ಕೋಲ್ಕತ್ತ: ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಭವಾನಿಪುರ ಕ್ಷೇತ್ರ ತೃಣಮೂಲ ಕಾಂಗ್ರೆಸ್ ಭದ್ರಕೋಟೆ ಎಂದೇ ಹೆಸರುವಾಸಿಯಾಗಿತ್ತು.
ಮೇ 4ರಂದು ಪ್ರಕಟವಾದ ಫಲಿತಾಂಶದಲ್ಲಿ ಮಮತಾ ಅವರ ಮಾಜಿ ಆಪ್ತ, ಬಿಜೆಪಿ ನಾಯಕ ಸುವೇಂದು ಅಧಿಕಾರಿ 15,105 ಮತಗಳ ಅಂತರದಿಂದ ದೀದಿಯನ್ನು ಸೋಲಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಮಮತಾ ಸೋಲಿಗೆ ಪ್ರಮುಖ 6 ಕಾರಣಗಳು ಇಲ್ಲಿವೆ...
1. ಆಡಳಿತ ವಿರೋಧಿ ಅಲೆ
ರಾಜ್ಯದಲ್ಲಿ ಸರ್ಕಾರದ ವಿರುದ್ಧ ತೀವ್ರವಾದ ಆಡಳಿತ ವಿರೋಧಿ ಅಲೆ ಎದ್ದಾಗ ಸುರಕ್ಷಿತ ಎಂದು ಭಾವಿಸಲಾದ ಕ್ಷೇತ್ರಗಳೂ ಕೈತಪ್ಪುತ್ತವೆ. 2021ರಲ್ಲಿ ಭವಾನಿಪುರ ಕ್ಷೇತ್ರವನ್ನು ಮಮತಾ ಅವರಿಗಾಗಿ ಶೋಭಂ ದೇವ್ ಚಟ್ಟೋಪಾಧ್ಯಾಯ ಬಿಟ್ಟುಕೊಟ್ಟಿದ್ದರು.ನಂತರ ಅವರು ಗೆಲುವು ಕಂಡಿದ್ದರು. ಆದರೆ ಈ ಬಾರಿ ಜನರ ಅಸಮಾಧಾನವು ಮಮತಾಗೆ ಮುಳುವಾಯಿತು ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ.
2. ಸುವೇಂದು ಫ್ಯಾಕ್ಟರ್, ಅಮಿತ್ ಶಾ ತಂತ್ರ
ಬಿಜೆಪಿ ಅಧಿಕೃತವಾಗಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದಿದ್ದರೂ, ಅಮಿತ್ ಶಾ ಅವರು ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ ಅವರನ್ನು ಕಣಕ್ಕಿಳಿಸುವ ಮೂಲಕ ದೊಡ್ಡ ತಂತ್ರ ಹೂಡಿದರು. ಈಗಾಗಲೇ ನಂದಿಗ್ರಾಮದಲ್ಲಿ ಮಮತಾ ಅವರನ್ನು ಸೋಲಿಸಿದ್ದ ಸುವೇಂದು, ದೀದಿಯನ್ನು ಯಾರಾದರೂ ಸೋಲಿಸಲು ಸಾಧ್ಯವಿದ್ದರೆ ಅದು ಸುವೇಂದು ಮಾತ್ರ ಎಂಬ ಭಾವನೆಯನ್ನು ಮತದಾರರಲ್ಲಿ ಮೂಡಿಸುವಲ್ಲಿ ಯಶಸ್ವಿಯಾದರು.
3. ಮತ ಪ್ರಮಾಣದಲ್ಲಿ ಕುಸಿತ
ಭವಾನಿಪುರದಲ್ಲಿ ಮಮತಾ ಅವರ ಮತ ಹಂಚಿಕೆ ಪ್ರಮಾಣ ಶೇ 30 ರಷ್ಟು ಕುಸಿತವಾಗಿದ್ದು ದೀದಿ ಸೋಲಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. 2021ರಲ್ಲಿ ಮಮತಾ ಪಡೆದಿದ್ದ ಮತ ಪ್ರಮಾಣ ಶೇ 72ರಷ್ಟಿತ್ತು. ಆದರೆ ಈ ಸಲ ಅದು ಶೇ 42ಕ್ಕೆ ಕುಸಿಯಿತು. 2024ರ ಲೋಕಸಭಾ ಚುನಾವಣೆಯಲ್ಲೇ ಈ ಕ್ಷೇತ್ರದ ಎಂಟು ವಾರ್ಡ್‌ಗಳ ಪೈಕಿ ಐದರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು. ಮಮತಾ ರಾಜ್ಯದ ಪ್ರಚಾರದಲ್ಲಿ ತೊಡಗಿದ್ದಾಗ ಬಿಜೆಪಿ ಭವಾನಿಪುರದ ಪ್ರತಿ ಗಲ್ಲಿಯ ಮೇಲೆ ಹಿಡಿತ ಸಾಧಿಸಿತ್ತು ಎಂದು ವರದಿಗಳು ತಿಳಿಸಿವೆ.
4. ಬಿಜೆಪಿಯ ಸಂಘಟನೆ ಮತ್ತು ಪ್ರಚಾರ
ಬಿಜೆಪಿ ಈ ಚುನಾವಣೆಯನ್ನು ರಾಜ್ಯದಲ್ಲಿ ಭಯದ ವಿರುದ್ಧದ ಹೋರಾಟ ಎಂದು ಬಿಂಬಿಸಿತು. ಮಮತಾ ವಿರುದ್ಧ ವೈಯಕ್ತಿಕ ದಾಳಿ ಮಾಡುವ ಬದಲು, ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡಿತು. ಇನ್ನೊಂದೆಡೆ, ತೃಣಮೂಲ ಕಾಂಗ್ರೆಸ್‌ನ ಭ್ರಷ್ಟಾಚಾರ ಮತ್ತು ಬೆದರಿಕೆ ಸಂಸ್ಕೃತಿಯಿಂದ ಬೇಸತ್ತಿದ್ದ ಜನತೆ ಪರಿವರ್ತನೆಗೆ ಒಲವು ತೋರಿದರು ಎಂದು ವಿಶ್ಲೇಷಣೆಗಳು ಹೇಳಿವೆ.
5. ಎಸ್‌ಐಆರ್ (SIR) ಪ್ರಭಾವ
ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ನಡೆಸಲಾದ ಎಸ್‌ಐಆರ್ ಲಕ್ಷ ಲಕ್ಷ ನಕಲಿ ಮತಗಳನ್ನು ತೆಗೆದು ಹಾಕಲಾಯಿತು. ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಪಕ್ಷಗಳಿಗೆ ಮತದಾನದ ಅಕ್ರಮಗಳು ನೆರವಾಗುತ್ತಿದ್ದವು. ಆದರೆ ಈ ಬಾರಿ ಕಟ್ಟುನಿಟ್ಟಿನ ಕ್ರಮಗಳು ಟಿಎಂಸಿಗೆ ಹಿನ್ನಡೆ ಉಂಟುಮಾಡಿತು.
6. ಆರ್.ಜಿ.ಕರ್ ಪ್ರಕರಣದ ಪರಿಣಾಮ
ಕೋಲ್ಕತ್ತದ ಆರ್.ಜಿ. ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಂತರ ನಡೆದ ಮೊದಲ ಚುನಾವಣೆ ಇದಾಗಿದೆ. ಬಿಜೆಪಿ ತಂತ್ರಗಾರಿಕೆಯ ಭಾಗವಾಗಿ ಸಂತ್ರಸ್ತೆಯ ತಾಯಿ ರತ್ನ ದೇವನಾಥ್ ಅವರನ್ನು ಟಿಎಂಸಿ ವಿರುದ್ಧ ಕಣಕ್ಕಿಳಿಸಿತ್ತು. ಈ ಘಟನೆಯ ಬಳಿಕ ಮಮತಾ ಬ್ಯಾನರ್ಜಿ ವಿರುದ್ಧ ಸಾರ್ವಜನಿಕರ ಆಕ್ರೋಶದ ಕಿಚ್ಚು ಹೆಚ್ಚಲು ಪ್ರಮುಖ ಕಾರಣವಾಯಿತು.
Assam Result | ನೆಲಕಚ್ಚಿದ ಕಾಂಗ್ರೆಸ್, ಬಿಜೆಪಿಗೆ ಹ್ಯಾಟ್ರಿಕ್ ಗೆಲುವುಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್: ಯಾರಿಗೆ ಮುಳುವು?
