2025ರ ಜೂನ್‌ನಲ್ಲಿ ಇರಾನ್‌ನ ವಾಯಪ್ರದೇಶಕ್ಕೆ ನುಗ್ಗಿದ ಇಸ್ರೇಲ್‌ನ ವಿಮಾನವೊಂದು ಅಣುಸ್ಥಾವರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಈ ದಾಳಿಯ ಸಮಯ, ಸ್ಥಳವನ್ನು ನಿರ್ಧರಿಸಿದ್ದು ಪೈಲಟ್ ಅಲ್ಲ; ಬದಲಾಗಿ ಒಂದು ಕಂಪ್ಯೂಟರ್! ಪರಿಸ್ಥಿತಿಯನ್ನು ವಿಶ್ಲೇಷಿಸಿದ ಎ.ಐ ವ್ಯವಸ್ಥೆಯು, ಗುರಿಯನ್ನು ಆಯ್ಕೆ ಮಾಡಿ, ದಾಳಿ ಮಾಡಬೇಕೆನ್ನುವ ಆದೇಶ ನೀಡಿತು.
ಅದರ ನಿರ್ದೇಶನದಂತೆ ಕಾರ್ಯಪ್ರವೃತ್ತರಾಗಿ ದಾಳಿ ನಡೆಸಿ ಗುರಿಯನ್ನು ಧ್ವಂಸಗೊಳಿಸಲಾಯಿತು.
ಇರಾನ್ ಮೇಲೆ ದಾಳಿ ನಡೆಸಲು ಆಂಥ್ರೋಪಿಕ್‌ನ 'ಕ್ಲಾಡ್' ಎ.ಐ ಬಳಸಿದ ಅಮೆರಿಕಈಗ ಯುದ್ಧದಲ್ಲಿ ಎ.ಐ ಕೇವಲ ಸಹಾಯಕ ಅಸ್ತ್ರವಾಗಿ ಉಳಿದಿಲ್ಲ; ಯುದ್ಧಭೂಮಿಯ ಅತ್ಯಂತ ಶಕ್ತಿಶಾಲಿ ಆಯುಧಗಳಲ್ಲಿ ಒಂದಾಗಿಬಿಟ್ಟಿದೆ. ಅದಕ್ಕೆ ಈ ಉದಾಹರಣೆಯೇ ಸಾಕ್ಷಿ.
ಮಿಲಿಟರಿ ಕ್ಷೇತ್ರದಲ್ಲಿ ಎ.ಐ ಉದ್ಯಮವು ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. 2024ರಲ್ಲಿ ಇದರ ಮೌಲ್ಯ ₹ 77,700 ಕೋಟಿ ಇತ್ತು. ಪ್ರತಿ ವರ್ಷ ಇದು ಶೇ 13 ರಷ್ಟು ಬೆಳೆಯುತ್ತಿದೆ. ಅಮೆರಿಕ ಮಿಲಿಟರಿಯು ಕೇವಲ ಎರಡು ವರ್ಷಗಳಲ್ಲಿ ಎ.ಐ ಮೇಲೆ 180 ಕೋಟಿ ಖರ್ಚು ಮಾಡಿದೆ. ಎ.ಐ ಮೂಲಸೌಕರ್ಯ ನಿರ್ಮಿಸಲು ₹41 ಲಕ್ಷ ಕೋಟಿಗೂ ಅಧಿಕ ಯೋಜನೆಯನ್ನು ಇದೇ ವರ್ಷ ಜನವರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಎ.ಐಗೆ ಭಾರಿ ಪ್ರಮಾಣದ ಹಣ ಸುರಿಯಲಾಗುತ್ತಿದೆ. ಶಕ್ತಿಶಾಲಿಯಾದ ಎ.ಐ ಸೇನೆ ನಿರ್ಮಿಸಲು ಅಮೆರಿಕ ಸೇರಿ ಪ್ರತಿಯೊಂದು ದೇಶವೂ ಮುನ್ನುಗ್ಗುತ್ತಿದೆ ಎನ್ನುವುದು ಸ್ಪಷ್ಟ.
2026ರ ಫೆಬ್ರುವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಸೇರಿ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ಭಾರಿ ವೈಮಾನಿಕ ದಾಳಿ ಎ.ಐನ ಶಕ್ತಿಯನ್ನು ಅನಾವರಣಗೊಳಿಸಿತು. ಕೇವಲ 24 ಗಂಟೆಗಳಲ್ಲಿ 1,000 ಗುರಿಗಳ ಮೇಲೆ ದಾಳಿ ನಡೆಸಲಾಯಿತು. ಇರಾನ್ ರಾಜಧಾನಿ ಟೆಹರಾನ್, ಇಸ್ಫಹಾನ್, ಕ್ವಾಮ್ ಮತ್ತು ಇತರ ನಗರಗಳ ಮೇಲೆ ಬಾಂಬ್‌ಗಳ ಮಳೆಗರೆಯಲಾಗಿತು. ಒಂದೇ ದಿನದಲ್ಲಿ ಇಷ್ಟು ದೊಡ್ಡ ಗುರಿಯನ್ನು ಹುಡುಕಿ ದಾಳಿ ಮಾಡಲು ಮನುಷ್ಯನಿಂದ ಸಾಧ್ಯವೇ ಇರಲಿಲ್ಲ. ಆದರೆ ಎ.ಐ ಇದನ್ನು ನಿರಾಯಾಸವಾಗಿ ಮಾಡಿತ್ತು.
ರಾಜ್ಯದಲ್ಲಿ ಎ.ಐ ಡೇಟಾ ಹಬ್ ಅಭಿವೃದ್ಧಿ: ಸಚಿವ ಎಂ.ಬಿ. ಪಾಟೀಲಈ ಕಾರ್ಯಾಚರಣೆ ನಡೆಸಲು ಅಮೆರಿಕ ಸೇನೆಯು ಆಂಥ್ರೋಪಿಕ್ ಕಂಪನಿ ಸಿದ್ಧಪಡಿಸಿದ 'ಕ್ಲಾಡ್' ಎನ್ನುವ ಎ.ಐ ಸಾಧನ ಬಳಸಿತ್ತು ಎಂದು 'ದಿ ವಾಷಿಂಗ್ಟನ್ ಪೋಸ್ಟ್' ವರದಿ ಮಾಡಿದೆ. ಗುಪ್ತಚರ ವರದಿಗಳನ್ನು ವಿಶ್ಲೇಷಿಸಿದ ಕ್ಲಾಡ್, ಯಾವ ಗುರಿಗಳ ಮೇಲೆ ದಾಳಿ ನಡೆಸಬೇಕು ಎಂದು ನಿರ್ಧರಿಸಿತು. ಇದು ಸೇನೆಯ ಕೆಲಸವನ್ನು ಸುಲಭ ಮಾಡಿತು. ನಾವು ಮನೆ, ಕಚೇರಿ ಕೆಲಸಕ್ಕೆ ಬಳಸುವ ಅದೇ ತಂತ್ರಜ್ಞಾನವನ್ನು ಅಮೆರಿಕ ಯುದ್ಧದಲ್ಲಿ ಬಳಸಿತ್ತು.
ಇಸ್ರೇಲ್ ಕೂಡ 'ಲಾವೆಂಡರ್' ಎನ್ನುವ ತನ್ನದೇ ಆದ ಎ.ಐ ವ್ಯವಸ್ಥೆಯನ್ನು ಬಳಸಿತ್ತು. ಇದು ಜನರ ನಡವಳಿಕೆ ಮತ್ತು ಆನ್‌ಲೈನ್ ಚಟುವಟಿಕೆಗಳನ್ನು ಅಧ್ಯಯನ ಮಾಡಿ, ಅವರು ಮಿಲಿಟರಿ ಗುರಿಗಳೇ ಅಥವಾ ಅಲ್ಲವೇ ಎಂದು ನಿರ್ಧರಿಸಿತ್ತು. ಇದು ಮಾನವ ಹಸ್ತಕ್ಷೇಪವಿಲ್ಲದೆ ಅತ್ಯಂತ ವೇಗವಾಗಿ ದಾಳಿ ನಡೆಸಬೇಕಾದ ಗುರಿಗಳ ಪಟ್ಟಿಗಳನ್ನು ಸಿದ್ಧಪಡಿಸಿತ್ತು.
ಈ ದಾಳಿಯಿಂದಾಗಿ ಮಾರ್ಚ್ 4ರ ವೇಳೆಗೆ ಸುಮಾರು 2,100 ಇರಾನಿ ಸೈನಿಕರು ಮತ್ತು 40 ಹಿರಿಯ ಅಧಿಕಾರಿಗಳು ಹತರಾಗಿದ್ದರು. ಪ್ರತೀಕಾರವಾಗಿ ಜೋರ್ಡಾನ್ ಮತ್ತು ಯುಎಇಯಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ದಾಳಿ ಇರಾನ್ ಮಾಡಿತು. ಜೊತೆಗೆ ಅಮೆರಿಕ ಸೇನೆಗೆ ಕ್ಲೌಡ್ ಸೇವೆಗಳನ್ನು ನೀಡುವ ಅಮೆಜಾನ್ ಕಂಪನಿಯ ಬಹರೇನ್‌ನಲ್ಲಿರುವ ಡೇಟಾ ಸೆಂಟರ್ ಮೇಲೆ ದಾಳಿ ನಡೆಸಿತು. ಸೇನೆಗೆ ತಂತ್ರಜ್ಞಾನ ಒದಗಿಸುವ ಕಂಪನಿಗಳು ಕೂಡ ಯುದ್ಧದ ಗುರಿಗಳಾಗಿ ಮಾರ್ಪಟ್ಟಿವೆ.
ಎ.ಐ ಭೀತಿ ಇಲ್ಲ: ಟಿಸಿಎಸ್ ಸಿಇಒ ಕೆ. ಕೃತಿವಾಸನ್ಎ.ಐ ಯುದ್ಧದ ಜನ್ಮಸ್ಥಳ
ಇರಾನ್ ಯುದ್ಧಕ್ಕಿಂತ ಮೊದಲು, ಯುದ್ಧಭೂಮಿಯನ್ನು ಎ.ಐ ಹೇಗೆ ಬದಲಾಯಿಸುತ್ತದೆ ಎಂಬುದನ್ನು ಜಗತ್ತಿಗೆ ಮೊದಲು ತೋರಿಸಿದ್ದು ಉಕ್ರೇನ್. ರಷ್ಯಾ-ಉಕ್ರೇನ್ ಯುದ್ಧದಲ್ಲಿ ಸಂಭವಿಸುವ ಶೇ 70-80 ರಷ್ಟು ಸಾವುಗಳಿಗೆ ಡ್ರೋನ್ ದಾಳಿಯೇ ಕಾರಣ. ಎ.ಐ ತಂತ್ರಜ್ಞಾನ ಬಳಕೆಗೂ ಮೊದಲು ಡ್ರೋನ್ ದಾಳಿಗಳು ಶೇ 30-50ರಷ್ಟು ಮಾತ್ರ ಯಶಸ್ವಿಯಾಗುತ್ತಿದ್ದವು. ಎಐ ಬಳಕೆಯಿಂದ ಈಗ ಅದರ ನಿಖರತೆ ಶೇ 80 ಕ್ಕೆ ಏರಿದೆ. ಈ ಪೈಕಿ ಕೆಲವು ಎ.ಐ ಪರಿಕರಗಳ ಬೆಲೆ ₹ 2500-₹ 3500 ಮಾತ್ರ. ಅಂದರೆ ಒಂದು ಜೋಡಿ ಶೂಗಿಂತಲೂ ಅಗ್ಗ.
ಉಕ್ರೇನ್ ನಿರ್ಮಿಸಿರುವ 'ಡೆಲ್ಟಾ' ಎನ್ನುವ ಎ.ಐ ವ್ಯವಸ್ಥೆಯು ಉಪಗ್ರಹಗಳು, ಸೆನ್ಸಾರ್‌ಗಳು, ಡ್ರೋನ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಿಂದ ಮಾಹಿತಿಯನ್ನು ಸಂಗ್ರಹಿಸಿ ಕೆಲವೇ ನಿಮಿಷಗಳಲ್ಲಿ ಅದನ್ನು ಅಧಿಕಾರಿಗಳಿಗೆ ನೀಡುತ್ತದೆ. ನೂರಾರು ಮಿಲಿಟರಿ ವಿಶ್ಲೇಷಕರು ಮಾಡಬೇಕಿದ್ದ ಕೆಲಸವನ್ನು ಈಗ ಸಾಫ್ಟ್‌ವೇರ್ ಕ್ಷಣಮಾತ್ರದಲ್ಲಿ ಮಾಡುತ್ತಿದೆ. ಉಕ್ರೇನ್‌ನ ಡಾನ್‌ಬಾಸ್ ಪ್ರದೇಶವು ಎ.ಐ ಶಸ್ತ್ರಾಸ್ತ್ರಗಳ ಜಗತ್ತಿನ ಅತಿದೊಡ್ಡ ಪರೀಕ್ಷಾ ಕೇಂದ್ರವಾಗಿ ಮಾರ್ಪಟ್ಟಿದೆ. ರಷ್ಯಾ ಕೂಡ ಇದಕ್ಕೆ ಪ್ರತಿಯಾಗಿ ತನ್ನದೇ ಆದ ಎ.ಐ ಪರಿಕರಗಳನ್ನು ಬಳಸುತ್ತಿದೆ.
OpenAI vs Anthropic: ಎ.ಐ ದಿಗ್ಗಜರ ಸಮರಕ್ಕೆ ಭಾರತವೇ ಅಖಾಡ, ಯಾಕಿಷ್ಟು ಮುನಿಸು?ಮನುಷ್ಯರಿಲ್ಲದ ಗೂಢಚರ್ಯೆ
2025ರಲ್ಲಿ ಅಮೆರಿಕದ ಗೂಢಚರ ಸಂಸ್ಥೆ ಎನ್‌ಜಿಎ ಮನುಷ್ಯರ ಸಹಾಯವಿಲ್ಲದೆ ಸಂಪೂರ್ಣವಾಗಿ ಎ.ಐ ಸಿದ್ಧಪಡಿಸಿದ ಗುಪ್ತಚರ ವರದಿಗಳನ್ನು ಬಿಡುಗಡೆ ಮಾಡಿತು. ಅಮೆರಿಕದ ವಾಯುಪಡೆಯು ಎ.ಐ ವ್ಯವಸ್ಥೆಗಳನ್ನು ಪರೀಕ್ಷಿಸಿದ್ದು, ಅವು ಯಾವುದೇ ಜನರಲ್‌ಗಿಂತ ವೇಗವಾಗಿ ಸಂಪೂರ್ಣ ಯುದ್ಧ ಯೋಜನೆಗಳನ್ನು ಸಿದ್ಧಪಡಿಸಿಕೊಡಬಲ್ಲವು. ಕೆಲವು ಯೋಜನೆಗಳು ತಪ್ಪಾಗಿದ್ದರೂ, ಅವುಗಳ ವೇಗ ಮಾತ್ರ ಅದ್ಭುತವಾಗಿತ್ತು.
ಚೀನಾ ಮತ್ತು ಭಾರತ ಸ್ಪರ್ಧೆಯಲ್ಲಿ
ಸೇನೆಯಲ್ಲಿ ಎ.ಐ ಅಳವಡಸಲು ಚೀನಾ ಕೂಡ ಹಿಂದೆ ಬಿದ್ದಿಲ್ಲ. 2025ರ ಮೇ ತಿಂಗಳಿನಲ್ಲಿ ಚೀನಾ ಕಂಪನಿಗಳು ಯುದ್ಧದ ನಿರ್ಧಾರ ತೆಗೆದುಕೊಳ್ಳುವ ಮತ್ತು ಪೈಲಟ್ ತರಬೇತಿ ನೀಡುವ ಎ.ಐ ಪರಿಕರಗಳನ್ನು ಪ್ರದರ್ಶಿಸಿದವು. ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ಮಿಲಿಟರಿಯನ್ನು ಬಲಪಡಿಸಲು ಎ.ಐ ಬಳಸುತ್ತೇವೆ ಎಂದು ಹೇಳಿದ್ದಾರೆ.
ಎ.ಐ ಶೃಂಗಸಭೆ ವೇಳೆ 'ಕೈ' ಕಾರ್ಯಕರ್ತರ ಪ್ರತಿಭಟನೆಗೆ ಖಂಡನೆ: ನಿರ್ಣಯ ಅಂಗೀಕಾರ2025 ಮೇನಲ್ಲಿ ನಡೆಸಿದ 'ಆಪರೇಷನ್ ಸಿಂಧೂರ'ದಲ್ಲಿ ಭಾರತ ತನ್ನ ಎ.ಐ ಸಾಮರ್ಥ್ಯಗಳನ್ನು ಪ್ರದರ್ಶಿಸಿತು. ದಾಳಿಯ ನಿಖರತೆ ಹಾಗೂ ಗುರಿ ನಿರ್ಣಯಕ್ಕೆ ಭಾರತ ಎ.ಐ ತಂತ್ರಜ್ಞಾನ ಬಳಸಿತ್ತು. ನೈಜ ಸಮಯದಲ್ಲಿ ಯುದ್ಧಭೂಮಿಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಭಾರತ ಎ.ಐ ಬಳಸುತ್ತಿದೆ. ಗಡಿ ಕಣ್ಗಾವಲು ಮತ್ತು ಮಿಲಿಟರಿ ಗುಪ್ತಚರಕ್ಕಾಗಿ ಭಾರತವು 'ಡಿಫೆನ್ಸ್ ಎ.ಐ ಕೌನ್ಸಿಲ್' ಸ್ಥಾಪಿಸಿದೆ.
ವೇಗದ ಮುಂದೆ ತಪ್ಪುಗಳು ಮರೆಯಾದವೇ?
ಎ.ಐ ವೇಗವಾಗಿ ವಿಶ್ಲೇಷಣೆ ಮಾಡುತ್ತದೆ, ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವುದು ಸರಿಯೇ. ಆದರೆ ಎ.ಐ ಮಾಡುವ ತಪ್ಪಿನಿಂದಾಗಿರುವ ಅನಾಹುತಗಳು ಈ ವೇಗದ ನಡುವೆ ಮರೆಯಾಗುತ್ತಿರುವುದು ನಿಜಕ್ಕೂ ಕಳವಳಕಾರಿ. 2024ರ ಏಪ್ರಿಲ್‌ನಲ್ಲಿ ಎ.ಐ ತಂತ್ರಜ್ಞಾನ ಮಾಡಿದ್ದ ತಪ್ಪಿನಿಂದಾಗಿ ಇಸ್ರೇಲಿ ಡ್ರೋನ್ 'ವರ್ಲ್ಡ್ ಸೆಂಟ್ರಲ್ ಕಿಚನ್'ನ ಏಳು ಸ್ವಯಂ ಸೇವಕರನ್ನು ಕೊಂದಿತ್ತು. ಈಗಿನ ಇರಾನ್ ಮೇಲಿನ ದಾಳಿಯಲ್ಲಿ ಟೆಹರಾನ್ ಬಳಿ ಶಾಲಾ ಮಕ್ಕಳು ಸೇರಿದಂತೆ 180 ನಾಗರಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇದು ಎ.ಐನಿಂದ ನಡೆದ ಅಚಾತುರ್ಯ ಎನ್ನುವ ವಾದಗಳಿವೆ. ಅಮೆರಿಕ ಮಿಲಿಟರಿ ಈ ಬಗ್ಗೆ ತನಿಖೆ ನಡೆಸುತ್ತಿದೆ.
ಹಾಗಾದರೆ ಎ.ಐ ಮಾಡಿದ ದೊಡ್ಡ ಪ್ರಮಾದಗಳಿಗೆ ಯಾರು ಹೊಣೆಗಾರರು? ಉತ್ತರಿಸಬೇಕಾದುದ್ದು ಯಾರು? ತಂತ್ರಜ್ಞಾನದ ಅಪಾಯದ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಎ.ಐ ಕಂಪನಿಗಳು ಕೂಡ ಹಿಂಸೆಗೆ ಎ.ಐ ಬಳಸುವುದನ್ನು ವಿರೋಧಿಸಿದ್ದಾರೆ. ಆಂಥ್ರೋಪಿಕ್‌ನ ಡೆರಿಯೊ ಅಮೊಡೆ ಯುದ್ಧಗಳಿಗೆ ಎ.ಐ ಬಳಸುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಜಿಡಿಪಿ ಹೆಚ್ಚಳಕ್ಕೆ ಎ.ಐ ಸಹಕಾರಿ: IMF ಮುಖ್ಯಸ್ಥೆ ಜಾರ್ಜಿವಾಸ್ವಯಂ ಯುದ್ಧ ಮಾಡುತ್ತಿದೆ ಎ.ಐ!
ಎ.ಐ ಈಗ ಯುದ್ಧದಲ್ಲಿ ಸೈನಿಕರಿಗೆ ಸಹಾಯ ಮಾಡುವ ಸಾಧನವಾಗಿ ಉಳಿದಿಲ್ಲ, ಬದಲಾಗಿ ತಾನೇ ಯುದ್ಧ ಮಾಡುತ್ತಿದೆ. ಇರಾನ್ ಮೇಲಿನ ದಾಳಿಯಲ್ಲಿ ಒಂದು ವಾರದಲ್ಲಿ ಎ.ಐ, 1991ರ 42 ದಿನಗಳ ಗಲ್ಫ್ ಯುದ್ಧಕ್ಕಿಂತ ಹೆಚ್ಚಿನ ಗುರಿಗಳನ್ನು ಹೊಡೆದಿವೆ. ಇದು ಯುದ್ಧಭೂಮಿಯನ್ನು ಎ.ಐ ಹೇಗೆ ಪರಿವರ್ತಿಸಿದೆ ಎನ್ನುವುದಕ್ಕೆ ನಿದರ್ಶನ. ಎ.ಐ ಓಟದಲ್ಲಿ ಹಿಂದೆ ಬೀಳುವ ದೇಶಗಳನ್ನು ಯುದ್ಧವನ್ನು ಸೋಲುವುದು ಮಾತ್ರವಲ್ಲ, ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನೇ ಕಳೆದುಕೊಳ್ಳಬಹುದು ಎಂದರೆ ಅತಿಶಯೋಕ್ತಿಯಲ್ಲ.
ಆಧಾರ: ವಾಷಿಂಗ್ಟನ್ ಪೋಸ್ಟ್, ಸಿಬಿಎಸ್ ನ್ಯೂಸ್, ವಾಲ್ ಸ್ಟ್ರೀಟ್ ಜರ್ನಲ್, ಸಿಎನ್‌ಎನ್, ಯು.ಎಸ್. ಆರ್ಮಿ ವಾರ್ ಕಾಲೇಜ್, ನ್ಯೂಯಾರ್ಕ್ ಟೈಮ್ಸ್.
ಎ.ಐ ಜಾತ್ರೆಯಲ್ಲಿ 'ಜಿ.ಐ' ಕಾಫಿಯ ಪರಿಮಳ
