ಇತ್ತೀಚೆಗೆ ಕರ್ನಾಟಕದ ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಒಂದಿಷ್ಟು ಜಿಲ್ಲೆಗಳಲ್ಲಿ ಸುತ್ತಾಡಿದಾಗ ಕಣ್ಣಿಗೆ ಕಂಡ ದೃಶ್ಯಗಳು ಗಾಬರಿ ಬೀಳಿಸುವಂತಿದ್ದವು. ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಗದ್ದೆಗಳು ಬೇಸಾಯವಿಲ್ಲದೆ ಬಿರುಕು ಬಿಟ್ಟು ನಿಂತಿದ್ದವು. ಅಲ್ಲೊಂದು ಇಲ್ಲೊಂದು ಕಡೆ ಹಿಂಗಾರು ಮಳೆ ಆರಂಭವಾಗುವ ಹೊತ್ತಿಗೆ ಜನರು ನಾಟಿ ಮುಗಿಸಿದ್ದರು.
ಮಳೆ ಕೊರತೆಯಿಂದ ರಾಜ್ಯದ ಹಲವು ಭಾಗಗಳಲ್ಲಿ ಕೃಷಿ ಚಟುವಟಿಕೆಗಳು ಕುಂಠಿತವಾಗಿರುವುದನ್ನು ಇದು ಸ್ಪಷ್ಟವಾಗಿ ಹೇಳುತ್ತಿತ್ತು. ಪರಿಸ್ಥಿತಿ ಎಷ್ಟು ಗಂಭೀರವಾಗಿದೆಯೆಂದರೆ, ಅಪ್ಪಟ ಮಲೆನಾಡಿನ ತಾಲ್ಲೂಕುಗಳೂ ಬರಪೀಡಿತ ಪಟ್ಟಿಗೆ ಸೇರಿವೆ. ಮಳೆ ಕೊರತೆಯ ನಡುವೆ ಮುಂಗಾರು ಮುಗಿದಿದೆ. ಈಗ ಆಗೊಮ್ಮೆ ಈಗೊಮ್ಮೆ ಹಿಂಗಾರು ಮಳೆ ಸುರಿಯುತ್ತಿದ್ದರೂ, ಕೃಷಿ ಮತ್ತು ಜಲಮೂಲಗಳ ಮೇಲೆ ಉಂಟಾಗಿರುವ ಒತ್ತಡ ತಕ್ಷಣಕ್ಕೆ ಕಡಿಮೆಯಾಗುವ ಲಕ್ಷಣಗಳಿಲ್ಲ.
ಎಕಾನಮಿ 360 | ಎಐ ಟೈಮ್ಬಾಂಬ್: ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?ಇದರ ಪರಿಣಾಮ ಪ್ರತಿಯೊಬ್ಬರ ಅಡುಗೆಮನೆಗೂ ಬ್ಯಾಂಕ್ ಖಾತೆಗೂ ತಲುಪಲಿದೆ. ರೈತರ ಬೆಳೆ ನಷ್ಟದ ಪರಿಣಾಮ, ಕೇವಲ ನಾಲ್ಕೇ ತಿಂಗಳಲ್ಲಿ ಅಕ್ಕಿಯ ದರ ನಾಲ್ಕು ಬಾರಿ ಏರಿಕೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿಯೇ 25 ಕೆ.ಜಿ. ಸೋನಾ ಮಸೂರಿ ಅಕ್ಕಿ ಚೀಲದ ದರ ₹ 1,400 ಆಸುಪಾಸಿನಿಂದ ₹ 1,800ರ ಗಡಿ ದಾಟಿದೆ. ತೊಗರಿ ಸೇರಿದಂತೆ ಬೇಳೆಕಾಳುಗಳು ಮತ್ತು ತರಕಾರಿಗಳ ದರವೂ ಗಗನಮುಖಿಯಾಗಿವೆ. ಇದು ಮಧ್ಯಮ ವರ್ಗದವರ ಬಜೆಟ್ ಅನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ಒಂದೆಡೆ ಮಳೆ ಕೊರತೆಯಿಂದ ಇಳುವರಿ ಕುಂಠಿತವಾಗಿದ್ದರೆ, ಮತ್ತೊಂದೆಡೆ ಜಾಗತಿಕ ಸಂಘರ್ಷಗಳಿಂದ ಇಂಧನ ಮತ್ತು ಸಾಗಣೆ ವೆಚ್ಚ ಹೆಚ್ಚುವ ಭೀತಿ ಬೆಲೆ ಏರಿಕೆಯ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ.
ಇದೇ ಹೊತ್ತಿನಲ್ಲಿ ವಿದೇಶಾಂಗ ಸಚಿವರು ಜನಸಾಮಾನ್ಯರು ಆತಂಕಪಡುವಂತಹ ಹೇಳಿಕೆ ನೀಡಿದ್ದಾರೆ. ಸಾಮಾನ್ಯವಾಗಿ ಸರ್ಕಾರದ ಉನ್ನತ ಸ್ಥಾನದಲ್ಲಿರುವವರು ಈ ರೀತಿಯ ಎಚ್ಚರಿಕೆ ನೀಡುವುದು ಅಪರೂಪ. ಆದರೆ, ನ್ಯೂಯಾರ್ಕ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, 'ಮುಂಬರುವ ತಿಂಗಳುಗಳಲ್ಲಿ ಜಗತ್ತು ದೊಡ್ಡ ಆಹಾರ ಬಿಕ್ಕಟ್ಟನ್ನು ಎದುರಿಸಬಹುದು' ಎಂದು ಎಚ್ಚರಿಸಿದ್ದಾರೆ.
ಅವರ ಪ್ರಕಾರ, ಜಗತ್ತು ಈಗ ಹಲವು ದಿಕ್ಕುಗಳಿಂದ ಆಘಾತ ಎದುರಿಸುತ್ತಿದೆ. ಉಕ್ರೇನ್-ರಷ್ಯಾ ಯುದ್ಧ, ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಗಲ್ಫ್ ಪ್ರದೇಶವನ್ನು ಒಳಗೊಂಡ ಸಂಘರ್ಷ, ಎಲ್ ನಿನೊ ಸೇರಿದಂತೆ ಹವಾಮಾನ ವೈಪರೀತ್ಯಗಳು ಹಾಗೂ ಜಾಗತಿಕ ಅನಿಶ್ಚಿತತೆಯಿಂದಾಗಿ ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕತೆಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ರಷ್ಯಾ ಮತ್ತು ಪಶ್ಚಿಮ ಏಷ್ಯಾದ ಸಂಘರ್ಷಗಳಿಂದ ರಸಗೊಬ್ಬರ ಹಾಗೂ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಇಂಧನ ಮತ್ತು ರಸಗೊಬ್ಬರ ದುಬಾರಿಯಾದರೆ ಕೃಷಿ ಉತ್ಪಾದನಾ ವೆಚ್ಚವೂ ಹೆಚ್ಚುತ್ತದೆ. ಪ್ರಮುಖ ಆಹಾರ ಉತ್ಪಾದಕ ರಾಷ್ಟ್ರಗಳಿಂದ ಧಾನ್ಯಗಳ ಸಾಗಣೆಗೆ ಅಡ್ಡಿಯಾದರೆ ಪೂರೈಕೆಯ ಮೇಲೂ ಪರಿಣಾಮ ಬೀರುತ್ತದೆ. ಇವೆಲ್ಲ ಕಾರಣಗಳಿಂದ ಆಹಾರದ ಬೆಲೆ ಏರಿಕೆ ಮತ್ತು ಆಹಾರ ಭದ್ರತೆಯ ಆತಂಕ ಮತ್ತಷ್ಟು ಹೆಚ್ಚಬಹುದು.
ಈ ಆತಂಕ ಕೇವಲ ಅಂತರರಾಷ್ಟ್ರೀಯ ವೇದಿಕೆಗಳಿಗೆ ಸೀಮಿತವಾಗಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ದೇಶದ 19 ಪ್ರಮುಖ ನಗರಗಳಲ್ಲಿ ನಡೆಸಿದ ಕುಟುಂಬಗಳ ಹಣದುಬ್ಬರ ನಿರೀಕ್ಷೆಗಳ ಸಮೀಕ್ಷೆಯಲ್ಲಿ ಬಹುತೇಕ ಕುಟುಂಬಗಳು ಮುಂಬರುವ ದಿನಗಳಲ್ಲಿ ಹಣದುಬ್ಬರ ಶೇ 10ರ ಗಡಿ ಮುಟ್ಟಬಹುದು ಎಂದು ಆತಂಕ ವ್ಯಕ್ತಪಡಿಸಿವೆ. ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಜನರ ಕೊಳ್ಳುವ ಸಾಮರ್ಥ್ಯ ಮತ್ತು ವಿಶ್ವಾಸ ಕುಸಿದಿದೆ.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಎಕಾನಮಿ 360 | ಬೆಲೆ ಏರಿಕೆಯ ಬಿಸಿ: ಹರಗಿ ಗ್ರಾಮದಿಂದ ಕಲಿಯಬೇಕಿದೆ ಆರ್ಥಿಕ ಪಾಠ!
ಒಂದು ಸಾಲಿನಲ್ಲಿಬರಗಾಲ ಮತ್ತು ಜಾಗತಿಕ ಬಿಕ್ಕಟ್ಟುಗಳಿಂದ ಉಂಟಾದ ಬೆಲೆ ಏರಿಕೆಯ ಸಂದರ್ಭದಲ್ಲಿ, ಹರಗಿ ಗ್ರಾಮದಂತೆ ಆರ್ಥಿಕ ಶಿಸ್ತನ್ನು ಪಾಲಿಸುವುದು ಅನಿವಾರ್ಯವಾಗಿದೆ.
ಪ್ರಮುಖ ಪ್ರಶ್ನೋತ್ತರ
ಬೆಲೆ ಏರಿಕೆಗೆ ಮುಖ್ಯ ಕಾರಣಗಳೇನು?
ಮಳೆ ಕೊರತೆಯಿಂದ ಕೃಷಿ ಇಳುವರಿ ಕುಂಠಿತವಾಗಿರುವುದು ಮತ್ತು ರಷ್ಯಾ-ಉಕ್ರೇನ್ ಸೇರಿದಂತೆ ಜಾಗತಿಕ ಸಂಘರ್ಷಗಳಿಂದ ಇಂಧನ ಹಾಗೂ ರಸಗೊಬ್ಬರ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುವುದು ಬೆಲೆ ಏರಿಕೆಗೆ ಕಾರಣ.
ಭಾರತೀಯ ವಿದೇಶಾಂಗ ಸಚಿವರ ಎಚ್ಚರಿಕೆ ಏನು?
ಉಕ್ರೇನ್-ರಷ್ಯಾ ಯುದ್ಧ, ಹವಾಮಾನ ವೈಪರೀತ್ಯಗಳು ಮತ್ತು ಜಾಗತಿಕ ಅನಿಶ್ಚಿತತೆಗಳಿಂದಾಗಿ ಮುಂದಿನ ದಿನಗಳಲ್ಲಿ ಜಗತ್ತು ತೀವ್ರ ಆಹಾರ ಬಿಕ್ಕಟ್ಟನ್ನು ಎದುರಿಸಬಹುದು ಎಂದು ಎಸ್. ಜೈಶಂಕರ್ ಎಚ್ಚರಿಸಿದ್ದಾರೆ.
ರೆಪೊ ದರ ಹೆಚ್ಚಳದಿಂದ ಸಾಮಾನ್ಯರ ಮೇಲಾಗುವ ಪರಿಣಾಮವೇನು?
ರೆಪೊ ದರ ಹೆಚ್ಚಳದಿಂದ ಬ್ಯಾಂಕುಗಳು ಬಡ್ಡಿದರಗಳನ್ನು ಏರಿಸಲಿದ್ದು, ಇದರಿಂದ ಗೃಹ ಮತ್ತು ವಾಹನ ಸಾಲಗಳ ಇಎಂಐ ಹೆಚ್ಚಾಗುವ ಅಥವಾ ಸಾಲದ ಅವಧಿ ವಿಸ್ತರಣೆಯಾಗುವ ಸಾಧ್ಯತೆಯಿದೆ.
ಶ್ರಿಂಕ್ಫ್ಲೇಷನ್ (Shrinkflation) ಎಂದರೇನು?
ಕಂಪನಿಗಳು ಬೆಲೆಯನ್ನು ಹಾಗೆಯೇ ಇಟ್ಟು, ಪ್ಯಾಕೆಟ್ನೊಳಗಿನ ಉತ್ಪನ್ನದ ಪ್ರಮಾಣ ಅಥವಾ ತೂಕವನ್ನು ಕಡಿಮೆ ಮಾಡುವುದನ್ನು ಶ್ರಿಂಕ್ಫ್ಲೇಷನ್ ಎಂದು ಕರೆಯಲಾಗುತ್ತದೆ.
ಹರಗಿ ಗ್ರಾಮದ ಆರ್ಥಿಕ ಮಾದರಿ ಏನು?
ಪ್ರತಿಷ್ಠೆಗಾಗಿ ಮಾಡುವ ಅನಗತ್ಯ ದುಂದುವೆಚ್ಚ ಮತ್ತು ಬೀಗರೂಟದಂತಹ ಸಮಾರಂಭಗಳಿಗೆ ಕಡಿವಾಣ ಹಾಕಲು ಹರಗಿ ಗ್ರಾಮಸ್ಥರು ದಂಡದ ನಿಯಮವನ್ನು ಜಾರಿಗೆ ತರುವ ಮೂಲಕ ಉಳಿತಾಯದ ಪಾಠ ಕಲಿಸಿದ್ದಾರೆ.
ಪ್ರಮುಖ ಅಂಕಿಅಂಶಗಳು
1,400 ರಿಂದ 1,800 ರೂಪಾಯಿಸೋನಾ ಮಸೂರಿ ಅಕ್ಕಿ ಬೆಲೆ ಏರಿಕೆಶೇ 0.25ಆರ್ಬಿಐ ರೆಪೊ ದರ ಹೆಚ್ಚಳಶೇ 5.50ನಿಗದಿಪಡಿಸಿದ ಹೊಸ ರೆಪೊ ದರಶೇ 10ಹಣದುಬ್ಬರ ಏರಿಕೆಯ ಸಾಧ್ಯತೆ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಎಕಾನಮಿ 360: ಟಾಟಾದಲ್ಲಿ ಆಂತರಿಕ ಸಂಘರ್ಷ;ಭಾರತದ ಆರ್ಥಿಕತೆಯ ಮೇಲೂ ಆತಂಕದ ಕಾರ್ಮೋಡಜನರ ಈ ಆತಂಕ ಮತ್ತು ಮಾರುಕಟ್ಟೆಯ ನೈಜ ಪರಿಸ್ಥಿತಿಯನ್ನು ಅರಿತ ಆರ್ಬಿಐ ಅಕ್ಟೋಬರ್ 7ರಂದು ರೆಪೊ ದರವನ್ನು ಶೇ 0.25ರಷ್ಟು ಹೆಚ್ಚಿಸಿ ಶೇ 5.50ಕ್ಕೆ ನಿಗದಿಪಡಿಸಿದೆ. ಸುಮಾರು ನಾಲ್ಕು ವರ್ಷಗಳ ಬಳಿಕ ಈ ಕ್ರಮ ಕೈಗೊಂಡಿದ್ದು, ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದ ಹಣಕಾಸು ನೀತಿ ಸಮಿತಿ ಹಂತ ಹಂತದ ಬಿಗಿ ಕ್ರಮದ ಮೊರೆಹೋಗಿದೆ.
ರೆಪೊ ದರ ಏರಿಕೆಯ ಪರಿಣಾಮ ಬ್ಯಾಂಕುಗಳು ತಮ್ಮ ಸಾಲದ ಬಡ್ಡಿದರಗಳನ್ನು ಹೆಚ್ಚಿಸಿದರೆ, ಗೃಹ ಸಾಲ ಮತ್ತು ವಾಹನ ಸಾಲಗಳ ಇಎಂಐ ಹೆಚ್ಚಾಗಬಹುದು ಅಥವಾ ಸಾಲದ ಅವಧಿ ವಿಸ್ತರಿಸಬಹುದು. ಈಗಾಗಲೇ ದಿನಸಿ, ಇಂಧನ ಮತ್ತು ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಒತ್ತಡದಲ್ಲಿರುವ ಮಧ್ಯಮ ವರ್ಗದ ಕುಟುಂಬಗಳಿಗೆ ಇದು ಮತ್ತೊಂದು ಸವಾಲಾಗಲಿದೆ.
ಹಣದುಬ್ಬರ ಕೇವಲ ಬ್ಯಾಂಕ್ ಬಡ್ಡಿದರಗಳಲ್ಲಿ ಮಾತ್ರವಲ್ಲ, ನಿಮ್ಮ ದಿನಸಿ ಚೀಲದಲ್ಲೂ ಕಣ್ಣಾಮುಚ್ಚಾಲೆ ಆಡುತ್ತಿದೆ. ಬೆಲೆ ಹೆಚ್ಚಿಸಿದರೆ ಜನ ಖರೀದಿಸುವುದಿಲ್ಲ ಎಂಬ ಭಯದಿಂದ ಎಫ್ಎಂಸಿಜಿ ಕಂಪನಿಗಳು ಸೋಪು, ಬಿಸ್ಕೆಟ್, ಅಡುಗೆ ಎಣ್ಣೆಯಂತಹ ಉತ್ಪನ್ನಗಳ ಪ್ಯಾಕೆಟ್ಗಳ ಬೆಲೆಯನ್ನು ಹಾಗೆಯೇ ಉಳಿಸಿಕೊಂಡು, ಒಳಗಿನ ಪ್ರಮಾಣವನ್ನು ಕಡಿಮೆ ಮಾಡುತ್ತಿವೆ. ಇದನ್ನು 'ಶ್ರಿಂಕ್ಫ್ಲೇಷನ್' ಎಂದು ಕರೆಯಲಾಗುತ್ತದೆ. ಹತ್ತೇ ರೂಪಾಯಿಗೆ ಬಿಸ್ಕೆಟ್ ಸಿಗುತ್ತಿದೆ ಎಂದು ನೀವು ಖುಷಿಪಡುವಾಗ, ಅದೇ ಬೆಲೆಗೆ ಸಿಗುವ ಪ್ಯಾಕೆಟ್ನಲ್ಲಿನ ಬಿಸ್ಕೆಟ್ಗಳ ಸಂಖ್ಯೆ ಅಥವಾ ಒಟ್ಟು ತೂಕ ಕಡಿಮೆಯಾಗಿರಬಹುದು. ಅಂದರೆ, ಬೆಲೆ ಬದಲಾಗದಿದ್ದರೂ ನೀವು ಖರೀದಿಸುವ ಪ್ರಮಾಣ ಕಡಿಮೆಯಾಗಿರುತ್ತದೆ.
ಜಾಗತಿಕ ಯುದ್ಧಗಳು, ಎಲ್ ನಿನೊ ಪ್ರಭಾವ ಮತ್ತು ಆರ್ಬಿಐನ ನೀತಿಗಳು ನಮ್ಮ ನಿಯಂತ್ರಣದಲ್ಲಿಲ್ಲ ನಿಜ. ಆದರೆ ನಮ್ಮ ಆರ್ಥಿಕ ಶಿಸ್ತು ಖಂಡಿತವಾಗಿಯೂ ನಮ್ಮ ಕೈಯಲ್ಲಿದೆ. ಬರಗಾಲ ಮತ್ತು ಏರುತ್ತಿರುವ ಬೆಲೆಗಳ ನಡುವೆ ನಾವು ಹೇಗೆ ಬದುಕಬೇಕು ಎಂಬುದಕ್ಕೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹರಗಿ ಗ್ರಾಮಸ್ಥರು ಇಡೀ ರಾಜ್ಯಕ್ಕೆ ಒಂದು ಗಮನಾರ್ಹ ಮಾದರಿಯನ್ನು ತೋರಿಸಿದ್ದಾರೆ.
ಎಕಾನಮಿ 360|ಕೈಯಲ್ಲಿ ಪದವಿ, ಕೆಲಸಕ್ಕೆ ಕೌಶಲವಿಲ್ಲ: ಯುವಜನತೆ ಹೊರೆಯಾಗುವ ಮುನ್ನ..ಮದುವೆ ಮುಗಿದ ಬಳಿಕ ಸಂಬಂಧಿಕರಿಗೆ ಅದ್ದೂರಿಯಾಗಿ 'ಬೀಗರೂಟ' (ಬಾಡೂಟ) ಹಾಕಿಸುವ ಪ್ರತಿಷ್ಠೆಗಾಗಿ, ಬಡ ಮತ್ತು ಮಧ್ಯಮ ವರ್ಗದ ಹೆಣ್ಣು ಹೆತ್ತ ಪೋಷಕರು ಲಕ್ಷಾಂತರ ರೂಪಾಯಿ ಸಾಲದ ಸುಳಿಗೆ ಸಿಲುಕುತ್ತಿದ್ದರು. ಇದನ್ನು ಮನಗಂಡ ಹರಗಿ ಗ್ರಾಮದ ಆಂಜನೇಯ ದೇವಸ್ಥಾನದ ಸಮಿತಿ ಮತ್ತು ಗ್ರಾಮಸ್ಥರು ಒಗ್ಗಟ್ಟಾಗಿ, ಗ್ರಾಮದಲ್ಲಿ ಬೀಗರೂಟ ಆಯೋಜಿಸುವುದನ್ನು ನಿಷೇಧಿಸುವ ನಿರ್ಧಾರ ಕೈಗೊಂಡಿದ್ದಾರೆ. ನಿಯಮ ಮೀರಿ ಊಟ ಹಾಕಿಸಿದರೆ ₹ 1 ಲಕ್ಷ ಮತ್ತು ಅಂತಹ ಊಟಕ್ಕೆ ಹೋದವರಿಗೆ ₹ 50 ಸಾವಿರ ದಂಡ ವಿಧಿಸಲು ನಿರ್ಧರಿಸಿದ್ದಾರೆ.
ಗ್ರಾಮಸ್ಥರ ಈ ನಿರ್ಧಾರಕ್ಕೆ ಕಾನೂನಾತ್ಮಕವಾಗಿ ಯಾವ ಸ್ಥಾನಮಾನವಿದೆ ಎಂಬುದು ಪ್ರತ್ಯೇಕ ಚರ್ಚೆಯ ವಿಷಯ. ಆದರೆ, ಪ್ರತಿಷ್ಠೆಯ ಹೆಸರಿನಲ್ಲಿ ಸಾಲ ಮಾಡಿ ದುಂದುವೆಚ್ಚ ಮಾಡುವ ಪ್ರವೃತ್ತಿಗೆ ಕಡಿವಾಣ ಹಾಕುವ ಪ್ರಯತ್ನವಾಗಿ ಇದು ಗಮನ ಸೆಳೆಯುತ್ತದೆ. ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಪ್ರತಿಯೊಂದು ಊರು, ಪ್ರತಿಯೊಂದು ಮನೆಯೂ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಬೇಕಿದೆ.
ಮುಂಬರುವ ದಿನಗಳಲ್ಲಿ ಆರ್ಥಿಕ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ, ಹರಗಿ ಗ್ರಾಮಸ್ಥರಂತೆ ನಾವೂ ಮದುವೆ, ಮುಂಜಿ, ಹಬ್ಬ-ಹರಿದಿನಗಳ ಹೆಸರಿನಲ್ಲಿ ಮಾಡುವ ಅನಗತ್ಯ ಐಷಾರಾಮಿ ದುಂದುವೆಚ್ಚಗಳಿಗೆ ಬ್ರೇಕ್ ಹಾಕಬೇಕಿದೆ. ಈಗ ಹಬ್ಬದ ಋತು. ವಿವಿಧ ಸೇಲ್ಗಳು ಜಾರಿಯಲ್ಲಿವೆ. ಆಫರ್, ಕೊಡುಗೆ, ರಿಯಾಯಿತಿ ಎಂದೆಲ್ಲ ಕಂಪನಿಗಳು ವಸ್ತುಗಳನ್ನು ಮಾರಾಟಕ್ಕೆ ಇಟ್ಟಿವೆ. ರಿಯಾಯಿತಿ ಸಿಗುತ್ತಿದೆ ಎಂಬ ಕಾರಣಕ್ಕೆ ಅಗತ್ಯವಿಲ್ಲದ ವಸ್ತುಗಳನ್ನು ಖರೀದಿಸುವುದು ಉಳಿತಾಯವಲ್ಲ; ಅದು ಹೆಚ್ಚುವರಿ ಖರ್ಚು.
ಎಕಾನಮಿ 360: ಅಲ್ಲಿ ಎನ್ವಿಡಿಯಾ ಕ್ರಾಂತಿ, ನಮ್ಮಲ್ಲಿ ಐಸ್ಕ್ರೀಂ ಭ್ರಾಂತಿ!ಈ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ ಸಾಲ ಮತ್ತು ಇಎಂಐ ಆಮಿಷಗಳಿಂದ ಸಾಧ್ಯವಾದಷ್ಟು ದೂರವಿದ್ದು, ಆದಾಯಕ್ಕೆ ತಕ್ಕಂತೆ ಖರ್ಚು ಮಾಡುವುದು, ಅನಗತ್ಯ ಸಾಲ ತಪ್ಪಿಸುವುದು ಮತ್ತು ಕನಿಷ್ಠ ಕೆಲವು ತಿಂಗಳ ಅಗತ್ಯ ವೆಚ್ಚಗಳನ್ನು ನಿಭಾಯಿಸಬಲ್ಲ ತುರ್ತು ನಿಧಿಯನ್ನು ರೂಪಿಸಿಕೊಳ್ಳುವುದು ಮುಖ್ಯ. ಅನಿರೀಕ್ಷಿತ ವೆಚ್ಚಗಳು ಎದುರಾದಾಗ ಈ ಉಳಿತಾಯವೇ ಕುಟುಂಬಕ್ಕೆ ಆಸರೆಯಾಗಬಲ್ಲದು.
ಜಾಗತಿಕ ಬಿಕ್ಕಟ್ಟನ್ನು ನಾವು ತಡೆಯಲಾರೆವು. ಮಳೆಯನ್ನೂ, ಮಾರುಕಟ್ಟೆಯನ್ನೂ ನಮ್ಮಿಚ್ಛೆಯಂತೆ ಬದಲಾಯಿಸಲಾರೆವು. ಆದರೆ ಸಂಕಷ್ಟ ಎದುರಾದಾಗ ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಕುಸಿಯದಂತೆ ಮುನ್ನೆಚ್ಚರಿಕೆ ವಹಿಸಬಹುದು. ಎಚ್ಚರಿಕೆ ಇರಲಿ; ಮುಂದಿನ ದಿನಗಳು ನಮ್ಮ ಆರ್ಥಿಕ ಶಿಸ್ತಿಗೂ ವಿವೇಚನೆಗೂ ಪರೀಕ್ಷೆಯಾಗಲಿವೆ.
ಎಕಾನಮಿ 360 | ₹ 22,000 ಕೋಟಿ 'ಹೇರ್ಕಟ್ʼ! ಇದೆಂಥಾ (ಅ)ವ್ಯವಸ್ಥೆ?
