Dailyhunt Logo
  • Light mode
    Follow system
    Dark mode
    • Play Story
    • App Story
ಪ್ರಶಸ್ತಿಗಾಗಿ ಓಡೋಡಿ ಬರ್ತಾರೆ?: ಮೋದಿ ಹಾಗೂ ಜಾಗತಿಕ ಪ್ರಶಸ್ತಿಗಳ ಸುತ್ತ ವಿವಾದ

ಪ್ರಶಸ್ತಿಗಾಗಿ ಓಡೋಡಿ ಬರ್ತಾರೆ?: ಮೋದಿ ಹಾಗೂ ಜಾಗತಿಕ ಪ್ರಶಸ್ತಿಗಳ ಸುತ್ತ ವಿವಾದ

ವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಿರಂತರ ವಿದೇಶಿ ಪ್ರವಾಸಗಳ ಸಂದರ್ಭಗಳಲ್ಲಿ ಅವರಿಗೆ ಲಭಿಸುತ್ತಿರುವ ಸಾಲು ಸಾಲು ಅಂತರರಾಷ್ಟ್ರೀಯ ಪ್ರಶಸ್ತಿಗಳ ಕುರಿತು 'ದಿ ಗಾರ್ಡಿಯನ್' ವಿಶೇಷ ವರದಿಯೊಂದನ್ನು ಪ್ರಕಟಿಸಿದೆ.

ಮೋದಿ ಅವರ ವಿದೇಶಾಂಗ ನೀತಿ ಮತ್ತು ಜಾಗತಿಕ ರಾಜತಾಂತ್ರಿಕತೆಯಲ್ಲಿ ಈ ಪ್ರಶಸ್ತಿಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ವಿಶ್ಲೇಷಿಸಲಾಗಿದೆ.

ಆದರೆ ಮೋದಿ ಅವರಿಗಾಗಿ ಸೃಜಿಸಲಾಗುತ್ತಿರುವ ಜಾಗತಿಕ ಪ್ರಶಸ್ತಿಗಳ ಬಗ್ಗೆಯೂ ವಿರ್ಮಶೆಗಳು ಎದ್ದಿವೆ.

ಮೋದಿಗಾಗಿ ಪ್ರಶಸ್ತಿ?

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕೊನೆಯದಾಗಿ ಸೆಷೆಲ್ಸ್ ದೇಶಕ್ಕೆ ಪ್ರವಾಸ ಕೈಗೊಂಡಿದ್ದರು. ಅವರು ಸೆಷೆಲ್ಸ್‌ಗೆ ಬಂದಿಳಿದಾಗ ಅಲ್ಲಿನ ಅತ್ಯುನ್ನತ 'ಗಾರ್ಡಿಯನ್‌ ಆಫ್‌ ದ ಬ್ಲು ಹಾರಿಜಾನ್‌' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಪರಿಸರ ಸಂರಕ್ಷಣೆ ಮತ್ತು ಸಣ್ಣ ದ್ವೀಪಗಳ ಅಭಿವೃದ್ಧಿಶೀಲ ರಾಷ್ಟ್ರಗಳ ಆಕಾಂಕ್ಷೆಗಳನ್ನು ಮುನ್ನಡೆಸುವ ದೃಢ ಬದ್ಧತೆಗಾಗಿ ಮೋದಿ ಅವರಿಗೆ ಈ ಪ್ರಶಸ್ತಿ ಸಂದಿದೆ. ಸೆಷೆಲ್ಸ್‌ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಅವರು ಮೋದಿ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಈ ಪ್ರಶಸ್ತಿಯನ್ನು ಪ್ರಧಾನಿಯವರು ಪರಿಸರ ಸಂರಕ್ಷಣೆಗಾಗಿ ಹೋರಾಡುತ್ತಿರುವ ಜಗತ್ತಿನ ಎಲ್ಲಾ ದೇಶಗಳಿಗೆ ಸಮರ್ಪಿಸಿದ್ದಾರೆ.

ಆದರೆ, ಮೋದಿ ಅವರಿಗಾಗಿ ತರಾತುರಿಯಲ್ಲಿ ನೀಡಿದ ಪ್ರಶಸ್ತಿ ಆಗಿದ್ದು, ಈ ಪ್ರಶಸ್ತಿಯಲ್ಲಿ ಕೆಲವು ವಿಷಯಗಳು ಸರಿಯಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಈ ಪ್ರಮಾಣಪತ್ರದಲ್ಲಿ 'republic' ಅನ್ನು 'repubblic' ಮತ್ತು 'Seychelles' ಅನ್ನು 'Seycheeles' ಎಂದು ತಪ್ಪಾಗಿ ಮುದ್ರಿಸಲಾಗಿತ್ತು.

ಮೋದಿ ಅವರ ಆಗಮನಕ್ಕಿಂತ ಮೂರು ದಿನಗಳ ಹಿಂದೆಯಷ್ಟೇ ಈ ಪ್ರಶಸ್ತಿಯನ್ನು ಸೃಜಿಸಲಾಗಿತ್ತು ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿತ್ತು. ಈ ವಿವಾದಕ್ಕೆ ಮತ್ತಷ್ಟು ಕಿಡಿ ಹೊತ್ತಿಸುವಂತೆ ಸಾಫ್ಟ್‌ವೇರ್ ಮೂಲಕ ತಪಾಸಣೆ ನಡೆಸಿದಾಗ ಈ ಪ್ರಮಾಣಪತ್ರವನ್ನು ಎ.ಐ ಮೂಲಕ ಸಿದ್ಧಪಡಿಸಲಾಗಿದೆ ಎಂದು ತಿಳಿದು ಬಂದಿತ್ತು.

Explainer: ಡಿಜಿಟಲ್ ‌ಚಳವಳಿಯಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದ ಸಿಜೆಪಿ!ವಿಶ್ಲೇಷಣೆ: ಭಾರತದ ಪ್ರಜಾಪ್ರಭುತ್ವದ ಸ್ಥಿರತೆಗೆ ಕಾರಣಗಳು ಭಾಗ-3

ಮೋದಿ ಅವರಿಗೆ ಪ್ರಶಸ್ತಿ ಕೊಡಿ, ಓಡೋಡಿ ಬರುತ್ತಾರೆ?

ಈ ವಿವಾದದ ಬೆನ್ನತ್ತಿದ ವಿರೋಧ ಪಕ್ಷವಾದ ಕಾಂಗ್ರೆಸ್, 'ಮೋದಿ ಅವರಿಗೆ ಯಾವುದೇ ಪ್ರಶಸ್ತಿ ಕೊಡಿ, ಅವರು ಓಡೋಡಿ ಬರುತ್ತಾರೆ' ಎಂದು ಲೇವಡಿ ಮಾಡಿದೆ.

'ಅವರು ಎಷ್ಟೊಂದು ತರಾತುರಿಯಲ್ಲಿದ್ದರೆಂದರೆ ಸೆಷೆಲ್ಸ್ ಗಣರಾಜ್ಯದ ಅಧಿಕೃತ ಹೆಸರನ್ನೇ ತಪ್ಪಾಗಿ ಬರೆದಿದ್ದಾರೆ' ಎಂದು ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರೀನಾಥೆ ಟೀಕಿಸಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಪ್ರಧಾನಿ ಮೋದಿ ಅವರ 'ಹಸಿರು ನಾಯಕತ್ವ'ಕ್ಕಾಗಿ ಈ ಪ್ರಶಸ್ತಿ ಲಭಿಸಿರುವುದು 'ಭಾರತಕ್ಕೆ ಹೆಮ್ಮೆಯ ಕ್ಷಣ' ಎಂದು ಹೇಳಿದೆ.

ಸೆಷೆಲ್ಸ್ ವಿದೇಶಾಂಗ ಸಚಿವಾಲಯವು ಸಹ ಸ್ಪಷ್ಪನೆಯನ್ನು ನೀಡಿದ್ದು, ಆಕಸ್ಮಿಕವಾಗಿ ಕರಡು ಪ್ರತಿಯಲ್ಲಿ ತಪ್ಪಾಗಿ ಮುದ್ರಿಸಲಾಗಿತ್ತು. ಬಳಿಕ ಸರಿಯಾದ ಪ್ರಮಾಣಪತ್ರವನ್ನು ನೀಡಲಾಗಿದೆ ಎಂದು ತಿಳಿಸಿದೆ. 'ಗಾರ್ಡಿಯನ್‌ ಆಫ್‌ ದ ಬ್ಲು ಹಾರಿಜಾನ್‌' ಪ್ರಶಸ್ತಿ ಅಧಿಕೃತ ಗೌರವ ಆಗಿದೆ ಎಂದು ಹೇಳಿದೆ.

ವಿರೋಧ ಪಕ್ಷಗಳು ಹಾಗೂ ವಿಮರ್ಶಕರು ಬೊಟ್ಟು ಮಾಡಿರುವಂತೆಯೇ, ಪ್ರಧಾನಿ ಮೋದಿ ತಮ್ಮ 12 ವರ್ಷಗಳ ಅಧಿಕಾರಾವಧಿಯಲ್ಲಿ ದೇಶ ಮತ್ತು ವಿದೇಶಗಳಲ್ಲಿ ಪ್ರಶಸ್ತಿಗಳನ್ನು ಸ್ವೀಕರಿಸುವಲ್ಲಿ ಗಮನಾರ್ಹ ಉತ್ಸುಕತೆಯನ್ನು ತೋರಿದ್ದಾರೆ.

ಕಳೆದ ತಿಂಗಳಲ್ಲಿ ಮೋದಿ ಇಸ್ರೇಲ್‌ಗೆ ಭೇಟಿ ನೀಡುವ ಕೆಲವೇ ದಿನಗಳ ಮೊದಲು, ಇಸ್ರೇಲ್ ಸಂಸತ್ತು ತನ್ನ ದೇಶದ ಅತ್ಯುನ್ನತ ಗೌರವಗಳಲ್ಲೊಂದು ಎಂದು ಹೇಳಲಾದ 'ಮೆಡಲ್ ಆಫ್ ದಿ ನೆಸ್ಸೆಟ್' ಅನ್ನು ತುರ್ತಾಗಿ ಸೃಜಿಸಿತು. ಮೋದಿ ಅವರು ಅಲ್ಲಿಗೆ ಬಂದಿಳಿದಾಗ ಅದನ್ನು ಅವರಿಗೆ ಪ್ರದಾನ ಮಾಡಲಾಯಿತು. ಸೆಷೆಲ್ಸ್ ರೀತಿಯಲ್ಲೇ ಈ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ ಮೋದಿ ಅವರಾಗಿದ್ದಾರೆ.

2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾದ ಅಮೆರಿಕದ ಫಿಲಿಪ್‌ ಕೋಟ್ಲರ್‌ ಅಧ್ಯಕ್ಷೀಯ ಪ್ರಶಸ್ತಿ ಕುರಿತು ವಿವಾದ ಭುಗಿಲೆದ್ದಿತ್ತು. ಅಮೆರಿಕದ ನಾರ್ತ್‌ ವೆಸ್ಟರ್ನ್ ಯುನಿವರ್ಸಿಟಿಯ ಕೆಲ್ಲಾಗ್‌ ಸ್ಕೂಲ್‌ ಆಫ್‌ ಮ್ಯಾನೇಜ್‌ಮೆಂಟ್‌ನಲ್ಲಿ ಮಾರ್ಕೆಟಿಂಗ್‌ ಪ್ರಾಧ್ಯಾಪಕರಾಗಿರುವ ಫಿಲಿಪ್‌ ಕೋಟ್ಲರ್‌ ಹೆಸರಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ. ಕೋಟ್ಲರ್‌ ಅವರೇ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ.

ಆದರೆ ಈ ಗೌರವವನ್ನು ಪ್ರತಿ ವರ್ಷ ನೀಡಬೇಕಿತ್ತು. ಅಂದಿನಿಂದ ಈವರೆಗೆ ಈ ಪ್ರಶಸ್ತಿಯನ್ನು ನೀಡಿಲ್ಲ. ವೆಬ್‌ಸೈಟ್ ಕೂಡ ನಿಷ್ಕ್ರಿಯವಾಗಿದೆ.

ಸದ್ಯ ಮೋದಿ ಅವರ ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ ಪ್ರಶಸ್ತಿಗಳು ಮತ್ತು ಗೌರವಗಳು ಒಂದು ಮಹತ್ತರ ನಿರೀಕ್ಷೆಯಾಗಿ ಮಾರ್ಪಟ್ಟಿವೆ. ಮೋದಿ ಅವರ ಜೀವನಚರಿತ್ರೆ ಬರೆದಿರುವ ನಿಲಂಜನ್ ಮುಖೋಪಾಧ್ಯಾಯ ಅವರ ಪ್ರಕಾರ, ಪ್ರಶಸ್ತಿಗಳಿಗಾಗಿ ಜಾಗತಿಕ ಮಟ್ಟದಲ್ಲಿ ನಡೆಯುವ ಈ ಪ್ರಯತ್ನಗಳು ಪ್ರಧಾನಿಯವರ ವ್ಯಕ್ತಿತ್ವ ಆಧಾರಿತ ರಾಜಕಾರಣದ ಲಕ್ಷಣಗಳಾಗಿವೆ.

'ಈ ಪ್ರಶಸ್ತಿಗಳನ್ನು ಸ್ವೀಕರಿಸುವ ಹಿಂದಿನ ಉದ್ದೇಶವೆಂದರೆ, ಜಗತ್ತಿನಲ್ಲಿ ಭಾರತದ ಹೆಚ್ಚುತ್ತಿರುವ ವರ್ಚಸ್ಸಿಗೆ ಮೋದಿಯವರ ವ್ಯಕ್ತಿತ್ವವೇ ಕಾರಣ' ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷದಲ್ಲಿ, ಮೋದಿ ಅವರು ಇಥಿಯೋಪಿಯಾ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೊ ಗಣರಾಜ್ಯದ ಗೌರವವನ್ನು ಪಡೆದ ಮೊದಲ ವಿದೇಶಿ ರಾಷ್ಟ್ರದ ಮುಖ್ಯಸ್ಥರೂ ಆಗಿದ್ದಾರೆ. ಈ ಪ್ರಶಸ್ತಿಗಳು ಮೋದಿ ಅವರ ಅಂತರರಾಷ್ಟ್ರೀಯ ಮಟ್ಟದ ಘನತೆಗೆ ಸಿಕ್ಕ ಮನ್ನಣೆಯಾಗಿದೆ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ.

ಹೆಚ್ಚುತ್ತಿರುವ ಜಾಗತಿಕ ಪ್ರಭಾವ:

ಪ್ರಧಾನಿ ಮೋದಿ ಅವರ ನಾಯಕತ್ವಕ್ಕೆ ಜಾಗತಿಕ ಮಟ್ಟದಲ್ಲಿ 34ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಗೌರವಗಳು ಒಲಿದಿವೆ.

ಕೇವಲ ಆಫ್ರಿಕನ್ ರಾಷ್ಟ್ರಗಳಲ್ಲದೆ, ಐರೋಪ್ಯ ಹಾಗೂ ಪಶ್ಚಿಮ ಏಷ್ಯಾದ ದೇಶಗಳೂ ಸಹ ಮೋದಿ ಅವರಿಗೆ ಅತ್ಯುನ್ನತ ಗೌರವಗಳನ್ನು ನೀಡಿವೆ. ಇಸ್ರೇಲ್ ಸಂಸತ್‌ನ ಅತ್ಯುನ್ನತ ಮನ್ನಣೆಯಾದ 'ಸ್ಪೀಕರ್ ಆಫ್ ದಿ ಕೆನೆಸೆಟ್ ಮೆಡಲ್', ಸ್ವೀಡನ್‌ನ 'ಆರ್ಡರ್ ಆಫ್ ದಿ ಪೋಲಾರ್ ಸ್ಟಾರ್', ನಾರ್ವೆಯ 'ನಾರ್ವೇಜಿಯನ್ ಆರ್ಡರ್ ಆಫ್ ಮೆರಿಟ್' ಹಾಗೂ ಸ್ಲೋವಾಕಿಯಾದ 'ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್' ಪ್ರಶಸ್ತಿಗಳು ಇದರಲ್ಲಿ ಸೇರಿವೆ. ಇದು ಜಾಗತಿಕ ಮಟ್ಟದಲ್ಲಿ ಭಾರತದ ರಾಜತಾಂತ್ರಿಕ ಪ್ರಭಾವ ವಿಸ್ತರಿಸುತ್ತಿರುವುದಕ್ಕೆ ಸಾಕ್ಷಿ ಎಂದು ವರದಿ ಉಲ್ಲೇಖಿಸಿದೆ.

ಪ್ರಶಸ್ತಿಯ ಹೊರತಾಗಿ ಜಾಗತಿಕ ರಾಜಕಾರಣದಲ್ಲಿ ಭಾರತದ ಸ್ಥಾನಮಾನವನ್ನು ಹೆಚ್ಚಿಸುವಲ್ಲಿ ಮತ್ತು ವಿವಿಧ ದೇಶಗಳೊಂದಿಗೆ ಸ್ನೇಹ ಹಸ್ತ ಚಾಚುವಲ್ಲಿ ಪ್ರಧಾನಿಯವರ ವಿದೇಶಿ ಪ್ರವಾಸಗಳು ಯಶಸ್ವಿಯಾಗಿವೆ.

(ಆಧಾರ: ದಿ ಗಾರ್ಡಿಯನ್)

ಜಪಾನ್ ಪ್ರಧಾನಿಯನ್ನು 'ತಂಗಿ' ಎಂದು ಸಂಬೋಧಿಸಿದ ಪ್ರಧಾನಿ ನರೇಂದ್ರ ಮೋದಿಸೆಷಲ್ಸ್ ನಾಯಕರಿಗೆ ಬಿದರಿಕಲೆಯ ಪೆಟ್ಟಿಗೆ, ಕಸೂತಿ ಶಾಲು ಉಡುಗೊರೆ ನೀಡಿದ ಮೋದಿ
Dailyhunt
Disclaimer: This content has not been generated, created or edited by Dailyhunt. Publisher: Prajavani