Dailyhunt Logo
  • Light mode
    Follow system
    Dark mode
    • Play Story
    • App Story
ಖಮೇನಿ ಅಂತ್ಯಕ್ರಿಯೆ: ಪ್ರಧಾನಿ ಮೋದಿ ನೇತೃತ್ವದ ನಿಯೋಗ ಭಾಗವಹಿಸದಿರಲು ಕಾರಣವೇನು?

ಖಮೇನಿ ಅಂತ್ಯಕ್ರಿಯೆ: ಪ್ರಧಾನಿ ಮೋದಿ ನೇತೃತ್ವದ ನಿಯೋಗ ಭಾಗವಹಿಸದಿರಲು ಕಾರಣವೇನು?

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಉಪ ಪ್ರಧಾನಿ, ವಿದೇಶಾಂಗ ಸಚಿವ ಇಶಾಕ್‌ ಡಾರ್ ಅವರು ಇರಾನ್‌ನ ಸರ್ವೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ ಸಮಾರಂಭದಲ್ಲಿ ಭಾಗವಹಿಸಿದ್ದರೆ, ಭಾರತದ ಪರ ಕೇಂದ್ರ ವಿದೇಶಾಂಗ ವ್ಯವಹಾರ ಖಾತೆಯ ರಾಜ್ಯ ಸಚಿವ ಪಬಿತ್ರಾ ಮಾರ್ಗರಿಟಾ ಮತ್ತು ಬಿಹಾರದ ರಾಜ್ಯಪಾಲರ ಲೆಫ್ಟಿನೆಂಟ್‌ ಜನರಲ್‌ (ನಿವೃತ್ತ) ಸಯ್ಯದ್‌ ಅತಾ ಹಸನೈನ್‌ ಭಾಗವಹಿಸಿದ್ದಾರೆ.

ಷರೀಫ್ ಅವರೊಂದಿಗೆ ಸಂಪುಟದ ಸಚಿವರು, ಹಿರಿಯ ಸರ್ಕಾರಿ ಅಧಿಕಾರಿಗಳು ಇರಾನ್‌ಗೆ ತೆರಳಿದ್ದಾರೆ. ಕಳೆದ ತಿಂಗಳು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಪಾಕ್‌ಗೆ ಭೇಟಿ ನೀಡಿದ್ದಾಗ, ಖಮೇನಿ ಅಂತ್ಯಕ್ರಿಯೆಯಲ್ಲಿ ತಾವು ಭಾಗವಹಿಸುವುದಾಗಿ ಷರೀಫ್ ಘೋಷಿಸಿದ್ದರು.

ಇರಾನ್ ಸರ್ಕಾರವು ಖಮೇನಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಆಹ್ವಾನ ನೀಡಿತ್ತು. ಆದರೆ, ಮೋದಿ ಅವರು ಕಿರಿಯ ಸಚಿವರನ್ನು ಕಳುಹಿಸಲು ನಿರ್ಧರಿಸಿದ್ದರು.

ದೂರ ಉಳಿದ ಪ್ರಧಾನಿ ಮೋದಿ

ಭಾರತದ ಈ ಪ್ರಾತಿನಿಧ್ಯವು ಹಳೆಯ ಸಂಬಂಧ ಮತ್ತು ಮೌಲ್ಯಗಳಿಗಿಂತ ಹೆಚ್ಚಾಗಿ ಪ್ರಸ್ತುತ ವಿದೇಶಾಂಗ ನೀತಿಯ ಆದ್ಯತೆಗಳಿಗೆ ಅನುಗುಣವಾಗಿದೆ ಎಂಬುದು ವಿಶ್ಲೇಷಕರ ಮಾತು. ಇದು ಅಮೆರಿಕ, ಇಸ್ರೇಲ್ ಮತ್ತು ಮಧ್ಯಪ್ರಾಚ್ಯದ ಪಾಲುದಾರ ದೇಶಗಳಿಗೆ ರವಾನಿಸಲಾದ ರಾಜತಾಂತ್ರಿಕ ಸಂದೇಶವೂ ಆಗಿದೆ. ಉಭಯ ದೇಶಗಳ ನಡುವಿನ ಹಳೆಯ ಸಂಬಂಧವನ್ನು ಪರಿಗಣಿಸಿದರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನೊಳಗೊಂಡ ಉನ್ನತಮಟ್ಟದ ನಿಯೋಗವೇ ಖಮೇನಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಬೇಕಿತ್ತು. ಒಂದು ವೇಳೆ ಈ ನಿಯೋಗ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಲ್ಲಿ, ಇತರ ಪಾಲುದಾರ ದೇಶಗಳನ್ನು ಕೆರಳಿಸುತ್ತಿತ್ತು.

ಪಬಿತ್ರಾ-ಹಸನೈನ್‌ ನಿಯೋಗದ ಪ್ರಾತಿನಿಧ್ಯಕ್ಕೆ ಭೌಗೋಳಿಕ ರಾಜಕೀಯ ಮತ್ತು ರಾಜತಾಂತ್ರಿಕ ಕಾರಣಗಳನ್ನು ಈ ಕೆಳಕಂಡಂತೆ ಉಲ್ಲೇಖಿಸಬಹುದಾಗಿದೆ.

* ಅಮೆರಿಕ-ಇರಾನ್ ಯುದ್ಧದಲ್ಲಿ ತಟಸ್ಥವಾಗಿರಬೇಕೆಂಬ ದೀರ್ಘಕಾಲದ ನಿಲುವನ್ನು ಕಾಯ್ದುಕೊಳ್ಳಲು ಭಾರತ ಬಯಸಿದೆ. ಪ್ರಧಾನಿ ಮೋದಿ ಅವರ ಇಸ್ರೇಲ್ ಭೇಟಿ ಮತ್ತು ಅಲ್ಲಿನ ಸಂಸತ್ ಉದ್ದೇಶಿಸಿ ಮಾತನಾಡಿದ ಕೆಲವೇ ದಿನಗಳಲ್ಲಿ ಯಹೂದಿ ರಾಷ್ಟ್ರವು ಇರಾನ್ ಮೇಲೆ ದಾಳಿ ಮಾಡಿತ್ತು. ಅದರ ಬೆನ್ನಲ್ಲೇ ಅಮೆರಿಕ ಕೂಡ ಯುದ್ಧಕ್ಕೆ ಧುಮುಕಿತ್ತು.

* ಇರಾನ್‌ನಲ್ಲಿನ ಶಾಲೆಯೊಂದರ ಮೇಲೆ ಅಮೆರಿಕ ನಡೆಸಿದ ಬಾಂಬ್ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿತ್ತು. ಹಾಗೆಯೇ ಇಸ್ರೇಲ್ ಮತ್ತು ಅಮೆರಿಕದ ಮಿತ್ರರಾಷ್ಟ್ರಗಳ ನಾಗರಿಕರನ್ನು ಗುರಿಯಾಗಿ ಇರಾನ್ ನಡೆಸಿದ ಕ್ಷಿಪಣಿ ದಾಳಿಯನ್ನೂ ಖಂಡಿಸಿತ್ತು. ಭಾರತವು ಉದ್ದೇಶಪೂರ್ವಕವಾಗಿಯೇ ಯಾವುದೇ ಒಂದು ದೇಶದ ಪರ ನಿಲ್ಲಲಿಲ್ಲ, ಯುದ್ಧನಿರತ ಯಾವುದೇ ದೇಶಕ್ಕೆ ಸಹಾಯವನ್ನೂ ಮಾಡಿಲ್ಲ ಎಂಬುದು ಗಮನಾರ್ಹ ಸಂಗತಿ.

* ಸಂಯಮ ಕಾಯ್ದುಕೊಳ್ಳಲು ಮತ್ತು ಮಾತುಕತೆಯ ಮೂಲಕ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಲು ಭಾರತ ನಿರಂತರವಾಗಿ ಒತ್ತಾಯಿಸಿದೆ.

* ಭಾರತವು ತನ್ನ ರಾಜತಾಂತ್ರಿಕ ಸಂಬಂಧ ಮತ್ತು ಎಲ್ಲಾ ದೇಶಗಳೊಂದಿಗೆ ಉತ್ತಮ ಬಾಂಧವ್ಯವನ್ನು ಕಾಯ್ದುಕೊಂಡಿದೆ.

* ಭಾರತವು ಬಹುತ್ವ ನೀತಿಯನ್ನು ಮುಂದುವರಿಸಿದೆ.

ಮೋದಿ ನೇತೃತ್ವದ ನಿಯೋಗ ದೂರ ಉಳಿಯಲು ಇಲ್ಲಿವೆ ಕಾರಣಗಳು

* ಭಾರತದ ನಡೆಯಿಂದ ಅಮೆರಿಕ ಮತ್ತು ಇಸ್ರೇಲ್ ಅನ್ನು ಅಸಮಾಧಾನಗೊಳಿಸುವ ಸಾಧ್ಯತೆ.

* ಭಾರತದ ಮಿತ್ರರಾಷ್ಟ್ರಗಳಾದ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಕತಾರ್‌ಗೆ ಇರಾನ್‌ನ ಶಿಯಾ ಆಡಳಿತಕ್ಕೆ ಇಷ್ಟೊಂದು ಪ್ರಾಮುಖ್ಯತೆ ನೀಡುವುದನ್ನು ಇಷ್ಟಪಡುತ್ತಿರಲಿಲ್ಲ.

* ಇದು ದೇಶೀಯ ರಾಜಕೀಯದ ಮೇಲೂ ಪರಿಣಾಮ ಬೀರಬಹುದಿತ್ತು. ಆಡಳಿತ ಪಕ್ಷ ಸೇರಿದಂತೆ ಇತರರು ಇಸ್ರೇಲ್‌ ಅನ್ನು ಅಸಮಾಧಾನಗೊಳಿಸುವುದನ್ನು ವಿರೋಧಿಸಬಹುದು.

* ಭಾರತದ ಪ್ರತಿನಿಧಿ ಸಯ್ಯದ್‌ ಅತಾ ಹಸನೈನ್‌ ಅವರು ಕಾರ್ಯತಂತ್ರದ ವಿಷಯಗಳಲ್ಲಿ ಅನುಭವ ಹೊಂದಿರುವ ಗೌರವಾನ್ವಿತ ಮಾಜಿ ಸೇನಾ ಕಮಾಂಡರ್ ಆಗಿದ್ದಾರೆ. ಇತ್ತ ಪಬಿತ್ರಾ ಮಾರ್ಗರಿಟಾ ಅವರು ಸಚಿವರಾಗಿದ್ದು, ಸರ್ಕಾರದ ಪರವಾಗಿ ಪ್ರತಿನಿಧಿಸುತ್ತಿದ್ದಾರೆ.

ಇರಾನ್‌ನಲ್ಲಿ ಪಾಕ್ ಹೂಡಿಕೆ ರಹಸ್ಯ...

* ಇರಾನ್, ಪಾಕಿಸ್ತಾನದ ನೆರೆಯ ದೇಶವಾಗಿದ್ದು, ಉಭಯ ದೇಶಗಳು 909 ಕಿಲೋಮೀಟರ್ ಉದ್ದದ ಗಡಿಯನ್ನು ಹಂಚಿಕೊಂಡಿವೆ. ಈ ಗಡಿಯು ಇರಾನ್‌ನ ಸಿಸ್ತಾನ್ ಪ್ರಾಂತ್ಯ ಮತ್ತು ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಿಂದ ಅರಬ್ಬೀ ಸಮುದ್ರದ ತೀರದವರೆಗೆ ಹರಡಿದೆ.

* ಎರಡೂ ದೇಶಗಳಲ್ಲಿ ಬಲೂಚ್ ಮತ್ತು ಪಶ್ತೂನ್ ಜನಾಂಗದ ಜನರು ವಾಸಿಸುತ್ತಿರುವುದರಿಂದ ಉಭಯ ದೇಶಗಳ ನಡುವೆ ಜನಾಂಗೀಯ ಬಾಂಧವ್ಯವಿದೆ. ಇದಲ್ಲದೆ, ಎರಡೂ ದೇಶಗಳಲ್ಲಿ ಪರ್ಷಿಯನ್ ಭಾಷೆ ಮಾತನಾಡಲಾಗುತ್ತದೆ.

* ಪಾಕ್‌ನಲ್ಲಿ ಸುನ್ನಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದರೂ, ಲಕ್ಷಾಂತರ ಶಿಯಾ ಮುಸ್ಲಿಮರು ಖಮೇನಿ ಅವರನ್ನು ತಮ್ಮ ಧಾರ್ಮಿಕ ನಾಯಕರೆಂದು ಪರಿಗಣಿಸುತ್ತಾರೆ.

* ಉದ್ವಿಗ್ನತೆ ಹೊರತಾಗಿಯೂ ಪಾಕಿಸ್ತಾನವು ಈಚೆಗೆ ಇರಾನ್‌ನೊಂದಿಗಿನ ವ್ಯಾಪಾರ ಸಂಬಂಧ ಸುಧಾರಿಸಲು ಪ್ರಯತ್ನಿಸುತ್ತಿದೆ.

ರಾಜತಾಂತ್ರಿಕ ದೃಷ್ಟಿಕೋನ...

'ಇಸ್ರೇಲ್‌ನೊಂದಿಗೆ ಯಾವುದೇ ರಾಜತಾಂತ್ರಿಕ ಸಂಬಂಧ ಹೊಂದಿರದ ಪಾಕಿಸ್ತಾನಕ್ಕಿಂತ ಭಿನ್ನವಾಗಿ, ಭಾರತವು ಇಸ್ರೇಲ್ ಮತ್ತು ಅಮೆರಿಕದೊಂದಿಗೆ ಉತ್ತಮ ಪಾಲುದಾರಿಕೆ ಹೊಂದಿದೆ. ಇರಾನ್ ಈ ಹಿಂದೆ ಹಲವು ಸಂದರ್ಭಗಳಲ್ಲಿ ಭಾರತದ ಪರವಾಗಿ ನಿಂತಿರಲಿಲ್ಲ. ವಿಶೇಷವಾಗಿ ಕಾಶ್ಮೀರ ವಿಷಯ ಮತ್ತು ಚಾಬಹಾರ್ ಬಂದರಿನ ವಿಷಯದಲ್ಲಿ ಇರಾನ್‌ನ ದೃಷ್ಟಿಕೋನ ನಕಾರಾತ್ಮಕವಾಗಿತ್ತು' ಎಂದು ಭೌಗೋಳಿಕ ರಾಜಕೀಯ ವಿಶ್ಲೇಷಕ ಅಮಿತ್ ಬನ್ಸಾಲ್ ಹೇಳಿದ್ದಾರೆ.

'ಇತರ ದೇಶಗಳಿಗೆ ಹೋಲಿಸಿದರೆ ಭಾರತವು ತನ್ನ ಸರ್ಕಾರವನ್ನು ಬಲವಾಗಿ ಪ್ರತಿನಿಧಿಸುತ್ತಿದೆ. ಪಾಕಿಸ್ತಾನ, ತಜಿಕಿಸ್ತಾನ್ ಮತ್ತು ಇರಾಕ್ ಹೊರತುಪಡಿಸಿ, ಯಾವುದೇ ದೇಶವು ತನ್ನ ಸರ್ಕಾರದ ಮುಖ್ಯಸ್ಥರನ್ನು ಇರಾನ್‌ಗೆ ಕಳುಹಿಸುತ್ತಿಲ್ಲ. ರಷ್ಯಾ ಕೂಡ ಡಿಮಿಟ್ರಿ ಮೆಡ್ವೆಡೆವ್ ಅವರನ್ನು ಕಳುಹಿಸಿದೆ. ಚೀನಾ ಕೂಡ ಕಾಂಗ್ರೆಸ್‌ನ ಉಪ ನಾಯಕರನ್ನು ಕಳುಹಿಸಿದೆ' ಎಂದು ಅಮಿತ್ ವಿವರಿಸಿದ್ದಾರೆ.

ಖಮೇನಿ ಪಾರ್ಥಿವ ಶರೀರ 125 ದಿನ ಕಾಪಿಟ್ಟ ಇರಾನ್‌ಗೆ ಅಂತ್ಯಕ್ರಿಯೆ ಹೊತ್ತಲ್ಲಿ ಆತಂಕಖಮೇನಿ ಅಂತ್ಯಕ್ರಿಯೆ: ಇರಾನ್‌ ತಲುಪಿದ ಪಾಕ್‌ ಪ್ರಧಾನಿ ಶೆಹಬಾಜ್ ಷರೀಫ್ಖಮೇನಿ ಅಂತ್ಯಕ್ರಿಯೆ: ಭಾರತೀಯ ಧಾರ್ಮಿಕ ಮುಖಂಡರಿಂದ ಅಂತಿಮ ನಮನಆಯತೊಲ್ಲಾ ಖಮೇನಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವ ಜಾಗತಿಕ ನಾಯಕರಿವರು...
Dailyhunt
Disclaimer: This content has not been generated, created or edited by Dailyhunt. Publisher: Prajavani