ದೇವರನಾಡು ಕೇರಳಂನ ಜನಪ್ರಿಯ ಹಬ್ಬ ಓಣಂ. ಈ ಬಾರಿ ಓಣಂ ಹಬ್ಬವನ್ನು ಆಗಸ್ಟ್ 26ರಂದು ಆಚರಿಸಲಾಗುತ್ತಿದೆ. ಈ ಹಬ್ಬವನ್ನು ಎಲ್ಲ ಧರ್ಮದವರು ಸಂಭ್ರಮ ಸಡಗರದಿಂದ ಒಗ್ಗೂಡಿ ಆಚರಿಸುತ್ತಾರೆ. ಕೇರಳಂ ರಾಜನಾಗಿದ್ದ ಮಹಾಬಲಿ ಚಕ್ರವರ್ತಿಯು ತಮ್ಮ ಪ್ರಜೆಗಳನ್ನು ನೋಡಲು ವರ್ಷಕ್ಕೊಮ್ಮೆ ಭೂಮಿಗೆ ಬರುವ ಸಂಕೇತವಾಗಿದೆ ಈ ಹಬ್ಬ.
ಹೀಗಾಗಿ ಕೇರಳದ ಜನ ಹತ್ತು ದಿನ ಓಣಂ ಹಬ್ಬವನ್ನು ಆಚರಿಸುತ್ತಾರೆ. ಈ ಹತ್ತು ದಿನಗಳನ್ನು ಅತಮ್, ಚಿತ್ರ, ಚೋದಿ, ವಿಶಾಖಂ, ಅನೀಷಮ್. ತ್ರಿಕಿಟಾ, ಮೂಲಂ, ಪೂರಾಡಮ್, ಉತ್ಪಾಡಮ್ ಮತ್ತು ತಿರುವೋಣಂ ಎಂಬ ಹೆಸರಿನಿಂದ ಕರೆಯುತ್ತಾರೆ.
ವಿರಾಜಪೇಟೆಯಲ್ಲಿ ಸೆ.6ರಂದು ಓಣಂ ಆಚರಣೆ: ವಿವಿಧ ಸ್ಪರ್ಧೆಓಣಂ ರಂಗೇರಿಸಲು ಕರ್ನಾಟಕದ ಹೂವುಗಳಿಗೆ ಭಾರಿ ಬೇಡಿಕೆಉತ್ಪಾಡಮ್ ಮತ್ತು ತಿರುವೋಣಂ ಎರಡು ದಿನ ಅತಿ ಸಂಭ್ರಮದಿಂದ ಎಲ್ಲರು ಹೊಸ ಉಡುಪು ಧರಿಸಿ, ಮನೆಯಲ್ಲಿ ಪೂಕಳಂ ರಂಗೋಲಿ ಬಿಡಿಸುತ್ತಾರೆ. ಮಾತ್ರವಲ್ಲದೆ ಈ ಹಬ್ಬದಂದು 26ಕ್ಕೂ ಹೆಚ್ಚು ಬಗೆ ಬಗೆಯ ರುಚಿಯಾದ ತಿನಿಸು ತಯಾರಿಸಿ ಬಾಳೆ ಎಲೆಯಲ್ಲಿ ಬಡಿಸಿ ಕುಟುಂಬ ಸಮೇತರಾಗಿ ಸವಿಯುತ್ತಾರೆ. ಇದು ಹಬ್ಬಕ್ಕೆ ಇನ್ನಷ್ಟು ಮೆರುಗನ್ನು ನೀಡುತ್ತದೆ.
ಕೇರಳಿಗರ ಆಹಾರ ಪದ್ಧತಿಯಲ್ಲಿ ಕುಚ್ಚಲಕ್ಕಿ ಅನ್ನ, ತೆಂಗಿನಕಾಯಿ ಹಾಗೂ ಕೊಬ್ಬರಿ ಎಣ್ಣೆ ಪ್ರಮುಖವಾಗಿ ಬಳಸುತ್ತಾರೆ. ಓಣಂ ಊಟದಲ್ಲಿ ಅನ್ನದೊಂದಿಗೆ ಸಾಂಬಾರ್, ಅವಿಯಲ್, ಕೂಟ್‌ಕರಿ, ಪಚ್ಚಡಿ, ಕಾಳನ್, ಓಲನ್, ಪುಳಿಇಂಜಿ ಪ್ರಮುಖ. ಇದರೊಂದಿಗೆ ಸಿಹಿ ತಿನಿಸಾದ ಬಾಳೆಕಾಯಿ ಶರ್ಕರ ವೆರಟ್ಟಿ ಮತ್ತಷ್ಟು ವಿಶೇಷ.

ಓಣಂ ಹಬ್ಬದಂದು ಮಾಡಬಹುದಾದ ಕೇರಳಂ ಪ್ರಸಿದ್ಧ ಖಾದ್ಯಗಳು ಇಲ್ಲಿವೆ..

ಸಾಂಬಾರ್
ಬೇಕಾಗುವ ಸಾಮಗ್ರಿಗಳು:
ಎರಡು ಆಲೂಗಡ್ಡೆ, ಮೂರು ಟೊಮೆಟೊ, ಎರಡು ಕ್ಯಾರೆಟ್, ನಾಲ್ಕು ಬೆಂಡೆಕಾಯಿ, ಎರಡು ನುಗ್ಗೆಕಾಯಿ, ಎರಡು ಈರುಳ್ಳಿ. ತೊಗರಿಬೇಳೆ, ಕೆಂಪು ಮೆಣಸು, ಕೊತ್ತಂಬರಿ, ಮೆಂತ್ಯ, ಇಂಗು, ತುರಿದ ತೆಂಗಿನಕಾಯಿ, ಹುಣಸೆಹುಳಿ ರಸ.
ಮಾಡುವ ವಿಧಾನ: ಮೊದಲು ಕೆಂಪು ಮೆಣಸು, ಕೊತ್ತಂಬರಿ, ಮೆಂತ್ಯ, ಕರಿಬೇವು ಸೊಪ್ಪು ಹಾಗೂ ಇಂಗನ್ನು ಕೊಬ್ಬರಿ ಎಣ್ಣೆಯೊಂದಿಗೆ ಹುರಿಯಬೇಕು. ನಂತರ ತೆಂಗಿನ ತುರಿಯನ್ನು ಹಾಕಿ ಸ್ವಲ್ಪ ಹುರಿಯಬೇಕು. (ಕೇರಳಿಗರು ಅಡುಗೆಗೆ ಉಪಯೋಗಿಸುವುದು ಕೊಬ್ಬರಿ ಎಣ್ಣೆ. ಆದರೆ ಕರ್ನಾಟಕದಲ್ಲಿ ಇತರೆ ಎಣ್ಣೆಗಳನ್ನು ಬಳಸುತ್ತಾರೆ). ನಂತರ ಇದನ್ನು ಚೆನ್ನಾಗಿ ರುಬ್ಬಿ ಸಾಂಬಾರ್ ಮಸಾಲೆ ಸಿದ್ಧಗೊಳಿಸಿಡಬೇಕು.
ಒಂದು ಪಾತ್ರೆಯಲ್ಲಿ ತೊಗರಿಬೇಳೆ ಬೇಯಿಸಿಡಬೇಕು. ಬೇಯಿಸಿದ ತೊಗರಿಬೇಳೆಯೊಂದಿಗೆ ನುಗ್ಗೆ, ಕ್ಯಾರೆಟ್, ಆಲೂಗಡ್ಡೆ, ಈರುಳ್ಳಿಯನ್ನು ಹಾಕಿ ಬೇಯಿಸಿಕೊಳ್ಳಬೇಕು. ಅದರಲ್ಲಿ ಹುಣಸೆಹುಳಿ ರಸವನ್ನು ಸೇರಿಸಬೇಕು. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು. ಇದು ಬೆಂದಮೇಲೆ ಎರಡು ಟೊಮೆಟೊ, ಎರಡು ಬೆಂಡೆ ಸೇರಿಸಿ ಕುದಿಸಬೇಕು. ಇದು ಸಿದ್ಧಗೊಂಡ ಮೇಲೆ ರುಬ್ಬಿ ಇಟ್ಟ ಮಸಾಲೆಯನ್ನು ಸೇರಿಸಿ ಕುದಿಸಬೇಕು. ನಂತರ ಅದರ ಮೇಲೆ ಕೊತ್ತಂಬರಿ ಸೊಪ್ಪು ಹಾಕಬೇಕು. ಕೊನೆಯಲ್ಲಿ ಒಗ್ಗರಣೆ ಹಾಕಿದರೆ ಕೇರಳಂ ಶೈಲಿಯ ಸಾಂಬಾರ್ ಸಿದ್ಧ. (ತರಕಾರಿಗಳನ್ನು ಅವುಗಳ ಬೇಯುವ ಉಷ್ಣಾಂಶಕ್ಕೆ ಅನುಗುಣವಾಗಿ ಬೇರೆ ಬೇರೆಯಾಗಿ ಹಾಕುತ್ತಾರೆ. ಕೇರಳಂ ಸಾಂಬಾರ್‌ನಲ್ಲಿ ನುಗ್ಗೆ ಹಾಗೂ ಬೆಂಡೆಕಾಯಿ ಬಹಳ ಮುಖ್ಯ.)

ಕಾಳನ್
ಬೇಕಾಗುವ ಸಾಮಗ್ರಿಗಳು: ಸುವರ್ಣ ಗಡ್ಡೆ, ನೇಂದ್ರ ಬಾಳೆಕಾಯಿ, ಅರ್ಧ ತೆಂಗಿನಕಾಯಿ, ಮೊಸರು, ಮೆಂತ್ಯ.
ಮಾಡುವ ವಿಧಾನ: ಸುವರ್ಣ ಗಡ್ಡೆ , ನೇಂದ್ರ ಬಾಳೆಕಾಯಿಗಳನ್ನು ಕತ್ತರಿಸಿಕೊಂಡು ಅದಕ್ಕೆ ಅರಶಿನಪುಡಿ, ಕಾಳುಮೆಣಸು ಸೇರಿಸಿ ಬೇಯಿಸಬೇಕು. ಅರ್ಧ ತೆಂಗಿನಕಾಯಿ ತುರಿಯೊಂದಿಗೆ ಮೂರು ಹಸಿಮೆಣಸು ಸೇರಿಸಿ ರುಬ್ಬಿಕೊಳ್ಳುವುದು. ಇದನ್ನು ಬೇಯಿಸಿದ ತರಕಾರಿಯೊಂದಿಗೆ ಸೇರಿಸಿಕೊಳ್ಳಬೇಕು. ಇದಕ್ಕೆ ಮೊಸರು ಸೇರಿಸಿ ಕುದಿಸುವುದು. ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು. ಒಂದು ಚಮಚ ಮೆಂತ್ಯೆ ಹುರಿದು ಪುಡಿಮಾಡಿ ಸೇರಿಸಬೇಕು. ಕೊನೆಯಲ್ಲಿ ಒಗ್ಗರಣೆ ಹಾಕಿ.

ಓಲನ್
ಬೇಕಾಗುವ ಸಾಮಗ್ರಿ: ಕುಂಬಳಕಾಯಿ, ಸಿಹಿ ಕುಂಬಳಕಾಯಿ, ಹಸಿಮೆಣಸು.
ಕುಂಬಳಕಾಯಿ ಮತ್ತು ಸಿಹಿ ಕುಂಬಳಕಾಯಿ ಕತ್ತರಿಸಿಕೊಂಡು ಅದಕ್ಕೆ ಎರಡು ಹಸಿಮೆಣಸು, ಉಪ್ಪು ಹಾಕಿ ಬೇಯಿಸಿಕೊಳ್ಳಬೇಕು. ಕೊನೆಯಲ್ಲಿ ಬೆಂಕಿ ಆರಿದ ಮೇಲೆ ಹಸಿ ತೆಂಗಿನಕಾಯಿ ಹಾಲು ಸೇರಿಸಬೇಕು. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಇದರ ಮೇಲೆ ಕರಿಬೇವು ಸೊಪ್ಪು ಹಾಕಿ.

ಪುಳಿಇಂಜಿ
ಬೇಕಾಗುವ ಸಾಮಗ್ರಿಗಳು: ಶುಂಠಿ, ಹಸಿಮೆಣಸು, ಅರಿಸಿನ, ಕೆಂಪುಮೆಣಸು, ಹುಣಸೆಹುಳಿ, ಬೆಲ್ಲ
ಮಾಡುವ ವಿಧಾನ: ಶುಂಠಿ, ಹಸಿಮೆಣಸು ಸಣ್ಣದಾಗಿ ತುಂಡುಮಾಡಿ ಇಡಿ. ಹುಣಸೆಹುಳಿ ರಸದಲ್ಲಿ ಒಂದು ಚಮಚ ಅರಿಸಿನ ಪುಡಿ, ಕೆಂಪುಮೆಣಸು ಪುಡಿ, ಒಂದು ತುಂಡು ಬೆಲ್ಲ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ. ಇದಕ್ಕೆ ಕತ್ತರಿಸಿದ ಶುಂಠಿ ಹಾಗೂ ಹಸಿಮೆಣಸು ಸೇರಿಸಿ ಕುದಿಸಿ. ಮಿಶ್ರಣ ಸ್ವಲ್ಪ ದಪ್ಪ ಆದಾಗ ಬೆಂಕಿ ಆರಿಸಿಕೊಳ್ಳಬೇಕು. ಕೊನೆಯಲ್ಲಿ ಒಗ್ಗರಣೆ ಹಾಕಿದರೆ ಪುಳಿಇಂಜಿ ಸಿದ್ಧ.

ಕೂಟ್ ಕರ್ರಿ
ಬೇಕಾಗುವ ಸಾಮಗ್ರಿಗಳು: ಕಡಲೆ, ಸುವರ್ಣಗಡ್ಡೆ, ನೇಂದ್ರ ಬಾಳೆ, ಕಾಳುಮೆಣಸು, ಕೆಂಪುಮೆಣಸಿನ, ತೆಂಗಿನಕಾಯಿ, ಒಗ್ಗರಣೆಗೆ ತುಪ್ಪ, ಸಾಸಿವೆ, ಉದ್ದಿನ ಬೇಳೆ.
ಮಾಡುವ ವಿಧಾನ: ಮೊದಲು ಕಡಲೆ ಬೇಯಿಸಿಕೊಳ್ಳಬೇಕು. ನಂತರ ಸುವರ್ಣಗಡ್ಡೆ ಹಾಗೂ ನೇಂದ್ರ ಬಾಳೆಕಾಯಿಯನ್ನು ಬೇಯಿಸಿದ ಕಡಲೆಯೊಂದಿಗೆ ಅರಿಸಿನ ಪುಡಿ ಹಾಗೂ ಕಾಳುಮೆಣಸು ಹಾಕಿ ಬೇಯಿಸಬೇಕು. ತೆಂಗಿನಕಾಯಿ ಜೀರಿಗೆಯೊಂದಿಗೆ ರುಬ್ಬಿ ಸೇರಿಸಬೇಕು. ಈ ಮಿಶ್ರಣವನ್ನು ಚೆನ್ನಾಗಿ ಕುದಿಸಿ. ನಂತರ ಕೊನೆಯಲ್ಲಿ ಉಳಿದ ತೆಂಗಿನಕಾಯಿಯನ್ನು ಕೊಬ್ಬರಿ ಎಣ್ಣೆಯಲ್ಲಿ ಸಾಸಿವೆ, ಉದ್ದಿನ ಬೇಳೆ, ಕೆಂಪು ಮೆಣಸು ಕರಿಬೇವು ಜೊತೆ ಹುರಿದು ಸೇರಿಸಬೇಕು.

ಶರ್ಕರ ಉಪ್ಪೇರಿ
ಬೇಕಾಗುವ ಸಾಮಗ್ರಿಗಳು: ಒಂದು ನೇಂದ್ರ ಬಾಳೆಕಾಯಿ, ಒಣಶುಂಠಿ ಪುಡಿ, ಏಲಕ್ಕಿ ಪುಡಿ, ಜೀರಿಗೆ, ಸಕ್ಕರೆ.
ಮಾಡುವ ವಿಧಾನ: ಒಂದು ನೇಂದ್ರ ಬಾಳೆಕಾಯಿ ಸಿಪ್ಪೆ ತೆಗೆದು ಮಧ್ಯದಲ್ಲಿ ಉದ್ದವಾಗಿ ಕತ್ತರಿಸಿ, ನಂತರ ಅಡ್ಡಕ್ಕೆ ಎರಡು ತುಂಡು ಮಾಡಿಡಬೇಕು. ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಕೆಂಪಾಗುವಂತೆ ಹುರಿದು ತೆಗೆದಿಡಬೇಕು. ಬೆಲ್ಲದ ಪಾಕ ಸಿದ್ಧ ಗೊಳಿಸಿಕೊಳ್ಳಬೇಕು. ಈ ಪಾಕಕ್ಕೆ ಒಂದು ಚಮಚ ಒಣಶುಂಠಿ ಪುಡಿ ಸೇರಿಸಿ. ಇದಕ್ಕೆ ಹುರಿದ ಬಾಳೆಕಾಯಿ ತುಂಡುಗಳನ್ನು ಹಾಕಬೇಕು. ನೀರಿನಾಂಶ ಸ್ವಲ್ಪ ಕಡಿಮೆಯಾದಾಗ ತುಪ್ಪ, ಜೀರಿಗೆ, ಏಲಕ್ಕಿ ಪುಡಿ, ಸಕ್ಕರೆ ಸೇರಿಸಬೇಕು. ನೀರಿನಾಂಶ ಆರಿದ ಮೇಲೆ ಬಾಳೆಕಾಯಿ ತುಂಡುಗಳನ್ನು ಅದರಿಂದ ಬೇರ್ಪಡಿಸಬೇಕು. ಈಗ ಆರೋಗ್ಯಕರ ಸವಿರುಚಿಯ ಶರ್ಕರ ಉಪ್ಪೇರಿ ತಿನ್ನಲು ಸಿದ್ಧ.

ಪಚ್ಚಡಿ
ಸಾಮಗ್ರಿಗಳು: ಕುಂಬಳಕಾಯಿ ತುಂಡುಮಾಡಿ, ಹಸಿಮೆಣಸು, ಶುಂಠಿ, ಉಪ್ಪು, ಕರಿಬೇವು ಸೊಪ್ಪು ಸೇರಿಸಿ ಬೇಯಿಸಬೇಕು. ಇದು ತಣ್ಣಗಾದ ಮೇಲೆ ತೆಂಗಿನಕಾಯಿ ತುರಿ, ಹಸಿಮೆಣಸು, ಮೊಸರು ಸೇರಿಸಿ ರುಬ್ಬಿಕೊಳ್ಳಬೇಕು. ಕೊನೆಯ ಸುತ್ತು ರುಬ್ಬುವಾಗ ಸಾಸಿವೆ ಸೇರಿಸಿ ಒಂದೆರಡು ಸುತ್ತು ರುಬ್ಬಬೇಕು. ಈ ಮಿಶ್ರಣವನ್ನು ಬೇಯಿಸಿದ ಭಾಗಕ್ಕೆ ಸೇರಿಸಿ ಕೊನೆಯಲ್ಲಿ ಒಗ್ಗರಣೆ ಹಾಕಿದರೆ ಪಚ್ಚಡಿ ಸಿದ್ಧ.

