ವಾಷಿಂಗ್ಟನ್: 'ಇರಾನ್ ವಿರುದ್ಧದ ಸಂಘರ್ಷವನ್ನು ಶಮನಗೊಳಿಸುವ ನಿಟ್ಟಿನಲ್ಲಿ ತಕ್ಷಣದ ಒಪ್ಪಂದ ಏರ್ಪಟ್ಟರೆ, ಆ ದೇಶದ ಮೇಲೆ ಮತ್ತೆ ಯಾವುದೇ ದಾಳಿ ನಡೆಸದಿರಲು ಅಮೆರಿಕ ಮತ್ತು ಇಸ್ರೇಲ್ ಸಮ್ಮತಿಸಿವೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
'ದಾಳಿಯನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಇರಾನ್ ಹಾಗೂ ಇತರ ಮಧ್ಯಪ್ರಾಚ್ಯ ದೇಶಗಳು ವಿನಂತಿ ಮಾಡಿವೆ.
ಜಗತ್ತಿನ ಒಳಿತಿಗಾಗಿ ಹಾಗೂ ಭವಿಷ್ಯದಲ್ಲಿ ಇರಾನ್ ಸಮೃದ್ಧವಾಗಿ ಉಳಿಯಲು ಈ ವಿನಂತಿಯನ್ನು ಪರಗಿಣಿಸಲಾಗಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಶಾಂತಿ ಒಪ್ಪಂದ ಮಾಡಿಕೊಳ್ಳುವುದು ಕಡ್ಡಾಯವಾಗಿದೆ' ಎಂದು ಸಾಮಾಜಿಕ ಮಾಧ್ಯಮ ಟ್ರುಥ್‌ನಲ್ಲಿ ಟ್ರಂಪ್ ಪೋಸ್ಟ್ ಮಾಡಿದ್ದಾರೆ.
'ಈ ಒಪ್ಪಂದದಲ್ಲಿ ಹೊರ್ಮುಜ್ ಜಲಸಂಧಿಯನ್ನು ತಕ್ಷಣವೇ ಮತ್ತು ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತಗೊಳಿಸುವುದು ಮತ್ತು ಇರಾನ್‌ನ ಅಣ್ವಸ್ತ್ರ ಬೆದರಿಕೆಗೆ ಶಾಶ್ವತವಾಗಿ ಅಂತ್ಯ ಹಾಡುವುದು ಒಳಪಟ್ಟಿರಬೇಕು' ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
'ಅಮೆರಿಕದ ಈ ನಿರ್ಧಾರಕ್ಕೆ ಇಸ್ರೇಲ್ ದೇಶವೂ ಬದ್ಧವಾಗಿದೆ' ಎಂದು ಟ್ರಂಪ್ ತಿಳಿಸಿದ್ದಾರೆ.
ಟ್ರಂಪ್ ಹೇಳಿದ್ದೇನು?
'ಎರಡನೇ ಮಹಾಯುದ್ಧದ ನಂತರ ಕಂಡುಬರದಂತಹ ಮಿಲಿಟರಿ ಭಯೋತ್ಪಾದನೆ, ಸಾಮರ್ಥ್ಯ ಹಾಗೂ ಭೀತಿಯ ಮಟ್ಟದಲ್ಲಿ ಅಮೆರಿಕವು ಇರಾನ್ ಇಸ್ಲಾಮಿಕ್ ಗಣರಾಜ್ಯದ ವಿರುದ್ಧ ದಾಳಿಗೆ ಸಂಪೂರ್ಣ ಸಜ್ಜಾಗಿತ್ತು. ಹಾಗಿದ್ದರೂ ಒಪ್ಪಂದದ ಮೂಲ ಚೌಕಟ್ಟಿಗೆ ಸಮ್ಮತಿ ವ್ಯಕ್ತವಾಗಿರುವುದರಿಂದ ಯಾವುದೇ ಮಿಲಿಟರಿ ದಾಳಿಯನ್ನು ಸದ್ಯಕ್ಕೆ ತಡೆಯುವಂತೆ ಇರಾನ್ ಹಾಗೂ ಇತರ ಪಶ್ಚಿಮ ಏಷ್ಯಾ ದೇಶಗಳು ನಮ್ಮನ್ನು ಕೋರಿಕೊಂಡಿವೆ. ಈ ಒಪ್ಪಂದದ ಷರತ್ತುಗಳಲ್ಲಿ ಹೊರ್ಮುಜ್ ಜಲಸಂಧಿಯನ್ನು ತಕ್ಷಣವೇ, ಸಂಪೂರ್ಣವಾಗಿ ಮುಕ್ತಗೊಳಿಸುವುದು ಹಾಗೂ ಇರಾನ್‌ನ ಅಣ್ವಸ್ತ್ರ ಬೆದರಿಕೆಗೆ ಅಂತ್ಯ ಹಾಡುವುದೂ ಸೇರಿದೆ' ಎಂದಿದ್ದಾರೆ.
'ಈ ಮನವಿಯ ಆಧಾರದಲ್ಲಿ, ಜಗತ್ತಿನ ಭವಿಷ್ಯದ ಹಿತದೃಷ್ಟಿಯಿಂದ ಹಾಗೂ ಸಮೃದ್ಧ ಮತ್ತು ಯಶಸ್ವಿ ಇರಾನ್ ದೇಶದ ಉಳಿವಿಗಾಗಿ ಶೀಘ್ರವೇ ಅಂತಿಮ ಒಪ್ಪಂದ ಮಾಡಿಕೊಳ್ಳುವ ಷರತ್ತಿಗೆ ಒಳಪಟ್ಟು ದಾಳಿಯನ್ನು ರದ್ದುಗೊಳಿಸಲು ನಾನು ಒಪ್ಪಿಕೊಂಡಿದ್ದೇನೆ. ಈ ಬದ್ಧತೆಯಲ್ಲಿ ಇಸ್ರೇಲ್ ದೇಶವೂ ನನ್ನೊಂದಿಗೆ ಕೈಜೋಡಿಸಿದೆ. ಎಲ್ಲರೂ ತಕ್ಷಣವೇ ಕಾರ್ಯಪ್ರವೃತ್ತರಾಗಿ, ಈ ಕಾರ್ಯವನ್ನು ಪೂರ್ಣಗೊಳಿಸಿ' ಎಂದು ಹೇಳಿದ್ದಾರೆ.

ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ದಾಳಿ ನಡೆಸುವ ಮೂಲಕ ಯುದ್ಧ ಆರಂಭವಾಗಿತ್ತು. ಯುದ್ಧ ಈಗಾಗಲೇ ಐದು ತಿಂಗಳುಗಳನ್ನು ದಾಟಿದ್ದು, ಒಪ್ಪಂದದ ಅನಿಶ್ಚಿತತೆಯಿಂದಾಗಿ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿತ್ತು.
ಈ ಮೊದಲು ಇರಾನ್ ಮೇಲೆ ತೀವ್ರ ದಾಳಿ ನಡೆಸುವುದಾಗಿ ಟ್ರಂಪ್ ಎಚ್ಚರಿಸಿದ್ದರು. ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್‌ನ ತೈಲ ಸಂಸ್ಕರಣಾಗಾರಗಳು ಹಾಗೂ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ನಡೆಸಲು ಸಜ್ಜಾಗಿವೆ ಎಂದೂ ವರದಿಯಾಗಿತ್ತು.
ಇರಾನ್ ಮೇಲೆ ಅಮೆರಿಕ ದಾಳಿ:ಯುದ್ಧ ಉಲ್ಬಣಗೊಳಿಸದಂತೆ ಟ್ರಂಪ್‌ಗೆ ಸೌದಿ ಯುವರಾಜ ಮನವಿಶಸ್ತ್ರ ತ್ಯಜಿಸಲು ಹಮಾಸ್ ಒಪ್ಪಿಗೆ: ಡೊನಾಲ್ಡ್ ಟ್ರಂಪ್
