Dailyhunt Logo
  • Light mode
    Follow system
    Dark mode
    • Play Story
    • App Story
ವಿಶ್ವಕಪ್‌ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು: ಮೆಸ್ಸಿ ದಾಖಲೆ ಮುರಿದ ಎಂಬಾಪೆ

ವಿಶ್ವಕಪ್‌ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು: ಮೆಸ್ಸಿ ದಾಖಲೆ ಮುರಿದ ಎಂಬಾಪೆ

ಯಾಮಿ: ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ ಆಟಗಾರ ಎಂಬ ಕೀರ್ತಿಗೆ ಫ್ರಾನ್ಸ್‌ನ ನಾಯಕ ಕೈಲಿಯನ್ ಎಂಬಾಪೆ ಭಾಜನರಾಗಿದ್ದಾರೆ.

ಆ ಮೂಲಕ ಫಿಫಾ ವಿಶ್ವಕಪ್‌ನಲ್ಲಿ ನೂತನ ದಾಖಲೆ ಬರೆದಿದ್ದಾರೆ. ಅರ್ಜೆಂಟೀನಾದ ನಾಯಕ ಲಯೊನೆಲ್ ಮೆಸ್ಸಿ ದಾಖಲೆಯನ್ನು ಹಿಂದಿಕ್ಕಿರುವ ಎಂಬಾಪೆ, ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಬಾರಿಸಿದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎನಿಸಿದ್ದಾರೆ.

ಶನಿವಾರ ವಿರುದ್ಧ ನಡೆದ ಮೂರನೇ ಸ್ಥಾನಕ್ಕಾಗಿನ ಪಂದ್ಯದಲ್ಲಿ ಎಂಬಾಪೆ ಅವಳಿ ಗೋಲುಗಳನ್ನು ಗಳಿಸಿದರು. ಇದರೊಂದಿಗೆ ಎಂಬಾಪೆ ಅವರ ಒಟ್ಟು ವಿಶ್ವಕಪ್ ಗೋಲುಗಳ ಸಂಖ್ಯೆ 22ಕ್ಕೇರಿತು. ಅಲ್ಲದೆ 21 ಗೋಲು ಗಳಿಸಿದ್ದ ಲಯೊನೆಲ್ ಮೆಸ್ಸಿ ಅವರ ದಾಖಲೆಯನ್ನು ಮುರಿದಿದ್ದಾರೆ.

'ಗೋಲ್ಡನ್ ಬೂಟ್' ರೇಸ್‌ನಲ್ಲೂ ಮುಂಚೂಣಿಯಲ್ಲಿ ಎಂಬಾಪೆ

2026ರ ಫಿಫಾ ವಿಶ್ವಕಪ್ ಆರಂಭಕ್ಕೂ ಮುನ್ನ ಜರ್ಮನಿಯ ಮಿರೋಸ್ಲಾವ್ ಕ್ಲೋಸ್ ಈ ದಾಖಲೆ ಹೊಂದಿದ್ದರು. ಆದರೆ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಅಲ್ಜೀರಿಯಾ ವಿರುದ್ಧ ಹ್ಯಾಟ್ರಿಕ್ ಗೋಲು ಸಿಡಿಸಿದ್ದ ಲಯೊನೆಲ್ ಮೆಸ್ಸಿ, ಆ ಬಳಿಕ ಆಸ್ಟ್ರಿಯಾ, ಜೋರ್ಡಾನ್, ಕೇಪ್ ವರ್ಡೆ ಮತ್ತು ಈಜಿಪ್ಟ್ ವಿರುದ್ಧ ಗೋಲು ಗಳಿಸಿ ಕ್ಲೋಸ್ ದಾಖಲೆ ಮುರಿದಿದ್ದರು.

ಇನ್ನೊಂದೆಡೆ ಪ್ರಸಕ್ತ ಟೂರ್ನಿಗೂ ಮುನ್ನ ಎಂಬಾಪೆ ಅವರ ಒಟ್ಟು ವಿಶ್ವಕಪ್ ಗೋಲುಗಳ ಸಂಖ್ಯೆ 12 ಆಗಿತ್ತು. ಅಲ್ಲದೆ ಪ್ರಸಕ್ತ ಸಾಗುತ್ತಿರುವ ವಿಶ್ವಕಪ್ ಒಂದರಲ್ಲೇ 10 ಗೋಲುಗಳನ್ನು ಸಿಡಿಸಿರುವ ಎಂಬಾಪೆ, ಸದ್ಯ ಅತ್ಯಧಿಕ ಗೋಲು ಗಳಿಸಿದವರಿಗೆ ನೀಡಲಾಗುವ 'ಗೋಲ್ಡನ್ ಬೂಟ್' ರೇಸ್‌ನಲ್ಲಿಯೂ 8 ಗೋಲು ಗಳಿಸಿರುವ ಮೆಸ್ಸಿ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿದ್ದಾರೆ.

ಕೈಲಿಯನ್ ಎಂಬಾಪೆ

ಫ್ರಾನ್ಸ್‌ಗೆ ನಾಲ್ಕನೇ ಸ್ಥಾನ…

ಎಂಬಾಪೆ ಅವಳಿ ಗೋಲಿನ ಹೊರತಾಗಿಯೂ ಫ್ರಾನ್ಸ್‌ಗೆ ಗೆಲುವು ದಕ್ಕಲಿಲ್ಲ. ಫ್ರೆಂಚ್ ಪಡೆಯ ವಿರುದ್ಧ 6-4 ಗೋಲುಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದ ಇಂಗ್ಲೆಂಡ್ ಕಂಚಿನ ಪದಕ ತನ್ನದಾಗಿಸಿಕೊಂಡಿತು. ಒಟ್ಟಾರೆಯಾಗಿ ಈ ಪಂದ್ಯದಲ್ಲಿ 10 ಗೋಲುಗಳು ದಾಖಲಾದವು.

2018ರಲ್ಲಿ ಚಾಂಪಿಯನ್ ಆಗಿದ್ದ ಫ್ರಾನ್ಸ್ 2022ರ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿತ್ತು. ಈ ಬಾರಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮೂರು ಆವೃತ್ತಿಗಳಲ್ಲೂ ಫ್ರಾನ್ಸ್‌ ಗೆಲುವಿನ ಓಟದಲ್ಲಿ ಎಂಬಾಪೆ ಪ್ರಮುಖ ಪಾತ್ರ ವಹಿಸಿದ್ದರು.ಈ ಬಾರಿ ಸೆಮಿಫೈನಲ್‌ನಲ್ಲಿ ಸ್ಪೇನ್ ವಿರುದ್ಧ ಸೋಲೊಪ್ಪಿಕೊಂಡಿದ್ದ ಫ್ರಾನ್ಸ್ ಫೈನಲ್ ಕನಸು ಭಗ್ನಗೊಂಡಿತ್ತು.

2018ರಲ್ಲಿ ನಾಲ್ಕು ಗೋಲು

2018ರಲ್ಲಿ ತಮ್ಮ ಚೊಚ್ಚಲ ವಿಶ್ವಕಪ್ ಟೂರ್ನಿಯಲ್ಲೇ 19ರ ಹರೆಯದ ಎಂಬಾಪೆ ನಾಲ್ಕು ಗೋಲುಗಳನ್ನು ಗಳಿಸಿ ಇಡೀ ಜಗತ್ತಿನ ಗಮನ ಸೆಳೆದಿದ್ದರು. ಕ್ರೊವೇಷಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಗೋಲು ಗಳಿಸುವ ಮೂಲಕ, 1958ರಲ್ಲಿ ಪಿಲೆ ಅವರ ನಂತರ ವಿಶ್ವಕಪ್ ಫೈನಲ್‌ನಲ್ಲಿ ಗೋಲು ಗಳಿಸಿದ ಕಿರಿಯ ಆಟಗಾರ ಎಂಬ ಖ್ಯಾತಿ ಗಳಿಸಿದ್ದರು. ಎಂಬಾಪೆ ಅವರಿಗೆ 'ಫಿಫಾ ಅತ್ಯುತ್ತಮ ಯುವ ಆಟಗಾರ' ಪ್ರಶಸ್ತಿಯೂ ಒಲಿದು ಬಂದಿತ್ತು.

ಕೈಲಿಯನ್ ಎಂಬಾಪೆ

2022ರ ಫೈನಲ್‌ನಲ್ಲಿ ಹ್ಯಾಟ್ರಿಕ್ ಸಾಧನೆ

2022ರ ಕತಾರ್ ವಿಶ್ವಕಪ್‌ನಲ್ಲಿ ಕೇವಲ ಸ್ಟಾರ್ ಆಟಗಾರನಾಗಿರದೆ, ಫ್ರಾನ್ಸ್ ತಂಡದ ಆಕ್ರಮಣಕಾರಿ ಆಟದ ಬೆನ್ನೆಲುಬಾಗಿದ್ದರು. ಟೂರ್ನಿಯಲ್ಲಿ 8 ಗೋಲುಗಳನ್ನು ಗಳಿಸಿದ್ದರು. ಅದರಲ್ಲೂ ಅರ್ಜೆಂಟೀನಾ ವಿರುದ್ಧದ ರೋಚಕ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲುಗಳ ಸಾಧನೆ ಮಾಡಿದ್ದರು. ಇದರಿಂದಾಗಿ ವಿಜೇತರನ್ನು ಶೂಟೌಟ್‌ ಮೂಲಕ ನಿರ್ಧರಿಸಲಾಯಿತು.

ಅಂತಿಮವಾಗಿ ಫ್ರಾನ್ಸ್ ರನ್ನರ್ ಅಪ್ ಆದರೂ, ಎಂಬಾಪೆ ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರನಿಗೆ ನೀಡುವ 'ಗೋಲ್ಡನ್ ಬೂಟ್' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

2026ರಲ್ಲಿ 10 ಗೋಲುಗಳ ಸಾಧನೆ:

ಪ್ರಸಕ್ತ ಸಾಗುತ್ತಿರುವ ಟೂರ್ನಿಯಲ್ಲಿ ತಂಡದ ನಾಯಕತ್ವ ಜವಾಬ್ದಾರಿಯನ್ನು ನಿಭಾಯಿಸಿರುವ ಎಂಬಾಪೆ ಒಟ್ಟು 10 ಗೋಲುಗಳನ್ನು ಗಳಿಸಿದ್ದು, ಗೋಲ್ಡನ್ ಬೂಟ್‌ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಅಲ್ಲದೆ ಸತತ ಎರಡನೇ ಸಲ ಗೋಲ್ಡನ್ ಬೂಟ್ ಗೆಲ್ಲುವ ಸನಿಹದಲ್ಲಿದ್ದಾರೆ.

ಎಂಬಾಪೆ ಮೀರಿಸಿದ ಸಕಾ 'ಹ್ಯಾಟ್ರಿಕ್‌': ಫ್ರಾನ್ಸ್‌ ಮಣಿಸಿದ ಇಂಗ್ಲೆಂಡ್‌ಗೆ ಕಂಚುಅಂದು ಮಗುವಿಗೆ ಸ್ನಾನ ಮಾಡಿಸಿದ್ದ ಮೆಸ್ಸಿ: ಈಗ ಅದೇ ಮಗುವಿನ ಎದುರು ಮಹಾಸಮರ!
Dailyhunt
Disclaimer: This content has not been generated, created or edited by Dailyhunt. Publisher: Prajavani