Dailyhunt Logo
  • Light mode
    Follow system
    Dark mode
    • Play Story
    • App Story
ಒಣಗಿದ ನದಿ, ಕುಸಿದ ಆರ್ಥಿಕತೆ: 'ರೈನ್' ಬರಿದಾದರೆ ಯುರೋಪ್ ನಡುಗುವುದೇಕೆ?

ಒಣಗಿದ ನದಿ, ಕುಸಿದ ಆರ್ಥಿಕತೆ: 'ರೈನ್' ಬರಿದಾದರೆ ಯುರೋಪ್ ನಡುಗುವುದೇಕೆ?

ಈ ಬೇಸಿಗೆಯಲ್ಲಿ ಯುರೋಪ್, ಒಂದರ ಹಿಂದೊಂದು ದೊಡ್ಡ ಸವಾಲುಗಳನ್ನು ಎದುರಿಸುತ್ತಿದೆ. ಕೆಲವೆಡೆ ಬಿಸಿಗಾಳಿ, ಇನ್ನೂ ಕೆಲವೆಡೆ ಕಾಳ್ಗಿಚ್ಚು ಮತ್ತು ಬಿರುಗಾಳಿಗಳು ಭಾರಿ ಹಾನಿ ಉಂಟುಮಾಡಿವೆ. ಈ ಎಲ್ಲದರ ನಡುವೆ ಈಗ ಮತ್ತೊಂದು ವಿಪತ್ತು ಯುರೋಪಿನ ಆರ್ಥಿಕತೆಯನ್ನೇ ಕಂಗೆಡಿಸಿದೆ.

ಅದೇ ಬರ.

ಹವಾಮಾನ ಬದಲಾವಣೆಯಿಂದ ತೀವ್ರಗೊಂಡಿರುವ ಬರದಿಂದ ಯೂರೋ‍ಪ್‌ನ ಪ್ರಮುಖ ನದಿಗಳು ಒಣಗುತ್ತಿವೆ. ಪರಿಣಾಮ ಕೈಗಾರಿಕೆಗಳು, ಇಂಧನ ಪೂರೈಕೆ, ಸರಕು ಸಾಗಣೆ ತುಟ್ಟಿಯಾಗಿ, ಹಣದುಬ್ಬರ ಏರಿಕೆಯಾಗಿದೆ.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ಒಣಗಿದ ನದಿ, ಕುಸಿದ ಆರ್ಥಿಕತೆ: 'ರೈನ್' ಬರಿದಾದರೆ ಯುರೋಪ್ ನಡುಗುವುದೇಕೆ?

ಒಂದು ಸಾಲಿನಲ್ಲಿಹವಾಮಾನ ಬದಲಾವಣೆಯಿಂದ ಯುರೋಪಿನ ರೈನ್ ನದಿಯ ನೀರಿನ ಮಟ್ಟ ಕುಸಿತವಾಗಿದ್ದು, ಇದರಿಂದ ಸರಕು ಸಾಗಣೆ ಅಸ್ತವ್ಯಸ್ತಗೊಂಡು ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಿದೆ.

ಪ್ರಮುಖ ಪ್ರಶ್ನೋತ್ತರ


ರೈನ್ ನದಿ ಒಣಗಿದ್ದರಿಂದ ಯುರೋಪಿನ ಆರ್ಥಿಕತೆಗೆ ಆಗುತ್ತಿರುವ ಸಮಸ್ಯೆಗಳೇನು?

ರೈನ್ ನದಿಯು ಜರ್ಮನಿಯ ಕೈಗಾರಿಕಾ ಜೀವನಾಡಿಯಾಗಿದ್ದು, ನೀರಿನ ಮಟ್ಟ ಕಡಿಮೆಯಾದ ಕಾರಣ ಸರಕು ಸಾಗಣೆ ದುಬಾರಿಯಾಗಿದೆ ಮತ್ತು ಕಾರ್ಖಾನೆಗಳ ಉತ್ಪಾದನೆಗೆ ಅಡಚಣೆಯಾಗಿದೆ.


ರೈನ್ ನದಿಯ ನೀರಿನ ಮಟ್ಟ ಕುಸಿಯಲು ಪ್ರಮುಖ ಕಾರಣಗಳೇನು?

ಆಲ್ಪ್ಸ್ ಪರ್ವತಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಹಿಮಪಾತ, ಮಳೆಯ ಕೊರತೆ ಮತ್ತು ತೀವ್ರ ಉಷ್ಣಾಂಶದಿಂದ ನೀರು ವೇಗವಾಗಿ ಆವಿಯಾಗುತ್ತಿರುವುದು ನದಿ ಬರಿದಾಗಲು ಕಾರಣವಾಗಿದೆ.


ರೈನ್ ನದಿಯ ಬಿಕ್ಕಟ್ಟು ಡ್ಯಾನ್ಯೂಬ್ ನದಿಯ ಮೇಲೆ ಪ್ರಭಾವ ಬೀರಿದೆಯೇ?

ಹೌದು, ಯುರೋಪಿನ ಎರಡನೇ ಅತಿ ಉದ್ದದ ನದಿಯಾದ ಡ್ಯಾನ್ಯೂಬ್‌ನಲ್ಲೂ ನೀರಿನ ಮಟ್ಟ ಭಾರಿ ಇಳಿಕೆಯಾಗಿದೆ, ಇದರಿಂದ ವಿದ್ಯುತ್ ಉತ್ಪಾದನೆ ಮತ್ತು ಅಣು ಸ್ಥಾವರಗಳ ತಂಪಾಗಿಸುವಿಕೆಗೆ ತೊಂದರೆಯಾಗಿದೆ.


ಕೈಗಾರಿಕೆಗಳು ಈ ಪರಿಸ್ಥಿತಿಯನ್ನು ಹೇಗೆ ಎದುರಿಸುತ್ತಿವೆ?

2018ರ ಅನುಭವದಿಂದ ಪಾಠ ಕಲಿತ ಕೈಗಾರಿಕೆಗಳು, ಕಡಿಮೆ ನೀರಿನಲ್ಲಿ ಸಂಚರಿಸಬಲ್ಲ ಹಗುರವಾದ ವಿಶೇಷ ಹಡಗುಗಳ ವಿನ್ಯಾಸ ಮತ್ತು ಪರ್ಯಾಯ ಸರಕು ಸಾಗಣೆ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುತ್ತಿವೆ.


ಈ ಆರ್ಥಿಕ ಬಿಕ್ಕಟ್ಟಿನ ಹೊರೆ ಸಾಮಾನ್ಯ ಗ್ರಾಹಕರ ಮೇಲೆ ಬೀಳುತ್ತದೆಯೇ?

ಖಂಡಿತ, ಸರಕು ಸಾಗಣೆ ವೆಚ್ಚ ಹೆಚ್ಚಾಗಿರುವುದರಿಂದ ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಅಂತಿಮವಾಗಿ ಗ್ರಾಹಕರು ಹೆಚ್ಚಿನ ಹಣ ತೆರಬೇಕಾಗಿದೆ.

ಪ್ರಮುಖ ಅಂಕಿಅಂಶಗಳು

800 ಮೈಲುರೈನ್ ನದಿಯ ಉದ್ದ300 ಮಿಲಿಯನ್ ಟನ್ರೈನ್ ನದಿ ಮೂಲಕ ಸಾಗುವ ವಾರ್ಷಿಕ ಸರಕುಶೇ 0.32018ರಲ್ಲಿ ಆರ್ಥಿಕ ಉತ್ಪಾದನೆಯಲ್ಲಿ ಆದ ಕುಸಿತ5,000 ಟನ್‌ನಿಂದ 1,200 ಟನ್ಸರಕು ಸಾಗಣೆ ಹಡಗಿನ ಸಾಮರ್ಥ್ಯದಲ್ಲಿನ ಇಳಿಕೆ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಅನುಭವವೇ ಪಾಠ: ಭೂಕಂಪಗಳಿಂದ ಬದುಕುವ ಹಾದಿ ಕಂಡುಕೊಂಡ ಜಪಾನ್

ಜರ್ಮನಿಯ ಆರ್ಥಿಕತೆಯ ಜೀವನಾಡಿ

ಸ್ವಿಸ್ ಆಲ್ಪ್ಸ್‌ನಲ್ಲಿ ಹುಟ್ಟಿ ಆರು ದೇಶಗಳ ಮೂಲಕ ಸುಮಾರು 800 ಮೈಲುಗಳಷ್ಟು ದೂರ ಹರಿದು ಉತ್ತರ ಸಮುದ್ರ ಸೇರುವ 'ರೈನ್' ನದಿ ಯುರೋಪಿನ ಪ್ರಮುಖ ಜಲಮಾರ್ಗಗಳಲ್ಲಿ ಒಂದು. ಜರ್ಮನಿಯ ಉಕ್ಕು, ರಾಸಾಯನಿಕ, ವಾಹನ, ಇಂಧನ ಹಾಗೂ ಕೈಗಾರಿಕಾ ಉತ್ಪನ್ನಗಳು ಈ ನದಿ ಮಾರ್ಗದ ಮೂಲಕ ಸಾಗುತ್ತವೆ. ಪ್ರತಿ ವರ್ಷ ಲಕ್ಷಾಂತರ ಟನ್ ಸರಕುಗಳನ್ನು ಹೊತ್ತ ಸಾವಿರಾರು ಹಡಗುಗಳು ರೈನ್ ನದಿ ಮೂಲಕ ಸಂಚರಿಸುತ್ತವೆ. ಹೀಗಾಗಿ ಇದನ್ನು ಜರ್ಮನಿ ಆರ್ಥಿಕತೆ ಜೀವನಾಡಿ ಎಂದು ಕರೆಯಲಾಗುತ್ತದೆ.

145 ವರ್ಷಗಳಲ್ಲೇ ಕನಿಷ್ಠ ನೀರಿನ ಮಟ್ಟ

ಕಳೆದ ವಾರ ರೈನ್ ನದಿಯ ನೀರಿನ ಮಟ್ಟ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಹಲವು ಪ್ರದೇಶಗಳಲ್ಲಿ ನದಿಯ ಆಳ ನಾಲ್ಕು ಅಡಿಗೂ ಕಡಿಮೆಯಾಗಿದೆ. ಪರಿಣಾಮ, ಭಾರಿ ಸರಕು ಹಡಗುಗಳು ಪೂರ್ಣ ಸಾಮರ್ಥ್ಯದಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಸಾಗಣೆ ವೆಚ್ಚ ಹೆಚ್ಚಿದ್ದು, ಪೂರೈಕೆ ಸರಪಳಿ ಅಸ್ತವ್ಯಸ್ತಗೊಂಡಿದೆ. ಕೆಲವು ಕೈಗಾರಿಕೆಗಳು ಉತ್ಪಾದನೆ ಕಡಿಮೆ ಮಾಡುವ ಪರಿಸ್ಥಿತಿಯನ್ನೂ ಎದುರಿಸುತ್ತಿವೆ.

ಡ್ಯಾನ್ಯೂಬ್‌ನಲ್ಲೂ ಅದೇ ಸಂಕಷ್ಟ

ಸಮಸ್ಯೆ ರೈನ್‌ಗೆ ಮಾತ್ರ ಸೀಮಿತವಾಗಿಲ್ಲ. ಯುರೋಪಿನ ಎರಡನೇ ಅತಿ ಉದ್ದದ ನದಿ ಡ್ಯಾನ್ಯೂಬ್‌ನಲ್ಲೂ ನೀರಿನ ಪ್ರಮಾಣ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದರಿಂದ ಎರಡನೇ ವಿಶ್ವಯುದ್ಧದ ವೇಳೆ ಮುಳುಗಿದ್ದ ಯುದ್ಧನೌಕೆಗಳ ಅವಶೇಷಗಳು ಮತ್ತೆ ಗೋಚರಿಸಿವೆ. ನದಿಯಲ್ಲಿ ನೀರು ಕಡಿಮೆಯಾಗಿದ್ದರಿಂದ ವಿದ್ಯುತ್ ಉತ್ಪಾದನೆಗೆ ತೊಡಕುಂಟಾಗಿದೆ. ಹಂಗೇರಿ ಮತ್ತು ರೊಮೇನಿಯಾದಲ್ಲಿ ಅಣು ವಿದ್ಯುತ್ ಸ್ಥಾವರಗಳ ರಿಯಾಕ್ಟರ್‌ಗಳನ್ನು ತಂಪಾಗಿಡಲು ಡ್ಯಾನ್ಯೂಬ್‌ನ ನೀರನ್ನು ಬಳಸಲಾಗುತ್ತದೆ. ನೀರಿನ ಕೊರತೆಯಿಂದ ಎರಡೂ ದೇಶಗಳು ಗೃಹ ವಿದ್ಯುತ್ ಬಳಕೆ ಕಡಿಮೆ ಮಾಡುವಂತೆ ಜನರಿಗೆ ಹಾಗೂ ಕೈಗಾರಿಕೆಗಳಿಗೆ ಮನವಿ ಮಾಡಿವೆ.

ಸರಕು ಸಾಗಣೆ ಅಸ್ತವ್ಯಸ್ತ

ರೈನ್‌ನ ನೀರಿನ ಕೊರತೆಯ ನೇರ ಪರಿಣಾಮ ಡ್ಯೂಸ್‌ಬರ್ಗ್ ಬಂದರಿನಲ್ಲಿ ಕಾಣಿಸುತ್ತಿದೆ. ದೊಡ್ಡ ಹಡಗುಗಳಲ್ಲಿ ಬಂದ ಸರಕುಗಳನ್ನು ಈಗ ಅಲ್ಲಿಯೇ ಸಣ್ಣ ಹಡಗುಗಳು, ರೈಲುಗಳು ಮತ್ತು ಟ್ರಕ್‌ಗಳಿಗೆ ವರ್ಗಾಯಿಸಲಾಗುತ್ತಿದೆ. ಸುರಕ್ಷಿತವಾಗಿ ಸಾಗಲು ಕೆಲವು ಹಡಗುಗಳು ತಮ್ಮ ಸರಕುಗಳ ಮೂರನೇ ಎರಡರಷ್ಟು ಭಾಗವನ್ನು ಮಾರ್ಗ ಮಧ್ಯದಲ್ಲೇ ಇಳಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರೋಟರ್‌ಡ್ಯಾಮ್‌ನಿಂದ ಕಬ್ಬಿಣದ ಅದಿರನ್ನು ಸಾಗಿಸುವ 564 ಅಡಿ ಉದ್ದದ ಹಡಗೊಂದು ಸಾಮಾನ್ಯವಾಗಿ 5,000 ಟನ್ ಸರಕು ಹೊರುತ್ತಿತ್ತು. ಈಗ ಅದು ಕೇವಲ 1,200 ಟನ್ ಮಾತ್ರ ಸಾಗಿಸುತ್ತಿದೆ. ಹೆಚ್ಚು ಹಡಗುಗಳು ಕಡಿಮೆ ಪ್ರಮಾಣದ ಸರಕು ಹೊತ್ತು ಬರುತ್ತಿರುವುದರಿಂದ ಬಂದರು ಸಿಬ್ಬಂದಿಗೆ ಅದನ್ನು ನಿರ್ವಹಿಸಲು ಹೆಚ್ಚು ಸಮಯ ಹಿಡಿಯುತ್ತಿದೆ.

ರೈನ್ ಒಣಗಿದರೆ ಜರ್ಮನಿಗೆ ಹೊಡೆತ ಏಕೆ?

ಜರ್ಮನಿಯ ಕೈಗಾರಿಕಾ ಬೆಳವಣಿಗೆಯೇ ರೈನ್ ನದಿಯ ಸುತ್ತ ರೂಪುಗೊಂಡಿದೆ. ಬಿಎಎಸ್‌ಎಫ್, ಮರ್ಸಿಡಿಸ್-ಬೆನ್ಸ್, ಬೇಯರ್, ಥೈಸೆನ್‌ಕ್ರುಪ್ ಸೇರಿದಂತೆ ಹಲವು ಕೈಗಾರಿಕಾ ದಿಗ್ಗಜ ಸಂಸ್ಥೆಗಳು ಈ ನದಿಯ ದಡದಲ್ಲಿವೆ. ಪ್ರತಿ ವರ್ಷ ಸುಮಾರು 300 ಮಿಲಿಯನ್ ಟನ್ ಸರಕು ರೈನ್ ನದಿ ಮೂಲಕ ಸಾಗುತ್ತದೆ. ನೆದರ್ಲ್ಯಾಂಡ್ಸ್‌ನ ರೋಟರ್‌ಡ್ಯಾಮ್ ಬಂದರನ್ನು ಜರ್ಮನಿಯ ಪ್ರಮುಖ ಕೈಗಾರಿಕಾ ವಲಯಗಳಿಗೆ ಸಂಪರ್ಕಿಸುವ ಜಲಮಾರ್ಗವೂ ಇದೇ. ತೈಲ ಶುದ್ಧೀಕರಣ ಘಟಕಗಳು, ಉಕ್ಕಿನ ಕಾರ್ಖಾನೆಗಳು, ರಾಸಾಯನಿಕ ಕೈಗಾರಿಕೆಗಳು ಹಾಗೂ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳ ಕಾರ್ಯಾಚರಣೆಗೆ ರೈನ್ ನದಿಯ ನೀರೇ ಆಧಾರ.

2018ರ ಪಾಠ... ಈಗಿನ ಸಿದ್ಧತೆ

ರೈನ್‌ನಲ್ಲಿ ನೀರಿನ ಮಟ್ಟ ಕುಸಿಯುತ್ತಿರುವುದು ಹೊಸ ಸಮಸ್ಯೆಯಲ್ಲ. 2018ರಲ್ಲಿ ಇದೇ ರೀತಿಯ ಬರದಿಂದ ಜರ್ಮನಿಯ ಹಲವು ಕಾರ್ಖಾನೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದವು. ಅದರ ಪರಿಣಾಮ ದೇಶದ ಒಟ್ಟಾರೆ ಆರ್ಥಿಕ ಉತ್ಪಾದನೆ ಸುಮಾರು ಶೇ 0.3 ಕುಸಿದಿತ್ತು. ಆ ಅನುಭವದ ಬಳಿಕ ಕೈಗಾರಿಕೆಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಹೆಚ್ಚಿಸಿವೆ. 2018ರ ನಂತರ ಕೈಗಾರಿಕೆಗಳು ಕೇವಲ ಮಳೆಯನ್ನೇ ಕಾಯುವ ಬದಲು ಹೊಸ ತಂತ್ರಗಳನ್ನು ಅನುಸರಿಸತೊಡಗಿವೆ. ನೀರಿನ ಅಭಾವವನ್ನು ಮುಂಚಿತವಾಗಿ ಊಹಿಸಿ ಸರಕು ಸಂಗ್ರಹಣೆ, ಆಳವಾದ ಬಂದರುಗಳಲ್ಲಿ ಹೆಚ್ಚುವರಿ ಗೋದಾಮುಗಳ ನಿರ್ಮಾಣ ಹಾಗೂ ಪರ್ಯಾಯ ಪೂರೈಕೆ ವ್ಯವಸ್ಥೆಗಳನ್ನು ರೂಪಿಸಲಾಗಿದೆ.

ಕಡಿಮೆ ನೀರಿಗೆ ಹೊಸ ಹಡಗುಗಳು

ಸಮಸ್ಯೆಗೆ ಹೊಂದಿಕೊಳ್ಳಲು ಹಡಗುಗಳ ವಿನ್ಯಾಸದಲ್ಲೂ ಬದಲಾವಣೆ ಆರಂಭವಾಗಿದೆ. ಹಗುರವಾದ ವಸ್ತುಗಳಿಂದ ನಿರ್ಮಿತ, ಅಗಲ ಹೆಚ್ಚಿರುವ ಹಡಗುಗಳನ್ನು ಕಡಿಮೆ ಆಳದ ನೀರಿನಲ್ಲೂ ಸುಲಭವಾಗಿ ಸಂಚರಿಸುವಂತೆ ರೂಪಿಸಲಾಗುತ್ತಿದೆ. ದೊಡ್ಡ ಪ್ರೊಪೆಲ್ಲರ್‌ಗಳ ಬದಲಿಗೆ ಹಲವು ಸಣ್ಣ ಪ್ರೊಪೆಲ್ಲರ್‌ಗಳನ್ನು ಅಳವಡಿಸುವುದು, ನದಿಯ ತಳಕ್ಕೆ ತಾಗದಂತೆ ರಕ್ಷಣಾ ಕವಚಗಳನ್ನು ಬಳಸುವುದು ಸೇರಿದಂತೆ ಹಲವು ಹೊಸ ತಂತ್ರಜ್ಞಾನಗಳನ್ನು ಅಳವಡಿಸಲಾಗುತ್ತಿದೆ.

ಆದರೆ ರೈನ್‌ ನದಿಯಲ್ಲಿ ಸಂಚರಿಸುವ ಸುಮಾರು 8,000 ಸರಕು ಹಡಗುಗಳಲ್ಲಿ ಕಡಿಮೆ ನೀರಿನ ಮಟ್ಟಕ್ಕೆ ವಿಶೇಷವಾಗಿ ವಿನ್ಯಾಸಗೊಳಿಸಿರುವ ಹಡಗುಗಳು ಕೇವಲ ಹನ್ನೆರಡು ಮಾತ್ರ. ಹಳೆಯ ಹಡಗುಗಳನ್ನು ಬದಲಿಸುವುದು ದುಬಾರಿ. ಹೊಸ ಹಡಗುಗಳನ್ನು ನಿರ್ಮಿಸಲು ವರ್ಷಗಳೇ ಬೇಕಾಗುವುದರಿಂದ ಸದ್ಯಕ್ಕೆ ಹಳೆಯ ವ್ಯವಸ್ಥೆಯನ್ನೇ ಅವಲಂಬಿಸಬೇಕಾಗಿದೆ.

ಟ್ರಂಪ್‌ಗೆ ಮಾತ್ರವಲ್ಲ... ಐದು ದಶಕಗಳಿಂದ ಅಮೆರಿಕಕ್ಕೆ ಅರ್ಥವಾಗದ ಇರಾನ್!

ಹೆಚ್ಚುವರಿ ಹೊರೆ ಗ್ರಾಹಕರಿಗೆ

ನೀರಿನ ಕೊರತೆಯಿಂದ ಒಂದೇ ಪ್ರಮಾಣದ ಸರಕು ಸಾಗಿಸಲು ಈಗ ಹೆಚ್ಚು ಹಡಗುಗಳು, ಹೆಚ್ಚು ಸಮಯ ಮತ್ತು ಹೆಚ್ಚಿನ ವೆಚ್ಚ ಬೇಕಾಗುತ್ತಿದೆ. ಅದರ ಹೊರೆ ಕೊನೆಗೆ ಗ್ರಾಹಕರ ಮೇಲೇ ಬೀಳುತ್ತಿದೆ. ಜರ್ಮನಿಯ ಸ್ಪರ್ಧಾ ನಿಯಂತ್ರಣ ಪ್ರಾಧಿಕಾರದ ಪ್ರಕಾರ, ನದಿಯ ಮೂಲಕ ಸಾಗಿಸುವ ಪೆಟ್ರೋಲ್‌ಗೆ ಪ್ರತಿ ಲೀಟರ್‌ಗೆ 11 ಯೂರೋ ಸೆಂಟ್ ಹೆಚ್ಚುವರಿ ವೆಚ್ಚ ಸೇರಿದೆ. ಅಂದರೆ, ಒಂದು ನದಿಯ ನೀರಿನ ಮಟ್ಟ ಕುಸಿದ ಪರಿಣಾಮ ಪೆಟ್ರೋಲ್ ಬಂಕ್‌ ವರೆಗೂ ತಲುಪುತ್ತಿದೆ. ನದಿಗಳಲ್ಲಿ ನೀರಿನ ಮಟ್ಟ ಕಡಿಮೆಯಾದರೆ ಒಳನಾಡು ಜಲಸಾರಿಗೆ ವ್ಯವಸ್ಥೆ ತೀವ್ರವಾಗಿ ಅಸ್ತವ್ಯಸ್ತಗೊಳ್ಳುತ್ತದೆ. ಅದರ ನೇರ ಪರಿಣಾಮ ಆರ್ಥಿಕ ಚಟುವಟಿಕೆಗಳ ಮೇಲೂ ಬೀಳುತ್ತದೆ.

ನೀರಿನ ಮಟ್ಟ ಒಂದು ತಿಂಗಳ ಕಾಲ ಕಡಿಮೆಯೇ ಮುಂದುವರಿದರೆ ಜರ್ಮನಿಯ ಕೈಗಾರಿಕಾ ಉತ್ಪಾದನೆ ಸುಮಾರು ಶೇ 1ರಷ್ಟು ಇಳಿಯಬಹುದು. ಈಗಾಗಲೇ ಆರ್ಥಿಕ ಬೆಳವಣಿಗೆ ಸ್ಥಗಿತದ ಹಂತದಲ್ಲಿರುವ ಜರ್ಮನಿಗೆ ಇದು ಮತ್ತೊಂದು ದೊಡ್ಡ ಹೊಡೆತವಾಗಿದೆ.

ಐದು ತಿಂಗಳಾದರೂ ಅಂತ್ಯ ಕಾಣದ ಯುದ್ಧ: ಟ್ರಂಪ್‌ಗೆ ಇರಾನ್ ಕಲಿಸಿದ ಪಾಠ

ಒಂದೇ ಸಮಯದಲ್ಲಿ ಹಲವು ಸವಾಲು

ಯುರೋಪಿನ ಕೈಗಾರಿಕೆಗಳಿಗೆ ನದಿಗಳಲ್ಲಿನ ನೀರಿನ ಕೊರತೆ ಮಾತ್ರ ಸಮಸ್ಯೆಯಲ್ಲ. ಪಶ್ಚಿಮ ಏಷ್ಯಾದ ಸಂಘರ್ಷಗಳಿಂದ ಇಂಧನ ಪೂರೈಕೆಯ ಮೇಲಿನ ಒತ್ತಡ, ಹೊರ್ಮುಜ್ ಜಲಸಂಧಿ ಹಾಗೂ ಬಾಬ್ ಅಲ್-ಮಂಡೆಬ್ ಮೂಲಕ ಸಾಗುವ ವ್ಯಾಪಾರದಲ್ಲಿನ ಅಡಚಣೆ, ಚೀನಾದ ಅಗ್ಗದ ಉತ್ಪನ್ನಗಳ ಸ್ಪರ್ಧೆ ಮತ್ತು ಅಮೆರಿಕದ ಸುಂಕ ನೀತಿಗಳು ಈಗಾಗಲೇ ಆರ್ಥಿಕ ಒತ್ತಡ ಹೆಚ್ಚಿಸಿವೆ. ಈ ನಡುವೆ ಬರ ಪರಿಸ್ಥಿತಿ ಮತ್ತೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ನದಿಗಳು ಏಕೆ ಬೇಗ ಒಣಗುತ್ತಿವೆ?

ಈ ಬಾರಿ ಆಲ್ಪ್ಸ್ ಪರ್ವತಗಳಲ್ಲಿ ವಾಡಿಕೆಗಿಂತ ಕಡಿಮೆ ಹಿಮ ಬಿದ್ದಿದ್ದು, ಬೇಸಿಗೆಯಲ್ಲಿ ನದಿಗಳಿಗೆ ಹರಿಯಬೇಕಿದ್ದ ನೀರು ಇಳಿಕೆಯಾಗಿದೆ. ಹಲವು ವಾರಗಳಿಂದ ಮಳೆಯ ಕೊರತೆ ಮತ್ತು ತೀವ್ರ ಉಷ್ಣಾಂಶದಿಂದ ನೀರು ವೇಗವಾಗಿ ಆವಿಯಾಗುತ್ತಿದೆ. ಹೀಗಾಗಿ ಬೇಸಿಗೆಯ ಕೊನೆಯಲ್ಲಿ ಕಾಣಿಸಿಕೊಳ್ಳುವ ನೀರಿನ ಕೊರತೆ ಈ ಬಾರಿ ಋತುವಿನ ಆರಂಭದಲ್ಲೇ ಎದುರಾಗಿದೆ. ಹವಾಮಾನ ಮುನ್ಸೂಚನೆಗಳ ಪ್ರಕಾರ ಮುಂದಿನ ಕೆಲವು ವಾರಗಳಲ್ಲೂ ಮಳೆಯ ಸಾಧ್ಯತೆ ಕಡಿಮೆ ಇರುವುದರಿಂದ ರೈನ್ ಮತ್ತು ಡ್ಯಾನ್ಯೂಬ್ ನದಿಗಳಲ್ಲಿ ನೀರಿನ ಮಟ್ಟ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆಯಿದೆ.

ನದಿಗಳು ಕೇವಲ ನೀರಿನ ಮೂಲಗಳಲ್ಲ...

ರೈನ್ ನದಿಯ ಬಿಕ್ಕಟ್ಟು ಒಂದು ಮಹತ್ವದ ಎಚ್ಚರಿಕೆ ನೀಡುತ್ತಿದೆ. ನದಿಗಳು ಕೇವಲ ನೀರಿನ ಮೂಲಗಳಲ್ಲ; ಅವು ಬಂದರುಗಳನ್ನು ಕಾರ್ಖಾನೆಗಳಿಗೆ, ಕಾರ್ಖಾನೆಗಳನ್ನು ಮಾರುಕಟ್ಟೆಗಳಿಗೆ ಮತ್ತು ಮಾರುಕಟ್ಟೆಗಳನ್ನು ಗ್ರಾಹಕರಿಗೆ ಸಂಪರ್ಕಿಸುವ ಆರ್ಥಿಕ ಜೀವನಾಡಿಗಳು. ಒಮ್ಮೆ ಅವುಗಳ ಹರಿವು ಕುಂಠಿತವಾದರೆ ಅದರ ಪರಿಣಾಮ ಮೊದಲು ಹಡಗುಗಳ ಮೇಲೆ, ನಂತರ ಕೈಗಾರಿಕೆಗಳ ಮೇಲೆ, ಬಳಿಕ ಇಂಧನ, ವಿದ್ಯುತ್, ಸಾರಿಗೆ, ಬೆಲೆ ಏರಿಕೆ ಮತ್ತು ಅಂತಿಮವಾಗಿ ದೇಶದ ಆರ್ಥಿಕ ಬೆಳವಣಿಗೆಯ ಮೇಲೂ ಬೀಳುತ್ತದೆ.

ಈ ಬೇಸಿಗೆಯಲ್ಲಿ ಯುರೋಪ್ ಎದುರಿಸುತ್ತಿರುವ ಸಂಕಷ್ಟವೂ ಇದೇ. ಒಣಗುತ್ತಿರುವುದು ಕೇವಲ ಒಂದು ನದಿಯಲ್ಲ; ಆ ಖಂಡದ ಆರ್ಥಿಕತೆಯನ್ನು ಮುನ್ನಡೆಸುವ ಪ್ರಮುಖ ಜೀವನಾಡಿಗಳಲ್ಲೊಂದು.

ಆಧಾರ: ದಿ ನ್ಯೂಯಾರ್ಕ್ ಟೈಮ್ಸ್, ಗಾರ್ಡಿಯನ್ ಎಪಿ ಹಾಗೂ ಎಎಫ್‌ಪಿ

ಬೆಂಗಳೂರಿನಲ್ಲೊಂದು ಹಳ್ಳಿ ಮಾರುಕಟ್ಟೆ: ಸಂಬಂಧಗಳ ಬೆಸೆಯುವ 'ರಾಗಿಕಣ'
Dailyhunt
Disclaimer: This content has not been generated, created or edited by Dailyhunt. Publisher: Prajavani