Dailyhunt Logo
  • Light mode
    Follow system
    Dark mode
    • Play Story
    • App Story
ಈರುಳ್ಳಿ ಬೆಲೆ ಏರಿಕೆಯ ಒಳನೋಟ: ಉತ್ಪಾದನೆ, ಪೂರೈಕೆ ಮತ್ತು ಮಾರುಕಟ್ಟೆಯ ಲೆಕ್ಕ

ಈರುಳ್ಳಿ ಬೆಲೆ ಏರಿಕೆಯ ಒಳನೋಟ: ಉತ್ಪಾದನೆ, ಪೂರೈಕೆ ಮತ್ತು ಮಾರುಕಟ್ಟೆಯ ಲೆಕ್ಕ

ಈರುಳ್ಳಿ ಬೆಲೆ ಏರಿಕೆ ಮತ್ತೆ ಚರ್ಚೆಯಲ್ಲಿದೆ. ಕೆ.ಜಿ. ಈರುಳ್ಳಿ ದರ ₹ 70 ದಾಟಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ದರ ಶೇ 50-60 ರಷ್ಟು ಏರಿಕೆಯಾಗಿದೆ. ದೇಶದಲ್ಲಿ ಈರುಳ್ಳಿ ಇಲ್ಲ ಎಂಬ ಪರಿಸ್ಥಿತಿ ಇಲ್ಲ. 2025-26ನೇ ಸಾಲಿನ ಈರುಳ್ಳಿ ಉತ್ಪಾದನೆ 307.37 ಲಕ್ಷ ಟನ್ ಎಂದು ಅಂದಾಜಿಸಲಾಗಿದೆ.

ಹಿಂದಿನ ವರ್ಷದ 307.67 ಲಕ್ಷ ಟನ್ ಉತ್ಪಾದನೆಯಾಗಿತ್ತು. ಅಂದರೆ ಉತ್ಪಾದನೆ ಬಹುತೇಕ ಸಮಾನವಾಗಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲಿ ಸಂಗ್ರಹಿತ ಈರುಳ್ಳಿ ದಾಸ್ತಾನು ಸಾಕಷ್ಟಿದೆ ಎಂದು ಜುಲೈನಲ್ಲಿ ಕೇಂದ್ರ ಸರ್ಕಾರವೇ ಹೇಳಿತ್ತು.

ಸರ್ಕಾರಗಳನ್ನು ನಡುಗಿಸಿದ್ದ ಈರುಳ್ಳಿ: ದೇಶದ ರಾಜಕೀಯದಲ್ಲಿ ಉಳ್ಳಾಗಡ್ಡಿ ಪ್ರಭಾವ

ಹಾಗಾದರೆ ಸಮಸ್ಯೆ ಎಲ್ಲಿದೆ?

ಭಾರತ ವಿಶ್ವದ ಎರಡನೇ ಅತಿ ದೊಡ್ಡ ಈರುಳ್ಳಿ ಉತ್ಪಾದಕ ದೇಶ. ಆದರೆ ದೇಶದಾದ್ಯಂತ ಈರುಳ್ಳಿ ಬೆಳೆಯುವುದಿಲ್ಲ ಎನ್ನುವುದೇ ದೊಡ್ಡ ಸಮಸ್ಯೆ. ದೇಶದ ಒಟ್ಟು ಈರುಳ್ಳಿ ಉತ್ಪಾದನೆಯ ಶೇ 44 ಮಹಾರಾಷ್ಟ್ರದಿಂದ ಬರುತ್ತದೆ. ದೇಶದ ಒಟ್ಟು ಉತ್ಪಾದನೆಯ ಸುಮಾರು ಎರಡನೇ ಮೂರು ಭಾಗ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕರ್ನಾಟಕದಿಂದ ಬರುತ್ತದೆ. ಈರುಳ್ಳಿ ಬೆಲೆಯ ಮೇಲೆ ಇದರ ಪರಿಣಾಮ ದೊಡ್ಡದು. ಈರುಳ್ಳಿ ಹೆಚ್ಚು ಬೆಳೆಯುವ ಪ್ರದೇಶಗಳಲ್ಲಿ ಹವಾಮಾನ, ಬಿತ್ತನೆ, ಕೊಯ್ಲು ಅಥವಾ ಸಾಗಣೆಗೆ ದೊಡ್ಡ ಅಡಚಣೆ ಉಂಟಾದರೆ ಅದರ ಪರಿಣಾಮ ದೇಶದಾದ್ಯಂತ ತಟ್ಟುತ್ತದೆ.

₹ 35ಕ್ಕೆ ಈರುಳ್ಳಿ ಮಾರಾಟ ಮಾಡಲಿರುವ ಕೇಂದ್ರ ಸರ್ಕಾರ: ಕರ್ನಾಟಕದಲ್ಲಿ ಸಿಗುತ್ತಾ?

ಬೆಳೆಯುವುದಕ್ಕಿಂತ ಉಳಿಸುವುದೇ ಸವಾಲು

ಈರುಳ್ಳಿಯ ಬೆಲೆ ಏರಿಕೆಯನ್ನು ಅರ್ಥಮಾಡಿಕೊಳ್ಳಲು ಅದರ ಕೊಯ್ಲು ಕಾಲವನ್ನು ತಿಳಿದುಕೊಳ್ಳಬೇಕು. ಈರುಳ್ಳಿ ಮುಖ್ಯವಾಗಿ ಮುಂಗಾರು (ಖಾರಿಫ್), ಹಿಂಗಾರು (ಲೇಟ್ ಖಾರಿಫ್) ಮತ್ತು ಚಳಿಗಾಲ (ರಬಿ) ಹಂಗಾಮುಗಳಲ್ಲಿ ಬೆಳೆಯಲಾಗುತ್ತದೆ. ಆದರೆ ದೇಶದ ಒಟ್ಟು ಈರುಳ್ಳಿ ಉತ್ಪಾದನೆಯಲ್ಲಿ ರಬಿ ಹಂಗಾಮಿನ ಪಾತ್ರ ಅತ್ಯಂತ ದೊಡ್ಡದು. ಸರ್ಕಾರದ ಅಂಕಿಅಂಶಗಳ ಪ್ರಕಾರ, ರಬಿ ಹಂಗಾಮಿನಲ್ಲಿ ದೇಶದಲ್ಲಿ ಲಭ್ಯವಾಗುವ ಒಟ್ಟು ಈರುಳ್ಳಿಯ ಶೇ 70-75 ರಷ್ಟು ಉತ್ಪಾದನೆಯಾಗುತ್ತದೆ. ಇದು ಸಾಮಾನ್ಯವಾಗಿ ಮಾರ್ಚ್‌ನಿಂದ ಜೂನ್‌ ಅವಧಿಯಲ್ಲಿ ಮಾರುಕಟ್ಟೆಗೆ ಬರುತ್ತದೆ.

ರಬಿ ಹಂಗಾಮಿನ ಈರುಳ್ಳಿಯ ವಿಶೇಷತೆ ಏನೆಂದರೆ ಅದನ್ನು ಹೆಚ್ಚು ಕಾಲ ಸಂಗ್ರಹಿಸಿಡಬಹುದು. ರೈತರು ಮತ್ತು ವ್ಯಾಪಾರಿಗಳು ಈ ಈರುಳ್ಳಿಯನ್ನು ಕೊಯ್ಲಾದ ತಕ್ಷಣವೇ ಸಂಪೂರ್ಣವಾಗಿ ಮಾರುಕಟ್ಟೆಗೆ ಬಿಡುವುದಿಲ್ಲ. ಮುಂದಿನ ತಿಂಗಳುಗಳಲ್ಲಿ ಮಾರಾಟ ಮಾಡಲು ಸಂಗ್ರಹಿಸುತ್ತಾರೆ. ಈರುಳ್ಳಿ ಬೆಲೆ ಏರಿಕೆಗೆ ಇದೂ ಒಂದು ಕಾರಣ. ರಬಿ ಬೆಳೆ ಮುಗಿದು, ಅದರ ದಾಸ್ತಾನು ಕಡಿಮೆಯಾಗುತ್ತಾ ಬಂದು, ಖಾರಿಫ್‌ನ ಹೊಸ ಬೆಳೆ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುವ ಅವಧಿಯಲ್ಲಿಯೇ ಈರುಳ್ಳಿ ಬೆಲೆ ಏರಿಕೆಯಾಗುತ್ತದೆ. ರಬಿ ಕೊಯ್ಲಿನ ಸಮಯದಲ್ಲಿ ಪೂರೈಕೆ ಹೆಚ್ಚಾಗಿ ಬೆಲೆ ಇಳಿಯುತ್ತದೆ. ನಂತರ ಪೂರೈಕೆ ಕಡಿಮೆಯಾಗುತ್ತಿದ್ದಂತೆ ಬೆಲೆ ಏರಲು ಆರಂಭಿಸಿ, ಸಾಮಾನ್ಯವಾಗಿ ಡಿಸೆಂಬರ್‌ನಲ್ಲಿ ಗರಿಷ್ಠ ಮಟ್ಟ ತಲುಪುತ್ತದೆ ಎಂದು ಆರ್ಥಿಕ ಸಮೀಕ್ಷೆಯ ವಿಶ್ಲೇಷಣೆ ಹೇಳುತ್ತದೆ.

ಮಳೆ ಕೊರತೆ: ₹50 ದಾಟಿದ ಕೆ.ಜಿ ಈರುಳ್ಳಿ ದರ

ಆಗಸ್ಟ್-ಸೆಪ್ಟೆಂಬರ್ ಅಪಾಯಕಾರಿ

ರಬಿ ಬೆಳೆ ತಕ್ಷಣವೇ ಮಾರುಕಟ್ಟೆಗೆ ಬರುವುದಿಲ್ಲ. ಅದನ್ನು ಸಂಗ್ರಹಿಸಿಡಲಾಗುತ್ತದೆ. ಖಾರಿಫ್‌ನ ಹೊಸ ಈರುಳ್ಳಿ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಮಾರುಕಟ್ಟೆಗೆ ಬರುವ ವೇಳೆಗೆ, ಹಳೆಯ ರಬಿ ದಾಸ್ತಾನು ಕಡಿಮೆಯಾಗಿರುತ್ತದೆ. ಈ ನಡುವೆ ಕೆಲವು ಪ್ರದೇಶಗಳಲ್ಲಿ ಮಳೆ, ಬಿತ್ತನೆ ವಿಳಂಬ, ಬೆಳೆ ರೋಗ, ಕೊಯ್ಲಿನ ತೊಂದರೆ ಅಥವಾ ಸಾಗಣೆ ಸಮಸ್ಯೆ ಎದುರಾದರೆ ಮಾರುಕಟ್ಟೆಗೆ ಬರುವ ಈರುಳ್ಳಿಯ ಪ್ರಮಾಣ ಕುಸಿಯುತ್ತದೆ. ಬೇಡಿಕೆಯಲ್ಲಿ ದೊಡ್ಡ ಬದಲಾವಣೆ ಇಲ್ಲದಿದ್ದರೂ ಪೂರೈಕೆ ಸ್ವಲ್ಪ ಕಡಿಮೆಯಾದರೆ ಬೆಲೆ ವೇಗವಾಗಿ ಏರುತ್ತದೆ.

ಈಗ ಆಗಿದ್ದೇನು?

ದೇಶದಲ್ಲಿ ಸಾಕಷ್ಟು ಈರುಳ್ಳಿ ದಾಸ್ತಾನು ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಮುಂಗಾರು ವಿಳಂಬ, ಕೆಲವು ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ, ಈರುಳ್ಳಿ ಉತ್ಪಾದನೆ ಕುಂಠಿತವಾಗಬಹುದು ಎಂದು ಎಂದು ವ್ಯಾಪಾರಿಗಳು ಭಾರಿ ಪ್ರಮಾಣದಲ್ಲಿ ಖರೀದಿಸಿ ದಾಸ್ತಾನು ಮಾಡಿಕೊಂಡಿದ್ದಾರೆ. ನಾಸಿಕ್ ಮತ್ತು ಮಧ್ಯಪ್ರದೇಶದ ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಹೀಗೆ ಈರುಳ್ಳಿ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದೂ ಕೇಂದ್ರ ಸರ್ಕಾರ ಹೇಳಿದೆ. ಹೀಗಾಗಿ ಈ ಬಾರಿ ಬೆಲೆ ಏರಿಕೆಗೆ ಉತ್ಪಾದನೆ ಕುಂಠಿತವಾಗಿದ್ದ ಕಾರಣ ಎನ್ನುವುದು ಸರಿಯಲ್ಲ.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ಈರುಳ್ಳಿ ಬೆಲೆ ಏರಿಕೆಯ ಒಳನೋಟ: ಉತ್ಪಾದನೆ, ಪೂರೈಕೆ ಮತ್ತು ಮಾರುಕಟ್ಟೆಯ ಲೆಕ್ಕ

ಒಂದು ಸಾಲಿನಲ್ಲಿಈರುಳ್ಳಿ ಬೆಲೆ ಏರಿಕೆಯು ಉತ್ಪಾದನೆಗಿಂತ ಹೆಚ್ಚಾಗಿ ಹವಾಮಾನ ವೈಪರೀತ್ಯ, ಅಸಮರ್ಪಕ ಸಂಗ್ರಹಣೆ, ಪೂರೈಕೆಯ ವ್ಯತ್ಯಯ ಮತ್ತು ದಾಸ್ತಾನು ನಿರ್ವಹಣೆಯ ಸಮಸ್ಯೆಗಳಿಂದ ಉಂಟಾಗುತ್ತಿದೆ.

ಪ್ರಮುಖ ಪ್ರಶ್ನೋತ್ತರ


ಈರುಳ್ಳಿ ಬೆಲೆ ಏರಿಕೆಯ ಹಿಂದಿರುವ ಪ್ರಮುಖ ಕಾರಣಗಳೇನು?

ಹವಾಮಾನ ವೈಪರೀತ್ಯದಿಂದಾಗಿ ಬೆಳೆ ಹಾನಿಯಾಗುವುದು, ಮಳೆ ಕೊರತೆ ಅಥವಾ ಅತಿಯಾದ ಮಳೆಯಿಂದ ಸಾಗಣೆ ಮತ್ತು ಸಂಗ್ರಹಣೆಯಲ್ಲಿ ಉಂಟಾಗುವ ತೊಂದರೆಗಳು ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.


ದೇಶದ ಈರುಳ್ಳಿ ಉತ್ಪಾದನೆಯಲ್ಲಿ ಮಹಾರಾಷ್ಟ್ರದ ಪಾತ್ರವೇನು?

ಭಾರತದ ಒಟ್ಟು ಈರುಳ್ಳಿ ಉತ್ಪಾದನೆಯ ಶೇ 44ರಷ್ಟು ಭಾಗ ಮಹಾರಾಷ್ಟ್ರದಿಂದ ಬರುತ್ತದೆ, ಆದ್ದರಿಂದ ಅಲ್ಲಿನ ಹವಾಮಾನ ಬದಲಾವಣೆ ದೇಶದಾದ್ಯಂತ ದರದ ಮೇಲೆ ನೇರ ಪರಿಣಾಮ ಬೀರುತ್ತದೆ.


ರಬಿ ಹಂಗಾಮಿನ ಈರುಳ್ಳಿ ಯಾಕೆ ಮುಖ್ಯವಾಗಿದೆ?

ದೇಶದ ಒಟ್ಟು ಈರುಳ್ಳಿ ಉತ್ಪಾದನೆಯ ಶೇ 70-75 ರಷ್ಟು ರಬಿ ಹಂಗಾಮಿನಲ್ಲಿ ಬರುತ್ತದೆ. ಇದನ್ನು ಹೆಚ್ಚು ಕಾಲ ಸಂಗ್ರಹಿಸಿಡಬಹುದಾದ್ದರಿಂದ, ಈ ದಾಸ್ತಾನು ಕಡಿಮೆಯಾಗುವಾಗ ಬೆಲೆ ಏರಿಕೆ ಕಾಣಿಸಿಕೊಳ್ಳುತ್ತದೆ.


ಈರುಳ್ಳಿ ದರವನ್ನು ನಿಯಂತ್ರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು?

ಸರ್ಕಾರವು 'ಬಫರ್ ದಾಸ್ತಾನು' ನಿರ್ಮಿಸಿ ಬೆಲೆ ಏರಿಕೆಯಾದಾಗ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ ಮತ್ತು 'ಕಾಂದಾ ಎಕ್ಸ್‌ಪ್ರೆಸ್' ಮೂಲಕ ಪ್ರಮುಖ ನಗರಗಳಿಗೆ ಈರುಳ್ಳಿ ಸಾಗಿಸುತ್ತದೆ.


ಈರುಳ್ಳಿ ಸಂಗ್ರಹಣೆಯಲ್ಲಿನ ನಷ್ಟವನ್ನು ತಪ್ಪಿಸುವುದು ಹೇಗೆ?

ಸಾಂಪ್ರದಾಯಿಕ ಸಂಗ್ರಹಣಾ ವ್ಯವಸ್ಥೆಗಳಲ್ಲಿ ಶೇ 30-50ರಷ್ಟು ಈರುಳ್ಳಿ ಹಾಳಾಗುತ್ತದೆ. ಉತ್ತಮ ಸಂಗ್ರಹಣಾ ತಂತ್ರಜ್ಞಾನ ಮತ್ತು ಕೊಯ್ಲೋತ್ತರ ನಿರ್ವಹಣೆಯ ಸುಧಾರಣೆ ಇದಕ್ಕೆ ಶಾಶ್ವತ ಪರಿಹಾರವಾಗಿದೆ.

ಪ್ರಮುಖ ಅಂಕಿಅಂಶಗಳು

ಶೇ 50-60ಈರುಳ್ಳಿ ಬೆಲೆ ಏರಿಕೆ (ಕಳೆದ ವರ್ಷಕ್ಕೆ ಹೋಲಿಸಿದರೆ)ಶೇ 44ಮಹಾರಾಷ್ಟ್ರದ ಪಾಲುಶೇ 70-75ರಬಿ ಹಂಗಾಮಿನ ಉತ್ಪಾದನಾ ಪ್ರಮಾಣ12 ಸಾವಿರ ಟನ್2024-25ರಲ್ಲಿ ಬಫರ್ ಈರುಳ್ಳಿ ಸಾಗಣೆ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಹವಾಮಾನ: ಈರುಳ್ಳಿ ಬೆಲೆಯ ಶತ್ರು

ಈರುಳ್ಳಿ ಬೆಳೆ ಕುಂಠಿತಕ್ಕೂ, ಬೆಲೆ ಏರಿಕೆಗೂ ಮುಖ್ಯ ಕಾರಣ ಹವಾಮಾನ ವೈಪರೀತ್ಯ. 2019ರಲ್ಲಿ ಮಹಾರಾಷ್ಟ್ರ ಸೇರಿದಂತೆ ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನ ಅಕಾಲಿಕ ಹಾಗೂ ದೀರ್ಘಕಾಲದ ಮಳೆಯಿಂದಾಗಿ ಖಾರಿಫ್ ಈರುಳ್ಳಿ ಬೆಳೆ ಹಾನಿಯಾಯಿತು. ಪರಿಣಾಮ ಪೂರೈಕೆ ಕುಸಿದು ಬೆಲೆ ಏರಿಕೆಯಾಗಿತ್ತು ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. 2018ರಲ್ಲಿ ಮಹಾರಾಷ್ಟ್ರದ ಚಂಡಮಾರುತದಿಂದಾಗಿ ಈರುಳ್ಳಿ ಬೆಲೆ ತುಟ್ಟಿಯಾಗಿತ್ತು. 2019ರಲ್ಲಿ ಭಾರಿ ಮಳೆಯಿಂದಾಗಿ ಈರುಳ್ಳಿ ಉತ್ಪಾದನೆ ಶೇ 30-40ರಷ್ಟು ತಗ್ಗಿತ್ತು ಎಂದು ಕೇಂದ್ರ ಸರ್ಕಾರ ಹೇಳಿತ್ತು. 2023-24ರಲ್ಲಿಯೂ ದೇಶೀಯ ಈರುಳ್ಳಿ ಉತ್ಪಾದನೆ ಹಿಂದಿನ ವರ್ಷಕ್ಕಿಂತ ಸುಮಾರು ಶೇ 20 ಕುಸಿದಿತ್ತು. ಎಲ್ ನಿನೊ ಪರಿಣಾಮ, ಹವಾಮಾನ ವೈಪರೀತ್ಯ ಮತ್ತು ಉತ್ಪಾದನೆ ಕುಂಠಿತವಾಗಿದ್ದರಿಂದ ಬೆಲೆ ಏರಿಕೆಯಾಗಿತ್ತು ಎಂದು ಕೇಂದ್ರ ಸರ್ಕಾರ ತಿಳಿಸಿತ್ತು.

ಮಳೆ ಕಡಿಮೆಯಾದರೆ ಬಿತ್ತನೆ ಮತ್ತು ಬೆಳೆ ಮೇಲೆ ಪರಿಣಾಮ ಬೀರಿದರೆ, ಹೆಚ್ಚು ಮಳೆಯಿಂದ ಕೊಯ್ಲು, ಗುಣಮಟ್ಟ, ಸಂಗ್ರಹಣೆ ಹಾಗೂ ಸಾಗಣೆಗೆ ತೊಂದರೆಯಾಗುತ್ತದೆ. ಇದರ ಪರಿಣಾಮವಾಗಿ ರೈತ ಮತ್ತು ಗ್ರಾಹಕ ಇಬ್ಬರ ಮೇಲೂ ಬೀರುತ್ತದೆ.

ಎಸ್‌ಐಆರ್‌ ಬಳಿಕ ಬದಲಾದ ಬೆಂಗಳೂರಿನ ರಾಜಕೀಯ ಲೆಕ್ಕಾಚಾರ: ಪಕ್ಷಗಳಿಗೆ ಹೊಸ ಸವಾಲು

ಸಂಗ್ರಹಣೆ ನಷ್ಟ

ಈರುಳ್ಳಿ ಬೆಲೆ ಏರಿಕೆಯ ಬಗ್ಗೆ ಮಾತನಾಡುವಾಗ ಉತ್ಪಾದನೆ ಪ್ರಮಾಣವನ್ನು ಮಾತ್ರ ನೋಡದೆ, ಮಾರುಕಟ್ಟೆಗೆ ಬರುವ ಗಾತ್ರವನ್ನೂ ಗಮನಿಸಬೇಕು. ಈರುಳ್ಳಿ ಸಂಗ್ರಹಣೆ ವೇಳೆ ಸಾಮಾನ್ಯವಾಗಿ ಶೇ 30-40 ವರೆಗೆ ನಷ್ಟ ಉಂಟಾಗಬಹುದು. ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಈ ನಷ್ಟ ಶೇ 40ಕ್ಕಿಂತಲೂ ಹೆಚ್ಚಾಗಬಹುದು ಎಂದು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎರ್) ಹೇಳುತ್ತದೆ.

ಭಾರತದಲ್ಲಿ ಈರುಳ್ಳಿಯನ್ನು ಹೆಚ್ಚಾಗಿ ನೈಸರ್ಗಿಕವಾಗಿ ಗಾಳಿಯಾಡುವ ಸಾಂಪ್ರದಾಯಿಕ ಸಂಗ್ರಹಣಾ ವ್ಯವಸ್ಥೆಗಳಲ್ಲಿ ಇಡಲಾಗುತ್ತದೆ. ಇಂತಹ ಕೆಲವು ಕಡಿಮೆ ವೆಚ್ಚದ ವ್ಯವಸ್ಥೆಗಳಲ್ಲಿ ನಾಲ್ಕು ತಿಂಗಳಲ್ಲೇ ಶೇ 42 ವರೆಗೆ ನಷ್ಟವಾಗಿರುವುದನ್ನು ಐಸಿಎಆರ್ ದಾಖಲಿಸಿದೆ. ಸಾಂಪ್ರದಾಯಿಕ ಭಾರಿ ಸಂಗ್ರಹಣೆಯಲ್ಲೂ ಶೇ 50ಕ್ಕೂ ಹೆಚ್ಚು ನಷ್ಟವಾಗಿರುವ ಉದಾಹರಣೆಗಳಿವೆ.

ಬೆಲೆ ಏರಿಕೆಯಲ್ಲಿ ವ್ಯಾಪಾರಿಗಳ ಪಾತ್ರ ಎಷ್ಟು?

ಪ್ರತಿ ಬಾರಿ ಈರುಳ್ಳಿ ಬೆಲೆ ಏರಿದಾಗ 'ವ್ಯಾಪಾರಿಗಳು ದಾಸ್ತಾನು ಮಾಡಿ ಬೆಲೆ ಹೆಚ್ಚಿಸುತ್ತಿದ್ದಾರೆ' ಎಂದು ಹೇಳುವುದು ಸರಿಯಲ್ಲ. ಕೆಲವು ಸಂದರ್ಭಗಳಲ್ಲಿ ಹೆಚ್ಚಿನ ದಾಸ್ತಾನು, ಬೆಲೆ ಏರಬಹುದು ಎನ್ನುವ ಊಹಾತ್ಮಕ ವ್ಯಾಪಾರ ಮತ್ತು ಮಾರುಕಟ್ಟೆಯ ಅಸಮರ್ಪಕತೆಯಿಂದ ಬೆಲೆ ಏರಿಕೆಯಾಗುತ್ತದೆ. ಪ್ರತಿ ಬಾರಿಯೂ ಬೆಲೆ ಏರಿಕೆಯಾದಾಗ ಇದೇ ಕಾರಣ ಎಂದು ನಿಖರವಾಗಿ ಹೇಳಲಾಗದು.

2010ರ ಈರುಳ್ಳಿ ಬೆಲೆ ಏರಿಕೆಗೆ ಕಾರಣಗಳನ್ನು ಪರಿಶೀಲಿಸಿದ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ), ಉತ್ಪಾದನೆ ಕುಸಿತದ ಜೊತೆಗೆ ಸಗಟು-ಚಿಲ್ಲರೆ ಬೆಲೆಗಳ ನಡುವಿನ ಅಂತರ, ವ್ಯಾಪಾರಿಗಳ ಮಾರ್ಜಿನ್ ಮತ್ತು ಮಧ್ಯವರ್ತಿಗಳ ಪಾತ್ರವನ್ನೂ ಗಮನಿಸಿತ್ತು. 2019ರ ಆರ್ಥಿಕ ಸಮೀಕ್ಷೆಯೂ ಪೂರೈಕೆ ಕಡಿಮೆಯಾದ ಸಂದರ್ಭಗಳಲ್ಲಿ ದಾಸ್ತಾನು ನಿರ್ವಹಣೆ ಮತ್ತು ಸರ್ಕಾರದ ದಾಸ್ತಾನು ಮಿತಿ ಕ್ರಮಗಳು ಈರುಳ್ಳಿ ಬೆಲೆಯ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿತ್ತು.

ಹೀಗಾಗಿ ಈರುಳ್ಳಿ ಬೆಲೆ ಒಂದೇ ಹಂತದಲ್ಲಿ ನಿರ್ಧಾರವಾಗುವುದಿಲ್ಲ. ರೈತರಿಂದ ಗ್ರಾಹಕರವರೆಗೆ ಸಾಗುವ ಪ್ರತಿಯೊಂದು ಹಂತದಲ್ಲೂ ಸಾಗಣೆ, ವಿಂಗಡಣೆ, ಹಾನಿ, ಕಾರ್ಮಿಕ ವೆಚ್ಚ, ಸಂಗ್ರಹಣೆ ಮತ್ತು ವ್ಯಾಪಾರ ಮಾರ್ಜಿನ್‌ಗಳು ಸೇರಿಕೊಳ್ಳುತ್ತವೆ.

ಉಚಿತ ಕೋಚಿಂಗ್: ಮೋದಿಯ ಮಹತ್ವಾಕಾಂಕ್ಷೆಯ ಭರವಸೆಗೆ ಬೇಕಿದೆ ಸ್ಪಷ್ಟ ನಕ್ಷೆ

ರಫ್ತು ನಿಲ್ಲಿಸಿದರೆ ಬೆಲೆ ಇಳಿಯುತ್ತದೆಯೇ?

ರಫ್ತು ನಿಯಂತ್ರಣವು ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆಯನ್ನು ಹೆಚ್ಚಿಸಲು ಸರ್ಕಾರ ಬಳಸುವ ಪ್ರಮುಖ ಕ್ರಮ. ದೇಶದಲ್ಲಿ ಪೂರೈಕೆ ಕಡಿಮೆಯಾದಾಗ ರಫ್ತು ಕಡಿಮೆ ಮಾಡಿದರೆ ದೇಶೀಯ ಮಾರುಕಟ್ಟೆಗೆ ಹೆಚ್ಚಿನ ಈರುಳ್ಳಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಆದರೆ ಇದರಿಂದ ರೈತರಿಗೆ ಸಿಗುವ ಮಾರುಕಟ್ಟೆ ಅವಕಾಶವೂ ಕಡಿಮೆಯಾಗಬಹುದು.

2023-24ರಲ್ಲಿ ಉತ್ಪಾದನೆ ಕುಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈರುಳ್ಳಿ ರಫ್ತಿಗೆ ನಿರ್ಬಂಧ ಹೇರಿತ್ತು. 2024ರಲ್ಲಿ ಪೂರೈಕೆ ಪರಿಸ್ಥಿತಿ ಸುಧಾರಿಸಿದಂತೆ ರಫ್ತು ನೀತಿಯನ್ನು ಹಂತ ಹಂತವಾಗಿ ಸಡಿಲಿಸಲಾಯಿತು. ಮೊದಲು ಕನಿಷ್ಠ ರಫ್ತು ಬೆಲೆ (ಎಂಇಪಿ) ಮತ್ತು ರಫ್ತು ಸುಂಕ ಜಾರಿಗೊಳಿಸಿತು. ಬಳಿಕ ನಂತರ ಎಂಇ‍ಪಿ ತೆಗೆದುಹಾಕಿ ರಫ್ತು ಸುಂಕವನ್ನು ಕಡಿಮೆ ಮಾಡಲಾಯಿತು.

2026ರಲ್ಲಿ ರಫ್ತು ಸಾಮಾನ್ಯವಾಗಿದ್ದು, ಜೂನ್‌ನಲ್ಲಿ ಸುಮಾರು 1.50 ಲಕ್ಷ ಟನ್ ಈರುಳ್ಳಿ ರಫ್ತು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಹೀಗಾಗಿ ಈಗಿನ ಬೆಲೆ ಏರಿಕೆಗೆ 'ಹೆಚ್ಚಿನ ರಫ್ತಿನಿಂದ ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಕಡಿಮೆಯಾಗಿದೆ' ಎನ್ನುವಂತಿಲ್ಲ.

ಭಾರತವೂ ಪ್ರಮುಖ ಈರುಳ್ಳಿ ರಫ್ತುದಾರ ದೇಶವಾಗಿದ್ದು, 2025-26ರಲ್ಲಿ ಸುಮಾರು 15.48 ಲಕ್ಷ ಟನ್ ತಾಜಾ ಈರುಳ್ಳಿ ಹೊರ ದೇಶಗಳಿಗೆ ಕಳುಹಿಸಲಾಗಿದೆ. ಮಲೇಷ್ಯಾ, ಶ್ರೀಲಂಕಾ, ಯುಎಇ, ನೇಪಾಳ, ಕತಾರ್ ಮತ್ತು ಕುವೈತ್ ಪ್ರಮುಖ ಮಾರುಕಟ್ಟೆಗಳಾಗಿವೆ.

ಯುಪಿಐಗೆ ಶುಲ್ಕದ ಚರ್ಚೆ: ಅಮೆರಿಕದ ಒತ್ತಡವೇ, ವ್ಯವಸ್ಥೆ ಉಳಿಸುವ ಅನಿವಾರ್ಯತೆಯೇ?

ಸರ್ಕಾರದ 'ಬಫರ್ ದಾಸ್ತಾನು'

ಈರುಳ್ಳಿ ಬೆಲೆಯ ಏರಿಳಿತವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ದರ ಸ್ಥಿರೀಕರಣ ನಿಧಿ (ಪಿಎಸ್‌ಎಫ್) ಅಡಿಯಲ್ಲಿ ಈರುಳ್ಳಿ ಬಫರ್ ನಿರ್ಮಿಸುತ್ತದೆ. ರಬಿ ಹಂಗಾಮಿನಲ್ಲಿ ರೈತರಿಂದ ಈರುಳ್ಳಿ ಖರೀದಿಸಿ ಸಂಗ್ರಹಿಸಲಾಗುತ್ತದೆ. ಬೆಲೆ ಏರಲು ಆರಂಭಿಸಿದಾಗ ಈ ದಾಸ್ತಾನನ್ನು ಪ್ರಮುಖ ಮಾರುಕಟ್ಟೆಗಳಿಗೆ ಬಿಡುಗಡೆ ಮಾಡಲಾಗುತ್ತದೆ. ನಾಫೆಡ್ ಮತ್ತು ಎನ್‌ಸಿಸಿಎಫ್‌ ಈ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಬಫರ್‌ನ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ಬದಲಾಗಿದೆ. 2020-21ರಲ್ಲಿ 1 ಲಕ್ಷ ಟನ್ ಇದ್ದದ್ದು, 2022-23ರಲ್ಲಿ 2.5 ಲಕ್ಷ ಟನ್‌ಗೆ ಮತ್ತು 2023-24ರಲ್ಲಿ 7 ಲಕ್ಷ ಟನ್‌ಗೆ ಏರಿತ್ತು. 2024-25ರಲ್ಲಿ 4.75 ಲಕ್ಷ ಟನ್ ಬಫರ್ ನಿರ್ಮಿಸಲಾಗಿತ್ತು.

2024ರಲ್ಲಿ ಕೇಂದ್ರ ಸರ್ಕಾರ ಸುಮಾರು 4.7 ಲಕ್ಷ ಟನ್ ರಬಿ ಈರುಳ್ಳಿಯನ್ನು ಬಫರ್‌ಗಾಗಿ ಖರೀದಿಸಿತ್ತು. ನಂತರ ಸೆಪ್ಟೆಂಬರ್‌ನಿಂದ ಅದನ್ನು ₹35 ಕೆ.ಜಿಗೆ ಚಿಲ್ಲರೆ ಮಾರಾಟ ಮಾಡುವುದರ ಜೊತೆಗೆ, ಪ್ರಮುಖ ಮಂಡಿಗಳಿಗೆ ಸಗಟು ಮಾರಾಟದ ಮೂಲಕವೂ ಬಿಡುಗಡೆ ಮಾಡಿತು.

ಉದ್ಯಾನ ಭೂಮಿಯ ಶೇ 5ರಷ್ಟು ಬಳಕೆಗೆ ಅವಕಾಶ: ಸುರಂಗ ರಸ್ತೆ ಯೋಜನೆಗೆ ದಾರಿ?

ಕಾಂದಾ ಎಕ್ಸ್‌ಪ್ರೆಸ್: ಈರುಳ್ಳಿ ಸಾಗಣೆ ರೈಲು

ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಸಂಗ್ರಹಣೆ ಜೊತೆಗೆ ‍ಪೂರೈಕೆ ಕೂಡ ಮುಖ್ಯ. ಹೀಗಾಗಿ ಬೆಲೆ ಏರಿಕೆಯಾದಾಗ ಈರುಳ್ಳಿ ಸಾಗಣೆಗೆ ಕೇಂದ್ರ ಸರ್ಕಾರ 'ಕಾಂದಾ ಎಕ್ಸ್‌ಪ್ರೆಸ್' ಎನ್ನುವ ವಿಶೇಷ ರೈಲು ಓಡಿಸುತ್ತದೆ. 'ಕಾಂದಾ' ಎಂಬುದು ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಈರುಳ್ಳಿಗೆ ಬಳಸುವ ಪದ. ಹೀಗಾಗಿ 'ಕಾಂದಾ ಎಕ್ಸ್‌ಪ್ರೆಸ್' ಎಂದರೆ ಅಕ್ಷರಶಃ 'ಈರುಳ್ಳಿ ಎಕ್ಸ್‌ಪ್ರೆಸ್' ಎಂದರ್ಥ.

2024-25ರಲ್ಲಿ 14 ಬೋಗಿಗಳ ಮೂಲಕ ಸುಮಾರು 12 ಸಾವಿರ ಟನ್ ಬಫರ್ ಈರುಳ್ಳಿಯನ್ನು ಐದು ನಗರಗಳಿಗೆ ಕಳುಹಿಸಲಾಗಿತ್ತು. 2025-26ರಲ್ಲಿ ಇದು 86 ಬೋಗಿಗಳಲ್ಲಿ ಸುಮಾರು 88,000 ಟನ್ ಈರುಳ್ಳಿಯನ್ನು ಪ್ರಮುಖ 16 ನಗರಗಳಿಗೆ ಸಾಗಿಸಲಾಯಿತು.

ಈ ವರ್ಷವೂ ಮತ್ತೆ ಕಾಂದಾ ಎಕ್ಸ್‌ಪ್ರೆಸ್ ಮೂಲಕ ನಾಸಿಕ್‌ನಿಂದ ದೆಹಲಿಗೆ ಬಫರ್ ಈರುಳ್ಳಿಯನ್ನು ರೈಲಿನ ಮೂಲಕ ಕಳುಹಿಸಲಾಗುತ್ತಿದೆ. ಕೇಂದ್ರ ಸರ್ಕಾರವು ದೆಹಲಿಯಲ್ಲಿ ₹35 ಕೆ.ಜಿಗೆ ಈರುಳ್ಳಿ ಮಾರಾಟ ಆರಂಭಿಸಲು ಮುಂದಾಗಿದೆ.

ಎಕಾನಮಿ 360 | ಅಕ್ಷರದ ಜತೆ ಆರ್ಥಿಕ ಜ್ಞಾನ: ಶಾಲೆಯಲ್ಲೇ ಬೇಕು ಷೇರು, ಹೂಡಿಕೆಯ ಪಾಠ

ಬಫರ್‌ ಮಾತ್ರ ಶಾಶ್ವತ ಪರಿಹಾರವಲ್ಲ

ಬಫರ್‌ ದಾಸ್ತಾನು ಬೆಲೆ ಏರಿಕೆಯ ಪ್ರಮಾಣವನ್ನು ಕಡಿಮೆ ಮಾಡಬಹುದು. ಆದರೆ ಕಾಲಕ್ಕನುಗುಣವಾಗಿ ಪೂರೈಕೆ, ಹವಾಮಾನ ಆಘಾತ ಮತ್ತು ಸಂಗ್ರಹಣಾ ನಷ್ಟದಂತಹ ಮೂಲ ಸಮಸ್ಯೆಗಳನ್ನು ಅದು ಪರಿಹರಿಸುವುದಿಲ್ಲ. ದೀರ್ಘಕಾಲದಲ್ಲಿ ಉತ್ತಮ ಸಂಗ್ರಹಣೆ, ಕೊಯ್ಲೋತ್ತರ ನಷ್ಟ ಕಡಿತ, ವೇಗದ ಸಾಗಣೆ, ಉತ್ತಮ ಮಾರುಕಟ್ಟೆ ಮಾಹಿತಿ, ರೈತರಿಗೆ ನೇರ ಮಾರುಕಟ್ಟೆ ಸಂಪರ್ಕ ಮತ್ತು ಸ್ಥಿರ ರಫ್ತು ನೀತಿ ಅಗತ್ಯ.

ಈರುಳ್ಳಿ ಉತ್ಪಾದನೆ ಹೆಚ್ಚುತ್ತಿರುವುದೇ ಬೆಲೆ ಸ್ಥಿರತೆಗೆ ಸಾಕಾಗುವುದಿಲ್ಲ. ಬೆಳೆದ ಈರುಳ್ಳಿ ಸರಿಯಾದ ಸಮಯದಲ್ಲಿ, ಸರಿಯಾದ ಸ್ಥಳಕ್ಕೆ ಮತ್ತು ಕಡಿಮೆ ನಷ್ಟದೊಂದಿಗೆ ಮಾರುಕಟ್ಟೆಗೆ ತಲುಪುವುದು ಕೂಡ ಅಷ್ಟೇ ಮುಖ್ಯ. ಹೀಗಾಗಿ ದೇಶದಲ್ಲಿ ಈರುಳ್ಳಿ ಎಷ್ಟು ಉತ್ಪಾದನೆಯಾಗುತ್ತದೆ ಎನ್ನುವುದಕ್ಕಿಂತ ಯಾವುದೇ ಅಡಚಣೆ ಇಲ್ಲದೆ ಮಾರುಕಟ್ಟೆಗೆ ಹೇಗೆ ತಲುಪಿಸಲಾಗುತ್ತದೆ ಎನ್ನುವುದೂ ಮುಖ್ಯ.

ಆಧಾರ: ಆರ್ಥಿಕ ಸಮೀಕ್ಷೆ (2019-20, 2024-25), ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್), ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ), ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ, ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ, ಪಿಐಬಿ ಹಾಗೂ ಮಾಧ್ಯಮ ವರದಿಗಳು.

ಹ್ಯಾರಿ-ಮೇಘನ್‌ ಮತ್ತೆ ಬ್ರಿಟನ್‌ಗೆ: ಹಳೆಯ ಬಿರುಕುಗಳ ನಡುವೆ ಹೊಸ ಅಧ್ಯಾಯವೇ?
Dailyhunt
Disclaimer: This content has not been generated, created or edited by Dailyhunt. Publisher: Prajavani