Dailyhunt Logo
  • Light mode
    Follow system
    Dark mode
    • Play Story
    • App Story
ಎಕಾನಮಿ 360: ಜಿಯೋ ಐಪಿಒ, ಕಾರ್ಪೊರೇಟ್ ಲಾಭದ ಸಂಭ್ರಮದಾಚೆ ಉದ್ಯೋಗದ ಸಂಕಟ

ಎಕಾನಮಿ 360: ಜಿಯೋ ಐಪಿಒ, ಕಾರ್ಪೊರೇಟ್ ಲಾಭದ ಸಂಭ್ರಮದಾಚೆ ಉದ್ಯೋಗದ ಸಂಕಟ

ಇತ್ತೀಚೆಗೆ ಮುಕ್ತಾಯಗೊಂಡ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಐಪಿಒ ದೇಶದ ಷೇರುಪೇಟೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ₹ 30,213 ಕೋಟಿ ಸಂಗ್ರಹಿಸುವ ಉದ್ದೇಶ ಹೊಂದಿದ್ದ ಈ ಐಪಿಒಗೆ ಒಂದು ಕೋಟಿಗೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಹೂಡಿಕೆದಾರರು ಬಿಡ್ ಮಾಡಿದ ಒಟ್ಟು ಮೊತ್ತ ಬರೋಬ್ಬರಿ ₹ 7.4 ಲಕ್ಷ ಕೋಟಿ ದಾಟುವ ಮೂಲಕ ದೇಶದ ಐಪಿಒ ಇತಿಹಾಸದಲ್ಲೇ ಗಮನಾರ್ಹ ದಾಖಲೆಯೊಂದು ನಿರ್ಮಾಣವಾಗಿದೆ.

ಷೇರುಪೇಟೆಯಲ್ಲಿನ ಈ ಅಭೂತಪೂರ್ವ ಉತ್ಸಾಹ ಹಾಗೂ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನೀಡುತ್ತಿರುವ ಶೇ 7ರ ಜಿಡಿಪಿ ಬೆಳವಣಿಗೆಯ ಅಂದಾಜುಗಳನ್ನು ನೋಡಿದರೆ, ಭಾರತೀಯ ಆರ್ಥಿಕತೆ ಅತ್ಯಂತ ಸದೃಢವಾಗಿದೆ ಎಂಬ ಭಾವನೆ ಮೂಡುತ್ತದೆ. ಆದರೆ, ಈ ಸಂಭ್ರಮದ ಆಚೆಗೂ ಒಂದು ಗಂಭೀರವಾದ ಪ್ರಶ್ನೆಯಿದೆ. ದೇಶದ ಆರ್ಥಿಕತೆ ಬೆಳೆಯುತ್ತಿರುವ ವೇಗದಲ್ಲೇ ಉದ್ಯೋಗಾವಕಾಶಗಳೂ ಬೆಳೆಯುತ್ತಿವೆಯಾ ಎಂಬುದು.

ಎಕಾನಮಿ 360: ಭರ್ಜರಿ ವ್ಯಾಪಾರದ ಹೊಳಪಿನಲ್ಲಿ ಮರೆಯಾದ ಶ್ರೀಸಾಮಾನ್ಯ

ಬೆಂಗಳೂರಿನ ಐಟಿ ಕಾರಿಡಾರ್‌ಗಳಲ್ಲಿ, ರಾಜ್ಯದ ಪ್ರತಿಷ್ಠಿತ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜುಗಳ ಕ್ಯಾಂಪಸ್‌ಗಳಲ್ಲಿ ಕಣ್ಣಾಡಿಸಿದರೆ, ಅನೇಕ ಯುವಜನರ ಮುಖದಲ್ಲಿ ಭವಿಷ್ಯದ ಭರವಸೆಗಿಂತ ಉದ್ಯೋಗದ ಆತಂಕವೇ ಹೆಚ್ಚಾಗಿ ಕಾಣಿಸುತ್ತಿದೆ. ದೇಶದ ಆರ್ಥಿಕತೆ ಬೆಳೆಯುತ್ತಿದೆ ನಿಜ. ಆದರೆ ಜನಸಾಮಾನ್ಯರ ಬದುಕು ಸುಧಾರಿಸುತ್ತಿದೆಯಾ? ಕಂಪನಿಗಳ ವಹಿವಾಟು ಹೆಚ್ಚಾಗಬಹುದು. ಆದರೆ, ಅದೇ ಸಮಯದಲ್ಲಿ ವರ್ಷಗಳ ಕಾಲ ಶಿಕ್ಷಣ ಪಡೆದು ಕೌಶಲಗಳನ್ನು ಬೆಳೆಸಿಕೊಂಡು ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಜನರಿಗೆ ಅವಕಾಶಗಳೇ ಸಿಗದಿದ್ದರೆ, ಈ ಬೆಳವಣಿಗೆಯ ನೈಜ ಲಾಭ ಯಾರಿಗೆ ತಲುಪುತ್ತಿದೆ ಎಂಬ ಪ್ರಶ್ನೆ ಎದುರಾಗುತ್ತದೆ.

ಇತ್ತೀಚಿನ 'ಎಚ್‌ಎಸ್‌ಬಿಸಿ ಫ್ಲ್ಯಾಶ್ ಇಂಡಿಯಾ ಕಾಂಪೋಸಿಟ್ ಪಿಎಂಐ' ದತ್ತಾಂಶವನ್ನು ಗಮನಿಸಿದರೆ ಈ ವಿರೋಧಾಭಾಸದ ಚಿತ್ರಣ ಮತ್ತಷ್ಟು ಸ್ಪಷ್ಟವಾಗುತ್ತದೆ. ಅಕ್ಟೋಬರ್‌ನಲ್ಲಿ ಭಾರತದ ಉತ್ಪಾದನೆ ಮತ್ತು ಸೇವಾ ವಲಯಗಳ ಒಟ್ಟಾರೆ ಉದ್ಯಮ ಚಟುವಟಿಕೆಯ ಸೂಚ್ಯಂಕ 56.7 ಅಂಕಗಳಿಗೆ ಏರಿದ್ದು, ನಾಲ್ಕು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಹೊಸ ಆರ್ಡರ್‌ಗಳು ಮತ್ತು ವಿದೇಶಿ ಬೇಡಿಕೆಯಲ್ಲೂ ಚುರುಕು ಕಂಡುಬಂದಿದೆ.

ಆದರೆ, ಉದ್ಯಮ ಚಟುವಟಿಕೆಗಳ ಈ ಚುರುಕು ಉದ್ಯೋಗ ಸೃಷ್ಟಿಯಲ್ಲಿ ಅದೇ ಪ್ರಮಾಣದಲ್ಲಿ ಪ್ರತಿಬಿಂಬಿಸುತ್ತಿಲ್ಲ. ಸತತ ಒಂಬತ್ತು ತಿಂಗಳ ಉದ್ಯೋಗ ಸೃಷ್ಟಿಯ ಬಳಿಕ, ಅಕ್ಟೋಬರ್‌ನಲ್ಲಿ ಸೇವಾ ವಲಯದಲ್ಲಿ ಹೊಸ ನೇಮಕಾತಿ ಸ್ಥಗಿತಗೊಂಡಿದೆ. ಉತ್ಪಾದನಾ ವಲಯದಲ್ಲೂ ನೇಮಕಾತಿ ಅಲ್ಪ ಪ್ರಮಾಣದಲ್ಲಷ್ಟೇ ನಡೆದಿದೆ. ಅಂದರೆ, ಕಂಪನಿಗಳಿಗೆ ಹೊಸ ಆರ್ಡರ್‌ಗಳು ಸಿಗುತ್ತಿವೆ, ವ್ಯವಹಾರ ವಿಸ್ತರಿಸುತ್ತಿದೆ; ಆದರೆ ಅದಕ್ಕೆ ಅನುಗುಣವಾಗಿ ಹೊಸ ಉದ್ಯೋಗಿಗಳ ನೇಮಕಾತಿ ನಡೆಯುತ್ತಿಲ್ಲ.

ಕಂಪನಿಗಳು ಈಗಿರುವ ಸಿಬ್ಬಂದಿಯ ಸಾಮರ್ಥ್ಯವನ್ನು ಹೆಚ್ಚು ಬಳಸಿಕೊಳ್ಳುವ ಮೂಲಕ ಮತ್ತು ತಂತ್ರಜ್ಞಾನದ ನೆರವಿನಿಂದ ಹೆಚ್ಚುವರಿ ಕೆಲಸವನ್ನು ನಿರ್ವಹಿಸುತ್ತಿವೆ. ಕೃತಕ ಬುದ್ಧಿಮತ್ತೆ (ಎಐ) ಮತ್ತು ಆಟೊಮೇಷನ್ ತಂತ್ರಜ್ಞಾನಗಳು ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸಗಳನ್ನು ನಿರ್ವಹಿಸಲು ಕಂಪನಿಗಳಿಗೆ ನೆರವಾಗುತ್ತಿವೆ. ಪರಿಣಾಮ ಕಂಪನಿಗಳ ದಕ್ಷತೆ ಮತ್ತು ಲಾಭ ಹೆಚ್ಚಾಗುತ್ತಿದೆ. ಹೀಗಾಗಿ ಉತ್ಪಾದಕತೆ ಹೊಸ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಬದಲಿಗೆ ಈಗಿರುವ ಉದ್ಯೋಗಿಗಳ ಮೇಲೆಯೇ ಹೆಚ್ಚಿನ ಕೆಲಸದ ಹೊರೆ ಬೀಳುತ್ತಿದೆ.

ಕೇವಲ ಹೊಸಬರಿಗೆ ಕೆಲಸ ಸಿಗದಿರುವುದಷ್ಟೇ ಸಮಸ್ಯೆಯಲ್ಲ. ವೇತನ ಬೆಳವಣಿಗೆಯೂ ಮಂದಗತಿಯಲ್ಲಿದೆ. ಕಳೆದ ಕೆಲವು ವರ್ಷಗಳಿಂದ ಎಂಟ್ರಿ-ಲೆವೆಲ್ ಸಂಬಳಗಳು ಬಹುತೇಕ ನಿಂತ ನೀರಾಗಿವೆ. ಆದರೆ ಮನೆ ಬಾಡಿಗೆ, ಶಿಕ್ಷಣ, ಆರೋಗ್ಯ ಮತ್ತು ದಿನಬಳಕೆಯ ವಸ್ತುಗಳ ಖರ್ಚು ವೇಗವಾಗಿ ಏರುತ್ತಿದೆ. ಹಣದುಬ್ಬರದ ಒತ್ತಡದ ಹಿನ್ನೆಲೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ಅಕ್ಟೋಬರ್‌ನಲ್ಲಿ ರೆಪೊ ದರವನ್ನು ಶೇ 5.50ಕ್ಕೆ ಏರಿಸಿದೆ. ಇದರಿಂದ ಗೃಹ ಮತ್ತು ವಾಹನ ಸಾಲಗಳ ಕಂತುಗಳು ಹೆಚ್ಚಾಗಿವೆ. ಆದಾಯದ ಬೆಳವಣಿಗೆ ನಿಧಾನವಾಗಿರುವಾಗ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಸಾಲದ ಹೊರೆ ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್ ಅನ್ನು ಅಸ್ತವ್ಯಸ್ತಗೊಳಿಸುತ್ತಿವೆ.

ಎಕಾನಮಿ 360 | ಬೆಲೆ ಏರಿಕೆಯ ಬಿಸಿ: ಹರಗಿ ಗ್ರಾಮದಿಂದ ಕಲಿಯಬೇಕಿದೆ ಆರ್ಥಿಕ ಪಾಠ

ಉದ್ಯೋಗ ಮತ್ತು ಆದಾಯದ ಈ ಸಮಸ್ಯೆ ಕುಟುಂಬಗಳ ಜೊತೆಗೆ ಮುಂದಿನ ದಿನಗಳಲ್ಲಿ ಇಡೀ ಮಾರುಕಟ್ಟೆಯನ್ನೂ ಕಾಡಲಿದೆ. ಕಾರಣ, ಭಾರತದ ಆರ್ಥಿಕತೆಯ ಬುನಾದಿ ಇರುವುದೇ ಆಂತರಿಕ ಗ್ರಾಹಕ ಬೇಡಿಕೆಯ ಮೇಲೆ. ಜನರ ಕೈಯಲ್ಲಿ ಖರ್ಚು ಮಾಡಲು ಸಾಕಷ್ಟು ಹಣವಿಲ್ಲದಿದ್ದರೆ, ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿಸುವುದನ್ನು ಕಡಿಮೆ ಮಾಡುತ್ತಾರೆ. ಹೊಸ ವಾಹನ ಖರೀದಿಸುವುದು, ಮನೆ ಕಟ್ಟುವುದು ಮುಂದೂಡಲ್ಪಡುತ್ತದೆ. ಜನರ ಕೊಳ್ಳುವ ಸಾಮರ್ಥ್ಯವೇ ಕುಸಿದಾಗ, ಕಂಪನಿಗಳು ಉತ್ಪಾದಿಸುವ ಸರಕು ಮತ್ತು ಸೇವೆಗಳನ್ನು ಖರೀದಿಸುವವರಾದರೂ ಯಾರು? ಬೇಡಿಕೆ ಕಡಿಮೆಯಾದರೆ ಕಂಪನಿಗಳ ವಿಸ್ತರಣೆಯೂ ನಿಧಾನಗೊಳ್ಳುತ್ತದೆ.

ಹಾಗಂತ ಕಂಪನಿಗಳು ಲಾಭ ಗಳಿಸುವುದು ಮತ್ತು ದಕ್ಷತೆ ಹೆಚ್ಚಿಸಿಕೊಳ್ಳುವುದು ತಪ್ಪಲ್ಲ. ಜಿಯೋ ಐಪಿಒಗೆ ಬಂದ ₹ 7.4 ಲಕ್ಷ ಕೋಟಿಗಳ ಬಿಡ್‌ ಕೂಡ ನಿಜವೇ. ಆದರೆ, ಷೇರುಪೇಟೆಯ ಈ ಉತ್ಸಾಹವೇ ಇಡೀ ದೇಶದ ಆರ್ಥಿಕ ಆರೋಗ್ಯದ ಅಳತೆಗೋಲಲ್ಲ. ಆರ್ಥಿಕತೆಯ ಬೆಳವಣಿಗೆ ಕೇವಲ ಹೂಡಿಕೆದಾರರ ಲೆಕ್ಕಪತ್ರಗಳಿಗೆ ಮತ್ತು ಕಂಪನಿಗಳ ಬ್ಯಾಲೆನ್ಸ್ ಶೀಟ್‌ಗಳಿಗೆ ಮಾತ್ರ ಸೀಮಿತವಾಗಬಾರದು. ಉದ್ಯೋಗ ಸೃಷ್ಟಿಯಾಗದೇ ಇದ್ದಲ್ಲಿ ದೀರ್ಘಾವಧಿಯಲ್ಲಿ ಜನರ ಕೊಳ್ಳುವ ಶಕ್ತಿಯೇ ಕುಗ್ಗಿ ಕಂಪನಿಗಳ ಗ್ರಾಹಕ ನೆಲೆಯನ್ನೇ ನಾಶಪಡಿಸಲಿದೆ ಎಂಬ ಕಹಿ ಸತ್ಯವನ್ನು ಉದ್ಯಮ ಜಗತ್ತು ಮತ್ತು ನೀತಿ ನಿರೂಪಕರು ಆದಷ್ಟು ಬೇಗ ಅರ್ಥ ಮಾಡಿಕೊಳ್ಳಬೇಕು.

ಜಿಡಿಪಿ ಹಿಗ್ಗುವುದು ಮತ್ತು ಷೇರುಪೇಟೆ ದಾಖಲೆ ಬರೆಯುವುದು ಆರ್ಥಿಕತೆಯ ಒಂದು ಮುಖವಷ್ಟೇ. ಶಿಕ್ಷಣ ಪಡೆದ ಯುವಜನರ ಕೈಗೆ ಉದ್ಯೋಗ ಸಿಗದಿದ್ದರೆ, ದುಡಿಯುವ ವರ್ಗದ ಆದಾಯ ಹೆಚ್ಚದಿದ್ದರೆ ಮತ್ತು ಸಾಮಾನ್ಯ ಕುಟುಂಬಗಳಿಗೆ ಆರ್ಥಿಕ ಭದ್ರತೆ ದೊರೆಯದಿದ್ದರೆ ಅಂತಹ ಪ್ರಗತಿ ಅಪೂರ್ಣವಾಗಿಯೇ ಉಳಿಯುತ್ತದೆ. ದೇಶದ ಆರ್ಥಿಕ ಯಶಸ್ಸನ್ನು ಅಳೆಯಬೇಕಾದ್ದು ದಲಾಲ್ ಸ್ಟ್ರೀಟ್‌ನ ಸಂಭ್ರಮದಿಂದಲ್ಲ; ಬದಲಾಗಿ ಎಷ್ಟು ಯುವಕರ ಬದುಕಿನಲ್ಲಿ ಉದ್ಯೋಗದ ಭರವಸೆ ಮೂಡಿತು ಮತ್ತು ಎಷ್ಟು ಕುಟುಂಬಗಳ ಖರೀದಿ ಸಾಮರ್ಥ್ಯ ಬಲಗೊಂಡಿತು ಎಂಬುದರಿಂದ. ಕಾಗದದ ಮೇಲಿನ ಅಂಕಿ-ಅಂಶಗಳ ಏರಿಕೆಗಿಂತ, ಶ್ರೀಸಾಮಾನ್ಯನ ಬದುಕಿನ ಗುಣಮಟ್ಟ ಸುಧಾರಿಸುವುದೇ ನಿಜವಾದ ಆರ್ಥಿಕ ಪ್ರಗತಿ.

ಎಕಾನಮಿ 360: ಟಾಟಾದಲ್ಲಿ ಆಂತರಿಕ ಸಂಘರ್ಷ;ಭಾರತದ ಆರ್ಥಿಕತೆಯ ಮೇಲೂ ಆತಂಕದ ಕಾರ್ಮೋಡ
Dailyhunt
Disclaimer: This content has not been generated, created or edited by Dailyhunt. Publisher: Prajavani