Dailyhunt Logo
  • Light mode
    Follow system
    Dark mode
    • Play Story
    • App Story
ಇರಾನ್ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಜೀವಕ್ಕೆ ಯಾವುದೇ ಖಾತ್ರಿ ಇಲ್ಲ: ನೆತನ್ಯಾಹು

ಇರಾನ್ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಜೀವಕ್ಕೆ ಯಾವುದೇ ಖಾತ್ರಿ ಇಲ್ಲ: ನೆತನ್ಯಾಹು

ಜೆರುಸಲೆಮ್: 'ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಜಂಟಿ ದಾಳಿಯು ನಿರೀಕ್ಷೆಗಿಂತ ಉತ್ತಮವಾಗಿ ನಡೆಯುತ್ತಿದೆ. ಇಸ್ರೇಲ್ ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ' ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಪಾದಿಸಿದ್ದಾರೆ. ಇದೇವೇಳೆ, ಇರಾನ್‌ನ ನೂತನ ಪರಮೋಚ್ಚ ನಾಯಕರಾಗಿ ನೇಮಕವಾಗಿರುವ ಮೊಜ್ತಬಾ ಖಮೇನಿ ಜೀವಕ್ಕೆ ಯಾವುದೇ ಖಾತ್ರಿ ಇಲ್ಲ ಎಂದು ಹೇಳಿದ್ದಾರೆ.

ಖಮೇನಿ ಮತ್ತು ಹಿಜ್ಬುಲ್ಲಾ ನಾಯಕ ನಯೀಮ್ ಖಾಸೀಂ ಅವರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ಮಾಡಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಭಯೋತ್ಪಾದಕ ಸಂಘಟನೆಗಳ ಯಾವುದೇ ನಾಯಕರ ಜೀವಕ್ಕೆ ಖಾತ್ರಿ ಇರುವುದಿಲ್ಲ ಎಂದು ಉತ್ತರಿಸಿದ್ದಾರೆ.

ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೊಜ್ತಬಾ ಅವರ ತಂದೆ, ಮಾಜಿ ಪರಮೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆಯಾಗಿದ್ದರು.

ಫೆಬ್ರುವರಿ 28ರ ಕಾರ್ಯಾಚರಣೆಗೆ ಇಸ್ರೇಲ್ 'ಸಿಂಹ ಘರ್ಜನೆ' ಎಂದು ಹೆಸರಿಟ್ಟಿತ್ತು. ಅಮೆರಿಕವು ಇದನ್ನು 'ಎಪಿಕ್ ಫ್ಯೂರಿ' ಎಂದು ಕರೆದಿತ್ತು. ಇರಾನ್‌ನ ಪರಮಾಣು ಕೇಂದ್ರಗಳನ್ನು ವಿಫಲಗೊಳಿಸುವ, ಕ್ಷಿಪಣಿ ಯೋಜನೆಯನ್ನು ನಾಶಮಾಡುವ ಮತ್ತು ಅದರ ಪ್ರಾದೇಶಿಕ ಭಯೋತ್ಪಾದಕ ಗುಂಪುಗಳಿಗೆ ಭಾರಿ ಪೆಟ್ಟು ಕೊಡುವ ಉದ್ದೇಶವನ್ನು ಈ ಕಾರ್ಯಾಚರಣೆ ಹೊಂದಿತ್ತು.

ನಾವು ಇರಾನ್‌ನ ಇಸ್ಲಾಮಿಕ್ ಕ್ರಾಂತಿಕಾರಿ ಪಡೆಗೆ ದೊಡ್ಡ ಪೆಟ್ಟು ಕೊಟ್ಟಿದ್ದೇವೆ. ಬೀದಿಗಳಲ್ಲಿ ಮತ್ತು ಚೆಕ್‌ಪೋಸ್ಟ್‌ಗಳಲ್ಲಿ ಭೀಕರ ದಾಳಿ ನಡೆಸಿದ್ದೇವೆ. ಈ ಕಾರ್ಯಾಚರಣೆಯಲ್ಲಿ ನಾವು ಇನ್ನೂ ಸಕ್ರಿಯರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

ಇರಾನಿನ ಜನರನ್ನು ಉದ್ದೇಶಿಸಿ ಮಾತನಾಡುತ್ತಾ, ನೀವು ಸ್ವಾತಂತ್ರ್ಯದ ಹೊಸ ಹಾದಿಯನ್ನು ಆರಂಭಿಸಬಹುದಾದ ಆ ಕ್ಷಣ ಸಮೀಪಿಸುತ್ತಿದೆ. ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ನಿಮಗೆ ಬೇಕಾದ ಸಹಾಯ ಮಾಡುತ್ತೇವೆ ಎಂದಿದ್ದಾರೆ.

ಇರಾನ್‌ನಲ್ಲಿ ಆಡಳಿತ ಬದಲಾವಣೆಗೆ ಇಸ್ರೇಲ್ ಒತ್ತಾಯಿಸುತ್ತದೆಯೇ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನೀವು ಯಾರನ್ನಾದರೂ ನೀರಿನ ಬಳಿಗೆ ಕರೆದೊಯ್ಯಬಹುದು. ಆದರೆ, ಬಲವಂತವಾಗಿ ಕುಡಿಸಲು ಸಾಧ್ಯವಿಲ್ಲ. ನಾವು ಬದಲಾವಣೆಗೆ ಬೇಕಾದ ವಾತಾವರಣ ಸೃಷ್ಟಿಸುತ್ತೇವೆ ಎಂದಿದ್ದಾರೆ.

ಈ ಯುದ್ಧದ ಬಳಿಕ, ಇರಾನ್ ಈ ಹಿಂದಿನಂತೆ ಇರದು. ಪಶ್ಚಿಮ ಏಷ್ಯಾ ಮತ್ತು ಇಸ್ರೇಲ್ ಸಹ ಹಿಂದಿನಂತೆ ಇರುವುದಿಲ್ಲ ಎಂದಿದ್ದಾರೆ.

'ನಾವು ಯಾವುದಕ್ಕೂ ಕಾಯುವುದಿಲ್ಲ. ನಮ್ಮ ಬಲಿಷ್ಠ ಸೇನಾಪಡೆ ಬಳಸಿ ದಾಳಿ ನಡೆಸುತ್ತೇವೆ' ಎಂದಿದ್ದಾರೆ.

‌ಇರಾನ್ ವಿರುದ್ಧ ವಿಶ್ವಸಂಸ್ಥೆಯಲ್ಲಿ ನಿರ್ಣಯ: ಭಾರತ ಸಹ-ಪ್ರಾಯೋಜಕತ್ವಕೊಲ್ಲಿ ಸಂಘರ್ಷಕ್ಕೆ ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಮೊದಲ ಪ್ರತಿಕ್ರಿಯೆ
Dailyhunt
Disclaimer: This content has not been generated, created or edited by Dailyhunt. Publisher: Prajavani