ಇರಾನ್ ರಾಜಧಾನಿ ಟೆಹರಾನ್. ಮಧ್ಯರಾತ್ರಿ ಹೊತ್ತು. ಕತಾರ್‌ನ ಮಧ್ಯಸ್ಥಗಾರರನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ಯುತ್ತಿದ್ದ ವಾಹನಗಳ ಸಾಲು ಏಕಾಏಕಿ ನಿಂತಿತು!
ಅಧಿಕಾರಿಗಳು ತಮ್ಮ ವಾಹನಗಳಿಂದ ಕೆಳಗಿಳಿದು ರಸ್ತೆಬದಿಯಲ್ಲಿ ಜಮಾಯಿಸಿದರು. ಅಮೆರಿಕ ಹಾಗೂ ಇರಾನ್ ನಡುವೆ ಸಂದೇಶವಾಹಕರಾಗಿ, ಉದ್ವಿಗ್ನತೆಯನ್ನು ಶಮನಗೊಳಿಸುವ ಸೂಕ್ಷ್ಮ ರಾಜತಾಂತ್ರಿಕ ಪ್ರಕ್ರಿಯೆಯಲ್ಲಿ ಇವರು ನಿರತರಾಗಿದ್ದರು.
ಈಗ, ಒಂದು ಮಹತ್ವದ ಯಶಸ್ಸು ಕೈಗೆಟುಕುವ ದೂರದಲ್ಲಿದೆ ಎನ್ನುವಾಗಲೇ, ಕೊನೆ ಕ್ಷಣದ ಮತ್ತೊಂದು ವಿವಾದವು ಎಲ್ಲವನ್ನೂ ಹಳಿತಪ್ಪಿಸುವ ಭೀತಿ ಅವರಲ್ಲಿ ಮೂಡಿತ್ತು.
ಇರಾನ್ ಮೇಲೆ ಮತ್ತೆ ಬಾಂಬ್ ಹಾಕುವೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಅಂದಹಾಗೆ ಇಡೀ ಭಿನ್ನಾಭಿಪ‍್ರಾಯ ಮೂಡಿದ್ದು, ಒಪ್ಪಂದದಲ್ಲಿ ಬಳಸಿದ ಪದಗಳ ಕುರಿತಾಗಿತ್ತು. ಬಳಸಿದ ಭಾಷೆಯಿಂದಾಗಿ ಮಾತುಕತೆ ನಿಂತುಹೋಗುವ ಪರಿಸ್ಥಿತಿ ಎದುರಾಗಿತ್ತು.
ಒಪ್ಪಂದದ ಅಂತಿಮ ಹಂತದಲ್ಲಿ ಕೆಲವು ಪದಗಳ ಬಗ್ಗೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಜೊತೆಗೆ, ಇರಾನ್ ಕೊನೆಯ ಕ್ಷಣದಲ್ಲಿ ಕೆಲವು ಹೊಸ ವಾಕ್ಯಗಳನ್ನು ಸೇರಿಸಲು ಪ್ರಯತ್ನಿಸಿದ್ದರಿಂದ ಒಪ್ಪಂದ ಘೋಷಣೆಯಲ್ಲಿ ಸ್ವಲ್ಪ ವಿಳಂಬವಾಯಿತು. ಆದರೆ ವಿವಾದಿತ ಪದಗಳು ಯಾವುವು ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಲಿಲ್ಲ.
ಒಪ್ಪಂದವಿಲ್ಲದೆ ಹಿಂತಿರುಗಬಾರದು ಎಂದು ಕತಾರ್ ಅಧಿಕಾರಿಗಳಿಗೆ ತಮ್ಮ ನಾಯಕತ್ವದಿಂದ ಸ್ಪಷ್ಟ ಸೂಚನೆ ಇತ್ತು.
ಆಕಡೆ ಸಾವಿರಾರು ಕಿಲೋಮೀಟರ್ ದೂರದ ವಾಷಿಂಗ್ಟನ್‌ನಲ್ಲಿ, ಡೊನಾಲ್ಡ್ ಟ್ರಂಪ್ ತಮ್ಮ ಜನ್ಮದಿನದ ರಾತ್ರಿ ಭೋಜನಕ್ಕೆ ಸಿದ್ಧರಾಗುತ್ತಿದ್ದರು. ಅಂದು ಸಂಜೆ ಶ್ವೇತಭವನದ ಮೈದಾನದಲ್ಲಿ ಯುಎಫ್‌ಸಿ ಪಂದ್ಯಾವಳಿಯೊಂದು ನಿಗದಿಯಾಗಿತ್ತು. ಜನ್ಮದಿನದ ದಿನವೇ ಒಪ್ಪಂದ ಅಂತಿಮಗೊಂಡರೆ, ಟ್ರಂಪ್ ಅದನ್ನು ಸ್ವಾಗತಿಸುವ ಸಾಧ್ಯತೆ ಹೆಚ್ಚಿರಬಹುದು. ಇದರಿಂದ ಮಾತುಕತೆ ವೇಗವಾಗಿ ಮುಗಿದು ಒಪ್ಪಂದಕ್ಕೆ ಅಂತಿಮ ಮುದ್ರೆ ಬೀಳಬಹುದು ಎಂದು ಕೆಲ ಸಂಧಾನಕಾರರು ನಂಬಿದ್ದರು.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಅಮೆರಿಕ-ಇರಾನ್ ಒಪ್ಪಂದದ ಹಿಂದಿನ ನಾಟಕೀಯ ಕ್ಷಣಗಳು: ಕೊನೆಯವರೆಗೂ ನಡೆದ ಹಗ್ಗಜಗ್ಗಾಟ
ಒಂದು ಸಾಲಿನಲ್ಲಿಅಮೆರಿಕ ಮತ್ತು ಇರಾನ್ ನಡುವೆ ಉದ್ಭವಿಸಿದ್ದ ತೀವ್ರ ಉದ್ವಿಗ್ನತೆಯನ್ನು ಶಮನಗೊಳಿಸಲು ಕತಾರ್‌ನ ಮಧ್ಯಸ್ಥಿಕೆಯಲ್ಲಿ ದೀರ್ಘಕಾಲಿಕ ಮಾತುಕತೆ ನಡೆದು ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಪ್ರಮುಖ ಪ್ರಶ್ನೋತ್ತರ
ಅಮೆರಿಕ ಮತ್ತು ಇರಾನ್ ನಡುವೆ ಒಪ್ಪಂದಕ್ಕೆ ಕಾರಣವೇನು?
ಪರಮಾಣು ಕಾರ್ಯಕ್ರಮ ಮತ್ತು ಹೊರ್ಮುಜ್ ಜಲಸಂಧಿಯ ಹಡಗು ಸಂಚಾರ ಮುಕ್ತಗೊಳಿಸುವ ಉದ್ದೇಶದಿಂದ ಈ ರಾಜತಾಂತ್ರಿಕ ಸಂಧಾನ ಪ್ರಕ್ರಿಯೆ ನಡೆದು ಒಪ್ಪಂದ ಅಂತಿಮಗೊಂಡಿದೆ.
ಈ ಮಾತುಕತೆಯಲ್ಲಿ ಕತಾರ್‌ನ ಪಾತ್ರವೇನು?
ಕತಾರ್ ಅಧಿಕಾರಿಗಳು ಹಲವು ವಾರಗಳ ಕಾಲ ಅಮೆರಿಕ ಮತ್ತು ಇರಾನ್ ನಡುವೆ ಸಂದೇಶವಾಹಕರಾಗಿ ಕಾರ್ಯನಿರ್ವಹಿಸಿ, ಗೌಪ್ಯ ಸಭೆಗಳ ಮೂಲಕ ಒಪ್ಪಂದ ಸಾಧ್ಯವಾಗುವಂತೆ ನೋಡಿಕೊಂಡರು.
ಒಪ್ಪಂದದ ಪ್ರಮುಖ ಅಂಶಗಳು ಯಾವುವು?
ಈ ಒಪ್ಪಂದದ ಪ್ರಕಾರ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲಾಗುತ್ತದೆ ಮತ್ತು ಇರಾನ್‌ನ ಪುನರ್‌ನಿರ್ಮಾಣಕ್ಕಾಗಿ 300 ಶತಕೋಟಿ ಡಾಲರ್ ಯೋಜನೆಗಳಿಗೆ ಅಡಿಪಾಯ ಹಾಕಲಾಗುತ್ತದೆ.
ಮಾತುಕತೆಗೆ ಅಡ್ಡಿಯಾಗಿದ್ದ ಪ್ರಮುಖ ಸವಾಲುಗಳೇನು?
ಬೈರೂತ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿ ಮತ್ತು ಒಪ್ಪಂದದ ಕರಡಿನಲ್ಲಿ ಬಳಸಿದ ಪದಗಳ ಕುರಿತಾದ ಅಂತಿಮ ಕ್ಷಣದ ಭಿನ್ನಾಭಿಪ್ರಾಯಗಳು ಒಪ್ಪಂದಕ್ಕೆ ಭಾರಿ ಅಡ್ಡಿಯಾಗಿದ್ದವು.
ಟ್ರಂಪ್ ಈ ಒಪ್ಪಂದವನ್ನು ಹೇಗೆ ಸ್ವೀಕರಿಸಿದರು?
ಟ್ರಂಪ್ ಈ ಒಪ್ಪಂದವನ್ನು ಸ್ವಾಗತಿಸಿದ್ದು, ಇರಾನ್‌ನ ಬಂದರುಗಳ ಮೇಲಿನ ನೌಕಾ ದಿಗ್ಬಂಧನವನ್ನು ತಕ್ಷಣವೇ ಹಿಂಪಡೆಯುವುದಾಗಿ ಘೋಷಿಸಿದ್ದಾರೆ.
ಪ್ರಮುಖ ಅಂಕಿಅಂಶಗಳು
300 ಶತಕೋಟಿ ಡಾಲರ್ಯೋಜಿತ ಆರ್ಥಿಕ ಅಭಿವೃದ್ಧಿ ಮೌಲ್ಯಸೋಮವಾರ ಮುಂಜಾನೆ 12:45ಒಪ್ಪಂದ ಘೋಷಣೆಯ ಸಮಯ13ಇರಾನ್ ರಾಷ್ಟ್ರೀಯ ಭದ್ರತಾ ಮಂಡಳಿಯ ಸದಸ್ಯರು
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಒಂದು ಗುರಿ, ಭಿನ್ನ ಮಾರ್ಗ: ಅಮೆರಿಕ, ಚೀನಾದ ಎ.ಐ ಓಟದಲ್ಲಿ ಗೆಲ್ಲುವವರು ಯಾರು?ಇನ್ನೊಂದೆಡೆ ಇಸ್ರೇಲ್‌ನಲ್ಲಿ ಅಧಿಕಾರಿಗಳು ಭಾರಿ ಆತಂಕದೊಂದಿಗೆ ಬೆಳವಣಿಗೆಗಳನ್ನು ಗಮನಿಸುತ್ತಿದ್ದರು. ಏಕೆಂದರೆ ಅಮೆರಿಕವು ತನ್ನ ದೀರ್ಘಕಾಲದ ವೈರಿಯಾದ ಇರಾನ್‌ನೊಂದಿಗೆ ಪ್ರತ್ಯೇಕ ಒಪ್ಪಂದಕ್ಕೆ ಸಿದ್ಧವಾಗಿರುವಂತೆ ಕಾಣಿಸುತ್ತಿತ್ತು. ಇಸ್ರೇಲ್‌ನ ಅನೇಕ ನಾಯಕರಿಗೆ ಇದು ಹಿನ್ನಡೆಯಂತೆ ಭಾಸವಾಗಿತ್ತು.
ಅದೇ ದಿನ ಮುಂಜಾನೆ, ಅಮೆರಿಕದೊಂದಿಗೆ ಸಮಾಲೋಚನೆ ನಡೆಸದೆಯೇ ಬೈರೂತ್‌ನ ಉಪನಗರವೊಂದರ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು. ಅದು ಅತ್ಯಂತ ನಾಜೂಕಾಗಿದ್ದ ರಾಜತಾಂತ್ರಿಕ ಒಪ್ಪಂದಕ್ಕೆ ಅಡ್ಡಿ ಉಂಟು ಮಾಡುವ ಭೀತಿ ಉಂಟುಮಾಡಿತ್ತು.
ಇತ್ತ ಟೆಹರಾನ್‌ನಲ್ಲಿ, ತಡರಾತ್ರಿಯವರೆಗೂ ದೂರವಾಣಿ ಕರೆಗಳು ಮುಂದುವರಿದಿದ್ದವು. ಅಂತಿಮವಾಗಿ, ಬಿಕ್ಕಟ್ಟು ಬಗೆಹರಿಯಿತು. ಕತಾರ್ ಅಧಿಕಾರಿಗಳು ಮರಳಿ ಪ್ರಯಾಣವನ್ನು ಮುಂದುವರಿಸಿದರು.
ಕೊನೆಗೂ ಒಪ್ಪಂದ ಘೋಷಣೆ
ಸೋಮವಾರ ಮುಂಜಾನೆ 12:45ಕ್ಕೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಒಪ್ಪಂದ ನಡೆದಿರುವ ಬಗ್ಗೆ ಘೋಷಿಸಿದರು. ಆ ವೇಳೆ ಅವರು ಟೆಹರಾನ್‌ನಲ್ಲಿಯೇ ಇದ್ದರು. ಕೆಲವೇ ನಿಮಿಷಗಳಲ್ಲಿ, ಒಪ್ಪಂದ ನಡೆದಿರುವ ಬಗ್ಗೆ ಟ್ರಂಪ್ ಖಚಿತಪಡಿಸಿದರು. ಕೂಡಲೇ ಅವರಿಂದ ಮತ್ತೊಂದು ನಿರ್ಧಾರ ಹೊರಬಿತ್ತು; ಇರಾನ್‌ನ ಬಂದರುಗಳ ಮೇಲಿನ ನೌಕಾ ದಿಗ್ಬಂಧನವನ್ನು ಅಮೆರಿಕ ತಕ್ಷಣವೇ ಹಿಂಪಡೆಯಲಿದೆ ಎಂದು ಘೋಷಿಸಿದರು.
ಆದರೆ ಈ ಒಪ್ಪಂದ ಅಂತಿಮಗೊಳಿಸುವುದು ಅಷ್ಟೊಂದು ಸುಲಭವಾಗಿರಲಿಲ್ಲ.
ಈ ಒಪ್ಪಂದದ ಪ್ರಕಾರ ಹೊರ್ಮುಜ್ ಜಲಸಂಧಿಯನ್ನು ಮತ್ತೆ ಹಡಗು ಸಂಚಾರಕ್ಕೆ ಮುಕ್ತ ಗೊಳಿಸಲಾಗುತ್ತದೆ. ಇರಾನ್‌ನ ಆರ್ಥಿಕ ಅಭಿವೃದ್ಧಿ ಮತ್ತು ಪುನರ್‌ನಿರ್ಮಾಣಕ್ಕೆ 300 ಶತಕೋಟಿ ಡಾಲರ್ ಮೌಲ್ಯದ ಯೋಜನೆಗಳಿಗೆ ದಾರಿ ಮಾಡಿಕೊಡಲಾಗುತ್ತದೆ. ಜೊತೆಗೆ, ಇರಾನ್‌ನ ಪರಮಾಣು ಕಾರ್ಯಕ್ರಮದ ಬಗ್ಗೆ ಹೊಸ ಸುತ್ತಿನ ಮಾತುಕತೆಗಳು ಆರಂಭವಾಗಲಿವೆ.
ಆದರೆ ಈ ಒಪ್ಪಂದಕ್ಕೆ ಅಂತಿಮ ರೂಪ ಸಿಗುವ ಮುನ್ನ ಹಲವು ಸಮಸ್ಯೆಗಳು ಎದುರಾದವು. ಈ ಒಪ್ಪಂದ ಯಶಸ್ವಿಯಾಗುವುದರ ಬಗ್ಗೆ ಅಮೆರಿಕದ ಗುಪ್ತಚರ ಸಂಸ್ಥೆಗಳಲ್ಲಿ ಕೆಲವರಿಗೆ ಅನುಮಾನವಿತ್ತು.
ಒಪ್ಪಂದದ ಬಗ್ಗೆ ಇರಾನ್ ನಾಯಕರ ನಡುವೆ ಅಸಮಾಧಾನಗಳಿದ್ದವು. ಈ ನಡುವೆ ಬೈರೂತ್ ಮೇಲೆ ಇಸ್ರೇಲ್ ದಾಳಿ ನಡೆಸಿದ್ದರಿಂದ ಇರಾನ್ ಪ್ರತಿದಾಳಿ ನಡೆಸುವ ಸಾಧ್ಯತೆಯೂ ಇತ್ತು. ಇದರಿಂದ ಒಪ್ಪಂದ ವಿಫಲವಾಗುವ ಸಾಧ್ಯತೆ ಇತ್ತು. ಕೊನೆಯ ಎರಡೂ ಕಡೆಯವರು ಉದ್ವಿಗ್ನತೆಯನ್ನು ನಿಯಂತ್ರಿಸಿ ಒಪ್ಪಂದವನ್ನು ಅಂತಿಮಗೊಳಿಸಿದರು.
ಎ.ಐ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ಆಂಥ್ರೋಪಿಕ್‌ನ ಮಿಥೋಸ್: ಚೀನಾ, ರಷ್ಯಾಗೆ ನಡುಕಅಮೆರಿಕ-ಇರಾನ್ ಬೇಡಿಕೆಗಳೇನಿತ್ತು?
ಸ್ಪಷ್ಟ ಉದ್ದೇಶದೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆಗೆ ಮುಂದಾಗಿದ್ದಾರೆ. ಇರಾನ್ ಪರಮಾಣು ಅಸ್ತ್ರವನ್ನು ಹೊಂದುವುದನ್ನು ತಡೆಯುವುದು ಅವರ ಆದ್ಯತೆಯಾಗಿತ್ತು.
ಇರಾನ್ ತನ್ನದೇ ಆದ ಆದ್ಯತೆಗಳನ್ನು ಹೊಂದಿತ್ತು. ಯುರೇನಿಯಂ ಸಮೃದ್ಧೀಕರಣ ತನ್ನ ಹಕ್ಕು ಎನ್ನುವುದನ್ನು ಬಲವಾಗಿ ಪ್ರತಿಪಾದಿಸಿತ್ತು. ಅಲ್ಲದೆ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಬೇಕಾದರೆ, ಗರಿಷ್ಠ ಪ್ರಮಾಣದ ಆರ್ಥಿಕ ಮತ್ತು ರಾಜಕೀಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಇರಾನ್ ಬಯಸಿತ್ತು.
ಈ ಒಪ್ಪಂದದ ಪರಿಣಾಮ ಅಮೆರಿಕ ಮತ್ತು ಇರಾನ್‌ಗೆ ಮಾತ್ರ ಸೀಮಿತವಾಗಿರಲಿಲ್ಲ.
ಹೊರ್ಮುಜ್ ಜಲಸಂಧಿಯ ಮೂಲಕ ವಿಶ್ವದ ದೊಡ್ಡ ಪ್ರಮಾಣದ ತೈಲ ಸಾಗಣೆಯಾಗುವುದರಿಂದ, ಈ ಒಪ್ಪಂದವು ಜಾಗತಿಕ ತೈಲ ಬೆಲೆ, ಅಂತರರಾಷ್ಟ್ರೀಯ ಹಡಗು ಸಂಚಾರ, ಮಧ್ಯಪ್ರಾಚ್ಯದ ಪರಿಸ್ಥಿತಿ ಮತ್ತು ಅಮೆರಿಕದ ರಾಜಕೀಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇತ್ತು.
ಇರಾನ್‌ನೊಳಗಿನ ಭಿನ್ನಾಭಿಪ್ರಾಯಗಳನ್ನು ನೋಡಿ ಒಪ್ಪಂದ ಆಗುವುದಿಲ್ಲ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಭಾವಿಸಿದ್ದವು. ವಿಶೇಷವಾಗಿ ಖಮೇನಿ ಒಪ್ಪಿಗೆ ನೀಡುವುದಿಲ್ಲ ಎಂದು ಅಂದಾಜಿಸಿದ್ದವು. ಆದರೆ ಕೊನೆಗೆ ಖಮೇನಿ ಒಪ್ಪಿಗೆ ನೀಡಿದರು. ಆದರೆ ಟ್ರಂಪ್ ಮಾತ್ರ ಆರಂಭದಿಂದಲೂ ಒಪ್ಪಂದ ಆಗುತ್ತದೆ ಎನ್ನುವ ವಿಶ್ವಾಸದಲ್ಲಿಯೇ ಇದ್ದರು.
ನಾವು ನಡೆಸಿದ ವೈಮಾನಿಕ ದಾಳಿಗಳು ಇರಾನ್ ಮೇಲೆ ದೊಡ್ಡ ಒತ್ತಡ ಸೃಷ್ಟಿಸಿದ್ದವು ಎಂದು ನ್ಯೂಯಾರ್ಕ್ ಟೈಮ್ಸ್'ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಹೇಳಿದ್ದಾರೆ. ಈಗಾಗಲೇ ನಡೆಸಿದ ದಾಳಿಗಳು ಭೀಕರವಾಗಿದ್ದವು, ಅಲ್ಲದೆ ನಡೆಸಲು ಉದ್ದೇಶಿಸಿ, ಕೊನೆ ಕ್ಷಣದಲ್ಲಿ ಕೈ ಬಿಟ್ಟ ದಾಳಿಯೂ ದೊಡ್ಡ ಪ್ರಮಾಣದಲ್ಲಿ ಯೋಜಿಸಲಾಗಿತ್ತು ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕದ ಈ ಸೇನಾ ಒತ್ತಡದಿಂದಾಗಿಯೇ ಇರಾನ್ ಒಪ್ಪಂದ ಮಾಡಿಕೊಂಡಿತು ಎನ್ನುವುದು ಟ್ರಂಪ್ ವಾದ.
EXPLAINER: ಅಮೆರಿಕ-ಇರಾನ್ ಒಪ್ಪಂದದಿಂದ ಭಾರತಕ್ಕೇನು ಲಾಭ? ಇಳಿಯುವುದೇ ತೈಲ ದರ?ಪಾಕಿಸ್ತಾನದ ಪಾತ್ರ
ಉಭಯ ದೇಶಗಳ ನಡುವಿನ ಮಾತುಕತೆಯಲ್ಲಿ ಪಾಕಿಸ್ತಾನ ಪ್ರಮುಖ ಮಧ್ಯಸ್ಥನಾಗಿತ್ತು. ಇರಾನ್ ಮತ್ತು ಅಮೆರಿಕ ನಡುವೆ 24 ಗಂಟೆಗಳ ಒಳಗೆ ಒಪ್ಪಂದವಾಗಲಿದೆ ಎಂದು ಶನಿವಾರದಂದು ಪಾಕಿಸ್ತಾನದ ಪ್ರಧಾನಿ, ಭವಿಷ್ಯ ನುಡಿದಿದ್ದರು. ಟ್ರಂಪ್ ಅವರ ಜನ್ಮದಿನದಂದೇ ಒಪ್ಪಂದಕ್ಕೆ ಸಹಿ ಹಾಕಬೇಕೆಂದು ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್ ಬಯಸಿದ್ದರು ಎಂದು ಈ ಬಗ್ಗೆ ಗೊತ್ತಿರುವವರು ತಿಳಿಸಿದ್ದಾರೆ. ಜನ್ಮದಿನವು ಅವರನ್ನು ಒಲಿಸಿಕೊಳ್ಳುವ ಒಂದು ಮಾರ್ಗವಾಗಿತ್ತು' ಎಂದು ಇಸ್ಲಾಮಾಬಾದ್ ಮೂಲದ ವಿಶ್ಲೇಷಕ ಕಮರ್ ಚೀಮಾ ಹೇಳಿದ್ದಾರೆ.
ಟ್ರಂಪ್ ಜನ್ಮದಿನಕ್ಕೂ, ನಿರ್ಧಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಆದರೆ ಮಾತುಕತೆಯಲ್ಲಿ ತೊಡಗಿದ್ದ ಇತರರು ಪ್ರತಿಪಾದಿಸಿದ್ದರು. ಈ ಐತಿಹಾಸಿಕ ಕ್ಷಣವು ಟ್ರಂಪ್ ಅವರ ಜನ್ಮದಿನದೊಂದಿಗೆ ಗುರುತಿಸಿಕೊಳ್ಳುವುದನ್ನು ಬಯಸದ ಇರಾನ್, ಸ್ಥಳೀಯ ಕಾಲಮಾನ ಮಧ್ಯರಾತ್ರಿಯ ನಂತರದವರೆಗೂ ಒಪ್ಪಂದವನ್ನು ಅಂತಿಮಗೊಳಿಸದೆ ಉದ್ದೇಶಪೂರ್ವಕವಾಗಿ ಕಾದು ನೋಡುವ ತಂತ್ರ ಅನುಸರಿಸಿತು ಎನ್ನಲಾಗಿದೆ.
ಇರಾನ್‌ನಲ್ಲಿ ಏನಾಯಿತು?
ಶನಿವಾರ ಇರಾನ್‌ನಲ್ಲಿ ನಿರ್ಣಾಯಕ ಘಟನೆಗಳು ನಡೆದವು. ಶಾಂತಿ ಒಪ್ಪಂದ ಪಠ್ಯಕ್ಕೆ ಸರ್ವೋಚ್ಚ ನಾಯಕ ಖಮೇನಿ ಅನುಮೋದನೆ ನೀಡಿದರು. ಈ ದಾಖಲೆಯನ್ನು ದೇಶದ 13 ಸದಸ್ಯರ ಸರ್ವೋಚ್ಚ ರಾಷ್ಟ್ರೀಯ ಭದ್ರತಾ ಮಂಡಳಿಗೆ ಸಲ್ಲಿಸಲು ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಾಗರ್ ಘಾಲಿಬಾಫ್ ಅವರಿಗೆ ಸೂಚಿಸಿದರು. ಭದ್ರತಾ ಮಂಡಳಿಯ ಕನಿಷ್ಠ ಮುಕ್ಕಾಲು ಭಾಗದಷ್ಟು ಸದಸ್ಯರ ಬೆಂಬಲ ದೊರೆತರೆ ಮಾತ್ರ ಒಪ್ಪಂದವನ್ನು ಮುಂದುವರಿಸಬೇಕು ಎಂದು ಖಮೇನಿ ನಿರ್ದೇಶಿಸಿದ್ದರು ಎಂದು ವರದಿಯಾಗಿದೆ.
ರಹಸ್ಯ ಸ್ಥಳದಲ್ಲಿ ಸಭೆ ಸೇರಿದ ಮಂಡಳಿಯು ಒಪ್ಪಂದವನ್ನು ಅಂಗೀಕರಿಸಿತು. ಆದರೆ ಇಬ್ಬರು ಸದಸ್ಯರು ಇದರ ವಿರುದ್ಧ ಮತ ಚಲಾಯಿಸಿದರು. 'ಸಹಜವಾಗಿಯೇ, ಕೆಲವು ನಿರ್ದಿಷ್ಟ ವಿಷಯಗಳ ಕುರಿತು ಸಣ್ಣ ಪ್ರಮಾಣದ ಭಿನ್ನಾಭಿಪ್ರಾಯಗಳು ಇದ್ದವು' ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ನಂತರ ಹೇಳಿದರು.
ಅಮೆರಿಕ-ಇರಾನ್ ಒಪ್ಪಂದ: 300 ಬಿಲಿಯನ್ ಡಾಲರ್ ಖಾಸಗಿ ಹೂಡಿಕೆ ನಿಧಿ ಪ್ರಸ್ತಾವನೆಕತಾರ್ ಮಧ್ಯಸ್ಥಿಕೆ
ಅಮೆರಿಕ-ಇರಾನ್ ಸಂಘರ್ಷದಲ್ಲಿ ಕತಾರ್ ಅನಿವಾರ್ಯ ಮಧ್ಯಸ್ಥನಾಯಿತು. ಕತಾರ್ ಅಧಿಕಾರಿಗಳು ಹಲವು ವಾರಗಳ ಕಾಲ ಅಮೆರಿಕ ಮತ್ತು ಇರಾನ್ ನಡುವೆ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಿದರು. ಎರಡೂ ದೇಶಗಳ ಸಂದೇಶಗಳನ್ನು ಪರಸ್ಪರ ತಲುಪಿಸುವ ಕೆಲಸ ಮಾಡಿದರು. ಮಾತುಕತೆಗಳ ವಿವರಗಳು ಬಹಿರಂಗವಾಗದಂತೆ ನೋಡಿಕೊಳ್ಳಲು, ಒಂದು ಹಂತದಲ್ಲಿ ಕತಾರ್ ಪ್ರತಿನಿಧಿಗಳು ಟರ್ಕಿ ಮಾರ್ಗವಾಗಿ ರಹಸ್ಯವಾಗಿ ಟೆಹರಾನ್‌ಗೆ ತೆರಳಿದ್ದರು.
ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅಲ್ ಥಾನಿ ಅವರು ದೋಹಾದಲ್ಲಿ ಇರಾನ್ ಅಧಿಕಾರಿಗಳೊಂದಿಗೆ 12 ಗಂಟೆಗಳ ಸುದೀರ್ಘ ಸಭೆಯನ್ನು ನಡೆಸಿದ್ದರು. ಕುತೂಹಲಕಾರಿ ಸಂಗತಿಯೆಂದರೆ, ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಗೆ ಒಳಗಾಗಿದ್ದಾಗ ಕತಾರ್ ಆರಂಭದಲ್ಲಿ ಮಧ್ಯಸ್ಥಿಕೆ ವಹಿಸಬೇಕು ಎನ್ನುವ ವಿನಂತಿಗಳನ್ನು ತಿರಸ್ಕರಿಸಿತ್ತು. ಮೇ ಮಧ್ಯಭಾಗದಲ್ಲಿ ಕದನ ವಿರಾಮ ಜಾರಿಗೆ ಬಂದು ಉದ್ವಿಗ್ನತೆ ಕಡಿಮೆಯಾದ ನಂತರವಷ್ಟೇ ಮಧ್ಯಸ್ಥನಾಗಲು ಕತಾರ್ ಒಪ್ಪಿಕೊಂಡಿತು.
ಇಸ್ರೇಲ್‌ನಿಂದ ಅಡ್ಡಿ
ಒಪ್ಪಂದ ಅಂತಿಮಗೊಳ್ಳುವ ಹಂತದಲ್ಲಿದ್ದಾಗ ದೊಡ್ಡ ಅಡ್ಡಿಯೊಂದು ಎದುರಾಯಿತು. ಲೆಬನಾನ್‌ನ ಬೈರೂತ್‌ನ ಉಪನಗರವೊಂದರ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿ ಮೂವರನ್ನು ಹತ್ಯೆ ಮಾಡಿತು. ದಾಳಿ ನಡೆಸುವುದಕ್ಕೂ ಕೆಲವೇ ನಿಮಿಷಗಳ ಮೊದಲಷ್ಟೇ ಇಸ್ರೇಲ್ ಈ ಬಗ್ಗೆ ಅಮೆರಿಕಕ್ಕೆ ಮಾಹಿತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆಯನ್ನು ಮುಂಗಡವಾಗಿ ಅಮೆರಿಕ ಜೊತೆ ಹಂಚಿಕೊಂಡಿರಲಿಲ್ಲ. ಹಿಜ್ಬುಲ್ಲಾ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸಮರ್ಥಿಸಿಕೊಂಡಿದೆ.
ಆದರೆ ಈ ದಾಳಿ ಇರಾನ್ ಅನ್ನು ಕೆರಳಿಸಿತು. ಬೈರೂತ್ ಮೇಲಿನ ಇಸ್ರೇಲ್ ದಾಳಿಯು ಒಪ್ಪಿಕೊಳ್ಳಲಾಗದು ಎಂದು ಇರಾನ್ ಹೇಳಿತು. ಅಮೆರಿಕದೊಂದಿಗೆ ನಡೆಯುವ ಯಾವುದೇ ಒಪ್ಪಂದದಲ್ಲಿ ಲೆಬನಾನ್‌ನಲ್ಲಿನ ಸಂಘರ್ಷ ಕೊನೆಗೊಳ್ಳುವ ವಿಷಯವೂ ಇರಬೇಕು ಎಂಬುದು ಇರಾನ್‌ನ ನಿಲುವಾಗಿತ್ತು. ಹೀಗಾಗಿ, ಇಸ್ರೇಲ್‌ನ ಈ ದಾಳಿಯು ಒಪ್ಪಂದದ ಭವಿಷ್ಯದ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿತು.
ಬೈರೂತ್ ಮೇಲಿನ ದಾಳಿಗೆ ಇರಾನ್ ಪ್ರತೀಕಾರ ತೀರಿಸಿಕೊಳ್ಳಬಹುದು. ಇದರಿಂದ ಅಂತಿಮ ಹಂತದಲ್ಲಿದ್ದ ಒಪ್ಪಂದಕ್ಕೆ ತೊಂದರೆ ಉಂಟುಮಾಡಬಹುದು ಎಂದು ಇಸ್ರೇಲ್‌ನ ಸೇನಾ ಸಲಹೆಗಾರರು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಎಚ್ಚರಿಸಿದ್ದರು. ಆ ಆತಂಕ ನಿಜವಾಗುವಂತೆಯೇ ಕಾಣಿಸಿತು. ದಾಳಿ ನಡೆದ ಕೆಲವೇ ಹೊತ್ತಲ್ಲಿ, ಇರಾನ್ ಪ್ರತಿಕ್ರಿಯೆಗೆ ಸಜ್ಜಾಗುತ್ತಿದೆ ಎಂಬ ಮಾಹಿತಿ ಇಸ್ರೇಲ್‌ಗೆ ದೊರೆಯಿತು.
ಅಮೆರಿಕ-ಇರಾನ್ ಒಪ್ಪಂದ ಒಪ್ಪಲ್ಲ, ಲೆಬನಾನ್ ವಿರುದ್ಧ ಕಾರ್ಯಾಚರಣೆ ಎಂದ ಇಸ್ರೇಲ್ಇರಾನ್ ಅಧಿಕಾರಿಗಳ ಪ್ರಕಾರ, ದೇಶದ ಪಶ್ಚಿಮ ಗಡಿಯಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸಿದ್ಧಪಡಿಸಲಾಗಿತ್ತು. ಮುಂಜಾನೆ ಸುಮಾರು 1 ಗಂಟೆಗೆ ಅವುಗಳನ್ನು ಇಸ್ರೇಲ್ ಕಡೆಗೆ ಉಡಾವಣೆ ಮಾಡಲು ಆದೇಶಗಳನ್ನೂ ನೀಡಲಾಗಿತ್ತು.
ಬೈರೂತ್ ಮೇಲಿನ ದಾಳಿಯಿಂದಾಗಿ ಇರಾನ್‌ನ ನಾಯಕರಲ್ಲಿ ಅಸಮಾಧಾನ ಹೆಚ್ಚಾಯಿತು. ಅಮೆರಿಕ ಮತ್ತು ಇಸ್ರೇಲ್ ಪರಸ್ಪರ ಹೊಂದಾಣಿಕೆಯಿಂದ ಒತ್ತಡದ ತಂತ್ರ ಅನುಸರಿಸುತ್ತಿವೆ ಎಂಬ ಅನುಮಾನವೂ ಕೆಲ ಇರಾನ್ ಅಧಿಕಾರಿಗಳಲ್ಲಿ ಮೂಡಿತು. ಇದರಿಂದ ಕೋಪಗೊಂಡ ಇರಾನ್ ಅಧಿಕಾರಿಗಳು, ತಾವು ಪ್ರತಿದಾಳಿಗೆ ಸಿದ್ಧರಾಗಿರುವುದಾಗಿಯೂ, ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬಹುದೆಂದು ಕತಾರ್ ಮಧ್ಯಸ್ಥರಿಗೆ ತಿಳಿಸಿದರು.
ಇದರಿಂದ ಅಂತಿಮ ಹಂತದಲ್ಲಿದ್ದ ಒಪ್ಪಂದ ಮತ್ತೊಮ್ಮೆ ವಿಫಲವಾಗುವ ಅಪಾಯಕ್ಕೆ ಸಿಲುಕಿತು. ಆದರೆ ಸಂಯಮ ಕಾಪಾಡಿಕೊಳ್ಳಿ ಎಂದು ಇರಾನ್‌ನ ಪ್ರಮುಖ ನಾಯಕರು ಸೂಚಿಸಿದ್ದರಿಂದ, ಪರಿಸ್ಥಿತಿ ತಣ್ಣಗಾಯಿತು.
ಪ್ರಚೋದಿಸಲು ನೆತನ್ಯಾಹು ಹೀಗೆ ಮಾಡುತ್ತಿದ್ದಾರೆ ಎಂದು ಇರಾನ್ ಅಧ್ಯಕ್ಷ ಪೆಜೆಶ್ಕಿಯನ್, ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಮತ್ತು ಸ್ಪೀಕರ್ ಮೊಹಮ್ಮದ್ ಬಾಗರ್ ಘಾಲಿಬಾಫ್ ವಾದಿಸಿದರು. ಇರಾನ್ ಪ್ರತಿಕಾರ ತೀರಿಸಿಕೊಂಡರೆ, ಅದರ ಪರಿಣಾಮವಾಗಿ ಉಂಟಾಗುವ ಸಂಘರ್ಷದಿಂದಾಗಿ, ಇಡೀ ಒಪ್ಪಂದವೇ ರದ್ದಾಗಬಹುದು ಎಂದು ಅವರು ಎಚ್ಚರಿಸಿದರು.
ಆದರೆ ಕತಾರ್ ಅಧಿಕಾರಿಗಳು ರಾಜತಾಂತ್ರಿಕ ಮಾತುಕತೆ ಹಳಿತಪ್ಪದಂತೆ ತೀವ್ರವಾಗಿ ಶ್ರಮಿಸಿದರು. ಅವರು ಅಮೆರಿಕದೊಂದಿಗೆ ಪದೇ ಪದೇ ಸಂಪರ್ಕ ಸಾಧಿಸಿ, ಇರಾನ್ ಅಧಿಕಾರಿಗಳು ಮತ್ತು ಅಮೆರಿಕದ ಪ್ರತಿನಿಧಿಗಳಾದ ವಿಟ್ಕಾಫ್, ಕುಶ್ನರ್ ಮತ್ತು ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ನಡುವೆ ಮಾತುಕತೆ ನಡೆಸಿದರು. ಅಂತಿಮವಾಗಿ ಪ್ರತೀಕಾರ ಕ್ರಮದಿಂದ ಇರಾನ್ ಹಿಂದೆ ಸರಿಯಿತು.
ಕೊನೆಯಲ್ಲಿ ಮತ್ತೆ ಅಡ್ಡಿ
ಆದರೆ ಇನ್ನೂ ಒಂದು ಸಮಸ್ಯೆ ಬಾಕಿ ಇತ್ತು.
ಕೊನೆಯ ಕ್ಷಣದಲ್ಲಿ ಇರಾನ್ ಒಪ್ಪಂದದ ಪಠ್ಯದಲ್ಲಿ ಕೆಲವು ಹೆಚ್ಚುವರಿ ಪದಗಳನ್ನು ಸೇರಿಸಲು ಪ್ರಯತ್ನಿಸಿತು. ಆದರೆ ಕತಾರ್ ಅದಕ್ಕೆ ಒಪ್ಪಲಿಲ್ಲ. ಈ ಹಂತದಲ್ಲಿ ಒಪ್ಪಂದದ ಕರಡಿನಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ಮಾತುಕತೆಗಳು ಮುಂದುವರಿದಂತೆ, ವಿಶೇಷವಾಗಿ ಯುಎಫ್‌ಸಿ ಪಂದ್ಯಾವಳಿಯ ಸಮಯ ಹತ್ತಿರವಾಗುತ್ತಿದ್ದ ಕಾರಣ, ಟ್ರಂಪ್ ಅವರ ತಾಳ್ಮೆಯನ್ನು ಇರಾನ್ ಪರೀಕ್ಷಿಸುತ್ತಿದೆ ಎಂದು ಕತಾರ್ ಅಧಿಕಾರಿಗಳು ಅಭಿಪ್ರಾಯಪಟ್ಟರು.
ಇದೇ ವೇಳೆ ಟ್ರಂಪ್ ಕೂಡ ಒಪ್ಪಂದವನ್ನು ಅಂತಿಮಗೊಳಿಸುವ ಆಸಕ್ತಿ ಹೊಂದಿರುವುದರ ಸಂಕೇತಗಳನ್ನು ನೀಡುತ್ತಿದ್ದರು. ಅವರು ತಮ್ಮ 'ಟ್ರುತ್ ಸೋಶಿಯಲ್' ಖಾತೆಯಲ್ಲಿ ಬೈರೂತ್ ಮೇಲಿನ ಇಸ್ರೇಲ್ ದಾಳಿಯನ್ನು ಟೀಕಿಸಿ, ಅದು 'ನಡೆಯಬಾರದಾಗಿತ್ತು' ಎಂದು ಬರೆದರು.
ಕೆಲವೇ ಗಂಟೆಗಳಲ್ಲಿ ಒಪ್ಪಂದ ಆಗಿರುವ ಬಗ್ಗೆ ಟ್ರಂಪ್ ಅಧಿಕೃತವಾಗಿ ಘೋಷಿಸಿದರು. ಅಲ್ಲದೆ ಜೊತೆಗೆ, ಇರಾನ್ ಮೇಲಿನ ಅಮೆರಿಕದ ದಿಗ್ಬಂಧನವನ್ನು ತಕ್ಷಣವೇ ತೆಗೆದುಹಾಕುವಂತೆ ಆದೇಶಿಸುವುದಾಗಿ ಹೇಳಿದರು.
ಆದರೆ ಒಪ್ಪಂದದ ಪಠ್ಯದಲ್ಲಿ ದಿಗ್ಬಂಧನವನ್ನು 30 ದಿನಗಳೊಳಗೆ ಹಿಂತೆಗೆದುಕೊಳ್ಳಲಾಗುವುದು ಎಂದು ಉಲ್ಲೇಖಿಸಲಾಗಿತ್ತು. ಟ್ರಂಪ್ ಹೇಳಿದ ತಕ್ಷಣದ ಕ್ರಮವು ಹೊಸ ರಿಯಾಯಿತಿ ಅಲ್ಲ, ಬದಲಾಗಿ ಸದ್ಭಾವನೆಯ ಸೂಚಕ ಕ್ರಮ ಎಂದು ನಂತರ ಅಮೆರಿಕದ ಅಧಿಕಾರಿಗಳು ಸ್ಪಷ್ಟಪಡಿಸಿದರು.
ಈ ಒಪ್ಪಂದವು ಮತ್ತೊಂದು ಸಂಘರ್ಷ ನಡೆಯುವುದನ್ನು ತಡೆಯಿತು. ಆದರೆ ಅಮೆರಿಕ ಮತ್ತು ಇರಾನ್ ನಡುವಿನ ದಶಕಗಳ ಹಳೆಯ ಭಿನ್ನಾಭಿಪ್ರಾಯಗಳನ್ನು ಇದು ಸಂಪೂರ್ಣವಾಗಿ ಪರಿಹರಿಸುತ್ತದೆಯೇ ಎಂಬುದು ಮುಂದಿನ ಹಂತದ ಮಾತುಕತೆಗಳ ಮೇಲೆ ಅವಲಂಬಿತವಾಗಿದೆ.
ಆಧಾರ: ದಿ ನ್ಯೂಯಾರ್ಕ್ ಟೈಮ್ಸ್ , ರಾಯಿಟರ್ಸ್ ಹಾಗೂ ಅಸೋಸಿಯೇಟ್ ಪ್ರೆಸ್
ಇರಾನ್ ಮೇಲೆ ದಾಳಿ ನಡೆಸಲು ಆಂಥ್ರೋಪಿಕ್‌ನ 'ಕ್ಲಾಡ್' ಎ.ಐ ಬಳಸಿದ ಅಮೆರಿಕ
