು ಉಲ್ಲೇಖಿಸಿವೆ.

ಸಾಗರ ಭದ್ರತೆ ಹಾಗೂ ನೌಕಾಯಾನ ಸ್ವಾತಂತ್ರ್ಯದ ಪ್ರಯೋಜನವು ಎಲ್ಲ ರಾಷ್ಟ್ರಗಳಿಗೂ ಆಗುತ್ತದೆ. ಹಾಗಾಗಿ, ಅಂತರರಾಷ್ಟ್ರೀಯ ಕಾನೂನನ್ನು ಗೌರವಿಸಲು ಮತ್ತು ಅಂತರರಾಷ್ಟ್ರೀಯ ಸಮೃದ್ಧಿ, ಭದ್ರತೆಯ ಮೂಲತತ್ವವನ್ನು ಎತ್ತಿಹಿಡಿಯಲು ಎಲ್ಲ ರಾಷ್ಟ್ರಗಳೂ ಕೈಜೋಡಿಸಬೇಕು ಎಂದು ಕರೆ ನೀಡಿವೆ.

ಹೊರ್ಮುಜ್‌ ಮುಚ್ಚಿದರೆ ಏಷ್ಯಾ ದೇಶಗಳಿಗೇ ಹೆಚ್ಚು ಹೊಡೆತ: ವಿಶ್ವಸಂಸ್ಥೆ ಎಚ್ಚರಿಕೆಹೊರ್ಮುಜ್‌ ಜಲಸಂಧಿ: ಅಮೆರಿಕ, ಮಿತ್ರರಾಷ್ಟ್ರಗಳಿಗೆ ಇರಾನ್‌ ಎಚ್ಚರಿಕೆ
Dailyhunt
Disclaimer: This content has not been generated, created or edited by Dailyhunt. Publisher: Prajavani