ಮದ್ದೂರು: 'ಮನ್‌ಮುಲ್' ಹಾಲಿನ ಪುಡಿ ಕಲಬೆರಕೆ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಿಂದ ಮನ್‌ಮುಲ್‌ವರೆಗೆ 'ಹಾಲು ಉತ್ಪಾದಕರ ಹೋರಾಟ ಸಮಿತಿ' ನೇತೃತ್ವದಲ್ಲಿ ರೈತರು, ಮಹಿಳೆಯರು ಪಾದಯಾತ್ರೆ ಶನಿವಾರ ನಡೆಸಿದರು.
ರೈತ ಸಂಘದ ಮುಖಂಡರಾದ ಸುನಂದಾ ಜಯರಾಂ ನೇತೃತ್ವದಲ್ಲಿ ಗೆಜ್ಜಲಗೆರೆ, ಕುದರಗುಂಡಿ, ಸಾದೊಳಲು ಸೇರಿದಂತೆ ಹಲವು ಗ್ರಾಮಗಳ ನೂರಾರು ಜನರು ಸುಮಾರು 1 ಕಿ.ಮೀ. ಪಾದಯಾತ್ರೆ ನಡೆಸಿ ಘೋಷಣೆ ಕೂಗಿದರು.
ಮನ್ ಮುಲ್ ಕಚೇರಿ ಆವರಣಕ್ಕೆ ತೆರಳಲು ಯತ್ನಿಸಿದ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಪೊಲೀಸರು ಪ್ರತಿಭಟನಕಾರರನ್ನು ಮನವೊಲಿಸಿ ಮುಖ್ಯದ್ವಾರದ ಮುಂಭಾಗ ಪ್ರತಿಭಟನೆಗೆ ಅವಕಾಶ ಮಾಡಿಕೊಟ್ಟರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಗ್ರೇಡ್-2 ತಹಶೀಲ್ದಾರ್ ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಸುನಂದಾ ಜಯರಾಮ್ ಮಾತನಾಡಿ, 'ಹಾಲಿನ ಪುಡಿ ಕಲಬೆರಕೆ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಇದರಲ್ಲಿ ಭಾಗಿಯಾಗಿರುವ ಭ್ರಷ್ಟ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯನ್ನು ತಕ್ಷಣ ರದ್ದು ಪಡಿಸಬೇಕು. ಜಿಲ್ಲಾ ಹಾಲು ಒಕ್ಕೂಟದಲ್ಲಿ ಒಂದಾದ ಮೇಲೆ ಒಂದರಂತೆ ಹಗರಣಗಳು ನಡೆಯುತ್ತಿವೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಹಾಲು-ನೀರು ಮತ್ತು ನೇಮಕಾತಿ ಹಗರಣಗಳು ನಡೆದಿವೆ. ಹೀಗಾಗಿ ಈ ಎಲ್ಲ ಹಗರಣಗಳ ಸತ್ಯಾ ಸತ್ಯತೆ ಹೊರ ಬರಬೇಕಾದರೆ ಸಿಬಿಐ ತನಿಖೆಯಿಂದ ಮಾತ್ರ ಸಾಧ್ಯ ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ಕುದರಗುಂಡಿ ನಾಗರಾಜು, ಚಂದ್ರಶೇಖರ್, ಶಂಕರ್, ಶಾಂತಮ್ಮ, ಪ್ರಭಾವತಿ, ಚನ್ನಪ್ಪ, ಮೋಹನ್, ದೀಪು, ಶಿವು, ಶೀನ, ಜಿ.ಪಿ.ಯೋಗೇಶ್ ಭಾಗವಹಿಸಿದ್ದರು.
ಮನ್‌ಮುಲ್ ಆಡಳಿತ ಮಂಡಳಿಯನ್ನು 'ಸೂಪರ್‌ಸೀಡ್' ಮಾಡಿ: ಜೆಡಿಎಸ್ ಆಗ್ರಹಮನ್‌ಮುಲ್‌ನಲ್ಲಿ ಹಾಲಿನಪುಡಿ ಕಲಬೆರಕೆ ಪ್ರಕರಣ: ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ
