Dailyhunt Logo
  • Light mode
    Follow system
    Dark mode
    • Play Story
    • App Story
ಕೊಲ್ಲಿ ಯುದ್ಧ ಪರಿಣಾಮ: ಪರ್ಯಾಯ ಇಂಧನ ಮೂಲ ಹುಡುಕಾಟದಲ್ಲಿ ರಾಷ್ಟ್ರಗಳು

ಕೊಲ್ಲಿ ಯುದ್ಧ ಪರಿಣಾಮ: ಪರ್ಯಾಯ ಇಂಧನ ಮೂಲ ಹುಡುಕಾಟದಲ್ಲಿ ರಾಷ್ಟ್ರಗಳು

ಶ್ಚಿಮ ಯುರೋಪಿನಿಂದ ಪೂರ್ವ ಏಷ್ಯಾದವರೆಗೆ ವಿಶ್ವದ ಹಲವು ರಾಷ್ಟ್ರಗಳು ನೈಸರ್ಗಿಕ ಅನಿಲಕ್ಕಾಗಿ ಜಾಗತಿಕ ಮಟ್ಟದಲ್ಲಿ ಹುಡುಕಾಟ ನಡೆಸುತ್ತಿವೆ. ಇರಾನ್‌ನಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಪರ್ಷಿಯನ್ ಕೊಲ್ಲಿಯಿಂದ ಪೂರೈಕೆಯಾಗುತ್ತಿದ್ದ ಇಂಧನ ಸ್ಥಗಿತಗೊಂಡಿವೆ.

ಅಡುಗೆ ಮನೆಯಲ್ಲಿ ಪಾಕಕ್ಕೆ, ವಿದ್ಯುತ್ ಉತ್ಪಾದನೆಗೆ ಅನಿಲವನ್ನೇ ನಂಬಿದ್ದ ದೇಶಗಳು ಈಗ ಸಂಕಷ್ಟಕ್ಕೆ ಸಿಲುಕಿವೆ.

ಕೊಲ್ಲಿ ಯುದ್ಧ: ಮಾರ್ಚ್‌ನಲ್ಲಿ ₹ 1.14 ಲಕ್ಷ ಕೋಟಿ ಹಿಂಪಡೆದ ವಿದೇಶಿ ಹೂಡಿಕೆದಾರರು

ವಿಶ್ವದ ಅತಿದೊಡ್ಡ ಅನಿಲ ರಫ್ತುದಾರ ರಾಷ್ಟ್ರವಾಗಿರುವ ಅಮೆರಿಕ ಈ ಪರಿಸ್ಥಿತಿಯ ಲಾಭವನ್ನು ಅಲ್ಪಾವಧಿಗೆ ಪಡೆಯುವುದು ಖಚಿತ ಎನ್ನಲಾಗಿದೆ. ಆದರೆ ಇರಾನ್ ಯುದ್ಧ ಎರಡನೇ ತಿಂಗಳಿಗೆ ಕಾಲಿಟ್ಟಿದ್ದು, ಇದು ಅನಿಲ ಮೇಲೆ ಹೆಚ್ಚುವ ಅವಲಂಬಿತವಾಗಿರುವ ರಾಷ್ಟ್ರಗಳಿಗೆ ತಲೆನೋವಾಗಿದೆ. ಈಗಿನ ಸನ್ನಿವೇಶದಲ್ಲಿ ಅನಿಲ ಆಮದು ಮಾಡಿಕೊಳ್ಳುವುದು ಅತ್ಯಂತ ಅಪಾಯಕಾರಿ ನಿರ್ಧಾರವಾಗಿದ್ದು, ಜಾಗತಿಕ ರಾಜಕೀಯ ಸಂಘರ್ಷಗಳ ಸಂದರ್ಭದಲ್ಲಿ ಇದು ಹೆಚ್ಚಿನ ಬೆಲೆ ಮತ್ತು ಕೊರತೆಯ ಭೀತಿಯನ್ನು ಒಡ್ಡುತ್ತದೆ. ಇದು ನೈಸರ್ಗಿಕ ಅನಿಲ ಮಾರಾಟ ಮಾಡಲು ಯೋಜಿಸುತ್ತಿದ್ದ ತೈಲ ಮತ್ತು ಅನಿಲ ಉದ್ಯಮಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೇ ವೇಳೆ ನವೀಕರಿಸಬಹುದಾದ ಇಂಧನ, ಕಲ್ಲಿದ್ದಲು ಮತ್ತು ಪರಮಾಣು ಶಕ್ತಿಯಂತಹ ಪರ್ಯಾಯ ಮಾರ್ಗಗಳಿಗೆ ಹೊಸ ಅವಕಾಶಗಳನ್ನೂ ಸೃಷ್ಟಿಸಿದೆ.

'ಪ್ರತಿ ನಾಲ್ಕೈದು ವರ್ಷಕ್ಕೊಮ್ಮೆ ಮರುಕಳಿಸುತ್ತಿರುವ ಇಂತಹ ಅಸ್ಥಿರತೆಯು ಮಾರುಕಟ್ಟೆಗೆ ಒಳ್ಳೆಯದಲ್ಲ' ಎಂದು ಅಮೆರಿಕದ ಪ್ರಮುಖ ಅನಿಲ ರಫ್ತು ಸಂಸ್ಥೆಯಾದ 'ಚೆನಿಯರ್ ಎನರ್ಜಿ'ಯ ಸಿಇಒ ಜ್ಯಾಕ್ ಫಸ್ಕೊ ಕಳೆದ ವಾರ ಹೂಸ್ಟನ್‌ನಲ್ಲಿ ನಡೆದ ಇಂಧನ ಸಮ್ಮೇಳನದಲ್ಲಿ ಅಭಿಪ್ರಾಯಪಟ್ಟಿದ್ದರು. ಇತ್ತೀಚಿನ ವರ್ಷಗಳಲ್ಲಿ ಯುದ್ಧದ ಕಾರಣದಿಂದಾಗಿ ನೈಸರ್ಗಿಕ ಅನಿಲದ ಬೆಲೆ ಗಗನಕ್ಕೇರಿರುವುದು ಇದು ಎರಡನೇ ಬಾರಿ. ಈ ಹಿಂದೆ 2022ರಲ್ಲಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದಾಗಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗಿನ ಅನಿಲ ಬೆಲೆ ನಾಲ್ಕು ವರ್ಷಗಳ ಹಿಂದಿಗಿಂತ ಕಡಿಮೆ ಇದ್ದರೂ, ಇರಾನ್ ಯುದ್ಧವು ಇನ್ನೂ ಮುಗಿಯದಿರುವುದು ಆತಂಕಕ್ಕೆ ಕಾರಣವಾಗಿದೆ.

ಕೊಲ್ಲಿ ಸಮರದಿಂದ ಭಾರತ-ಅರಬ್ ಸಂಬಂಧಕ್ಕೆ ಅಡ್ಡಿ: ದೇಶದ ಆರ್ಥಿಕತೆಗೆ 'ಹೊಸ ಆಘಾತ'

ವಿಶ್ವದ ಅತಿದೊಡ್ಡ ಅನಿಲ ರಫ್ತುದಾರ ರಾಷ್ಟ್ರಗಳಲ್ಲಿ ಒಂದಾದ ಕತಾರ್‌ಗೆ ಅನಿಲ ಪೂರೈಕೆಯನ್ನು ಪುನರಾರಂಭಿಸಲು ಸಾಧ್ಯವಾಗದಿದ್ದರೆ ಬೆಲೆ ಗಣನೀಯವಾಗಿ ಏರಿಕೆಯಾಗಲಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಯುದ್ಧ ಆರಂಭವಾದ ಮೂರನೇ ದಿನಕ್ಕೆ ಅನಿಲ ರಫ್ತು ಮಾಡುವುದನ್ನು ಕತಾರ್ ಸ್ಥಗಿತಗೊಳಿಸಿತ್ತು. ಅಲ್ಲಿನ ಘಟಕಗಳು ಇರಾನ್‌ನ ದಾಳಿಯಿಂದ ಭಾರಿ ಹಾನಿಗೊಳಗಾಗಿದ್ದು, ಅವುಗಳ ದುರಸ್ತಿಗೆ ಹಲವಾರು ವರ್ಷಗಳೇ ಬೇಕಾಗಬಹುದು ಎಂದು ಅಲ್ಲಿನ ಸರ್ಕಾರಿ ಸ್ವಾಮ್ಯದ ಇಂಧನ ಸಂಸ್ಥೆ ತಿಳಿಸಿದೆ.

ನೈಸರ್ಗಿಕ ಅನಿಲದ ಖರೀದಿ ಮತ್ತು ಮಾರಾಟ ಅಷ್ಟು ಸುಲಭದ ಪ್ರಕ್ರಿಯೆಯಲ್ಲ. ಇಂಧನವನ್ನು ಸಮುದ್ರದಾಚೆಗೆ ರವಾನಿಸಲು ದೊಡ್ಡ ಹೂಡಿಕೆಯೇ ಬೇಕು. ಭೂಮಿಯಿಂದ ಹೊರತೆಗೆದ ನೈಸರ್ಗಿಕ ಅನಿಲವನ್ನು ರಫ್ತು ಮಾಡುವ ಮೊದಲು ಮೈನಸ್ 162 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ತಂಪುಗೊಳಿಸಿ ದ್ರವೀಕರಿಸಬೇಕು. ಈ ದ್ರವೀಕೃತ ನೈಸರ್ಗಿಕ ಅನಿಲವನ್ನು (ಎಲ್‌ಎನ್‌ಜಿ) ದೊಡ್ಡ ಟ್ಯಾಂಕರ್‌ಗಳ ಮೂಲಕ ಸಾಗಿಸಲಾಗುತ್ತದೆ. ಎಲ್‌ಎನ್‌ಜಿ ಖರೀದಿಸುವ ರಾಷ್ಟ್ರಗಳು ಅದನ್ನು ಮತ್ತೆ ಅನಿಲವಾಗಿ ಪರಿವರ್ತಿಸಿ, ಮನೆ ಹಾಗೂ ಕಾರ್ಖಾನೆಗಳಿಗೆ ಪೂರೈಸಲು ಪೈಪ್‌ಲೈನ್‌ಗಳನ್ನು ನಿರ್ಮಿಸಬೇಕಾಗುತ್ತದೆ.

ಇಷ್ಟೆಲ್ಲಾ ಖರ್ಚು ಮಾಡಿ ವ್ಯವಸ್ಥೆಗಳನ್ನು ಮಾಡಿಕೊಂಡರೂ, ಈಗ ಹಲವು ರಾಷ್ಟ್ರಗಳು ಅನಿಲ ಪೂರೈಕೆಯಿಲ್ಲದೆ ಪರದಾಡುವಂತಾಗಿದೆ. ವಿಶ್ವದ ಎಲ್‌ಎನ್‌ಜಿ ಮಾರುಕಟ್ಟೆಯಲ್ಲಿ ಕತಾರ್‌ನ ಪಾಲು ಶೇ 20ರಷ್ಟು ಇರುವುದರಿಂದ, ಅದು ರಫ್ತು ಸ್ಥಗಿತಗೊಳಿಸಿದ್ದು ಭಾರಿ ಹೊಡೆತ ನೀಡಿದೆ.ಇತರ ರಫ್ತುದಾರ ರಾಷ್ಟ್ರಗಳು ಈ ಕೊರತೆಯನ್ನು ತಕ್ಷಣವೇ ನೀಗಿಸುವಷ್ಟು ಸಾಮರ್ಥ್ಯವನ್ನು ಹೊಂದಿಲ್ಲ.

ಕೊಲ್ಲಿ ಬಿಕ್ಕಟ್ಟಿನಲ್ಲಿ ಪಾಕ್ ಮಧ್ಯಸ್ಥಿಕೆಯು ಭಾರತಕ್ಕೆ ಹಿನ್ನಡೆ: ಕಾಂಗ್ರೆಸ್

ಕತಾರ್‌ನಿಂದ ಅನಿಲ ಖರೀದಿಸುತ್ತಿದ್ದ ಜಪಾನ್, ಬಾಂಗ್ಲಾದೇಶ ಮತ್ತು ಥಾಯ್ಲಂಡ್‌ನಂತಹ ರಾಷ್ಟ್ರಗಳು ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲನ್ನು ಬಳಸಲು ಮುಂದಾಗಿವೆ. ದಕ್ಷಿಣ ಕೊರಿಯಾವು ತನ್ನ ನಾಗರಿಕರಿಗೆ ಇಂಧನ ಉಳಿತಾಯ ಮಾಡುವಂತೆ ಮತ್ತು ಸ್ನಾನದ ಸಮಯವನ್ನು ಕಡಿತಗೊಳಿಸುವಂತೆ ಸೂಚಿಸಿದೆ.

ಇನ್ನೊಂದೆಡೆ ಪರ್ಷಿಯನ್ ಕೊಲ್ಲಿಯ ಹೊರಗೆ ಉತ್ಪಾದನೆಯಾಗುವ ಎಲ್‌ಎನ್‌ಜಿಗಾಗಿ ಹಲವು ರಾಷ್ಟ್ರಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಇದು ಅಮೆರಿಕದ ಕಂಪನಿಗಳಿಗೆ ವರದಾನವಾಗಿದ್ದು, ಅವು ರಫ್ತು ಕೇಂದ್ರಗಳನ್ನು ಹೆಚ್ಚಿಸಲು ಮತ್ತು ಹೆಚ್ಚಿನ ಬೆಲೆ ವಿಧಿಸಲು ಯೋಜಿಸುತ್ತಿವೆ. ಕೆನಡಾ ಅಥವಾ ಅರ್ಜೆಂಟಿನಾದಂತಹ ದೇಶಗಳಲ್ಲಿನ ಹೊಸ ಅನಿಲ ಯೋಜನೆಗಳಿಗೂ ಈಗ ಬೇಡಿಕೆ ಕುದುರಿದೆ.

ಈ ಪರಿಸ್ಥಿತಿ ದೀರ್ಘಕಾಲ ಮುಂದುವರಿದರೆ, ಆಮದು ಮಾಡಿಕೊಳ್ಳುವ ರಾಷ್ಟ್ರಗಳು ಭವಿಷ್ಯದ ಅನಿಶ್ಚಿತತೆಯಿಂದ ಪಾರಾಗಲು ತಮ್ಮ ಸ್ವಂತ ಇಂಧನ ಮೂಲಗಳನ್ನು ಅಭಿವೃದ್ಧಿಪಡಿಸಲು ಅಥವಾ ಉಳಿತಾಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬಹುದು. ಅಂತರರಾಷ್ಟ್ರೀಯ ಇಂಧನ ಸಂಸ್ಥೆಯ (ಐಇಎ) ಅಂಕಿಅಂಶಗಳ ಪ್ರಕಾರ, 2021 ಕ್ಕೆ ಹೋಲಿಸಿದರೆ ಯುರೋಪ್ ಈಗ ಶೇ 16ರಷ್ಟು ಕಡಿಮೆ ನೈಸರ್ಗಿಕ ಅನಿಲವನ್ನು ಬಳಸುತ್ತಿದೆ.

ಹೆಚ್ಚುತ್ತಿರುವ ಅನಿಲ ಬೆಲೆ, ಪರ್ಯಾಯ ಇಂಧನ ಮೂಲಗಳನ್ನು ಹುಡುಕುವಂತೆ ಮಾಡಿದೆ. ಏಷ್ಯಾದಲ್ಲಿ 2030 ರ ವೇಳೆಗೆ ಅನಿಲದ ಬೇಡಿಕೆಯು ಶೇ 9ರಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈಗ ಅನಿಲ ಬೆಲೆ ಏರಿಕೆಯಿಂದಾಗಿ ರಾಷ್ಟ್ರಗಳು ಇತರ ಇಂಧನ ಮೂಲಗಳತ್ತ ವಾಲಿದರೆ ಈ ಬೇಡಿಕೆ ಕುಂಠಿತಗೊಳ್ಳಬಹುದು.

ಸಾವಿರಾರು ವರ್ಷಗಳವರೆಗೆ ದತ್ತಾಂಶ ಸಂಗ್ರಹ: ಗಾಜಿನಲ್ಲೇ ಮೈಕ್ರೊಸಾಫ್ಟ್ ಮ್ಯಾಜಿಕ್

ಗೋಲ್ಡ್‌ಮನ್ ಸ್ಯಾಚ್ಸ್ ಅಂದಾಜಿನ ಪ್ರಕಾರ, 2028ರ ವೇಳೆಗೆ ಏಷ್ಯಾದಲ್ಲಿ ಎಲ್‌ಎನ್‌ಜಿ ಬೆಲೆ ಈ ಹಿಂದಿನ ಅಂದಾಜಿಗಿಂತ ಶೇ 57ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಯುರೋಪ್ ಮಾರುಕಟ್ಟೆಯ ಬಗ್ಗೆಯೂ ಇದೇ ರೀತಿಯ ಅಂದಾಜುಗಳನ್ನು ಮಾಡಲಾಗಿದೆ.

'ನವೀಕರಿಸಬಹುದಾದ ಇಂಧನ ಹೊಂದಿರದ ಮತ್ತು ಆಮದಿನ ಮೇಲೆ ಅವಲಂಬಿತವಾಗಿರುವ ದೇಶಗಳು ತಮ್ಮ ಹಿತಾಸಕ್ತಿ ಕಾಯ್ದುಕೊಳ್ಳಲು ನವೀಕರಿಸಬಹುದಾದ ಇಂಧನ, ಶೇಖರಣಾ ವ್ಯವಸ್ಥೆ ಅಥವಾ ಪರಮಾಣು ಶಕ್ತಿಯ ಮೊರೆ ಹೋಗಲಿವೆ' ಎಂದು 'ನೆಕ್ಸ್ಟ್‌ಎರಾ ಎನರ್ಜಿ'ಯ ಸಿಇಒ ಜಾನ್ ಕೆಚಮ್ ಅಭಿಪ್ರಾಯಪಟ್ಟಿದ್ದಾರೆ.

ಈ ನಿಟ್ಟಿನಲ್ಲಿ ಚೀನಾ ಮಾದರಿ ಹಲವು ದೇಶಳಿಗೆ ಪಾಠ. 20 ವರ್ಷಗಳಲ್ಲಿ ಚೀನಾವು ಆಮದು ಮಾಡಿಕೊಳ್ಳುವ ತೈಲ ಮತ್ತು ಅನಿಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಗಣನೀಯ ಶ್ರಮ ಹಾಕಿದೆ. ಅದು ನೂರಾರು ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಿದೆ. ವಿಶ್ವದ ಉಳಿದ ಭಾಗಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪವನ ಮತ್ತು ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಿದೆ.

ಸದ್ಯಕ್ಕೆ ಅಮೆರಿಕದ ಗ್ರಾಹಕರು ಮತ್ತು ಉದ್ಯಮಗಳು ಅನಿಲ ಬೆಲೆ ಏರಿಕೆಯಿಂದ ಬಚಾವಾಗಿವೆ. ಏಕೆಂದರೆ ಅಮೆರಿಕವು ಅತಿ ಹೆಚ್ಚು ಅನಿಲ ಉತ್ಪಾದಿಸುವ ರಾಷ್ಟ್ರವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಅಮೆರಿಕದ ಅನಿಲಕ್ಕೆ ಜಾಗತಿಕ ಬೇಡಿಕೆ ಹೆಚ್ಚಾಗಿ, ಕತಾರ್‌ನ ಪೂರೈಕೆ ಕಡಿಮೆಯಾದರೆ, ಅಮೆರಿಕದಲ್ಲಿಯೂ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಗೋಲ್ಡ್‌ಮನ್ ಸ್ಯಾಚ್ಸ್ ತಿಳಿಸಿದೆ.

(ಆಧಾರ: ನ್ಯೂಯಾರ್ಕ್ ಟೈಮ್ಸ್, ರಾಯಿಟರ್ಸ್)

ಹೊರ್ಮುಜ್: ವಿಶ್ವವನ್ನೇ ತಲ್ಲಣಗೊಳಿಸಿದ 'ಕಷ್ಟ ಸಂಧಿ', ಇರಾನ್‌ಗೆ ವರದಾನವೇಕೆ?
Dailyhunt
Disclaimer: This content has not been generated, created or edited by Dailyhunt. Publisher: Prajavani