Dailyhunt Logo
  • Light mode
    Follow system
    Dark mode
    • Play Story
    • App Story
ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೊಸತನದ ಕೊರತೆ: ಹಳೆಯ ವಿಚಾರಗಳಿಗೆ ಹೊಸ ರೂಪ

ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೊಸತನದ ಕೊರತೆ: ಹಳೆಯ ವಿಚಾರಗಳಿಗೆ ಹೊಸ ರೂಪ

ಪ್ರಧಾನಿ ನರೇಂದ್ರ ಮೋದಿ ಅವರ ಈ ವರ್ಷದ ಸ್ವಾತಂತ್ರ್ಯ ದಿನದ ಭಾಷಣದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು. ವಿದ್ಯಾರ್ಥಿಗಳು ಮತ್ತು ಯುವಜನರು ನಡೆಸಿದ ಪ್ರತಿಭಟನೆಗಳ ಕೆಲವೇ ವಾರಗಳ ಬಳಿಕ ಈ ಭಾಷಣ ನಡೆದಿತ್ತು. ಸರ್ಕಾರವು ಕೊನೆಗೆ ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯನ್ನು ಒಪ್ಪಿಕೊಂಡು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ ಬಳಿಕದ ಮೊದಲ ಸ್ವಾತಂತ್ರ್ಯ ದಿನದ ಭಾಷಣ ಇದಾಗಿತ್ತು.

8 ಸೆಮಿಕಂಡಕ್ಟರ್ ಘಟಕ ಶೀಘ್ರ ಆರಂಭ: ಪ್ರಧಾನಿ ಮೋದಿ

ಒಮ್ಮೆ ಮೋದಿ ಅವರ ಬೆಂಬಲಕ್ಕೆ ಗಟ್ಟಿಯಾಗಿ ನಿಂತಿದ್ದ, ಆದರೆ ಈಗ ಅವರ ವಿರುದ್ಧ ವ್ಯಂಗ್ಯ ಮತ್ತು ಟೀಕೆಗಳನ್ನು ವ್ಯಕ್ತಪಡಿಸುತ್ತಿರುವ ಯುವಜನರ ವಿಶ್ವಾಸವನ್ನು ಮರಳಿ ಗಳಿಸಲು, ಐತಿಹಾಸಿಕ ಸ್ಥಳ ಕೆಂಪುಕೋಟೆಯಿಂದ, ಐತಿಹಾಸಿಕ ದಿನದಂದು ಅವರು ಮಾತನಾಡಲಿದ್ದಾರೆ ಎಂಬ ನಿರೀಕ್ಷೆ ಇತ್ತು.

ಪ್ರತಿಭಟನೆಗಳು ಆರಂಭದಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರಕ್ಕೆ ಸೀಮಿತವಾಗಿದ್ದರೂ, ಬಳಿಕ ದೇಶದಾದ್ಯಂತ ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದ ಹಲವು ಸಮಸ್ಯೆಗಳತ್ತ ವಿಸ್ತರಿಸಿದ್ದವು. ಜಂತರ್‌ಮಂತರ್ ಸೇರಿದಂತೆ ಹಲವು ಕಡೆಗಳಲ್ಲಿ ವ್ಯಕ್ತವಾದ ಅಸಮಾಧಾನವನ್ನು ಗಮನದಲ್ಲಿಟ್ಟುಕೊಂಡು, ಆ ಎಲ್ಲ ಪ್ರಶ್ನೆಗಳಿಗೆ ಮೋದಿ ತಮ್ಮ ಭಾಷಣದಲ್ಲಿ ಉತ್ತರ ನೀಡಲಿದ್ದಾರೆ ಎಂಬ ನಿರೀಕ್ಷೆಯೂ ಇತ್ತು.

ಪ್ರತಿಭಟನಾಕಾರರ ಬೇಡಿಕೆಗಳನ್ನು ಒಪ್ಪಿಕೊಂಡ ನಂತರವೂ ಮೋದಿ ಕೈಗೊಂಡ ಹಲವು ಕ್ರಮಗಳು ನಿರೀಕ್ಷಿತ ಪರಿಣಾಮ ಬೀರಲಿಲ್ಲ. ಅತ್ಯಂತ ಪರಿಣಾಮಕಾರಿ ಸಂವಹನ ಮಾಡುವ ನಾಯಕರೆಂದು ಗುರುತಿಸಿಕೊಂಡಿರುವ ಮೋದಿ, ಜೆನ್-ಝೀ ಮತ್ತು ಜೆನ್-ಆಲ್ಫಾ ಬಳಸುವ ಭಾಷೆ ಮತ್ತು ವೇದಿಕೆಯನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದಾಗ ಮಾತ್ರ ನಿರೀಕ್ಷಿತ ಯಶಸ್ಸು ಕಾಣಲಿಲ್ಲ.

ಕೆಂಪುಕೋಟೆ ಸುಳ್ಳು ಹೇಳುವ ಸ್ಥಳವಲ್ಲ: ಮೋದಿ ಭಾಷಣಕ್ಕೆ ಅಖಿಲೇಶ್ ಯಾದವ್‌ ವಾಗ್ದಾಳಿ

2014ರಿಂದೀಚೆಗೆ ಮೋದಿ ಅವರ ಸ್ವಾತಂತ್ರ್ಯ ದಿನದ ಭಾಷಣಗಳು ರಾಜಕೀಯ ಸಂವಹನ, ಸರ್ಕಾರದ ಸಾಧನೆಗಳ ನಿರೂಪಣೆ, ನೀತಿ ರೂಪರೇಷೆಗಳ ಘೋಷಣೆ ಮತ್ತು ತಮ್ಮ ರಾಜಕೀಯ ವ್ಯಕ್ತಿತ್ವವನ್ನು ಬಲಪಡಿಸುವ ಪ್ರಮುಖ ವೇದಿಕೆಯಾಗಿವೆ. ಆಗಸ್ಟ್ 15ರ ಭಾಷಣವನ್ನು ಕೇವಲ ಸರ್ಕಾರದ ಸಾಧನೆಗಳ ವಾರ್ಷಿಕ ವರದಿಯಾಗಿ ಪರಿಗಣಿಸದೆ, ನೇರ ಆಡಳಿತಾತ್ಮಕ ಸಂದೇಶಗಳನ್ನು ನೀಡಲು, ಸಾಮಾಜಿಕ-ಆರ್ಥಿಕ ಅಭಿಯಾನಗಳನ್ನು ಘೋಷಿಸಲು ಮತ್ತು ಭಾರತದ ದೀರ್ಘಕಾಲೀನ ದೃಷ್ಟಿಕೋನವನ್ನು ರೂಪಿಸಲು ಅವರು ಬಳಸಿಕೊಂಡಿದ್ದಾರೆ.

ಆದರೆ ಈ ವರ್ಷದ ಭಾಷಣದಲ್ಲಿ ಹೊಸತನದ ಮತ್ತು ರಚನಾತ್ಮಕ ದೃಷ್ಟಿಕೋನಕ್ಕಿಂತ, ಹಳೆಯ ವಿಚಾರಗಳೇ, ಪರಿಚಿತ ರಾಜಕೀಯ ಗುರಿಗಳನ್ನು ಹೊಸ ರೂಪದಲ್ಲಿ ಮಂಡಿಸಲಾದ ಹಳೆಯ ಯೋಜನೆಗಳೇ ಹೆಚ್ಚು ಎದ್ದು ಕಾಣಿಸಿದವು.

ಮೋದಿ ಅವರಿಗೆ ಅತ್ಯಂತ ಪರಿಚಿತವಾದ ರಾಜಕೀಯ ನಿರೂಪಣೆಯನ್ನೇ ಈ ಬಾರಿಯೂ ಮುಂದುವರಿಸಿದರು. 2014ಕ್ಕೂ ಹಿಂದಿನ ಭಾರತವನ್ನು 'ಎಲ್ಲವೂ ನಡೆಯುತ್ತದೆ' ಎಂಬ ಮನೋಭಾವದ ದೇಶವೆಂದು ಬಿಂಬಿಸಿ, ಅದು 'ಅಸ್ಥಿರ ಐದು ರಾಷ್ಟ್ರಗಳ' ಪಟ್ಟಿಯಲ್ಲಿತ್ತು ಎಂದು ಎಂದರು. ಇದಕ್ಕೆ ಪ್ರತಿಯಾಗಿ, ತಮ್ಮ ಆಡಳಿತದಲ್ಲಿ ಭಾರತ ಸಾಧಿಸಿರುವ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಯ ಅಂಕಿ-ಅಂಶಗಳನ್ನು ಮುಂದಿಟ್ಟರು. ಆದರೆ ಮೋದಿ ಅವರ ಈ ನಿರಂತರ ಪ್ರತಿಪಾದನೆಗಳಿಗೆ ವಿರುದ್ಧವಾದ ವಾಸ್ತವ ಚಿತ್ರಣವನ್ನು ನೀಡುವ ಅಂಕಿ-ಅಂಶಗಳ ಕೊರತೆಯೂ ಇಲ್ಲ.

ಮೋದಿ ಅವರು ಈ ಹಿಂದೆ ಮಾಧ್ಯಮ ಮತ್ತು ರಾಜಕೀಯ ಮಧ್ಯವರ್ತಿಗಳನ್ನು ಬದಿಗೊತ್ತಿ, ನೇರವಾಗಿ ಜನರನ್ನು ಉದ್ದೇಶಿಸಿ ಮಾತನಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಬಾರಿ ಅವರು ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಮತ್ತು ಯುವಜನರನ್ನು ನೇರವಾಗಿ ಉದ್ದೇಶಿಸುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಲಿಲ್ಲ.

ಯುವಕರ ಕನಸುಗಳನ್ನು ಮೋದಿ ಸರ್ಕಾರ ನಾಶ ಮಾಡುತ್ತಿದೆ: ಮಲ್ಲಿಕಾರ್ಜುನ ಖರ್ಗೆ ಕಿಡಿ

ಪ್ರತಿಭಟನಾಕಾರರು ಎತ್ತಿದ್ದ ವ್ಯವಸ್ಥಾತ್ಮಕ ವೈಫಲ್ಯಗಳಿಗೆ ಪರಿಹಾರ ಹುಡುಕುವ ಬದಲು, ಅವರು ತಕ್ಷಣದ ಪರಿಹಾರಗಳನ್ನಷ್ಟೇ ಘೋಷಿಸಿದರು. ಉದಾಹರಣೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದೇಶಾದ್ಯಂತ ಉಚಿತ ಆನ್‌ಲೈನ್ ಕೋಚಿಂಗ್ ವ್ಯವಸ್ಥೆ ಜಾರಿಗೆ ತರುವುದಾಗಿ ಘೋಷಿಸಿದರು. ಇದರಿಂದ ಕುಟುಂಬಗಳ ಮೇಲಿನ 'ಹೊರೆ' ಕಡಿಮೆಯಾಗಲಿದೆ ಎಂದು ಹೇಳಿದರು.

ಯುವಜನರ ಶಕ್ತಿಯನ್ನು ನಾಗರಿಕ ಕರ್ತವ್ಯಗಳತ್ತ ತಿರುಗಿಸುವ ಉದ್ದೇಶದಿಂದ ಜನಗಣತಿ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಆದರೆ, ಶಿಕ್ಷಣ ವ್ಯವಸ್ಥೆಯೇ ತೀವ್ರ ಟೀಕೆಗೆ ಗುರಿಯಾಗಿರುವ ಸಂದರ್ಭದಲ್ಲಿ, ಉಚಿತ ಕೋಚಿಂಗ್‌ನ ಗುಣಮಟ್ಟದ ಬಗ್ಗೆ ಅನುಮಾನಗಳು ಸಹಜ. ಅದಕ್ಕಿಂತ ಮುಖ್ಯವಾಗಿ, ಪರೀಕ್ಷಾ ವ್ಯವಸ್ಥೆಯಲ್ಲಿನ ಸಾಂಸ್ಥಿಕ ವೈಫಲ್ಯಗಳಿಗೆ ಇದು ಯಾವುದೇ ಪರಿಹಾರ ಒದಗಿಸುವುದಿಲ್ಲ. ಪರೀಕ್ಷೆ ಮತ್ತು ಮೌಲ್ಯಮಾಪನ ವ್ಯವಸ್ಥೆಯನ್ನೇ ಸಮಗ್ರವಾಗಿ ಪುನರ್‌ರಚಿಸಬೇಕಾದ ಅಗತ್ಯವನ್ನು ಈ ಘೋಷಣೆ ಸ್ಪರ್ಶಿಸುವುದೇ ಇಲ್ಲ.

13ನೇ ಸಲ ಧ್ವಜಾರೋಹಣ: ಕಳೆದ 4 ವರ್ಷದಲ್ಲೇ ಅತಿ ಕಡಿಮೆ ಅವಧಿಯ ಭಾಷಣ ಮಾಡಿದ ಮೋದಿ!

'ವಂದೇ ಮಾತರಂ' ವಿಚಾರದಲ್ಲೂ ಇತಿಹಾಸದ ಆಯ್ದ ನಿರೂಪಣೆ

ಮೋದಿ ತಮ್ಮ ಭಾಷಣದ ಆರಂಭದಲ್ಲೇ ಕೆಂಪುಕೋಟೆಯಲ್ಲಿ ಇದೇ ಮೊದಲ ಬಾರಿಗೆ 'ವಂದೇ ಮಾತರಂ' ಮೊಳಗಿದೆ ಎಂದು ಹೇಳಿದರು. ರಾಷ್ಟ್ರಗೀತೆಯಾದ 'ಜನ ಗಣ ಮನ' ಮೊದಲು ರಾಷ್ಟ್ರೀಯ ಗೀತೆಯ ಸಂಪೂರ್ಣ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಿರುವುದು ಮತ್ತು ವಂದೇ ಮಾತರಂಗೆ ಅವಮಾನ ಮಾಡುವುದನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಿರುವುದಕ್ಕೆ ರಾಜಕೀಯ ಶ್ರೇಯಸ್ಸು ಪಡೆಯುವ ಪ್ರಯತ್ನವಾಗಿ ಈ ಹೇಳಿಕೆಯನ್ನು ನೋಡಬಹುದು.

ಆದರೆ, ಈ ನಿರ್ಧಾರಗಳ ಹಿಂದೆ ಭಾರತದ ರಾಷ್ಟ್ರೀಯ ಸಂಕೇತಗಳನ್ನು ಆರ್‌ಎಸ್‌ಎಸ್‌ನ 'ಸಾಂಸ್ಕೃತಿಕ ರಾಷ್ಟ್ರೀಯತೆ'ಯ ಪರಿಕಲ್ಪನೆಗೆ ಅನುಗುಣವಾಗಿ ಮರುವ್ಯಾಖ್ಯಾನಿಸುವ ಪ್ರಯತ್ನವಿದೆ ಎಂಬ ಟೀಕೆಗೆ ಮೋದಿ ಯಾವುದೇ ಉತ್ತರ ನೀಡಲಿಲ್ಲ. ವಂದೇ ಮಾತರಂನ ಮೊದಲ ಎರಡು ಚರಣಗಳನ್ನಷ್ಟೇ ಹಾಡುವ ನಿರ್ಧಾರ ಕಾಂಗ್ರೆಸ್ ಪಕ್ಷವು ಮುಸ್ಲಿಮರನ್ನು ಓಲೈಸಲು ನಡೆಸಿದ 'ಪಿತೂರಿ'ಯ ಫಲಿತಾಂಶವಾಗಿರಲಿಲ್ಲ ಎಂಬ ಐತಿಹಾಸಿಕ ಸತ್ಯವನ್ನೂ ಅವರು ಪ್ರಸ್ತಾಪಿಸಲಿಲ್ಲ.

ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್, ಸುಭಾಷಚಂದ್ರ ಬೋಸ್, ಜವಾಹರಲಾಲ್ ನೆಹರೂ ಸೇರಿದಂತೆ ದೇಶದ ಹಲವು ಪ್ರಮುಖ ನಾಯಕರು ಈ ನಿರ್ಧಾರದಲ್ಲಿ ಭಾಗಿಯಾಗಿದ್ದರು. ವಿಶೇಷವಾಗಿ ವಂದೇ ಮಾತರಂನ ಕೊನೆಯ ನಾಲ್ಕು ಚರಣಗಳನ್ನು ಕೈಬಿಡುವ ವಿಚಾರದಲ್ಲಿ ಟ್ಯಾಗೋರ್ ಅವರ ಅಭಿಪ್ರಾಯ ಮಹತ್ವದ್ದಾಗಿತ್ತು.

1950ರ ಜನವರಿ 24ರಂದು ಸಂವಿಧಾನ ಸಭೆ ತೆಗೆದುಕೊಂಡ ನಿರ್ಧಾರದ ಪ್ರಕಾರ, ಎರಡೂ ಗೀತೆಗಳಿಗೆ ಸಮಾನ ಗೌರವ ನೀಡಲಾಯಿತು. 'ಜನ ಗಣ ಮನ'ಕ್ಕೆ ರಾಷ್ಟ್ರ ಗೀತೆ ಸ್ಥಾನಮಾನ ದೊರೆತರೆ, 'ವಂದೇ ಮಾತರಂ'ಗೆ ರಾಷ್ಟ್ರೀಯ ಗೀತೆಯ ಸ್ಥಾನಮಾನ ನೀಡಲಾಯಿತು.

ಪ್ರಧಾನಿ ಮೋದಿ ಭಾಷಣದಲ್ಲಿ 'ಸಪ್ತಧಾರೆ': ಭಾರತದ ಬೆಳವಣಿಗೆಯ 7 ಪ್ರಮುಖ ಶಕ್ತಿಗಳು

'ಸಪ್ತಧಾರೆ' - ಹೊಸ ದೃಷ್ಟಿಕೋನವೋ, ಹಳೆಯ ಯೋಜನೆಗಳ ಹೊಸ ರೂಪವೋ?

ಮೋದಿ ಏಳು ಕ್ಷೇತ್ರಗಳನ್ನು ಒಳಗೊಂಡ 'ಸಪ್ತಧಾರೆ' ಎಂಬ ಹೊಸ ದೃಷ್ಟಿಕೋನವನ್ನು ಘೋಷಿಸಿದರು. ಉತ್ಪಾದನೆ, ಕೃಷಿ ಮತ್ತು ಆಹಾರ ಸಂಸ್ಕರಣೆ, ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ, ಗತಿಶಕ್ತಿ, ಆತ್ಮನಿರ್ಭರತೆ, ಹಸಿರು ಇಂಧನ ಮತ್ತು ಸಾಫ್ಟ್ ಪವರ್ - ಇವು ಆ ಏಳು ಕ್ಷೇತ್ರಗಳು.

ಆದರೆ ಇವುಗಳಲ್ಲಿ ಬಹುತೇಕವು ಈಗಾಗಲೇ ಘೋಷಿಸಲಾದ ಅಥವಾ ಜಾರಿಯಲ್ಲಿರುವ ಯೋಜನೆಗಳು.

ಹೀಗಾಗಿ, ಮೋದಿ ಅವರ ಈ ವರ್ಷದ ಭಾಷಣದ ಎದ್ದು ಕಾಣುವ ಲಕ್ಷಣವೆಂದರೆ ಹೊಸ ಆಲೋಚನೆಗಳನ್ನು ಮುಂದಿಡುವುದಕ್ಕಿಂತ, ಈಗಾಗಲೇ ಪರಿಚಿತವಾಗಿರುವ ವಿಚಾರಗಳಿಗೆ ಹೊಸ ರೂಪ ನೀಡುವುದು ಮತ್ತು ಹಳೆಯ ಘೋಷಣೆಗಳನ್ನೇ ಹೊಸ ಹೆಸರಿನಲ್ಲಿ ಮರುಮಂಡಿಸುವುದು. 'ಸಪ್ತಧಾರೆ' ಕೂಡ ಇದೇ ಪ್ರವೃತ್ತಿಯ ಮತ್ತೊಂದು ಉದಾಹರಣೆಯಾಗಿ ಕಾಣುತ್ತದೆ.

2047ರ ವೇಳೆಗೆ 'ವಿಕಸಿತ ಭಾರತ' ನಿರ್ಮಿಸುವ ದೊಡ್ಡ ಕನಸು ಕಾಣಿರಿ: ಮೋದಿ ಕರೆ

ಹೊಸ 'ಶತ್ರು' - 'ಬೌದ್ಧಿಕ ನಕ್ಸಲ್'

ಭಯ ಹುಟ್ಟಿಸುವುದು ಮತ್ತು ಆರೋಪವನ್ನು ಮತ್ತೊಬ್ಬರ ಮೇಲೆ ಹೊರಿಸುವುದು ಸರ್ವಾಧಿಕಾರಿ ನಾಯಕರ ರಾಜಕೀಯ ತಂತ್ರಗಳಲ್ಲಿ ಸಾಮಾನ್ಯವಾಗಿ ಕಾಣಿಸುವ ಅಂಶ. 1980ರ ದಶಕದಲ್ಲಿ ಇಂದಿರಾ ಗಾಂಧಿ ಪಂಜಾಬ್‌ನಲ್ಲಿ ಉಗ್ರವಾದವಾಗಲಿ ಅಥವಾ ಜೀವನೋಪಾಯದ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರತಿಭಟನೆಗಳಾಗಲಿ, ಪರಿಸ್ಥಿತಿ ಬಿಗಡಾಯಿಸಿದಾಗಲೆಲ್ಲ 'ವಿದೇಶಿ ಕೈ'ಯನ್ನು ಆರೋಪಿಸುತ್ತಿದ್ದರು.

ಮೋದಿ ಈ ಬಾರಿ ಭಾರತದ ನಾಗರಿಕ ರಕ್ಷಣಾ ವ್ಯವಸ್ಥೆ ಮತ್ತು ಪಡೆಯನ್ನು ಪುನರ್‌ರಚಿಸುವುದಾಗಿ ಘೋಷಿಸಿದರು. ಅದರ ಜೊತೆಯಲ್ಲೇ ಅವರು ಹೊಸ 'ಜನವಿರೋಧಿ ಶತ್ರು' ಎಂಬ ರೀತಿಯಲ್ಲಿ 'ಬೌದ್ಧಿಕ ನಕ್ಸಲ್' ಎಂಬ ಪದಪ್ರಯೋಗವನ್ನೂ ಪರಿಚಯಿಸಿದರು.

ಇದನ್ನು 'ಅರ್ಬನ್ ನಕ್ಸಲ್-2' ಎಂದು, ಅಥವಾ 2021ರಲ್ಲಿ ಮೋದಿ ಪ್ರತಿಭಟನಾಕಾರರನ್ನು ವ್ಯಂಗ್ಯವಾಗಿ ಕರೆದಿದ್ದ 'ಆಂದೋಲನಜೀವಿ' ಎಂಬ ಪದದ ಹೊಸ ರೂಪವೆಂದು ಪರಿಗಣಿಸಬಹುದು. ವಿರೋಧಿಗಳನ್ನು ಗುರುತಿಸಲು ಹೊಸ ರಾಜಕೀಯ ಪದಗಳನ್ನು ರೂಪಿಸುವಲ್ಲಿಯೂ ಅಸಮರ್ಥರಾಗಿರುವುದು, ವಾಸ್ತವವಾಗಿ, ಮೋದಿ ಎದುರಿಸುತ್ತಿರುವ ಇನ್ನೂ ದೊಡ್ಡ ಸಮಸ್ಯೆಯಾದ 'ಹೊಸ ಆಲೋಚನೆಗಳ ಬಿಕ್ಕಟ್ಟ'ನ್ನು ಅನಾವರಣಗೊಳಿಸುತ್ತದೆ.

ಹೊಸ ಸಂಕಲ್ಪ ತೊಟ್ಟು, ಅಪಾರ ಉತ್ಸಾಹದೊಂದಿಗೆ ಮುನ್ನಡೆಯೋಣ; ಪ್ರಧಾನಿ ಮೋದಿ

ಲೇಖಕರು: ಪತ್ರಕರ್ತ ಹಾಗೂ 'Narendra Modi: The Man, The Times' ಮತ್ತು 'The RSS: Icons of the Indian Right' ಕೃತಿಗಳ ಲೇಖಕರು.

ಸೂಚನೆ: ಇದು ಮೂಲ ಲೇಖನದ ಕನ್ನಡ ಅನುವಾದವಾಗಿದ್ದು, ಇದರಲ್ಲಿರುವ ರಾಜಕೀಯ ವಿಶ್ಲೇಷಣೆ ಮತ್ತು ಅಭಿಪ್ರಾಯಗಳು ಲೇಖಕರದ್ದೇ ಆಗಿವೆ. 'ಪ್ರಜಾವಾಣಿ'ಯ ಸಂಪಾದಕೀಯ ಅಭಿಪ್ರಾಯವೆಂದು ಪರಿಗಣಿಸಬಾರದು.

Dailyhunt
Disclaimer: This content has not been generated, created or edited by Dailyhunt. Publisher: Prajavani