Dailyhunt Logo
  • Light mode
    Follow system
    Dark mode
    • Play Story
    • App Story
ಹಿಮಾಲಯದ ಪ್ರವಾಹವನ್ನು ಊಹಿಸುವುದು ಏಕೆ ಕಷ್ಟ? ವಿಜ್ಞಾನಿಗಳಿಗೆ ಸವಾಲುಗಳೇನು?

ಹಿಮಾಲಯದ ಪ್ರವಾಹವನ್ನು ಊಹಿಸುವುದು ಏಕೆ ಕಷ್ಟ? ವಿಜ್ಞಾನಿಗಳಿಗೆ ಸವಾಲುಗಳೇನು?

ಹಿಮಾಲಯದ ಪರ್ವತಗಳಿಂದ ಅತಿವೇಗದಲ್ಲಿ ಹರಿದು ಬಂದ ಕೆಸರಿನ ಪ್ರವಾಹ ಕ್ಷಣ ಮಾತ್ರದಲ್ಲೇ ಕಟ್ಟಡಗಳನ್ನು ನುಂಗಿ ಹಾಕಿತು. ಇಂತಹ ಮಾರಣಾಂತಿಕ ಪ್ರವಾಹವನ್ನು ಮೊದಲೇ ಊಹಿಸಲು ಅಥವಾ ತ್ವರಿತವಾಗಿ ಪತ್ತೆಹಚ್ಚಲು ಸಾಧ್ಯವಿತ್ತೇ? ಹಾಗೆ ಮಾಡಿದ್ದರೆ ಕೆಳ ಭಾಗದಲ್ಲಿದ್ದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಇನ್ನಷ್ಟು ಸಮಯ ಸಿಗುತ್ತಿತ್ತೇ?

ಎಂಬ ಪ್ರಶ್ನೆಗಳನ್ನು ನೇಪಾಳದ ಈ ವಿನಾಶಕಾರಿ ದುರಂತ ಮುಂದಿಟ್ಟಿದೆ.

ನೇಪಾಳ ದುರಂತ: ಹಿಮಾಲಯದ ನೀರ್ಗಲ್ಲುಗಳ ಮೇಲೆ ಭಾರತದಿಂದ ತೀವ್ರ ನಿಗಾ

ನೇಪಾಳ ಹಾಗೂ ಟಿಬೆಟ್‌ನಲ್ಲಿ ಸಂಭವಿಸಿದ ಹಠಾತ್ ಪ್ರವಾಹವು ಎರಡು ತೀವ್ರ ಭೂಕುಸಿತ ಹಾಗೂ ನೀರ್ಗಲ್ಲು ಸ್ಫೋಟದಿಂದ ಸಂಭವಿಸಿದೆ. ಹೀಗಾಗಿ ಭಾರಿ ಪ್ರಮಾಣದ ನೀರು ಹರಿದು ಬಂದಿದೆ. ಇಂತಹ ಅವಘಡಗಳನ್ನು ಅಂದಾಜು ಮಾಡಲು ಸಾಧ್ಯವಿಲ್ಲ ಎನ್ನುವುದು ದುರಂತ ತಜ್ಞರ ಅಭಿಪ್ರಾಯ.

ಹಿಮನದಿ ಅಪಾಯಗಳ ಮೇಲ್ವಿಚಾರಣೆ ಮತ್ತು ಮುನ್ನೆಚ್ಚರಿಕೆ ವ್ಯವಸ್ಥೆಗಳು ಸಾಮಾನ್ಯವಾಗಿ ನಿರ್ದಿಷ್ಟ ಅಪಾಯ ಪ್ರದೇಶದ ಮೇಲೆ ಮಾತ್ರ ಗಮನಹರಿಸುತ್ತವೆ. ಉದಾಹರಣೆಗೆ, ನೀರ್ಗಲ್ಲು ಕರಗಿದಾಗ ಅದರ ನೀರು ಸೇರಿ ಹಿಮ ಸರೋವರ ಉಂಟಾಗುತ್ತದೆ. ಈ ಸರೋವರಗಳಲ್ಲಿ ನೀರಿನ ಮಟ್ಟ ಇದ್ದಕ್ಕಿದ್ದಂತೆ ಏರುತ್ತಿದೆಯೇ ಎಂದಷ್ಟೇ ಗಮನಿಸಲಾಗುತ್ತದೆ.

ಪ್ರವಾಹ ಯಾವಾಗ ಸಂಭವಿಸಬಹುದು ಮತ್ತು ಕೆಳಭಾಗದಲ್ಲಿರುವ ಜನರಿಗೆ ಎಷ್ಟು ಅಪಾಯವಿದೆ ಎಂಬುದನ್ನು ಅಂದಾಜಿಸಲು ವಿಜ್ಞಾನಿಗಳು ರಿಯಲ್ ಟೈಮ್‌ ವಿಡಿಯೊ, ನೀರಿನ ಮಟ್ಟವನ್ನು ಅಳೆಯುವ ಲೇಸರ್‌ಗಳು ಮತ್ತು ಆಗಾಗ್ಗೆ ನಡೆಸುವ ಸ್ಥಳ ಪರಿಶೀಲನೆಗಳನ್ನು ಬಳಸುತ್ತಾರೆ. ಆದರೆ, ನೇಪಾಳದಲ್ಲಿ ಸಂಭವಿಸಿದಂತೆ ಪರ್ವತದ ಒಂದು ಭಾಗವೇ ಏಕಾಏಕಿ ಕುಸಿದರೆ ಅದನ್ನು ಮುಂಚಿತವಾಗಿ ಊಹಿಸುವುದು ಹೆಚ್ಚು ಕಷ್ಟ ಎಂದು ವಿಪತ್ತು ನಿರ್ವಹಣಾ ತಜ್ಞರು ಹೇಳುತ್ತಾರೆ. ಇಂತಹ ಘಟನೆಗಳನ್ನು ಊಹಿಸಲು ದೊಡ್ಡ ಪ್ರದೇಶದಲ್ಲಿ ನಿರಂತರವಾಗಿ ಮತ್ತು ಹೆಚ್ಚಿನ ಸಂಪನ್ಮೂಲ ಬಳಸಿ ಮೇಲ್ವಿಚಾರಣೆ ಮಾಡಬೇಕಾಗುತ್ತದೆ.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ಹಿಮಾಲಯದ ಪ್ರವಾಹವನ್ನು ಊಹಿಸುವುದು ಏಕೆ ಕಷ್ಟ? ವಿಜ್ಞಾನಿಗಳಿಗೆ ಸವಾಲುಗಳೇನು?

ಒಂದು ಸಾಲಿನಲ್ಲಿಹಿಮಾಲಯದ ದುರ್ಗಮ ಪ್ರದೇಶಗಳಲ್ಲಿ ಸಂಭವಿಸುವ ಹಠಾತ್ ಪ್ರವಾಹಗಳನ್ನು ಮುಂಚಿತವಾಗಿ ಊಹಿಸುವುದು ಭೌಗೋಳಿಕ ಸವಾಲುಗಳು ಮತ್ತು ತಾಂತ್ರಿಕ ಮಿತಿಗಳಿಂದಾಗಿ ವಿಜ್ಞಾನಿಗಳಿಗೆ ಅತ್ಯಂತ ಕಷ್ಟಕರವಾಗಿದೆ.

ಪ್ರಮುಖ ಪ್ರಶ್ನೋತ್ತರ


ಹಿಮಾಲಯದ ಪ್ರವಾಹವನ್ನು ಊಹಿಸುವುದು ಏಕೆ ಕಷ್ಟ?

ಪರ್ವತದ ಒಂದು ಭಾಗ ಏಕಾಏಕಿ ಕುಸಿಯುವಂತಹ ಘಟನೆಗಳು ಅನಿರೀಕ್ಷಿತವಾಗಿ ನಡೆಯುವುದರಿಂದ ಮತ್ತು ಈ ಪ್ರದೇಶಗಳು ಅತ್ಯಂತ ದುರ್ಗಮವಾಗಿರುವುದರಿಂದ ಅವುಗಳನ್ನು ಮುಂಚಿತವಾಗಿ ಪತ್ತೆಹಚ್ಚುವುದು ಸವಾಲಾಗಿದೆ.


ಪ್ರಸ್ತುತ ಇರುವ ಮುನ್ನೆಚ್ಚರಿಕೆ ವ್ಯವಸ್ಥೆಗಳ ಮಿತಿಗಳೇನು?

ಅಸ್ತಿತ್ವದಲ್ಲಿರುವ ವ್ಯವಸ್ಥೆಗಳು ಮುಖ್ಯವಾಗಿ ಹಿಮನದಿ ಸರೋವರಗಳ ನೀರಿನ ಮಟ್ಟವನ್ನು ಅಳೆಯುವ ಸಾಂಪ್ರದಾಯಿಕ ವಿಧಾನಗಳನ್ನು ಅವಲಂಬಿಸಿವೆ, ಇವು ಹಠಾತ್ ಭೂಕುಸಿತದ ಪ್ರವಾಹವನ್ನು ತಡೆಯಲು ಸಮರ್ಥವಾಗಿಲ್ಲ.


ಪ್ರವಾಹ ಮುನ್ಸೂಚನೆಯನ್ನು ಸುಧಾರಿಸಲು ಯಾವ ತಂತ್ರಜ್ಞಾನಗಳು ಬೇಕು?

ಭೂಕಂಪನ ಚಟುವಟಿಕೆಗಳ ಮೇಲ್ವಿಚಾರಣೆ, ರಿಮೋಟ್ ಸೆನ್ಸಿಂಗ್ ಮೂಲಕ 3ಡಿ ಚಿತ್ರಗಳ ರಚನೆ ಮತ್ತು ಆಧುನಿಕ ಮಾನಿಟರಿಂಗ್ ವ್ಯವಸ್ಥೆಗಳ ಮೂಲಕ ಅಪಾಯವನ್ನು ಅಂದಾಜಿಸಲು ಸಾಧ್ಯವಿದೆ.


ಸ್ಥಳೀಯರ ರಕ್ಷಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳೇನು?

ಅಪಾಯಕಾರಿ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣವನ್ನು ನಿಷೇಧಿಸುವುದು, ಸುರಕ್ಷಿತ ಸ್ಥಳಾಂತರ ಮಾರ್ಗಗಳನ್ನು ಸ್ಪಷ್ಟವಾಗಿ ಗುರುತಿಸುವುದು ಮತ್ತು ವಿಪತ್ತು ನಿರ್ವಹಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ.

ಪ್ರಮುಖ ಅಂಕಿಅಂಶಗಳು

2,070ನೇಪಾಳದಲ್ಲಿರುವ ಹಿಮ ಸರೋವರಗಳ ಸಂಖ್ಯೆ21ಹೆಚ್ಚಿನ ಅಪಾಯದ ಹಿಮ ಸರೋವರಗಳ ಸಂಖ್ಯೆ2015ಭೂಕಂಪನ ಅಧ್ಯಯನ ನಡೆದ ವರ್ಷ2020ಪರ್ವತ ಮೇಲ್ವಿಚಾರಣಾ ವರದಿ ಬಂದ ವರ್ಷ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ನೇಪಾಳ ಪ್ರವಾಹ: ಕೊಚ್ಚಿಹೋದ ಬ್ಯಾಂಕ್ ಲಾಕರ್ ಒಡೆದು ಲಕ್ಷಾಂತರ ರೂಪಾಯಿ ದೋಚಿದರು

ಮೇಲ್ವಿಚಾರಣೆಯನ್ನು ಸುಧಾರಿಸಲು ಭೂಕಂಪನ ಚಟುವಟಿಕೆಯನ್ನು ಗಮನಿಸುವುದು, ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನ ಬಳಸಿ ಪ್ರದೇಶದ 3ಡಿ ಚಿತ್ರವನ್ನು ಸಿದ್ಧಪಡಿಸುವುದು ಒಂದು ಮಾರ್ಗ. ಕಾಲಕ್ರಮೇಣ, ಪ್ರದೇಶದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ, ಕುಸಿತದ ಅಪಾಯವನ್ನು ಅಂದಾಜಿಸಬಹುದು ಎಂದು ತಜ್ಞರು ಹೇಳುತ್ತಾರೆ. ಆದರೆ, ಹಿಮಾಲಯದ ಪ್ರದೇಶಗಳು ಬಹಳ ದೂರದ ಮತ್ತು ದುರ್ಗಮವಾಗಿವೆ. ಅಲ್ಲಿಗೆ ಡ್ರೋನ್‌ಗಳು ಅಥವಾ ಹೆಲಿಕಾಪ್ಟರ್‌ಗಳನ್ನು ಕೊಂಡೊಯ್ಯುವುದೂ ಸುಲಭವಲ್ಲ ಎಂದು ಅವರು ಹೇಳುತ್ತಾರೆ.

2020ರ ಪರ್ವತ ಮೇಲ್ವಿಚಾರಣಾ ಕುರಿತ ಅಂತರ್‌ಸರ್ಕಾರಿ ಸಂಸ್ಥೆಯ ವರದಿ ಪ್ರಕಾರ, ನೇಪಾಳದಲ್ಲಿ 2,070 ಹಿಮ ಸರೋವರಗಳಿವೆ. ಅವುಗಳಲ್ಲಿ 21 ಸರೋವರಗಳನ್ನು ಹೆಚ್ಚಿನ ಅಪಾಯದವು ಎಂದು ಗುರುತಿಸಲಾಗಿದೆ. ಚೀನಾ ಮತ್ತು ಭಾರತದ ಹಿಮಾಲಯ ಪ್ರದೇಶಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ಹಿಮ ಸರೋವರಗಳಿವೆ.

ನೇಪಾಳದಲ್ಲಿ ಪ್ರವಾಹ ಮುನ್ನೆಚ್ಚರಿಕೆ ವ್ಯವಸ್ಥೆ ಇದ್ದರೂ, ಅದು ಮುಖ್ಯವಾಗಿ ನದಿಗಳು ಮತ್ತು ಸರೋವರಗಳ ನೀರಿನ ಮಟ್ಟವನ್ನು ಅಳೆಯುವ ಸಾಂಪ್ರದಾಯಿಕ ವ್ಯವಸ್ಥೆಯನ್ನು ಅವಲಂಬಿಸಿದೆ. ಪರ್ವತದ ಒಂದು ಭಾಗ ಏಕಾಏಕಿ ಕುಸಿಯುವಂತಹ ಘಟನೆಗಳ ಬಗ್ಗೆ ಎಚ್ಚರಿಕೆ ನೀಡಲು ಈ ವ್ಯವಸ್ಥೆ ಸಿದ್ಧವಾಗಿಲ್ಲ ಎಂದು ವಿಜ್ಞಾನಿಗಳು ಮತ್ತು ವಿಪತ್ತು ನಿರ್ವಹಣಾ ಸಂಶೋಧಕರು ಹೇಳಿದ್ದಾರೆ.

ನೇಪಾಳ ಪ್ರವಾಹ: ಆಸ್ಪತ್ರೆಯಲ್ಲಿ ಪ್ರೀತಿಪಾತ್ರರಿಗಾಗಿ ಹುಡುಕಾಟ

ನದಿಗಳಲ್ಲಿನ ನೀರಿನ ಮಟ್ಟ ನಿಧಾನವಾಗಿ ಏರಿದಾಗ ಅದನ್ನು ಪತ್ತೆಹಚ್ಚಲು ಈ ವ್ಯವಸ್ಥೆಗಳನ್ನು ರೂಪಿಸಲಾಗಿದೆ. ಸಾಮಾನ್ಯವಾಗಿ ಮುಂಗಾರು ಪ್ರವಾಹ ಅಥವಾ ಹಿಮ ಸರೋವರಗಳಿಂದ ಉಂಟಾಗುವ ಪ್ರವಾಹಕ್ಕೂ ಮೊದಲು ನೀರಿನ ಮಟ್ಟ ನಿಧಾನವಾಗಿ ಏರುತ್ತದೆ. ಆದರೆ ಬುಧವಾರ ಸಂಭವಿಸಿದಂತೆ ಅತ್ಯಂತ ವೇಗವಾಗಿ ಹರಿದುಬರುವ ಪ್ರವಾಹವನ್ನು ಪತ್ತೆಹಚ್ಚಲು ಈ ವ್ಯವಸ್ಥೆಗಳು ಸೂಕ್ತವಾಗಿರಲಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಪ್ರವಾಹ ಸಂಭವಿಸಿದ ಪ್ರದೇಶದಲ್ಲಿ ಮುನ್ನೆಚ್ಚರಿಕೆ ವ್ಯವಸ್ಥೆ ಇದೆ. ಆದರೆ, ಪ್ರವಾಹ ಎಷ್ಟು ವೇಗವಾಗಿ ಉಂಟಾಯಿತೆಂದರೆ, ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದ್ದರೂ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸಾಕಷ್ಟು ಸಮಯ ಸಿಗಲಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಚೀನಾ ಬಳಿ ಯಾವ ರೀತಿಯ ಮೇಲ್ವಿಚಾರಣಾ ವ್ಯವಸ್ಥೆ ಇದೆ ಎಂಬುದು ಗೊತ್ತಿಲ್ಲ.

ಇಂತಹ ಪ್ರದೇಶಗಳಲ್ಲಿ ಅಧಿಕಾರಿಗಳು ಇತರ ಸುರಕ್ಷತಾ ಕ್ರಮಗಳ ಬಗ್ಗೆಯೂ ಗಮನಹರಿಸಬೇಕು. ಉದಾಹರಣೆಗೆ, ಪ್ರವಾಹಕ್ಕೆ ಒಳಗಾಗುವ ಪ್ರದೇಶಗಳಲ್ಲಿ ಕಟ್ಟಡ ನಿರ್ಮಿಣ ತಪ್ಪಿಸುವುದು, ಜನರು ಸುರಕ್ಷಿತವಾಗಿ ಸ್ಥಳಾಂತರಗೊಳ್ಳಲು ಮಾರ್ಗಗಳನ್ನು ನಿರ್ಮಿಸಿ, ಅವುಗಳನ್ನು ಸ್ಪಷ್ಟವಾಗಿ ಗುರುತಿಸುವುದು ಅಗತ್ಯ ಎಂದು ಈ ಬಗ್ಗೆ ಅಧ್ಯಯನ ನಡೆಸಿರುವವರು ಹೇಳುತ್ತಾರೆ. ಜಪಾನ್‌ನಲ್ಲಿ ಅಪಾಯ ಎದುರಾದಾಗ ಜನರು ಏನು ಮಾಡಬೇಕು ಎಂಬುದನ್ನು ವಿವಿಧ ಭಾಷೆಗಳಲ್ಲಿನ ಸೂಚನಾ ಫಲಕಗಳು ಮತ್ತು ಧ್ವನಿವರ್ಧಕ ಪ್ರಕಟಣೆಗಳ ಮೂಲಕ ತಿಳಿಸಲಾಗುತ್ತದೆ. ವಿಪತ್ತು ಸಂಭವಿಸಿದಾಗ ಇಂತಹ ಮಾಹಿತಿ ಜೀವ ಉಳಿಸಲು ಬಹಳ ಮುಖ್ಯವಾಗುತ್ತದೆ ಎನ್ನುವುದು ಅವರ ಅಭಿಪ್ರಾಯ.

ಬಿಸಿಯಾಗುತ್ತಿರುವ ಹಿಮಾಲಯವೇ ನೇಪಾಳದ ಪರ್ವತಗಳಲ್ಲಿ ಸ್ಫೋಟಗೊಂಡ ಪ್ರವಾಹಕ್ಕೆ ಕಾರಣ?

ನೇಪಾಳ ಸರ್ಕಾರ ಮುನ್ನೆಚ್ಚರಿಕೆ ವ್ಯವಸ್ಥೆ ಅಳವಡಿಸಿದ್ದರೂ, ಅದು ಹೇಗೆ ಎಚ್ಚರಿಕೆ ನೀಡುತ್ತದೆ ಅಥವಾ ಎಚ್ಚರಿಕೆ ಬಂದಾಗ ಏನು ಮಾಡಬೇಕು ಎಂಬುದು ಸ್ಥಳೀಯರಿಗೆ ತಿಳಿದಿರಲಿಲ್ಲ ಎಂದು 2015ರಲ್ಲಿ ಅಲ್ಲಿ ಭೂಕಂಪ ನಡೆದಾಗ ತೆರಳಿ ಅಧ್ಯಯನ ನಡೆಸಿದ್ದ ಕೆಲವರು ಹೇಳಿದ್ದಾರೆ. ಆದ್ದರಿಂದ, ಮುನ್ನೆಚ್ಚರಿಕೆ ವ್ಯವಸ್ಥೆಯ ಬಗ್ಗೆ ಜನರಿಗೆ ಸರಿಯಾದ ಅರಿವು ಮೂಡಿಸುವುದು ಮತ್ತು ಪ್ರವಾಹ ಪ್ರದೇಶಗಳಂತಹ ಅಪಾಯಕಾರಿ ಸ್ಥಳಗಳಲ್ಲಿ ನಿರ್ಮಾಣ ಮಾಡುವುದನ್ನು ತಪ್ಪಿಸುವುದು ಸುರಕ್ಷತೆಯನ್ನು ಹೆಚ್ಚಿಸಬಹುದು ಎಂದು ಅವರು ಹೇಳಿದ್ದಾರೆ.

ಆಧಾರ: ದಿ ನ್ಯೂಯಾರ್ಕ್ ಟೈಮ್ಸ್ ಹಾಗೂ ದಿ ಗಾರ್ಡಿಯನ್ ಇಂಟರ್‌ನ್ಯಾಷನಲ್

ಗಡಿ ಇಲ್ಲದ ಹಿಮಾಲಯದ ರಕ್ಷಣೆಗೆ ಒಂದಾಗಿ ನೀತಿ ರೂಪಿಸಬೇಕು; ನಾಲ್ಕೂ ರಾಷ್ಟ್ರಗಳು
Dailyhunt
Disclaimer: This content has not been generated, created or edited by Dailyhunt. Publisher: Prajavani