ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
IPL 2026: ಪ್ರತಿ ಡಾಟ್ ಬಾಲ್‌ಗೆ 500ರಂತೆ ಈವರೆಗೆ ನೆಟ್ಟ ಗಿಡಗಳೆಷ್ಟು?
ಒಂದು ಸಾಲಿನಲ್ಲಿಗ್ರೀನ್ ಡಾಟ್ ಬಾಲ್ - ಇದು ಐಪಿಎಲ್ ಮತ್ತು ಡಬ್ಲ್ಯುಪಿಎಲ್ ಲೀಗ್‌ಗಳಲ್ಲಿ ದಾಖಲಾಗುವ ಪ್ರತಿ ಡಾಟ್ ಬಾಲ್‌ಗೆ 500 ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ ಮತ್ತು ಹಸಿರೀಕರಣವನ್ನು ಉತ್ತೇಜಿಸುವ ಬಿಸಿಸಿಐನ ಉದಾತ್ತ ಉಪಕ್ರಮ.
ಪ್ರಮುಖ ಅಂಶಗಳು• ಉಪಕ್ರಮದ ಆರಂಭಿಕ ಹಂತ2023ರ ಐಪಿಎಲ್ ಪ್ಲೇಆಫ್ ಪಂದ್ಯಗಳಿಂದ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಯಿತು, ನಂತರ 2025ರಿಂದ ಎಲ್ಲಾ ಪಂದ್ಯಗಳಿಗೂ ವಿಸ್ತರಿಸಲಾಯಿತು.• ಸಮುದಾಯದ ಮೇಲೆ ಪ್ರಭಾವಈವರೆಗೆ ವಿವಿಧೆಡೆ ಬರೋಬ್ಬರಿ 62 ಲಕ್ಷ ಗಿಡಗಳನ್ನು ನೆಡಲಾಗಿದ್ದು, ಇದು ದೇಶದಾದ್ಯಂತ ಹಸಿರೀಕರಣಕ್ಕೆ ದೊಡ್ಡ ಕೊಡುಗೆಯಾಗಿದೆ.ಪ್ರಮುಖ ಅಂಕಿಅಂಶಗಳು62 ಲಕ್ಷಒಟ್ಟು ನೆಟ್ಟಿರುವ ಸಸಿಗಳು1,813ಭುವನೇಶ್ವರ್ ಕುಮಾರ್ ಡಾಟ್ ಬಾಲ್‌ಗಳು425ಮರಿಝನ್ನೆ ಕಾಪ್ ಡಾಟ್ ಬಾಲ್‌ಗಳು500ಪ್ರತಿ ಡಾಟ್ ಬಾಲ್‌ಗೆ ಸಸಿಗಳು2023ಯೋಜನೆ ಪ್ರಾರಂಭವಾದ ವರ್ಷಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಗ್ರೀನ್ ಡಾಟ್ ಬಾಲ್.
- ಇದು ಪರಿಸರ ಸಂರಕ್ಷಣೆಯ ಉದಾತ್ತ ಧ್ಯೇಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಟಾಟಾ ಗ್ರೂಪ್ ಜಂಟಿಯಾಗಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ವೇಳೆ ನಡೆಸುತ್ತಿರುವ ಹಸಿರು ಅಭಿಯಾನ.
ಹೊಡಿಬಡಿ ಆಟಕ್ಕೆ ಹೆಸರಾದ ಟಿ20 ಪಂದ್ಯಗಳ ವೇಳೆ, ದಾಖಲಾಗುವ ಪ್ರತಿಯೊಂದು ಡಾಟ್ ಬಾಲ್‌ಗೆ 500 ಗಿಡಗಳನ್ನು ನೆಟ್ಟು ಪೋಷಿಸುವುದು, ಆ ಮೂಲಕ ದೇಶದಾದ್ಯಂತ ಹಸಿರೀಕರಣವನ್ನು ಉತ್ತೇಜಿಸುವುದು ಇದರ ಉದ್ದೇಶ.
ಮೊದಲ ಪಂದ್ಯಕ್ಕೆ ಸಾಕ್ಷಿಯಾಗಿದ್ದ ಚೆನ್ನೈ-ಗುಜರಾತ್
ಐಪಿಎಲ್ 2023ರ ಆವೃತ್ತಿಯ ಪ್ಲೇಆಫ್ ಸಂದರ್ಭದಲ್ಲಿ ಮೊದಲ ಬಾರಿಗೆ ಈ ಉಪಕ್ರಮವನ್ನು ಪರಿಚಯಿಸಲಾಯಿತು. ಮೊದಲ ಕ್ವಾಲಿಫೈಯರ್‌ನಲ್ಲಿ ಮುಖಾಮುಖಿಯಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್, ಮಹತ್ವದ ಕ್ಷಣಕ್ಕೆ ಸಾಕ್ಷಿಯಾಗಿದ್ದವು.
2023ರ ಮೇ 23ರಂದು ನಡೆದ ಆ ಪಂದ್ಯದಲ್ಲಿ ಒಟ್ಟು 84 ಬಾಲ್‌ಗಳು ದಾಖಲಾಗಿದ್ದವು. ಪ್ರತಿ ಎಸೆತಕ್ಕೆ 500ರಂತೆ ಒಟ್ಟು 42,000 ಗಿಡಗಳನ್ನು ನೆಡುವುದಾಗಿ ಆಗಿನ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಮರುದಿನವೇ ಟ್ವೀಟ್ ಮಾಡಿದ್ದರು.
ನಂತರ ನಡೆದ ಎಲಿಮಿನೇಟರ್ (ಮುಂಬೈ ಇಂಡಿಯನ್ಸ್ VS ಲಖನೌ ಸೂಪರ್ ಜೈಂಟ್ಸ್) ಪಂದ್ಯದಲ್ಲಿ 96, ಎರಡನೇ ಕ್ವಾಲಿಫೈಯರ್‌ನಲ್ಲಿ (ಮುಂಬೈ ಇಂಡಿಯನ್ಸ್ VS ಗುಜರಾತ್ ಟೈಟನ್ಸ್) 67 ಡಾಟ್ ಬಾಲ್‌ಗಳು ಬಂದಿದ್ದವು. ಚೆನ್ನೈ ಸೂಪರ್ ಕಿಂಗ್ಸ್ - ಗುಜರಾತ್ ಟೈಟನ್ಸ್ ಫೈನಲ್ ಹಣಾಹಣಿಯಲ್ಲಿ 45 ಡಾಟ್ ಬಾಲ್‌ಗಳು ದಾಖಲಾಗಿದ್ದವು. ಹೀಗಾಗಿ, ಟೂರ್ನಿಯ ಪ್ಲೇಆಫ್ ಪಂದ್ಯಗಳಲ್ಲಿ ಬಂದ ಒಟ್ಟು 294 ಡಾಟ್ ಎಸೆತಗಳಿಗೆ ಪ್ರತಿಯಾಗಿ 1,47,000 ಗಿಡಗಳನ್ನು ನೆಡುವುದಾಗಿ ಐಪಿಎಲ್ ತಿಳಿಸಿತ್ತು.
2024ರಲ್ಲೂ ಪ್ಲೇ ಆಫ್ ಪಂದ್ಯಗಳಿಗಷ್ಟೇ ಗ್ರೀನ್ ಡಾಟ್ ಬಾಲ್ ಉಪಕ್ರಮವನ್ನು ಮುಂದುವರಿಸಲಾಗಿತ್ತು. ಟೂರ್ನಿಯ ನಂತರ, ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಬಳಿ ಒಟ್ಟು 4 ಲಕ್ಷ ಗಿಡಗಳನ್ನು ನೆಟ್ಟಿರುವುದಾಗಿ ಹೇಳಿಕೊಂಡಿದ್ದ ಐಪಿಎಲ್, ಇದೊಂದು ʼಹೆಗ್ಗುರುತುʼ ಎಂದು ಘೋಷಿಸಿಕೊಂಡಿತ್ತು. ಅದೇ ವರ್ಷ ಡಬ್ಲ್ಯೂಪಿಎಲ್‌ನಲ್ಲೂ ಈ ಉಪಕ್ರಮವನ್ನು ಪರಿಚಯಿಸಲಾಯಿತು.
ಆದರೆ, 2025ರಿಂದ ಈ ಎರಡೂ ಲೀಗ್‌ಗಳಲ್ಲಿ ಆರಂಭದಿಂದಲೇ ʼಗ್ರೀನ್ ಡಾಟ್ ಬಾಲ್ʼ ಹೊಣೆಗಾರಿಕೆಯನ್ನು ಅಳವಡಿಸಿಕೊಳ್ಳಲಾಗಿದೆ.
ಪಂದ್ಯಗಳ ನೇರಪ್ರಸಾರದ ವೇಳೆ ಓವರ್ ವಿವರ ನೀಡುವಾಗ ಡಾಟ್ ಎಸೆತಗಳಿಗೆ ಚುಕ್ಕಿ ಅಥವಾ ಸೊನ್ನೆ ಸುತ್ತುವ ಬದಲು ಮರದ ಚಿಹ್ನೆಯನ್ನೇ ಪ್ರದರ್ಶಿಸಲಾಗುತ್ತಿದೆ. ಹೀಗಾಗಿ, ಈ ಉಪಕ್ರಮಕ್ಕೆ ಸುಲಭದ ಪ್ರಚಾರವೂ ಸಿಗುತ್ತಿದೆ.
ಪ್ರತಿ ಆವೃತ್ತಿಯ ನಂತರ ಎಷ್ಟು ಗಿಡ ನೆಡಲಾಗುತ್ತದೆ?
ಡಬ್ಲ್ಯುಪಿಎಲ್ ಅಥವಾ ಐಪಿಎಲ್‌ನ ಪ್ರತಿಯೊಂದು ಆವೃತ್ತಿ ಮುಕ್ತಾಯವಾದ ನಂತರ ಎಷ್ಟು ಗಿಡಗಳನ್ನು ನೆಡಲಾಗುತ್ತದೆ ಎಂಬ ಖಚಿತ ಸಂಖ್ಯೆಯನ್ನು ಐಪಿಎಲ್ ಆಗಲೀ, ಟಾಟಾ ಗ್ರೂಪ್ ಆಗಲೀ ನೀಡಿಲ್ಲ. ಆದರೆ, ಈ ಸದುದ್ದೇಶದ ಕಾರ್ಯವನ್ನು ಶುರುಮಾಡಿದಾಗಿನಿಂದ ಬರೋಬ್ಬರಿ 62 ಲಕ್ಷ ಗಿಡಗಳನ್ನು ನೆಟ್ಟಿರುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.
ಪ್ರತಿ ಆವೃತ್ತಿಯ ನಂತರ ಇಷ್ಟೇ ಗಿಡಗಳನ್ನು ನೆಡಲಾಗುತ್ತದೆ ಎಂಬುದನ್ನು ಹೇಳಲಾಗದು. ಆದರೆ, ಗ್ಲೋವ್‌ಬಿಲ್ಲಿಯನ್‌ಟ್ರೀಸ್ (growbilliontrees) ವೆಬ್‌ಸೈಟ್‌ನಲ್ಲಿ ಅಂದಾಜು ಲೆಕ್ಕಾಚಾರವನ್ನು ನೀಡಲಾಗಿದೆ. ಪ್ರತಿ ಪಂದ್ಯದಲ್ಲಿ ಒಟ್ಟು 240 ಎಸೆತಗಳನ್ನು ಹಾಕಲಾಗುತ್ತದೆ. ಈ ರೀತಿಯ 74 ಪಂದ್ಯಗಳು ಐಪಿಎಲ್‌ನಲ್ಲಿ, 22 ಪಂದ್ಯಗಳು ಡಬ್ಲ್ಯುಪಿಎಲ್‌ನಲ್ಲಿ ನಡೆಯುತ್ತವೆ. ಪ್ರತಿ ಪಂದ್ಯದಲ್ಲಿ ಶೇ 42-46ರಷ್ಟು ಎಸೆತಗಳು ಡಾಟ್‌ಗಳಾಗಿರುತ್ತವೆ. ಸರಾಸರಿ ಶೇ 44 ರಷ್ಟು ಚೆಂಡುಗಳಲ್ಲಿ ರನ್ ಬರುವುದಿಲ್ಲವೆಂದರೂ, ನಿಗದಿತ 20 ಓವರ್‌ಗಳು ಪೂರ್ಣಗೊಳ್ಳುವ ಪ್ರತಿ ಪಂದ್ಯದಲ್ಲಿ 106 ಎಸೆತಗಳು ಡಾಟ್ ಆಗಿರುತ್ತವೆ. ಅದರಂತೆ, ಐಪಿಎಲ್‌ನ ಒಂದು ಆವೃತ್ತಿ ಮುಗಿದ ನಂತರ ನೆಡಬಹುದಾದ ಗಿಡಗಳ ಸಂಖ್ಯೆ 39 -40 ಲಕ್ಷ ಹಾಗೂ ಡಬ್ಲ್ಯುಪಿಎಲ್ ನಂತರ ನೆಡಬಹುದಾದ ಗಿಡಗಳ ಸಂಖ್ಯೆ 11-12 ಲಕ್ಷ ಆಗುತ್ತದೆ ಎಂಬುದಾಗಿ ಅಂದಾಜಿಸಲಾಗಿದೆ.
ಗಿಡ ನೆಡುವುದು ಎಲ್ಲೆಲ್ಲಿ?
ದೇಶದಾದ್ಯಂತ ವಿವಿಧ ಪ್ರದೇಶಗಳಲ್ಲಿ ಗಿಡಗಳನ್ನು ನೆಡುವುದಾಗಿ ಹೇಳಿಕೊಂಡಿರುವ ಬಿಸಿಸಿಐ, ನಿರ್ದಿಷ್ಟ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ, ಉಪಕ್ರಮವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಬದ್ಧವಾಗಿರುವುದಾಗಿ ಸ್ಪಷ್ಟಪಡಿಸಿದೆ. ಕೇರಳ, ಅಸ್ಸಾಂ, ಗುಜರಾತ್ ಸೇರಿದಂತೆ ವಿವಿಧೆಡೆ 4 ಲಕ್ಷಕ್ಕೂ ಹೆಚ್ಚು ಗಿಡ ನೆಟ್ಟಿರುವುದಾಗಿ Green Dot Ball Initiative ಯುಟ್ಯೂಬ್ ಖಾತೆಯಲ್ಲಿ 2025ರ ಐಪಿಎಲ್ ಆವೃತ್ತಿ ಆರಂಭಕ್ಕೂ ಮುನ್ನ ವಿಡಿಯೊ ಹಂಚಿಕೊಳ್ಳಲಾಗಿದೆ.
ಐಪಿಎಲ್‌ನಲ್ಲಿ ಹಸಿರು, ಸ್ವಚ್ಛ ಪರಿಸರವನ್ನು ಉತ್ತೇಜಿಸುವುದು ಹೊಸದೇನಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2011ರಲ್ಲೇ ಗ್ರೀನ್ ಗೇಮ್ ಆರಂಭಿಸಿದೆ. ತವರಿನಲ್ಲಿ ಆಡುವ ಒಂದು ಪಂದ್ಯವನ್ನು ಹಸಿರು ಜೆರ್ಸಿ ತೊಟ್ಟು ಆಡುವ ಮೂಲಕ, ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುತ್ತಾ ಬಂದಿದೆ. ಇಂದು (ಏಪ್ರಿಲ್ 18) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿಯುತ್ತಿದೆ.ಆರ್‌ಸಿಬಿಯಿಂದ ಗ್ರೀನ್ ಗೇಮ್ಮುಂಚೂಣಿಯಲ್ಲಿ ಭುವಿ, ಕಾಪ್
ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಡಾಟ್ ಬಾಲ್‌ಗಳನ್ನು ಹಾಕಿದ ಬೌಲರ್‌ಗಳ ಸಾಲಿನಲ್ಲಿ ಭಾರತದ ಭುವನೇಶ್ವರ್ ಕುಮಾರ್ ಅಗ್ರಸ್ಥಾನದಲ್ಲಿದ್ದಾರೆ. ಐಪಿಎಲ್‌ನಲ್ಲಿ ಈವರೆಗೆ ಸನ್‌ರೈಸರ್ಸ್ ಹೈದರಾಬಾದ್, ಪುಣೆ ವಾರಿಯರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಪರ 192 ಪಂದ್ಯಗಳಲ್ಲಿ ಆಡಿರುವ ಅವರು 1,813 ಡಾಟ್ ಬಾಲ್ ಹಾಕಿದ್ದಾರೆ. ನಂತರದ ಸ್ಥಾನಗಳಲ್ಲಿ ವೆಸ್ಟ್ ಇಂಡೀಸ್‌ನ ಸುನಿಲ್ ನಾರಾಯಣ್ (1,706), ಭಾರತದವರೇ ಆದ ಆರ್. ಅಶ್ವಿನ್ (1,623), ಜಸ್‌ಪ್ರೀತ್ ಬೂಮ್ರಾ (1,419) ಮತ್ತು ಪಿಯೂಷ್ ಚಾವ್ಲಾ (1,337) ಇದ್ದಾರೆ.
ಡಬ್ಲ್ಯುಪಿಎಲ್‌ನಲ್ಲಿ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಮರಿಝನ್ನೆ ಕಾಪ್ ಅಗ್ರಸ್ಥಾನದಲ್ಲಿದ್ದಾರೆ. ಲೀಗ್ ಆರಂಭದಿಂದಲೂ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಅವರು, 34 ಪಂದ್ಯಗಳಿಂದ 425 ಡಾಟ್ ಬಾಲ್ ಹಾಕಿದ್ದಾರೆ. ಹರಿಣಗಳ ನಾಡಿನವರೇ ಆದ ಶಬ್ನಂ ಇಸ್ಮಾಯಿಲ್ (357), ಭಾರತದ ಶಿಖಾ ಪಾಂಡೆ (353) ಹಾಗೂ ಇಂಗ್ಲೆಂಡ್‌ನ ಸೋಫಿ ಎಕ್ಕಲ್‌ಸ್ಟೊನ್ (333) ಅವರು ಕ್ರಮವಾಗಿ ನಂತರದ ಸ್ಥಾನಗಳಲ್ಲಿ ಇದ್ದಾರೆ.

