ನಟಿ ರಮ್ಯಾ ಒಂದು ಕೆಟ್ಟ ಇಂಗ್ಲಿಷ್ ಪದ ಬಳಸಿದ್ದರಿಂದ ನಿರ್ಮಾಪಕರಿಗೆ ₹10 ಲಕ್ಷ ಲುಕ್ಸಾನು ಆದ ಪ್ರಸಂಗವನ್ನು ಕಳೆದ ವಾರ ನಾವು ಮೆಲುಕುಹಾಕಿದ್ದೆವು. ಸರಿಯಾಗಿ ಐವತ್ತೈದು ವರ್ಷಗಳ ಹಿಂದೆ ಕನ್ನಡದ ಕಸ್ತೂರಿ ನಿವಾಸ ಸಿನಿಮಾ ಎಷ್ಟು ಬಜೆಟ್‌ನಲ್ಲಿ ತಯಾರಾಗಿತ್ತು ಗೊತ್ತೆ?
ಈಗಿನವರ ಭಾಷೆಯಲ್ಲಿ ಕೇವಲ ₹3.75 ಲಕ್ಷ. ಆದರೆ, ವಾಸ್ತವದಲ್ಲಿ 1971ರಲ್ಲಿ ಇದು ದೊಡ್ಡ ಬಜೆಟ್ ಆಗಿತ್ತು. ಈ ಸಿನಿಮಾ ತೆರೆಕಂಡು, ದಶಕಗಳು ಉರುಳಿದ ನಂತರ ಬಣ್ಣದ ಚಿತ್ರವಾಗಿಸಿ ತಾಂತ್ರಿಕ ಮೆರುಗು ನೀಡಿ, ಮರುಬಿಡುಗಡೆ ಮಾಡಿದ್ದರು. ಆಗ ತಾಂತ್ರಿಕ ಕಾರ್ಯಗಳಿಗೇ ₹2 ಕೋಟಿ ವೆಚ್ಚವಾಗಿತ್ತು.
ಸಿನಿ ಸಿಪ್: ನಟಿ ರಮ್ಯಾ ಆಡಿದ್ದ ಜಸ್ಟ್ ಒಂದು ಕೆಟ್ಟ ಮಾತು...ಇದೇನಪ್ಪಾ, ಈ ಸಲ ಬರೀ ಬಜೆಟ್ ಸುತ್ತಲೇ ಮಾತು ಗಿರಕಿ ಹೊಡೆಯುತ್ತಿದೆ ಎಂದುಕೊಂಡಿರಾ? 'ಕಸ್ತೂರಿ ನಿವಾಸ' ಸಿನಿಮಾ ಪ್ರಕ್ರಿಯೆ ಕುರಿತು ಒಂದು ಪ್ರಬಂಧವನ್ನೇ ಬರೆಯುವಷ್ಟು ಮಾಹಿತಿ ಇದೆ.
ತಮಿಳುನಾಡಿನ ಚಿತ್ರಕಥಾ ಬರಹಗಾರ ಜಿ. ಬಾಲಸುಬ್ರಮಣಿಯಂ 'ಕಸ್ತೂರಿ ನಿವಾಸ'ದ ಮೂಲ ಕಥೆಯನ್ನು ಬರೆದಿದ್ದರು. ಅವರು ನಟ ಶಿವಾಜಿ ಗಣೇಶನ್ ಕೇಂದ್ರ ಪಾತ್ರದಲ್ಲಿ ಅಭಿನಯಿಸಬೇಕು ಎಂಬುದನ್ನು ತಲೆಯಲ್ಲಿ ಇಟ್ಟುಕೊಂಡೇ ಚಿತ್ರಕಥೆ ಬರೆದಿದ್ದು. ಆ ಕಥೆಯನ್ನು ಕೇಳಿದ ನಿರ್ಮಾಪಕ ನೂರ್, ಅದರ ಭಾವತೀವ್ರತೆಗೆ ಮಾರುಹೋದರು. ₹25 ಸಾವಿರ ಮುಂಗಡ ಹಣವನ್ನು ನೀಡಿ, ಚಿತ್ರಕಥೆಯ ಹಕ್ಕು ಪಡೆದುಕೊಂಡರು. ಅವರಿಗೂ ಶಿವಾಜಿ ಗಣೇಶನ್ ಈ ಕಥೆಗೆ ಸರಿಯಾದ ನಟ ಎಂದೇ ಅನಿಸಿತ್ತು. ಉತ್ಸಾಹದಿಂದ ಶಿವಾಜಿ ಅವರ ಬಳಿಗೆ ಹೋಗಿ, ಕಥಾಪಠಣ ಮಾಡಿದರು. ಗಂಭೀರವಾಗಿ ಕಥೆಯ ಅಷ್ಟೂ ತಿರುಳನ್ನು ಗ್ರಹಿಸಿದ ಶಿವಾಜಿ ಗಣೇಶನ್, 'ಈ ಸಿನಿಮಾದ ಅಂತ್ಯ ದುರಂತವಾಗಿದೆ. ನಾಯಕನೇ ಸಾಯುತ್ತಾನೆ. ನಾನು ಸಿನಿಮಾದ ಹೀರೊ. ನಾನೇ ಸತ್ತರೆ ಅಂತಹ ಸಿನಿಮಾವನ್ನು ನೋಡಲು ಜನ ಯಾಕಾದರೂ ಬರುತ್ತಾರೆ ಹೇಳಿ' ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟರು. ಈ ಸಿನಿಮಾ ಮಾಡುವುದು ಬೇಡ ಎಂದು ಅವರು ಕಡ್ಡಿ ತುಂಡು ಮಾಡಿದಂತೆ ಹೇಳಿಬಿಟ್ಟರು.
ಆಗ ಕನ್ನಡ ಸಿನಿಮಾ ಕೆಲಸಗಳು ಮದ್ರಾಸ್‌ನಲ್ಲೇ ನಡೆಯುತ್ತಿದ್ದುದು. ಕನ್ನಡದ ಚಿತ್ರನಿರ್ಮಾತೃಗಳಿಗೂ ತಮಿಳು ಚಿತ್ರರಂಗದವರಿಗೂ ಒಡನಾಟವಿತ್ತು. ಕನ್ನಡದ ಚಿತ್ರಸಾಹಿತಿ ಚಿ. ಉದಯಶಂಕರ್ ಒಂದೊಮ್ಮೆ ನೂರ್ ಅವರನ್ನು ಭೇಟಿ ಮಾಡಿದರು. ಶಿವಾಜಿ ಒಪ್ಪದ ಚಿತ್ರದ ಬಗ್ಗೆ ಅವರು ಪ್ರಸ್ತಾಪ ಮಾಡಿದರು. ಆ ಕಥೆಯನ್ನು ಕೇಳಿದ್ದೇ ತಡ, ಉದಯಶಂಕರ್ ಕಿವಿ ಅಗಲಿಸಿದರು. ರಾಜ್‌ಕುಮಾರ್ ಈ ಪಾತ್ರದಲ್ಲಿ ನಟಿಸಿದರೆ ಖಂಡಿತ ಸಿನಿಮಾ ಯಶಸ್ವಿಯಾಗುತ್ತದೆ ಎಂದು ಅವರ ಆರನೇ ಇಂದ್ರಿಯ ಹೇಳಿತು. ರಾಜ್‌ಕುಮಾರ್ ಅವರ ತಮ್ಮ ವರದಪ್ಪನವರಿಗೆ ಈ ಕಥೆಯ ವಿಷಯ ತಿಳಿಸಿದರು. ನಿರ್ದೇಶಕ ದೊರೈ-ಭಗವಾನ್ ಜೋಡಿಯ ಜೊತೆಗೂ ಒಂದು ಸುತ್ತಿನ ಚರ್ಚೆ ನಡೆಯಿತು. ಈ ಸಿನಿಮಾ ಜನರಿಗೆ ನಿಜಕ್ಕೂ ಮೆಚ್ಚುಗೆಯಾಗುತ್ತದೆ ಎಂದು ಎಲ್ಲರೂ ಹೇಳಿದ್ದೇ ತಡ, ನೂರ್ ಅವರಿಗೆ ₹39 ಸಾವಿರ ಹಣ ಕೊಟ್ಟು ಚಿತ್ರಕಥೆಯ ಹಕ್ಕನ್ನು ಕನ್ನಡಕ್ಕೆ ತಂದರು.
ಕಥೆಯನ್ನು ರಾಜ್‌ಕುಮಾರ್ ಅವರಿಗೆ ಹೇಳಿದರು. ಹಾಗೆ ಹೇಳುವಾಗ, ಶಿವಾಜಿ ಗಣೇಶನ್ ನಿರಾಕರಿಸಿದ ವಿಷಯವನ್ನೂ ಸೇರಿಸಿದರು. ಅಂತಹ ದೊಡ್ಡ ನಟರೇ ಒಲ್ಲದ ಸಿನಿಮಾವನ್ನು ಇಲ್ಲಿ ತಾವು ಮಾಡಿದರೆ ಜನರು ಮೆಚ್ಚುವರೇ ಎಂದು ರಾಜ್‌ಕುಮಾರ್ ಕೂಡ ಆತಂಕದಿಂದ ಪ್ರಶ್ನಿಸಿದರು. ಕನ್ನಡದ ಜಾಯಮಾನಕ್ಕೆ ಒಗ್ಗಿಸಿಕೊಂಡು ಚಿತ್ರಕಥೆಯನ್ನು ರೂಪಿಸಿದರೆ ಈ ಕಥಾವಸ್ತು ಜನರಿಗೆ ಮೆಚ್ಚುಗೆಯಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ವರದರಾಜ್ ಅವರೂ ಅಭಿಪ್ರಾಯಪಟ್ಟರು. ಎಲ್ಲರ ಆತ್ಮವಿಶ್ವಾಸ ನೋಡಿ ರಾಜ್‌ಕುಮಾರ್ ಕೂಡ ಕರಗಿದರು. ಸಿನಿಮಾದಲ್ಲಿ ನಾಯಕನ ಪಾತ್ರ ಮಾಡಲು ಒಪ್ಪಿದರು.
ಕೆ.ಸಿ.ಎನ್. ಗೌಡರು ಸಿನಿಮಾ ನಿರ್ಮಾಣಕ್ಕೆ ಮುಂದೆ ಬಂದರು. ಭವ್ಯವಾದ ಸೆಟ್ ಹಾಕಲು ಆ ಕಾಲದಲ್ಲಿ ದೊಡ್ಡ ಬಜೆಟ್ ಅಗತ್ಯವಿತ್ತು. ಅದಕ್ಕೂ ಗೌಡರು ಹಿಂದೇಟು ಹಾಕಲಿಲ್ಲ. ಈಸ್ಟ್‌ಮನ್ ಕಲರ್‌ನಲ್ಲಿ ಸಿನಿಮಾ ಮಾಡಿದರೆ ಚೆನ್ನಾಗಿರುತ್ತದೆ ಎಂದು ಗೌಡರು ಹೇಳಿದರಾದರೂ, ಅದು ಕಪ್ಪು-ಬಿಳುಪಿನಲ್ಲೇ ಚೆನ್ನಾಗಿ ಮೂಡುತ್ತದೆ ಎಂದು ರಾಜ್‌ಕುಮಾರ್ ತಮ್ಮ ಅಭಿಪ್ರಾಯ ಹೇಳಿದರು. ಕೊನೆಗೆ ಕಪ್ಪು-ಬಿಳುಪಿನಲ್ಲೇ ಸಿನಿಮಾ ಮಾಡುವುದು ಎಂದು ನಿರ್ಧಾರವಾಯಿತು.
ಕೇವಲ ಇಪ್ಪತ್ತು ದಿನಗಳೊಳಗೆ ಸಿನಿಮಾ ಚಿತ್ರೀಕರಣ ಮುಗಿಯಿತು. ರಾಜ್‌ಕುಮಾರ್ ಅವರಿಗೆ ಆಗ ನೀಡಿದ ಸಂಭಾವನೆ ₹15 ಸಾವಿರ. ಆ ಸಿನಿಮಾದಲ್ಲಿ ರಾಜ್‌ಕುಮಾರ್ ನಿರ್ವಹಿಸಿದ್ದ ರವಿ ವರ್ಮಾ ಎಂಬ ಪಾತ್ರ ಇಂದಿಗೂ ತ್ಯಾಗದ ರೂಪಕವಾಗಿ ಜನಮನದಲ್ಲಿ ಉಳಿದುಕೊಂಡಿದೆ. ಆ ಪಾರಿವಾಳಕ್ಕೆ ಆಗ ₹500 ಕೊಟ್ಟಿದ್ದೇ ಒಂದು ಸುದ್ದಿಯಾಗಿತ್ತು.
ಅದಕ್ಕಿಂತ ಮಿಗಿಲಾಗಿ, ಆ ಸಿನಿಮಾದ 'ಆಡಿಸಿ ನೋಡು ಬೀಳಿಸಿ ನೋಡು' ಹಾಡಿನಲ್ಲಿ ತಂಜಾವೂರಿನ ಬೊಂಬೆಯೊಂದನ್ನು ಬಳಸಿದ್ದರು. ಆ ಬೊಂಬೆಯನ್ನು ತರಿಸಿದ್ದು ತಂಜಾವೂರಿನಿಂದಲೇ. ಅದನ್ನು ಹುಡುಕಿಕೊಂಡು ಅಂಗಡಿಗೆ ಹೋದಾಗ, ಅಲ್ಲಿದ್ದ ಕೊನೆಯ ಒಂದೇ ಒಂದು ಬೊಂಬೆ ಚಿತ್ರತಂಡದವರಿಗೆ ಸಿಕ್ಕಿತು. ಅದು ಹಾಳಾಗದಂತೆ ಜತನ ಮಾಡಿ, ಚಿತ್ರೀಕರಣ ಮುಗಿಸಿದರು. ಪುನೀತ್ ರಾಜ್‌ಕುಮಾರ್ ಅಭಿನಯಿಸಿದ 'ರಾಜಕುಮಾರ' ಕನ್ನಡ ಸಿನಿಮಾದಲ್ಲಿ ಕೂಡ ಅಂಥದ್ದೇ ತಂಜಾವೂರು ಬೊಂಬೆಯನ್ನು ಮತ್ತೆ ಬಳಸಿದರು. 'ಬೊಂಬೆ ಹೇಳುತೈತೆ' ಹಾಡು ಕೂಡ 'ಕಸ್ತೂರಿ ನಿವಾಸ'ದ ಗೀತೆಗಳಂತೆಯೇ ಜನಪ್ರಿಯವಾಯಿತೆನ್ನಿ.
ಸಿನಿ ಸಿಪ್: ನಟ ಅಂಬರೀಶ್ ಕರ್ಣ ಆದದ್ದು ಹೀಗೆ...ಸಿನಿ ಸಿಪ್: ಎಲ್ಲರಂತಲ್ಲದ ಚಿರಸ್ಥಾಯಿ ಶಂಕರ್ ನಾಗ್'ಕಸ್ತೂರಿ ನಿವಾಸ' ಸಿನಿಮಾದ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿದವರು ಜಿ.ಕೆ. ವೆಂಕಟೇಶ್. 'ನೀ ಬಂದು ನಿಂತಾಗ' ಹಾಡನ್ನು ಕೃಷ್ಣರಾಜ ಸಾಗರ ಅಣೆಕಟ್ಟಿನ ಪರಿಸರದಲ್ಲಿ ಒಂದೇ ದಿನದಲ್ಲಿ ಚಿತ್ರೀಕರಿಸಿದ್ದು ಇತಿಹಾಸ.
ಆ ಸಿನಿಮಾದಲ್ಲಿ 'ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದಾ...' ಎಂಬ ವಿಷಾದಭಾವದ ಗೀತೆಯೊಂದು ಇದೆ. ಆ ಹಾಡಿನ ಧ್ವನಿಮುದ್ರಣಕ್ಕೆ ಜಿ.ಕೆ. ವೆಂಕಟೇಶ್ ಅಣಿಯಾಗಿದ್ದರು. ಆದರೆ, ಗಾಯಕ ಪಿ.ಬಿ. ಶ್ರೀನಿವಾಸ್ ಅವರಿಗೆ ಆ ದಿನ ಸ್ಟುಡಿಯೊಗೆ ಬರಲು ಸಾಧ್ಯವಾಗಲಿಲ್ಲ. ಕೆಲವೇ ನಿಮಿಷಗಳಲ್ಲಿ ಚಿ. ಉದಯಶಂಕರ್ ಗೀತಸಾಹಿತ್ಯವನ್ನು ಬರೆದುಕೊಟ್ಟರು. ಮಟ್ಟು ಸಿದ್ಧಪಡಿಸಿದ್ದ ಜಿ.ಕೆ. ವೆಂಕಟೇಶ್ ಅವರು ಖುದ್ದು ಅದನ್ನು ಗದ್ಗದಿತರಾಗಿ ಹಾಡಿದರು. ಆಮೇಲೆ ಪಿ.ಬಿ. ಅವರು ಹಾಡನ್ನು ಅದು ಟ್ರ್ಯಾಕ್ ಆದೀತು ಎಂದು ವೆಂಕಟೇಶ್ ಭಾವಿಸಿದ್ದರು. ಆದರೆ, ಉದಯಶಂಕರ್ ಅವರಿಗೆ ವೆಂಕಟೇಶ್ ಕಂಠದ ಹಾಡೇ ಮೆಚ್ಚಾಯಿತು. ದೊರೈ-ಭಗವಾನ್ ಕೂಡ ಸಿನಿಮಾದಲ್ಲಿ ಅದೇ ಇರಲಿ ಎಂದು ನಿರ್ಧರಿಸಿದರು.
ಕನ್ನಡದಲ್ಲಿ ಸಿನಿಮಾ ಒಂದು ವರ್ಷ ಓಡಿ ಸೂಪರ್‌ಹಿಟ್ ಆಯಿತು. ಹಿಂದಿಯಲ್ಲಿ 'ಶಾಂದಾರ್' ಹೆಸರಿನಲ್ಲಿ ರೀಮೇಕ್ ಆಯಿತು. ಸಂಜೀವ್ ಕುಮಾರ್ ಅದರಲ್ಲಿ ಅಭಿನಯಿಸಿದರು. ಆಮೇಲೆ ರಾಜ್‌ಕುಮಾರ್ ಅಭಿನಯವನ್ನು ಎಲ್ಲರೂ ಹೊಗಳಿದ್ದೇ ಖುದ್ದು ಶಿವಾಜಿ ಗಣೇಶನ್ ಕನ್ನಡದ ಸಿನಿಮಾ ನೋಡಿದರು. ರಾಜ್ ಅಭಿನಯಕ್ಕೆ ಅವರೂ ಫಿದಾ ಆದರಲ್ಲದೆ ತಮಿಳಿನಲ್ಲಿ 'ಅವನ್‌ದಾನ್ ಮಣಿದನ್' ಹೆಸರಿನಲ್ಲಿ ರೀಮೇಕ್ ಮಾಡಿದರು. ತಾವೇ ಹಿಂದೆ ನಿರಾಕರಿಸಿದ್ದ ಸಿನಿಮಾದ ವಸ್ತುವಿನ ಮಹತ್ವವನ್ನು ವರ್ಷಗಳ ನಂತರ ಅವರು ಅರಿತರು. ಆದರೆ, ಕನ್ನಡದಲ್ಲಿ 'ಕಸ್ತೂರಿ ನಿವಾಸ' ಜನಪ್ರಿಯವಾದಷ್ಟು ಬೇರೆ ಭಾಷೆಗಳಲ್ಲಿ ಜನಮನ ಗೆಲ್ಲಲಿಲ್ಲ.
ಸೆಟ್‌ಗೆಂದೇ ಕೆ.ಸಿ.ಎನ್. ಗೌಡರು ₹1.25 ಲಕ್ಷ ಖರ್ಚು ಮಾಡಿದ್ದರು. ಈಸ್ಟ್‌ಮನ್‌ಕಲರ್‌ನಲ್ಲಿ ಸಿನಿಮಾ ಮಾಡದೇ ಇದ್ದುದರಿಂದ ನಿರ್ಮಾಪಕರ ಜೇಬಿಗೆ ₹1.25 ಲಕ್ಷ ಹೊರೆಯಾಗಲಿಲ್ಲ. ಆದರೂ ಕೆ.ಸಿ.ಎನ್. ಗೌಡರಿಗೆ ಈ ಸಿನಿಮಾ ಬಣ್ಣದಲ್ಲಿ ತೆರೆಕಾಣಬೇಕು ಎಂಬ ಮಹತ್ವಾಕಾಂಕ್ಷೆ ಇತ್ತು. ಅದಕ್ಕೇ ಅವರು ₹2 ಕೋಟಿ ವೆಚ್ಚವಾದರೂ ಚಿಂತಿಸಲಿಲ್ಲ. ಹಿಂದಿ ರೀಮೇಕ್ ಹಕ್ಕಿನಿಂದ ₹4 ಲಕ್ಷ, ತಮಿಳು ರೀಮೇಕ್ ಹಕ್ಕಿನಿಂದ ₹2 ಲಕ್ಷ ಹಣ ಸಿಕ್ಕಿದ್ದನ್ನು ಅವರು ಆಗಾಗ ನೆನಪಿಸಿಕೊಳ್ಳುತ್ತಲೇ ಇದ್ದರು. ಕೆ.ಸಿ.ಎನ್. ಗೌಡರು 2012ರಲ್ಲಿ ತೀರಿಕೊಂಡರು. ಅವರ ಮಕ್ಕಳು ತಂದೆಯ ಆಸೆಯನ್ನು ಈಡೇರಿಸಿ, 2014ರಲ್ಲಿ 'ಕಸ್ತೂರಿ ನಿವಾಸ' ಬಣ್ಣದಲ್ಲಿ ಮರುಬಿಡುಗಡೆಯಾಯಿತು. ತುಂಬಿದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತು. ಬಣ್ಣದ ಮೆರುಗು ನೀಡುವ ಕೆಲಸಕ್ಕೆ ಎರಡು ವರ್ಷ ಬೇಕಾಯಿತು.
ಇವತ್ತು ಸ್ಟಾರ್ ನಟರು ಒಂದೇ ಸಿನಿಮಾವನ್ನು ನಾಲ್ಕೈದು ವರ್ಷ ಉಜ್ಜುತ್ತಾರೆ. ಕೇವಲ 20 ದಿನಗಳಲ್ಲಿ ಚಿತ್ರೀಕರಣ ಮುಗಿಸಿದ ಸಿನಿಮಾವೊಂದು ಹೇಗೆ ಕನ್ನಡ ಚಿತ್ರರಂಗದ ಮೈಲುಗಲ್ಲಾಯಿತು ನೋಡಿ. 'ಕಸ್ತೂರಿ ನಿವಾಸ'ದ ಉಪಕಥೆಗಳು ಹೀಗೆ ಕಾಡುತ್ತಲೇ ಇರುತ್ತವೆ.
ಸಿನಿ ಸಿಪ್: ಅಣ್ಣಾವ್ರನ್ನ ಕಳೆದುಕೊಂಡ ದಿನದ ವಿದ್ಯಮಾನ; ನಿಜಕ್ಕೂ ಆಗಿದ್ದೇನು?ಸಿನಿ ಸಿಪ್: ಅಣ್ಣಾವ್ರು ದಿಲೀಪ್ ಕುಮಾರ್ ಶೂಟಿಂಗ್ ನೋಡಿದ್ದು...
