Dailyhunt
ಸುವೇಂದು ಆಪ್ತ ಚಂದ್ರನಾಥ್ ರಥ್ ಹತ್ಯೆ: ಆರೋಪಿಗಳ ಪತ್ತೆಗೆ ವಿಶೇಷ ತಂಡಗಳ ರಚನೆ

ಸುವೇಂದು ಆಪ್ತ ಚಂದ್ರನಾಥ್ ರಥ್ ಹತ್ಯೆ: ಆರೋಪಿಗಳ ಪತ್ತೆಗೆ ವಿಶೇಷ ತಂಡಗಳ ರಚನೆ

ಕೋಲ್ಕತ್ತ: ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಪಶ್ಚಿಮ ಬಂಗಾಳ ಪೊಲೀಸರು ಚುರುಕುಗೊಳಿಸಿದ್ದಾರೆ. ಹಂತಕರ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಹಲವು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಬುಧವಾರ ರಾತ್ರಿ 10.30ರ ಸುಮಾರಿಗೆ ಚಂದ್ರನಾಥ್ ರಥ್ ಅವರು ಕೋಲ್ಕತ್ತದಿಂದ ಮಧ್ಯಮ್‌ಗ್ರಾಮ್‌ದಲ್ಲಿರುವ ತಮ್ಮ ಮನೆಗೆ ಮರಳುತ್ತಿದ್ದರು. ಆಗ ಮಧ್ಯಮ್‌ಗ್ರಾಮ್‌ ಪ್ರದೇಶದ ಜೆಸ್ಸೋರ್‌ ರಸ್ತೆಯ ದೊಹರಿಯಾ ಬಳಿ ದುಷ್ಕರ್ಮಿಗಳು ಹತ್ತಿರದಿಂದ ಗುಂಡಿನ ದಾಳಿ ನಡೆಸಿ, ಸ್ಥಳದಿಂದ ಪರಾರಿಯಾಗಿದ್ದಾರೆ.

ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ, ಹತ್ತಿರದಿಂದ ಚಂದ್ರನಾಥ್ ರಥ್ ಅವರ ಮೇಲೆ ಗುಂಡುಗಳನ್ನು ಹಾರಿಸಿದ್ದಾರೆ. ಮೊದಲು ಮುಂಭಾಗದ ವಿಂಡ್‌ಶೀಲ್ಡ್‌ಗೆ ಗುಂಡು ಹಾರಿಸಿ, ಬಳಿಕ ಮುಂದಿನ ಸೀಟಿನಲ್ಲಿ ಕುಳಿತಿದ್ದ ರಥ್‌ ಮೇಲೆ ಪದೇ ಪದೇ ಗುಂಡು ಹಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ದಾಳಿಯಲ್ಲಿ ಗಂಭೀರ ಗಾಯಗೊಂಡ ಚಂದ್ರನಾಥ್‌ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಮೂಲಗಳು ತಿಳಿಸಿವೆ. ಈ ವೇಳೆ ಕಾರು ಚಾಲಕ ಬುದ್ಧದೇವ್ ಬೆರಾ ಅವರಿಗೂ ಗುಂಡು ತಗುಲಿದ್ದು, ಅವರು ಕೋಲ್ಕತ್ತದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರಿಂದ ತನಿಖೆ ಚುರುಕು

ಪ್ರಾಥಮಿಕ ವಿಧಿವಿಜ್ಞಾನ ವರದಿಯ ಪ್ರಕಾರ, ಈ ದಾಳಿಯಲ್ಲಿ ಗ್ಲಾಕ್ 47X ನಂತಹ ಅತ್ಯಾಧುನಿಕ ಬಂದೂಕು ಬಳಸಲಾಗಿದೆ ಎಂದು ಶಂಕಿಸಲಾಗಿದೆ. ಸಾಮಾನ್ಯ ಆರೋಪಿಗಳು ಇಂತಹ ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಅಪರೂಪ, ಹಾಗಾಗಿ, ವೃತ್ತಿಪರ ಶೂಟರ್‌ಗಳೇ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ದುಷ್ಕರ್ಮಿಗಳು ಹೆಲ್ಮೆಟ್ ಧರಿಸಿದ್ದರು ಮತ್ತು ತಮ್ಮ ಗುರುತು ಸಿಗದಂತೆ ನಂಬರ್ ಪ್ಲೇಟ್ ಇಲ್ಲದ ಬೈಕ್‌ಗಳನ್ನು ಬಳಸಿದ್ದರು. ಅಲ್ಲದೇ, ರಥ್ ಅವರ ಕಾರಿಗೆ ಅಡ್ಡಬಂದಿದ್ದ ವಾಹನವೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆದರೆ ಅದಕ್ಕೆ ಅಳವಡಿಸಿದ್ದ ನಂಬರ್ ಪ್ಲೇಟ್ ನಕಲಿ ಎಂದು ತಿಳಿದುಬಂದಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕ (DGP) ಸಿದ್ಧನಾಥ್ ಗುಪ್ತಾ ಮತ್ತು ಸಿಆರ್‌ಪಿಎಫ್ ಮಹಾನಿರ್ದೇಶಕ ಜ್ಞಾನೇಂದ್ರ ಪ್ರತಾಪ್ ಸಿಂಗ್ ಅವರು ರಾತ್ರಿಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪರಾಧ ನಡೆದ ಸ್ಥಳದಲ್ಲಿ ಖಾಲಿ ಕಾಟ್ರಿಡ್ಜ್ ಮತ್ತು ಗುಂಡುಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿ ಹಿಂದಿನ ಉದ್ದೇಶ ಸದ್ಯಕ್ಕೆ ಸ್ಪಷ್ಟವಾಗಿಲ್ಲ ಎಂದು ಡಿಜಿಪಿ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani