ಲಖನೌ: ಅಯೋಧ್ಯೆ ರಾಮ ಮಂದಿರದ ದೇಣಿಗೆ ದುರುಪಯೋಗ ಪ್ರಕರಣದಲ್ಲಿ ತನಿಖೆ ಮುಂದುವರಿದಂತೆ ಒಂದೊಂದೇ ಹೊಸ ವಿಷಯಗಳು ಹೊರಬರುತ್ತಿವೆ. ಕಳೆದ ವರ್ಷದ ಜನವರಿಯಲ್ಲಿ ಪ್ರಯಾಗ್ ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದ ಸಮಯದಲ್ಲಿ ದೇವಾಲಯದಿಂದ ಗರಿಷ್ಠ ಪ್ರಮಾಣದ ಹಣವನ್ನು ಕದಿಯಲಾಗಿದೆ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಮಹಾಕುಂಭ ಮೇಳ ಮತ್ತು ಅದರ ಹಿಂದೆ ಮುಂದೆ ದೇಗುಲಕ್ಕೆ ಅಪಾರ ಪ್ರಮಾಣದ ಭಕ್ತರು ಭೇಟಿ ನೀಡಿದ್ದಾರೆ. ಹಾಗಾಗಿ, ಕಾಣಿಕೆ ಪ್ರಮಾಣವು ಸಹ ಹೆಚ್ಚಿತ್ತು. ಇದೇ ಅವಕಾಶವನ್ನು ಬಳಸಿಕೊಂಡ ಆರೋಪಿಗಳು ಹಣವನ್ನು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವು ತಿಂಗಳುಗಳಿಂದ ದೇಣಿಗೆ ಕಳವು ನಡೆಯುತ್ತಿದ್ದರೂ ಮಹಾಕುಂಭದ ಸಮಯದಲ್ಲಿ ಗರಿಷ್ಠ ಪ್ರಮಾಣದ ಕಳವು ನಡೆದಿದೆ ಎಂದು ಅವರು ತಿಳಿಸಿದ್ಧಾರೆ.
ಆರೋಪಿಗಳಾದ ಲವಕುಶ್ ಮಿಶ್ರಾ ಮತ್ತು ಆತನ ಸೋದರ ಸಂಬಂಧಿ ಅನುಕಲ್ಪ್ ಮಿಶ್ರಾ ಅತಿ ಹೆಚ್ಚು ಹಣವನ್ನು ಕದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೇ, ಕದ್ದ ಹಣದಿಂದ ಈ ಇಬ್ಬರೂ ಸಂಪಾದಿಸಿರುವ ಚರಾಸ್ಥಿ ಕಂಡು ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ಹಣದ ಸಾಗಣೆ ಮತ್ತಿತರ ಮಾಹಿತಿಗೆ ಪೊಲೀಸರು ಆದಾಯ ತೆರಿಗೆ ಇಲಾಖೆ ಮತ್ತಿತರ ಕೇಂದ್ರದ ಏಜೆನ್ಸಿಗಳನ್ನು ಸಂಪರ್ಕಿಸುವ ನಿರೀಕ್ಷೆ ಇದೆ.
ದೇಣಿಗೆ ಕಳವು ಪ್ರಕರಣದ 8 ಆರೋಪಿಗಳ ಪೈಕಿ ಲವಕುಶ್ ಮತ್ತು ಅನುಕಲ್ಪ್ ಸಹ ಇದ್ದಾರೆ. ಸದ್ಯ, ಬಂಧಿತ ಈ ಎಂಟೂ ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಲವಕುಶ್ ಮಿಶ್ರಾಗೆ ಸೇರಿದ ಅಯೋಧ್ಯೆ ಜಿಲ್ಲೆಯ ಮೀನಾಪುರ ಠಾಕುರನ್ ಫಗೌಲಿ ಹಳ್ಳಿಯಲ್ಲಿ ಪೊಲೀಸರು ಈ ಹಿಂದೆ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ಸಂದರ್ಭ ಆತನ ಮನೆಯಲ್ಲಿ ₹12 ಲಕ್ಷ ನಗದು ವಶಪಡಿಸಿಕೊಂಡಿದ್ದರು.
ಮಿಶ್ರಾ ಸೋದರ ಸಂಬಂಧಿ ಅನುಕಲ್ಪ್ ಮಿಶ್ರಾ ಫಾರ್ಮ್ ಹೌಸ್ ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದದ್ದು ಬಯಲಾಗಿದೆ.
ಅಯೋಧ್ಯೆ ದೇಣಿಗೆ ಕಳವು: ಆರೋಪಿಗಳ ಪರ ವಾದ ಮಂಡಿಸಿದರೆ ₹5 ಲಕ್ಷ ದಂಡಹುಟ್ಟಿನಿಂದ ಪೌರತ್ವ ಎತ್ತಿಹಿಡಿದ ಅಮೆರಿಕ ನ್ಯಾಯಾಲಯ: ಭಾರತೀಯರು ಏನಂತಾರೆ?
