Dailyhunt Logo
  • Light mode
    Follow system
    Dark mode
    • Play Story
    • App Story
ಅನ್ನದ ಬಟ್ಟಲು: ಸಮೃದ್ಧ ಹುಣಸೆ ಇಳುವರಿಗೆ ನೀರು-ಗೊಬ್ಬರವೇ ಜೀವಾಳ

ಅನ್ನದ ಬಟ್ಟಲು: ಸಮೃದ್ಧ ಹುಣಸೆ ಇಳುವರಿಗೆ ನೀರು-ಗೊಬ್ಬರವೇ ಜೀವಾಳ

'ಹುಣಸೆ ಗಿಡ ನೆಟ್ಟರೆ ಸಾಕು, ನೀರು ಬೇಡ, ಆರೈಕೆ ಬೇಡ. ಫಸಲು ಪಡೆಯಬಹುದು' ಎಂಬ ಮಾತು ಈಗಿನ ಕೃಷಿ ಪರಿಸ್ಥಿತಿಯಲ್ಲಿ ಪ್ರಾಯೋಗಿಕವಾಗಿ ಅಸಾಧ್ಯ. ಅಂತರ್ಜಲ ಕುಸಿಯುತ್ತಿರುವ ಈ ಹೊತ್ತಲ್ಲಿ ಹುಣಸೆ ಗಿಡಕ್ಕೂ ಸಕಾಲಿಕ ನೀರು, ಗೊಬ್ಬರ, ಆರೈಕೆ ಅನಿವಾರ್ಯವಾಗಿದೆ.

ಕೂಡ್ಲಿಗೆ ಸಮೀಪದಲ್ಲಿರುವ ಕೊಟ್ಟೂರಿಗೆ ಹುಣಸೆ ಕೃಷಿ ಕಾರ್ಯಾಗಾರಕ್ಕೆಂದು ಹೊರಟಿದ್ದೆವು.

ಚಿತ್ರದುರ್ಗ- ಹೊಸಪೇಟೆ ಹೆದ್ದಾರಿಯಲ್ಲಿ ಹೊರಟಿದ್ದ ನಮ್ಮ ಕಾರು ಎಡಕ್ಕೆ ಹೊರಳಿ ಕೊಟ್ಟೂರು ಹಾದಿಯಲ್ಲಿ ಸಾಗಿತು. ಕೊಟ್ಟೂರು ಸಮೀಪಿಸುತ್ತಿರುವಂತೆ ರಸ್ತೆ ಬದಿಗಳಲ್ಲಿ ಹುಣಸೆ ಮರಗಳ ಸಾಲು. ದೂರದ ಜಮೀನಿನಲ್ಲೂ ಅಲ್ಲಲ್ಲಿ ಹುಣಸೆ ಮರಗಳು ಕಾಣಿಸುತ್ತಿದ್ದವು. '‌ಕೂಡ್ಲಿಗಿ ತಾಲ್ಲೂಕು ಹುಣಸೆ ಕೃಷಿಗೆ ಪ್ರಸಿದ್ಧಿ' ಎಂಬುದನ್ನು ಸಾರಿ ಸಾರಿ ಹೇಳುತ್ತಿದ್ದವು!

ಮಾರ್ಚ್‌ ತಿಂಗಳಾಂತ್ಯವಾದ್ದರಿಂದ ಹುಣಸೆ ಮರಗಳಲ್ಲಿ ಹಣ್ಣು ತೂಗಾಡುತ್ತಿದ್ದವು. ಆದರೆ, ಯಾವ ಮರದಲ್ಲೂ ಗೊಂಚಲು ಹಣ್ಣುಗಳು ಕಾಣಲಿಲ್ಲ. ಕೊಂಬೆಗಳಲ್ಲಿ ಅಲ್ಲಲ್ಲೇ ತೆಳುವಾಗಿ‌ ಹಣ್ಣುಗಳು ಹರಡಿ ಕೊಂಡಿದ್ದವು. ನಮ್ಮ ತುಮಕೂರು ಭಾಗದಲ್ಲಿ ಬೋಟು ಬಿರಿದು (ಸಿಪ್ಪೆ) ಹಣ್ಣಿನ ತಿರುಳು ಕಾಣುವಂತೆ ಮರದಲ್ಲಿ ಹಣ್ಣುಗಳು ಜೋತಾಡುತ್ತಿರುವೆ. ಆದರೆ, ಇಲ್ಲಿ ಅಂತಹ ಹಣ್ಣುಗಳು ಕಾಣಲಿಲ್ಲ.

ಚಿಗುರಿದ ಹುಣಸೆ ಗಿಡ

ಇದನ್ನೆಲ್ಲ ಗಮನಿಸುತ್ತಾ, ಕಾರ್ಯಾಗಾರ ನಡೆಯುತ್ತಿದ್ದ ಸ್ಥಳ ತಲುಪಿದೆವು.‌ ಕಾರ್ಯಕ್ರಮ ಆರಂಭವಾಯಿತು. ವಿಜ್ಞಾನಿಗಳ ಭಾಷಣ, ತಜ್ಞರು-ರೈತರ ನಡುವಿನ ಸಂವಾದಗಳಲ್ಲಿ ಹುಣಸೆ ಕೃಷಿಯ ಏರಿಳಿತದ‌ ಚರ್ಚೆ ನಡೆಯಿತು.‌ ಸಂವಾದದಲ್ಲಿ ರೈತ ಮಹಿಳೆಯೊಬ್ಬರು, 'ಮೂರು ಎಕರೆಯಲ್ಲಿ ಹುಣಸೆ ಗಿಡಗಳನ್ನು ನೆಟ್ಟು ಆರು‌ ವರ್ಷಗಳಾಯಿತು. ಗಿಡ ನಾಟಿ ಮಾಡಿದ ನಾಲ್ಕು ವರ್ಷಕ್ಕೆ ಕಾಯಿ ಬಿಡುತ್ತೆ ಅಂದಿದ್ದರು. ಈಗ ಒಂದು ಗಿಡವೂ ಕಾಯಿ ಬಿಟ್ಟಿಲ್ಲ, ಏಕೆ?' ಅಂತ ವೇದಿಕೆಯಲ್ಲಿದ್ದ ತಜ್ಞರನ್ನು ಕೇಳಿದರು.‌ ವೇದಿಕೆಯಲ್ಲಿದ್ದ ಹೆಸರಘಟ್ಟದ ಐಐಎಚ್‌ಆರ್ ವಿಜ್ಞಾನಿ ಕರುಣಾಕರನ್, 'ಗಿಡ ನೆಟ್ಟ ನಂತರ ಎಷ್ಟು ದಿನಕ್ಕೊಮ್ಮೆ ನೀರು ಕೊಟ್ಟಿದ್ದೀರಿ? ಹೇಗೆ ಆರೈಕೆ ಮಾಡಿದ್ದಿರಿ?' ಎಂದು ಮಹಿಳೆಯನ್ನು ಕೇಳಿದರು. 'ಗಿಡ ನಾಟಿ ಮಾಡಿದಾಗ ನೀರು ಕೊಟ್ಟಿದ್ದೆವು. ನಂತರ ಮಳೆಗಾಲವಿತ್ತು. ಹುಣಸೆ ಗಿಡಕ್ಕೆ ನೀರು, ಗೊಬ್ಬರದ ಆರೈಕೆಯೇನು ಬೇಕಾಗಲ್ಲ ಅಂತ ಹೇಳಿದ್ದನ್ನು ಕೇಳಿದ್ದೆವು. ಹಾಗಾಗಿ, ನಂತರದ ದಿನಗಳಲ್ಲಿ ನೀರು, ಗೊಬ್ಬರ ಕೊಡುವ ಬಗ್ಗೆ ಯೋಚಿಸಲಿಲ್ಲ' ಎಂದು ಉತ್ತರಿಸಿದರು.

'ಇದೇ ಸಮಸ್ಯೆ. ನೋಡಿ, ಏನೂ ಮಾಡದೆ ಹುಣಸೆ ಗಿಡ ಬೆಳೆದು ಉತ್ತಮ ಫಸಲು ಕೊಡುತ್ತದೆ ಎಂಬ ಕಲ್ಪನೆ ತಪ್ಪು. ಗಿಡ ನೆಟ್ಟ ನಂತರ ಸಕಾಲದಲ್ಲಿ ನೀರು ಮತ್ತು ಗೊಬ್ಬರ ನೀಡಬೇಕು. ವಿಶೇಷವಾಗಿ ಬೇಸಿಗೆಯಲ್ಲಿ ಹೆಚ್ಚಿನ ಗಮನ ಕೊಡಬೇಕು. ಇದು ಬೀಜದಿಂದ ಹುಟ್ಟಿದ್ದ ಸಸಿಯಾಗಿರಲಿ ಅಥವಾ ಕಸಿಯ ಗಿಡವಾಗಿರಲಿ, ಇದು ಎರಡಕ್ಕೂ ಅನ್ವಯಿಸುತ್ತದೆ' ಎಂದು ಕರುಣಾಕರನ್ ವಿವರಿಸಿದರು.

ಕಾರ್ಯಾಗಾರ ಮುಗಿದ ನಂತರವೂ‌ ಸಭಾಂಗಣದ ಹೊರಗೆ ಹುಣಸೆ‌ ಕುರಿತು ಅನೌಪಚಾರಿಕ ಚರ್ಚೆ‌ ಮುಂದುವರಿದಿತ್ತು. ಸ್ಥಳೀಯ‌ ಬೆಳೆಗಾರರೊಬ್ಬರು ತುಮಕೂರಿನ ಹುಣಸೆಗೆ ಸಿಗುವಷ್ಟು ದರ, ಕೂಡ್ಲಿಗಿಯ ಹುಣಸೆಗೆ ಸಿಗುವುದಿಲ್ಲ ಎಂಬ ವಿಷಯವನ್ನು ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತೋವಿನಕೆರೆ ಕೃಷಿಕ ಪದ್ಮರಾಜು, 'ಕೂಡ್ಲಿಗಿಯಲ್ಲಿ ಮಳೆಯ ಪ್ರಮಾಣ ಕಡಿಮೆ. ನೀರಿನ ಕೊರತೆ ಕೂಡ ಇದೆ. ಜೊತೆಗೆ ಮರಗಳ ಆರೈಕೆ ಕೂಡ ಸಮರ್ಪಕವಾಗಿಲ್ಲದಿರಬಹುದು. ನೀರು ಮತ್ತು ಗೊಬ್ಬರ ಸಕಾಲದಲ್ಲಿ ಸಿಗದಿರುವುದರಿಂದ ಗುಣಮಟ್ಟದಲ್ಲಿ ವ್ಯತ್ಯಾಸ ಉಂಟಾಗುತ್ತಿರುವ ಸಾಧ್ಯತೆ ಇದೆ' ಎಂದು ವಿಶ್ಲೇಷಿಸಿದರು. ಈ‌ ಮಾತುಕತೆಗೆ ಆ ಜಾಗದ ಸುತ್ತ ಮುತ್ತಲಿನ ಮರಗಳಲ್ಲಿ ಬಿಟ್ಟಿದ್ದ ಹುಣಸೆ ಹಣ್ಣುಗಳು ಸಾಕ್ಷ್ಯ ಒದಗಿಸುತ್ತಿತ್ತು.

ಅನ್ನದ ಬಟ್ಟಲು: ದೇವೇಂದ್ರರ 'ದೇಸಿ ಭತ್ತದ ತಳಿ' ಲೋಕಅನ್ನದ ಬಟ್ಟಲು: ಅಜೋಲಾ, ಭತ್ತದ ಗದ್ದೆಗಳ ಕವಚಅನ್ನದ ಬಟ್ಟಲು: ಮಳೆ ಕೊರತೆಯ ಹುಲಿಕೆರೆಯಲ್ಲಿ 'ಹಣ್ಣಿನ ತೋಟ' ಅರಳಿದ್ದು ಹೇಗೆ?

ಇಷ್ಟಕ್ಕೂ ಹುಣಸೆ ಕೃಷಿಗೆ ನೀರು ಮತ್ತು ಗೊಬ್ಬರ‌ ಏಕೆ ಬೇಕು?

'ರಸ್ತೆ ಬದಿಯಲ್ಲಿ, ತೋಟ,‌ ಹಿತ್ತಲಿನ ಮೂಲೆಯಲ್ಲಿ ಬೆಳೆಯುವ ಹುಣಸೆ ಮರಕ್ಕೆ ಯಾರು ನೀರು, ಗೊಬ್ಬರ ಕೊಡುತ್ತಾರೆ. ಹೊಲದಲ್ಲಿ ಬೆಳೆಯುವ ಹುಣಸೆ ಗಿಡಗಳಿಗೇಕೆ ನೀರು ಗೊಬ್ಬರದ ಆರೈಕೆ ಏಕೆ ? - ಇದು ಬಹುತೇಕರಲ್ಲಿರುವ ಸಾಮಾನ್ಯ ಪ್ರಶ್ನೆ.‌

'ಮಣ್ಣು ಚೆನ್ನಾಗಿದ್ದು, ಸಕಾಲಿಕವಾಗಿ ಮಳೆ ಬರುತ್ತಿದ್ದರೆ ಗಿಡಗಳಿಗೆ ಆರೈಕೆ ಬೇಕಾಗಿಲ್ಲ. ಆದರೆ, ಇವತ್ತಿನ ಮಳೆಯ ಅನಿಶ್ಚಿತತೆಯಲ್ಲಿ ಒಂದೇ ಕಡೆ ನೂರಾರು ಹುಣಸೆ ಮರಗಳನ್ನು ಬೆಳೆಸಿ, ಉತ್ತಮ ಇಳುವರಿ, ಗುಣಮಟ್ಟದ ಹಣ್ಣನ್ನು ನಿರೀಕ್ಷಿಸುವವರು ಕಡ್ಡಾಯವಾಗಿ ಗಿಡಗಳಿಗೆ ನೀರು, ಗೊಬ್ಬರ ಕೊಟ್ಟು ಕಾಯಲೇಬೇಕು' - ಇದು ಚಳ್ಳಕೆರೆ ತಾಲ್ಲೂಕಿನ ಕುರುಡಿಹಳ್ಳಿಯ 96 ರ ಹರೆಯದ ನಿವೃತ್ತ ಎಂಜಿನಿಯರ್ ಹಾಗೂ ಕೃಷಿಕ ಜಿ.ಸಿ. ತಿಪ್ಪಾರೆಡ್ಡಿಯವರ ಮಾತು.

ಅಂದ ಹಾಗೆ ರೆಡ್ಡಿಯವರು 20 ವರ್ಷಗಳ ಹಿಂದೆ 40 ಎಕರೆಯಲ್ಲಿ 800 ಹುಣಸೆ ಗಿಡಗಳನ್ನು ನಾಟಿ ಮಾಡಿದ್ದರು. ನಂತರ ಅನಿವಾರ್ಯ ಕಾರಣಗಳಿಂದ ತಮ್ಮ ಕೃಷಿ ಪ್ರದೇಶವನ್ನು 9 ಎಕರೆಗೆ ಕಡಿಮೆ ಮಾಡಿದರು. ಈಗ 200 ಮರಗಳಿವೆ. ಉತ್ತಮ 'ಆರೈಕೆ'ಯ ಕಾರಣದಿಂದ ಮರಗಳು ಹಸಿರಾಗಿವೆ, ಫಸಲು ಚೆನ್ನಾಗಿದೆ.

ಈ 'ಆರೈಕೆ'ಯ ಕಾರಣಕ್ಕಾಗಿ, ಕೆಲ ರೈತರು ಹುಣಸೆ ಗಿಡಗಳು ದೊಡ್ಡವಾಗುವವರೆಗೆ, ಗಿಡಗಳ ನಡುವಿನ ಖಾಲಿ ಜಾಗದಲ್ಲಿ, ದ್ವಿದಳ ಧಾನ್ಯಗಳು ಅಥವಾ ಮಳೆಯಾಶ್ರಿತ ಆಹಾರ ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆಯುತ್ತಾರೆ.‌ ಈ ಬೆಳೆಗಳು ತನ್ನ ಬೇರಿನ ಮೂಲಕ ಭೂಮಿಗೆ ಸಾರಜನಕ ಸ್ಥಿರೀಕರಿಸಿ ಮಣ್ಣನ್ನು ಫಲವತ್ತು ಗೊಳಿಸುತ್ತವೆ. ಹುಣಸೆ ಗಿಡಗಳ ಬೆಳವಣಿಗೆಗೆ ಪರೋಕ್ಷವಾಗಿ ಶಕ್ತಿಯನ್ನು ತುಂಬುತ್ತವೆ ಎನ್ನುತ್ತಾರೆ ಬೇಸಾಯಶಾಸ್ತ್ರಜ್ಞರು.

ಇತ್ತೀಚೆಗೆ ಬಯಲು ಸೀಮೆಯಲ್ಲಿ ಅಡಿಕೆ ಕೃಷಿ ಹೆಚ್ಚಾಗಿದ್ದು, ಬೆಳೆ ಉಳಿಸಿಕೊಳ್ಳಲು ಯಥೇಚ್ಚವಾಗಿ ಕೊಳವೆ ಬಾವಿಗಳನ್ನು ತೆಗೆಸಿ,‌ ಅಂತರ್ಜಲವನ್ನು ಬರಿದು ಮಾಡಲಾಗುತ್ತಿದೆ. ಇದರಿಂದ ಹುಣಸೆ ಮರಗಳ ಬೇರುಗಳಿಗೆ ನೀರು ಸಿಗದಷ್ಟು ಅಂತರ್ಜಲ ಕೆಳಕ್ಕೆ ಇಳಿದು ಹೋಗಿದೆ. ಹಾಗಾಗಿ 'ಹುಣಸೆ'ಗೆ ನೀರು ಉಣಿಸುವುದು ಅನಿವಾರ್ಯ ಎನ್ನುತ್ತಾರೆ ಜಲಸಂರಕ್ಷಣೆ ಕುರಿತು ಆಳವಾಗಿ ಅಧ್ಯಯನ ಮಾಡಿರುವ ಕೃಷಿ ಬರಹಗಾರ ಮಲ್ಲಿಕಾರ್ಜುನ ಹೊಸಪಾಳ್ಯ.

ಹುಣಸೆ ಹೂವು

'ಹನಿ‌ ನೀರಾವರಿ'ಯ ಅನುಭವ

ಹುಣಸೆ ಕೃಷಿಗೆ ನೀರು, ಆರೈಕೆಯ ಅಗತ್ಯದ ಬಗ್ಗೆ ಚರ್ಚಿಸುತ್ತಿರುವಾಗ, 'ನಾನು‌ ಹುಣಸೆ ಗಿಡಗಳಿಗೆ ಹನಿ ನೀರಾವರಿ ಮೂಲಕ ನೀರು ಕೊಟ್ಟು ಬೆಳೆಸಿದ್ದೇನೆ' ಎನ್ನುತ್ತಿದ್ದಾರೆ ಕೃಷಿಕರಾದ ಅರಸಿಕೆರೆ ತಾಲ್ಲೂಕು ದೊಡ್ಡಮೇಟಿಕುರ್ಕೆ ಡಿ. ಎಸ್. ಬಸವರಾಜು

ಹುಣಸೆಗೂ ಹನಿ ನೀರಾವರಿಯೇ ? ಎಂದು ಅಚ್ಚರಿಯಿಂದ ಪ್ರಶ್ನಿಸಿದರೆ, 'ಹೌದು, ಗಿಡ ನಾಟಿ ಮಾಡಿದಾಗ ವಾರಕ್ಕೆ ಎರಡು ದಿನ ತಲಾ ಒಂದೊಂದು ಗಂಟೆ ಹನಿ ನೀರಾವರಿ ಮೂಲಕ ನೀರು ಕೊಡುತ್ತಿದ್ದೆ.‌ ಮಳೆಗಾಲದಲ್ಲಿ ನೀರು ನಿಲ್ಲಿಸಿದ್ದೇನೆ. ಅತ್ಯಕ್ಕೆ ತಕ್ಕಷ್ಟು ಗೊಬ್ಬರ ಕೊಟ್ಟಿದ್ದೇನೆ. ಗಿಡಗಳಿಗೆ ಪರದೆ ಕಟ್ಟಿ ರಕ್ಷಣೆ ಒದಗಿಸಿದ್ದೇನೆ. ಇಷ್ಟು ಆರೈಕೆ ಮಾಡಿದರೂ ನಾಟಿ ಮಾಡಿದ 140 ಗಿಡಗಳಲ್ಲಿ ಉಳಿದಿದ್ದು ಕೇವಲ 90 ಹುಣಸೆ ಗಿಡಗಳು ಮಾತ್ರ' ಎನ್ನುತ್ತಾರೆ ಅವರು.

ನಾಲ್ಕೂವರೆ ವರ್ಷಗಳ ನಿರಂತರ ಆರೈಕೆ ಮಾಡಿದ್ದಕ್ಕೆ ಇವತ್ತು ಅವರಿಗೆ ಫಲ ಸಿಕ್ಕಿದೆ. ತೋಟದ 17 ಮರಗಳಲ್ಲಿ ಹಣ್ಣು ಬಿಡಲು ಆರಂಭವಾಗಿದೆ. ಸೂಕ್ತ ಆರೈಕೆಯಿಂದಾಗಿ ಬೆಂಕಿ ಬಿದ್ದು ಸುಟ್ಟು ಎಲೆ ಸುಟ್ಟು ಹೋಗಿದ್ದ ಗಿಡಗಳು ಚಿಗುರಿವೆ.'ನನ್ನ ತೋಟದ ಹಣ್ಣು ತಿಂದವರೆಲ್ಲ ತುಂಬಾ ರುಚಿ ಯಾಗಿದೆ‌ ಎಂದು ಮೆಚ್ಚಿಕೊಂಡಿದ್ದಾರೆ' ಎನ್ನುತ್ತಾರೆ ಡಿ. ಎಸ್. ಬಸವರಾಜು ಸಫಲತೆಯ ಹಸನ್ಮುಖದೊಂದಿಗೆ.

ಯಾರೇ ಏನೇ ಅನುಭವಗಳನ್ನು ಹಂಚಿಕೊಂಡರೂ ಹುಣಸೆ ಕೃಷಿ ಮಾಡುವವರು ಮೊದಲು ತಮ್ಮ ಪ್ರದೇಶದ ಹವಾಮಾನ, ಮಣ್ಣಿನ ಗುಣ ಮತ್ತು ನೀರಿನ ಲಭ್ಯತೆಯನ್ನು ಅರಿತುಕೊಂಡು ಮುನ್ನಡೆಯಬೇಕು. ಆದರೆ ಒಂದು ಮಾತಂತೂ ಸತ್ಯ, ಸೂಕ್ತ ಆರೈಕೆಯಿಲ್ಲದೇ ಹುಣಸೆ ತೋಟದಿಂದ ಸಮೃದ್ಧ ಫಸಲು ಪಡೆಯಲು ಸಾಧ್ಯವೇ ಇಲ್ಲ ಎಂಬುದು ತಜ್ಞರು ಹಾಗೂ ಅನುಭವಿ ರೈತರ ಅಭಿಮತ.

ಕೊನೆಯದಾಗಿ...

'ಹುಣಸೆ ಸೀಸನ್ ಮುಗಿದು ಹೋಗಿದೆ, ಇವನ್ನೆಲ್ಲ ಈಗ ಯಾಕೆ ಹೇಳುತ್ತಿದ್ದೀರಿ?' ಅಂತ ನಿಮಗೆ ಅನ್ನಿಸಬಹುದು. ಆದರೆ ಈಗ ಮುಂಗಾರು ಮಳೆ ಶುರುವಾಗುತ್ತಿದೆ. ಕೃಷಿ ಹೊಂಡಗಳು ತುಂಬುತ್ತಿವೆ, ರೈತರೆಲ್ಲ ಹೊಸದಾಗಿ ಹುಣಸೆ ಗಿಡಗಳನ್ನು ನಾಟಿ ಮಾಡಲು ಭೂಮಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಗಿಡ ನಾಟಿ‌ ಮಾಡಿದ ನಂತರ ನೀರು ಮತ್ತು ಗೊಬ್ಬರದ ಆರೈಕೆ ಎಷ್ಟು ಮುಖ್ಯವಾಗುತ್ತದೆ ಎಂದು ತಿಳಿಸುವುದೇ ಈ ಲೇಖನದ ಉದ್ದೇಶ.

Dailyhunt
Disclaimer: This content has not been generated, created or edited by Dailyhunt. Publisher: Prajavani