ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ತೆಲುಗು ಚಿತ್ರರಂಗದ ಖ್ಯಾತ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಂದರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಕಲ್ಯಾಣ್ ಅವರಿಗೆ ಪವನ್ ಎಂಬ ಹೆಸರು ಹೇಗೆ ಬಂತು ಎನ್ನುವ ಕುರಿತು ಕುತೂಹಲಕಾರಿ ಕಥೆಯೊಂದನ್ನು ಹಂಚಿಕೊಂಡಿದ್ದಾರೆ.
ಎಎನ್‌ಐ ಜೊತೆ ಮಾತನಾಡಿದ ಪವನ್ ಕಲ್ಯಾಣ್, ತಮ್ಮ ಬಾಲ್ಯದ ಹೆಸರು ಮತ್ತು ಕಾಲಾನಂತರದಲ್ಲಿ ಅದು ಹೇಗೆ ಪವನ್ ಕಲ್ಯಾಣ್ ಆಗಿ ಬದಲಾಯಿತು ಎಂಬುದನ್ನು ಬಿಚ್ಚಿಟ್ಟಿದ್ದಾರೆ.
'ನನಗೆ ತಿರುಮಲ ದೇವಸ್ಥಾನದ ಯೋಗ ನರಸಿಂಹ ಸ್ವಾಮಿ ಸನ್ನಿಧಿಯಲ್ಲಿ ನಾಮಕರಣ ಮಾಡಲಾಗಿತ್ತು. ಆ ಸಮಾರಂಭದಲ್ಲಿ ನನಗೆ ಶ್ರೀ ಕಲ್ಯಾಣ್ ಕುಮಾರ್ ಎಂದು ಹೆಸರಿಡಲಾಗಿತ್ತು. ಆದರೆ ಶಾಲಾ ದಾಖಲೆಗಳಲ್ಲಿ ಹೆಸರಿನ ಮುಂಭಾಗದಲ್ಲಿದ್ದ ಶ್ರೀ ಎಂಬುದನ್ನು ಬದಲಿಸಲಾಯಿತು. ನಮ್ಮ ಮನೆತನದ ಹೆಸರನ್ನು ಸೇರಿಸಿ ಕೆ. ಕಲ್ಯಾಣ್ ಕುಮಾರ್ ಎಂದು ಶಾಲಾ ದಾಖಲೆಗಳಲ್ಲಿ ನಮೂದಿಸಲಾಯಿತು' ಎಂದರು.
ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಪುಟ್ಟ ಅಭಿಮಾನಿಯನ್ನು ಭೇಟಿಯಾದ ಪವನ್ ಕಲ್ಯಾಣ್ಶಸ್ತ್ರಚಿಕಿತ್ಸೆ ವೇಳೆ ರೋಗಿಗೆ ಪವನ್ ಕಲ್ಯಾಣ್ ಸಿನಿಮಾ ತೋರಿಸಿದ ವೈದ್ಯರು! ಏಕೆ?ಎದೆಯ ಮೇಲೆ 450 ಕೆಜಿ ಕಲ್ಲು: 'ಪವನ್' ಎಂದು ಕರೆದ ಗುರುಗಳು
ಕಲ್ಯಾಣ್ ಕುಮಾರ್ ಎಂಬ ಹೆಸರಿನೊಂದಿಗೆ ಪವನ್ ಎಂಬ ಪದ ಹೇಗೆ ಸೇರಿಕೊಂಡಿತು ಎನ್ನುವ ಬಗ್ಗೆ ಅವರು ವಿವರಿಸಿದ್ದಾರೆ. 'ನಾನು ಚಿತ್ರರಂಗಕ್ಕೆ ಬರುವ ಮುನ್ನ ಮತ್ತು ಬಂದ ಆರಂಭದ ದಿನಗಳಲ್ಲಿ ಕಠಿಣ ಮಾರ್ಷಲ್ ಆರ್ಟ್ಸ್ ಹಾಗೂ ದೈಹಿಕ ಶಕ್ತಿ ಪ್ರದರ್ಶನದ ತರಬೇತಿ ಪಡೆಯುತ್ತಿದ್ದೆ. ಆ ಸಮಯದಲ್ಲಿ ನಾನು ಕಠಿಣವಾದ ಸಾಹಸ ಪ್ರದರ್ಶನಗಳನ್ನು ನೀಡುತ್ತಿದ್ದೆ. ನನ್ನ ಎದೆಯ ಮೇಲೆ 450 ಕಿಲೋಗ್ರಾಂ ತೂಕದ ಕಲ್ಲುಗಳನ್ನು ಇಟ್ಟುಕೊಳ್ಳುತ್ತಿದ್ದೆ ಮತ್ತು ಪ್ರದರ್ಶನದ ವೇಳೆ ಆ ಕಲ್ಲುಗಳನ್ನು ಎದೆಯ ಮೇಲೆಯೇ ಒಡೆದು ಪುಡಿ ಮಾಡಲಾಗುತ್ತಿತ್ತು' ಎಂದಿದ್ದಾರೆ.
'ನನ್ನ ಈ ಅಪ್ರತಿಮ ದೈಹಿಕ ಶಕ್ತಿ ಮತ್ತು ಸಾಹಸಗಳನ್ನು ನೋಡಿದ ನನ್ನ ಮಾರ್ಷಲ್ ಆರ್ಟ್ಸ್ ಗುರುಗಳು ಒಂದು ದಿನ, ನೀನು ಸಾಕ್ಷಾತ್ ಪವನ ಪುತ್ರ ಹನುಮಂತನಂತಿದ್ದೀಯಾ ಎಂದು ಶ್ಲಾಘಿಸಿದರು. ಆ ಕಾರಣಕ್ಕಾಗಿಯೇ ಅವರು ನನ್ನ ಹೆಸರಿನ ಮುಂದೆ ಪವನ್ ಎಂಬ ಹೆಸರನ್ನು ಸೇರಿಸಿದರು' ಎಂದು ಪವನ್ ಕಲ್ಯಾಣ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಅಂದು ಗುರುಗಳು ನೀಡಿದ ಆ ಪವನ್ ಎಂಬ ಹೆಸರೇ ಇಂದು ತೆಲುಗು ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ಹೆಸರಾಗಿ ಮಾರ್ಪಟ್ಟಿದೆ. ಅಭಿಮಾನಿಗಳಿಂದ ಪವರ್ ಸ್ಟಾರ್ ಎಂದು ಕರೆಸಿಕೊಳ್ಳುವ ಪವನ್ ಕಲ್ಯಾಣ್, ಸದ್ಯ ಆಂಧ್ರಪ್ರದೇಶದ 11ನೇ ಉಪಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ದಕ್ಷಿಣ ಭಾರತದ ಅತ್ಯಂತ ಪ್ರಭಾವಶಾಲಿ ರಾಜಕೀಯ ನಾಯಕರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.

