ನವರಾತ್ರಿ ಅರ್ಧ ಮುಗಿದಿದೆ. ಇನ್ನೇನು ದೀಪಾವಳಿ ಸಂಭ್ರಮ ಶುರುವಾಗಲಿದ್ದು, ಅಖಿಲ ಭಾರತ ವರ್ತಕರ ಒಕ್ಕೂಟದ (ಸಿಎಐಟಿ) ಅಂದಾಜಿನ ಪ್ರಕಾರ, ಈ ಬಾರಿಯ ಹಬ್ಬದ ಋತುವಿನಲ್ಲಿ ಬರೋಬ್ಬರಿ ₹ 7 ಲಕ್ಷ ಕೋಟಿಗೂ ಅಧಿಕ ವಹಿವಾಟು ನಡೆಯುವ ನಿರೀಕ್ಷೆಯಿದೆ. ಮೇಲ್ನೋಟಕ್ಕೆ ಈ ಬೃಹತ್ ಮೊತ್ತವನ್ನು ನೋಡಿದರೆ, ಭಾರತೀಯರ ಕೊಳ್ಳುವ ಸಾಮರ್ಥ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ.
ದೇಶದ ಆರ್ಥಿಕತೆ ಭರ್ಜರಿಯಾಗಿ ಬೆಳವಣಿಗೆ ಕಾಣುತ್ತಿದೆ ಎಂಬ ಭಾವನೆ ಮೂಡುತ್ತದೆ.
ಎಕಾನಮಿ 360 | ಬೆಲೆ ಏರಿಕೆಯ ಬಿಸಿ: ಹರಗಿ ಗ್ರಾಮದಿಂದ ಕಲಿಯಬೇಕಿದೆ ಆರ್ಥಿಕ ಪಾಠಆದರೆ, ಮಾರುಕಟ್ಟೆಯ ವಿವಿಧ ವಲಯಗಳ ದತ್ತಾಂಶಗಳನ್ನು ಆಳವಾಗಿ ವಿಶ್ಲೇಷಿಸಿದಾಗ ಕಾಣುವ ಚಿತ್ರಣವೇ ಬೇರೆ. ಒಂದೆಡೆ ದುಬಾರಿ ಎಸ್‌ಯುವಿ ಕಾರುಗಳು, ಐಫೋನ್‌ಗಳು ಮತ್ತು ಐಷಾರಾಮಿ ಅಪಾರ್ಟ್‌ಮೆಂಟ್‌ಗಳಿಗೆ ಬೇಡಿಕೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಸಣ್ಣ ಕಾರುಗಳು, ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳು ಮತ್ತು ದಿನಬಳಕೆಯ ವಸ್ತುಗಳ ಮಾರಾಟ ನಿರೀಕ್ಷಿತ ವೇಗದಲ್ಲಿ ಏರಿಕೆಯಾಗುತ್ತಿಲ್ಲ; ಅಥವಾ ಕುಸಿತ ಕಾಣುತ್ತಿವೆ.
ಒಂದೇ ದೇಶದಲ್ಲಿ ಏಕಕಾಲಕ್ಕೆ ಕಾಣಿಸುತ್ತಿರುವ ಈ ವೈರುಧ್ಯವೇ ಈಗಿನ ಆರ್ಥಿಕತೆಯ ನಿಜವಾದ ಸಮಸ್ಯೆ. ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಾಗಿರುವುದೇನೋ ನಿಜ; ಆದರೆ, ಆ ಹಣ ಎಲ್ಲ ವರ್ಗಗಳ ಜನರ ಕೈಗೂ ಸಮಾನವಾಗಿ ತಲುಪುತ್ತಿದೆಯೇ? ಈ ಪ್ರಶ್ನೆಗೆ ಉತ್ತರ ಹುಡುಕುವಾಗ 'ಪ್ರೀಮಿಯಮೈಸೇಷನ್' ಮತ್ತು 'K-ಆಕಾರದ ಆರ್ಥಿಕ ಚೇತರಿಕೆ' ಎಂಬ ಎರಡು ಪರಿಕಲ್ಪನೆಗಳು ಕಾಣಸಿಗುತ್ತವೆ.
ಕಾರು ಮಾರುಕಟ್ಟೆಯಲ್ಲಿ ಈಗ ಹ್ಯಾಚ್‌ಬ್ಯಾಕ್‌ಗಳ ಕಾಲ ಹೋಗಿ ಎಸ್‌ಯುವಿಗಳದ್ದೇ ದರ್ಬಾರ್ ನಡೆಯುತ್ತಿದೆ. ಒಟ್ಟು ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಎಸ್‌ಯುವಿಗಳ ಪಾಲು ಶೇ 50ರ ಗಡಿ ದಾಟಿದೆ. ಕಡಿಮೆ ಬೆಲೆಯ ಎಂಟ್ರಿ ಲೆವೆಲ್ ಕಾರುಗಳ ಮಾರುಕಟ್ಟೆ ಕುಸಿತ ಕಾಣುತ್ತಿದೆ. ಈ ಬದಲಾವಣೆಯ ಹಿಂದೆ ಗ್ರಾಹಕರ ಆದ್ಯತೆಯಷ್ಟೇ ಅಲ್ಲ, ಅವರ ಕೊಳ್ಳುವ ಸಾಮರ್ಥ್ಯದಲ್ಲಿನ ವ್ಯತ್ಯಾಸವೂ ಇದೆ. ನಿರಂತರ ಹಣದುಬ್ಬರದ ಜೊತೆಗೆ ಕಾರಿನ ಬೆಲೆ, ವಿಮೆ, ನಿರ್ವಹಣಾ ವೆಚ್ಚ ಮತ್ತು ಸಾಲದ ದುಬಾರಿ ಕಂತುಗಳು ಹೊರೆಯಾಗಿರುವುದರಿಂದ ಕೆಳಮಧ್ಯಮ ವರ್ಗದವರು ಹೊಸ ಕಾರು ಖರೀದಿಸುವ ಕನಸನ್ನೇ ಮುಂದೂಡಿದ್ದಾರೆ.
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲೂ ಇದೇ ಕತೆ. ಈ ಹಬ್ಬದ ಸೀಸನ್‌ನಲ್ಲಿ ಮಾರಾಟವಾದ ಒಟ್ಟು ಫೋನ್‌ಗಳ ಸಂಖ್ಯೆ ಕುಸಿದಿದ್ದರೂ, ಮಾರಾಟದ ಮೌಲ್ಯ ಶೇ 6ರಷ್ಟು ಹೆಚ್ಚಾಗಿದೆ. ಅಂದರೆ, 10-15 ಸಾವಿರ ರೂಪಾಯಿ ಬೆಲೆಯ ಫೋನ್‌ಗಳ ಮಾರಾಟ ಡಲ್ ಆಗಿದೆ. ಬದಲಿಗೆ ದುಬಾರಿ ಫೋನ್‌ಗಳಿಗೆ ಬೇಡಿಕೆ ಹೆಚ್ಚಿದೆ. ಇದನ್ನೇ ಪ್ರೀಮಿಯಮೈಸೇಷನ್ ಎನ್ನುತ್ತಾರೆ. ಇಂದು ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಖರ್ಚಾಗುವ ಪ್ರತಿ ₹ 100 ರೂ.ಗಳಲ್ಲಿ ₹ 28 ಕೇವಲ ಆಪಲ್ ಕಂಪನಿಯ ಜೇಬು ಸೇರುತ್ತಿದೆ.
ಎಕಾನಮಿ 360 | ಎಐ ಟೈಮ್‌ಬಾಂಬ್: ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?ಮುಂದುವರಿದು, ಹಳ್ಳಿಗಳ ಕಿರಾಣಿ ಅಂಗಡಿಗಳತ್ತ ಕಣ್ಣು ಹಾಯಿಸಿದರೆ ಈ ಚಿತ್ರಣದ ಮತ್ತೊಂದು ಮುಖ ಕಾಣಿಸುತ್ತದೆ. ಆಹಾರದ ಹಣದುಬ್ಬರದಿಂದ ಕಂಗೆಟ್ಟಿರುವ ಗ್ರಾಮೀಣ ಕುಟುಂಬಗಳು ಕಿರಾಣಿ ಬಜೆಟ್ ಕಡಿತಗೊಳಿಸಿವೆ. ದಿನಬಳಕೆಯ ವಸ್ತುಗಳ ಮಾರಾಟ ಮಂಕಾಗಿದೆ. ಇಲ್ಲೊಂದು ಕುತೂಹಲಕಾರಿ ಅಂಶವೂ ಇದೆ. ಕೆಲವು ಗ್ರಾಹಕರು ದುಬಾರಿ ಶಾಂಪೂ, ಕಾಫಿಯಂತಹ ಪ್ರೀಮಿಯಂ ಉತ್ಪನ್ನಗಳನ್ನು ಖರೀದಿಸಲು ಆಸಕ್ತಿ ತೋರಿದರೂ, ದೊಡ್ಡ ಪ್ಯಾಕ್‌ಗಳ ಬದಲಿಗೆ ₹2-5 ಗಳ ಸಣ್ಣ ಸ್ಯಾಚೆಟ್‌ಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಅಂದರೆ, ಉತ್ತಮ ಬ್ರ್ಯಾಂಡ್‌ಗಳನ್ನು ಬಳಸುವ ಆಸೆ ಇದ್ದರೂ, ಒಮ್ಮೆಗೆ ಹೆಚ್ಚು ಹಣ ಖರ್ಚು ಮಾಡುವ ಸಾಮರ್ಥ್ಯ ಇಲ್ಲದಿರುವುದೇ ಈ 'ಸ್ಯಾಚೆಟ್' ಖರೀದಿಗೆ ಪ್ರಮುಖ ಕಾರಣ.
ರಿಯಲ್ ಎಸ್ಟೇಟ್ ವಲಯದಲ್ಲಿಯೂ ಇದೇ ಬೆಳವಣಿಗೆಯನ್ನು ಕಾಣಬಹುದು. ದೇಶದ ಪ್ರಮುಖ 8 ಮಹಾನಗರಗಳಲ್ಲಿ ಮಾರಾಟವಾಗುತ್ತಿರುವ ಒಟ್ಟು ಮನೆಗಳ ಪೈಕಿ ಶೇ 54ರಷ್ಟು ಮನೆಗಳು ₹1 ಕೋಟಿಗೂ ಅಧಿಕ ಬೆಲೆಯವು ಅಂತ ಸಮೀಕ್ಷೆಗಳು ಹೇಳುತ್ತಿವೆ. ಅಲ್ಟ್ರಾ-ಲಕ್ಸುರಿ (₹ 3 ಕೋಟಿಗೂ ಅಧಿಕ) ಫ್ಲ್ಯಾಟ್‌ಗಳ ಮಾರಾಟ ಭಾರಿ ಜಿಗಿತ ಕಂಡಿದೆ. ಆದರೆ, ₹ 45 ಲಕ್ಷ ಒಳಗಿನ ಕೈಗೆಟುಕುವ ದರದ ವಸತಿ ಮಾರಾಟ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ದುಬಾರಿ ಗೃಹಸಾಲದ ಬಡ್ಡಿ ದರ ಹಾಗೂ ಮನೆಗಳ ಬೆಲೆ ಏರಿಕೆಗೆ ಅನುಗುಣವಾಗಿ ಹೆಚ್ಚಾಗದ ವೇತನ ಸಾಮಾನ್ಯರ ಸ್ವಂತ ಮನೆಯ ಕನಸನ್ನು ಕಿತ್ತುಕೊಂಡಿದೆ.
ಈ ದತ್ತಾಂಶಗಳನ್ನು ಒಗ್ಗೂಡಿಸಿ ನೋಡಿದಾಗ 'K-ಆಕಾರದ ಚೇತರಿಕೆ'ಯ ಚಿತ್ರಣ ಸ್ಪಷ್ಟವಾಗು ಕಾಣಿಸುತ್ತದೆ. ಇಂಗ್ಲಿಷ್‌ನ 'K' ಅಕ್ಷರದ ಮೇಲ್ಮುಖ ರೇಖೆಯಂತೆ ಸಿರಿವಂತರ ಆದಾಯ ಮತ್ತು ಖರ್ಚು ವೇಗವಾಗಿ ಹೆಚ್ಚಾಗುತ್ತಿದೆ. ಅದೇ 'K' ಅಕ್ಷರದ ಕೆಳಮುಖ ರೇಖೆಯಂತೆ ಮಧ್ಯಮ ಮತ್ತು ಬಡ ವರ್ಗದ ಆರ್ಥಿಕ ಸ್ಥಿತಿ ಕುಸಿಯುತ್ತಿದೆ. ಆಸ್ತಿ ಮತ್ತು ಷೇರುಪೇಟೆಯ ಹೂಡಿಕೆಗಳಿಂದ ಲಾಭ ಪಡೆಯುತ್ತಿರುವ ಮೇಲ್ವರ್ಗ ಹೆಚ್ಚು ಖರ್ಚು ಮಾಡುತ್ತಿದ್ದರೆ, ಸೀಮಿತ ವೇತನ, ಅಸ್ಥಿರ ಆದಾಯ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚದಿಂದ ಕಂಗೆಟ್ಟಿರುವ ಸಾಮಾನ್ಯ ವರ್ಗ ಖರ್ಚಿಗೆ ಕಡಿವಾಣ ಹಾಕುತ್ತಿದೆ.
ಎಕಾನಮಿ 360: ಟಾಟಾದಲ್ಲಿ ಆಂತರಿಕ ಸಂಘರ್ಷ;ಭಾರತದ ಆರ್ಥಿಕತೆಯ ಮೇಲೂ ಆತಂಕದ ಕಾರ್ಮೋಡದುಬಾರಿ ವಸ್ತುಗಳ ಮಾರಾಟದಿಂದ ಮಾರುಕಟ್ಟೆಯ ಒಟ್ಟು ಮೌಲ್ಯ ಹೆಚ್ಚಾಗಬಹುದು. ಆದರೆ, ಸಾಮಾನ್ಯ ಕುಟುಂಬಗಳ ನೈಜ ಖರೀದಿ ಸಾಮರ್ಥ್ಯ ಹೆಚ್ಚಾಗದಿದ್ದರೆ, ದೇಶೀಯ ಬೇಡಿಕೆಯ ಸುಸ್ಥಿರ ಬೆಳವಣಿಗೆಗೆ ದೀರ್ಘಕಾಲದಲ್ಲಿ ಸವಾಲು ಎದುರಾಗಬಹುದು. ಹೀಗಾಗಿ, ನೀತಿ ನಿರೂಪಕರು ಕೇವಲ ಸಿರಿವಂತರ ಐಷಾರಾಮಿ ಬಳಕೆಯನ್ನೇ ನೋಡದೆ ಹಣದುಬ್ಬರ ನಿಯಂತ್ರಣ, ಗ್ರಾಮೀಣ ಆದಾಯ ಬಲವರ್ಧನೆ ಮತ್ತು ಉದ್ಯೋಗ ಸೃಷ್ಟಿಯತ್ತ ಹೆಚ್ಚು ಗಮನ ಹರಿಸಬೇಕಿದೆ.
ಭಾರತದ ಆರ್ಥಿಕತೆ ಬೆಳೆಯುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಆ ಬೆಳವಣಿಗೆಯ ಲಾಭ ಯಾರಿಗೆ ಹೆಚ್ಚು ಸಿಗುತ್ತಿದೆ, ಯಾರಿಗೆ ಕಡಿಮೆ ಸಿಗುತ್ತಿದೆ ಎಂಬ ಪ್ರಶ್ನೆಯೂ ಅಷ್ಟೇ ಮುಖ್ಯ.
ಐಷಾರಾಮಿ ಕಾರುಗಳ ಮಾರಾಟ ದಾಖಲೆ ನಿರ್ಮಿಸುವುದು, ದುಬಾರಿ ಫೋನ್‌ಗಳಿಗೆ ಬೇಡಿಕೆ ಹೆಚ್ಚುವುದು ಮತ್ತು ಪ್ರೀಮಿಯಂ ಮನೆಗಳ ಖರೀದಿ ಏರುವುದು ಮಾರುಕಟ್ಟೆಯ ಒಂದು ಮುಖ. ಸಾಮಾನ್ಯ ಕಾರು ಖರೀದಿಸುವ ಕನಸು ಮುಂದೂಡಲ್ಪಡುವುದು, ದಿನಸಿ ಖರ್ಚಿನಲ್ಲಿ ಕಡಿತವಾಗುವುದು ಮತ್ತು ಕೈಗೆಟುಕುವ ಮನೆಗಾಗಿ ಕಾಯುವುದು ಮತ್ತೊಂದು ಮುಖ.
ಈ ಎರಡು ಸಂಗತಿಗಳ ನಡುವಿನ ಅಂತರ ಹೆಚ್ಚಾಗುತ್ತಿದ್ದರೆ, ಅದು ಕೇವಲ ಗ್ರಾಹಕರ ಆದ್ಯತೆಯ ಬದಲಾವಣೆಯಲ್ಲ; ಆದಾಯ ಮತ್ತು ಅವಕಾಶಗಳ ಹಂಚಿಕೆಯಲ್ಲಿನ ಅಸಮಾನತೆಯ ಪ್ರತಿಬಿಂಬವಾಗುತ್ತದೆ.
ಆರ್ಥಿಕತೆಯ ಯಶಸ್ಸನ್ನು ಅಳೆಯಬೇಕಾದದ್ದು ಎಷ್ಟು ದುಬಾರಿ ಕಾರುಗಳು ಮಾರಾಟವಾದವು ಎಂಬುದರಿಂದ ಮಾತ್ರವಲ್ಲ; ಎಷ್ಟು ಸಾಮಾನ್ಯ ಕುಟುಂಬಗಳು ತಮ್ಮ ಮೊದಲ ಕಾರು ಖರೀದಿಸುವಂತಾದವು, ಎಷ್ಟು ಯುವಕರು ಸ್ಥಿರ ಆದಾಯದ ಉದ್ಯೋಗ ಪಡೆದರು ಮತ್ತು ಎಷ್ಟು ಕುಟುಂಬಗಳು ಬೆಲೆ ಏರಿಕೆಯ ಆತಂಕವಿಲ್ಲದೆ ಅಗತ್ಯ ವಸ್ತುಗಳನ್ನು ಕೊಳ್ಳುವಂತಾದವು ಎಂಬುದರಿಂದಲೂ ಅಳೆಯಬೇಕಾಗುತ್ತದೆ.
ಹಬ್ಬದ ಬೆಳಕು ಎಲ್ಲರ ಮನೆಗಳನ್ನೂ ತಲುಪಿದಾಗಲಷ್ಟೇ ಆರ್ಥಿಕ ಬೆಳವಣಿಗೆ ನಿಜವಾದ ಸಂಭ್ರಮವಾಗುತ್ತದೆ.
ಎಕಾನಮಿ 360 | ಯುಪಿಐ ಎಂಡಿಆರ್ ಶುಲ್ಕ: ಸಾರ್ವಜನಿಕ ಸೇವೆಗೆ ಬೆಲೆ ಕಟ್ಟಿದಾಗ...
