ಅರಮನೆಯ ಸೇವಕಿಯಾಗಿದ್ದ ಸಂಚಿ ಹೊನ್ನಮ್ಮ ತಮ್ಮ ಸಾಹಿತ್ಯ ಪ್ರಭೆಯಿಂದಾಗಿ ಕನ್ನಡ ಕಾವ್ಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನಗಳಿಸಿದ್ದಾರೆ. ಸಂಚಿ ಹೊನ್ನಮ್ಮ ಅವರ ಬದುಕು ಹಾಗೂ ಸಂಬಂಧಗಳು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನೊಂದಿಗೆ ಬೆಸೆದುಕೊಂಡಿವೆ. ಆದರೆ, ಹೊನ್ನಮ್ಮ ಅವರ ಬದುಕು ಹಾಗೂ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಿನ ಉಲ್ಲೇಖಗಳು ಸಿಗುವುದಿಲ್ಲ.
ಸುಮಾರು ಕ್ರಿ.ಶ. 1680ರ ಕಾಲಘಟ್ಟದಲ್ಲಿ ಸಂಚಿ ಹೊನ್ನಮ್ಮ ಅವರು ಚಿಕ್ಕದೇವರಾಜರ ಊಳಿಗದಲ್ಲಿ ಸೇರಿದ್ದ ಬಗ್ಗೆ ಉಲ್ಲೇಖ ಇದೆ. ಯಳಂದೂರಿನ ದೇವರಾಜಮ್ಮಣ್ಣಿ ಅವರು ಮೈಸೂರು ರಾಜರ ಪಟ್ಟದ ರಾಣಿಯಾದಾಗ, ದೇವರಾಜಮ್ಮಣ್ಣಿ ಅವರ ಅನುಗಾಲದ ಸ್ನೇಹಿತೆಯಾಗಿದ್ದ ಹೊನ್ನಮ್ಮ ಕೂಡ ಮೈಸೂರು ಅರಮನೆಯ ಭಾಗವಾದ ಬಗ್ಗೆ ಚರಿತ್ರೆಯಲ್ಲಿ ಉಲ್ಲೇಖಿಸಲಾಗಿದೆ.
ಮೈಸೂರು ಅರಸರ ಆಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂಚಿ ಹೊನ್ನಮ್ಮ ಎಲೆ-ಅಡಿಕೆ ತುಂಬಿದ ಸಂಚಿಯನ್ನು (ಚೀಲ) ಹಿಡಿದು ಅರಮನೆಯ ಒಡ್ಡೋಲಗದಲ್ಲಿ ಓಡಾಡುತ್ತಿದ್ದ ಕಾರಣಕ್ಕೆ 'ಸಂಚಿ ಹೊನ್ನಮ್ಮ (ಹೊನ್ನಿ)' ಎಂಬ ಹೆಸರು ಬಂತು ಎಂಬ ಪ್ರತೀತಿಯೂ ಇದೆ.
ಅರಮನೆಯಲ್ಲಿ ನಡೆಯುತ್ತಿದ್ದ ಕಾವ್ಯ ವಾಚನ, ಸಂಗೀತ, ನೃತ್ಯ ಹಾಗೂ ಸಾಹಿತ್ಯಿಕ ಚರ್ಚೆಗಳು, ಹರಿಕಥೆ, ಶಿವ ಕಥೆಗಳು ಹೊನ್ನಮ್ಮ ಅವರೊಳಗಿದ್ದ ಕವಯತ್ರಿಯನ್ನು ಜಾಗೃತಗೊಳಿಸಿದವು. ಕವಿ ಹಾಗೂ ಗುರು ಸಿಂಗರಾಯರ ಅನುಗ್ರಹ ಹಾಗೂ ಅರಮನೆಯ ಕವಿಗಳ ಒಡನಾಟದಿಂದ ಸಾಹಿತ್ಯಾಸಕ್ತಿ ಹೆಚ್ಚಾಗಿ ಸಂಚಿ ಹೊನ್ನಮ್ಮ ಅವರು ಕಾವ್ಯಗಳನ್ನು ರಚಿಸುತ್ತಾ ಕನ್ನಡ ಸಾಹಿತ್ಯ ಲೋಕದ ಸ್ತ್ರೀಪರ ಚಿಂತನೆಗಳ ಮಾದರಿಯಾಗಿ ಬೆಳೆದರು ಎನ್ನಲಾಗುತ್ತದೆ.
ಪ್ರಜಾವಾಣಿ ಕರುನಾಡೋತ್ಸವ | ಸಾಹಿತಿಗಳ ಊರು-ಮನೆಯ ಈಗಿನ ಸ್ಥಿತಿಗತಿ: ಶಿವರಾಮ ಕಾರಂತ'ಹದಿಬದೆಯ ಧರ್ಮ' ಕಾವ್ಯದ ವಿಶಿಷ್ಟತೆ:
ಸಂಚಿ ಹೊನ್ನಮ್ಮ ಅವರ ಪ್ರಮುಖ ಕೃತಿ 'ಹದಿಬದೆಯ ಧರ್ಮ'. ಸಾಂಗತ್ಯ ರೂಪದಲ್ಲಿ ರಚಿತವಾಗಿರುವ ಕಾವ್ಯವು ಮಹಿಳೆಯರ ಬದುಕು, ದಾಂಪತ್ಯ, ಪತಿ-ಪತ್ನಿಯರ ನಡುವಿನ ನಂಬಿಕೆ, ಪ್ರೀತಿ, ಕರ್ತವ್ಯ ಹಾಗೂ ಕುಟುಂಬದ ನಿರ್ವಹಣೆಯಂತಹ ವಿಷಯಗಳನ್ನು ಒಳಗೊಂಡಿದೆ. ಕೃತಿಯಲ್ಲಿ ಒಂಬತ್ತು ಸಂಧಿಗಳು ಮತ್ತು 479 ಪದ್ಯಗಳಿವೆ ಎಂದು ಹೇಳಲಾಗುತ್ತದೆ.
ರಾಮಾಯಣ, ಮಹಾಭಾರತ, ಭಾಗವತ ಮೊದಲಾದ ಮಹಾಕಾವ್ಯಗಳ ಆಶಯಗಳು ಹಾಗೂ ಧಾರ್ಮಿಕ ಪರಂಪರೆಯ ಪ್ರಭಾವ ಕೃತಿಯಲ್ಲಿದೆ. ಪತಿ ಭಕ್ತಿ, ಕುಟುಂಬದ ಹೊಣೆಗಾರಿಕೆ ಮತ್ತು ಗೃಹಿಣಿಯ ಕರ್ತವ್ಯಗಳ ಕುರಿತು ಹೊನ್ನಮ್ಮ ವಿವರವಾಗಿ ನಿರೂಪಿಸಿದ್ದಾರೆ. ಗಂಡು ಮಕ್ಕಳ ಅಪೇಕ್ಷೆ, ಹೆಣ್ಣು ಮಕ್ಕಳ ಉಪೇಕ್ಷೆಯ ಸ್ವರೂಪವನ್ನು ವಿಮರ್ಷಿಸುತ್ತಲೇ, ಮಾನವಕುಲ ಮಾತೆಯ ಮಮತೆಯಲ್ಲಿ ವಿಕಾಸ ಆಗಿರುವ ಸತ್ಯವನ್ನು ಕಾವ್ಯದಲ್ಲಿ ಮನಗಾಣಿಸಿದ್ದಾರೆ.
ಅಂದಿನ ಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರಿಂದ ನಿರೀಕ್ಷಿಸಲಾಗುತ್ತಿದ್ದ ನಡವಳಿಕೆಗಳನ್ನು ಕಾವ್ಯದಲ್ಲಿ ಪ್ರತಿಬಿಂಬಿಸಿರುವುದು ಕೃತಿಯ ವಿಶೇಷತೆ. ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀ ಹಿರಿಮೆಯನ್ನು ಸಮಾಜಕ್ಕೆ ದಾಟಿಸಿರುವುದು ಹೊನ್ನಮ್ಮನ ಕಾವ್ಯದ ಹೆಚ್ಚುಗಾರಿಕೆ ಎಂದು ಹೇಳಬಹುದು.
ಮಹಿಳಾ ಬದುಕಿನ ಸೂಕ್ಷ್ಮ ಸಂವೇದನೆ:
ಮಹಿಳೆಯರ ಬದುಕು ಕುಟುಂಬದ ಜವಾಬ್ದಾರಿ ಮತ್ತು ಸಾಮಾಜಿಕ ನಿರೀಕ್ಷೆಗಳ ಸುತ್ತಲೂ ಕೇಂದ್ರೀಕೃತವಾಗಿದ್ದ ಕಾಲದಲ್ಲಿ, ಮಹಿಳೆಯರ ನಡವಳಿಕೆ, ದಾಂಪತ್ಯದ ನಂಬಿಕೆ ಹಾಗೂ ಕುಟುಂಬದ ಸಂಬಂಧಗಳನ್ನು ಕಾವ್ಯದ ವಿಷಯವನ್ನಾಗಿ ಮಾಡಿಕೊಂಡು ಸಮರ್ಥವಾಗಿ ನಿರೂಪಿಸಿದ್ದಾರೆ. ಅವರ 'ಹದಿಬದೆಯ ಧರ್ಮ'ವನ್ನು ಪತಿಭಕ್ತಿ ಸಾರುವ ಕೃತಿಯಾಗಿ ಮಾತ್ರ ನೋಡುವುದಕ್ಕಿಂತ ಅಂದಿನ ಸಮಾಜ ಮಹಿಳೆಯರಿಂದ ನಿರೀಕ್ಷಿಸುತ್ತಿದ್ದ ಕರ್ತವ್ಯ ಮತ್ತು ಮೌಲ್ಯಗಳನ್ನು ದಾಖಲಿಸಿರುವ ಸಾಹಿತ್ಯಕೃತಿಯಾಗಿಯೂ ಅಧ್ಯಯನ ಮಾಡಬೇಕಾಗಿದೆ ಎನ್ನುತ್ತಾರೆ ಸಾಹಿತಿ ಗುಂಬಳ್ಳಿ ಬಸವರಾಜು.
ಅಕ್ಕಮಹಾದೇವಿಯಿಂದ ಸಂಚಿ ಹೊನ್ನಮ್ಮನವರೆಗೆ:
ಕನ್ನಡ ಸಾಹಿತ್ಯದಲ್ಲಿ ಅಕ್ಕಮಹಾದೇವಿ ಮಹಿಳೆಯ ಸ್ವಾತಂತ್ರ್ಯ, ಆತ್ಮಗೌರವ ಮತ್ತು ಆಧ್ಯಾತ್ಮಿಕ ಅಭಿವ್ಯಕ್ತಿಗೆ ವಿಶಿಷ್ಟ ರೂಪ ನೀಡಿದರೆ, ಸಂಚಿ ಹೊನ್ನಮ್ಮ ತಮ್ಮ ಕಾಲದ ಸಾಮಾಜಿಕ ವ್ಯವಸ್ಥೆಯೊಳಗಿದ್ದುಕೊಂಡೇ ಮಹಿಳೆಯ ಬದುಕನ್ನು ಕಾವ್ಯದ ಮೂಲಕ ಕಟ್ಟಿಕೊಟ್ಟರು. 17ನೇ ಶತಮಾನದಲ್ಲಿ ಅರಮನೆಯ ಆಶ್ರಯದಲ್ಲಿ ಸಾಹಿತ್ಯ ರಚನೆಗೆ ಅವಕಾಶ ಪಡೆದ ಮಹಿಳಾ ಕವಯತ್ರಿಯರ ಪೈಕಿ ಸಂಚಿ ಹೊನ್ನಮ್ಮಳ ಹೆಸರು ಪ್ರಮುಖವಾಗಿ ಉಲ್ಲೇಖವಾಗುತ್ತದೆ.
ಕಾಲ ಬದಲಾದಂತೆ ಮಹಿಳೆಯರ ಸ್ಥಾನಮಾನ, ಹಕ್ಕುಗಳು ಮತ್ತು ಸ್ವಾತಂತ್ರ್ಯದ ಕುರಿತು ಸಮಾಜದ ದೃಷ್ಟಿಕೋನ ಬದಲಾಗಿರೂ ಹೊನ್ನಮ್ಮನ ಕೃತಿ ಮಹತ್ವದ ಆಕರವಾಗಿದೆ.
'ಪೆಣ್ಣಲ್ಲವೇ ನಮ್ಮನೆಲ್ಲ ಪಡಿದ ತಾಯಿ, ಪೆಣ್ಣಲ್ಲವೇ ಪೊರೆದವರು, ಪೆಣ್ಣು ಪೆಣ್ಣಂದಿರೇತಕೆ ಬೀಳುಗಳೆವರು, ಕಣ್ಣು ಕಾಣದ ಗಾವಿಲರು'…ಎಂಬ ಪದ್ಯದ ಸಾಲುಗಳು ಮಹಿಳೆಯ ಮಹತ್ವವನ್ನು ನೆನಪಿಸುತ್ತವೆ. ಮಹಿಳೆಯ ಬದುಕನ್ನು ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸದೆ, ಸಾಮಾಜಿಕ ಮಹತ್ವವನ್ನು ಗುರುತಿಸುವ ದೃಷ್ಟಿಯಿಂದಲೂ ಹೊನ್ನಮ್ಮನ ಪದ್ಯಗಳನ್ನು ಅಧ್ಯಯನ ಮಾಡಬಹುದು.
ಅರಮನೆಯ ಸೇವಕಿಯಾಗಿ ಬದುಕು ಆರಂಭಿಸಿ ಕವಯತ್ರಿಯಾಗಿ ಗುರುತಿಸಿಕೊಂಡ ಸಂಚಿ ಹೊನ್ನಮ್ಮ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ. ಲಿಂಗ ಸಮಾನತೆಯ ಮಹತ್ವ ಸಾರುವ 'ಕುವರನಾದೊಡೆ ಬಂದ ಗುಣವೇನು, ಕುವರಿಯಾದೊಡೆ ಕುಂದೇನು' ಕಾವ್ಯದ ಸಾಲುಗಳು ಲೋಕನೀತಿಯ ದೃಷ್ಟಿಯಿಂದ ಹೆಣ್ಣು ಗಂಡುಗಳ ಅಸಮಾನತೆಯ ಬಗ್ಗೆ ಚಿತ್ರಿಸುತ್ತದೆ.
ಇದೇ ಆಶಯವನ್ನು ಸಂವಿಧಾನದ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತೆಯಲ್ಲೂ ಕಾಣಬಹುದು. ಮೈಸೂರು ಅರಸರ ಆಸ್ಥಾನದಲ್ಲಿದ್ದ ಸಂಚಿ ಹೊನ್ನಮ್ಮ ತಮ್ಮ ಬಾಲ್ಯ ಮತ್ತು ಯವ್ವನದ ಬಗ್ಗೆ ಯಾವ ಮಾಹಿತಿಯನ್ನೂ ನೀಡದೆ ಮೌನವಾಗಿದ್ದಾರೆ.
ಸಂಚಿ ಹೊನ್ನಮ್ಮ ಅವರ ಜನ್ಮಸ್ಥಳದ ಕುರಿತು ಯಾವುದೇ ಅಧಿಕೃತ ದಾಖಲೆಗಳಿಲ್ಲ. ಅವರ ಮನೆ, ಬದುಕಿದ್ದ ಕುರುವುಗಳು ಕೂಡ ಲಭ್ಯವಿಲ್ಲ. ಅವರ ಪೂರ್ವಜರು ಮತ್ತು ಸಂಬಂಧಿಕರ ಕುರಿತು ಕೂಡ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಕನ್ನಡದ ಮಹಿಳಾ ಸಾಹಿತ್ಯದಲ್ಲಿ ಪ್ರಮುಖ ಹೆಸರಾಗಿರುವ ಸಂಚಿ ಹೊನ್ನಮ್ಮ ಅವರ ಬದುಕಿನ ಕುರಿತು ಇನ್ನಷ್ಟು ಅಧ್ಯಯನಗಳು ನಡೆಯುವ ಅಗತ್ಯವಿದೆ.
ಪ್ರಜಾವಾಣಿ ಕರುನಾಡೋತ್ಸವ| ಸಾಹಿತಿಗಳ ಊರು-ಮನೆಯ ಈಗಿನ ಸ್ಥಿತಿಗತಿ: 'ಚದುರಂಗ'
