ಫ್ಲೋರಿಡಾ: 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸ್ಕಾಟ್ಲೆಂಡ್ ವಿರುದ್ಧ 3-0 ಗೋಲುಗಳ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಐದು ಬಾರಿಯ ಚಾಂಪಿಯನ್ ಬ್ರೆಜಿಲ್, ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿದೆ.
ವಿನಿಷಿಯಸ್ ಜೂನಿಯರ್ ಎರಡು ಗೋಲುಗಳನ್ನು ಬಾರಿಸಿ ಬ್ರೆಜಿಲ್ ಗೆಲುವಿನ ರೂವಾರಿಯೆನಿಸಿದ್ದಾರೆ.
ಮೊದಲಾರ್ಧದಲ್ಲೇ (7 ಹಾಗೂ 45+3) ಎರಡು ಗೋಲು ಗಳಿಸಿದ ವಿನಿಷಿಯಸ್ ಕಾಲ್ಚಳಕ ಪ್ರದರ್ಶಿಸಿದ್ದಾರೆ.
ಬಳಿಕ ಪಂದ್ಯದ 60ನೇ ನಿಮಿಷದಲ್ಲಿ ಗೋಲು ಗಳಿಸಿದ ಮ್ಯಾಥ್ಯೂಸ್ ಕುನ್ಹಾ ಬ್ರೆಜಿಲ್ ಗೆಲುವಿನ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ.
'ಸಿ' ಗುಂಪಿನಲ್ಲಿ ಬ್ರೆಜಿಲ್‌ಗೆ ಅಗ್ರಸ್ಥಾನ
ಕೊನೆಯ ಲೀಗ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬ್ರೆಜಿಲ್ 'ಸಿ' ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ನಾಕೌಟ್‌ಗೆ ಲಗ್ಗೆ ಇಟ್ಟಿದೆ. ಈ ಗುಂಪಿನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ ಒಂದು ಡ್ರಾ ಫಲಿತಾಂಶದೊಂದಿಗೆ ಒಟ್ಟು ಏಳು ಅಂಕ ಗಳಿಸಿದೆ.
ಮತ್ತೊಂದೆಡೆ ಸ್ಕಾಟ್ಲೆಂಡ್ ತನ್ನ ಅವಕಾಶಕ್ಕಾಗಿ ಇತರೆ ತಂಡಗಳ ಫಲಿತಾಂಶಕ್ಕಾಗಿ ಕಾಯಬೇಕಿದೆ. ಫಿಫಾ ನಿಯಮದ ಪ್ರಕಾರ 24 ತಂಡಗಳ ಹೊರತಾಗಿ ಉತ್ತಮ ಸಾಧನೆ ಮಾಡಿದ ಇತರೆ ಎಂಟು ತಂಡಗಳು ನಾಕೌಟ್‌ಗೆ ಅವಕಾಶ ಪಡೆಯುತ್ತವೆ.
ಬದಲಿ ಆಟಗಾರನಾಗಿ ಕಣಕ್ಕಿಳಿದ ನೇಮರ್
ಪಂದ್ಯದ 76ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿಯುವ ಮೂಲಕ 34 ವರ್ಷದ ನೇಮರ್ ಜೂನಿಯರ್ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೆ ಗಾಯಮುಕ್ತಗೊಂಡಿರುವ ನೇಮರ್, 2023ರ ಬಳಿಕ ಮೊದಲ ಬಾರಿ ಬ್ರೆಜಿಲ್ ಪರ ಮೈದಾನಕ್ಕಿಳಿದಿದ್ದಾರೆ.
ಇದರೊಂದಿಗೆ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ (2014, 2018, 2022, 2026) ಸತತ ನಾಲ್ಕನೇ ಸಲ ಆಡಿದ ಸಾಧನೆ ಮಾಡಿದ್ದಾರೆ.
ವಿನಿಷಿಯಸ್ ಜೂನಿಯರ್ ದಾಖಲೆ...
ಬ್ರೆಜಿಲ್ ಪರ ಫಿಫಾ ವಿಶ್ವಕಪ್ ಆವೃತ್ತಿಯೊಂದರಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಗೋಲು ಗಳಿಸಿದ ಆಟಗಾರ ಎಂಬ ಖ್ಯಾತಿಗೆ ವಿನಿಷಿಯಸ್ ಜೂನಿಯರ್ ಪಾತ್ರರಾಗಿದ್ದಾರೆ.
ಈ ಮೊದಲು ಮೊರಕ್ಕೊ ಹಾಗೂ ಹೈಟಿ ವಿರುದ್ಧದ ಪಂದ್ಯಗಳಲ್ಲೂ ವಿನಿಷಿಯಸ್ ಗೋಲು ಗಳಿಸಿದ್ದಾರೆ.
ಒಟ್ಟಾರೆಯಾಗಿ ಬ್ರೆಜಿಲ್ ಪರ ಈ ಸಾಧನೆ ಮಾಡಿದ ಬ್ರೆಜಿಲ್‌ನ ಐದನೇ ಆಟಗಾರ ಎನಿಸಿದ್ದಾರೆ. ಬ್ರೆಜಿಲ್ ಪರ 2002ರಲ್ಲಿ ರೊನಾಲ್ಡೊ ನಜಾರಿಯೊ ಇದೇ ಸಾಧನೆ ಮಾಡಿದ್ದರು. 24 ವರ್ಷಗಳ ಬಳಿಕ ಈ ಸಾಧನೆಯನ್ನು ವಿನಿಷಿಯಸ್ ಸರಿಗಟ್ಟಿದ್ದಾರೆ.

