Dailyhunt Logo
  • Light mode
    Follow system
    Dark mode
    • Play Story
    • App Story
ಪರಿಷತ್ತು ನಾವೇ; ಅದು ಕೆಲಸ ಮಾಡದಿದ್ದರೆ ತಪ್ಪು ನಮ್ಮದೇ; ಸಮ್ಮೇಳನಾಧ್ಯಕ್ಷ ಮಾಸ್ತಿ

ಪರಿಷತ್ತು ನಾವೇ; ಅದು ಕೆಲಸ ಮಾಡದಿದ್ದರೆ ತಪ್ಪು ನಮ್ಮದೇ; ಸಮ್ಮೇಳನಾಧ್ಯಕ್ಷ ಮಾಸ್ತಿ

ಒಂದು ಸಂಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರುವುದು ಬಹಳ ಸುಲಭ. ಅದರ ಕಾರ್ಯವೈಖರಿಯನ್ನು ಟೀಕಿಸುವುದೂ ಸುಲಭ. ಆದರೆ ಆ ಸಂಸ್ಥೆ ನಮ್ಮದೇ ಆಗಿದ್ದರೆ, ಅದರ ಬೆಳವಣಿಗೆಗೆ ನಾವು ಏನು ಕೊಡುಗೆ ನೀಡಿದ್ದೇವೆ ಎಂಬ ಪ್ರಶ್ನೆಯನ್ನು ಮೊದಲು ನಮಗೆ ನಾವೇ ಕೇಳಿಕೊಳ್ಳಬೇಕಲ್ಲವೇ?

ಸಂಸ್ಥೆಯ ಕೆಲಸದಲ್ಲಿ ಲೋಪವಿದ್ದರೆ ಅದನ್ನು ಸರಿಪಡಿಸುವ ಹೊಣೆಗಾರಿಕೆಯೂ ನಮ್ಮದೇ ಆಗಬೇಕು.

ಸುಮಾರು ಒಂದು ಶತಮಾನದ ಹಿಂದೆಯೇ ಕನ್ನಡಿಗರೆದುರು ಇಂತಹ ಆತ್ಮಾವಲೋಕನದ ಪ್ರಶ್ನೆಯನ್ನು ಮುಂದಿಟ್ಟವರು ಕನ್ನಡದ ಕಥೆಗಾರ ಮಾಸ್ತಿ ವೆಂಕಟೇಶ ಅಯ್ಯಂಗಾರ್. 1929ರಲ್ಲಿ ಬೆಳಗಾವಿಯಲ್ಲಿ ನಡೆದ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ ಅವರು ವ್ಯಕ್ತಪಡಿಸಿದ ಈ ಕಳಕಳಿ ಇಂದಿಗೂ ಕನ್ನಡ ಸಾಹಿತ್ಯ ಲೋಕಕ್ಕೆ ಅನ್ವಯವಾಗುತ್ತದೆ.

'ನಾವು ಮಾಡಿದುದನ್ನು ಪರಿಷತ್ತು ಮಾಡುತ್ತದೆ, ನಾವು ಮಾಡದೆ ಇದ್ದುದನ್ನು ಪರಿಷತ್ತು ಮಾಡಲಾರದು. ಪರಿಷತ್ತೇ ನಾವು ಮಾಡಿದುದು' ಎಂಬ ಅವರ ಮಾತು ಇಡೀ ಭಾಷಣದ ಆಶಯವನ್ನು ಸಾರುತ್ತದೆ.

'ಮಾಸ್ತಿ ಕನ್ನಡದ ಆಸ್ತಿ'ಯಾದದ್ದು ಹೇಗೆ?

1891ರ ಜೂನ್ 8ರಂದು ಕೋಲಾರ ಜಿಲ್ಲೆಯ ಮಾಸ್ತಿ ಗ್ರಾಮದಲ್ಲಿ ಜನಿಸಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು 'ಶ್ರೀನಿವಾಸ' ಎಂಬ ಕಾವ್ಯನಾಮದಿಂದಲೂ ಬರೆಯುತ್ತಿದ್ದರು. ಕನ್ನಡದ ಸಣ್ಣಕಥಾ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿದ ಅವರು ಕನ್ನಡದ ಕಥನ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ.

ಮೈಸೂರಿನ ವೆಸ್ಲಿಯನ್ ಹೈಸ್ಕೂಲ್, ಮಹಾರಾಜ ಕಾಲೇಜು ಮತ್ತು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಶಿಕ್ಷಣ ಪಡೆದ ಅವರು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ 1914ರಲ್ಲಿ ಎಂ.ಎ. ಪದವಿ ಗಳಿಸಿದರು. ಅದೇ ವರ್ಷ ಮೈಸೂರು ಸರ್ಕಾರದ ಸೇವೆಗೆ ಸೇರಿದರು. ಅಸಿಸ್ಟೆಂಟ್ ಕಮಿಷನರ್ ಆಗಿ ವೃತ್ತಿಜೀವನ ಆರಂಭಿಸಿದ ಅವರು ಮುಂದೆ ಸಬ್ ಡಿವಿಷನ್ ಆಫೀಸರ್, ಮ್ಯಾಜಿಸ್ಟ್ರೇಟ್, ಡೆಪ್ಯುಟಿ ಕಮಿಷನರ್ ಮತ್ತು ಎಕ್ಸೈಸ್ ಕಮಿಷನರ್ ಹುದ್ದೆಗಳನ್ನು ನಿರ್ವಹಿಸಿದ್ದರು.

ಸರ್ಕಾರಿ ಸೇವೆಯಲ್ಲಿದ್ದರೂ ಸಾಹಿತ್ಯದ ಮೇಲಿನ ಆಸಕ್ತಿಯನ್ನು ಎಂದಿಗೂ ಬಿಟ್ಟುಕೊಡಲಿಲ್ಲ. 'ಮಾಸ್ತಿಯವರ ಕಥೆಗಳು', 'ಸುಬ್ಬಣ್ಣ', 'ಮೊಸರಿನ ಮಂಗಮ್ಮ', 'ಕಾಕನಕೋಟೆ', 'ಚಿಕ್ಕವೀರ ರಾಜೇಂದ್ರ' ಮೊದಲಾದ ಕೃತಿಗಳು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳಾಗಿವೆ. 'ಚಿಕ್ಕವೀರ ರಾಜೇಂದ್ರ' ಕಾದಂಬರಿಗೆ 1983ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು.

1943ರಿಂದ 1948ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, 1950ರಿಂದ 1964ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು ಸಂಸ್ಥೆಯ ಬೆಳವಣಿಗೆಯಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದರು. 'ಜೀವನ' ಮಾಸಪತ್ರಿಕೆಯನ್ನು 25 ವರ್ಷಗಳ ಕಾಲ ಪ್ರಕಟಿಸಿದ್ದರು.

ಇಂತಹ ಅನುಭವ ಮತ್ತು ಸಂಘಟನಾ ದೃಷ್ಟಿಯುಳ್ಳ ಮಾಸ್ತಿಯವರು ತಮ್ಮ 38ನೇ ವಯಸ್ಸಿನಲ್ಲಿಯೇ 1929ರ ಬೆಳಗಾವಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

25 ವರ್ಷಗಳ ಮುನ್ನೋಟ | ಬೇಕಿದೆ ಪರಿಸರಸ್ನೇಹಿ ಅಭಿವೃದ್ಧಿ: ಸಿದ್ದರಾಮಯ್ಯ ಲೇಖನವಿಶ್ಲೇಷಣೆ: ಮಗುಕನ್ನಡವೇ ಕನ್ನಡದ ನಾಳೆಗಳು..! ಕನ್ನಡ ಭಾಷೆ ಕಲಿಸಿ ಹಕ್ಕೊತ್ತಾಯ

ಪರಿಷತ್ತಿನ ಕೆಲಸಕ್ಕೆ ಅಡ್ಡಿಯಾಗಿರುವವರು ಯಾರು?

ಮಾಸ್ತಿಯವರ ಅಧ್ಯಕ್ಷೀಯ ಭಾಷಣದ ಆರಂಭದಲ್ಲಿಯೇ ಒಂದು ಮಹತ್ವದ ಪ್ರಶ್ನೆ ಎದುರಾಗುತ್ತದೆ.

1915ರಲ್ಲಿ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ತು, ಆ ಸಮ್ಮೇಳನದ ಹೊತ್ತಿಗೆ ಹದಿನಾಲ್ಕು ವರ್ಷಗಳನ್ನು ಪೂರೈಸಿತ್ತು. ಈ ಅವಧಿಯಲ್ಲಿ ಕನ್ನಡದ ಸ್ಥಿತಿಗತಿಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದವು. ಪರಿಷತ್ತು ಕೂಡ ಹಲವು ಕೆಲಸಗಳನ್ನು ಮಾಡಿತ್ತು. ಹಿಂದಿನ ಸಮ್ಮೇಳನದಲ್ಲಿ ಬೆನಗಲ್ ರಾಮರಾಯರು ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ವಿವರವಾಗಿ ಮಂಡಿಸಿದ್ದರು. ಹೀಗಾಗಿ ಅದೇ ಕೆಲಸವನ್ನು ಪುನರಾವರ್ತಿಸುವ ಅಗತ್ಯವಿಲ್ಲ ಎಂದು ಮಾಸ್ತಿಯವರು ಭಾವಿಸಿದ್ದರು.

ಆದರ ಬದಲು ಪರಿಷತ್ತಿನ ಕೆಲಸಗಳ ಬಗ್ಗೆ ಒಂದು ಮೂಲಭೂತ ಪ್ರಶ್ನೆಯನ್ನು ಸಮ್ಮೇಳನದ ಮುಂದಿಡುತ್ತಾರೆ. ಪರಿಷತ್ತು ಇನ್ನಷ್ಟು ಕೆಲಸ ಮಾಡಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಅದಕ್ಕೆ ನೆರವಾಗಲು ಎಷ್ಟು ಮಂದಿ ಮುಂದೆ ಬರುತ್ತಾರೆ? ಇದು ಆ ಪ್ರಶ್ನೆ. ಕನ್ನಡನಾಡಿನಲ್ಲಿ ಸಾವಿರಾರು ವಿದ್ಯಾವಂತರಿದ್ದಾರೆ. ಆದರೆ ಅವರಲ್ಲಿ ಹತ್ತರಲ್ಲಿ ಒಬ್ಬರಾದರೂ ಪರಿಷತ್ತಿನ ಸದಸ್ಯರಾಗಿಲ್ಲವೇಕೆ ಎಂದು ಮಾರ್ಮಿಕವಾಗಿ ಪ್ರಶ್ನಿಸುತ್ತಾರೆ ಮಾಸ್ತಿಯವರು.

'ಪರಿಷತ್ತು ಮೊದಲು ಚೆನ್ನಾಗಿ ಕೆಲಸ ಮಾಡಲಿ; ಆಮೇಲೆ ನಾನು ಸದಸ್ಯನಾಗುತ್ತೇನೆ' ಎಂದು ಹೇಳುವವರ ಮನೋಭಾವವನ್ನು ಈ ಮೂಲಕ ಅವರು ಪ್ರಶ್ನಿಸುತ್ತಾರೆ. ತಾವು ಯಾವುದೇ ನೆರವು ನೀಡದೆ, ಸಂಸ್ಥೆಯ ಕಾರ್ಯವೈಖರಿಯನ್ನು ಮಾತ್ರ ಟೀಕಿಸುವುದರ ಔಚಿತ್ಯವನ್ನೂ ಪ್ರಶ್ನೆ ಮಾಡುತ್ತಾರೆ.

ಆ ಸಂದರ್ಭದಲ್ಲಿ ಮಾಸ್ತಿಯವರು ಆಡಿದ ಕಟು ಮಾತುಗಳು ಕೇವಲ ಸದಸ್ಯತ್ವ ಹೆಚ್ಚಿಸಿಕೊಳ್ಳುವ ಮನವಿಯಾಗಿರಲಿಲ್ಲ. ಬದಲಾಗಿ ಕನ್ನಡದ ಬೆಳವಣಿಗೆಯ ಜವಾಬ್ದಾರಿಯನ್ನು ಕೆಲವೇ ವ್ಯಕ್ತಿಗಳ ಅಥವಾ ಒಂದು ಸಂಸ್ಥೆಯ ಹೆಗಲಿಗೆ ಹಾಕಿ ಉಳಿದವರು ದೂರ ನಿಲ್ಲಬಾರದು ಎಂಬ ಸಾಮಾಜಿಕ ಕಳಕಳಿಯೂ ಅದರ ಹಿಂದಿತ್ತು.

ಪರಿಷತ್ಪತ್ರಿಕೆಗೆ ಲೇಖನಗಳಿಲ್ಲವೇ?

ಭಾಷಣದ ಮತ್ತೊಂದು ಕುತೂಹಲಕಾರಿ ಭಾಗ ಪರಿಷತ್ತಿನ ಪತ್ರಿಕೆಯ ಸ್ಥಿತಿಗತಿಗೆ ಸಂಬಂಧಿಸಿದ್ದು.

ಆಗ ಪರಿಷತ್ತಿನ ಪತ್ರಿಕೆ ವರ್ಷಕ್ಕೆ ನಾಲ್ಕು ಬಾರಿ ಪ್ರಕಟವಾಗಬೇಕಿತ್ತು. ಆದರೆ ಪ್ರತಿ ಸಂಚಿಕೆಗೂ ಲೇಖನಗಳನ್ನು ಸಂಗ್ರಹಿಸುವುದೇ ಕಷ್ಟವಾಗಿತ್ತು. ಕೆಲವು ಸಂಚಿಕೆಗಳು ಪ್ರಕಟಣೆಯಲ್ಲಿ ಹಿಂದೆ ಬಿದ್ದಿದ್ದವು. ವರ್ಷವೊಂದಕ್ಕೆ ಕೇವಲ 400 ಪುಟಗಳಷ್ಟು ಬರಹಗಳನ್ನು ಕನ್ನಡದ ವಿದ್ಯಾವಂತರು ಒದಗಿಸಲಾರರೇ ಎಂಬ ಪ್ರಶ್ನೆಯನ್ನು ಅವರು ಮುಂದಿಡುತ್ತಾರೆ. ಕನ್ನಡ ಸಾಹಿತ್ಯ, ಇತರ ಭಾಷೆಗಳ ಸಾಹಿತ್ಯ, ಕನ್ನಡನಾಡಿನ ಇತಿಹಾಸ ಮತ್ತು ಸಂಸ್ಕೃತಿಗಳ ಬಗ್ಗೆ ಆಸಕ್ತಿಯುಳ್ಳವರು ನಮ್ಮ ನಡುವೆ ಸಾಕಷ್ಟು ಜನರಿದ್ದಾರೆ. ಅಂಥವರಲ್ಲಿ ಕನಿಷ್ಠ 20 ಮಂದಿ ವರ್ಷಕ್ಕೊಂದು ಲೇಖನ ಬರೆದರೂ ಪರಿಷತ್ತಿನ ಪತ್ರಿಕೆ ಸಕಾಲದಲ್ಲಿ ಪ್ರಕಟವಾಗಬಹುದು ಎಂಬ ಸರಳ ಲೆಕ್ಕಾಚಾರವನ್ನು ಮುಂದಿಡುತ್ತಾರೆ.

ಇದು ಇಂದಿನ ಡಿಜಿಟಲ್ ಯುಗದಲ್ಲಿಯೂ ಅಚ್ಚರಿಯೆನಿಸುವ ಹಾಗೂ ಅನ್ವಯವಾಗುವ ವಿಚಾರ. ಲೇಖಕರು ಬೇಕು, ಉತ್ತಮ ಬರಹಗಳು ಬೇಕು, ನಿರಂತರ ಪ್ರಕಟಣೆ ಬೇಕು ಎಂಬ ಬೇಡಿಕೆ ಇಂದಿಗೂ ಅನೇಕ ಸಾಹಿತ್ಯ ಮತ್ತು ಪತ್ರಿಕಾ ಸಂಸ್ಥೆಗಳನ್ನು ಕಾಡುತ್ತಿವೆ. ಉತ್ತ, ಸಂಗ್ರಾಹ್ಯ, ವಿದ್ವತ್ಪೂರ್ಣ ಲೇಖನಗಳ ಕೊರತೆ ಇಂದಿಗೂ ಕಾಡುತ್ತಿರುವುದು ಸುಳ್ಳಲ್ಲ.

ಅಧ್ಯಕ್ಷೀಯ ಭಾಷಣದ ಸಾರ: ಮಾಸ್ತಿಯವರ ಮಾತಿನಲ್ಲೇ...

ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿ ಹದಿನಾಲ್ಕು ವರ್ಷಗಳಾಗಿವೆ. ಈ ಅವಧಿಯಲ್ಲಿ ಕನ್ನಡದ ಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪರಿಷತ್ತು ಮಾಡಿರುವ ಕೆಲಸಗಳ ಬಗ್ಗೆ ದೂರುವುದಕ್ಕಿಂತ, ಅದು ಇನ್ನಷ್ಟು ಕೆಲಸ ಮಾಡಲು ನಾವೇನು ನೆರವು ನೀಡಿದ್ದೇವೆ ಎಂಬುದನ್ನು ಮೊದಲು ಯೋಚಿಸಬೇಕು. ಪರಿಷತ್ತು ಮಾಡಬಹುದಾದ ಕೆಲಸಗಳು ನೂರಾರು ಇವೆ. ಜನರು ಸದಸ್ಯರಾಗಿ, ಹಣ ನೀಡಿ, ಇತರ ರೀತಿಯಲ್ಲಿ ನೆರವಾಗಿ, ಸ್ವತಃ ದುಡಿದರೆ ಮಾತ್ರ ಆ ಕೆಲಸಗಳು ಸಾಧ್ಯ. ನಾವು ಮಾಡಿದ್ದನ್ನು ಪರಿಷತ್ತು ಮಾಡುತ್ತದೆ; ನಾವು ಮಾಡದೆ ಇರುವುದನ್ನು ಅದು ಹೇಗೆ ತಾನೇ ಮಾಡಬಲ್ಲದು?

ಪರಿಷತ್ಪತ್ರಿಕೆ ವರ್ಷಕ್ಕೆ ನಾಲ್ಕು ಬಾರಿ ಪ್ರಕಟವಾಗಬೇಕಾದರೂ, ಅದಕ್ಕೆ ಬೇಕಾದ ಲೇಖನಗಳನ್ನು ಸಂಗ್ರಹಿಸುವುದೇ ಕಷ್ಟವಾಗಿದೆ. ನಮ್ಮಲ್ಲಿ ಸಾಹಿತ್ಯ, ಇತಿಹಾಸ ಮತ್ತು ಸಂಸ್ಕೃತಿಗಳ ಬಗ್ಗೆ ಆಸಕ್ತಿಯುಳ್ಳವರು ಸಾಕಷ್ಟು ಜನರಿದ್ದಾರೆ. ಇಪ್ಪತ್ತು ಮಂದಿ ವರ್ಷಕ್ಕೊಂದು ಲೇಖನ ನೀಡಿದರೂ ಪತ್ರಿಕೆಯನ್ನು ಸಕಾಲದಲ್ಲಿ ಪ್ರಕಟಿಸಬಹುದು. ಆದ್ದರಿಂದ ವಿದ್ಯಾವಂತ ಕನ್ನಡಿಗರೆಲ್ಲರೂ ಪರಿಷತ್ತನ್ನು ತಮ್ಮದೇ ಸಂಸ್ಥೆಯೆಂದು ಭಾವಿಸಿ, ಸಾಧ್ಯವಾದಷ್ಟು ಜನರನ್ನು ಸದಸ್ಯರನ್ನಾಗಿ ಮಾಡಿ, ಅದರ ಕಾರ್ಯಗಳಿಗೆ ನೆರವಾಗಬೇಕು. ಈ ಹೊಣೆ ನಮ್ಮದು. ಅದನ್ನು ನಿರ್ವಹಿಸದಿದ್ದರೆ ತಪ್ಪು ನಮ್ಮದೇ ಹೊರತು ಪರಿಷತ್ತಿನದಲ್ಲ.

ಇಂದಿಗೂ ಕನ್ನಡಿಗರಿಗೆ ಅನ್ವಯಿಸುವ ಆತ್ಮಾವಲೋಕನ

1929ರಲ್ಲಿ ಮಾಸ್ತಿಯವರು ಮುಂದಿಟ್ಟಿದ್ದ ಪ್ರಶ್ನೆಗಳಿಗೆ ಇಂದಿಗೂ ಪ್ರಸ್ತುತ.

ಕನ್ನಡದ ಬೆಳವಣಿಗೆಗೆ ಸರ್ಕಾರ ಏನು ಮಾಡಬೇಕು, ಕನ್ನಡ ಸಾಹಿತ್ಯ ಪರಿಷತ್ತು ಏನು ಮಾಡಬೇಕು, ವಿಶ್ವವಿದ್ಯಾಲಯಗಳು ಏನು ಮಾಡಬೇಕು ಎಂಬಿತ್ಯಾದಿ ಚರ್ಚೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಆದರೆ ಕನ್ನಡದ ಓದುಗರಾಗಿ, ಲೇಖಕರಾಗಿ, ಕನ್ನಡದ ಅಭಿಮಾನಿಗಳಾಗಿ ನಾವು ಏನು ಮಾಡುತ್ತಿದ್ದೇವೆ ಎಂಬ ಪ್ರಶ್ನೆಯೂ ಅಷ್ಟೇ ಮುಖ್ಯ. ಕನ್ನಡದ ಪುಸ್ತಕಗಳನ್ನು ಕೊಂಡು ಓದುವುದು, ಹೊಸ ಬರಹಗಾರರನ್ನು ಪ್ರೋತ್ಸಾಹಿಸುವುದು, ಗ್ರಂಥಾಲಯಗಳಿಗೆ ನೆರವಾಗುವುದು, ಕನ್ನಡದ ಪತ್ರಿಕೆಗಳಿಗೆ ಲೇಖನಗಳನ್ನು ನೀಡುವುದು, ಕನ್ನಡದ ಸಾಹಿತ್ಯಿಕ ಸಂಸ್ಥೆಗಳ ಚಟುವಟಿಕೆಗಳಲ್ಲಿ ಭಾಗವಹಿಸುವುದು ಇವೆಲ್ಲವೂ ಭಾಷೆಯ ಬೆಳವಣಿಗೆಗೆ ಕೊಡುಗೆಗಳೇ.

ಮಾಸ್ತಿಯವರು ಅಂದೇ ಹೇಳಿದಂತೆ, ಸಂಸ್ಥೆಯೊಂದು ಬೆಳೆಯಬೇಕಾದರೆ ಅದರ ಸದಸ್ಯರು, ಓದುಗರು, ಲೇಖಕರು ಮತ್ತು ಹಿತೈಷಿಗಳ ಸಹಕಾರ ಅತ್ಯಗತ್ಯ. ಕೇವಲ ಟೀಕೆ ಮಾಡುವುದರಿಂದ ಸಂಸ್ಥೆಗಳು ಬೆಳೆಯುವುದಿಲ್ಲ.

'ಪರಿಷತ್ತು ನಾವೇ' ಎಂಬ ಮಾಸ್ತಿಯವರ ಮಾತು ಕನ್ನಡ ಸಾಹಿತ್ಯ ಪರಿಷತ್ತಿಗೆ ಮಾತ್ರ ಸೀಮಿತವಾಗಿಲ್ಲ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಕನ್ನಡದ ಎಲ್ಲ ಸಾರ್ವಜನಿಕ ಸಂಸ್ಥೆಗಳ ಬೆಳವಣಿಗೆಗೂ ಅನ್ವಯಿಸುವ ಸಾರ್ವಕಾಲಿಕ ಸಂದೇಶವಾಗಿದೆ.

ಸಮ್ಮೇಳನಾಧ್ಯಕ್ಷರು ಹೇಳಿದ್ದು: ಸಮ್ಮೇಳನ ಕೇವಲ ಸಾಹಿತಿಗಳ ಸಮಾವೇಶವಲ್ಲ; ಗುಂಡಪ್ಪಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೇ?
Dailyhunt
Disclaimer: This content has not been generated, created or edited by Dailyhunt. Publisher: Prajavani