Dailyhunt Logo
  • Light mode
    Follow system
    Dark mode
    • Play Story
    • App Story
ಮಾನವ ಇತಿಹಾಸವನ್ನೇ ಬದಲಿಸಿದ್ದ ಎಲ್ ನಿನೊ! ಕಾದಿದೆಯಾ ಮಹಾ ವಿಪತ್ತು?

ಮಾನವ ಇತಿಹಾಸವನ್ನೇ ಬದಲಿಸಿದ್ದ ಎಲ್ ನಿನೊ! ಕಾದಿದೆಯಾ ಮಹಾ ವಿಪತ್ತು?

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಮಾನವ ಇತಿಹಾಸವನ್ನೇ ಬದಲಿಸಿದ್ದ ಎಲ್ ನಿನೊ! ಕಾದಿದೆಯಾ ಮಹಾ ವಿಪತ್ತು?

ಒಂದು ಸಾಲಿನಲ್ಲಿಪೆಸಿಫಿಕ್ ಸಾಗರದ ಉಷ್ಣಾಂಶ ಹೆಚ್ಚಳದಿಂದ ಉಂಟಾಗುವ ಎಲ್ ನಿನೊ ವಿದ್ಯಮಾನವು ಜಾಗತಿಕ ಹವಾಮಾನ ಮತ್ತು ಭಾರತದ ಮುಂಗಾರಿನ ಮೇಲೆ ಗಂಭೀರ ಪರಿಣಾಮಗಳನ್ನು ಬೀರಲಿದ್ದು, ಆರ್ಥಿಕ ಸವಾಲುಗಳನ್ನು ಒಡ್ಡುತ್ತಿದೆ.

ಪ್ರಮುಖ ಅಂಶಗಳು• ಎಲ್ ನಿನೊದ ಭೀಕರ ಪರಿಣಾಮಪೆಸಿಫಿಕ್ ಮಹಾಸಾಗರದ ಉಷ್ಣಾಂಶ ಮತ್ತು ಮಾರುತಗಳ ಬದಲಾವಣೆಯಿಂದ ಉಂಟಾಗುವ ಎಲ್ ನಿನೊ, ವಿಶ್ವಾದ್ಯಂತ ಬರಗಾಲ ಅಥವಾ ಪ್ರವಾಹದಂತಹ ತೀವ್ರ ಹವಾಮಾನ ವೈಪರೀತ್ಯಗಳಿಗೆ ಕಾರಣವಾಗುತ್ತದೆ.• ಐತಿಹಾಸಿಕ ದುರಂತಗಳು1877-78ರ ತೀವ್ರ ಬರಗಾಲದಂತಹ ಹಿಂದಿನ ಘಟನೆಗಳು ಲಕ್ಷಾಂತರ ಜನರನ್ನು ಬಲಿ ಪಡೆದಿದ್ದು, ಹಸಿವು ಮತ್ತು ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಸಿದ್ದವು ಎಂದು ಇತಿಹಾಸಕಾರರು ದಾಖಲಿಸಿದ್ದಾರೆ.• ಜಾಗತಿಕ ಆರ್ಥಿಕ ಸಂಕಷ್ಟಯುದ್ಧ ಮತ್ತು ಇಂಧನ ಬೆಲೆ ಏರಿಕೆಯಂತಹ ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ, ಎಲ್ ನಿನೊದ ಪ್ರಭಾವವು ಬಡತನ, ಅಪೌಷ್ಟಿಕತೆ ಮತ್ತು ಆರ್ಥಿಕ ಬೆಳವಣಿಗೆಯ ಮೇಲೆ ಒತ್ತಡವನ್ನು ತೀವ್ರಗೊಳಿಸಲಿದೆ.• ಭಾರತದ ಸಿದ್ಧತೆ ಮತ್ತು ಸವಾಲುಆಧುನಿಕ ಆಹಾರ ವಿತರಣಾ ವ್ಯವಸ್ಥೆಗಳು ಭಾರತವನ್ನು ಹಸಿವಿನಿಂದ ಪಾರು ಮಾಡಬಲ್ಲವಾದರೂ, ಮುಂಗಾರಿನ ವೈಫಲ್ಯವು ಕೃಷಿ ಆದಾಯ ಮತ್ತು ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಲಿದೆ.• ವೈಜ್ಞಾನಿಕ ಮುನ್ಸೂಚನೆಗಳುಈ ಬಾರಿ ದಾಖಲೆಯ ಮಟ್ಟದ ಎಲ್ ನಿನೊ ಉಂಟಾಗುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ, ಇದು 2027ರಲ್ಲಿ ಜಾಗತಿಕ ಉಷ್ಣಾಂಶವನ್ನು ಗರಿಷ್ಠ ಮಟ್ಟಕ್ಕೆ ಏರಿಸುವ ಸಾಧ್ಯತೆ ಇದೆ.ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಆಧುನಿಕ ಹವಾಮಾನ ವಿಜ್ಞಾನವು ಅಸ್ತಿತ್ವಕ್ಕೆ ಬರುವುದಕ್ಕಿಂತ ಸುಮಾರು ವರ್ಷಗಳ ಹಿಂದೆಯೇ, 'ಎಲ್‌ ನಿನೊ' ಪ್ರಭಾವವನ್ನು ಪ್ರಪಂಚದಾದ್ಯಂತ ಜನ ಅನುಭವಿಸಿದ್ದರು!

ಮಳೆಗಾಗಿ ಕಾದು ಹೈರಾಣಾಗಿದ್ದರು. ಹನಿ ಮಳೆಗಾಗಿ ಪ್ರಾರ್ಥಿಸುತ್ತಿದ್ದರು. ರಣ ಬಿಸಿಲಿಗೆ ಬೆಳೆಗಳು ಒಣಗಿ, ನದಿಗಳು ಬತ್ತಿ ಹೋಗಿದ್ದವು. ಬಿಸಿಲಿನ ಬೇಗೆಗೆ ಬೆವತು ಬೆಂದು ಹೋಗಿದ್ದರು. ಹಳ್ಳಿ ನಗರಗಳು ಕಾದ ಕಾವಲಿಯಂತಾಗಿದ್ದವು. ಹಸಿವು ತಾಂಡವವಾಡುತ್ತಿತ್ತು. ತಲೆಮಾರುಗಳು ಇದರಿಂದ ಸಂಕಷ್ಟ ಅನುಭವಿಸಿದವು. ಇದಕ್ಕೆ ಪೆಸಿಫಿಕ್ ಮಹಾಸಾಗರದಲ್ಲಿ ನಡೆಯುತ್ತಿರುವ ಬದಲಾವಣೆಗಳೇ ಕಾರಣ ಎಂಬುದು ಅವರಿಗೆ ಗೊತ್ತೇ ಇರಲಿಲ್ಲ.

ಈ ಸಾರಿ ಎಲ್ ನಿನೊ ಅಲ್ಲ.. ಸೂಪರ್ ಎಲ್ ನಿನೊ ಅಂತೆ! ಭಾರತಕ್ಕೆ ಭೀಕರ ಬರಗಾಲವೇ?

ಅಂದಿನ ಪರಿಸ್ಥಿತಿ ಮತ್ತೆ ಮರುಕಳಿಸುತ್ತಿದೆ. ಎಲ್ ನಿನೊ!

ಅತ್ಯಂತ ಪ್ರಬಲವಾದ ಎಲ್ ನಿನೊ ಈಗ ರೂಪುಗೊಳ್ಳುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಇದು ಹಿಂದೆಂದು ದಾಖಲಾಗದ ಅತ್ಯಂತ ಪ್ರಬಲವಾದ ಎಲ್ ನಿನೊಗಳಲ್ಲಿ ಒಂದಾಗಬಹುದು ಎಂದು ಅವರು ಅಂದಾಜಿಸಿದ್ದಾರೆ. ಪೆಸಿಫಿಕ್ ಮಹಾಸಾಗರದಲ್ಲಿ ಸಮುದ್ರದ ಉಷ್ಣಾಂಶ ಮತ್ತು ಮಾರುತಗಳು ಅಸಾಮಾನ್ಯ ರೀತಿಯಲ್ಲಿ ಬದಲಾದಾಗ ಎಲ್ ನಿನೊ ಪ್ರಾರಂಭವಾಗುತ್ತದೆ. ಆದರೆ ಇದರ ಪರಿಣಾಮಗಳು ಕೇವಲ ಸಮುದ್ರಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಈ ವಿದ್ಯಮಾನವು ಇಡೀ ಜಗತ್ತಿನ ಹವಾಮಾನವನ್ನೇ ಬದಲಾಯಿಸಬಲ್ಲದು. ಕೆಲವು ದೇಶಗಳಿಗೆ ಪ್ರವಾಹವನ್ನೂ, ಇನ್ನು ಕೆಲವು ದೇಶಗಳಿಗೆ ತೀವ್ರ ಭೀಕರ ಬರಗಾಲವನ್ನು ತರಬಲ್ಲದು!

ಎಲ್‌ ನಿನೊ ಅಷ್ಟೊಂದು ಅಪಾಯಕಾರಿಯೇ? ಈ ಪ್ರಶ್ನೆಗೆ ಇತಿಹಾಸದತ್ತ ಬೊಟ್ಟು ಮಾಡುತ್ತಾರೆ ಸಂಶೋಧಕರು.

ಪ್ರಮುಖ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟುಗಳಲ್ಲಿ ಪ್ರಬಲ ಎಲ್ ನಿನೊ ಮಹತ್ತರವಾದ ಪಾತ್ರ ವಹಿಸಿರಬಹುದು ಎಂದು ಹಳೆಯ ನಾಗರಿಕತೆಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಸಂಶೋಧಕರು ನಂಬಿದ್ದಾರೆ. ಪ್ರಾಚೀನ ಈಜಿಪ್ಟ್‌ನ ಮೇಲೂ ಎಲ್‌ ನಿನೊದ ಪರಿಣಾಮ ಬೀರಿರಬಹುದು ಎಂದು ಕೆಲವು ಸಂಶೋಧಕರು ಹೇಳಿದರೆ, ಇನ್ನು ಕೆಲವರು ಸಾವಿರ ವರ್ಷಗಳಿಗಿಂತ ಹಿಂದೆ ಈಗಿನ ಪೆರು ದೇಶದಲ್ಲಿದ್ದ ಮೋಚೆ (Moche) ನಾಗರಿಕತೆಯ ಪತನಕ್ಕೆ ಇದೇ ಕಾರಣ ಎಂದೂ ವಾದ ಮಂಡಿಸಿದ್ದಾರೆ. 1700ರ ಕೊನೆಯಲ್ಲಿ ಸಂಭವಿಸಿದ ಎಲ್ ನಿನೊ, ಫ್ರೆಂಚ್ ಕ್ರಾಂತಿಯ ಮುಂಚಿನ ಅಶಾಂತಿಗೆ ಕಾರಣವಾದ ಬೆಳೆ ವೈಫಲ್ಯಗಳಿಗೆ ಕಾರಣವಾಗಿರಬಹುದು ಎಂದು ಇತಿಹಾಸಕಾರರು ಊಹಿಸಿದ್ದಾರೆ. ಆದರೆ ಇವೆಲ್ಲವುಗಳಿಗಿಂತ 1877-78ರ ಭೀಕರ ಬರಗಾಲ ಮನುಷ್ಯರು ಅನುಭವಿಸಿದ ಯಾತನೆಯನ್ನು ಸ್ಪಷ್ಟವಾಗಿ ಬಿಚ್ಚಿಡುತ್ತದೆ.

ಆ ಎಲ್ ನಿನೊ ಬ್ರೆಜಿಲ್, ಚೀನಾ, ದಕ್ಷಿಣ ಆಫ್ರಿಕಾ ಮತ್ತು ಭಾರತ ಸೇರಿದಂತೆ ಪ್ರಪಂಚದ ಬಹುತೇಕ ಭಾಗಗಳಲ್ಲಿ ತೀವ್ರ ಬರಗಾಲವನ್ನು ಸೃಷ್ಟಿ ಮಾಡಿತ್ತು. ದಕ್ಷಿಣ ಭಾರತದಲ್ಲಂತೂ ಜನರ ಸಂಕಷ್ಟ ಹೇಳತೀರದಾಗಿತ್ತು. ಬಲಹೀನರಾಗಿದ್ದ, ಹಸಿವಿನಿಂದ ಕಂಗಾಲಾಗಿದ್ದ ಜನರು ಜೀವ ಉಳಿಸಿಕೊಳ್ಳಲು ಗಿಡ-ಮರಗಳ ಬೇರುಗಳನ್ನು ತಿನ್ನುತ್ತಿದ್ದರು. ಹಸಿವು ಮತ್ತು ಬಡತನದಿಂದ ಜರ್ಜರಿತರಾದ ಕುಟುಂಬಗಳು ತಮ್ಮ ಮಕ್ಕಳಿಗೆ ಅನ್ನ ಹಾಕಲಾಗದೇ, ಅವರನ್ನೇ ಮಾರಾಟ ಮಾಡಿದ್ದರು!

ಈ ಬರಗಾಲವು ಉಷ್ಣವಲಯದ ಪ್ರದೇಶಗಳಾದ್ಯಂತ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿತು. ಈ ಮಹಾ ವಿಕೋಪವು ಜಾಗತಿಕ ಅಸಮಾನತೆಗಳನ್ನು ಮತ್ತಷ್ಟು ತೀವ್ರಗೊಳಿಸಿತು. ಆ ಸಮಯದಲ್ಲಿ ಭಾರತವು ಬ್ರಿಟಿಷರ ಆಡಳಿತದಲ್ಲಿತ್ತು. ಲಕ್ಷಾಂತರ ಜನ ಹಸಿವಿನಿಂದ ಸಾಯುತ್ತಿದ್ದರೂ, ಭಾರತದಿಂದ ಧಾನ್ಯಗಳ ರಫ್ತು ಮುಂದುವರಿದಿತ್ತು ಎಂದು ಇತಿಹಾಸಕಾರ ಮೈಕ್ ಡೇವಿಸ್ ಬರೆದಿದ್ದಾರೆ. ಬರಗಾಲದ ಸಮಯದಲ್ಲಿಯೂ ತನ್ನ ಸಾಮ್ರಾಜ್ಯಶಾಹಿ ವ್ಯಾಪಾರ ಹಿತಾಸಕ್ತಿಗಳನ್ನು ಬ್ರಿಟನ್ ರಕ್ಷಿಸಿಕೊಂಡಿತು. ಲಂಡನ್ ನಿವಾಸಿಗಳು ವಾಸ್ತವವಾಗಿ ಭಾರತದ ರೊಟ್ಟಿಯನ್ನು ತಿನ್ನುತ್ತಿದ್ದರು ಎಂದು ಡೇವಿಸ್ ಬರೆದಿದ್ದಾರೆ.

ಆ ವೇಳೆ ಮುಂಗಾರು ಅಷ್ಟೊಂದು ಭೀಕರವಾಗಿ ಕೈಕೊಟ್ಟಿತು ಎಂಬುದು ಯಾರಿಗೂ ಅರ್ಥವಾಗಿರಲಿಲ್ಲ. 19ನೇ ಶತಮಾನದ ವಿಜ್ಞಾನಿಗಳು ಅದಕ್ಕೆ ಕಾರಣ ಇದಾಗಿರಬಹುದು ಎಂದು ಹಲವು ಊಹೆಗಳನ್ನಷ್ಟೇ ಮಾಡಿದ್ದರು. ಆದರೆ ದಶಕಗಳ ಬಳಿಕ ಪೆಸಿಫಿಕ್ ಮಹಾಸಾಗರದ ನೀರು ಬೆಚ್ಚಗಾಗುವುದಕ್ಕೂ ಮತ್ತು ಜಾಗತಿಕ ಹವಾಮಾನದ ಮಾದರಿಗಳು ಬದಲಾಗುವುದಕ್ಕೂ ಇರುವ ಸಂಬಂಧವನ್ನು ಸಂಶೋಧಕರು ಪತ್ತೆಹಚ್ಚಿದರು. ಆ ಆವಿಷ್ಕಾರವು ಹವಾಮಾನ ವಿಜ್ಞಾನವನ್ನು ಶಾಶ್ವತವಾಗಿ ಬದಲಾಯಿಸಿತು.

ಸಂಗತ | ಎಲ್‌ ನಿನೊ: 'ಪುಟ್ಟ ಬಾಲಕ'ನ ದೊಡ್ಡ ಕಿತಾಪತಿ

'ಎಲ್ ನಿನೊ' ಎನ್ನುವ ಹೆಸರು ಬಂದಿದ್ದು ಪೆರು ದೇಶದಿಂದ. ಅಲ್ಲಿನ ಮೀನುಗಾರರು ಕ್ರಿಸ್‌ಮಸ್ ಸಮಯದಲ್ಲಿ ಉಷ್ಣವಲಯದ ಮೀನುಗಳು ಕರಾವಳಿಯ ಬಳಿ ಕಾಣಿಸಿಕೊಳ್ಳುವುದನ್ನು ಗಮನಿಸಿದರು. ಈ ಅಸಾಮಾನ್ಯ ಘಟನೆಗೆ ಕೊನೆಗೆ 'ಎಲ್ ನಿನೊ' ಎಂದು ಹೆಸರಿಡಲಾಯಿತು. ಸ್ಪ್ಯಾನಿಷ್ ಭಾಷೆಯಲ್ಲಿ ಇದರ ಅರ್ಥ 'ಬಾಲ ಯೇಸು' (ಕ್ರೈಸ್ಟ್ ಚೈಲ್ಡ್) ಎಂದಾಗಿದೆ.

1980ರ ವೇಳೆಗೆ ಉಷ್ಣಾಂಶ ಬದಲಾವಣೆಗಳನ್ನು ಹೆಚ್ಚು ನಿಖರವಾಗಿ ಪತ್ತೆಹಚ್ಚಲು ವಿಜ್ಞಾನಿಗಳು ಪೆಸಿಫಿಕ್ ಮಹಾಸಾಗರದಾದ್ಯಂತ ಕಣ್ಗಾವಲು ವ್ಯವಸ್ಥೆಗಳನ್ನು ಅಳವಡಿಸಿದರು. ಎಲ್ ನಿನೊ ಶತಮಾನಗಳ ಅವಧಿಯಲ್ಲಿ ಮಾನವ ಇತಿಹಾಸವನ್ನು ಹೇಗೆ ರೂಪಿಸಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಂಶೋಧಕರು ಮರದ ಉಂಗುರಗಳು, ಹವಳದ ದಿಬ್ಬಗಳು ಮತ್ತು ಹಳೆಯ ಹಡಗುಗಳ ದಾಖಲೆಗಳನ್ನು ಸಹ ಅಧ್ಯಯನ ಮಾಡಲು ಪ್ರಾರಂಭಿಸಿದರು. ಆದಾಗ್ಯೂ, ಹಿಂದಿನ ಎಲ್ ನಿನೊ ಘಟನೆಗಳನ್ನು ಅಧ್ಯಯನ ಮಾಡುವುದು ಕಷ್ಟಕರ ಎಂದು ವಿಜ್ಞಾನಿಗಳು ಹೇಳುತ್ತಾರೆ. ಎನ್‌ಒಎಎ ಸಾಗರಶಾಸ್ತ್ರಜ್ಞ ಬೋಯಿನ್ ಹುವಾಂಗ್ ಈ ಸವಾಲನ್ನು ಪಜಲ್ ಆಟಕ್ಕೆ ಹೋಲಿಸಿದ್ದಾರೆ.

ಈಗ, ಜಗತ್ತು ಮತ್ತೊಂದು ಸಂಭವನೀಯ ತೀವ್ರ ಹವಾಮಾನ ಪರಿಸ್ಥಿತಿಯನ್ನು ಎದುರುನೋಡುತ್ತಿದೆ.

ವಿಜ್ಞಾನಿಗಳು ಪೆಸಿಫಿಕ್ ಮಹಾಸಾಗರದ ಒಂದು ದೊಡ್ಡ ಪ್ರದೇಶದ ಉಷ್ಣಾಂಶಗವನ್ನು ಪರಿಶೀಲಿಸುವ ಮೂಲಕ ಎಲ್ ನಿನೊವನ್ನು ಅಳೆಯುತ್ತಾರೆ. ಈ ಹಿಂದೆ ಸಂಭವಿಸಿದ ಎಲ್‌ನಿನೊಗಳಲ್ಲಿ (1982, 1997,2015) ಉಷ್ಣಾಂಶವು ಸಾಮಾನ್ಯ ಮಟ್ಟಕ್ಕಿಂತ ಎರಡು ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಇತ್ತು. ಇದು ವಿಶ್ವಾದ್ಯಂತ ಪ್ರಮುಖ ಆರ್ಥಿಕ ನಷ್ಟಗಳಿಗೆ ಕಾರಣವಾಯಿತು. ಈಗ ಸಿಕ್ಕಿರುವ ಮುನ್ಸೂಚನೆ ಪ್ರಕಾರ ಈ ಬರಿ ಪೆಸಿಫಿಕ್ ಮಾಹಾಸಾಗರ ಉಷ್ಣಾಂಶವು ಅದಕ್ಕಿಂತಲೂ ಹೆಚ್ಚಾಗಬಹುದು ಎನ್ನಲಾಗಿದೆ.

'ಈ ಬಾರಿ ಅಪ್ಪಳಿಸುವುದು ದಾಖಲೆಯ ಪ್ರಮಾಣದ ಎಲ್‌ ನಿನೊ. ಅದರ ಪರಿಣಾಮಗಳನ್ನು ಖಚಿತವಾಗಿ ತಿಳಿಯಲು ಇನ್ನೂ ಸಮಯ ಬೇಕಾಗಬಹುದು' ಎಂದು ಬರ್ಕ್ಲಿ ಅರ್ಥ್‌ನ ಸಂಶೋಧನಾ ವಿಜ್ಞಾನಿ ಜೀಕ್ ಹೌಸ್‌ಫಾದರ್ ಹೇಳಿದ್ದಾರೆ. ಎಲ್ ನಿನೊ ಸಾಮಾನ್ಯವಾಗಿ ತಮ್ಮ ಗರಿಷ್ಠ ಮಟ್ಟ ತಲುಪಿದ ಬಳಿಕ ಭೂಮಿಯ ಉಷ್ಣಾಂಶವನ್ನು ಹೆಚ್ಚಿಸುವುದರಿಂದ, 2027ರಲ್ಲಿ ಇದುವರೆಗೆ ಇರದ ಭಾರಿ ಉಷ್ಣಾಂಶ ದಾಖಲಾಗಲಿದೆ ಎಂದು ವಿಜ್ಞಾನಿಗಳು ನಂಬಿದ್ದಾರೆ.

ಹವಾಮಾನ ವೈಪರೀತ್ಯದ ಜೊತೆಗೆ ಜಗತ್ತಿನ ಈಗಿನ ಪರಿಸ್ಥಿಯನ್ನೂ ಮತ್ತಷ್ಟು ಕಠಿಣಗೊಳಿಸಲಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಉಕ್ರೇನ್, ಇರಾನ್ ಯುದ್ಧದಿಂದಾಗಿ ಹೆಚ್ಚುತ್ತಿರುವ ಇಂಧನ ಬೆಲೆಗಳು, ಹೊರ್ಮುಜ್ ಜಲಸಂಧಿಯಲ್ಲಿ ಅಡಚಣೆಯಿಂದಾಗಿ ಎದುರಾಗಿರುವ ರಸಗೊಬ್ಬರ ಕೊರತೆ ಮತ್ತು ಬಡ ದೇಶಗಳಿಗೆ ವಿದೇಶಿ ನೆರವು ಕಡಿತಗೊಳಿಸಿರುವುದು ಜಾಗತಿಕ ವ್ಯವಸ್ಥೆಗಳ ಮೇಲೆ ಭಾರಿ ಸಂಕಟವನ್ನೇ ತಂದೊಡ್ಡಲಿದೆ ಎಂದು ಅಂದಾಜಿಸಲಾಗಿದೆ.

ಜಗತ್ತು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸಬಹುದು. ಹಲವು ದೇಶಗಳು ಬಡತನ, ಅಪೌಷ್ಟಿಕತೆ, ಸಂಘರ್ಷ, ಸಾಲದ ಹೊರೆ ಮತ್ತು ಅದರಿಂದ ಉಂಟಾಗುವ ಎಲ್ಲಾ ರೀತಿಯ ಪರೋಕ್ಷ ಪರಿಣಾಮಗಳು ಹೆಚ್ಚಾಗಲಿವೆ ಎಂದು ಸ್ಟ್ರಾಟೆಜಿಕ್ ಕ್ಲೈಮೇಟ್ ರಿಸ್ಕ್ ಇನಿಶಿಯೇಟಿವ್‌ನ ಮುಖ್ಯಸ್ಥ ಲಾರಿ ಲೇಬೋರ್ನ್ ಎಚ್ಚರಿಸಿದ್ದಾರೆ.

ಪ್ರತಿಯೊಂದು ಎಲ್ ನಿನೊ ವಿಭಿನ್ನವಾಗಿ ವರ್ತಿಸುತ್ತದೆ. ಆದರೆ ಅದರ ಅಪಾಯಗಳು ಮಾತ್ರ ಭೀಕರ. ಈ ವಿದ್ಯಮಾನವು ಸಾಮಾನ್ಯವಾಗಿ ಭಾರತ, ಆಸ್ಟ್ರೇಲಿಯಾ, ಆಗ್ನೇಯ ಏಷ್ಯಾ ಮತ್ತು ದಕ್ಷಿಣ ಆಫ್ರಿಕಾಕ್ಕೆ ಒಣ ಹವಾಮಾನವನ್ನು ತರುತ್ತದೆ. ಅದೇ ಸಮಯದಲ್ಲಿ ಅಮೆರಿಕದ ಕೆಲವು ಭಾಗಗಳಲ್ಲಿ ಭಾರಿ ಮಳೆಗೆ ಕಾರಣವಾಗುತ್ತದೆ.

ಮುಂಗಾರು ಮುನಿಸು | ಜುಲೈಗೆ ಕಾಲಿಡುವ 'ಎಲ್ ನಿನೋ': ತಪ್ಪದ ಬಿಸಿಲ ಬೇಗೆ

ಭಾರತದ ಸಿದ್ಧತೆ ಹೇಗಿದೆ?

1870ರ ಬರಗಾಲದ ಸಮಯಕ್ಕೆ ಹೋಲಿಸಿದರೆ ಭಾರತದ ಪರಿಸ್ಥಿತಿ ಈಗ ಭಿನ್ನವಾಗಿದೆ. ಆಹಾರ ವಿತರಣಾ ವ್ಯವಸ್ಥೆಗಳು, ಧಾನ್ಯಗಳ ದಾಸ್ತಾನುಗಳು ಮತ್ತು ಆಧುನಿಕ ಹವಾಮಾನ ಮುನ್ಸೂಚನೆ ವ್ಯವಸ್ಥೆಗಳು ಇವೆ. ಇದು ಹಸಿವಿನ ಅಪಾಯವನ್ನು ಕಡಿಮೆ ಮಾಡಿವೆ. ಆದರೂ ಅಪಾಯ ಇನ್ನೂ ಸಂಪೂರ್ಣವಾಗಿ ದೂರವಾಗಿಲ್ಲ. ದುರ್ಬಲ ಮುಂಗಾರು ಈಗಲೂ ಬೆಳೆಗಳನ್ನು ಹಾನಿಗೊಳಿಸಬಹುದು, ಆದಾಯವನ್ನು ಕಡಿಮೆ ಮಾಡಬಹುದು, ಉದ್ಯಮಗಳು ಮುಚ್ಚುವಂತೆ ಮಾಡಬಹುದು ಮತ್ತು ಆರ್ಥಿಕತೆಯ ವೇಗವನ್ನು ಕುಂಠಿತಗೊಳಿಸಬಹುದು.

'ಮುಂಗಾರು ಮಳೆ ಕೈಕೊಟ್ಟರೂ, ಭಾರತದ ಬಲವಾದ ಆಹಾರ ವ್ಯವಸ್ಥೆಗಳಿಂದಾಗಿ ಬರಗಾಲ ಬರದು. ಆದರೆ ಬರಗಾಲವು ಇನ್ನೂ ಜೀವನೋಪಾಯ ಮತ್ತು ಆರ್ಥಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಭಾರತದ ಆರ್ಥಿಕತೆಯ ಬೆಳವಣಿಗೆಯ ದರದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗಾಂಧಿನಗರದ ಪ್ರೊಫೆಸರ್ ವಿಮಲ್ ಮಿಶ್ರಾ ಹೇಳಿದ್ದಾರೆ.

ಇತಿಹಾಸವು ಒಂದು ಪ್ರಮುಖ ಎಚ್ಚರಿಕೆಯನ್ನು ನೀಡುತ್ತದೆ ಎಂದು ಭಾರತದ ಹಿಂದಿನ ಬರಗಾಲಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಸಂಶೋಧಕರು ಹೇಳುತ್ತಾರೆ. ಈಗಾಗಲೇ ಸಂಕಷ್ಟ ಅನುಭವಿಸುತ್ತಿರುವ ಜನರಿಗೆ ಇಂತಹ ಕಠಿಣ ಹವಾಮಾನವು ಅಪ್ಪಳಿಸಿದಾಗ ಅದು ಇನ್ನಷ್ಟು ಅಪಾಯಕಾರಿಯಾಗುತ್ತದೆ. ಇದೇ ಕಾರಣಕ್ಕಾಗಿ ವಿಜ್ಞಾನಿಗಳು ಮತ್ತು ಸರ್ಕಾರಗಳು ಈಗ ರೂಪುಗೊಳ್ಳುತ್ತಿರುವ ಎಲ್ ನಿನೊವನ್ನು ಕೇವಲ ಒಂದು ಹವಾಮಾನ ಘಟನೆಯಾಗಿ ಮಾತ್ರವಲ್ಲದೆ, ಆಧುನಿಕ ಜಗತ್ತು ನಿಜವಾಗಿ ಎಷ್ಟು ಸಿದ್ಧವಾಗಿದೆ ಎಂಬುದರ ಪರೀಕ್ಷೆಯಾಗಿಯೂ ಗಮನಿಸುತ್ತಿವೆ.

(ಆಧಾರ: ದಿ ನ್ಯೂಯಾರ್ಕ್ ಟೈಮ್ಸ್)

ಎಲ್‌ ನಿನೊ ದುರ್ಬಲ: ಈ ಬಾರಿ ಉತ್ತಮ ಮುಂಗಾರು ನಿರೀಕ್ಷೆ- ಹವಾಮಾನ ತಜ್ಞರು
Dailyhunt
Disclaimer: This content has not been generated, created or edited by Dailyhunt. Publisher: Prajavani